ಬೆಂಗಳೂರು,ಅ,05: ಹಿಪ್ಪರಗಿ ಬ್ಯಾರೇಜ್ನ ಎಡಭಾಗದ ತಿರುವಿನಲ್ಲಿ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಮಾಡುವ ಕಾಮಗಾರಿಯ 28.02ಕೋಟಿ ಮೊತ್ತದ ವಿವರವಾದ ಯೋಜನಾ ವರದಿಗೆ ರಾಜ್ಯ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಇಂದು ತಿಳಿಸಿದ್ದಾರೆ.
ಕರ್ನಾಟಕ ನೀರಾವರಿ ನಿಗಮದ ಈ ಪ್ರಸ್ತಾವನೆಗೆ ಸಚಿವ ಸಂಪುಟ ಇಂದು ನಡೆದ ಸಭೆಯಲ್ಲಿ ಅನುಮೋದನೆ ನೀಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಳೆಗಾಲದಲ್ಲಿ ಹಿಪ್ಪರಗಿ ಬ್ಯಾರೇಜಿನಿಂದ ನೀರನ್ನು ಹೊರಬಿಟ್ಟಾಗ, ಬ್ಯಾರೇಜಿನ ಗೇಟ್ ಮೂಲಕ ರಭಸವಾಗಿ ಹರಿಯುವ ನೀರಿನಿಂದ ಎಡಭಾಗದ ತಿರುವಿನಲ್ಲಿ ಎರೆಮಣ್ಣು ಸವಕಳಿಯಾಗಿ ಸಂಪೂರ್ಣ ನದಿ ದಂಡೆಯಲ್ಲಿ ಕೊರೆತ ಉಂಟಾಗುತ್ತಿದ್ದು, ಗಣನೀಯ ಪ್ರಮಾಣದಲ್ಲಿ ರೈತರ ಭೂಮಿಗೆ ನೀರು ನುಗ್ಗಿ, ನಷ್ಟ ಉಂಟಾಗುತ್ತಿರುತ್ತದೆ. ಕೇಂದ್ರ ಜಲ ಆಯೋಗವು 2007ರಲ್ಲಿ ಬ್ಯಾರೇಜ್ ತಪಾಸಣೆಯ ಸಮಯದಲ್ಲಿ ಕೃಷ್ಣಾ ನದಿಯ ಎಡದಂಡೆಯಲ್ಲಿ 500 ಮೀಟರ್ ಉದ್ದದ ಕಾಂಕ್ರೀಟ್ ತಡೆಗೋಡೆ ನಿರ್ಮಿಸುವುದರಿಂದ ಎಡ ದಂಡೆಯ ಸವೆತವನ್ನು ತಡೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ದಿನಾಂಕ:20.10.2012ರಂದು ಜರುಗಿದ 142ನೇ ತಾಂತ್ರಿಕ ಉಪ ಸಮಿತಿಯ ಸಭೆಯಲ್ಲಿ ಗುರುತ್ವಾಕರ್ಷಣೆಯುಳ್ಳ 200 ಮೀ. ಉದ್ದದ ತಡೆಗೋಡೆಯ ನಿರ್ಮಾಣದ ಕಾಮಗಾರಿಯ ಅಂದಾಜು ಪಟ್ಟಿಗೆ ಅನುಮೋದನೆ ನೀಡುವಂತೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ತಾಂತ್ರಿಕ ಉಪ ಸಮಿತಿಯ ಸಭೆಯ ನಡವಳಿಯಲ್ಲಿ ಹಾನಿ ಸಂಭವಿಸುವ ಕಾರಣಗಳನ್ನು ತನಿಖೆ ಮಾಡಲು ಮತ್ತು ಹಾನಿ ಮರುಕಳಿಸಲಾರದಂತೆ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಲಹೆ ಮಾಡಲಾಗಿದೆ. ಪ್ರತಿ ವರ್ಷ ನದಿ ದಂಡೆಯ ಸವೆತದಿಂದ, ಭಾರಿ ಪ್ರಮಾಣದ ಹೂಳು ತುಂಬಿಕೊಳ್ಳುತ್ತಿರುತ್ತದೆ. ಇದಕ್ಕೆ ಪರಿಹಾರ ಕ್ರಮವಾಗಿ CWPRS, ಪುಣೆ ರವರು ತಡೆಗೋಡೆ ನಿರ್ಮಿಸಲು ನೀಡಿರುವ ಸಲಹೆಯಂತೆ, ಸುಮಾರು 500.00 ಮೀ. ಉದ್ದದ ಮತ್ತು 15.00 ಮೀ ಎತ್ತರದ ಕಾಂಕ್ರೀಟ್ ತಡೆಗೋಡೆ ನಿರ್ಮಿಸಲು ಯೋಜಿಸಲಾಗಿದೆ.
ಹಿಪ್ಪರಗಿ ಬ್ಯಾರೇಜಿನ ಎಡಭಾಗದ ತಿರುವಿನಲ್ಲಿ ಕಾಂಕ್ರೀಟ್ ತಡೆಗೋಡೆ ನಿರ್ಮಿಸುವ ಕಾಮಗಾರಿಯನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳಲು ಹಾಗೂ ಈ ಕಾಮಗಾರಿಯನ್ನು ಕೈಗೊಳ್ಳುವುದರಿಂದ ಹಿಪ್ಪರಗಿ ಅಣೆಕಟ್ಟಿನ ಕೆಳಭಾಗದ ಎಡಭಾಗದ ತಿರುವಿನಲ್ಲಿ ಬರುವ ರೈತರ ಜಮೀನುಗಳು ನೀರಿನ ರಭಸದ ಕೊರೆತದಿಂದ ರಕ್ಷಣೆಗೊಂಡು ಬೆಳೆ ಉತ್ಪಾದನಾ ಪ್ರಮಾಣದಲ್ಲಿ ಹೆಚ್ಚಿಗೆ ಆಗುವ ಸಾಧ್ಯತೆ ಇದ್ದು, ರೈತರಿಗೆ ಎಲ್ಲಾ ರೀತಿಯಿಂದ ಸದುಪಯೋಗವಾಗುತ್ತದೆಯೆಂದು ಸಚಿವರು ತಿಳಿಸಿದ್ದಾರೆ.
ಉದ್ದೇಶಿತ ಈ ಕಾಮಗಾರಿಯನ್ನು ಅನುಮೋದನೆಯ ನಂತರ ಟೆಂಡರ್ ಪ್ರಕ್ರಿಯೆ ಕೈಗೊಂಡು ಮುಂಬರುವ ಮುಂಗಾರು ಹಂಗಾಮಿನೊಳಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ. ಈ ಕಾಮಗಾರಿಯನ್ನು ಕೈಗೊಳ್ಳುವುದರಿಂದ ಹಿಪ್ಪರಗಿ ಬ್ಯಾರೇಜಿನ ಕೆಳಭಾಗದ ಎಡಭಾಗದ ತಿರುವಿನಲ್ಲಿ ಬರುವ ರೈತರ ಜಮೀನುಗಳ ಸವಕಳಿ ತಡೆದು ರೈತರಿಗೆ ಹೆಚ್ಚಿನ ಬೆಳೆ ಬೆಳೆಯಲು ಅನುಕೂಲವಾಗುತ್ತದೆ ಎಂದು ಸಚಿವರು ಹರ್ಷ ವ್ಯಕ್ತಪಡಿಸಿರುತ್ತಾರೆ.