ದುಷ್ಟರ ಸಂಹಾರ ಆಗಬೇಕು ಅದರಿಂದ ದೇಶ, ರಾಜ್ಯ ಮತ್ತು ಪಕ್ಷಕ್ಕೆ ಒಳ್ಳಯದಾಗುತ್ತದೆ’ ಇದು ಬಿಜೆಪಿ ಹಿರಿಯ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಈ ಹೇಳಿಕೆಗೆ ಹಲವಾರು ಅರ್ಥಗಳು ಇವೆ,ಇನ್ನು ಅವರೇ ಹೇಳುವ ರೀತಿ ಜೈಲಿಗೆ ಹೋಗಿಬಂದ ಯಡಿಯೂರಪ್ಪ ಮತ್ತೇ ಜೈಲಿಗೆ ಹೋಗಬಾರದು ಎಂಬುದು ನಮ್ಮ ಕಾಳಜಿ ಎನ್ನುವ ಮುಂದುವರೆದ ಹೇಳಿಕೆಗಳಿಗೆ ನಾನಾಅರ್ಥಗಳು ಮೂಡುತ್ತವೆ.
ಇದು ಹೇಳುವ ಒಂದು ದಿನ ಮುಂಚೆ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಯೋಗೇಶ್ವರ್ ಅವರು ಭೇಟಿ ಮಾಡಿದ್ದು ಕೂಡ ಕುತೂಹಲ ಮೂಡಿಸಿದೆ, ದೇಹಲಿಗೆ ಹೋಗಿ ಬಂದು ಅಲ್ಲಿ ಪರೀಕ್ಷೆ ಬರೆದಿದ್ದೇನೆ ಇನ್ನೇನು ಫಲಿತಾಂಶ ಬರುತ್ತದೆ ಎಂದು ಹೇಳಿದ ಯೋಗೇಶ್ವರ್ ಅವರು ಯತ್ನಾಳ್ ಭೇಟಿ ಒಂದಿಷ್ಟು ಬೆಳವಣಿಗೆಗಳಿಗೆ ಸಾಕ್ಷಿಯಾಗಿವೆ.
ಕಳೆದ ಒಂದು ತಿಂಗಳಿನಿಂದ ಮೌನವಾಗಿಯೇ ಇದ್ದ ಯತ್ನಾಳ್ ಇದ್ದಕ್ಕಿದ್ದಂತೆ ಮೌನಮುರಿದು ಮತ್ತೆ ಆಡಿರುವ ಮಾತು ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ ದುಷ್ಟರ ಸಂಹಾರ ಎನ್ನುವುದನ್ನು ಸ್ಪಷ್ಟವಾಗಿಯೇ ಬಿಎಸ್‌ವೈ ಪತನವಾಗಲಿದೆ ಎನ್ನುವ ಮತ್ತೊಂದು ಚರ್ಚೆಗೆ ಮುನ್ನಡಿ ಬರೆದಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಯೋಗೇಶ್ವರ್ ಅವರು ಭೇಟಿಯಾದ ನಂತರ ಈ ಮಾತುಗಳಿಗೆ ಸಾಕಷ್ಟು ಒಳಾರ್ಥಗಳು ಗೂಢಾರ್ಥಗಳು ಸೇರಿಕೊಂಡಿವೆ ವಿರೋಧಿಗೆ ಪರೋಕ್ಷವಾಗಿ ತಿವಿದ ಈ ಮಾತು ಬಿಎಸ್‌ವೈ ಗೆ ಅರ್ಥವಾಗಿರುತ್ತದೆ.
“ಹಿಂದಿನ ಇತಿಹಾಸ ತೆಗೆದುನೋಡಿ, ಹಾಲಿ ಮುಖ್ಯಮಂತ್ರಿ ಜೈಲಿಗೆ ಹೋದ ಉದಾಹರಣೆಗಳಿವೆ. ರಾಜಾಹುಲಿ ಅಂತ ಹೊಗಳಬೇಡಿ. ಯಾರು ಯಾರು? ಜೈಲಿಗೆ ಹೋಗಿದ್ದರು ಪಟ್ಟಿ ತೆಗೆಯಿರಿ. ಪ್ರಧಾನಿ ಮೋದಿ ಅವರಿಂದ ಭವಿಷ್ಯದ ಭಾರತ ನಿರ್ಮಾಣವಾಗುತ್ತಿದೆ, ಇಲ್ಲಿ ಭ್ರಷ್ಟಾಚಾರಕ್ಕೆ ನಮ್ಮ ಪಕ್ಷ ಯಾವತ್ತೂ ಬಿಡಲ್ಲ. ಆದರೆ ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಕೌರವರ ನಾಶ ಹೇಗಾಯಿತು? ದುಷ್ಟರಿಗೆ ಏನು ಶಿಕ್ಷೆಯಾಗುತ್ತದೆ ಎಂಬುದು ಮುಂದೆ ಗೊತ್ತಾಗುತ್ತದೆ.” ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಎಚ್ಚರಿಸಿದ್ದಾರೆ. ಆ ಮೂಲಕ ನಾಯಕತ್ವ ಬದಲಾವಣೆ ವಿಚಾರ ಮುಗಿದ ಅದ್ಯಾಯವಲ್ಲ ಎಂಬುದನ್ನು ಒತ್ತಿ ಹೇಳಿದ್ದಾರೆ.
ಹೊರಗೆ ’ಜೈ’ ಒಳಗೆ ’ಬೈ’
“ಕೆಲವರು ಸಿಎಂ ಯಡಿಯೂರಪ್ಪ ಅವರೇ ನಮ್ಮ ನಾಯಕ ಅಂತ ಹೊರಗಡೆ ಹೇಳುತ್ತಾರೆ. ಅದೇ ಒಳಗಡೆ ಯಾವಾಗ ಬೇಕಾದರೂ ಯಡಿಯೂರಪ್ಪ ಅವ್ರನ್ನು ಬದಲಾವಣೆ ಮಾಡಿ ಅಂತಾರೆ. ಆದಷ್ಟು ಬೇಗ ಬದಲಾಯಿಸಿ ಅಂತಾ ಒಳಗೋಗಿ ಹೇಳುತ್ತಾರೆ, ಹೊರಗೆ ಬಂದು ಜೈಕಾರ ಹಾಕುತ್ತಾರೆ. ಆದರೆ ಆ ತರಹ ನಾನಲ್ಲ.” ಎಂದು ಮತ್ತೊಮ್ಮೆ ನಾಯಕತ್ವ ಬದಲಾವಣೆ ಕುರಿತು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ರಾಜ್ಯಕ್ಕೆ ಅರುಣ್ ಸಿಂಗ್ ಅವರ ಭೇಟಿಯನ್ನೇ ಲೇವಡಿ ಮಾಡಿದ್ದಾರೆ. “ಅವರು ಬರುವಾಗಲೇ ಗೊತ್ತಿತ್ತು, ಅವರು ಏನು ಹೇಳುತ್ತಾರೆ ಅಂತ. ವಿಮಾನ ನಿಲ್ದಾಣದಲ್ಲಿಯೇ ಹೇಳಿಕೊಂಡು ಬಂದರು. ಅವರೇನು ಪ್ರಧಾನಿ ಮಂತ್ರಿನಾ? ಆ ಮಟ್ಟಕ್ಕೆ ಬಿಲ್ಡಪ್ ಕೊಡುವುದುದಕ್ಕೆ? ವಿಮಾನ ನಿಲ್ದಾಣದಿಂದ ಬಂದಿದ್ದೇನು? ಕುಮಾರಕೃಪಾ ಅತಿಥಿಗೃಹದಲ್ಲಿ ಕೈ ಬೀಸಿದ್ದೇನು? ಇದೆಲ್ಲ ಗೊತ್ತಿದ್ದೇ ಅವರನ್ನು ಭೇಟಿ ಮಾಡಲಿಲ್ಲ” ಎಂದು ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನೇ ಲೇವಡಿ ಮಾಡಿದ್ದಾರೆ.
’ಪಂಚಮಸಾಲಿ’ ಹೋರಾಟಲ್ಲಿ ’ಬಿರುಕು’?
“ಪಂಚಮಸಾಲಿ ಮೀಸಲಾತಿ ಹೋರಾಟ ಹಾಗೂ ಪಂಚಮಸಾಲಿ ಸಮುದಾಯದಲ್ಲಿ ಮೂರನೇ ಪೀಠ ಸ್ಥಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಅದೇ ಸಮುದಾಯದ ಸಚಿವ ಮುರುಗೇಶ್ ನಿರಾಣಿ ಅವರ ಮೇಲೆ ಯತ್ನಾಳ್ ಹರಿಹಾಯ್ದಿದ್ದಾರೆ. “ಪಂಚಮಸಾಲಿ ಹೋರಾಟದಲ್ಲಿ ನಗ್ನ ಪ್ರದರ್ಶನ ಮಾಡಿದ ರಾಜಕಾರಣಿ ಸಂಪೂರ್ಣ ನಗ್ನರಾಗಿದ್ದಾರೆ. ಒಬ್ಬ ರಾಜಕಾರಣಿ ತಮ್ಮ ರಾಜಕೀಯಕ್ಕೆ ಪಂಚಮಸಾಲಿ ಮೀಸಲಾತಿ ಹೋರಾಟ ಉಪಯೋಗಿಸಿಕೊಂಡಿದ್ದಾರೆ. ಒಬ್ಬ ಸಚಿವ, ದೊಡ್ಡ ಉದ್ಯಮಿ ಅದರ ಹಿಂದೆ ಇದ್ದಾರೆ” ಎಂದು ತಮ್ಮದೆ ಸಮುದಾಯಕ್ಕೆ ಸೇರಿದ ಸಚಿವ ಮುರುಗೇಶ್ ನಿರಾಣಿ ಅವರ ಮೇಲೆ ಹರಿಹಾಯ್ದಿದ್ದಾರೆ. ಯತ್ನಾಳ್ ಹೇಳಿಕೆಗೆ ನಿರಾಣಿ ಅವರೂ ತಿರುಗೇಟು ಕೊಟ್ಟಿದ್ದಾರೆ.
ಹೈಕಮಾಂಡ್ ತೀರ್ಮಾನಕ್ಕೆ ಬದ್ದ!
ಬಿಜೆಪಿ ಹಿರಿಯ ಶಾಸಕ ಹಾಗೂ ತಮ್ಮದೆ ಸಮುದಾಯದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾಡಿದ್ದ ಆರೋಪಗಳಿಗೆ ಸಚಿವ ಮುರುಗೇಶ್ ನಿರಾಣಿ ಅವರು ತಿರುಗೇಟು ಕೊಟ್ಟಿದ್ದಾರೆ. “ಪಂಚಮಸಾಲಿ ಹೋರಾಟ ಮಾತ್ರವಲ್ಲ ಇಡೀ ವೀರಶೈವ ಲಿಂಗಾಯತ ಸಮುದಾಯದ ಸಮಸ್ಯೆಗಳ ಬಗ್ಗೆ ನಾವು ಹೋರಾಟ ಮಾಡಬೇಕಾಗುತ್ತದೆ. ಕೇವಲ ಪಂಚಮಸಾಲಿ ಮಾತ್ರವಲ್ಲ, ಇಡೀ ವೀರಶೈವ ಲಿಂಗಾಯತ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದ ಜನರಿದ್ದಾರೆ. ಇಡೀ ಸಮುದಾಯದಲ್ಲಿ ಸಣ್ಣ ಉಪಜಾತಿಗಳಿವೆ. ಅವರೆಲ್ಲರ ಮೇಲೆ ನಾವು ಅಧಿಕಾರದಲ್ಲಿ ಇರುವವರು ಗಮನ ಹರಿಸಬೇಕು. ನಾವು ಸರ್ಕಾರದಲ್ಲಿ ಇರುವವರು ಕೇವಲ ಒಂದು ಸಮುದಾಯಕ್ಕೆ ಮಾತ್ರ ಹೋರಾಟ ಮಾಡಿದರೆ ಸಾಕಾಗುವುದಿಲ್ಲ. ಮುಂದೆ ಅಗತ್ಯ ಬಿದ್ದರೆ ಪಂಚಮಸಾಲಿ ಹೋರಾಟಕ್ಕೆ ಜೊತೆಗೂಡುತ್ತೇನೆ. ಈಗ ಯಾರೋ ಮಾತನಾಡಿದರೂ ಅಂತ ಉತ್ತರ ಕೊಡೋದಕ್ಕೆ ಹೋಗಲ್ಲ” ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮೇಲೆ ಹರಿಹಾಯ್ದಿದ್ದಾರೆ.
ಜೊತೆಗೆ “ಹೈಕಮಾಂಡ್ ಏನೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ನಾವು ಬದ್ದ. ನನಗೆ ಇರುವ ಮಾಹಿತಿ ಪ್ರಕಾರ ಯಡಿಯೂರಪ್ಪ ಅವರೇ ಇನ್ನೂ ಎರಡು ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ. ಸಿಎಂ ಯಡಿಯೂರಪ್ಪ ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ. ಶಾಸಕ ಯತ್ನಾಳ್ ಆಗಲಿ, ಇನ್ನೊಬ್ಬರಾಗಲಿ ಹೇಳಿದ ಮಾತಿಗೆ ನಾನು ಉತ್ತರ ಕೊಡುವುದಿಲ್ಲ” ಎಂದು ಸಚಿವ ನಿರಾಣಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದೀಗ ನಾಯಕತ್ವ ಬದಲಾವಣೆಯಿಂದ ಚರ್ಚೆ ’ಪಂಚಮಸಾಲಿ ಸಮುದಾಯದ’ಲ್ಲಿ ಬಿರುಕು ಮೂಡಿಸಿದೆ. ಹೀಗಾಗಿ ಇದು ಮುಂದೆ ಯಾವ ತಿರುವುದು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.
ಮತ್ತೇ ಚರ್ಚೆಗೆ ಮುನ್ನುಡಿ
ಆದರೆ ಬಂಡಾಯ, ಅತೃಪ್ತಿಗಳು ಇನ್ನೂ ಮನೆಮಾಡಿವೆ ಅನ್ನುತ್ತಿದೆ ಇಂದಿನ ದಿಢೀರ್? ಬೆಳವಣಿಗೆಗಳು
ಅತ್ತ ರಾಜಧಾನಿ ಬೆಂಗಳೂರಿಗೆ ಬಂದಿದ್ದ ಶಾಸಕ ರಮೇಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ಹಾರಿದ್ದಾರೆ. ರಮೇಶ್ ಮುಂಬೈ ಪ್ಲ್ಯಾನ್ ಚೇಂಜ್ ಮಾಡಿ,ಬೆಗಳೂರಿಗೆ ಬಂದಿದ್ದು ಯಾಕೆ..? ಯಾರ ಸಲಹೆಯಂತೆ ದೆಹಲಿಗೆ ಹೋದ್ರು ರಮೇಶ್..? ಇಲ್ಲಿ ಬೆಂಗಳೂರಿನಲ್ಲಿ ಇನ್ನೂ ಎರಡು ದಿನ ಉಳಿಯುವ ಪ್ರೋಗ್ರಾಮ್ ಹಾಕಿಕೊಂಡಿದ್ದ ರಮೇಶ್? ಜಾರಕಿಹೊಳಿ ದಿಢಿರನೆ ದಿಲ್ಲಿಗೆ ಹಾರಿದ್ದೇಕೆ ಎಂಬುದಕ್ಕೆ ತಕ್ಷಣ ಉತ್ತರ ಇಲ್ಲವಾಗಿದೆ
ಈ ಮಧ್ಯೆ, ಸಚಿವ ಸಿ.ಪಿ. ಯೋಗೇಶ್ವರ್ ಅವರು ಶಾಸಕ ಬಸನಗೌಡ ಯತ್ನಾಳ್ ಅವರನ್ನು ಭೇಟಿಯಾಗಿ ರಹಸ್ಯ ಮಾತುಕತೆ ನಡೆಸಿದ್ದಾರೆ. ಭೇಟಿ ವೇಳೆ ನಡೆದ ಭೊಜನದ ವೇಳೆ ಬಿಜೆಪಿ ಮುಖಂಡರಾದ ಚಿತ್ರ ನಟಿ ಶ್ರುತಿ ಹಾಗೂ ಇತರರು ಹಾಜರಿದ್ದದ್ದು ಗಮನಾರ್ಹವಾಗಿತ್ತು. ಭೇಟಿಯ ವೇಳೆ ಸಚಿವ ಯೊಗೇಶ್ವರಗೆ ಬಸನಗೌಡ ಯತ್ನಾಳ್ ಅವರು ಹೂಗುಚ್ಚ ನೀಡಿ ಸ್ವಾಗತಿಸಿದರು. ಕೆಲ ಕಾಲ ಶಾಸಕ ಯತ್ನಾಳ್ ಹಾಗೂ ಸಚಿವ ಯೋಗೇಶ್ವರ ರಹಸ್ಯವಾಗಿ ಚರ್ಚೆ ನಡೆಸಿದರು.
ಈ ಬೆವಣಿಗೆಗಳ ಹಿನ್ನೆಲೆಯಲ್ಲಿ ಸಿಎಂ ಬದಲಾವಣೆ ಕುರಿತು ತೆರೆಮರೆಯಲ್ಲಿ ನಡೆಯುತ್ತಿದೆಯಾ ಪ್ಲಾನ್? ಸಿಎಂ ವಿರೋಧಿಗಳನ್ನು ಒಂದುಗೂಡಿಸ್ತಿದ್ದಾರಾ ಸಚಿವ ಸಿ ಪಿ ಯೋಗೇಶ್ವರ? ಎಂಬ ಪ್ರಶ್ನೆ ಬಿಜೆಪಿಯನ್ನು ಮತ್ತೆ ಕಾಡತೊಡಗಿದೆ.
ಕಲಬುರಗಿಯಿಂದ ವಿಜಯಪುರ ಜಿಲ್ಲೆಗೆ ಆಗಮಿಸಿದ ಪ್ರವಾಸೋದ್ಯಮ ಇಲಾಖೆ ಸಚಿವ ಯೋಗೇಶ್ವರ ಅವರು ಸಿಎಂ ಬಿಎಸ್ ವೈ ಹಾಗೂ ವಿಜಯೇಂದ್ರ ವಿರುದ್ಧ ಬಂಡಾಯ ಎದ್ದಿರುವ ಶಾಸಕ ಯತ್ನಾಳ್ ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ವಿಜಯಪುರ ನಗರದ ಹೊರವಲಯದಲ್ಲಿರುವ ಖಾಸಗಿ ಹೊಟೇಲೊಂದರಲ್ಲಿ ಯತ್ನಾಳ್ ಹಾಗೂ ಯೋಗೇಶ್ವರ ಭೇಟಿ ನಡೆದಿದೆ