ಕಾರ್ಮಿಕರ ಸಮಸ್ಯೆಗಳನ್ನು ಕಾರ್ಖಾನೆಯ ಮಟ್ಟದಲ್ಲೇ ಪರಿಹರಿಸಿ- ಸಂತೋಷ್ ಲಾಡ್

Share

ಬೆಂಗಳೂರು, ಮೇ 7– ಕಲಬುರಗಿ ಜಿಲ್ಲೆಯ ಮುಳಖೇಡದಲ್ಲಿರುವ ರಾಜಶ್ರೀ ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆಯ ನೌಕರರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು ವಿಕಾಸಸೌಧದಲ್ಲಿ ಇಂದು ಸಭೆ ನಡೆಸಿದರು.

ಸಭೆಯಲ್ಲಿ ಮಾತನಾಡಿದ ಸಚಿವರು, ಕಾರ್ಖಾನೆಯ ನೌಕರರ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಬೇಕು. ಬೆಂಗಳೂರಿನವರೆಗೂ ಸಮಸ್ಯೆಗಳನ್ನು ತರಬಾರದು. ಒಂದೇ ಕಡೆ ಕೆಲಸ ಮಾಡುವವರು ಒಂದು ಕುಟುಂಬದಂತೆ ಇರಬೇಕು ಎಂದು ಸಲಹೆ ನೀಡಿದರು.

ಮ್ಯಾನೇಜ್‌ಮೆಂಟ್‌ ಕಾರ್ಮಿಕರ ಸಮಸ್ಯೆಗಳ ಬಗ್ಗೆ ತಿಳಿಯದೇ ಇದ್ದರೆ ಕೇಳದೇ ಇದ್ದರೆ ಅವುಗಳು ಹೆಚ್ಚಾಗುತ್ತವೆ. ಸಮಸ್ಯೆಗಳನ್ನು ಅಲ್ಲಿಯೇ ಪರಿಹರಿಸಿಕೊಳ್ಳಬೇಕು. ನೌಕರರ ಸಮಸ್ಯೆಗಳನ್ನು ಮಾನವೀಯತೆಯಿಂದ ಬಗೆಹರಿಸಿಕೊಳ್ಳಬೇಕು. ಪ್ರೀತಿ ಮತ್ತು ಕಾಳಜಿಯಿಂದ ನೌಕರರನ್ನು ನೋಡಿ. ಆಗ ಅವರೂ ದಕ್ಷತೆಯಿಂದ, ಬದ್ಧತೆಯಿಂದ ಕೆಲಸ ಮಾಡುತ್ತಾರೆ ಎಂದು ಹೇಳಿದರು.

ಕಾರ್ಮಿಕರಿಲ್ಲರೆ ಕಾರ್ಖಾನೆ ಇಲ್ಲ. ಹಾಗೇಯೇ ಕಾರ್ಖಾನೆಗೆ ಕಾರ್ಮಿಕರೇ ಜೀವಾಳ. ಕಾರ್ಮಿಕರ ಸಮಸ್ಯೆ ಹೊತ್ತುಕೊಂಡು ಇಲ್ಲಿವರೆಗೆ ಬರುವುದಕ್ಕಿಂತ ಅಲ್ಲೇ ಪರಿಹರಿಸಿಕೊಳ್ಳಿ. ಆದ್ದರಿಂದ ಕಾರ್ಮಿಕರ ಬಗ್ಗೆ ಕಾಳಜಿ ತೋರಿ ಗೌರವ ಕೊಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ಇನ್ನು ಮುಂದೆ ಸಮಸ್ಯೆ ಹೊತ್ತುಕೊಂಡು ನನ್ನ ಬಳಿ ಬರಬೇಡಿ ಎಂದರು.

ಈ ವೇಳೆ ನೌಕರರು ತಮಗೆ ವೈದ್ಯಕೀಯ ಮತ್ತು ಇತರ ಸೌಲಭ್ಯಗಳನ್ನು ಒದಗಿಸುವಂತೆ ಸಚಿವರಲ್ಲಿ ಮನವಿ ಮಾಡಿದರು. ಇವುಗಳ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಲಾಡ್‌ ಅವರು ಭರವಸೆ ನೀಡಿದರು.

ಸಭೆಯಲ್ಲಿ ಕಾರ್ಮಿಕ ಆಯುಕ್ತರಾದ ಡಾ. ಗೋಪಾಲಕೃಷ್ಣ, ಅಪರ ಕಾರ್ಮಿಕ ಆಯುಕ್ತರಾದ ಡಾ. ಮಂಜುನಾಥ್, ಕಾರ್ಖಾನೆಗಳು ಮತ್ತು ಬಾಯ್ಲರ್ ಇಲಾಖೆಯ ನಿರ್ದೇಶಕ ಶ್ರೀನಿವಾಸ್, ಶ್ರೀ ರಾಥೋಡ್, ಉಪ ನಿರ್ದೇಶಕರಾದ ಶ್ರೀ ನಂಜಪ್ಪ, ಕೇಂದ್ರ ಕಾರ್ಮಿಕ ಇಲಾಖೆಯ ಉಪ ಆಯುಕ್ತರು ಮತ್ತು ಕೇಂದ್ರ ಕಾರ್ಮಿಕ ಇಲಾಖೆಯ ಸಹಾಯ ಕಾರ್ಮಿಕ ಆಯುಕ್ತರು, ರಾಜಶ್ರೀ ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆಯ ಮಾನವ ಸಂಪನ್ಮೂಲ ವಿಭಾಗದ ಮ್ಯಾನೇಜರ್ ನಾರಾಯಣ್, ಕಾರ್ಮಿಕ ಇಲಾಖೆಯ ಇತರ ಅಧಿಕಾರಿಗಳು, ಕಾರ್ಖಾನೆಯ ನೌಕರರು ಪಾಲ್ಗೊಂಡಿದ್ದರು.

Girl in a jacket
error: Content is protected !!