ಯತ್ನಾಳ್ ಗೆ ಶಿಸ್ತು ಸಮಿತಿಯಿಂದ ನೋಟೀಸ್ ಜಾರಿ
by-ಕೆಂಧೂಳಿ
ಬೆಂಗಳೂರು,ಫೆ,10-ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ದ ಒಂದಲ್ಲಾ ಒಂದು ಆರೋಪವನ್ನು ಮಾಡುತ್ತಲೇ ಪಕ್ಷದ ಶಿಸ್ತು ಉಲ್ಲಂಘಿಸಿದ ಆರೋಪದ ಮೇಲೆ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಗೆ ಕಾರಣ ಕೇಳಿ ಶಿಸ್ತು ಸಮಿತಿ ನೊಟೀಸ್ ಜಾರಿ ಮಾಡಿದೆ.
ನೋಟಿಸ್ ತಲುಪಿದ 72 ಗಂಟೆಯ ಒಳಗೆ ಉತ್ತರ ನೀಡಬೇಕು ಎಂದೂ ತಾಕೀತು ಮಾಡಿದೆ. ಬಿಜೆಪಿ ಕೇಂದ್ರ ಶಿಸ್ತು ಪಾಲನಾ ಸಮಿತಿಯ ಕಾರ್ಯದರ್ಶಿ ಓಂ ಪಾಠಕ್ ಅವರು ಸೋಮವಾರ ಈ ನೋಟಿಸ್ ಜಾರಿಮಾಡಿದ್ದಾರೆ.
ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಆಪ್ತರ ವಿರುದ್ಧ ಬಂಡಾಯದ ಕಹಳೆ ಊದಿರುವ ಯತ್ನಾಳ್ ಪಕ್ಷದ ನಾಯಕರ ವಿರುದ್ಧ ಪದೇ ಪದೇ ಸಾರ್ವಜನಿಕವಾಗಿ ಆರೋಪಗಳನ್ನು ಮಾಡುತ್ತಾ, ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಹಿಂದೆ ಹಲವು ಬಾರಿ ಎಚ್ಚರಿಕೆ ನೀಡಲಾಗಿದ್ದರೂ ಯತ್ನಾಳ್ ಅವರು ಪದೇ ಪದೇ ಶಿಸ್ತನ್ನು ಉಲ್ಲಂಘಿಸಿದ್ದಾರೆ. ಇದು ಗಂಭೀರವಾದ ವಿಚಾರವಾಗಿದ್ದು ನೋಟಿಸ್ಗೆ ಉತ್ತರ ನೀಡದಿದ್ದರೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಪಕ್ಷದ ಶಿಸ್ತು ಸಮಿತಿ ಈ ಹಿಂದೆಯೂ ಒಮ್ಮೆ ಯತ್ನಾಳ್ ಅವರಿಗೆ ನೋಟಿಸ್ ನೀಡಿತ್ತು. ಅವರು ಸುದೀರ್ಘ ಉತ್ತರವನ್ನೂ ನೀಡಿದ್ದರು,ಮತ್ತೆ ಯತ್ನಾಳ ಹಾದಿ ಬೀದಿಯಲ್ಲಿ ರಂಪ ಮಾಡಿದ್ದರು.