ಓಮೈಕ್ರಾನ್ ಭೀತಿ;ರಾಜ್ಯದಲ್ಲಿ ಡಿ ೨೮ ರಿಂದ ಹತ್ತು ದಿನ ನೈಟ್ ಕರ್ಪ್ಯೂ ಜಾರಿ

Share

ಬೆಂಗಳೂರು, ಡಿ,೨೬; ರಾಜ್ಯದಲ್ಲಿ ಓಮೈಕ್ರಾನ್ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹರಡುವಿಕೆ ತಡೆಯಲು ಸರ್ಕಾರ ಹತ್ತು ದಿನಗಳ ಕಾಲ ನೈಟ್ ಕರ್ಪ್ಯೂ ಜಾರಿಮಾಡಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ರಾಜ್ಯದ ಕೋವಿಡ್ ಸ್ಥಿತಿಗತಿ ಕುರಿತು ಉನ್ನತ ಮಟ್ಟದ ಸಭೆ ನಡೆಸಿದರು. ಕಂದಾಯ ಸಚಿವ ಆರ್. ಅಶೋಕ, ಗೃಹ ಸಚಿವ ಆರಗ ಜ್ಞಾನೇಂದ್ರ, ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.


ಸಭೆಯಲ್ಲಿ ಡಿಸೆಂಬರ್ ೨೮ರಿಂದ ೧೦ ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿಗೊಳಿಸಲು ಒಪ್ಪಿಗೆ ನೀಡಲಾಗಿದೆ. ರಾತ್ರಿ ೧೦ ಗಂಟೆಯಿಂದ ಬೆಳಗ್ಗೆ ೫ ಗಂಟೆಯ ತನಕ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ.
ಮುಖ್ಯಮಂತ್ರಿಗಳ ಜೊತೆಗಿನ ಸಭೆ ಬಳಿಕ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, “ರಾಜ್ಯದಲ್ಲಿ ೧೦ ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಡಿಸೆಂಬರ್ ೨೮ ರಿಂದ ರಾತ್ರಿ ೧೦ ರಿಂದ ಬೆಳಗ್ಗೆ ೫ ಗಂಟೆಯ ತನಕ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ” ಎಂದು ಹೇಳಿದರು.
ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷ ಆಚರಿಸುವಂತಿಲ್ಲ. ಸಭೆ-ಸಮಾರಂಭಗಳಲ್ಲಿ ಶೇ ೫೦ರಷ್ಟು ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಹಗಲಿನಲ್ಲೂ ಸಹ ಬಾರ್, ಪಬ್, ಕ್ಲಬ್, ರೆಸ್ಟೋರೆಂಟ್‌ಗಳಲ್ಲಿ ಶೇ ೫೦ರಷ್ಟು ಜನರಿಗೆ ಮಾತ್ರ ಮಿತಿಗೊಳಿಸಲಾಗಿದೆ.

ನೈಟ್ ಕರ್ಫ್ಯೂ ಮಾರ್ಗಸೂಚಿ

ನೈಟ್ ಕರ್ಫ್ಯೂ ಅವಧಿಯಲ್ಲಿ ರಾತ್ರಿ ೧೦ ರಿಂದ ೫ ಗಂಟೆಯ ತನಕ ಜನರ ಸಂಚಾರವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ರೋಗಿಗಳು, ರೋಗಿಗಳ ಅವಲಂಬಿತರಿಗೆ ತುರ್ತು ಸಂದರ್ಭದಲ್ಲಿ ಸಂಚಾರ ನಡೆಸಲು ಒಪ್ಪಿಗೆ ನೀಡಲಾಗಿದೆ.

ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಣೆ ಮಾಡುವ ಎಲ್ಲಾ ಕಂಪನಿಗಳು ನೈಟ್ ಕರ್ಫ್ಯೂ ಅವಧಿಯಲ್ಲಿ ಕೆಲಸ ನಿರ್ವಹಣೆ ಮಾಡಬಹುದಾಗಿದೆ. ಇಂತಹ ಕಂಪನಿಗಳನ್ನು ಕಾರ್ಯ ನಿರ್ವಹಣೆ ಮಾಡುವ ಉದ್ಯೋಗಿಗಳು ಐಡಿ ಕಾರ್ಡ್ ತೋರಿಸಿ ಸಂಚಾರ ನಡೆಸಬೇಕು.

ನೈಟ್ ಕರ್ಫ್ಯೂ ಅವಧಿಯಲ್ಲಿ ಬಸ್, ರೈಲು, ಮೆಟ್ರೋ ರೈಲು, ವಿಮಾನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ವಿಮಾನ ನಿಲ್ದಾಣ, ರೈಲು ನಿಲ್ದಾಣಕ್ಕೆ ಟ್ಯಾಕ್ಸಿ ಸೇರಿದಂತೆ ಇತರ ವಾಹನಗಳಲ್ಲಿ ಪ್ರಯಾಣ ಮಾಡಬಹುದು. ಆದರೆ ಟಿಕೆಟ್ ತೋರಿಸಬೇಕು.

Girl in a jacket
error: Content is protected !!