ರಾಮನಗರ,ಸೆ,27: ಕೆಲವರು ಜೆಡಿಎಸ್ ಪಕ್ಷವನ್ನು 30 ಸೀಟುಗಳ ಪಕ್ಷ ಎಂದು ಲಘುವಾಗಿ ಮಾತನಾಡುತ್ತಿದ್ದಾರೆ. ಅಂಥವರಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಗುಡುಗಿದರು.
ಬಿಡದಿಯ ತೋಟದ ಮನೆಯಲ್ಲಿ ಆಯೋಜಿಸಲಾಗಿದ್ದ ‘ಜನತಾ ಪರ್ವ 1.O’ ಹಾಗೂ, ‘ಮಿಷನ್ -123’ ಕಾರ್ಯಗಾರದಲ್ಲಿ ಪ್ರಚಲಿತ ರಾಜಕೀಯ ಸನ್ನಿವೇಶದ ಕುರಿತು ಮಾತನಾಡಿದರು ಅವರು.
ಜೆಡಿಎಸ್ ಪಕ್ಷದಿಂದ ರಾಜಕೀಯವಾಗಿ ಬೆಳೆದವರು ಕೊನೆಗೆ ರಾಜಕೀಯ ಬದುಕು ಕೊಟ್ಟ ಪಕ್ಷವನ್ನೇ ಮುಗಿಸಲು ಹುನ್ನಾರ ನಡೆಸಿದವರಿಗೆ ತಕ್ಕ ಪಾಠ ಕಲಿಸುವುದಾಗಿ ಅವರು ಹೇಳಿದರು.
ಕಾರ್ಯಗಾರದಲ್ಲಿ ಭಾಗಿಯಾಗಿದ್ದ ಹಾಲಿ ಶಾಸಕರು, ಮಾಜಿ ಶಾಸಕರು, ಕಳೆದ ಚುನಾವಣೆಯಲ್ಲಿ ಸೋತಿದ್ದ ಅಭ್ಯರ್ಥಿಗಳು ಸೇರಿ 200ಕ್ಕು ಹೆಚ್ಚು ಪ್ರತಿನಿಧಿಗಳಿಗೆ 2023 ದಿಕ್ಸೂಚಿ ನಿಗದಿ ಮಾಡಿ ಅವರು ಹೇಳಿದ್ದಿಷ್ಟು.
ಜೆಡಿಎಸ್ 30 ಸೀಟಿನ ಪಕ್ಷವಲ್ಲ. ಹಾಗೆಂದು ಹಾದಿ ಬೀದಿಯಲ್ಲಿ ಹೇಳಿಕೊಂಡು ಓಡಾಡುತ್ತಿರುವ ಸಿದ್ದರಾಮಯ್ಯರಂಥ ನಾಯಕರಿಗೆ ಉತ್ತರ ಕೊಡುವ ಕಾಲ ದೂರವಿಲ್ಲ. 30 ಸೀಟಿನ ಪಕ್ಷ ಎಂದವರು ರಾಜಕೀಯವಾಗಿ ಮೂರಾಬಟ್ಟೆ ಆಗುವುದು ಗ್ಯಾರಂಟಿ.
ಕಾಂಗ್ರೆಸ್ ನಮ್ಮ ಜೆಡಿಎಸ್ ಬೆನ್ನಿಗೆ ಇರಿಯುವ ಕೆಲಸ ಮಾಡಿದೆ. ಸಮ್ಮಿಶ್ರ ಸರಕಾರ ರಚನೆಯಾದ ಮೇಲೆಯೂ ನಮ್ಮ ಪಕ್ಷವನ್ನು ಮುಗಿಸಲು ಆ ಪಕ್ಷದ ಕೆಲ ನಾಯಕರು ದುಷ್ಪ್ರಯತ್ನ ನಡೆಸಿದರು. ಅದು ಫಲಕಾರಿ ಆಗದಿದ್ದಾಗ ಸರಕಾರವನ್ನು ಬೀಳಿಸಿದರು.
ಧರ್ಮಸಿಂಗ್ ಸರಕಾರ ಇದ್ದಾಗಲೂ ಪಕ್ಷವನ್ನು ಒಡೆಯುವ ಪ್ರಯತ್ನ ನಡೆಯಿತು. ಪಕ್ಷವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಬಿಜೆಪಿ ಜತೆ ಕೈ ಜೋಡಿಸಿ ಸರಕಾರ ರಚನೆ ಮಾಡಲಾಯಿತು. ಆದರೆ, ಆ ಪಕ್ಷಕ್ಕೆ ತನ್ನ ಹಿಡನ್ ಅಜೆಂಡಾವನ್ನು ಜಾರಿ ಮಾಡಲು ನಾವು ಅವಕಾಶ ನೀಡಲಿಲ್ಲ.
ಜೆಡಿಎಸ್ ಅವರಿವರ ಜತೆ ಹೋಗಿ ಸರಕಾರ ಮಾಡುತ್ತದೆ ಎಂದು ಒಬ್ಬರು ಹೇಳಿಕೊಂಡಿದ್ದಾರೆ. ಆದರೆ, ರಾಜ್ಯದಲ್ಲಿ ಮತ್ತು ದೇಶದಲ್ಲಿ ಬಿಜೆಪಿ ಬಲವಾಗಿ ಬೆಳೆಯಲು ಕಾಂಗ್ರೆಸ್ ಪಕ್ಷವೇ ಕಾರಣ. ಆ ಪಕ್ಷ ಕೇಂದ್ರ ಮತ್ತು ರಾಜ್ಯದಲ್ಲಿ ನಿರಂತರವಾಗಿ ಇಟ್ಟ ತಪ್ಪು ಹೆಜ್ಜೆಗಳ ಕಾರಣ ಬಿಜೆಪಿ ಬೆಳೆಯುತ್ತಾ ಹೋಯಿತು.
ಕರ್ನಾಟಕದಲ್ಲಿ ಕಾಂಗ್ರೆಸ್ ಬೇರುಗಳು ಸಡಿಲವಾಗುತ್ತಿವೆ. ದೇಶದ ಉದ್ದಗಲಕ್ಕೂ ನಶಿಸಿ ಹೋಗುತ್ತಿರುವಂತೆ ರಾಜ್ಯದಲ್ಲಿಯೂ ನಶಿಸುತ್ತಿದೆ. 2023ರ ಚುನಾವಣೆ ಆ ಪಕ್ಷಕ್ಕೆ ಚರಮಗೀತೆ ಹಾಡಲಿದೆ.
ದಕ್ಷಿಣ ಭಾರತದಲ್ಲಿ ಈಗಾಗಲೇ ತೆಲಂಗಾಣ, ಆಂಧ್ರ ಪ್ರದೇಶ, ತಮಿಳ್ನಾಡು, ಕೇರಳದಲ್ಲಿ ಕಾಂಗ್ರೆಸ್ ನಶಿಸಿದೆ. ಕರ್ನಾಟಕದಲ್ಲಿ ಅದು ಅಂತ್ಯಕಾಲದಲ್ಲಿದೆಎಂದು ಹೇಳಿದರು
ಅಷ್ಟೇ ಅಲ್ಲ, ನರೇಂದ್ರ ಮೋದಿ ಅವರು ಪ್ರಧಾನಿಯಾಗಲು ನೇರ ಕಾರಣ ಕಾಂಗ್ರೆಸ್ ಪಕ್ಷ. ಆದರೆ, ಜೆಡಿಎಸ್ ಪಕ್ಷವನ್ನು ಆ ಪಕ್ಷ ಬಿಜೆಪಿಯ ಬೀ ಟೀಮ್ ಎಂದು ಅಪಪ್ರಚಾರ ಮಾಡುತ್ತಿದೆ. ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಇತರೆ ಪಕ್ಷಗಳ ಮೇಲೆ ಕೆಸರು ಎರಚುತ್ತಿದೆ.ಅಯೋಧ್ಯೆಯಲ್ಲಿ ಪೂಜೆಗೆ ಅವಕಾಶ ಮಾಡಿಕೊಟ್ಟವರು ಯಾರು? ಮಸೀದಿ ನೆಲಸಮಕ್ಕೆ ಅವಕಾಶ ನೀಡಿದವರು ಯಾರು? ಬಿಜೆಪಿ ಬೆಳೆಯಲು ಕಾರಣ ಯಾರು? ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಬೇಕು.
ಕಾಂಗ್ರೆಸ್ ಪಕ್ಷಕ್ಕೆ ಮಂದಿನ ಚುನಾವಣೆಗೆ ವಿಷಯವೇ ಇಲ್ಲ. ಅನ್ನ ಭಾಗ್ಯ, ಜಾತಿ ಗಣತಿ ಬಿಟ್ಟರೆ ಸಿದ್ದರಾಮಯ್ಯ ಅವರ ಬತ್ತಳಿಕೆಯಲ್ಲಿ ಬೇರೆ ಅಸ್ತ್ರಗಳೆ ಇಲ್ಲ. ಅವರಿಗೆ ಜೆಡಿಎಸ್ ಬಗ್ಗೆ ಮಾತನಾಡದೆ ಇದ್ದರೆ ನಿದ್ದೆಯೇ ಬರುವುದಿಲ್ಲ. ಹೀಗಾಗಿ ಆ ಪಕ್ಷದ ಬಗ್ಗೆ ನಮಗೆ ಭಯವಿಲ್ಲ ಎಂದರು.
ಇನ್ನಾದರೂ ಸಿದ್ದರಾಮಯ್ಯ ಅವರು ಜೆಡಿಎಸ್ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದರೆ ಉತ್ತಮ. ಇಲ್ಲವಾದರೆ ಅದರ ಫಲ ಅನುಭವಿಸಬೇಕಾಗುತ್ತದೆ. ಮುಂದಿನ ಚುನಾವಣೆಯಲ್ಲಿ ಜನತಾ ಗಾಳಿ ಬೀಸುವುದು ಖಚಿತ. ನಾವು ಯಾವುದೇ ಕಾರಣಕ್ಕೂ ಮೈ ಮರೆಯುದಿಲ್ಲ. ಜನರಿಗಾಗಿ ನಾವು ಜನತಾ ಸರಕಾರವನ್ನು ತರೋಣ ಎಂದರು.