ಚಾಣಕ್ಯ ವಿ.ವಿ.ಸ್ಥಾಪನೆಗೆ ನೀಡಿರುವ ಭೂಮಿ ವಾಪಾಸ್ ಪಡೆಯಲು ಸಿದ್ದು ಆಗ್ರಹ

Share

ಬೆಂಗಳೂರು,ಸೆ,22 : ಚಾಣಕ್ಯ ವಿಶ್ವವಿದ್ಯಾಲಯ ಸ್ಥಾಪನೆಗೆ ಸಂಬಂಧಿಸಿದಂತೆ ಸೆಂಡರ್ ಫಾರ್ ಎಜ್ಯುಕೇಷನ್ ಅಂಡ್ ಸೋಷಿಯಲ್ ಸ್ಟಡೀಸ್ ಸಂಸ್ಥೆಗೆ (ಸೆಸ್) ಕಡಿಮೆ ದರದಲ್ಲಿ ನೂರಾರು ಎಕರೆ ಭೂಮಿ ನೀಡುವ ತೀರ್ಮಾನವನ್ನು ಕೈ ಬಿಡುವಂತೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಆಗ್ರಹಿಸಿದರು.

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನೂರಾರು ಕೋಟಿ ರೂ. ಮೌಲ್ಯದ ಭೂಮಿಯನ್ನು ಕಡಿಮೆ ಬೆಲೆಗೆ ಪರಭಾರೆ ಮಾಡುವ ಸರ್ಕಾರದ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಇದರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಸೆಸ್ ಸಂಸ್ಥೆಯಲ್ಲಿರುವವ ಎಲ್ಲರೂ ಆರ್.ಎಸ್.ಎಸ್ ಗೆ ಸೇರಿದವರು. ಇದೊಂದು ಮನುವಾದಿಗಳ ಸಂಸ್ಥೆಯಾಗಿದ್ದು, ಈ ಸಂಸ್ಥೆ ವರ್ಣಾಶ್ರಮ ವ್ಯವಸ್ಥೆಯ ಪುನರ್ ಸ್ಥಾಪನೆಗೆ ಪ್ರಯತ್ನಿಸಲಿದೆ.‌

ನಿನ್ನೆ ನಡೆದ ವಿಧಾನಸಭಾ ಅಧಿವೇಶನದಲ್ಲಿ ಬಿಜೆಪಿ ಸರ್ಕಾರ ಆತುರಾತುರವಾಗಿ ಚಾಣಕ್ಯ ವಿಶ್ವವಿದ್ಯಾಲಯ ಸ್ಥಾಪನೆಗೆ ಸಂಬಂಧಿಸಿದ ಮಸೂದೆಯನ್ನು ಚರ್ಚೆಗೆ ಅವಕಾಶ ನೀಡದೆ, ಧ್ವನಿಮತದ ಮೂಲಕ‌ ಅಂಗೀಕರಿಸಿದೆ.

ಈ ಚಾಣಕ್ಯ ವಿಶ್ವವಿದ್ಯಾಲಯ ಸ್ಥಾಪಿಸಲು ಉದ್ದೇಶಿಸಿರುವುದು ಸೆಸ್ (ಸೆಂಟರ್ ಫಾರ್ ಎಜುಕೇಶನ್ ಎಂಡ್ ಸೋಷಿಯಲ್ ಸ್ಟಡೀಸ್) ಎಂಬ ಸಂಸ್ಥೆ. ಈ ಸಂಸ್ಥೆಯಲ್ಲಿರುವ ಎಲ್ಲರೂ ಆರ್.ಎಸ್.ಎಸ್ ನವರು.

ಸೆಸ್ ಸಂಸ್ಥೆ ಈ ವರೆಗೆ ಯಾವುದೇ ಶೈಕ್ಷಣಿಕ ಸಂಸ್ಥೆಯನ್ನು ನಡೆಸಿಲ್ಲ, ಜೊತೆಗೆ ವಿಶ್ವವಿದ್ಯಾಲಯ ಆರಂಭಿಸಲು ಬೇಕಾದ ಮೂಲಸೌಕರ್ಯ ಇವರಲ್ಲಿ ಇಲ್ಲ. ಯಾವ ಆಧಾರ ಮತ್ತು ಅರ್ಹತೆಯ ಮೇರೆಗೆ ವಿಶ್ವವಿದ್ಯಾಲಯ ಆರಂಭಿಸಲು ರಾಜ್ಯ ಸರ್ಕಾರ ಇವರಿಗೆ ಭೂಮಿ ನೀಡಿದೆ ಎಂದು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಬಿಜೆಪಿ ಸರ್ಕಾರ 26-04-2021 ರಲ್ಲಿ ಸಚಿವ ಸಂಪುಟ ಸಭೆ ನಡೆಸಿ, ಆ ಮೂಲಕ ನಿರ್ಣಯ ಕೈಗೊಂಡು ದೇವನಹಳ್ಳಿ ಬಳಿಯ ಹರಳೂರು ಗ್ರಾಮದಲ್ಲಿ ಏರೋಸ್ಪೇಸ್ ಹಾಗೂ ಡಿಫೆನ್ಸ್ ಇಂಡಸ್ಟ್ರಿ ಸ್ಥಾಪನೆಯ ಉದ್ದೇಶಕ್ಕಾಗಿ ವಶಪಡಿಸಿಕೊಂಡಿದ್ದ ಕೆ.ಐ.ಎ.ಡಿ.ಬಿ ಗೆ ಸೇರಿದ 116 ಎಕರೆ 16 ಗುಂಟೆ ಜಮೀನನ್ನು ಸೆಸ್ ಸಂಸ್ಥೆಗೆ ನೀಡಲು ಆದೇಶಿಸಿದೆ.

ಕೆ.ಐ.ಎ.ಡಿ.ಬಿ ಅವರು ರೈತರಿಂದ ಭೂಮಿ ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಎಕರೆಗೆ ರೂ. 1 ಕೋಟಿ 50 ಲಕ್ಷದಂತೆ ಒಟ್ಟು 116 ಎಕರೆಗೆ ರೂ.175 ಕೋಟಿ ಪರಿಹಾರ ನೀಡಿದ್ದಾರೆ. ಇದೇ ಜಮೀನನ್ನು ರಾಜ್ಯ ಸರ್ಕಾರ ಕೇವಲ ರೂ. 50 ಕೋಟಿಗೆ ಸೆಸ್ ಸಂಸ್ಥೆಗೆ ನೀಡಿದೆ. ಈ ಭೂಮಿಯ ಈಗಿನ ಮೌಲ್ಯ ಕನಿಷ್ಟ ರೂ. 300 ರಿಂದ 400 ಕೋಟಿಗಳಾಗುತ್ತದೆ.

ಅತ್ಯಧಿಕ ಮೌಲ್ಯದ ಭೂಮಿಯನ್ನು ಅತೀ ಕಡಿಮೆ ಬೆಲೆಗೆ ಸರ್ಕಾರ ಆರ್.ಎಸ್.ಎಸ್ ಗೆ ಬಳುವಳಿ ರೂಪದಲ್ಲಿ ನೀಡಿದೆ. ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಗೆ ಸಂಬಂಧಿಸಿದ ನಿಬಂಧನೆಗಳನ್ನು ಗಾಳಿಗೆ ತೂರಿ, ಶಿಕ್ಷಣ ಸಂಸ್ಥೆಯೇ ಇಲ್ಲದ ಸಂಸ್ಥೆಗೆ ಭೂಮಿ ನೀಡಿರುವುದು ಅಪರಾಧವಷ್ಟೇ ಅಲ್ಲ, ನನ್ನ ಪ್ರಕಾರ ಇದೊಂದು ದೊಡ್ಡ ಹಗರಣ ಕೂಡ ಹೌದು.

ಕೊರೊನಾ ಎರಡನೇ ಅಲೆಯ ಭೀತಿಯಿದ್ದ ವೇಳೆ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರ್ಕಾರ ಸಂಪುಟ ಸಭೆಯಲ್ಲಿ ತೀರ್ಮಾನಿಸಿ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆ ಆತುರಾತುರವಾಗಿ ಜಮೀನನ್ನು ಸೆಸ್ ಸಂಸ್ಥೆಗೆ ನೀಡಿದೆ ಎಂದು ದೂರಿದರು.

ಚಾಣಕ್ಯ ವಿಶ್ವವಿದ್ಯಾಲಯ ಮಸೂದೆಯ ಬಗ್ಗೆ ಗೌರವಾನ್ವಿತ ಸಭಾಧ್ಯಕ್ಷರು ಕೂಡ ಪಕ್ಷಪಾತಿಯಂತೆ ನಡೆದುಕೊಂಡಿದ್ದಾರೆ. ಅಗತ್ಯವಾಗಿ ಚರ್ಚಿಸಬೇಕಿದ್ದ ಪ್ರಮುಖ ವಿಚಾರಗಳನ್ನು ಚರ್ಚೆಯಿಂದ ಕೈಬಿಟ್ಟು, ಈ ಮಸೂದೆಗೆ ಹೆಚ್ಚಿನ ಮಹತ್ವ ನೀಡಿ, ಮಂಡಿಸಲು ಅವಕಾಶ ನೀಡಿದರು ಎಂದು ಹೇಳಿದರು.

ಚರ್ಚೆಗೆ ಅವಕಾಶ ನೀಡುವಂತೆ ಸಭಾಧ್ಯಕ್ಷರಲ್ಲಿ ಎಷ್ಟು ಬಾರಿ ಮನವಿ ಮಾಡಿದರು ಅವರು ನನ್ನ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಚರ್ಚೆಗೆ ಅವಕಾಶವನ್ನೇ ನೀಡದೆ ಮಸೂದೆಗೆ ತರಾತುರಿಯಲ್ಲಿ ಅನುಮೋದನೆ ಪಡೆಯುವ ಅಗತ್ಯವೇನಿತ್ತು? ಇದೇನು ಸಾರ್ವಜನಿಕ ತುರ್ತು ವಿಷಯವಾಗಿತ್ತೇ?

ಕೆ.ಐ.ಎ.ಡಿ.ಬಿ ಜಮೀನನ್ನು ಕಡಿಮೆ ಬೆಲೆಗೆ ಸೆಸ್ ಸಂಸ್ಥೆಗೆ ನೀಡುವುದರಿಂದ ಸರ್ಕಾರಕ್ಕೆ ಹೆಚ್ಚಿನ ನಷ್ಟವಾಗಲಿದೆ. ಅಂದರೆ ಇದು ರಾಜ್ಯದ ಜನರಿಗಾದ ನಷ್ಟ. ಯಾರೋ ಮನುವಾದಿಗಳು ಶಿಕ್ಷಣ ಸಂಸ್ಥೆ ಆರಂಭಿಸಲು ರಾಜ್ಯದ ಜನರು ಏಕೆ ನಷ್ಟ ಅನುಭವಿಸಬೇಕು ಎಂಬುದು ನನ್ನ ವಾದ ಎಂದರು.

ಕೈಗಾರಿಕೆ ಭೂಮಿ ಏಕೆ : ಡಿ.ಕೆ. ಶಿವಕುಮಾರ್ ಪ್ರಶ್ನೆ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಗೆ ಇರುವ ನಿಯಮಾವಳಿ ಪರಿಶೀಲನೆ ಮಾಡಿದಾಗ ಈ ಸಂಸ್ಥೆಗೆ ನೀಡಿದ ಪರವಾನಗಿಯಲ್ಲಿ ಅದೆಲ್ಲದರ ಉಲ್ಲಂಘನೆ ಆಗಿದೆ. ಒಂದು ಸಂಸ್ಥೆಯೇ ಇಲ್ಲ. ಜಮೀನು ಕಡಿಮೆ ಬೆಲೆಗೆ ನೀಡುತ್ತಾರೆ ಎಂದು ಪಡೆಯುವುದು ಸರಿಯಲ್ಲ.

ಏರ್ ಪೋರ್ಟ್ ಪಕ್ಕ ಏರೋಸ್ಪೇಸ್ ಗೋಸ್ಕರ ಕೊಂಡುಕೊಂಡ ಭೂಮಿಯನ್ನು ಶಿಕ್ಷಣ ಸಂಸ್ಥೆಗೆ ನೀಡಿದ್ದು ಸರಿಯಲ್ಲ. ಇಲ್ಲಿ ಒಂದು ಎಕರೆಭೂಮಿಗೆ 10 ಕೋಟಿ ರೂ.ವರೆಗೂ ಮಾರುಕಟ್ಟೆ ಮೌಲ್ಯ ಇದೆ.

ಮಾಗಡಿ ಬಳಿ ಸಂಸ್ಕೃತ ವಿಶ್ವವಿದ್ಯಾಲಯ ಕ್ಕೆ ಭೂಮಿ ನೀಡಿದ್ದೀರಿ ಅದರ ಪಕ್ಕದಲ್ಲೇ ಸರ್ಕಾರಿ ಭೂಮಿ ಇದ್ದರೆ ಈ ವಿವಿಗೆ ನೀಡಿ. ಕೈಗಾರಿಕೆಗಳು ಬಂದರೆ ನೀಡಬೇಕೆಂದು‌ಕೊಂಡು ವಶಪಡಿಸಿಕೊಂಡ ಭೂಮಿಯಲ್ಲಿ ಆರ್ ಎಸ್ ಎಸ್ ವಿಶ್ವವಿದ್ಯಾಲಯ ಸ್ಥಾಪನೆ ಏಕೆ? ನಾವು ಸಹ ಸಾಕಷ್ಟು ಭೂಮಿ ನೀಡಿದ್ದೇವೆ. ಸರ್ಕಾರಿ ಭೂಮಿ ರಾಜ್ಯದ ಯಾವುದೇ ಭಾಗದಲ್ಲಿದ್ದರೆ ನೀಡಿ. ಕೈಗಾರಿಕಾ ಭೂಮಿ ಬಳಕೆ ಸರಿಯಲ್ಲ ಎಂದರು.

Girl in a jacket
error: Content is protected !!