ಕಾಯಕ ಸಮಾಜವನ್ನು ನನಸಾಗಿಸಿದ್ದು ಶ್ರೀ ಸಿದ್ಧರಾಮೇಶ್ವರರು: ಎಂ ಬಿ ಪಾಟೀಲ

Share

ಕಾಯಕ ಸಮಾಜವನ್ನು ನನಸಾಗಿಸಿದ್ದು ಶ್ರೀ ಸಿದ್ಧರಾಮೇಶ್ವರರು: ಎಂ ಬಿ ಪಾಟೀಲ

Publish by desk team

ಬೆಂಗಳೂರು,ಜ,15-ಹಿಂದೆ ನಾನು‌ ನೀರಾವರಿ ಸಚಿವನಾಗಿದ್ದಾಗ ರಾಜ್ಯದ ಕೆರೆಗಳಿಗೆ ನೀರು ತುಂಬಿಸುವ ತೀರ್ಮಾನ ಮಾಡಿದೆ. ಇದರಿಂದಾಗಿ ಆರು ಸಾವಿರ ಕೆರೆಗಳಿಗೆ ಮತ್ತೆ ಜೀವ ಬಂತು. ಇದರ ಹಿಂದೆ ವಚನಕಾರ ಸಿದ್ಧರಾಮೇಶ್ವರರ ಕಾಯಕ ಸಮಾಜ ನಿರ್ಮಾಣದ ಪ್ರೇರಣೆ ಇತ್ತು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಬುಧವಾರ ಹೇಳಿದ್ದಾರೆ.

ಅರಮನೆ ಮೈದಾನದಲ್ಲಿ ನಡೆದ ಎರಡು ದಿನಗಳ ಶ್ರೀ ಸಿದ್ಧರಾಮೇಶ್ವರರ 852ನೇ ಜಯಂತಿ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಸವಣ್ಣನವರು ಕಾಯಕ ಸಮಾಜ ನಿರ್ಮಾಣಕ್ಕೆ ಕರೆ ನೀಡಿದರು. ಆದರೆ ದೇವಸ್ಥಾನ, ಕೆರೆಕಟ್ಟೆ, ಜಮೀನಿಗೆ ನೀರಾವರಿ ಸೌಕರ್ಯ ವ್ಯವಸ್ಥೆ ಮಾಡುವ ಮೂಲಕ ಸಿದ್ಧರಾಮೇಶ್ವರರು ಬಸವಣ್ಣನವರ ಕನಸನ್ನು ನನಸು ಮಾಡಿದರು ಎಂದು ಅವರು ನುಡಿದಿದ್ದಾರೆ.

ಮಹಾರಾಷ್ಟ್ರದ ಸೊಲ್ಲಾಪುರ ಮತ್ತು ಅವಿಭಜಿತ ವಿಜಯಪುರ ಭಾಗಗಳಲ್ಲಿ ಸಿದ್ಧರಾಮೇಶ್ವರರ ಪ್ರಭಾವ ಇಂದಿಗೂ ಗಾಢವಾಗಿದೆ. ಇತ್ತ ತುಮಕೂರಿನ ಭಾಗದಲ್ಲಿ ನೊಳಂಬ ಲಿಂಗಾಯತ ಸಮುದಾಯವು ಸಿದ್ಧರಾಮೇಶ್ವರರ ಮೇಲೆ ಅತೀವ ಭಕ್ತಿ ಹೊಂದಿ, ಅವರ ಹೆಸರನ್ನು ಶಾಶ್ವತಗೊಳಿಸಿದೆ ಎನ್ನುವುದು ಇತ್ತೀಚಿನ ವರ್ಷಗಳಲ್ಲಿ ಗಮನಕ್ಕೆ ಬಂತು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ತಮ್ಮ ನೇತೃತ್ವದ ಫ.ಗು.ಹಳಕಟ್ಟಿ ವಚನ ಸಂಶೋಧನಾ ಕೇಂದ್ರದ ಮೂಲಕ ಸಿದ್ಧರಾಮೇಶ್ವರರ ವಚನ ಸಂಪುಟಗಳನ್ನು ಕೂಡ ಪ್ರಕಟಿಸಲಾಗಿದೆ. ಸಿದ್ಧರಾಮೇಶ್ವರರು ಸಮಷ್ಟಿ ಹಿತಕ್ಕಾಗಿ ಮಿಡಿದ ಶರಣರಾಗಿದ್ದರು. ವಿಜಯಪುರದಲ್ಲಿ ಅವರ ಹೆಸರಿನ ದೇಗುಲವೇ ಇದೆ ಎಂದು ಅವರು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಸುತ್ತೂರಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಚಂದ್ರಶೇಖರ ಮಹಾಸ್ವಾಮೀಜಿ, ಶಾಸಕ ಷಡಕ್ಷರಿ, ಮುಖಂಡರಾದ ಬಿ.ಎಲ್.ಶಂಕರ್, ಸ್ವಾಗತ ಸಮಿತಿ ಅಧ್ಯಕ್ಷ ಸಿದ್ಧರಾಮಪ್ಪ ಮುಂತಾದವರು ಉಪಸ್ಥಿತರಿದ್ದರು.

Girl in a jacket
error: Content is protected !!