ಮಂಡ್ಯ ,ಮೇ17 ಮೇಲುಕೋಟೆ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕೋವಿಡ್ – 19 ತಡೆಗಟ್ಟಲು ಮಾಡುತ್ತಿರುವ ಕಾರ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಶ್ಲಾಘಿಸಿದರು.
ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಚೇರಿಯ ಲ್ಲಿ ಮೆಡಿಸಿನ್ ಕಿಟ್ ವಿತರಣೆ ಮಾಡಿದರು. ಈ ವೇಳೆ ಪಕ್ಷದ ಕಾರ್ಯಕರ್ತರ ಜನಪರ ಕಾರ್ಯಗಳನ್ನು ನೆನೆದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರತಿದಿನ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಪರಿಸ್ಥಿತಿಯನ್ನು ಖುದ್ದು ಅವಲೋಕಿಸುತ್ತಿದ್ದೇನೆ. ನಿಮ್ಮೊಂದಿಗೆ ನಾನು ಕೂಡ ಸೇವಕನಾಗಿ ದುಡಿಯುತ್ತಿದ್ದೇನೆ. ಪ್ರತಿಯೊಬ್ಬರು ಮಾಡುವ ಒಳ್ಳೆ ಕೆಲಸಕ್ಕೆ ಪ್ರೋತ್ಸಾಹ ನೀಡುತ್ತಿದ್ದೇನೆ. ಕೊರೋನಾ ಬಗ್ಗೆ ನಾವು ಭಯಪಡಬಾರದು, ಆದರೆ ಮುನ್ನೆಚ್ಚರಿಕೆ ಅಗತ್ಯ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯ. ಜಿಲ್ಲೆಯಲ್ಲಿ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಹಗಲಿರುಳು ಕೊರೋನಾ ತಡೆಗಟ್ಟಲು ಹಾಗೂ ಕೊರೋನಾ ಸೋಂಕಿತರ ಶುಶ್ರೂಷೆಗೆ ಶ್ರಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಜಾತಿ-ಮತ, ಪಕ್ಷ ಬೇಧವಿಲ್ಲದೆ ನಾವೆಲ್ಲ ಒಂದಾಗಿ ಕೆಲಸ ಮಾಡಬೇಕು. ಗಾಳಿ ಮಾತಿಗೆ ಕಿವಿಗೊಡದೆ ಕೊರೋನಾವನ್ನು ಸಂಪೂರ್ಣ ನಿಯಂತ್ರಿಸಲು ಕೆಲಸ ಮಾಡೋಣ ಎಂದು ಸಚಿವ ಡಾ. ನಾರಾಯಣಗೌಡ ಹೇಳಿದರು.
ರಾಜಕಾರಣ ಮಾಡುವ ಸಂದರ್ಭದಲ್ಲಿ ರಾಜಕಾರಣ ಮಾಡೋಣ. ಯಾರೇ ರಾಜಕೀಯದ ಬಗ್ಗೆ ಮಾತನಾಡಿದರು ಆ ಬಗ್ಗೆ ಕಿವಿಗೊಡದೆ, ನಮ್ಮ ಕೆಲಸವನ್ನು ನಾವು ಶ್ರದ್ದೆಯಿಂದ ಮಾಡೋಣ. ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜನರ ನೆರವಿಗೆ ಮುಂದಾಗಬೇಕು ಎಂದು ಕರೆನೀಡಿದರು. ಯಾರಿಗಾದರು ಕೊರೋನಾ ಸೋಂಕಿನ ಲಕ್ಷಣ ಕಂಡುಬಂದಲ್ಲಿ ಅವರನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿ. ಜಿಲ್ಲೆಯಲ್ಲಿ ಯಾರಿಗಾದರು ಮೆಡಿಸಿನ್ ಮತ್ತು ಆಹಾರದ ಕಿಟ್ ಅಗತ್ಯವಿದ್ದಲ್ಲಿ ತಮ್ಮ ಕಚೇರಿಯನ್ನು ಸಂಪರ್ಕಿಸಿ ಎಂದು ಹೇಳಿದರು.