ದೇಶಕ್ಕೆ ನಾಗರಿಕ ಹಕ್ಕು ಮತ್ತು ಸಾಮಾಜಿಕ ನ್ಯಾಯ ಒದಗಿಸಲು ಹುಟ್ಟಿದ ಪಕ್ಷ ಕಾಂಗ್ರೆಸ್: ಸಿ.ಎಂ

Share

ಮೈಸೂರು ಏ 26- ಸಂಘ ಪರಿವಾರ ಯಾವತ್ತೂ ಸ್ವಾತಂತ್ರ್ಯ ಹೋರಾಟಕ್ಕೆ ಬರಲೇ ಇಲ್ಲ. ಈಗ ದೇಶಭಕ್ತಿ ಬಗ್ಗೆ ಮಾತಾಡ್ತಾರೆ. ಸಾವರ್ಕರ್ ಮತ್ತು ಗೋಲ್ವಾಲ್ಕರ್ ಅಂಬೇಡ್ಕರ್ ಅವರ ಸಂವಿಧಾನದ ವಿರುದ್ಧ ಇದ್ದವರು ಎನ್ನುವ ಸ್ಪಷ್ಟ ತಿಳಿವಳಿಕೆ ಕಾರ್ಯಕರ್ತರಿಗೆ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಯುವ ಕಾಂಗ್ರೆಸ್ ಆಯೋಜಿಸಿದ್ದ “ಯುವ ಕ್ರಾಂತಿ” ಕಾರ್ಯಕರ್ತರ ತರಬೇತಿ ಶಿಬಿರದಲ್ಲಿ ವಿಶೇಷ ಉಪನ್ಯಾಸ ನೀಡಿದರು.ಸ್ವಾತಂತ್ರ್ಯ ಹೋರಾಟ ಮತ್ತು‌ ಆಧುನಿಕ ಭಾರತ ನಿರ್ಮಾಣದಲ್ಲಿ ಕಾಂಗ್ರೆಸ್ ನ ತ್ಯಾಗ-ಬಲಿದಾನ ಮಹತ್ವದ ಪಾತ್ರ ನಿರ್ವಹಿಸಿದೆ.

ದೇಶಕ್ಕೆ ನಾಗರಿಕ ಹಕ್ಕು ಮತ್ತು ಸಾಮಾಜಿಕ ನ್ಯಾಯ ಒದಗಿಸಲು ಹುಟ್ಟಿದ ಪಕ್ಷ ಕಾಂಗ್ರೆಸ್.ಸಂಘ ಪರಿವಾರ ಯಾವತ್ತೂ ಸ್ವಾತಂತ್ರ್ಯ ಹೋರಾಟಕ್ಕೆ ಬರಲೇ ಇಲ್ಲ. ಈಗ ದೇಶಭಕ್ತಿ ಬಗ್ಗೆ ಮಾತಾಡ್ತಾರೆ ಎಂದು ಸಿ.ಎಂ ವ್ಯಂಗ್ಯವಾಡಿದರು.‌

ಗಾಂಧಿ ಅವರು ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದಂತೆ, ಭಾರತದಲ್ಲಿ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಭದ್ರ ಬುನಾಧಿ ಹಾಕಿದವರು ನೆಹರು. ಬಹುತ್ವದ ಭಾರತದ ನೆಲದಲ್ಲಿ ಏಕತೆ ತಂದು ಸಹಿಷ್ಣುಣತೆಯನ್ನು ಆಚರಣೆಗೆ ತರಲು ನೆಹರೂ ಕೊಡುಗೆ ಅಪಾರ ಎಂದರು.

ಮನುಸ್ಮೃತಿ ಪ್ರೇರಿತ ಜಾತಿ ವ್ಯವಸ್ಥೆ ಭಾರತ ಸಮಾಜವನ್ನು ಜಾತಿ ಆಧಾರದಲ್ಲಿ ಬಿರುಕು ಮೂಡಿಸಿತು. ಈ ಇತಿಹಾಸ ನಿಮಗೆ ಗೊತ್ತಿರಬೇಕು ಎಂದರು.

ಯುವ ಕಾಂಗ್ರೆಸ್ ಅಂದರೆ ಭಾರತದ ಸಂವಿಧಾನ ಮತ್ತು ಬಹುತ್ವದ ರಕ್ಷಣೆಗೆ ನಿಂತ ಯುವ ಸೈನ್ಯ. ನಾವು ಏಕೆ ಕಾಂಗ್ರೆಸ್ ಕಟ್ಟುತ್ತಿದ್ದೇವೆ, RSS ಮತ್ತು ಸಂಘ ಪರಿವಾರ ಹೇಗೆ ಭಾರತದ ಬಹುತ್ವ ಮತ್ತು ಸಂವಿಧಾನ ವಿರೋಧಿ ಎನ್ನುವ ಸ್ಪಷ್ಟತೆ ನಿಮಗೆ ಇರಬೇಕು. ಈ ಸ್ಪಷ್ಟತೆ ಇಲ್ಲದವರು ಬಹಳ ವರ್ಷ ಕಾಂಗ್ರೆಸ್ ನಲ್ಲಿ ಉಳೀತಾರೆ ಎನ್ನುವುದು ಅನುಮಾನ ಎಂದರು.

ಸ್ವಾತಂತ್ರ, ಸಮಾನತೆ, ಬ್ರಾತೃತ್ವ ಹಾಗೂ ಸಹಿಷ್ಣತೆ, ಸಹಭಾಳ್ವೆ ನಮ್ಮ ಸಂವಿಧಾನದ ಉಸಿರು. ಇದೇ ಭಾರತದ ಉಸಿರು ಕೂಡ ಆಗಿದೆ ಎಂದರು.

“ಅಧಿಕಾರ ಬಲಾಡ್ಯರ ಕೈಯಲ್ಲಿ ಇರಬಾರದು. ಜನ ಸಾಮಾನ್ಯರ ಕೈಯಲ್ಲಿ ಇರಬೇಕು” ಎಂದು ಅಂಬೇಡ್ಕರ್ ಹೇಳಿದ್ದರು. ಕಾಂಗ್ರೆಸ್ ಜನರ ಕೈಗೆ ಅಧಿಕಾರ ಮತ್ತು ಅವಕಾಶಗಳನ್ನು ನೀಡುತ್ತಿದೆ. ಬಿಜೆಪಿ ಬಲಾಡ್ಯರಿಗೆ ಅಧಿಕಾರ ಮತ್ತು ಅವಕಾಶ ನೀಡುತ್ತಿದೆ. ಇದು ಸಂವಿಧಾನ ವಿರೋಧಿ. ಹೀಗಾಗಿ ಬಿಜೆಪಿ ಸಂವಿಧಾನವನ್ನೇ ವಿರೋಧಿಸುತ್ತದೆ ಎಂದರು.

ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿ ಅಸಮಾನತೆಯನ್ನು ಕಡಿಮೆ ಮಾಡುವ ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡಿದ್ದೇವೆ. ಸ್ವಾತಂತ್ರ್ಯ ಸಾರ್ಥಕತೆ ಆಗಬೇಕಾದರೆ ಪ್ರತಿಯೊಬ್ಬರೂ ಆರ್ಥಿಕ ಮತ್ತು ಸಾಮಾಜಿಕ ಸಬಲತೆ ಪಡೆದುಕೊಳ್ಳಬೇಕು. ಕಟ್ಟ ಕಡೆಯ ಮನುಷ್ಯನಿಗೆ ಶಕ್ತಿ ಕೊಡುವುದೇ ಸರ್ವೋದಯದ ಆಶಯ ಎಂದರು.

ಮೌಡ್ಯ, ಕಂದಾಚಾರ, ಕರ್ಮ ಸಿದ್ಧಾಂತವನ್ನು ಕೃತಕವಾಗಿ ಸೃಷ್ಟಿಸಿ ನೀರು ಗೊಬ್ಬರ ಹಾಕಿ ಗಟ್ಟಿ ಮಾಡಿಟ್ಟಿದ್ದಾರೆ. ದೇವರು ಒಬ್ಬರಿಗೊಂದು ಮತ್ತೊಬ್ಬರಿಗೊಂದು ಮಾಡುವುದಿಲ್ಲ. ದೇವರ ಹೆಸರಲ್ಲಿ ಮೌಡ್ಯಗಳನ್ನು ಬಿತ್ತುವವರ ಬಗ್ಗೆ ಎಚ್ಚರ ವಿರಲಿ.

ಶರಣ ಬಸವಣ್ಣ ಹೇಳಿದ ರೀತಿಯಲ್ಲಿ ದೇವರು ಇದ್ದಾನೆ. ಬಸವಣ್ಣರ ರೀತಿಯಲ್ಲಿ ದೇವರನ್ನು ಕಾಣಬೇಕು. ಮಾಡಬಾರದ ಪಾಪಗಳನ್ನೆಲ್ಲಾ ಮಾಡಿ ದೇವರಿಗೆ ಕೈ ಮುಗಿದರೆ ಪಾಪ ಹೋಗುವುದಿಲ್ಲ. ಬಿಜೆಪಿ ದೇವರು, ಧರ್ಮದ ಹೆಸರಲ್ಲಿ ಬರೀ ಸುಳ್ಳು ಹರಡುತ್ತದೆ. ಈ ಬಗ್ಗೆ ದೇಶದ ಜನರ ತಿಳಿವಳಿಕೆ ಹೆಚ್ಚಿಸುವ ಕೆಲಸ ಆಗಬೇಕಿದೆ ಎಂದರು.

ತನ್ನನ್ನು ಚುನಾವಣೆಯಲ್ಲಿ ಸೋಲಿಸಿದ್ದು ಸಾವರ್ಕರ್ ಮತ್ತು ಢಾಂಗೆ ಎಂದು ಅಂಬೇಡ್ಕರ್ ಅವರೇ ಸ್ಪಷ್ಟವಾಗಿ ಬರೆದಿದ್ದಾರೆ .ನಿಮಗೆ ಸ್ಪಷ್ಟತೆ ಮತ್ತು ಬದ್ಧತೆ ಇದ್ದರೆ ಯಾರು ಏನೇ ಮಾಡಿದರೂನೀವು ಬದಲಾಗಲ್ಲ ಎಂದರು.

ಹೀಗಾಗಿ ಇತಿಹಾಸ ಮತ್ತು ಸಿದ್ಧಾಂತದ ಬಗ್ಗೆ ನಿಮಗೆ ಸ್ಪಷ್ಟತೆ ಇದ್ದರೆ ಮುಂದೆ ಉತ್ತಮ‌ ನಾಯಕರಾಗಿ ಬೆಳೆಯುತ್ತೀರಿ ಎಂದು ಕರೆ ನೀಡಿದರು.ಯುವ ಕಾಂಗ್ರೆಸ್ ಇಂದು ಇಲ್ಲಿ ಆಯೋಜಿಸಿರುವ ಇಂತಹ ಕಾರ್ಯಾಗಾರಗಳು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಡೆಯಬೇಕು ಎಂದು ಕರೆ ನೀಡಿದರು.

Girl in a jacket
error: Content is protected !!