ಬೆಳಗಾವಿ, ಜೂ,01:ಬೆಳಗಾವಿ ಜಿಲ್ಲಾ ಹುಕ್ಕೇರಿ ತಾಲ್ಲೂಕಿನ ಗುಡಸ ಗ್ರಾಮದ ಶ್ರೀ ಸಿದ್ಧಾರೂಢ ಮಠದ ಪೀಠಾಧಿಪತಿ ಶ್ರೋ. ಬ್ರ. ಸದ್ಗುರು ಶ್ರೀ ಈಶ್ವರಾನಂದ ಮಹಾಸ್ವಾಮೀಜಿ (65) ಇಂದು ಬೆಳಗಿನ ಜಾವ 2 ಘಂಟೆಗೆ ಬ್ರಹ್ಮಲೀನರಾಗಿದ್ದಾರೆ.
ಕಳೆದ ಹದಿನೈದು ದಿನಗಳಿಂದ ಕೋವಿಡ್ ಪೀಡಿತರಾಗಿದ್ದ ಶ್ರೀಗಳು ಕೊಲ್ಲಾಪುರ ಬಳಿಯ ಕಣೇರಿ ಮಠದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಅವರನ್ನು ಮಠಕ್ಕೆ ಕರೆತರಲಾಗಿತ್ತು. ಮಠದಲ್ಲಿಯ ಕೊನೆಯುಸಿರೆಳೆದರೆಂದು ಹೇಳಲಾಗಿದೆ.
ಹುಕ್ಕೇರಿ ತಾಲ್ಲೂಕಿನ ಕೊಚ್ರಿ ಎಂಬಲ್ಲಿ ಶ್ರೀ ದುಂಡಪ್ಪ ಶ್ರೀಮತಿ ಶಿವಕ್ಕ ಲೋಳಸೂರೆ ದಂಪತಿಗಳ ಸುಪುತ್ರರಾಗಿ 1956 ರಲ್ಲಿ ಜನಿಸಿದ ಶ್ರೀಗಳು ಸಂಕೇಶ್ವರದಲ್ಲಿ ಪದವಿ ಪೂರೈಸಿದ್ದರು.ಬಳಿಕ ಸಿದ್ಧಾರೂಢರ ವಿಚಾರಧಾರೆಗಳಿಂದ ಪ್ರಭಾವಿತರಾಗಿ ಸಂನ್ಯಾಸ ಸ್ವೀಕರಿಸಿದ್ದರು. ನಾವಲಗಿ ಸಿದ್ಧಯ್ಯ ಸ್ವಾಮಿಗಳ ಬಳಿ ಹಾಗೂ ಮಹಾರಾಷ್ಟ್ರದ ಹೊನ್ನಪ್ಪ ಮಹಾರಾಜ್ ಅವರ ಬಳಿ, ವಿಚಾರ ಸಾಗರ, ವೃತ್ತಿ ಪ್ರಭಾಕರ, ವಿಚಾರ ಚಂದ್ರೋದಯ ಮೊದಲಾದ ಹಿಂದೀ ವೇದಾಂತ ಗ್ರಂಥಗಳ ಅಧ್ಯಯನ ಮಾಡಿದ್ದರು. ನಿಜಗುಣ ಶಿವಯೋಗಿಗಳ ಕನ್ನಡ ವೇದಾಂತ ಗ್ರಂಥಗಳ ಅಧ್ಯಯನವನ್ನೂ ಮಾಡಿದ್ದರು. ಸರಳರೂ ಸಾತ್ತ್ವಿಕರೂ ಆಗಿದ್ದ ಶ್ರೀಗಳು ಗುಡಸ್ ನಲ್ಲಿ ಶ್ರೀ ಸಿದ್ಧಾರೂಢ ಮಠ ಸ್ಥಾಪಿಸಿ ಸುಂದರ ಕಟ್ಟಡ ನಿರ್ಮಿಸಿದ್ದು ಸಿದ್ಧಾರೂಢರ ಅಮೃತಶಿಲಾ ಮೂರ್ತಿಯನ್ನು ತರಿಸಿದ್ದಾರೆ. ಕೋವಿಡ್ ನಿಂದಾಗಿ ಮೂರ್ತಿ ಪ್ರತಿಷ್ಠಾಪನೆಯನ್ನು ನೆರವೇರಿಸಲಾಗದೇ ನಿಧನರಾದದ್ದು ದುರಂತ. ವಿಚಾರ ಸಾಗರ ಹಿಂದೀ ಗ್ರಂಥದ ಕನ್ನಡಾನುವಾದಕರಲ್ಲಿ ಒಬ್ಬರಾದ ಶ್ರೀಗಳು ಅಪಾರ ಸಂಖ್ಯೆಯ ಮುಮುಕ್ಷು ಹಾಗೂ ಭಕ್ತವೃಂದವನ್ನು ಅಗಲಿದ್ದಾರೆ.
ಸಂತಾಪ;
ಶ್ರೀ ಗಳ ಅಗಲಿಕೆ ಅಧ್ಯಾತ್ಮ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಸದ್ಗುರು ಶ್ರೀ ಸಿದ್ಧಾರೂಢರ ಸಂಪೂರ್ಣ ಅನುಗ್ರಹ ಅವರಿಗಿದ್ದು, ಅವರ ಪರಮ ಪೂಜ್ಯ ಚರಣಾರವಿಂದಗಳಲ್ಲಿ ಭಕ್ತಿಪೂರ್ವಕ ಶ್ರದ್ಧಾಂಜಲಿಗಳು ಎಂದು ಡಾ .ಆರೂಢಭಾರತೀ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.