ಬೆಂಗಳೂರು,ಡಿ,12: ಮೈಸೂರಿನಲ್ಲಿರುವ ಗಂಗೂಬಾಯಿ ಸಂಗೀತ ವಿಶ್ವವಿದ್ಯಾಲಯವನ್ನು ಮುಂದಿನ ಒಂದು ವರ್ಷದಲ್ಲಿ ಜಾಗತಿಕ ಗುಣಮಟ್ಟದೊಂದಿಗೆ ಪುನಶ್ಚೇತನಗೊಳಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ನಗರದ ಗಾಯನ ಸಮಾಜದಲ್ಲಿ ನಡೆಯುತ್ತಿದ್ದ 51ನೇ ಸಂಗೀತ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಮಾತನಾಡಿದ ಅವರು, ವ್ಯಕ್ತಿಗಳು ನೆಮ್ಮದಿಯಿಂದ ಬದುಕಬೇಕಾದರೆ ಸಂಸ್ಕೃತಿ ಮತ್ತು ಸಂಸ್ಕಾರಗಳು ಬಹಳ ಮುಖ್ಯ ಎಂದರು.
ಶಿಕ್ಷಣದಲ್ಲಿ ಭಾರತೀಯತೆ ಮತ್ತು ಸಂಸ್ಕೃತಿಯ ಇತರ ಅಂಶಗಳೆಲ್ಲವೂ ಇರಬೇಕೆನ್ನುವುದು ಸದಾಶಯವಾಗಿದೆ. ಏಕೆಂದರೆ, ಕೇವಲ ಶಾಲಾಕಾಲೇಜುಗಳ ಓದಷ್ಟೇ ಮುಖ್ಯವಲ್ಲ. ಇದನ್ನು ಮನಗಂಡೇ ಪ್ರಧಾನಿ ನರೇಂದ್ರ ಮೋದಿಯವರು ಸಮಗ್ರ ವಿಕಸನದ ಕಲ್ಪನೆ ಇರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದಾರೆ ಎಂದು ಅವರು ನುಡಿದರು.
ಕಲೆ, ಸಂಗೀತ, ನೃತ್ಯ ಇತ್ಯಾದಿಗಳನ್ನು ಸರಕಾರವು ಪರಿಪೂರ್ಣವಾಗಿ ಕಲಿಸಲಾರದು. ಇದರಲ್ಲಿ ಸಂಘಸಂಸ್ಥೆಗಳು ನಿರ್ವಹಿಸಬೇಕಾದ ಪಾತ್ರ ಮಹತ್ತರವಾದುದಾಗಿದೆ. ಈ ನಿಟ್ಟಿನಲ್ಲಿ ಗಾಯನ ಸಮಾಜದಂತಹ ಸಂಸ್ಥೆಗಳು ಮಾಡುತ್ತಿರುವ ಕೆಲಸವು ಅನುಸರಣ ಯೋಗ್ಯವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಗೀತ ಕಲಾವಿದರು ಆರ್ಥಿಕವಾಗಿಯೂ ಸದೃಢವಾಗಿರಬೇಕು. ಇದಕ್ಕೆ ಪೂರಕವಾಗಿ ಓಓಟಿ ತರಹದ ಆಧುನಿಕ ತಂತ್ರಜ್ಞಾನ ವೇದಿಕೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಸಚಿವರು ಹೇಳಿದರು.
ಸಮಾರಂಭದಲ್ಲಿ ಶ್ರೀ ಯದುಗಿರಿ ಯತಿರಾಜ ಮಠದ ಶ್ರೀನಾರಾಯಣ ಜೀಯರ್, ಸಮ್ಮೇಳನಾಧ್ಯಕ್ಷ ಕೃಷ್ಣಮೂರ್ತಿ, ಸಂಗೀತ ವಿದ್ವಾಂಸರಾದ ಸೂರ್ಯಪ್ರಕಾಶ್, ಎ.ವಿ.ಆನಂದ್, ಗಾಯನ ಸಮಾಜದ ಮುಖ್ಯಸ್ಥರಾದ ಎಂ.ಆರ್.ವಿ ಪ್ರಸಾದ್ ಮತ್ತು ಉಪಾಧ್ಯಕ್ಷ ಅಚ್ಯುತ ಪದಕಿ ಮುಂತಾದವರು ಉಪಸ್ಥಿತರಿದ್ದರು.