ಮೇಕೆದಾಟು ಯೋಜನೆಗೆ ಕೇಂದ್ರ ಗ್ರೀನ್ ಸಿಗ್ನಲ್?

Share

ಬೆಂಗಳೂರು, ಜು. ೧೩: ಮೇಕೆ ದಾಟು ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಯಾವುದೇ ನಿರ್ಧಾರ ತಗೆದುಕೊಂಡಿದ್ದರೂ ಕೇಂದ್ರ ಸರ್ಕಾರ ತಮ್ಮದೆ ನಿರ್ಧಾರವನ್ನು ತಗೆದುಕೊಳ್ಳುತ್ತದೆ ಎಂದು ಹೇಳುವ ಮೂಲಕ ಮೇಕೆದಾಟು ಯೋಜನೆಗೆ ಗ್ರೀನ್ ಸಿಗ್ನಲ್ ನೀಡುವ ದಾಟಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಮಹತ್ವದ ಜಲ ಜೀವನ್ ಮಿಷನ್ ಯೋಜನೆ ಕುರಿತು ವಿಧಾನಸೌಧದಲ್ಲಿ ಮಹತ್ವದ ಸಭೆ ನಡೆದಿದೆ. ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ, ಮೇಕೆದಾಟು ಯೋಜನೆ ಸೇರಿದಂತೆ ಅನೇಕ ವಿಷಯಗಳ ಕುರಿತು ಚರ್ಚೆ ನಡೆದಿದೆ ಎಂಬ ಮಾಹಿತಿಯಿದೆ.
ಸಭೆಯ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಗಜೇಂದ್ರಸಿಂಗ್ ಶೇಖಾವತ್ ಅವರು ಮೇಕೆದಾಟು ಯೋಜನೆ ಕುರಿತು ಮಹತ್ವದ ಮಾತನ್ನಾಡಿದ್ದಾರೆ. “ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಪಾತ್ರ ಏನಿದೆಯೋ ಅದನ್ನು ನಾವು ಮಾಡುತ್ತೇವೆ. ಪಕ್ಷ ಬೇರೆ, ಸರ್ಕಾರ ಬೇರೆ. ಸರ್ಕಾರದ ನಡೆ ಏನಿರುತ್ತದೆಯೋ ಅದನ್ನು ಸರ್ಕಾರ ಮಾಡುತ್ತದೆ” ಎಂದು ಶೇಖಾವತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೇಕೆದಾಟು ಯೋಜನೆ ಅನುಷ್ಠಾನ ವಿರೋಧಿಸಿ ತಮಿಳುನಾಡು ರಾಜ್ಯ ಸರ್ಕಾರ ನಿರ್ಣಯ ತೆಗೆದುಕೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ಕೊಟ್ಟಿರುವ ಶೇಖಾವತ್, “ತಮಿಳುನಾಡು ನಿರ್ಣಯ ತೆಗೆದುಕೊಳ್ಳಲಿ, ಕೇಂದ್ರ ಸರ್ಕಾರ ಏನು ನಿರ್ಧಾರ ಮಾಡಬೇಕೊ ಆ ನಿರ್ಧಾರವನ್ನು ನಾವು ತೆಗೆದುಕೊಳ್ಳುತ್ತೇವೆ. ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ” ಎಂದು ಹೇಳಿಕೆ ನೀಡಿದ್ದಾರೆ. ಆ ಮೂಲಕ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸುವುದು ಖಾತರಿ ಆದಂತಾಗಿದೆ.

Girl in a jacket
error: Content is protected !!