ಕೃಷಿ,ಮೂಲಸೌಕರ್ಯ, ಉದ್ಯೋಗ ಸೃಷ್ಟಿಯ ಮಹತ್ವದ ಜಬೆಟ್ ಮಂಡಿಸಿ ಸಿದ್ದರಾಮಯ್ಯ

Share

ಕೃಷಿ,ಮೂಲಸೌಕರ್ಯ, ಉದ್ಯೋಗ ಸೃಷ್ಟಿಯ ಮಹತ್ವದ ಜಬೆಟ್ ಮಂಡಿಸಿ ಸಿದ್ದರಾಮಯ್ಯ

by-ಕೆಂಧೂಳಿ

ಬೆಂಗಳೂರು, ಮಾ,09-ಮುಖ್ಯಮಂತ್ರಿ ಸಿದ್ದರಾಮಯ್ಯ  ಶುಕ್ರವಾರ ಬಜೆಟ್ ಮಂಡಿಸುವ ಮೂಲಕ ದಾಖಲೆ ಬರೆದಿದ್ದಾರೆ.₹4.09 ಲಕ್ಷ ಕೋಟಿ ಮೌಲ್ಯದ ಬಜೆಟ್ ಮಂಡಿಸಿದ್ದು ಇದು ಬಜೆಟ್ ಅಭಿವೃದ್ಧಿ, ಕಲ್ಯಾಣ, ಮೂಲಸೌಕರ್ಯ, ಕೃಷಿ ಮತ್ತು ಉದ್ಯೋಗವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ. 3 ಗಂಟೆ 30 ನಿಮಿಷಗಳ ಕಾಲ ಸುದೀರ್ಘ ಬಜೆಟ್ ಮಂಡನೆ ಮಾಡಲಾಗಿದೆ. ಇದೊಂದು ದಾಖಲೆಯ ಬಜೆಟ್‌ ಮಂಡನೆಯಾಗಿದೆ. ಈ ಬಜೆಟ್ ರಾಜ್ಯದ ಆರ್ಥಿಕ ಪ್ರಗತಿಗೆ ಮಹತ್ವದ ಹೆಜ್ಜೆಯಾಗಿ ಹೊರ ಹೊಮ್ಮಿದೆ. ಈ ₹4.09 ಲಕ್ಷ ಕೋಟಿ ಬಜೆಟ್‌ನಲ್ಲಿ ಆದಾಯ ವೆಚ್ಚ ₹3.11 ಲಕ್ಷ ಕೋಟಿ, ಬಂಡವಾಳ ವೆಚ್ಚ ₹71,336 ಕೋಟಿ, ಮತ್ತು ಸಾಲ ತೀರಿಕೆ ₹26,474 ಕೋಟಿ ರೂಪಾಯಿಗಳನ್ನು ಒಳಗೊಂಡಿದೆ. ಅಲ್ಲದೇ ರಾಜ್ಯ ಒಟ್ಟು ಉತ್ಪನ್ನದ ಆದಾಯ ಕೊರತೆ ₹19,262 ಕೋಟಿಯಾಗಿದ್ದರೆ, ಆರ್ಥಿಕ ಕೊರತೆ ₹90,428 ಕೋಟಿ ಆಗಿದೆ.

ಈ ಬಾರಿ ದಾಖಲೆಯ ಬಜೆಟ್ ಮಂಡನೆ ಮಾಡಿದ ಸಿಎಂ ಸಿದ್ದರಾಮಯ್ಯ ಹಲವು ಅಭಿವೃದ್ಧಿ ಕೆಲಸಗಳಿಗೆ ಅನುದಾನ ಘೋಷಿಸಿದ್ದಾರೆ. ಅದರಲ್ಲೂ ರಾಜಧಾನಿ ಬೆಂಗಳೂರು ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದಾರೆ. ಬೆಂಗಳೂರು ಅಂದಮೇಲೆ ದೊಡ್ಡ ತಲೆ ನೋವೆಂದರೆ ಟ್ರಾಫಿಕ್‌ ಕಿರಿಕಿರಿ. ಇದನ್ನು ನಿಯಂತ್ರಿಸಲು ಡಬಲ್‌ ಡೆಕ್ಕರ್‌ ಫ್ಲೈಓವರ್‌ ನಿರ್ಮಾಣದ ಯೋಜನೆ ಘೋಷಿಸಲಾಗಿದೆ

ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿ:
ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ 7 ಸಾವಿರ ಕೋಟಿ ಅನುದಾನ ಘೋಷಣೆಯಾಗಿದೆ. ಟ್ರಾಫಿಕ್ ಸಮಸ್ಯೆ ತಡೆಗಟ್ಟಲು ಹೊಸ ಡಬಲ್ ಡೆಕ್ಕರ್ ಫ್ಲೈಓವರ್‍‌ ನಿರ್ಮಾಣಕ್ಕೆ ಪ್ರಸ್ತಾವನೆ ನೀಡಲಾಗಿದೆ. ಈ ಯೋಜನೆ ನಗರದಲ್ಲಿ ವಾಹನ ಸಂಚಾರ ಸುಗಮಗೊಳಿಸಲು ಸಹಕಾರಿಯಾಗಲಿದೆ. ನಗರದಲ್ಲಿ ಹಸಿರು ಪ್ರದೇಶಗಳನ್ನು ಹೆಚ್ಚಿಸಲು ಮತ್ತು ಪರಿಸರ ಸಂರಕ್ಷಣೆಗೆ ವಿಶೇಷ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲು ಮೂರನೇ ಹಂತದ ಮೆಟ್ರೋ ಮತ್ತು ಬಸ್ ಸೇವೆಗಳ ವಿಸ್ತರಣೆಗೂ ಆದ್ಯತೆ ನೀಡಲಾಗಿದೆ. ಈ ಮೆಟ್ರೋ ದೇವನಹಳ್ಳಿವರೆಗೂ ಸಂಚರಿಸಲಿದೆ. ಬ್ರಾಂಡ್ ಬೆಂಗಳೂರು ಯೋಜನೆಯಡಿ 2024-25ನೇ ಸಾಲಿನಲ್ಲಿ ಅನುಮೋದನೆಗೊಂಡ 21 ಯೋಜನೆಗಳನ್ನು 1,800 ಕೋಟಿ ರೂ. ಮೊತ್ತವನ್ನು ನೀಡಲಾಗುತ್ತದೆ.

ಬೆಂಗಳೂರಿನ ಮೆಜೆಸ್ಟಿಕ್‌ ಯೋಜನೆ ನಿಲ್ದಾಣ ಉನ್ನತೀಕರಣಗೊಳಿಸಲು ಒತ್ತು ನೀಡಲಾಗಿದೆ. ಇದಕ್ಕಾಗಿ ಖಾಸಗಿ ಸಹಭಾಗಿತ್ವದಲ್ಲಿ, ಮೆಜೆಸ್ಟಿಕ್‌ ಬಸ್ ನಿಲ್ದಾಣದಲ್ಲಿ ಸಾರಿಗೆ ಹಬ್ ನಿರ್ಮಿಸಲು ಚಿಂತನೆ ನಡೆಸಲಾಗಿದೆ. ಈ ವರ್ಷದಲ್ಲಿ 42 ಸ್ವಯಂಚಾಲಿತ ಪರೀಕ್ಷಾ ಪಥಗಳ ನಿರ್ಮಾಣ ಪೂರ್ಣ ಮಾಡಲಾಗುತ್ತದೆ. ಈಗಾಗಲೇ 3 ಕಡೆಗಳಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಸ್ವಯಂಚಾಲಿತ ಪರೀಕ್ಷಾ ಪಥಗಳ ನಿರ್ಮಾಣ ಮಾಡಲಾಗಿದೆ. ಹಾಗೂ 5 ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ, ದಾಖಲೆಗಳನ್ನು ಡಿಜಿಟಲೀಕರಣ ಮಾಡಲು 25 ಕೋಟಿ ರೂ. ವೆಚ್ಚ ಮಾಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಬೆಂಗಳೂರು ಉಪನಗರ ರೈಲ್ವೆ ಯೋಜನೆಯನ್ನು ಅಭಿವೃದ್ಧಿಪಡಿಸಲು ಚಿಂತನೆ ನಡೆಸಲಾಗಿದೆ. ಇದರ ಅನುಸಾರ ಅಂದಾಜು, 15,767 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಯಡಿ 58 ರೈಲ್ವೇ ನಿಲ್ದಾಣಗಳು ಹಾಗೂ 148 ಕಿ.ಮೀ ಉದ್ದದ ರೈಲ್ವೇ ಜಾಲವನ್ನು ನಿರ್ಮಿಸಲಾಗುತ್ತದೆ. ಹಾಗೂ 4 ಕಾರಿಡಾರ್‍‌ಗಳನ್ನು ಒಳಗೊಂಡ, ಈ ಯೋಜನೆಯ ಎರಡು ಕಾರಿಡಾರ್‌ಗಳ ಕಾಮಗಾರಿಗಳು ಪ್ರಗತಿಯಲ್ಲಿದೆ.

ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಟಿಕೆಟ್‌ ₹200 ರೂ.ಗೆ ನಿಗದಿ:
ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ವೀಕ್ಷಣೆಗೆ ಏಕರೂಪದ ದರ ನಿಗದಿ ಮಾಡಲಾಗಿದ್ದು, ಟಿಕೆಟ್ ದರವನ್ನು ₹200 ರೂ.ಗೆ ನಿಗದಿಪಡಿಸಲಾಗಿದೆ. ಹಾಗೂ ಚಲನಚಿತ್ರ ಕ್ಷೇತ್ರದ ಅಭಿವೃದ್ಧಿಗೆ ಹೊಸ ಉತ್ಸಾಹ ನೀಡುವ ಉದ್ದೇಶದಿಂದ ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ ಚಲನಚಿತ್ರ ಅಕಾಡೆಮಿ ಸ್ಥಾಪನೆ ಮಾಡಲು ಯೋಜನೆ ಪ್ರಕಟಿಸಿದೆ.

ಗ್ಯಾರಂಟಿ ಯೋಜನೆಗಳಿಗೆ ಮತ್ತಷ್ಟು ಬಲ:
2025-26ನೇ ಸಾಲಿನ ಹಣಕಾಸು ವರ್ಷದಲ್ಲಿ ಗ್ಯಾರಂಟಿ ಯೋಜನೆಗಳಿಗೂ ಮತ್ತಷ್ಟು ಅನುದಾನ ಘೋಷಣೆ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳ ನಿರ್ವಹಣೆಗೆ 51,034 ಕೋಟಿ ರೂ. ಮೀಸಲಿಡಲಾಗಿದೆ. ಈ ಪೈಕಿ ಶಕ್ತಿ ಯೋಜನೆಗೆ ₹5,300 ಕೋಟಿ, ಗೃಹ ಜ್ಯೋತಿಗೆ ₹10,100 ಕೋಟಿ, , ಗೃಹಲಕ್ಷ್ಮೀ ಯೋಜನೆಗೆ 28 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ. ಹಾಗೂ ಮಹಿಳೆಯರಿಗೆ ಉತ್ತೇಜನ ನೀಡುವಂತಹ ಬಜೆಟ್ ನೀಡಲಾಗಿದ್ದು, ಅಕ್ಕ ಕೋ ಆಪರೇಟಿವ್ ಸೊಸೈಟಿಯನ್ನು ಸ್ಥಾಪನೆ ಮಾಡಲಾಗುತ್ತದೆ. ಗೃಹಲಕ್ಷ್ಮಿ ಯೋಜನೆ ಈ ಅಕ್ಕ ಕೋ ಆಪರೇಟಿವ್‌ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಹಾಗೂ ಗ್ರಾಮೀಣ ಮಟ್ಟದಲ್ಲಿ ಮಹಿಳೆಯರಿಗೆ ವೀಶೇಷ ಕಾರ್ಯಕ್ರಮವನ್ನು ನೀಡಲಾಗಿದೆ.

ಶಿಕ್ಷಣ ಮತ್ತು ಕಲ್ಯಾಣ:
ಶಿಕ್ಷಣ ಇಲಾಖೆಗೂ ಬಜೆಟ್‌ನಲ್ಲಿ ಮಹತ್ವದ ಅನುದಾನ ಘೋಷಣೆಯಾಗಿದೆ. ಶಿಕ್ಷಣ ಇಲಾಖೆಗಾಗಿ 45,286 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ಅಜೀಂ ಪ್ರೇಮ್‌ಜಿ ಫೌಂಡೇಶನ್ ಸಹಯೋಗದಲ್ಲಿ, ವಾರದಲ್ಲಿ ವಾರದಲ್ಲಿ 6 ದಿನ ಮೊಟ್ಟೆ ವಿತರಣೆ ಮಾಡಲು ₹1,500 ಕೋಟಿ ಅನುದಾನ ಘೋಷಿಸಲಾಗಿದೆ. ಬೆಂಗಳೂರು ನಗರ ವಿಶ್ವವಿದ್ಯಾಲಯ ಮರುನಾಮಕರಣ ಮಾಡಿ, ಡಾ. ಮನಮೋಹನ್ ಸಿಂಗ್ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲಾಗಿದೆ. ಹಾಗೂ ಅತಿಥಿ ಉಪನ್ಯಾಸಕರ ಗೌರವ ಧನವನ್ನು 2 ಸಾವಿರ ರೂ.ಗೆ ಹೆಚ್ಚಳ ಮಾಡಲಾಗಿದೆ.

ಅಲ್ಪಸಂಖ್ಯಾತರ ಕಲ್ಯಾಣ:
ಅಲ್ಪಸಂಖ್ಯಾತರ ಉತ್ತೇಜನಕ್ಕೂ ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಮಹತ್ವದ ಒತ್ತು ನೀಡಲಾಗಿದೆ. ಬೆಂಗಳೂರಿನಲ್ಲಿ ಹಜ್ ಭವನ ನಿರ್ಮಾಣಕ್ಕೆ ಅನುದಾನ ಘೋಷಿಸಲಾಗಿದೆ. 100 ಉರ್ದು ಶಾಲೆಗಳ ಉನ್ನತೀಕರಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಲಾಗಿದೆ. ವಕ್ಫ್ ಖಾಲಿ ನಿವಾಸಗಳಲ್ಲಿ 16 ಮಹಿಳಾ ಕಾಲೇಜುಗಳನ್ನು ಸ್ಥಾಪಿಸಲಾಗುವುದು. ಆರ್ಥಿಕವಾಗಿ ಹಿಂದುಳಿದ ಮುಸ್ಲಿಂ ಮಹಿಳೆಯ ವಿವಾಹಕ್ಕೆ 50 ಸಾವಿರ ರೂ. ನೀಡಲಾಗುವುದು. ಜೈನ, ಮುಸ್ಲಿಂ, ಸಿಕ್ ಧರ್ಮಗುರುಗಳಿಗೆ 6000 ಮಾಸಿನ ಧನ ನೀಡಲಾಗುವುದು.

ಪ್ರಾದೇಶಿಕ ಅಭಿವೃದ್ಧಿ:
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮದ ಅಡಿಯಲ್ಲಿ, ₹5,000 ಕೋಟಿ ಅನುದಾನ ಘೋಷಿಸಲಾಗಿದೆ. ಪರಿಸರಸ್ನೇಹಿ ಯೋಜನೆಗಳು, ಹಸಿರು ಆರ್ಥಿಕತೆ ಉತ್ತೇಜನಕ್ಕೆ, ಪಶ್ಚಿಮ ಘಟ್ಟ ಮತ್ತು ಮಲೆನಾಡು ಅಭಿವೃದ್ಧಿಗೆ ಒತ್ತು ಕೊಡಲಾಗಿದೆ. ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಡಿ ಕೃಷಿ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಘೋಷಿಸಲಾಗಿದೆ. ಪ್ರತಿ ಪ್ರಾದೇಶಿಕ ವಲಯದಲ್ಲಿ ಕೈಗಾರಿಕಾ ವಲಯ ವಿಸ್ತರಣೆ ಮಾಡುವ ಬಗ್ಗೆ ಅನುದಾನ ಘೋಷಿಸಲಾಗಿದೆ.

ಧಾರ್ಮಿಕ ದತ್ತಿ ಇಲಾಖೆಗೆ ಬೆಂಬಲ:
ಧಾರ್ಮಿಕ ದತ್ತಿ ಇಲಾಖೆಯ ಉತ್ತೇಜನಕ್ಕೂ ಅನುದಾನ ಘೋಷಿಸಲಾಗಿದೆ. ಇದರ ಅಡಿಯಲ್ಲಿ ಮುಜರಾಯಿ ಇಲಾಖೆಯಡಿ ಬರುವ ದೇವಸ್ಥಾನಗಳ ಅರ್ಚಕರಿಗೆ, ತಸ್ತೀಕ್ ಹೆಚ್ಚಳ ಮಾಡುವ ಬಗ್ಗೆ ತಿಳಿಸಲಾಗಿದೆ. ಅಂದ್ರೆ ತಸ್ತೀಕ್ ಮೊತ್ತವನ್ನು ₹60,000 ರಿಂದ ₹72,000ಕ್ಕೆ ಹೆಚ್ಚಿಸಲಾಗಿದೆ. : ದೇವಾಲಯಗಳ ಛತ್ರಗಳಲ್ಲಿ ರೂಮ್ ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸಲು ಕರ್ನಾಟಕ ದೇವಾಲಯ ವಸತಿ ಕೋಶ ಸ್ಥಾಪನೆ ಮಾಡುವ ಬಗ್ಗೆ ಘೋಷಿಸಲಾಗಿದೆ.

AI ತಂತ್ರಜ್ಞಾನಕ್ಕೆ ಒತ್ತು:
AI ಕ್ಷೇತ್ರದಲ್ಲಿ ರಾಜ್ಯವನ್ನು ಮುಂಚೂಣಿಗೆ ತರಲು ಸರ್ಕಾರ ಬದ್ಧ ಕರ್ನಾಟಕವನ್ನು ಕೃತಕ ಬುದ್ಧಿಮತ್ತೆ (AI) ಆಧಾರಿತ ಕೇತ್ರದಲ್ಲಿ ಪ್ರಗತಿ ಸಾಧಿಸಲು ಮುಂದಿನ ಐದು ವರ್ಷಗಳಲ್ಲಿ 50 ಕೋಟಿ ರೂ. ಹೂಡಿಕೆಯೊಂದಿಗೆ Centre for Applied Al for Tech Solutions (CATS) ಸ್ಥಾಪಿಸಲಾಗುತ್ತದೆ ಎಂದು ಬಜೆಟ್‌ನಲ್ಲಿ ಮಾಹಿತಿಯನ್ನು ತಿಳಿಸಲಾಗಿದೆ.

ರೇಷ್ಮೆ ಕ್ಷೇತ್ರಕ್ಕೆ ಹಲವು ಯೋಜನೆಗಳಿಗೆ ಅನುದಾನ ಮೀಸಲು:
ರೇಷ್ಮೆ ಅಭಿವೃದ್ಧಿ ಯೋಜನೆಗೆ 55 ಕೋಟಿ ರೂ. ಅನುದಾನ ನೀಡಲಾಗಿದೆ.ಮಧ್ಯಮವರ್ಗದ ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ, 120 ಕೊನೆಗಳ ಸ್ವಯಂಚಾಲಿತ ರೀಲಿಂಗ್‌ ಘಟಕಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಲಾಗುವುದು. ರಾಮನಗರ, ಶಿಡ್ಲಘಟ್ಟ ಹೈಟೆಕ್‌ ರೇಷ್ಮೆಗೂಡಿನ ಮಾರುಕಟ್ಟೆಯ ಎರಡನೇ ಹಂತದ ಕಾಮಗಾರಿ ಅನುಷ್ಠಾನಕ್ಕೆ 250 ಕೋಟಿ ರೂ. ಮೀಸಲು ಇಡಲಾಗುವುದು. ಟೂರಿಸಂ ವಲಯಕ್ಕೆ ಅಭಿವೃದ್ಧಿ 50 ಕೋಟಿ ರೂ. ಅನುದಾನ:

ರಾಜ್ಯದಲ್ಲಿ 10 ಜಿಲ್ಲೆಗಳ ಪ್ರವಾಸಿ ತಾಣಗಳ ಅಭಿವೃದ್ಧಿಗೆ 50 ಕೋಟಿ ರೂ. ಅನುದಾನವನ್ನು ಘೋಷಣೆ ಮಾಡಲಾಗಿದೆ. ಪ್ರವಾಸಿಗರ ಸಂಖ್ಯೆ 1,000 ಕ್ಕೆ ಹೆಚ್ಚಳ ಹಾಗೂ 24X7 ಪ್ರವಾಸಿ ಸಹಾಯವಾಣಿ ತೆರೆಯಲು ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಪ್ರವಾಸಿ ತಾಣಗಳ ಸಮಗ್ರ ಮಾಹಿತಿ ಸಂಗ್ರಹಿಸಲು ONE- TAC Digital Grid ಬಳಕೆ ಮಾಡಲಾಗುವುದು.

ಇನ್ನು ಈ ಬಜೆಟ್ ಮೂಲಕ 2025-26ರ ಸಾಲಿನಲ್ಲಿ 1,20,000 ಕೋಟಿ ರೂ. ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಫೆಬ್ರವರಿ ತಿಂಗಳ ವೃತ್ತಿ ತೆರಿಗೆ 200 ರೂ.ನಿಂದ 300 ರೂ.ಗೆ ಏರಿಕೆ ಮಾಡಲಾಗಿದೆ. ಇಡೀ ದೇಶದಲ್ಲಿ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ರಫ್ತಿನಲ್ಲಿ ದೇಶದಲ್ಲಿ ಕರ್ನಾಟಕ ರಾಜ್ಯ ನಂ. 1 ಸ್ಥಾನದಲ್ಲಿದೆ ಎಂದು ಸಿದ್ದರಾಮಯ್ಯ ಬಜೆಟ್‌ನಲ್ಲಿ ಹೇಳಿದ್ದಾರೆ. ಕರ್ನಾಟಕ ಶೇ.11.17ರಷ್ಟು ಬೆಳವಣಿಗೆ ಸಾಧಿಸಿದೆ. 4.4 ಬಿಲಿಯನ್ US ಡಾಲರ್ ವಿದೇಶಿ ಹೂಡಿಕೆ ಆಕರ್ಷಣೆ ಮಾಡಿ. 88,853 ಕೋಟಿ ಮಿಲಿಯನ್ US ಡಾಲರ್ ರಫ್ತು ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಘೋಷಣೆ ಮಾಡಿದೆ.

Girl in a jacket
error: Content is protected !!