ಸುಳ್ಳು ಸುದ್ದಿ ತಡೆಗಟ್ಟಲು ಸರ್ಕಾರ ಹೊಸಕಾನೂನು ತರಲು ಚಿಂತನೆ- ಕೆ.ವಿ.ಪ್ರಭಾಕರ್

Share

ಬೆಂಗಳೂರು, ಜು.೮-ಸುಳ್ಳು ಸುದ್ದಿಗಳ ಹಾವಳಿ ಮತ್ತು ಊಹಾಪೋಹದ ಸುದ್ದಿಗಳ ಹಾವಳಿ ಮಿತಿಮೀರುತ್ತಿದ್ದು,ಇದನ್ನು ತಡೆಗಟ್ಟಲು ಸರ್ಕಾರ ಹೊಸ ಕಾನೂನು ಜಾರಿಗೆ ತರಲು ಮುಂದಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದರು.
ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ‘ಕೆಂಧೂಳಿ ಪತ್ರಿಕಾ ಬಳಗ’ದ ವತಿಯಿಂದ ಪತ್ರಿಕಾ ದಿನಾಚರಣೆ ಪ್ರಯುಕ್ತ ‘ವಾರಪತ್ರಿಕೆ ಅಂದು-ಇಂದು, ಲಂಕೇಶ್ ಕಂಡ ವಾರಪತ್ರಿಕೆ ಮತ್ತು ಸೈದ್ಧಾಂತಿಕ ನಿಲುವುಗಳು’ ಕುರಿತು ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾನತಾಡಿದ ಅವರು,ಮುಂದಿನ ಅಧಿವೇಶನದಲ್ಲಿ ಈ ಕುರಿತು ವಿದೇಯಕ ಮಂಡಿಸಲು ಸರ್ಕಾರ ಸಿದ್ದತೆ ನಡೆಸಿದೆ ಎಂದು ತಿಳಿಸಿದರು.

‘ಪತ್ರಿಕೆಯ ಮೂಲಕ ಸಮಾಜಕ್ಕೆ ಮತ್ತು ಓದುಗರಿಗೆ ಏನನ್ನು ಕೊಡಬೇಕು ಎನ್ನುವುದನ್ನು ಅರಿತು ಪಿ.ಲಂಕೇಶ್ ಅವರು ವಾರಪತ್ರಿಕೆಯ ಓದುಗರನ್ನು ಸೃಷ್ಟಿ ಮಾಡಿಕೊಂಡಿದ್ದರು. ಆ ನಿಟ್ಟಿನಲ್ಲಿ ಅವರು ಪತ್ರಿಕೋದ್ಯಮಕ್ಕೆ ಹೊಸ ಧಿಕ್ಕನ್ನು ತೋರಿಸಿಕೊಟ್ಟರು’ ಎಂದು ಅಭಿಪ್ರಾಯಪಟ್ಟರು.
ಇಂದಿನ ಯುವ ಪತ್ರಕರ್ತರೆಲ್ಲರೂ ಲಂಕೇಶರ ಬಗ್ಗೆ ತಿಳಿದುಕೊಳ್ಳಲೇಬೇಕು. ವಾರಪತ್ರಿಕೆಗಳಿಗೆ ಇಂದು ಓದುಗರೇ ಇಲ್ಲವೇನೋ ಎನ್ನುವ ಅನುಮಾನ ಶುರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಲಂಕೇಶ್‌ರನ್ನು ಆಗಾಗ ನೆನಪು ಮಾಡಿಕೊಳ್ಳುತ್ತಿರುತ್ತಾರೆ. ಲಂಕೇಶರ ಗರಡಿಯಲ್ಲಿ ಸಾಹಿತಿಗಳು, ಚಿಂತಕರು ರಾಜಕಾರಣಿಗಳು ಸೇರಿದಂತೆ ಹಲವರು ಬೆಳೆದಿದ್ದಾರೆ. ಅವರ ಕೊನೆಯ ದಿನಗಳಲ್ಲಿಯೂ ಅವರು ಓದುತ್ತಿದ್ದರು. ಓದುವುದನ್ನು ಎಂದಿಗೂ ನಿಲ್ಲಿಸಿರಲಿಲ್ಲ. ಕನ್ನಡ ಪತ್ರಿಕೋದ್ಯಮಕ್ಕೆ ಪ್ರಸಿದ್ಧಿ, ಘನೆತೆಯನ್ನು ತಂದುಕೊಟ್ಟಿದ್ದಾರೆ.ಎಂದರು.
ಹಿರಿಯ ಪತ್ರಕರ್ತ ಶಶಿಧರ್ ಭಟ್ ಮಾತನಾಡಿ, ಇಂದಿನ ಕನ್ನಡ ಪತ್ರಿಕೋದ್ಯಮಕ್ಕೆ ಜನಿವಾರ ಹಾಕಲಾಗಿದೆ. ಜನಿವಾರ ಒಂದು ಸಂಕೇತ ಮಾತ್ರ. ಆದರೆ ಎಲ್ಲವೂ ವೈದಿಕ ಪರಂಪರೆಯನ್ನೇ ಪ್ರತಿಪಾದಿಸುತ್ತಿವೆ. ಬಹುತೇಕ ಪತ್ರಿಕಾ ಮಾಧ್ಯಮಗಳು ನಾಗಪುರದ ಏಜೆಂಟ್‌ಗಳಾಗಿವೆ. ಪತ್ರಿಕೋದ್ಯಮಗಳು ಪ್ರತಿಪಕ್ಷದ ರೀತಿಯಲ್ಲಿ ಕೆಲಸ ಮಾಡಬೇಕು. ಆದರೆ ಇಂದಿನ ಮಾಧ್ಯಮಗಳು ಪ್ರತಿಪಕ್ಷದ ಪ್ರತಿಪಕ್ಷವಾಗಿ ಕೆಲಸ ಮಾಡುತ್ತಿವೆ. ಮೋದಿಯನ್ನು ಪ್ರಶ್ನಿಸದೇ ರಾಹುಲ್ ಗಾಂಧಿಯನ್ನು ಪ್ರಶ್ನಿಸುತ್ತಾರೆ. ದೇಶದ ಪ್ರಧಾನಿಯನ್ನು ಪ್ರಶ್ನಿಸಲಾರದ ಮಾರಾಟ ಮಾಧ್ಯಮವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದಿನ ಪತ್ರಿಕೋದ್ಯಮ ಬದಲಾಗುತ್ತಿರುವುದು ನೋಡಿದಾಗ ಬೇಸರ ಉಂಟಾಗುತ್ತದೆ. ಪತ್ರಿಕೋದ್ಯಮದಲ್ಲಿ ಸಾಮಾಜಿಕ ಭದ್ರತೆ ಇಲ್ಲದ ಅಪಾಯಕಾರಿ ಪರಿಸ್ಥಿತಿಗೆ ತಲುಪಿದ್ದೇವೆ. ಪತ್ರಿಕೋದ್ಯಮದ ಪ್ರಾಮಾಣಿಕತೆಯೇ ನಾಶ ಆಗಿದೆ. ಬಲಪಂಥೀಯ ವಿಚಾರಧಾರೆಗಳನ್ನು ಅನುಷ್ಠಾನಗೊಳಿಸುವುದಕ್ಕೆ ಈವತ್ತಿನ ಪತ್ರಿಕೋದ್ಯಮ ಟೊಂಕಕಟ್ಟಿ ನಿಂತಿದೆ. ಅದರ ಜೊತೆಗೆ ಇಂದಿನ ನಮ್ಮ ಸಹೋದ್ಯೋಗಿಗಳು ಬದಲಾಗುತ್ತಿರುವ ಪರಿ ಆತಂಕ ಉಂಟಿಸುತ್ತಿದೆ. ಇಂತಹ ಸಂದರ್ಭದಲ್ಲಿ ಲಂಕೇಶ್ ಇರಬೇಕಾಗಿತ್ತು ಎಂದು ಶಶಿಧರ್ ಭಟ್ ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಆರ್.ಜಿ.ಹಳ್ಳಿನಾಗರಾಜ್, ಪಿ.ಕುಸುಮಾ ಆಯರಹಳ್ಳಿ, ಶಿವಾನಂದ ತಗಡೂರು, ತುರುವನೂರು ಮಂಜುನಾಥ, ಪರಶಿವ ಧನಗೂರು ಸೇರಿದಂತೆ ಹಲವರು ಭಾಗವಹಿಸಿದ್ದರು.

Girl in a jacket
error: Content is protected !!