ಬೆಂಗಳೂರು,ಅ,14-ಕಲಬುರ್ಗಿಯ ಗ್ರಂಥಾಲಯದ ನೌಕರಿಯಲ್ಲಿದ್ದ ಮಹಿಳೆಯದು ಆತ್ಮಹತ್ಯೆಯಲ್ಲ; ಅದು ಸರಕಾರಿ ಪ್ರಾಯೋಜಿತ ಕೊಲೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆರೋಪಿಸಿದ್ದಾರೆ. ಈ ಅತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡುವಂತೆ ಆಗ್ರಹಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಲಬುರ್ಗಿಯಲ್ಲಿ ನೌಕರರು ನ್ಯಾಯಕ್ಕಾಗಿ ಮುಷ್ಕರ ನಡೆಸುತ್ತಿದ್ದಾರೆ. ಘಟನೆಯನ್ನು ಮುಚ್ಚಿ ಹಾಕುವ ಎಸ್ಐಟಿ, ಆಯೋಗ ರಚಿಸುವ ಸಾಧ್ಯತೆ ಇದೆ. ಕರೂರಿನಲ್ಲಿ ಸುಮಾರು 50 ಜನ ಸತ್ತಿದ್ದರು. ಅಲ್ಲಿ ಎಸ್.ಐ.ಟಿ. ಮಾಡಿ ಆ ಸರಕಾರ ಮುಚ್ಚಿ ಹಾಕುವ ಪ್ರಯತ್ನ ಮಾಡಿತ್ತು. ಆದರೆ, ಸುಪ್ರೀಂ ಕೋರ್ಟ್ ಸಿಬಿಐ ತನಿಖೆಗೆ ನೀಡಿದೆ. ಈ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡುವಂತೆ ಒತ್ತಾಯಿಸಿದರು.
ವೇತನ ಸಿಗದೇ ಗ್ರಂಥಪಾಲಕರ ಆತ್ಮಹತ್ಯೆ, ಬಿಲ್ ಪಾವತಿ ಆಗದೇ ಗುತ್ತಿಗೆದಾರರ ಆತ್ಮಹತ್ಯೆ, ವರ್ಗಾವಣೆ ಕಮಿಷನ್ ದಂಧೆಯಲ್ಲಿ ಪೊಲೀಸ್ ಅಧಿಕಾರಿಗಳ ಆತ್ಮಹತ್ಯೆ, ನಿಗಮಗಳಲ್ಲಿ ಸರಕಾರಿ ಸಾಲ ಸಿಗದೇ ಮೈಕ್ರೋ ಫೈನಾನ್ಸ್ ಕಿರುಕುಳದಲ್ಲಿ ಬಡವರ ಆತ್ಮಹತ್ಯೆ, ಬರ ಮತ್ತು ಅತಿವೃಷ್ಟಿಯಿಂದ ಪರಿಹಾರ ಸಿಗದೇ 300ಕ್ಕೂ ಹೆಚ್ಚು ರೈತರ ಆತ್ಮಹತ್ಯೆ ಆಗಿದೆ. ಇದು ಮನೆಹಾಳರ ಸರಕಾರ. ದಿವಾಳಿ ಮಾಡಿ ಜನಸಾಮಾನ್ಯರಿಗೆ ಆತ್ಮಹತ್ಯೆ ಭಾಗ್ಯವನ್ನು ಆರನೇ ಗ್ಯಾರಂಟಿಯಾಗಿ ನೀಡಿದೆ ಎಂದು ಟೀಕಿಸಿದರು. ಇವರು ಕಾಂಗ್ರೆಸ್ಸಿನ ಸಚಿವರಲ್ಲ; ಯಮ ಕಿಂಕರರು; ಸಾವಿನ ಗ್ಯಾರಂಟಿ ಕೊಡುತ್ತಿದ್ದಾರೆ ಎಂದು ದೂರಿದರು. ಇದೊಂದು ಕೊಲೆಗಡುಕರ ಸರಕಾರ; ಈ ಸರಕಾರಕ್ಕೆ ಧಿಕ್ಕಾರ ಎಂದು ಕೂಗಿದರು.
ಕೂಡುವ ಕಳೆಯುವ ಲೆಕ್ಕ ಗೊತ್ತಿದ್ದರೆ..
ಕಲಬುರ್ಗಿಯ ಆ ಡೆತ್ ನೋಟ್ ಕೂಡ ಮುಚ್ಚಿ ಹಾಕಿದ್ದಾರೆ. ಕಾಂಗ್ರೆಸ್ಸಿನವರು ಎಂದಿನಂತೆ ಮನೆಗೆ ಹೋಗಿ ಹಣ ಕೊಟ್ಟು ಹೊಂದಾಣಿಕೆ ಮಾಡುವ ಪ್ರಯತ್ನ ನಡೆಸಿದ್ದಾರೆ ಎಂದು ಆಕ್ಷೇಪಿಸಿದರು. ಇದು ಪಾಪರ್ ಸರಕಾರ; ಭಿಕ್ಷಾಪಾತ್ರೆ ಹಿಡಿಯುವ ಸರಕಾರ ಎಂದು ಆರೋಪಿಸಿದರು. ಹಿಮಾಚಲ ಪ್ರದೇಶಕ್ಕಿಂತ ಅಧ್ವಾನ ಆಗಿರುವ ಸರಕಾರ ಇದು ಎಂದು ಟೀಕಿಸಿದರು. ಸರಕಾರ, ಸಿದ್ದರಾಮಯ್ಯನವರಿಗೆ ಕೂಡುವ ಕಳೆಯುವ ಲೆಕ್ಕ ಗೊತ್ತಿದ್ದರೆ ಈ ಸಾವು ಯಾಕೆ ಆಗುತ್ತಿತ್ತು ಎಂದು ಆರ್. ಅಶೋಕ್ ಅವರು ಪ್ರಶ್ನಿಸಿದರು.
ದೀಪಾವಳಿ ಬರಲಿದೆ; ಕರ್ನಾಟಕದಲ್ಲಿ ಬೆಳಕು ಮೂಡಲಿದೆ ಎಂದು ನಾವೆಲ್ಲ ತಿಳಿದುಕೊಂಡಿದ್ದೆವು. ಆದರೆ, ಕರ್ನಾಟಕವನ್ನು ಬೆಳಗಿಸುವ ದೀಪಗಳು, ಗ್ರಂಥಾಲಯಗಳು, ಜ್ಞಾನ ಭಂಡಾರಗಳು ಇವತ್ತು ಆತ್ಮಹತ್ಯೆಯ ಭಂಡಾರವಾಗುತ್ತಿವೆ ಎಂದು ನೋವಿನಿಂದ ನುಡಿದರು.
ಕಲಬುರ್ಗಿ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರು, ಮಂತ್ರಿಗಳು ಎಲ್ಲರೂ ಇರುವ ಜಿಲ್ಲೆ. ಇಲ್ಲಿನ ಗ್ರಂಥಾಲಯದಲ್ಲಿ 15 ದಿನಗಳಿಂದ ನನಗೆ ಮಾಧ್ಯಮದ ಟಿ.ವಿ. ಚಾನೆಲ್ ಬಿಲ್ ಪಾವತಿಸಿಲ್ಲ; ಪತ್ರಿಕೆಗಳಿಗೆ 15 ತಿಂಗಳಿನಿಂದ ಬಿಲ್ ಬಾಕಿ ಇದೆ. ನನ್ನ ಜೀವನ ನಡೆಸಲು, ಊಟ ಮಾಡಲು 3 ತಿಂಗಳಿನಿಂದ ಸಂಬಳ ಕೊಟ್ಟಿಲ್ಲ; ಮಗನಿಗೆ ಶಾಲೆಯಲ್ಲಿ ಶುಲ್ಕ ಕಟ್ಟಲು ಪ್ರಯತ್ನ ಮಾಡಿದಾಗ ಫೀ ಕಟ್ಟಲು ಹಣ ನೀಡಿಲ್ಲ. ಇದು ನನ್ನ ಸಾವಲ್ಲ; ಕರ್ನಾಟಕದ ಗ್ರಂಥಾಲಯಗಳಲ್ಲಿ ಕೆಲಸದಲ್ಲಿ ಇರುವ ಲಕ್ಷಾಂತರ ಜನರ ಸಾವು ಎಂಬಂತೆ ಆತ್ಮಹತ್ಯೆಗೆ ಸಂಬಂಧಿಸಿ ಡೆತ್ ನೋಟ್ ಬರೆದಿಟ್ಟು ಸಾವನ್ನಪ್ಪಿದ್ದಾರೆ ಎಂದು ವಿವರಿಸಿದರು.
ಸಿದ್ದರಾಮಯ್ಯ ಟಾರ್ಗೆಟ್ ಫಿಕ್ಸ್ ಆಗಿದೆ; ಕರ್ನಾಟಕದ ಬೊಕ್ಕಸ ಬರಿದಾಗಿದೆ. ಇದು ಡಿನ್ನರ್ ರಾಜಕೀಯದ ಕಾರ್ಯಸೂಚಿ ಎಂದು ಆರ್. ಅಶೋಕ್ ಅವರು ಆರೋಪಿಸಿದರು.
ಬಿಹಾರಕ್ಕೆ 300 ಕೋಟಿಗೆ ಸಂಬಂಧಿಸಿ 300 ಚಿನ್ನದ ಗಟ್ಟಿಗಳು ಹೋಗಬೇಕಿತ್ತು. ಈಗ ಸಿದ್ದರಾಮಯ್ಯನವರು ಎಲ್ಲ ಸಚಿವರಿಗೆ ಒಂದೊಂದು ಚಿನ್ನದ ಗಟ್ಟಿ ಫಿಕ್ಸ್ ಮಾಡಿದ್ದಾರೆ. ಇಲಾಖೆ ಭಾರದನ್ವಯ ಕೋಟಿ ಕೋಟಿ ಕೊಟ್ಟರೆ ನೀವು ಡಿಸೆಂಬರ್ನಲ್ಲಿ ಸಚಿವರಾಗಿ ಇರುತ್ತೀರಿ; ಇಲ್ಲವಾದರೆ, ಜನವರಿಯಲ್ಲಿ ನೀವು ಇರುವುದಿಲ್ಲ ಎಂದು ತಿಳಿಸಿದ್ದಾರೆ ಎಂದು ಹೇಳಿದರು. 300 ರೂ. ಊಟ ಕೊಟ್ಟು 300 ಕೋಟಿ ವಸೂಲಿ ಮಾಡಿದ್ದಾರೆ ಎಂದರು.
ಇದು ಅವರ ಮುಖಕ್ಕೆ ಮಂಗಳಾರತಿ ಎತ್ತಿದಂತಲ್ಲವೇ
ಕಿರಣ್ ಮಜುಂದಾರ್ ಅವರು ಟ್ವೀಟ್ ಮಾಡಿದ್ದಾರೆ. ಚೀನಾದ ಕಂಪೆನಿಯು ರಸ್ತೆಯ ಪರಿಸ್ಥಿತಿ ಕೆಟ್ಟದಾಗಿ ಇರುವ ಕುರಿತು ಕಸದ ರಾಶಿ ಬಗ್ಗೆ ತಿಳಿಸಿ, ಹೂಡಿಕೆ ಬೇಡವೇ ಎಂದು ಕೇಳಿದೆ ಎಂದು ಪ್ರಸ್ತಾಪಿಸಿದ್ದಾರೆ ಎಂದು ಗಮನಕ್ಕೆ ತಂದರು. ಇದು ಅವರ ಮುಖಕ್ಕೆ ಮಂಗಳಾರತಿ ಎತ್ತಿದಂತಲ್ಲವೇ ಎಂದು ಕೇಳಿದರು. ಮೋಹನ್ದಾಸ್ ಪೈ ಅವರು ಲಂಚಗುಳಿತನದ ಕುರಿತು ಪ್ರಸ್ತಾಪಿಸಿದ್ದರು ಎಂದು ವಿವರಿಸಿದರು. ಬ್ಲಾಕ್ ಬಗ್ಸ್ ಇಷ್ಟವಿದ್ದರೆ ಇರಲಿ; ಇಲ್ಲವಾದರೆ ಔಟ್ ಎಂದು ಅಶ್ವತ್ಥನಾರಾಯಣ್ ಫ್ರೆಂಡ್ ಹೇಳಿದ್ದರು. ಅದಕ್ಕೆ ಅವರನ್ನು ಮೆಚ್ಚಬೇಕು ಎಂದು ವ್ಯಂಗ್ಯವಾಡಿದರು.
ಆರೆಸ್ಸೆಸ್ ಚಟುವಟಿಕೆ ನಿಷೇಧ ಕುರಿತ ಪ್ರಿಯಾಂಕ್ ಅವರ ಪತ್ರದ ಕುರಿತು ಪತ್ರಕರ್ತರು ಪ್ರಶ್ನಿಸಿದರು. ಮಲ್ಲಿಕಾರ್ಜುನ ಖರ್ಗೆಯವರು ಆರೆಸ್ಸೆಸ್ ಕಾರ್ಯಕ್ರಮಕ್ಕೆ ಯಾಕೆ ಹೋದರೆಂದು ಪ್ರಿಯಾಂಕ್ ಅವರು, ಅವರ ಅಪ್ಪನನ್ನು ಕೇಳಲಿ ಎಂದು ಸವಾಲು ಹಾಕಿದರು.
ಕ್ರಾಂತಿ ಈಗ ಚಾಲನೆಗೆ ಬಂದಿದೆ; ಇದು ಬಿದ್ದುಹೋಗುವ ಸರಕಾರ ಕ್ರಾಂತಿ ಈಗ ಚಾಲನೆಗೆ ಬಂದಿದೆ; ಇದು ಬಿದ್ದುಹೋಗುವ ಸರಕಾರ; ಸಿದ್ದರಾಮಯ್ಯ- ಶಿವಕುಮಾರ್ ಅವರದು ಕ್ರಾಂತಿ ಭ್ರಾಂತಿಗೆ ಸಂಬಂಧಿಸಿ ಒಂದೇ ರೀತಿ ಹೇಳಿಕೆ ಇರಬೇಕಲ್ಲವೇ ಎಂದು ಅವರು ಪ್ರಶ್ನೆಗೆ ಮರುಪ್ರಶ್ನೆ ಹಾಕಿದರು. ಮುಖ್ಯಮಂತ್ರಿ ಮಾಡುವುದು ಹೈಕಮಾಂಡ್ ಎಂದು ಶಿವಕುಮಾರ್ ಹೇಳಿದರೆ, ಸಿದ್ದರಾಮಯ್ಯ ಎಂಎಲ್ಎಗಳು ಎನ್ನುತ್ತಾರೆ ಎಂದು ಗಮನ ಸೆಳೆದರು. ಎಂಎಲ್ಎಗಳೇ ಮುಖ್ಯಮಂತ್ರಿ ಮಾಡುವುದಾಗಿದ್ದರೆ ರಾಜೀವ್ ಗಾಂಧಿ ಬಂದು ವಿಮಾನನಿಲ್ದಾಣದಲ್ಲೇ ವೀರೇಂದ್ರ ಪಾಟೀಲರನ್ನು ಡಮಾರ್ (ವಜಾ) ಎನಿಸಿ ಹೋದರಲ್ಲವೇ? ಆಗ ಶಾಸಕರ ಸಭೆ ಕರೆದಿದ್ದರೇ ಸಿದ್ದರಾಮಯ್ಯನವರೇ ಎಂದು ಕೇಳಿದರು.
ಮಾಲೂರಿನ ವಿಷಯದಲ್ಲಿ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತೇವೆ. ಸತ್ಯ ಹೊರಬರಲಿ; ಮತಗಳ್ಳರು ಯಾರೆಂದು ಗೊತ್ತಾಗಲಿ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಕಾಂಗ್ರೆಸ್ ಎಂದರೆ ಅದು ವಂಶವೃಕ್ಷದ ಪಕ್ಷ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.
ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಅವರು ಉಪಸ್ಥಿತರಿದ್ದರು.