ಬಿಜೆಪಿಗೆ ಹತ್ತಿರವಾಗುತ್ತಿದ್ದೇನೆ ಎಂಬುದು ಅಪಪ್ರಚಾರ: ಡಿ.ಕೆ. ಶಿವಕುಮಾರ್ ಸ್ಪಷ್ಟನೆ
by-ಕೆಂಧೂಳಿ
ಬೆಂಗಳೂರು, ಫೆ.26-“ನಾನು ಹುಟ್ಟುತ್ತಲೇ ಕಾಂಗ್ರೆಸಿಗ. ನನ್ನ ವೈಯಕ್ತಿಕ ನಂಬಿಕೆ, ನಾನು ಪಾಲಿಸುತ್ತೇನೆ. ಇದಕ್ಕೆ ನಾನು ಬಿಜೆಪಿಗೆ ಹತ್ತಿರವಾಗುತ್ತಿದ್ದೇನೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಶಿವಕುಮಾರ್ ಅವರು ಬುಧವಾರ ಮಾತನಾಡಿದರು.
ಕೆ.ಸಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಕೆಪಿಸಿಸಿ ಅಧ್ಯಕ್ಷರಾಗಿ ನೀವೇ ಮುಂದುವರಿಯಬೇಕು ಎಂದು ಮನವಿ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದು ಕೇಳಿದಾಗ, “ಇದು ಸುಳ್ಳು. ಇದೆಲ್ಲವೂ ಸೃಷ್ಟಿ ಮಾಡಲಾಗಿರುವ ಸುದ್ದಿ. ಇನ್ನು ಅನೇಕ ವಿಚಾರಗಳಲ್ಲಿ ಸುದ್ದಿಗಳನ್ನು ಸೃಷ್ಟಿ ಮಾಡಲಾಗುತ್ತಿದೆ. ಸದ್ಗುರು ಅವರು ನನ್ನ ಮನೆಗೆ ಬಂದು ಇಶಾ ಫೌಂಡೇಶನ್ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ನೀಡಿದರು. ಅವರು ನಮ್ಮ ಮೈಸೂರಿನವರು. ಅವರ ಜ್ಞಾನವನ್ನು ನಾನು ಮೆಚ್ಚುತ್ತೇನೆ. ಕಳೆದ ವರ್ಷ ನನ್ನ ಮಗಳು ಆ ಕಾರ್ಯಕ್ರಮಕ್ಕೆ ಹೋಗಿದ್ದಳು. ಈ ಬಾರಿ ಅವರು ನಮ್ಮ ಮನೆಗೆ ಬಂದು ನನ್ನ ಹಾಗೂ ನನ್ನ ಕುಟುಂಬಕ್ಕೆ ಆಹ್ವಾನ ನೀಡಿದ್ದಾರೆ. ಈಗ ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗುತ್ತಿದ್ದೇನೆ. ಇಷ್ಟಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನಾನು ಬಿಜೆಪಿಗೆ ಹತ್ತಿರವಾಗುತ್ತಿದ್ದೇನೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ” ಎಂದು ತಿಳಿಸಿದರು.
“ನಾನು ಹಿಂದು, ಎಲ್ಲಾ ಸಂಸ್ಕೃತಿಯನ್ನು ಗೌರವಿಸುತ್ತೇನೆ. ಕಾಂಗ್ರೆಸ್ ಪಕ್ಷ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಸಿದ್ಧಾಂತ ಹೊಂದಿದೆ. ಮಹಾತ್ಮಾ ಗಾಂಧಿ, ನೆಹರೂ, ಇಂದಿರಾ ಗಾಂಧಿ ಅವರು ಇದನ್ನೇ ಮಾಡಿದ್ದಾರೆ. ಸೋನಿಯಾ ಗಾಂಧಿ ಅವರು ಯುಗಾದಿ ಹಬ್ಬ ಆಚರಣೆ ಮಾಡುವುದನ್ನು ನೋಡಿದ್ದೇನೆ. ಅವರು ನಮಗಿಂತ ಹೆಚ್ಚಾಗಿ ಭಾರತೀಯತೆಯನ್ನು ಅಳವಡಿಸಿಕೊಂಡಿದ್ದಾರೆ. ನಾವು ಅಂತಹ ನಾಯಕತ್ವವನ್ನು ಹೊಂದಿದ್ದೇವೆ. ನಮ್ಮ ಅಧ್ಯಕ್ಷರ ಹೆಸರು ಮಲ್ಲಿಕಾರ್ಜುನ ಖರ್ಗೆ. ಮಲ್ಲಿಕಾರ್ಜುನ ಎಂದರೆ ಶಿವ. ಅವರು ತಮ್ಮ ಹೆಸರು ಬದಲಿಸಿಕೊಂಡಿದ್ದಾರಾ?” ಎಂದು ಹೇಳಿದರು.
ಹಿಂದೂವಾಗಿ ಹುಟ್ಟಿದ್ದು, ಹಿಂದೂವಾಗಿಯೇ ಸಾಯುತ್ತೇನೆ
ನೀವು ಮಹಾಕುಂಭಮೇಳದಲ್ಲಿ ಭಾಗವಹಿಸಿದ್ದು, ಈಗ ಇಶಾ ಫೌಂಡೇಶನ್ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದರಿಂದ ಇಂತಹ ಚರ್ಚೆಯಾಗುತ್ತಿದೆ ಎಂದು ಕೇಳಿದಾಗ, “ನಾನು ಜನ್ಮತಃ ಹಿಂದು. ಹಿಂದೂವಾಗಿಯೇ ಸಾಯುತ್ತೇನೆ. ನಾನು ಎಲ್ಲಾ ಧರ್ಮಗಳನ್ನು ಪ್ರೀತಿಸುತ್ತೇನೆ, ಗೌರವಿಸುತ್ತೇನೆ. ನಾನು ಜೈಲಲ್ಲಿ ಇದ್ದಾಗ ಸಿಖ್ ಧರ್ಮದ ಬಗ್ಗೆ ಕಲಿತೆ. ಜೈನರ ಮಠದ ಕಾರ್ಯಕ್ರಮಕ್ಕೆ ಹೋಗಿದ್ದೆ. ಎಲ್ಲಾ ಧರ್ಮದವರು ನನಗೆ ಆಶೀರ್ವಾದ ಮಾಡುತ್ತಾರೆ. ನಾನು ದರ್ಗಾ, ಚರ್ಚ್ ಗೆ ಹೋಗುತ್ತೇನೆ. ಎಲ್ಲಾ ಸಮುದಾಯಗಳು ನನ್ನನ್ನು ಪ್ರೀತಿಸುತ್ತವೆ” ಎಂದು ತಿಳಿಸಿದರು.
ಮಹಾಕುಂಭ ಮೇಳದಲ್ಲಿ ನಿಮ್ಮ ಅನುಭವ ಹೇಗಿತ್ತು ಎಂದು ಕೇಳಿದಾಗ, “ನನ್ನ ಅನುಭವ ಅತ್ಯುತ್ತಮವಾಗಿತ್ತು. ಮಹಾಕುಂಭಮೇಳದ ಆಯೋಜನೆಯನ್ನು ನಾನು ಸ್ವಾಗತಿಸುತ್ತೇನೆ. ಇದು ಸಾಮಾನ್ಯದ ಕೆಲಸವಲ್ಲ. ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರನ್ನು ನಿಭಾಯಿಸುವುದು ಸುಲಭವಲ್ಲ. ಒಂದೆರಡು ಸಣ್ಣಪುಟ್ಟ ತೊಂದರೆಗಳು ಆಗಿರಬಹುದು. ತಪ್ಪು ಹುಡುಕಲು ಹೋಗುವುದಿಲ್ಲ. ಧರ್ಮದಲ್ಲಿ ಭಕ್ತ ಹಾಗೂ ಭಗವಂತನ ನಡುವೆ ಸಂಬಂಧವಿರುತ್ತದೆ. ಕೆಲವರು ದೇವರ ಜತೆ ನೇರವಾಗಿ ವ್ಯವಹಾರ ನಡೆಸಿದರೆ ಮತ್ತೆ ಕೆಲವರು ಅರ್ಚಕರ ಮೂಲಕ ವ್ಯವಹಾರ ಮಾಡುತ್ತಾರೆ” ಎಂದು ತಿಳಿಸಿದರು.
ಶಶಿತರೂರ್ ಅವರು ಬಿಜೆಪಿಗೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ನೀವು ಬಿಜೆಪಿಗೆ ಹತ್ತಿರವಾಗುತ್ತಿದ್ದೀರಿ ಎಂಬ ಚರ್ಚೆ ಆರಂಭವಾಗಿದೆ, “ಕಾಂಗ್ರೆಸ್ ಪಕ್ಷ ಶ್ರೇಷ್ಠವಾದ ಪಕ್ಷ. ಇದಕ್ಕೆ ತನ್ನದೇ ಆದ ಇತಿಹಾಸವಿದೆ. ಕಾಂಗ್ರೆಸ್ ಪಕ್ಷದ ತತ್ವ, ಸಂಸ್ಕೃತಿಯೇ ಬೇರೆ. ಕೆಲವರು ಆತುರದಲ್ಲಿ ನಿರ್ಧಾರ ಕೈಗೊಳ್ಳಬಹುದು. ಪಕ್ಷಕ್ಕೆ ಏನು ಆಗುವುದಿಲ್ಲ. ನೂರು ನಾಯಕರು ಬರುತ್ತಾರೆ, ಹೋಗುತ್ತಾರೆ. ಆದರೆ ಕಾಂಗ್ರೆಸ್ ಪಕ್ಷ ಸದಾ ಇರುತ್ತದೆ. ಶಶಿ ತರೂರ್ ಅವರು ಕೇಂದ್ರದ ಮಾಜಿ ಸಚಿವರಾಗಿದ್ದು, ಅವರು ಕಾಂಗ್ರೆಸ್ ಪಕ್ಷದ ಆಸ್ತಿ. ಎಲ್ಲರೂ ಒಗ್ಗಟ್ಟಾಗಿ ಹೋಗುತ್ತೇವೆ. ನನ್ನನ್ನು ಇನ್ನು ಸಮರ್ಥವಾಗಿ ಬಳಸಿಕೊಳ್ಳಿ ಎಂಬುದಷ್ಟೇ ಅವರ ಬೇಡಿಕೆ. ಅದರ ಹೊರತಾಗಿ ಬೇರೇನೂ ಇಲ್ಲ” ಎಂದು ತಿಳಿಸಿದರು.