ಬೆಂಗಳೂರು,ಸೆ,೨೭: ನಗರದಲ್ಲಿ ಮತ್ತೊಂದು ಕಟ್ಟಡ ಕುಸಿದು ಬಿದ್ದಿದೆ ಅದೃಷ್ಟವಷಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ವಿಲ್ಸನ್ ಗಾರ್ಡನ್ನಲ್ಲಿರುವ ಲಕ್ಕಸಂದ್ರದಲ್ಲಿ ಮೂರು ಅಂತಸ್ತಿನ ಕಟ್ಟಡ ನೋಡು ನೋಡುತ್ತಿದ್ದಂತೆ ಕುಸಿದು ಬಿದ್ದಿದೆ ಆದರೆ ಮುಂಚೆಯೇ ಇದರ ಸೂಚನೆ ಇದ್ದ ಕಾರಣ ಮನೆಯಿಂದ ಎಲ್ಲರೂ ಹೊರ ಬಂದಿದ್ದರು ಹೀಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಕಳೆದ ಎರಡು ವರ್ಷಗಳ ಹಿಂದೆಯೇ ಈ ಮನೆ ಕೊಂಚ ವಾಲಿತ್ತು. ಇಂದು ಬೆಳಗ್ಗೆ ಮನೆ ನಿಧಾನವಾಗಿ ಮತ್ತಷ್ಟು ವಾಲಲು ಮುಂದಾಗಿದೆ. ಈ ಘಟನೆ ಅರಿವಿಗೆ ಬರುತ್ತಿದ್ದಂತೆ ತಕ್ಷಣಕ್ಕೆ ಮನೆಯಲ್ಲಿದ್ದವರೆಲ್ಲಾ ಹೊರಗೆ ಓಡಿ ಹೋಗಿದ್ದಾರೆ. ಅಲ್ಲದೇ ಅಗ್ನಿಶಾಮಕಕ್ಕೆ ಕರೆ ಮಾಡಿದ್ದಾರೆ. ಮನೆಯವರೆಲ್ಲಾ ಹೊರ ಹೋಗುತ್ತಿದ್ದಂತೆ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ.
ಕಟ್ಟಡ ಸಂಪೂರ್ಣವಾಗಿ ಶಿಥಿಲಗೊಂಡಿತ್ತು. ಮನೆ ಕೂಡ ಕೊಂಚ ವಾಲಿದ್ದರಿಂದ ಮನೆಯಲ್ಲಿ ಕಳೆದೆರಡು ವರ್ಷಗಳಿಂದ ಯಾವುದೇ ಕುಟುಂಬ ವಾಸವಾಗಿರಲಿಲ್ಲ. ಈ ಹಿನ್ನಲೆ ಖಾಲಿ ಇದ್ದ ಕಟ್ಟಡದಲ್ಲಿ ಸುಮಾರು ೩೦ ರಿಂದ ೪೦ ಮಂದಿ ಮೆಟ್ರೋ ಕಾರ್ಮಿಕರು ವಾಸಿಸುತ್ತಿದ್ದರು. ಇ
ಒಂದು ವೇಳೆ ರಾತ್ರಿ ಸಮಯದಲ್ಲಿ ಈ ರೀತಿ ಘಟನೆ ನಡೆದಿದ್ದರೆ, ಕಟ್ಟಡದಲ್ಲಿದ್ದ ಸುಮಾರು ೩೦ ರಿಂದ ೪೦ ಮಂದಿ ಪ್ರಾಣಕ್ಕೆ ಕುತ್ತು ಎದುರಾಗುತ್ತಿತ್ತು.
ಘಟನೆ ನಡೆದಾಕ್ಷಣಕ್ಕೆ ಅಗ್ನಿಶಾಮಕ ದಳದ ತಂಡ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಾಹಣ ಎನ್ಡಿಆರ್ಎಫ್ ತಂಡದ ಸದಸ್ಯರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕುಸಿದ ಮನೆಯೊಳಗೆ ಅಡುಗೆ ಸಿಲಿಂಡರ್ ಇರುವ ಕಾರಣದಿಂದ ಪರಿಶೀಲನೆ ಮಾಡುತ್ತಿದ್ದು, ಯಾವುದೇ ಹಾನಿಯಾಗದಂತೆ ಮುನ್ನೆಚ್ಚರಿಕೆ ನಡೆಸಲಾಗುತ್ತಿದೆ.
ನಾಪತ್ತೆಯಾದ ಮನೆ ಮಾಲೀಕರು
ಇನ್ನು ಘಟನೆ ಕುರಿತು ಸ್ಥಳೀಯರು ಮಾಲೀಕರಾದ ಮಂಜುಳಾ ಮತ್ತು ಸುರೇಶ್ ದಂಪತಿಗೆ ಮಾಹಿತಿ ನೀಡಿದ್ದರು. ಕಟ್ಟಡ ಕುಸಿದ ಬಳಿಕವೂ ಮನೆ ಮಾಲೀಕರು ಘಟನಾ ಸ್ಥಳಕ್ಕೆ ಆಗಮಿಸಿಲ್ಲ. ಈ ಹಿಂದೆಯೇ ಕಟ್ಟಡ ವಾಲಿದ್ದರ ಬಗ್ಗೆ ತಿಳಿದಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗದ ಹಿನ್ನಲೆ ಈ ಅನಾಹುತ ಸಂಭವಿಸಿದೆ. ಮನೆ ಮಾಲೀಕರ ಮೇಲೆ ಪ್ರಕರಣ ದಾಖಲಾಗುವ ಸಾಧ್ಯತೆ ಹಿನ್ನಲೆ ಅವರು ನಾಪತ್ತೆಯಾಗಿದ್ದಾರೆ. ಘಟನಾ ಸ್ಥಳಕ್ಕೆ ಇದುವರೆಗೂ ಬಾರದೇ ಕಣ್ಮರೆಯಾಗಿರವ ಮನೆ ಮಾಲೀಕ ಸುರೇಶ್ ವಿರುದ್ಧ ಅಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಹಿಂದೆ ಕೂಡ ಇವರ ಮತ್ತೊಂದು ಕಟ್ಟಡ ಬಿದ್ದಿತ್ತು
ಮಂಜುಳಾ ಮತ್ತು ಸುರೇಶ್ ದಂಪತಿಗಳಿಗೆ ಸೇರಿದ ಮತ್ತೊಂದು ಕಟ್ಟಡ ಕೂಡ ಈ ಹಿಂದೆ ಇದೇ ರೀತಿ ಕುಸಿದು ಬಿದ್ದಿತು. ಆಗಲೂ ಕೂಡ ಅದೃಷ್ಟವಶಾತ್ ಯಾವುದೇ ಪ್ರಾಣ ಅಪಾಯವಾಗಿರಲಿಲ್ಲ. ಲಕ್ಕಸಂದ್ರ ಫಸ್ಟ್ ಕ್ರಾಸ್ನಲ್ಲಿ ಹಳೆಯ ಶಿಥಿಲಗೊಂಡ ಕಟ್ಟಡ ಬಿದಿದ್ದು. ಈ ಸಂದರ್ಭದಲ್ಲೂ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಘಟನೆ ಬಳಿಕವೂ ಈ ಕಟ್ಟಡದ ಬಗ್ಗೆ ಅವರು ಮುನ್ನೆಚ್ಚರಿಕೆ ವಹಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.