ಸಚಿವರುಗಳು ತಮ್ಮ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ: ಡಿಸಿಎಂ
ಬೆಳಗಾವಿ, ಜ.19-“ಗಾಂಧಿ ಭಾರತದ ಅಂಗವಾಗಿ ಜ.21ರಂದು ನಡೆಯಲಿರುವ ಗಾಂಧಿ ಪ್ರತಿಮೆ ಅನಾವರಣ ಹಾಗೂ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶದ ತಯಾರಿ ನಡೆಯುತ್ತಿದ್ದು, ಸಚಿವರುಗಳು ತಮ್ಮ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬೆಳಗಾವಿಯ ಸರ್ಕಿಟ್ ಹೌಸ್, ಕಪಿಲೇಶ್ವರ ದೇವಾಲಯ ಹಾಗೂ ಫಿರೋಜ್ ಸೇಠ್ ಅವರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಭಾನುವಾರ ಪ್ರತಿಕ್ರಿಯೆ ನೀಡಿದರು.
“ಜ.21ರ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಇಂದು ಮಧ್ಯಾಹ್ನ ಕಾರ್ಯಕ್ರಮಕ್ಕೆ ಬರುವವರ ವಾಹನ ನಿಲುಗಡೆ ಸ್ಥಳ ಪರಿಶೀಲನೆ ಮಾಡಲಿದ್ದೇನೆ. ಆಹಾರ ಸಮಿತಿ ಜವಾಬ್ದಾರಿ ಹೊತ್ತಿರುವ ಸಚಿವರಾದ ಕೆ.ಹೆಚ್. ಮುನಿಯಪ್ಪ, ವಸತಿ ಸಮಿತಿ ಮುಖ್ಯಸ್ಥರಾದ ಸುಧಾಕರ್ ಅವರು ಈಗಾಗಲೇ ಬೆಳಗಾವಿಗೆ ಆಗಮಿಸಿದ್ದು, ಸ್ವಾಗತ ಸಮಿತಿ ಮುಖ್ಯಸ್ಥರಾದ ಪರಮೇಶ್ವರ್ ಅವರು ಶೀಘ್ರದಲ್ಲೇ ಆಗಮಿಸಲಿದ್ದಾರೆ. ನಾವು ಯಾರಿಗೆಲ್ಲ ಜವಾಬ್ದಾರಿ ವಹಿಸಿದ್ದೇವೋ ಅವರು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಜಿಲ್ಲಾ ಸಚಿವರು ಸಂಘಟನೆಯಲ್ಲಿ ತೊಡಗಿದ್ದಾರೆ” ಎಂದು ತಿಳಿಸಿದರು.
“21ರ ಬೆಳಗ್ಗೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರು ವಿಶೇಷ ವಿಮಾನದಲ್ಲಿ ಆಗಮಿಸಲಿದ್ದಾರೆ. ಬೆಳಗ್ಗೆ ಸುವರ್ಣಸೌಧದಲ್ಲಿ ಮಹಾತ್ಮಾ ಗಾಂಧೀಜಿ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಲಿದ್ದು, ನಂತರ ಔತಣಕೂಟ ಏರ್ಪಡಿಸಲಾಗಿದೆ. ಆನಂತರ ಸಮಾವೇಶ ನಡೆಯಲಿದೆ” ಎಂದು ಮಾಹಿತಿ ನೀಡಿದರು.
ಸಮಾವೇಶಕ್ಕೆ ಎಷ್ಟು ಜನ ಸೇರಲಿದ್ದಾರೆ ಎಂದು ಕೇಳಿದಾಗ, “ಸಮಾವೇಶಕ್ಕೆ ಸಾರ್ವಜನಿಕರಿಗೆ ಆಹ್ವಾನ ನೀಡಿದ್ದೇವೆ. ಯಾರು ಬೇಕಾದರೂ ಬರಬಹುದು. ಇಂತಿಷ್ಟೇ ಜನ ಬರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಈ ಸಮಾವೇಶ ಗಾಂಧೀಜಿ, ಅಂಬೇಡ್ಕರ್ ಹಾಗೂ ಸಂವಿಧಾನದ ವಿಚಾರ. ಹೀಗಾಗಿ ಇದು ಎಲ್ಲರ ಕಾರ್ಯಕ್ರಮ. ಬಿಜೆಪಿಯವರು ಹೊರತಾಗಿ ಈ ದೇಶ ಉಳಿಸಲು, ಸಂವಿಧಾನ ರಕ್ಷಿಸಲು, ಗಾಂಧಿಜಿ ಅವರ ಆಚಾರ ವಿಚಾರ ಪ್ರಚಾರ ಮಾಡುವ ಇಚ್ಛೆ ಇರುವ ಯಾರು ಬೇಕಾದರೂ ಸಮಾವೇಶಕ್ಕೆ ಆಗಮಿಸಬಹುದು” ಎಂದರು.
ಶೆಟ್ಟರ್ ಬಂದರೆ ಬೆಳಗಾವಿ ಪ್ರವಾಸ ಮಾಡಿಸುವ
ಕಾಂಗ್ರೆಸ್ ನವರು ಸರ್ಕಾರದ ಹಣದಲ್ಲಿ ಜಾತ್ರೆ ಮಾಡುತ್ತಿದ್ದಾರೆ. ಗಾಂಧಿ ಫೋಟೋ ಹಾಕದೇ ಕಾಂಗ್ರೆಸ್ ನಾಯಕರ ಫೋಟೋ ಹಾಕಿದ್ದಾರೆ ಎಂದು ಜಗದೀಶ್ ಶೆಟ್ಟರ್ ಅವರ ಆರೋಪದ ಬಗ್ಗೆ ಕೇಳಿದಾಗ, “ಜಗದೀಶ್ ಶೆಟ್ಟರ್ ಅವರು ಬಂದರೆ ಅವರನ್ನು ಬೆಳಗಾವಿ ಪ್ರವಾಸ ಮಾಡಿಸುತ್ತೇನೆ. ನಾವು ಎಲ್ಲೆಲ್ಲಿ ಏನು ಮಾಡಿದ್ದೇವೆ ಎಂದು ಅವರಿಗೆ ಕರೆದುಕೊಂಡು ಹೋಗಿ ತೋರಿಸುತ್ತೇನೆ. ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದಾಗ ಆಡಿದ ನುಡಿಮುತ್ತುಗಳನ್ನು ನೋಡಲಿ” ಎಂದು ತಿಳಿಸಿದರು.
ದೇವಾಲಯಗಳ ಭೇಟಿ ಬಗ್ಗೆ ಕೇಳಿದಾಗ, “ನಾನು ದಿನಾ ಬೆಳಗಾದರೆ ದೇವರಿಗೆ ಪೂಜೆ ಮಾಡಿಯೇ ಮನೆಯಿಂದ ಹೊರಬರುತ್ತೇನೆ. ನಾಳೆ ನಾಡಿದ್ದು ಕಾರ್ಯಕ್ರಮಗಳ ಕೆಲಸದಲ್ಲಿ ನಿರತನಾಗುತ್ತೇನೆ. ಹೀಗಾಗಿ ಇಂದು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದೇನೆ. ನಿಮ್ಮಿಂದ (ಮಾಧ್ಯಮಗಳ) ರಕ್ಷಣೆಗೆ ಭೇಟಿ ನೀಡುತ್ತಿದ್ದೇನೆ” ಎಂದು ಹಾಸ್ಯ ಚಟಾಕಿ ಹಾರಿಸಿದರು.
ನೀರಿನ ಬಳಕೆಯಲ್ಲಿ ಲೆಕ್ಕಾಚಾರಗಳಿವೆ
ಫಿರೋಜ್ ಸೇಠ್ ಅವರ ನಿವಾಸದ ಬಳಿ, ಬೆಳಗಾವಿಯ ಹಿಡಕಲ್ ಅಣೆಕಟ್ಟಿನಿಂದ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ 5 ಟಿಎಂಸಿ ನೀರು ತೆಗೆದುಕೊಂಡು ಹೋಗಲಾಗಿದೆ ಎಂದು ಕೇಳಿದಾಗ, “5 ಟಿಎಂಸಿ ನೀರನ್ನು ಬೆಂಗಳೂರಿಗೆ ನೀಡಲು ಆಗುತ್ತಿಲ್ಲ. ಇಲ್ಲಿ ಹೇಗೆ ತೆಗೆದುಕೊಂಡು ಹೋಗಲು ಸಾಧ್ಯ. ಯಾರೋ ಹೇಳಿದರು ಎಂದ ಮಾತ್ರಕ್ಕೆ ನಾವು ಉತ್ತರ ಕೊಡಲು ಆಗುವುದಿಲ್ಲ. ಈಗ ಬೆಂಗಳೂರಿಗೆ ನಾನು 6 ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ಸೇರಿಸಿದ್ದೇನೆ. ಟಿಎಂಸಿ ಎಂದರೆ ಎಷ್ಟು ಎಂದು ನಿಮಗೆ ಅರ್ಥವಾಗಿಲ್ಲ. ನಿನ್ನೆ ಹುಕ್ಕೇರಿ ಶಾಸಕರಾದ ನಿಖಿಲ್ ಕತ್ತಿ ಅವರು ನನ್ನನ್ನು ಭೇಟಿ ಮಾಡಿ ಚರ್ಚೆ ಮಾಡಿ ಕೆಲವು ವಿಚಾರ ತಿಳಿಸಿದ್ದಾರೆ. ಈ ವಿಚಾರವಾಗಿ ನಾನು ನಿನ್ನೆ ಪರಿಶೀಲನೆ ಮಾಡಿ ವರದಿ ಕೇಳಿದ್ದೇನೆ. ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ಈ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಹಿತಿ ಇರಲಿಲ್ಲ. ನಿಮಗೆ ಮಾಹಿತಿ ಇತ್ತೇ ಎಂದು ಕೇಳಿದಾಗ, “ನಮಗೆ ಗೊತ್ತಿದೆ, ಸಮಯ ಬಂದಾಗ ಮಾತನಾಡುತ್ತೇನೆ. ಎಲ್ಲಾ ಸಚಿವರಿಗೆ ಎಲ್ಲಾ ಮಾಹಿತಿ ಇರುವುದಿಲ್ಲ. ಒಂದೊಂದು ಇಲಾಖೆಯಲ್ಲಿ ಒಂದೊಂದು ನಿರ್ಧಾರ ಮಾಡಿರುತ್ತಾರೆ. ಎಲ್ಲರೂ ಎಲ್ಲಾ ಮಾಹಿತಿ ತಿಳಿದಿರುವುದಿಲ್ಲ. ಪರಿಶೀಲನೆ ಮಾಡಿದಾಗ ತಿಳಿಯುತ್ತದೆ” ಎಂದು ಹೇಳಿದರು.