ಕಲ್ಯಾಣ ಕರ್ನಾಟಕ ಭಾಗದಲ್ಲಿ 14000 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ: ಸಿಎಂ

Share

ಕಲ್ಬುರ್ಗಿ, ಜ, 04 :ಕಲ್ಯಾಣ ಕರ್ನಾಟಕ ಭಾಗದಲ್ಲಿ 14000 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಕಲ್ಬುರ್ಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ 14000 ಹುದ್ದೆಗಳ ನೇಮಕಾತಿ ಆರ್ಥಿಕ ಅನುಮತಿ ನೀಡಲಾಗಿದೆ. ಶಿಕ್ಷಣ ಇಲಾಖೆಯಲ್ಲಿ 5000 ಹುದ್ದೆಗಳೂ ಸೇರಿದಂತೆ ವಿವಿಧ ಇಲಾಖೆಗಳಿಗೆ ಒಟ್ಟು 14000 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ತಿಳಿಸಿದರು.

ಕೆಕೆಆರ್ ಡಿಬಿ ಬೋರ್ಡ್ ರಚನೆಯಾಗದಿರುವ ಬಗ್ಗೆ ಪ್ರತಿಕ್ರಯಿಸಿ ಈ ವಾರದಲ್ಲಿ ಕೆಕೆಆರ್ ಡಿ ಬಿಗೆ ಪೂರ್ಣ ಪ್ರಮಾಣದ ಅಧಿಕಾರಿಗಳನ್ನು ನೀಡಲಾಗುವುದು. ಇನ್ನೆರಡು ದಿನಗಳಲ್ಲಿ ಕೆಕೆಆರ್ ಡಿಬಿ ಮಂಡಳಿಯ ರಚನೆ ಆಗಲಿದೆ. ಮಂಡಳಿಗೆ 3000 ಕೋಟಿ ರೂ.ಗಳ ಕ್ರಿಯಾಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಶೀಘ್ರದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಕೋವಿಡ್ ನ 1 ಹಾಗೂ 2 ನೇ ಅಲೆ ನಿರ್ವಹಣೆಯ ಅನುಭವ ಹೊಂದಿದ್ದು, ಆರೋಗ್ಯ ಮೂಲಸೌಕರ್ಯಗಳನ್ನು ವೃದ್ಧಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಬೆಡ್ಸ್, ಐಸಿಯು, ಆಕ್ಸಿಜನ್ ಬೆಡ್ಸ್ ಗಳನ್ನು ಹೆಚ್ಚಿಸಲಾಗಿದೆ. ಜಿಲ್ಲೆಗಳಿಂದ ಔಷಧಿಗಳ ಬೇಡಿಕೆಯನ್ನು ತರಿಸಿಕೊಳ್ಳಲಾಗಿದೆ. ಚಿಕಿತ್ಸಾ ಸೌಲಭ್ಯಗಳಲ್ಲಿ ಯಾವುದೇ ರೀತಿಯ ಕೊರತೆಯಾಗದಂತೆ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಶಾಲೆಗಳಿಗೆ ರಜೆ ಘೋಷಿಸುವ ಬಗ್ಗೆ ತಜ್ಞರ ಸಲಹೆಯ ಮೇರೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮಹಾರಾಷ್ಟ್ರ ಹಾಗೂ ಕೇರಳ ಜಿಲ್ಲೆಗಳ ಗಡಿ ಪ್ರದೇಶಗಳ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬುದಕ್ಕೆ ಪ್ರತಿಕ್ರಯಿಸಿ, ಗಡಿ ಪ್ರದೇಶಗಳು ವ್ಯಾಪಕವಾಗಿದೆ. ಪ್ರಮುಖ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆಗಳು ಆಗುತ್ತಿದೆ. ಗಡಿ ಸಂಪರ್ಕವಿರುವ ಹಳ್ಳಿಗಳ ಮಟ್ಟದಲ್ಲಿ ತಪಾಸಣೆ ನಡೆಸಲು ಸಿಬ್ಮಂದಿ ನಿಯೋಜಿಸಿ ಚೆಕ್ ಪೋಸ್ಟ್ ಮಾಡುವ ಜೊತೆಗೆ ಆಯಾ ವ್ಯಾಪ್ತಿಯ ಪೊಲೀಸ್ ಸ್ಟೇಷನ್ ಗಳಿಗೆ ಈ ಹೊಣೆಗಾರಿಕೆಯನ್ನು ವಹಿಸಲಾಗುವುದು ಎಂದರು.

ಆರ್ಥಿಕ ಚಟುವಟಿಕೆಗಳ ಜೊತೆಗೆ ಸುರಕ್ಷತಾ ಕ್ರಮಗಳ ಬಗ್ಗೆ ಚಿಂತನೆ:

ಲಾಕ್ ಡೌನ್, ಸೆಮಿ ಲಾಕ್ ಡೌನ್, ವೀಕೆಂಡ್ ಲಾಕ್ ಡೌನ್ ಹೇರುವ ಸಾಧ್ಯತೆಗಳ ಬಗ್ಗೆ ಪ್ರತಿಕ್ರಿಯೆ ನೀಡಿ, ಕೋವಿಡ್ ನ ಸ್ಥಿತಿಗತಿ, ಮುಂದಿನ ದಿನಗಳಲ್ಲಿ ಆಗಬಹುದಾದ ಬೆಳವಣಿಗೆಗ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಗಲಾಗುವುದು. ಕೋವಿಡ್ ನ ಎರಡೂ ಅಲೆಗಳ ಸಂದರ್ಭದಲ್ಲಿ ಆರ್ಥಿಕ ಹಿಂಜರಿಕೆ ಉಂಟಾಗಿತ್ತು, ಈಗ ಆರ್ಥಿಕ ಪರಿಸ್ಥಿತಿಇ ಸುಧಾರಿಸುತ್ತಿದೆ. ಆದ್ದರಿಂದ ಆರ್ಥಿಕ ಚಟುವಟಿಕೆಗಳಿಗೂ ತೊಂದರೆಯಾಗದಂತೆ ನೋಡಿಕೊಳ್ಳುವ ಜೊತೆಗೆ ಸುರಕ್ಷತಾ ಕ್ರಮಗಳ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದರು.

*ಜನರ ಸಹಕಾರ ಬಹಳ ಮುಖ್ಯ:*
ಕೋವಿಡ್ ನಿಯಂತ್ರಣದಲ್ಲಿ ಜನರ ಸಹಕಾರ ಬಹಳ ಮುಖ್ಯ. ರಾಜ್ಯ ಸರ್ಕಾರದ ನಿಯಂತ್ರಣ ಕ್ರಮಗಳು ಹಾಗೂ ಮಾರ್ಗಸೂಚಿಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಬೇಕೆಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.

ರಾಮನಗರದಲ್ಲಿನ ನಿನ್ನೆಯ ಘಟನೆಯ ಬಗ್ಗೆ ಪ್ರತಿಕ್ರಿಯಿಸಿ, ಈ ರೀತಿಯ ವರ್ತನೆ ನಮ್ಮ ಕರ್ನಾಟಕದ ಸಂಸ್ಕೃತಿ ಅಲ್ಲ. ಮಾತಿನ ಮೂಲಕ ಸೌಹಾರ್ದಯುತವಾಗಿ ತಮ್ಮ ವಿಚಾರಗಳನ್ನು ವ್ಯಕ್ತಪಡಿಸಬಹುದೇ ಹೊರತು ಇಂತಹ ವರ್ತನೆ ಯಾರಿಗೂ ಶೋಭೆ ತರುವಂಥದಲ್ಲ ಎಂದು ತಿಳಿಸಿದರು.

Girl in a jacket
error: Content is protected !!