ಬೆಂಗಳೂರು, ಡಿ.೨೭: ರಾಜ್ಯದಲ್ಲಿ ೫೮ ನಗರ ಸಂಸ್ಥೆಗಳ ಮತದಾನ ಇಂದು ಮತದಾನ ಆರಂಭವಾಗಿದೆ.
ಬೆಳಗ್ಗೆ ೭ಕ್ಕೆ ಮತದಾನ ಆರಂಭವಾಗಿದ್ದು, ಸಂಜೆ ೫ರರೆಗೂ ನಡೆಯುತ್ತದೆ. ಒಂದು ವೇಳೆ ಮರು ಮತದಾನದ ಅಗತ್ಯ ಇದ್ದಲ್ಲಿ ಡಿ.೨೯ಕ್ಕೆ ನಿಗದಿ ಮಾಡಲಾಗಿದೆ. ಮತ ಎಣಿಕೆ ಕಾರ್ಯ ಡಿಸೆಂಬರ್ ೩೦ರಂದು ನಡೆಯಲಿದೆ ಎಂದು ಚುನಾವಣಾ ಆಯೋಗದ ತಿಳಿಸಿದೆ.
೨೦೧೬ನೇ ಸಾಲಿನಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಲಾದ ೫೧ ನಗರ ಸ್ಥಳೀಯ ಸಂಸ್ಥೆಗಳ ಅವಧಿಯು ೨೦೨೧ಗೆ ಮುಕ್ತಾಯಗೊಳ್ಳಲಿದೆ. ಕ್ಷೇತ್ರ ವಿಂಗಡನೆ ಮಾಡಿ, ವಾರ್ಡ್‌ವಾರು ಮೀಸಲಾತಿಯನ್ನು ನಿಗದಿಪಡಿಸಿ ಚುನಾವಣೆ ನಡೆಸಲಾಗುತ್ತಿದೆ. ಕೋವಿಡ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ನಿಯಮಾವಳಿಗಳನ್ನು ಪಾಲನೆ ಮಾಡಿ ಚುನಾವಣೆ ಪ್ರಕ್ರಿಯೆ ನಡೆಸುವಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಂದು ಮತವೂ ಸಹ ಮಹತ್ವ ಪಡೆಯುತ್ತದೆ. ಹೀಗಾಗಿ ವಿವಿಧೆಡೆ ವಲಸೆ ಹೋದವರನ್ನು ಚುನಾವಣೆಯ ಕಾರಣಕ್ಕಾಗಿ ಅಭ್ಯರ್ಥಿಗಳು ಮರಳಿ ಊರಿಗೆ ಕರೆತರುತ್ತಾರೆ. ಈ ಕಾರಣದಿಂದ ಎಲ್ಲೆಲ್ಲಿ ಚುನಾವಣೆ ನಡೆಯುತ್ತದೋ ಅಲ್ಲಿನ ಬಹುತೇಕ ಮತದಾರರು ಭಾನುವಾರ ರಾತ್ರಿ ಬೆಂಗಳೂರಿನಿಂದ ಹೊರಟಿದ್ದಾರೆ. ಈ ಕಾರಣದಿಂದಾಗಿ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ಭಾನುವಾರ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದವು.
ಎಲ್ಲೆಡೆ ಚುನಾವಣೆಯ ಅಬ್ಬರ:
ಚಿಕ್ಕಮಗಳೂರು, ತುಮಕೂರು ಜಿಲ್ಲೆಯ ಶಿರಾ, ಗದಗ-ಬೆಟಗೇರಿ ಹಾಗೂ ನೂತನ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರಸಭೆಗಳಿಗೆ ಚುನಾವಣೆ ನಡೆಯುತ್ತದೆ. ಬೆಳಗಾವಿ ಜಿಲ್ಲೆಯ ಅಥಣಿ, ಧಾರವಾಡ ಜಿಲ್ಲೆಯ ಅಣ್ಣಿಗೇರಿ ಹಾಗೂ ಹಾವೇರಿ ಜಿಲ್ಲೆಯ ಬಂಕಾಪುರ ಪುರಸಭೆ ಸೇರಿ ೨೦೯ ವಾರ್ಡ್‌ಗಳಿಗೆ ಚುನಾವಣೆ ನಡೆಯುತ್ತಿದೆ.
ಇದಲ್ಲದೆ ವಿವಿಧ ಕಾರಣಗಳಿಂದ ತೆರವಾಗಿರುವ ಚಾಮರಾಜನಗರ ಸಭೆಯ ೬, ಹರಿಹರ ನಗರಸಭೆಯ ೨೧, ದಾಂಡೇಲಿ ನಗರಸಭೆಯ ೧೮, ಗೌರಿಬಿದನೂರು ನಗರಸಭೆಯ ೧೦, ಮೂಡಲಗಿ ಪುರಸಭೆಯ ೯, ಚಡಚಣ ಪಟ್ಟಣ ಪಂಚಾಯಿತಿಯ ೪, ಸೇಡಂ ಪುರಸಭೆಯ ೧೩, ಹಾನಗಲ್ ಪುರಸಭೆಯ ೧೯ ಹಾಗೂ ಜಮಖಂಡಿ ನಗರಸಭೆಯ ೯ ಸ್ಥಾನಗಳಿಗೂ ಚುನಾವಣೆ ನಡೆಯುತ್ತಿದೆ.