ಮುಂಬರುವ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಸಮಾನ ಹೋರಾಟ; ದೇವೇಗೌಡ

Share

ಬೆಂಗಳೂರು, ಮಾ, 12: “ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಸಮಾನ ಹೋರಾಟ ನಡೆಸಲಿದೆ” ಎಂದು ಮಾಜಿ ಪ್ರಧಾನಿ, ಪಕ್ಷದ ವರಿಷ್ಠ ಎಚ್. ಡಿ. ದೇವೇಗೌಡ ಹೇಳಿದರು.

ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು, “ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸುವ ಪ್ರಯತ್ನ ಆರಂಭಿಸಿದ್ದೇವೆ. ಇದೇ 20ರಂದು ನಗರದ ಅರಮನೆ ಮೈದಾನದಲ್ಲಿ ಪಕ್ಷದ ಸಮಾವೇಶ ನಡೆಯಲಿದೆ. ಅಲ್ಲಿ ನಮ್ಮ ಹೋರಾಟದ ತೀರ್ಮಾನವನ್ನು ಪ್ರಕಟಿಸುತ್ತೇವೆ” ಎಂದರು.

“ಜಾತ್ಯಾತೀತ ಜನತಾದಳ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಲಿದೆ. ಬಿಜೆಪಿ ಮತ್ತು ಕಾಂಗ್ರೆಸ್ ತಮ್ಮ ಪಕ್ಷಕ್ಕೆ ಸಮಾನ ಎದುರಾಳಿಗಳು. ಬೇರೆ ಪಕ್ಷಗಳೊಂದಿಗೆ ಚುನಾವಣಾ ಹೊಂದಾಣಿಕೆ ಮಾಡಿಕೊಳ್ಳುವುದು ಗಾಳಿ ಮಾತು” ಎಂದು ಎಚ್. ಡಿ. ದೇವೇಗೌಡರು ಸ್ಪಷ್ಟಪಡಿಸಿದರು.

“ಬಿಜೆಪಿ ಈಗ ಪ್ರಬಲವಾಗಿ ಬೆಳೆದಿದೆ. ರಾಷ್ಟ್ರದಲ್ಲಿ ಜಾತ್ಯತೀತ ಸಿದ್ಧಾಂತದ ಪಕ್ಷಗಳು ಒಗ್ಗೂಡುವ ಅಗತ್ಯವಿದೆ. ಆ ದಿಸೆಯಲ್ಲಿ ಚಿಂತನೆ ನಡೆಯಬೇಕಿದೆ. ಕಾಂಗ್ರೆಸ್ ಈಗ ಬಲಹೀನವಾಗಿದೆ. ಅದು ಕೆಲವೇ ರಾಜ್ಯಗಳಿಗೆ ಸೀಮಿತವಾದ ಪ್ರಾದೇಶಿಕ ಪಕ್ಷದಂತೆ ಆಗಿದೆ. ಕರ್ನಾಟಕದ ಕಾಂಗ್ರೆಸ್ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ” ಎಂದು ದೇವೇಗೌಡರು ತಿಳಿಸಿದರು.

ಕಾಂಗ್ರೆಸ್ ಸೋಲಿನ ಕಾರಣ ಬಿಚ್ಚಿಟ್ಟರು
ಮೋದಿ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ
ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡಿದ ದೇವೇಗೌಡರು, ‘ಪಂಜಾಬ್ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಅಸಮಾಧಾನ ಸರಿಪಡಿಸಿ, ಒಟ್ಟಿಗೆ ಹೋಗಿದ್ದರೆ ಈಗಿನ ಪರಿಸ್ಥಿತಿ ಬರುತ್ತಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯ ಗೆಲುವುಗಾಗಿ ವಿನಮ್ರತೆಯಿಂದ ಶ್ರಮಿಸುತ್ತಿದ್ದಾರೆ. ಈಗಾಗಲೇ ಅವರು ಗುಜರಾತ್ ಚುನಾವಣಾ ತಯಾರಿ ಆರಂಭಿಸಿದ್ದಾರೆ’ ಎಂದರು.

‘ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಎಲ್ಲರಿಗೂ ಗೊತ್ತಿದೆ. ಪ್ರಧಾನಿ ನರೇಂದ್ರ ಮೋದಿ ದೇಶದ ನಾಲ್ಕು ದಿಕ್ಕಿನಲ್ಲಿ ಪಕ್ಷ ಅಧಿಕಾರಕ್ಕೆ ತರಲು ಹಂಬಲಿಸುತ್ತಿದ್ದಾರೆ. ಅವರ ಕಾರ್ಯವನ್ನು ನಾವು ರೋಲ್ ಮಾಡೆಲ್ ಆಗಿ ತೆಗೆದುಕೊಳ್ಳಬೇಕು. ಪಕ್ಷ ಉಳಿಸಿಕೊಳ್ಳಬೇಕು ಎನ್ನುವ ಬದ್ದತೆ ಯಾರಿಗಿದೆಯೋ ಅಂಥವರನ್ನು ಸಂಘಟನೆಯಲ್ಲಿ ತೊಡಗಿಸಿ ಪಕ್ಷ ಉಳಿಸುವ ಕೆಲಸ ಮಾಡುತ್ತೇವೆ’ ಎಂದರು.

‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಗಳೊಂದಿಗೆ ಮೈತ್ರಿ ಇಲ್ಲ.ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧವೂ ಹೋರಾಟ ಮಾಡುತ್ತೇವೆ. ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ಚುನಾವಣಾ ಪೂರ್ವ ಯಾವುದೇ ರೀತಿ ಒಪ್ಪಂದವಿಲ್ಲ. ಪ್ರಾದೇಶಿಕ ಪಕ್ಷವಾದ ಜೆಡಿಎಸ್‍ ಅನ್ನು ಉಳಿಸಿಕೊಳ್ಳಲು ಕಾರ್ಯಕ್ರಮ ರೂಪಿಸಲಾಗಿದೆ. ಜನತಾ ಜಲಧಾರೆ ಮೂಲಕ ಹೋರಾಟ ಮಾಡಲು ನಿರ್ಧರಿಸಲಾಗಿದೆ’ ಎಂದು ದೇವೇಗೌಡರು ಹೇಳಿದರು.

‘ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಮೇಕೆದಾಟು ಯೋಜನೆಗೆ ಆಗ್ರಹಿಸಿ ದೊಡ್ಡ ಪಾದಯಾತ್ರೆ ನಡೆಸಿದರು. ಅವರ ಹೋರಾಟಕ್ಕೆ ಒಳ್ಳೆಯ ಪ್ರಚಾರವೂ ಸಿಕ್ಕಿತು. ಕಾಂಗ್ರೆಸ್ ಪಕ್ಷದ ಯಾವ ಹೋರಾಟಕ್ಕೂ ನನ್ನ ತಕರಾರಿಲ್ಲ’ ಎಂದು ದೇವೇಗೌಡರು ಹೇಳಿದರು.

‘ನೀರಾವರಿ ಯೋಜನೆಯನ್ನೇ ಕೈಗೆತ್ತಿಕೊಂಡಿದ್ದ ನನ್ನ ಕೈಯಲ್ಲಿ ಮಾಡಲು ಆಗಲಿಲ್ಲ. ಬೇರೆ ಬೇರೆ ಸರ್ಕಾರಗಳು ಏನು ಮಾಡಿವೆ ಎಂಬುದು ಈಗ ಚರ್ಚೆ ಬೇಡ. ಬಿಜೆಪಿ, ಜೆಡಿಎಸ್ ಏನು ಮಾಡಿದೆ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದರು. ನೀವೇ ಉಳಿಸಿಕೊಡಬೇಕು ಎಂದು ನಮ್ಮ ಮನೆ ಬಾಗಿಲಿಗೆ ಬಂದಿದ್ದರು. ಕಾವೇರಿ ಕೊಳ್ಳದಲ್ಲಿ ನೀರು ತಂದುಬಿಟ್ಟಿದ್ದೇವೆ ಎಂದು ಕಾಂಗ್ರೆಸ್‍ನವರು ಹೇಳುತ್ತಾರೆ. ಒಬ್ಬ ಕನ್ನಡಿಗ ಪ್ರಧಾನಿಯಾಗಿದ್ದನ್ನು ಸಹಿಸಲು ಅವರಿಗೆ ಆಗಲಿಲ್ಲ’ ಎಂದರು.

‘ಕೇಂದ್ರದ ಮಾಜಿ ಸಚಿವ ಸಿಎಂ ಇಬ್ರಾಹಿಂ ಪಕ್ಷ ಸೇರುವ ವಿಚಾರ ಹಲವು ತಿಂಗಳಿನಿಂದ ಚರ್ಚೆಯಾಗುತ್ತಿದೆ. ಈ ಬಗ್ಗೆ ಅವರು ನನ್ನ ಬಳಿ ಬಂದು ಚರ್ಚೆ ಮಾಡಿಲ್ಲ. ಕಾಂಗ್ರೆಸ್‍ನಲ್ಲಿ ಅವರಿಗೆ ಸಾಕಷ್ಟು ನೋವಾಗಿದೆ. ಇದಕ್ಕಾಗಿ ಪಕ್ಷ ಬಿಡುವ ಬಗ್ಗೆ ತೀರ್ಮಾನ ಮಾಡಿರಬಹುದು’ ಎಂದು ದೇವೇಗೌಡರು ಹೇಳಿದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್‍ನಲ್ಲಿ ಕೃಷ್ಣ ಮೇಲ್ದಂಡೆ ಯೋಜನೆಗೆ 3 ಸಾವಿರ ಕೋಟಿ ರೂ. ಒದಗಿಸಿದ್ದಾರೆ. ಕುಡಿಯುವ ನೀರಿನ ಯೋಜನೆಗಳಿಗೆ ಕಡಿಮೆ ಹಣ ಒದಗಿಸಲಾಗಿದೆ. ಮೇಕೆದಾಟು ಯೋಜನೆಗೆ ಒಂದು ಸಾವಿರ ಕೋಟಿ ರೂ. ಒದಗಿಸುವುದಾಗಿ ಹೇಳಿದ್ದಾರೆ’ ಎಂದರು.

‘ಪಕ್ಷ ತೊರೆಯುತ್ತಿರುವವರ ಬಗ್ಗೆ ನಾವು ಹೆದರುವುದಿಲ್ಲ. ಜನರ ಮುಂದೆ ಹೋಗುತ್ತೇವೆ. ಜನರು ಏನು ತೀರ್ಪು ಕೊಡುತ್ತಾರೋ ಕೊಡಲಿ’ ಎಂದು ದೇವೇಗೌಡರು ತಿಳಿಸಿದರು.

Girl in a jacket
error: Content is protected !!