ಚೇರಂಬಾಣೆ ಸಿದ್ಧಾಶ್ರಮದ ಬೇಬಿತಾಯಿ ಬ್ರಹ್ಮೈಕ್ಯ.

Share

ಬೆಂಗಳೂರು,ಜೂ,19:ಕೊಡಗು ಜಿಲ್ಲೆಯ ಚೇರಂಬಾಣೆಯ ಶ್ರೀ ಸಿದ್ಧಾರೂಢಾಶ್ರಮದ ಶ್ರೀಮಾತೆ ಬೇಬಿತಾಯಿಯವರು (84) ಇಂದು ಬೆಳಿಗ್ಗೆ ಬ್ರಾಹ್ಮೀಮುಹೂರ್ತದಲ್ಲಿ (5.15) ಬ್ರಹ್ಮೈಕ್ಯರಾದರು. ಮಧ್ಯಾಹ್ನಆಶ್ರಮದಲ್ಲಿ ಸಂಪ್ರದಾಯದಂತೆ ಅವರ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಇತ್ತೀಚೆಗೆ ಅವರು ವಯಸ್ಸಹಜ ಕಾಯಿಲೆಯಿಂದ ಬಳಲುತ್ತಿದ್ದರೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಲು ನಿರಾಕರಿಸಿದ್ದರು. 20.11.1936 ರಲ್ಲಿ ಚೇರಂಬಾಣೆ ಬಳಿಯ ಕೊಟ್ಟೂರು ಗ್ರಾಮದ ಶ್ರೀ ಅಚ್ಚಯ್ಯ ಶ್ರೀಮತಿ ಬಿಳ್ಳವ್ವ ದಂಪತಿಗಳಿಗೆ ಜನಿಸಿದ ಇವರು ಬಾಲಬ್ರಹ್ಮಚಾರಿಣಿಯಾಗಿದ್ದರು. ಮೂರು ಜನ ಸಹೋದರ ಐದು ಜನ ಸಹೋದರಿಯರನ್ನು ಹೊಂದಿದ್ದ ಇವರು ತಮ್ಮ ನಲವತ್ತೆರಡನೇ ವಯಸ್ಸಿನಲ್ಲಿ ಚೇರಂಬಾಣೆಯ ಸಿದ್ಧಾರೂಢಾಶ್ರಮಕ್ಕೆ ಸೇರಿಕೊಂಡರು. ಅಂದಿನ ಪೀಠಾಧಿಪತಿಗಳಾಗಿದ್ದ ಸದ್ಗುರು ಶ್ರೀ ನಾರಾಯಣಾನಂದ ಸ್ವಾಮೀಜಿಯವರಿಂದ ದೀಕ್ಷೆ ಪಡೆದಿದ್ದರು. 2016 ರಲ್ಲಿ ನಾರಾಯಣಾನಂದ ಸ್ವಾಮೀಜಿ ಬ್ರಹ್ಮಲೀನರಾದ ಬಳಿಕ ಬೇಬಿ ಮಾತೆಯವರೇ ಮಠದ ಉಸ್ತುವಾರಿ ವಹಿಸಿದ್ದರು. 15.10.2019 ರಲ್ಲಿ ಡಾ ಆರೂಢಭಾರತೀ ಸ್ವಾಮೀಜಿಯವರನ್ನು ಮಠದ ಟ್ರಸ್ಟ್ನ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಬಳಿಕ ಅವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ತಮ್ಮ ಇಳಿ ವಯಸ್ಸಿನ ಇತ್ತೀಚಿನವರೆಗೂ ಎಂದಿನಂತೆ ಪ್ರತಿನಿತ್ಯ ಬೆಳಿಗ್ಗೆ 5 ಘಂಟೆ, ಮಧ್ಯಾಹ್ನ ಹಾಗೂ ಸಂಜೆಯ ಶ್ರೀ ಸಿದ್ಧಾರೂಢ – ಮಾಧವಾನಂದರ ಪೂಜೆಯನ್ನು ಚಾಚೂ ತಪ್ಪದೇ ಸ್ವತಃ ತಾವೇ ಮಾಡುತ್ತಿದ್ದರು. ಅವರ ಗುರುಭಕ್ತಿ, ಅಧ್ಯಾತ್ಮ ನಿಷ್ಠೆ, ಅನ್ನ ಹಾಗೂ ಕಾಯಕ ದಾಸೋಹಗಳು ಇತರರಿಗೆ ಮಾದರಿ. ಅವರ ಅಗಲಿಕೆಯಿಂದ ಒಬ್ಬ ಅಪ್ರತಿಮ ಮಹಿಳಾ ತಪಸ್ವಿನಿಯನ್ನು ಕಳೆದುಕೊಂಡ ಅಧ್ಯಾತ್ಮ ಕ್ಷೇತ್ರ ಬಡವಾಗಿದೆ. ಅವರ ಆತ್ಮ ಚಿರಮುಕ್ತಿಯನ್ನು ಹೊಂದಲಿ, ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಸಮಾಜಕ್ಕೆ ಶ್ರೀ ಸಿದ್ಧಾರೂಢರು ಅನುಗ್ರಹಿಸಲಿ ಎಂದು ಶ್ರೀ ಆರೂಢಭಾರತೀ ಸ್ವಾಮೀಜಿ  ಪ್ರಾರ್ಥಿಸಿದ್ದಾರೆ.

Girl in a jacket
error: Content is protected !!