ಚಿತ್ರನಟರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಡಿಕೆಶಿ ವಿರುದ್ಧ ಹೆಚ್ಡಿಕೆ ಕಿಡಿ
by-ಕೆಂಧೂಳಿ
ಕೊಪ್ಪಳ,ಮಾ.೨- ಸಿನಿಮಾ ರಂಗದವರ ಬಗ್ಗೆ ನನಗೆ ಬಹಳ ಕೋಪವಿದೆ. ಕೆಲಸವಿದ್ದಾಗ ಮಾತ್ರ ಅವರು ನಮ ಬಳಿ ಬರುತ್ತಾರೆ ಹೇಗೆ ಬೋಲ್ಟು ನಟ್ ಟೈಟ್ ಮಾಡುವುದು ನಮಗೆ ಗೊತ್ತೆಂದು ಚಿತ್ರರಂಗದವರ ವಿರುದ್ಧ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರ ಬೆದರಿಕೆ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಹಮಿಕೊಂಡಿದ್ದ ಮೇಕೆದಾಟು ಯೋಜನೆಗಾಗಿ ನಡೆದ ಪಾದಯಾತ್ರೆಗೆ ಯಾರು ಬೆಂಬಲ ಕೊಟ್ಟಿದ್ದಾರೋ, ಬಿಟ್ಟಿದ್ದಾರೋ ಎಂಬುದು ಮುಖ್ಯವಲ್ಲ. ಅಧಿಕಾರ ನಡೆಸಲು ನಾಡಿನ ಜನರು ೧೩೮ ಸ್ಥಾನ ಕೊಟ್ಟಿದ್ದಾರೆ. ಅದರ ಸದ್ಬಳಕೆ ಮಾಡಿ ಕೆಲಸ ಮಾಡಲಿ ಎಂದು ಅವರು ಹೇಳಿದರು.
ನಟ್ಟು, ಬೋಲ್ಟ್ ಸಡಿಲವಾದರೆ, ಅವುಗಳನ್ನು ಸರಿಪಡಿಸಲು ಹಲವು ತಜ್ಞರಿದ್ದಾರೆ. ರಾಜ್ಯದ ಜನ ಸಹಕಾರ ನೀಡಿದ್ದಾರೆ. ಅಧಿಕಾರ ಅವರ ಕೈಯಲ್ಲಿ ಇದೆ. ಇವರೇನು ಮಾಡಬೇಕೋ ಅದನ್ನು ಮಾಡಲಿ ಎಂದು ವಾಗ್ದಾಳಿ ನಡೆಸಿದರು.ಜನರು ಕೊಟ್ಟಿರುವ ಅಧಿಕಾರ ಬಳಸಿ ಜನರ ಬದುಕಿನ ಜೊತೆ ಚೆಲ್ಲಾಟವಾಡಬಾರದು. ಜನರು ಕೊಟ್ಟಿರುವ ಅಧಿಕಾರವನ್ನು ಕೆಲಸ ಮಾಡುವ ನಿಟ್ಟಿನಲ್ಲಿ ಉಪಯೋಗಿಸಲು ಸರ್ಕಾರಗಳು ನಡೆಯಲಿ ಎಂದು ಅವರು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಏನು ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ಹಲವು ರೀತಿಯ ಬೆಳವಣಿಗೆಗಳು ನಡೆಯುತ್ತಿವೆ. ರಾಜ್ಯದ ಅಭಿವೃದ್ಧಿ ಬಗ್ಗೆ ಆಡಳಿತಾರೂಢ ಕಾಂಗ್ರೆಸ್ಗೆ ಚಿಂತೆ ಇಲ್ಲ. ಬರೀ ರಾಜಕೀಯ ವಿಚಾರಗಳು ರಾಜ್ಯದಲ್ಲಿ ಚರ್ಚೆಯಾಗುತ್ತಿವೆ. ಇವರ ಬಗ್ಗೆ ಅವರು, ಅವರ ಬಗ್ಗೆ ಇವರು ಮಾತನಾಡುತ್ತಿದ್ದಾರೆ. ಅಭಿವೃದ್ಧಿ ಮಾತ್ರ ಆಗುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಜನರ ಸಮಸ್ಯೆಗಳ ಬಗ್ಗೆ ಸ್ಪಂದನೆ ಇಲ್ಲ. ಕಳೆದ ವರ್ಷ ಹಲವಾರು ಭಾಗಗಳಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಬೆಳೆ ನಷ್ಟವಾಗಿದೆ. ಬೆಳೆ ನಷ್ಟಕ್ಕೆ ರೈತರಿಗೆ ಪರಿಹಾರ ಕೊಟ್ಟಿಲ್ಲ ಎಂದು ಹೇಳಿದರು.ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸಚಿವ ಜಮೀರ್ ಅಹಮದ್ ಖಾನ್ ಅವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಯಾರು, ಏನೆಲ್ಲಾ ಆಗುತ್ತಾರೆ ಎಂಬುದನ್ನು ಕಾಲವೇ ನಿರ್ಧಾರ ಮಾಡಲಿದೆ ಎಂದು ಮಾರ್ಮಿಕವಾಗಿ ನುಡಿದರು.

Advatisement
ನಾನು ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ೯ ಕೈಗಾರಿಕಾ ಕ್ಲಸ್ಟರ್ ಸ್ಥಾಪಿಸಲು ಉದ್ದೇಶಿಸಿದ್ದೆ. ಆ ಮೂಲಕ ಒಂದು ಲಕ್ಷ ಯುವಕರಿಗೆ ಉದ್ಯೋಗ ದೊರಕಿಸುವುದು ಉದ್ದೇಶವಾಗಿತ್ತು. ಆಟಿಕೆಗಳ ಉದ್ಯಮ ವಿಶ್ವದಲ್ಲಿ ದೊಡ್ಡದಾಗಿ ಬೆಳೆಯುತ್ತಿದೆ. ಈ ಬಗ್ಗೆ ವ್ಯಾಪಕ ಚರ್ಚೆ ವಿಶ್ವದಲ್ಲಿ ನಡೆಯುತ್ತಿದೆ. ಚೀನಾ ಸಿಂಹ ಪಾಲು ಪಡೆಯುತ್ತಿದೆ.
ಇದೇ ಕಾರಣಕ್ಕೆ ಕಾಂಪಿಟ್ ವಿತ್ ಚೀನಾ ಯೋಜನೆ ತರಲು ಉದ್ದೇಶಿಸಿದ್ದೆ ಎಂದು ಅವರು ಹೇಳಿದರು.ಕೈಗಾರಿಕೆ ಸ್ಥಾಪನೆಯಾಗುವಾಗ ಪರಿಸರಕ್ಕೆ ಹಾನಿಯಾಗದಂತೆ, ಶ್ರೀಸಾಮಾನ್ಯರ ಬದುಕು ಹಾಗೂ ಆರೋಗ್ಯಕ್ಕೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು. ಇಲ್ಲಿನ ಸ್ಥಳೀಯ ಕಂಪನಿ ಹಾಗೂ ಸರ್ಕಾರದ ನಡುವೆ ಒಪ್ಪಂದವಾಗಿದೆ. ಜನರಿಗೆ ತೊಂದರೆಯಾಗದ ರೀತಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.