writing-ಪರಶಿವ ಧನಗೂರು
ಕೆಆರ್ಎಸ್ ಮೂರು ಪ್ರಮುಖ ನಾಲೆಗಳ ಮೂಲಕ ೧ಕೋಟಿ ಐವತ್ತು ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುತ್ತಿರುವ ರೈತರ ಜೀವನಾಡಿ. ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನ ಕೋಟ್ಯಂತರ ಜನರ ದಾಹ ತಣಿಸುತ್ತಿರುವ ಜೀವಜಲನಿಧಿ.. ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರಿನ ಕೋಟ್ಯಂತರ ಜನರು ಬೆಚ್ಚಿ ಬೀಳುವಂತೆ ಮಾಡಿರುವ ಈ ಸುದ್ಧಿ ನಿಜಕ್ಕೂ ಆಘಾತಕಾರಿಯಾಗಿಯೇ ಇದೆ. ಹಲವು ವರ್ಷಗಳಿಂದಲೂ ಗಾಳಿಸುದ್ಧಿಯಂತೆಯೇ ಅಂತೆ-ಕಂತೆ, ಕತೆಗಳಲ್ಲಿಯೇ ಅನುಮಾನಾಸ್ಪದವಾಗಿ ಜನರ ಬಾಯಿಂದ ಬಾಯಿಗೆ ಹರಿದಾಡುತ್ತಿತ್ತು. ಈಗ ಮಂಡ್ಯದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಹೇಳಿಕೆಯೊಂದಿಗೆ ಮತ್ತೆ ಮುನ್ನೆಲೆಗೆ ಬಂದಿದೆ. ಇದ್ದಕ್ಕಿದ್ದಂತೆ ಮಾದ್ಯಮ ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತಾ ’ಡ್ಯಾಂ ಬಿರುಕು ಬಿಟ್ಟಿರುವ ಬಗ್ಗೆ ನನಗೆ ಮಾಹಿತಿ ಇದೆ. ತಜ್ಞರಿಂದ ಪರಿಶೀಲನೆ ನಡೆಸಲು ಸ್ಥಳೀಯ ರಾಜಕಾರಣಿಗಳು ಅವಕಾಶ ನೀಡುತ್ತಿಲ್ಲ!’ ವೆಂದು ಆಪಾದಿಸುತ್ತಾ ಮತ್ತೊಂದು ಮಾತಿನ ಬಾಂಬ್ ಸಿಡಿಸಿದ್ದಾರೆ. ಕೆ.ಆರ್.ಎಸ್.ಡ್ಯಾಂ ಬಿರುಕು ಬಿಟ್ಟಿರುವ ಬಗ್ಗೆ ತನಿಖೆ ನಡೆಸಲು ಬಂದಿದ್ದ ಜಾರ್ಖಂಡ್ ನ ತಜ್ಞರ ಟೀಂಗೇ ಇಲ್ಲಿನ ಸ್ಥಳೀಯ ರಾಜಕಾರಣಿಗಳು ಸಾತ್ ನೀಡದೆ ವಾಪಸ್ ಕಳುಹಿಸಿದ್ದಾರೆನ್ನುವ ಮಾತಿನ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಶ್ರೀರಂಗಪಟ್ಟಣದ ಜೆ.ಡಿ.ಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ’ಡ್ಯಾಂ ಬಿರುಕು ಬಿಟ್ಟಿದ್ದರೆ ಬಂದು ತೋರಿಸಲಿ ನಾವೂ ಸಾಮೂಹಿಕವಾಗಿ ರಾಜೀನಾಮೆ ನೀಡುತ್ತೇವೇ!’ ಎಂದು ಸಂಸದೇ ಸುಮಲತಾ ಅಂಬರೀಶ್ ಅವರಿಗೆ ಸವಾಲು ಹಾಕಿದ್ದಾರೆ.
ಸ್ಪೋಟಕಗಳ ಹಾವಳಿ
ಕೆ.ಆರ್.ಎಸ್ ಸುತ್ತ ಗಣಿಗಾರಿಕೆಯ ಹುತ್ತ.. ಪದೇ ಪದೇ ಕಂಪನ. ವಿಚಿತ್ರ ನಿಗೂಢ ಶಬ್ಧಗಳ, ಸ್ಪೋಟಗಳ ಹಾವಳಿ. ಬೇಬಿ ಬೆಟ್ಟದ ಕಲ್ಲುಗಣಿಗಾರಿಕೆಯಿಂದ ಮನೆಗಳಲ್ಲಿ ಬಿರುಕು! ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ನಿಲ್ಲಿಸಲು ಮಂಡ್ಯ-ಮೈಸೂರಿನಲ್ಲಿ ರೈತರು, ಪ್ರಗತಿಪರರು, ಸಾರ್ವಜನಿಕ ರಿಂದ ರ್ಯಾಲಿ ಪ್ರತಿಭಟನೆ. ಹಲವು ವರ್ಷಗಳಿಂದಲೂ ನಡೆಯುತ್ತಿರುವ ಕೆ.ಆರ್.ಎಸ್ ಡ್ಯಾಂನ ಸುತ್ತಲಿನ ಈ ವಿದ್ಯಮಾನ ಗಳನ್ನು ಗಮನಿಸಿದರೆ ಇಲ್ಲೇನೋ ನಡೆಯುತ್ತಿದೆ ಎನಿಸದೆ ಇರದು. ಹೌದು ಮಂಡ್ಯದಲ್ಲಿರುವ ಕೃಷ್ಣ ರಾಜ ಸಾಗರ ಜಲಾಶಯದ ಭದ್ರತೆಯ ವಿಷಯದಲ್ಲಿ ಕೇಳಿಬರುತ್ತಿರುವ ಮಾತುಗಳು ಕೋಟ್ಯಂತರ ಜನರನ್ನೂ ಆತಂಕಕ್ಕೆ ದೂಡಿವೆ. ಈ ಹಣದಾಹಿ ಭ್ರಷ್ಟ ರಾಜಕಾರಣಿಗಳ, ರಾಜಕೀಯ ಪಕ್ಷಗಳ, ವೈಯಕ್ತಿಕ ಪ್ರತಿಷ್ಠೆಗೆ ಡ್ಯಾಂ ಅನ್ನೇ ಆಶ್ರಯಿಸಿ ಬದುಕುತ್ತಿರುವ ಕೋಟ್ಯಾಂತರ ಕನ್ನಡಿಗರು ಬಲಿಪಶು ಆಗಬಾರದು. ಆ ಕಾರಣದಿಂದ ಮಂಡ್ಯದ ಸಂಸದೆ ಸುಮಲತಾ ಅಂಬರೀಶ್ ಎತ್ತಿರುವ ಕೆ.ಆರ್. ಎಸ್ ಡ್ಯಾಂನ ಬಿರುಕಿನ ವಿಚಾರವಾಗಿ ಗಂಭೀರವಾಗಿ ಪ್ರತಿಕ್ರಿಯಿಸಿ ಎಲ್ಲರೂ ಈ ವಿಚಾರವಾಗಿ ಮುಂದೇನು ಮಾಡಬಹುದೆಂದು ಯೋಚಿಸಿ
ಕಾರ್ಯಪ್ರವೃತ್ತರಾಗಬೇಕಾಗಿದೆ. ಹಾಗೊಂದು ವೇಳೆ ಕೆ.ಆರ್. ಎಸ್. ಡ್ಯಾಂನಲ್ಲಿ ಬಿರುಕು ಬಿಟ್ಟಿರುವುದೇ ಆಗಿದ್ದರೇ ಅದು ಕೋಟ್ಯಾಂತರ ಕನ್ನಡಿಗರ ಜೀವನ್ಮರಣದ ಪ್ರಶ್ನೆಯಾಗುತ್ತದೆ. ಹಾಗಾಗಿ ಡ್ಯಾಂನ ಸುತ್ತ ಮುತ್ತ ತಾಂತ್ರಿಕ ಪರಿಣಿತರಿಂದ ಸಮಗ್ರ ಪರಿಶೀಲನೆ ನಡೆಸಿ ನಿಜಾಂಶ ಹೊರಕ್ಕೆ ತರಬೇಕಿದೆ. ಆಗ ತನಿಖೆಗೆ ಅಡ್ಡಿ ಯುಂಟುಮಾಡುತ್ತಿರುವ ಸ್ಥಳೀಯ ರಾಜಕಾರಣಿಗಳ್ಯಾರು? ಯಾವ ಕಾರಣಕ್ಕೆ ಬಿರುಕಿನ ಕುರಿತು ತನಿಖೆಗೆ ನಿರಾಕರಿಸುತ್ತಿದ್ದಾರೆನ್ನುವುದು ತಿಳಿಯುತ್ತದೆ. ಕಾವೇರಿ ನದಿ ನೀರು ಕುಡಿಯುತ್ತಿರುವ ಬೆಂಗಳೂರಿನ ಜನರು, ಕ್ರಿಷಿಯಲ್ಲಿ ತೊಡಗಿರುವ ರೈತರು, ವಿದ್ಯಾರ್ಥಿ ಯುವಜನರು ಮುಂದೆ ಬಂದು ಈ ತನಿಖೆಗೆ ತೀವ್ರವಾಗಿ ಒತ್ತಾಯಿಸಲೇಬೇಕಿದೆ. ಈ ವಿಚಾರವು ವಿವಿಧ ರಾಜಕೀಯ ಪಕ್ಷಗಳ ನಾಯಕರ ಆರೋಪ -ಪ್ರತ್ಯಾರೋಪ, ನಿರಾಕರಣೆ, ಛಾಲೆಂಜ್ ಗಳಲ್ಲಿ ಮೂಲೆಗುಂಪಾಗಿ ಕಳೆದುಹೋಗಲು ಬಿಡಬಾರದು. ಇದು ಕೋಟ್ಯಾಂತರ ಕನ್ನಡಿಗರ ಅನ್ನ ನೀರಿನ ಪ್ರಶ್ನೆಯೂ ಆಗಿದೆ.
ಕೆಆರ್ಎಸ್ನಲ್ಲಿ ಬಿರುಕು
’ಗಣಿ ಮತ್ತು ಭೂವಿಜ್ಞಾನ ಇಲಾಖೆ ವರ್ಸಸ್ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ’ ಎನ್ನುವಂತಾಗಿರುವ ಈ ಕೆ.ಆರ್.ಎಸ್.ಬಿರುಕಿನ ವಿಚಾರ ಈಗ ವೈಜ್ಞಾನಿಕ ಅಧ್ಯಯನಕ್ಕೆ ನಿಲುಕದೆ ಗಣಿಮಾಲೀಕರ ಪರವಾಗಿರುವುದರಿಂದ ಕೆ.ಆರ್.ಎಸ್.ನಿಂದ ಕೇವಲ ಎಂಟು ಕಿ.ಲೋ ಮೀಟರ್ ದೂರದಲ್ಲಿರುವ ಬೇಬಿ ಬೆಟ್ಟದ ಮಫತ್ ಕಾವಲು ಗ್ರಾಮಗಳ ೩೫ಹಳ್ಳಿಗಳಲ್ಲಿ ನಡೆಯುತ್ತಿರುವ ೨೫೬ ಕಲ್ಲು ಗಣಿಗಾರಿಕೆಗಳಿಂದ, ಅಲ್ಲಿ ಬಳಸುತ್ತಿರುವ ಸ್ಫೋಟಕಗಳಿಂದ ಎಂದಾದರೂ ಕೆ.ಇರ್.ಎಸ್ ಡ್ಯಾಂಗೆ ಕಂಟಕವಿದ್ದೇ ಇದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಆದಾಯದ ಆಸೆಯ ಪ್ರಭಾವಾವಳಿಯಲ್ಲಿ ಮಿಂದೆದ್ದ ಹಿರಿಯ ಭೂ ವಿಜ್ಞಾನಿಯೊಬ್ಬರು ೨೦೧೯ ರಲ್ಲೇ ರಾಜ್ಯ ಮಾನವಹಕ್ಕು ಆಯೋಗಕ್ಕೆ ಒನ್ ಸೈಡೆಡ್ ಸ್ಟೋರಿ ಇರುವ ಸ್ವಘೋಷಿತ ಹೇಳಿಕೆಯನ್ನು ತಯಾರಿಸಿ, ವಸ್ತುಸ್ಥಿತಿಯನ್ನು ಮರೆಮಾಚಿ ಗಣಿಮಾಫಿಯಾಕ್ಕೆ ಅನುಕೂಲವಾಗುವಂತೆ ಮಾಡಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಕೆ.ಆರ್.ಎಸ್.ಡ್ಯಾಂ ಬಳೀಯೇ ಇರುವ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ೨೦೧೮ ಸೆಪ್ಟಂಬರ್ ೨೦ರಂದು ಬೇಬಿ ಬೆಟ್ಟದಲ್ಲಿ ಸಂಭವಿಸಿದ್ದ ಎರಡು ಸ್ಫೋಟಗಳಿಂದ ಉಂಟಾಗಿದೆ ಶಬ್ಧ ಅದರ ತರಂಗ ಪ್ರಮಾಣದ ಭೂಕಂಪನ ಗಳನ್ನು ಆದರಿಸಿ ಉಪಗ್ರಹ ಆಧಾರಿತ ಚಿತ್ರದ ಸಹಿತ ವರದಿ ತಯಾರಿಸಿ ಕೆ.ಆರ್.ಎಸ್.ಅಣೆಕಟ್ಟೆಯ ಸುರಕ್ಷತೆಯ ದೃಷ್ಠಿಯಿಂದ ಜಲಾಶಯದ ಸುತ್ತಲಿನ ೧೫ ರಿಂದ ೨೦ ಕಿ.ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸುವಂತೆ ಕೋರಿ ಜಿಲ್ಲಾಧಿಕಾರಿಗಳಿಗೆ ಮತ್ತು ಮಾನವ ಹಕ್ಕು ಆಯೋಗಕ್ಕೆ ನೀಡಿದ್ದಾರೆ. ಈ ವರದಿಯನ್ನು ಮರೆಮಾಚಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಹಳೆಯ ಹತ್ತು ವರ್ಷಗಳಲಿದ್ದ ಕಲ್ಲುಕ್ವಾರಿಧಣಿಗಳ ಪರವಾದ ಹಿಂದಿನ ವರದಿಗಳನ್ನು ಆಧರಿಸಿ ೨೦೦೯ರಂದು ಕೆ.ಜಿ.ಎಫ್. ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಕ್ಸ್ ಎಂಬ ಖಾಸಗಿ ಸಂಸ್ಥೆ ನೀಡಿರುವ ವರದಿಯನ್ನು ಉಲ್ಲೇಖಿಸಿ ಗಣಿ ಉದ್ಯಮಿಗಳ ಪರವಾಗಿಯೇ ಸರಕಾರಕ್ಕೆ ಪತ್ರ ಬರೆದಿರುವುದು, ಕಲ್ಲು ಗಣಿ ಗುತ್ತಿಗೆದಾರರಿಗೆ ನಿರಪೇಕ್ಷಣಾ ಪಾತ್ರಗಳನ್ನು ನೀಡಿ ಕೈ ತೊಳೆದುಕೊಂಡು ಕುಳಿತಿರುವುದು ಅನುಮಾನಕ್ಕೆ ಕಾರಣವಾಗಿದೆ.
ಬೇಬಿ ಬೆಟ್ಟವೆಂಬ ಕಲ್ಲುಗಣಿಗಳ ಕಾರಸ್ಥಾನ..!
ಕೆ.ಆರ್.ಎಸ್.ಡ್ಯಾಂನಿಂದ ಕೇವಲ ಎಂಟು ಕಿಲೋಮೀಟರ್ ದೂರದಲ್ಲಿರುವ ಪಾಂಡವಪುರ ಬೇಬಿ ಬೆಟ್ಟದ ಕಾವಲು ಗ್ರಾಮದ ಅಮೃತ್ ಮಹಲ್ ಸುರ್ವೆ ನಂಬರ್ ೧ ರ ಪ್ರದೇಶದ ಕಲ್ಲು ಗಣಿಗಳಿಂದ ಆವೃತವಾಗಿದೆ, ಇಲ್ಲಿ ೩೦-೩೫ ವರ್ಷಗಳಿಂದಲೂ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಬೇಬಿ ಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಬನ್ನಂಗಾಡಿ, ಬಸ್ತಿಹಳ್ಳಿ, ಹಿರೇಮರಳಿ, ಚಿಕ್ಕ ಮರಳಿ, ಕನ್ನರೂಡಿ, ಕೆ.ಮಂಚನಹಳ್ಳಿ, ಬಿಂಡಳ್ಳಿ, ಶಂಬೂನ ಹಳ್ಳಿ, ಹಾರೋಹಳ್ಳಿ,ಗುಮ್ಮನ ಹಳ್ಳಿ, ಕುಂಚನಹಳ್ಳಿ, ಹಳೇಬೀಡು, ವೀರಶೆಟ್ಟಿಪುರ,ಹೊಹೋಗಾನಹಳ್ಳಿ,ಶಿಂಗಪುರ, ಚಿಕ್ಕ ಬ್ಯಾಡರಳ್ಳಿ, ಮೊಳೆಸಂದ್ರ, ವಡ್ಡರಳ್ಳಿ, ಢಿಂಕಾ, ಬಿಜ್ಜನಹಳ್ಳಿ, ನುಗ್ಗೇಹಳ್ಳಿ,ಬಳಘಟ್ಟ, ಭೋಳೇನಹಳ್ಳಿ, ವದೇಸಮುದ್ರ,ಕೆಮಲಳ್ಳಿ, ಚಿಕ್ಕಯಾರಳ್ಳಿ,ವಳಲೇಕಟ್ಟೇ ಕೊಪ್ಪಲು,ಗುಜಗೋನಹಳ್ಳಿ,ನರಹಳ್ಳಿ,ಕಾಮನಾಯಕನಹಳ್ಳಿ,ಅಮಾನಹಳ್ಳಿ,ಬೇಬಿ ಮತ್ತು ಬೇಬಿ ಬೆಟ್ಟದ ಕಾವಲು ಪ್ರದೇಶದಲ್ಲಿ ಒಟ್ಟು ೨೫೬ ಕಲ್ಲು ಕ್ವಾರಿ ಗಣಿಗುತ್ತಿಗೆಗೆ ಕಂದಾಯ ಇಲಾಖೆಯು ೧೯೮೫,ರಿಂದಲೂ ನಿರಪೇಕ್ಷಣಾ ಪತ್ರ ನೀಡಿ ಗಣಿಗಾರಿಕೆಗೆ ಪ್ರೋತ್ಸಾಹಿಸುತ್ತಿದೆ. ಬನ್ನಂಗಾಡಿ ಎಂಬ ಊರಿನಲ್ಲಿ ಬೆಲೆಬಾಳುವ ಗ್ರಾನಿಟಿಕ್ ನೈಸ್ ಶಿಲೆಯು ಭೂಮಿಯಲ್ಲಿ ಉತ್ತರದಕ್ಷಿಣವಾಗಿ, ಹಬ್ಬಿರುವುದರಿಂದ ಕಲ್ಲು ಕಳ್ಳರಿಗೆ ಹಬ್ಬವಾಗಿದೆ. ಗಣಿ ಕಂಪನಿಗಳ ಕಾರಸ್ಥಾನ ವಾಗಿರುವ ಈ ಐತಿಹಾಸಿಕ ಬೇಬಿ ಬೆಟ್ಟದಲ್ಲಿ ಸಿದ್ದಲಿಂಗೇಶ್ವರ, ಮಹದೇಶ್ವರ ದೇವಾಲಯಗಳಿದ್ದು ಈಗಲೂ ಮೈಸೂರು ಅರಮನೆಯ ಆಡಳಿತ ಮಂಡಳಯ ಸುಪರ್ದಿಯಲ್ಲಿಯೇ ಇವೆ. ನೂರಾರು ಅಕ್ರಮ ಗಣಿಗಳ ತಾಣವಾಗಿರುವ ಈ ಬೇಬಿ ಬೆಟ್ಟದ ಅಮೃತ್ ಮಹಲ್ ಕಾವಲು ಪ್ರದೇಶದಲ್ಲಿ ಅತ್ಯಾಧುನಿಕ ಮೆಗ್ಗಾನ್ ಸ್ಫೋಟಕದ ಮೂಲಕ ಕಲ್ಲುಗಳನ್ನು ಸ್ಫೋಟಿಸುತ್ತಿರುವುದರಿಂದ ಬೆಟ್ಟದ ಸುತ್ತಮುತ್ತಲ ಹನ್ನೊಂದು ಕಿಲೋಮೀಟರ್ ವ್ಯಾಪ್ತಿಯ ೪೦ಹಳ್ಳಿಗಳ ಜನರಿಗೆ ನಿತ್ಯ ರಾತ್ರಿ ಸ್ಫೋಟದ ಸದ್ದಿನಿಂದ ನಿದ್ರೆ ಸಮಸ್ಯೆಯ ಜೊತೆಗೆ ಅನೇಕ ಆರೋಗ್ಯದ ತೊಂದರೆಗಳು ಎದುರಾಗಿವೆ.
ಸ್ಪೋಟಕದ ವಿಷಗಾಳಿ ದೂಳಿನ ಕಣದಿಂದ ಸಾವಿರಾರು ಎಕರೆ ಸುತ್ತಲಿನ ಕ್ರಷಿಭೂಮಿ ಪಾಳು ಬಿದ್ದಿವೆ. ಜಾನುವಾರು ತಿನ್ನುವ ಮೇವು ವಿಷಯುಕ್ತವಾಗಿದೆ. ತೆಂಗಿನ ಮರಗಳ ಸುಳಿ ಒಣಗಿ ಬರಡಾಗಿವೆ! ಸುತ್ತ ಮುತ್ತಲಿನ ಹಳ್ಳಿಗಳ ಮನೆಗಳು ಬಿರುಕು ಬಿಟ್ಟು ಜನ ಮಲಗುವಾಗ ಪ್ರಾಣ ಕೈಲಿಡಿದು ಮಲಗೇಳುತ್ತಾ ಕಂಗಾಲಾಗಿದ್ದಾರೆ. ಎದೆನಡುಗಿಸುವ ಸ್ಪೋಟದ ಶಬ್ಧಕ್ಕೆ ಹೆದರಿ ಗರ್ಭಿಣಿಯರು, ಬಾಣಂತಿಯರು ಊರು ಬಿಟ್ಟಿದ್ದಾರೆ. ಹೃದಯ ಕಾಯಿಲೆಯವರಿಗೆ ರಾತ್ರಿಯ ಕಲ್ಲುಗಣಿಗಾರಿಕೆಯ ಸ್ಫೋಟದ ಶಬ್ಧದಿಂದ ಹೃದಯವೆ ಬಾಯಿಗೆ ಬಂದಂತೆ ದಿಗಿಲಾಗುತ್ತದೆ. ತಲೆಮೇಲೆ ಕಲ್ಲು ಬೀಳುವ ಭಯದಿಂದ ಬೇಬಿ ಬೆಟ್ಟದ ತಪ್ಪಲಿನಲ್ಲಿದ್ದ ಶಾಲೆಯನ್ನು ಮುಚ್ಚಲಾಗಿದೆ! ಅತ್ಯಾಧುನಿಕ ಗಣಿಯಂತ್ರದ ಆಸ್ಫೋಟಕ್ಕೆ ಆಲ್ಲೇ ಇರುವ ರಾಮಯೋಗೇಶ್ವರ ಮಠದ ಚಾವಣಿ ಹಾರಿಹೋಗಿದೆ. ಕಿಟಕಿಗಳು ಮುರಿದು ಪುಡಿ ಪುಡಿಯಾಗಿವೆ. ಚಾರಿತ್ರಿಕ ಐತಿಹಾಸಿಕ ಹಿಂದೂ ದೇಗುಲಗಳ ಬೆಟ್ಟ ಕರಗಿ ಮಾಯವಾಗಿ ದೇವಾಲಯಗಳನ್ನು ಒಡೆದುರಿಳಿಸಲು ಕಾಯುತ್ತಿರುವ ಗಣಿ ಮಾಫಿಯಾದ ವಿರುದ್ಧ ಯಾವ ರಾಮ ಭಕ್ತರೂ, ಹಿಂದೂ ಧರ್ಮಪ್ರೇಮಿಗಳೂ ಇದುವರೆಗೂ ಸೊಲ್ಲೆತ್ತಿಲ್ಲ. ತಮಾಸೆಯೆಂದರೆ ಇಷ್ಟೆಲ್ಲಾ ರಾದ್ಧಾಂತಕ್ಕೆ ಜನರ ನೋವಿಗೆ ಕಾರಣವಾಗಿರುವ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದು ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ !! ಯಾವ ಪರಿಸರ ಪ್ರೇಮಿಯೂ ಬೆಟ್ಟಕಾಡು ಉಳಿಸುವ ಕೂಗುಹಾಕಿ ಮುಂದೆಬಂದ ಉದಾಹರಣೆಯಿಲ್ಲ!
[
ಜನಪ್ರತಿನಿಧಿಗಳೇ ಗಣಿ ಮಾಲೀಕರು!!
ಈ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ಆರ್.ಟಿ.ಐ.ಕಾರ್ಯಕರ್ತ ರವೀಂದ್ರ, ರಾಮಯೋಗೇಶ್ವರ ಮಠದ ಸದಾಶಿವ ಸ್ವಾಮೀಜಿಯಂತವರು ಒಬ್ಬಂಟಿಗರಾಗಿ ಧ್ವನಿ ಎತ್ತುತ್ತಿರುವುದರಿಂದ ದಶಕದ ಗಣಿಗಾರಿಕೆ ವಿರುದ್ಧದ ಹೋರಾಟಕ್ಕೆ ಬೆಲೆಯೇ ಇಲಾಲದಂತಾಗಿದೆ. ಆಳುವ ಪಕ್ಷಗಳ ಪ್ರತಿ ಮುಖ್ಯಮಂತ್ರಿಯ ಮೂಗಿನ ಕೆಳಗೇ ಈ ಕಲ್ಲು ಕ್ವಾರಿಯ ಅಕ್ರಮ ಗಣಿಗಾರಿಕೆಯ ಮಾಫಿಯಾ ಲೂಟಿಗಳು ನಡೆಯುತ್ತಿರುವುದರಿಂದ ಇಲ್ಲಿರುವ ಕಲ್ಲುಗಣಿಗಳ ಮಾಲೀಕರು ಸ್ಥಳೀಯ ಎಂಪಿ.ಎಮ್ಮೆಲ್ಲೇ.ಕಾರ್ಫೂರೇಟರ್ ಗಳೇ ಆಗಿರುವುದರಿಂದ ಅರಣ್ಯ ಇಲಾಖೆಯ ಕೂಗು ಅರಣ್ಯ ರೋಧನವಾಗಿದೆ.
ಇಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ೨೦೧೭ರಲ್ಲೇ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿವೆ. ಇಲ್ಲಿ ನಡೆಯುತ್ತಿರುವ ೧೮ ಕಂಪನಿಗಳ ವಿರುದ್ಧ ೯೦ಲಕ್ಷ ದಂಡ ವಿದಿಸಿದ್ದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮಾಜಿ ಸಂಸದ ಪುಟ್ಟ ರಾಜು ಪಾಲುದಾರರಾಗಿದ್ದ ಎಸ್.ಟಿ.ಜಿ.ಅಸೋಸಿಯೇಟ್ಸ್ ಗಣಿ ಕಂಪನಿಗೂ ೪೧ಲಕ್ಷ ದಂಡ ವಿಧಿಸಿ ಮೀಸೆತೀರುವಿತ್ತು! ಅಂದು ಪೊಲೀಸರ ನೆರವಿನೊಂದಿಗೆ ಅಕ್ರಮ ಗಣಿಗಳಿಗೆ ಬೀಗವನ್ನು ಜಡಿಯಲಾಗಿತ್ತು. ಆದರೆ ಇವೆಲ್ಲಕ್ಕೂ ಕ್ಯಾರೇ ಎನ್ನದ ಧನದಾಹಿ ಗಣಿ ಮಾಫಿಯಾ ಕಲ್ಲು ಕಳ್ಳರು ಕೆಲವೇ ದಿನಗಳಲ್ಲಿ ತಾವೇ ಬೀಗ ಒಡೆದು ಮತ್ತೇ ಕಲ್ಲುಕ್ವಾರಿ ಕ್ರಷರ್ ಅಂಗಡಿ ತೆರೆದು ಅಕ್ರಮವಾಗಿ ಎಂದಿಗಿಂತಲೂ ಹತ್ತುಪಟ್ಟು ಹೆಚ್ಚಾಗಿಯೇ ಗಣಿಗಾರಿಕೆ ನಡೆಸುತ್ತಿದ್ದಾರೆ. ಕೇಳಲು ಹೋದ ಅರಣ್ಯ ಇಲಾಖೆ ಸಿಬ್ಬಂದಿಗೆ ಜಾಡಿಸಿ ಹಿಗ್ಗಾಮುಗ್ಗಾ ಥಳಿಸಿ ಒಡೆದು ಓಡಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸದ ಪೊಲೀಸರು ೪೦೦ ಜನರ ಮೇಲೆ ದೂರು ದಾಖಲಿಸಿ ತಿಪ್ಪೆ ಸಾರಿಸಿ ಗಣಿ ಧಣಿಗಳೊಕದಿಗೆ ಕೈಮಿಲಾಯಿಸಿ ಬೇಬಿಬೆಟ್ಟವನ್ನು ಮಿನಿ ಬಳ್ಳಾರಿಮಾಡಲು ಪಣ ತೊಟ್ಟಿದ್ದಾರೆ.
ಹೊನಗಾನಹಳ್ಳಿ ಗ್ರಾಮ ಪಂಚಾಯಿತಿ ಒಂದೇ ೩೦ ಕೋಟಿ ಗಣಿ ರಾಜಧನ ಕಟ್ಟದೇ ಗಣಿ ಭೂ ವಿಜ್ಞಾನ ಇಲಾಖೆಗೆ ಕೈ ಎತ್ತಿದೆ ಎಂದರೇ ಬೇಬಿ ಬೆಟ್ಟದಲ್ಲಿರುವ ೨೫೬ಕ್ಕೂ ಹೆಚ್ಚು ಅಕ್ರಮ ಗಣಿಗಳಿಂದ ದಿನ ನಿತ್ಯ ಅದೆಷ್ಟು ಕೋಟಿ ಸರ್ಕಾರಕ್ಕೆ ನಷ್ಟ ಉಂಟಾಗುತ್ತಿದೆಯೋ ನೀವೇ ಯೋಚಿಸಿ. ನೇರವಾಗಿ ಈ ಅಕ್ರಮ ಗಣಿಗಾರಿಕೆ ವಿರುದ್ಧ ಮುಖ್ಯಮಂತ್ರಿಯೇ ಶಾಮೀಲಾಗಿದ್ದಾರೆಂದು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ. ಇಲ್ಲಿ ನಡೆಯುತ್ತಿರುವ ಯತೀನ್ ಸ್ಟೋನ್ ಕ್ರಷರ್ ಮಾಲೀಕರಾದ ಬಿ.ಎಂ.ನಟರಾಜು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ದೂರದ ಸಂಬಂದಿಯಂತೇ! ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಕೊನೆಯುಂಟೇ? ಅಲ್ಲಿ ನಡೆಯುವ ಅಕ್ರಮ ಗಣಿ ಚಟುವಟಿಕೆಗಳನ್ನು ವರದಿ ಮಾಡಲು ತೆರಳಿದ್ದ ಎಷ್ಟೋ ಸುದ್ದಿ ಮಾಧ್ಯಮದ ವರದಿಗಾರರು ಒಂದು ಸಣ್ಣ ಛಾಯ ಚಿತ್ರವನ್ನು ತೆಗೆಯಲಾಗದೇ ಅಲ್ಲಿರುವ ಕಲ್ಲುಕ್ವಾರಿಯ ಗೂಂಡಾಗಳಿಂದ ಒದೆತಿಂದು ವಾಪಸ್ಸಾಗಿದ್ದಾರೆ! ಅದೊಂದು ನಿಷೇಧಿತ ನಿರ್ಜನ ತಾಣದಂತೆ ನಿಗೂಢವಾಗಿದೆ. ಅಲ್ಲಿ ದಿನ ನಿತ್ಯ ಸ್ಫೋಟದ ಅಡ್ಡಪರಿಣಾಮಗಳಿಂದ ಯಾವ ಕೂಲಿಕಾರ್ಮಿಕರು ಕೈ ಕಾಲು ಕಳೆದುಕೊಂಡು ಸಾಯುತ್ತಿದ್ದಾರೋ ಬಲ್ಲವರ್ಯಾರು? ಇಂತ ಕ್ರೂರ ಕಲ್ಲು ಕ್ವಾರಿ ಗಣಿ ಮಾಫಿಯಾ ಗಳ ಕೋಟೆಯನ್ನು ದಾಟಿಸಿ ಅಲ್ಲಿರುವ ಸತ್ಯವನು ಹೊರಗೆ ತರುವುದು ಹೇಗೇ? ಕನ್ನಂಬಾಡಿ ಕಟ್ಟೆಯನು ಕಾಪಾಡಲು ಕನ್ನಡಿಗರಾದ ನಾವೆಲ್ಲರೂ ಹೋರಾಟಧ ಕಂಕಣಕಟ್ಟಿಕೊಂಡು ಬೀದಿಗಿಳಿಯಬೇಕಿದೆ.
ಶಿವಮೊಗ್ಗದ ಹುಣಸೋಡು ಬಳಿ ಜನವರಿಯಲ್ಲಿ ನಡೆದ ಭಯಾನಕ ಗಣಿಸ್ಫೋಟದ ಸಾವು ನೋವಿನ ಬೀಕರ ಘಟನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರು ಕೂಡ ಮಂಡ್ಯದ ಪಾಂಡವಪುರದ ಬೇಬಿ ಬೆಟ್ಟದ ಅಕ್ರಮ ಗಣಿಗಾರಿಕೆ ಬಗ್ಗೆ ಗಂಭೀರವಾಗಿಯೇ ಮಾತನಾಡಿದ್ದರು ಬೇಬಿ ಬೆಟ್ಟದ ಅಕ್ರಮ ಗಣಿಗಾರಿಕೆ ನಿಲ್ಲಿಸದಿದ್ದರೆ ಕೆ.ಆರ್.ಎಸ್. ಡ್ಯಾಂಗೆ ದಕ್ಕೆಯಾಗುತ್ತಧೆಂದು ಎಚ್ಚರಿಸಿದ್ದರು. ಆಗ ಮಂಡ್ಯ ಜಿಲ್ಲಾಡಳಿತ ಜನರ ಕಣ್ಣೊರೆಸಲು ಬೇಬಿ ಬೆಟ್ಟದಲ್ಲಿ ರಾತ್ರಿವೇಳೆ ನಡೆಯುತ್ತಿದ್ದ ಬಂಡೆ ಬ್ಲಾಸ್ಟ್ ಜೊತೆಗೆ ಎಲ್ಲಾ ಗಣಿಗಾರಿಕೆ ಗಳನ್ನೂ ತಾತ್ಕಾಲಿಕ ವಾಗಿ ೨೦ದಿನಗಳ ಮಟ್ಟಿಗೆ ನಿಲ್ಲಿಸಿದ್ದರು. ಬೇಬಿ ಬೆಟ್ಟದಲ್ಲಿ ಸೆಕ್ಷೆನ್ ೧೪೪ ಜಾರಿಮಾಡಿ ಕ್ವಾರಿಯ ರಸ್ತೆಯಲ್ಲಿ ಜೆಸಿಬಿ ಯಂತ್ರಗಳ ಮೂಲಕ ದೊಡ್ಡ ಹಳ್ಳಮಾಡಿ ರಸ್ತೆ ಬಂದ್ ಮಾಡಿದ್ದರು. ಡ್ರೋಣ್ ಕ್ಯಾಮೆರಾ ಮೂಲಕ ಬೇಬಿ ಬೆಟ್ಟದಲ್ಲಿನ ಗಣಿ ಚಟುವಟಿಕೆ ಮೇಲೆ ನಿಗಾ ಇಡಲಾಗಿತ್ತು! ಕೆ.ಆರ್. ಎಸ್ ಪೊಲೀಸರು ಒಂದು ಲಾರಿ ಲೋಡ್ ಜಿಲೆಟಿನ್ ಕಡ್ಡಿ ವಶಫಡಿಸಿಕೊಂಡಿದ್ದರು! ಈಗ ಇದೇ ಯಡಿಯೂರಪ್ಪ ಸಂಸದೆ ಸುಮಲತಾ ಅಂಬರೀಶ್ ಹೇಳಿಕೆಗೆ ಯಾವ ಪ್ರತಿಕ್ರಿಯೆಯನ್ನೂ ನೀಡದೇ ಸುಮ್ಮನಾಗಿದ್ದಾರೆ. ರಾಜ್ಯದ ಹಲವಾರು ಜಿಲ್ಲೆಗಳ ಜೀವನಾಡಿಯಾಗಿರುವ ಕೆ.ಆರ್.ಎಸ್ ಡ್ಯಾಂ ಬಿರುಕಿನ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ತುಟಿ ಬಿಚ್ಚಿದೆ ಮೌನವಾಗಿರುವುದು ವಿಚಿತ್ರವಾಗಿದೆ.