ಕೊರೊನಾ ಬಿರುಗಾಳಿಯಲ್ಲಿ ತೂರಿ ಹೋದ ಬಿಜೆಪಿ ಭಿನ್ನಮತ

Share

ಬೆಂಗಳೂರು,ಮೇ,೧೭:ಬಿಜೆಪಿ ರೆಬೆಲ್ ನಾಯಕ ಬಸವನಗೌಡ ಯತ್ನಾಳರ ಪ್ರಕಾರ ಈಗಾಗಲೇ ಸಿಎಂ ಯಡಿಯೂರಪ್ಪ ತಮ್ಮ ಕುರ್ಚಿ ಕಳೆದುಕೊಳ್ಳಬೇಕಿತ್ತು. ಕರುನಾಡ ಹೊಸ ಸಿಂಹಾಸನಾಧೀಶರಾಗಿ ಉತ್ತರ ಕರ್ನಾಟಕದ ಯಾರದರೂ ವಿಜೃಂಭಿಸಬೇಕಿತ್ತು. ಯತ್ನಾಳ್ ಯಡಿಯೂರಪ್ಪ ವಿರುದ್ದ ಗುಟುರು ಹಾಕಿದಾಗೆಲ್ಲ, ನೋಡಿ ಸಧ್ಯವೇ ಕರುನಾಡಿಗೆ ಹೊಸ ಸಿಎಂ ಬರ್ತಾರೆ. ಅವರು ಉತ್ತರ ಕರ್ನಾಟಕವರೇ ಆಗಿರ್ತಾರೆ ಎಂದು ಒಗಟು ನುಡಿಯುತ್ತಿದ್ದರು. ಹೊಸ ಸಿಎಂ ಹೆಸರನ್ನು ಮಾತ್ರ ಯತ್ನಾಳ್ ಜಪ್ಪಯ್ಯ ಎಂದರೂ ಹೇಳುತ್ತಿರಲಿಲ್ಲ. ಈ ರೀತಿ ಒಗಟನ್ನು ಹೇಳುವ ಮೂಲಕ ಅವರು ತಮ್ಮ ಅಂತರಂಗದ ಕನಸನ್ನು ರಾಜ್ಯದ ಜನರ ಮುಂದೆ ಒರಟೊರಟಾಗಿ ಬಿಡಿಸಿಡುತ್ತಿದ್ದರು. ಯಡಿಯೂರಪ್ಪ ಬಗ್ಗೆ ಬಿಜೆಪಿಯಲ್ಲಿ ಭಿನ್ನಮತೀಯರಿದ್ದರೂ ಅವರು ಯಾರೂ ಸಹ ಯತ್ನಾಳ್ ಸಿಎಂ ಆಗಲಿ ಎಂದು ಹೇಳಲಿಲ್ಲ. ಅವರ ಮಾತನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಇದು ಯತ್ನಾಳ್ ಗೂ ಬೇಸರ ತರಿಸಿರಬೇಕು. ಸಿಎಂ ಬದಲಾವಣೆ ಬಗ್ಗೆ ಅವರು ನೀಡಿದ ಗಡುವು ಮುಗಿದು ಹೋಗಿದೆ.

ಬಂಡಾಯವೇನು ಕಾಣಿಸಿಕೊಂಡಿಲ್ಲ

ಹಾಗೆ ನೋಡಿದರೆ ಸಿಎಂ ವಿರುದ್ದ ಬಿಜೆಪಿಯಲ್ಲಿ ಹೊತ್ತಿ ಉರಿಯುವ ಬಂಡಾಯವೇನೂ ಕಾಣಿಸಿಕೊಂಡಿಲ್ಲ. ಅಲಿ ಇಲ್ಲಿ ಅಸಮಾಧಾನದ ಹೊಗೆ ಮಾತ್ರ ಕಾಣಿಸುತ್ತಲೇ ಇದೆ. ಮುಖ್ಯವಾಗಿ ಯತ್ನಾಳ್ ಉದ್ದಕ್ಕೂ ಗುಟುರು ಹಾಕುತ್ತಲೇ ಇದ್ದಾರೆ. ರಾಜ್ಯಭಾರದಲ್ಲಿ ಸಿಎಂ ಕುಟುಂಬ ಮೂಗು ತೂರಿಸುತ್ತಿದೆ ಎನ್ನುವುದು ಅವರ ಗಂಭೀರ ಆರೋಪ. ಯತ್ನಾಳ್ ಪದೇ ಪದೇ ಈ ಆರೋಪ ಮಾಡುತ್ತ ಬಂದಾಗಲೆಲ್ಲ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದ್ದಾರೆ. ಪಕ್ಷದ ರಾಜ್ಯ ಉಸ್ತುವಾರಿಗಳು ಸಹ ಆಗಾಗ ಯತ್ನಾಳ್ ಗೆ ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ. ಆದರೆ ಯತ್ನಾಳ್ ಕ್ಯಾರೆ ಎಂದಿಲ್ಲ. ಇದನ್ನು ಗಮನಿಸಿದಾಗ ಯತ್ನಾಳ್ಗೆ ಪಕ್ಷದ ಹೈಕಮಾಂಡ್ ನೆಲೆಯಲ್ಲಿರುವ ಕೆಲವರಿಂದ ಬೆಂಬಲ ಸಿಗುತ್ತಿರುವ ಅನುಮಾನವಿದೆ. ಯತ್ನಾಳ್ ವಿರುದ್ಧ ಹೈಕಮಾಂಡ್ ಯಾವುದೇ ಶಿಸ್ತು ಕ್ರಮ ಕೈಗೊಳ್ಳದಿರುವುದು ಇದಕ್ಕೆ ಪುಷ್ಠಿ ನೀಡಿದೆ.

 

ಯಡಿಯೂರಪ್ಪ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ನಡುವಿನ ವಿರಸ ಯಾರಿಗೂ ತಿಳಿಯದ ವಿಷಯವೇನಲ್ಲ. ಯಡಿಯೂರಪ್ಪ ಈ ಹಿಂದೆ ಸಿಎಂ ಆಗಿದ್ದಾಗಲೂ ಸಂತೋಷ್ ಅವರ ವಿರೋಧಿ ಬಣದ ಪ್ರಮುಖರಾಗಿದ್ದರು. ಸಂಘ ಪರಿವಾರ ಮೂಲದ ಸಂತೋಷ್ ಈಗಂತೂ ರಾಷ್ಟ್ರೀಯ ಬಿಜೆಪಿಯಲ್ಲಿ ಆಯಕಟ್ಡಿನ ಸ್ಥಾನದಲ್ಲಿದ್ದಾರೆ. ಸಂಪುಟ ರಚನೆಯಲ್ಲಿ ಸಹ ತಮ್ಮ ಪ್ರಭಾವ ಮೆರೆದಿದ್ದಾರೆ.

ಯತ್ನಾಳ ಮಾತು ಬೇರೆಯವರ ಮುಖವಾಣಿ

ಸಿಎಂ ವಿರುದ್ದ ಯತ್ನಾಳ್ ಆಡುತ್ತಿರುವ ಮಾತು ಕೇವಲ ಅವರ ಮಾತಲ್ಲ. ಅವರು ಕೇವಲ ಮುಖವಾಣಿ ಅಷ್ಟೇ. ಹೈಕಮಾಂಡ್ ಮಟ್ಟದಲ್ಲಿ ಯಡಿಯೂರಪ್ಪ ವಿರೋಧಿಗಳು ಯತ್ನಾಳ್ ಮೂಲಕ ಭಿನ್ನಮತದ ಬೀಜ ಬಿತ್ತಿತ್ತಿದ್ದಾರೆ ಎಂಬ ಮಾತು ಬಿಜೆಪಿ ಪಡಸಾಲೆಯಲ್ಲಿ ಹೇರಳವಾಗಿ ಕೇಳಿ ಬರುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್, ಸಂತೋಷ್ ಬಣದವರು. ಅವರು ಹಾಕಿದ ಗೆರೆಯನ್ನು ದಾಟುವುದಿಲ್ಲ. ಆದರೆ ಪಕ್ಷವನ್ನು ಪರಿಣಾಮಕಾರಿಯಾಗಿ ಸಂಘಟಿಸುವ ಕರಾಮತ್ತನ್ನು ಅವರು ಇದುವರೆಗೆ ತೋರಿಲ್ಲ. ಅಂತಹ ನಾಯಕತ್ವದ ಗುಣವೂ ಅವರಲ್ಲಿ ಪ್ರದರ್ಶನವಾಗುತ್ತಿಲ್ಲ. ಯಡಿಯೂರಪ್ಪ ಅವರಿಗೆ ಯಡಿಯೂರಪ್ಪ ಅವರೇ ಸಾಟಿ ಎಂಬ ಭಾವನೆ ಇನ್ನೂ ಪಕ್ಷದಲ್ಲಿ ಉಳಿದಿದೆ. ಅವರನ್ನು ಬದಿಗೆ ಸರಿಸುವ ಕೆಲವರ ಪ್ರಯತ್ನಕ್ಕೆ ಬೆಂಬಲ ನೀಡಲು ಹೈಕಮಾಂಡ್ ಗೂ ಧೈರ್ಯವಾಗುತ್ತಿಲ್ಲ.
ಉಪಚುನಾವಣೆ ಫಲಿತಾಂಶ ಸಹ ಯಡಿಯೂರಪ್ಪ ಅವರಿಗೆ ವರವಾಗಿಯೇ ಬಂದಿದೆ. ಮಸ್ಕಿ ಹೊರತಾಗಿ ಉಳಿದೆರಡೂ ಕ್ಷೇತ್ರಗಳನ್ನು ಬಿಜೆಪಿ ಮಡಿಲಿಗೆ ಹಾಕಿಕೊಂಡಿದೆ. ಬೆಳಗಾಗಿ ಲೋಕಸಭಾ ಕ್ಷೇತ್ರವನ್ನು ಮರಳಿ ಪಕ್ಷಕ್ಕೆ ಉಳಿಸಿಕೊಡುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ಬೆಳಗಾಗಿ ಕ್ಷೇತ್ರವನ್ನು ಬಿಜೆಪಿ ಸೋತಿದ್ದರೆ, ಪಕ್ಷದಲ್ಲಿ ಯಡಿಯೂರಪ್ಪ ವಿರೋಧಿಗಳು ಮತ್ತೆ ಪುಟಿದೇಳುತ್ತಿದ್ದರು. ಹೈಕಮಾಂಡ್ ಸಹ ಗುರುಗುಟ್ಟುವ ಸಾಧ್ಯತೆ ಇತ್ತು.
ಕೊರೋನಾ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಒಂದನೇ ಅಲೆಯನ್ನು ಸ್ವಲ್ಪಮಟ್ಡಿಗೆ ಚೆನ್ನಾಗಿಯೇ ನಿರ್ವಹಿಸಿದ ಸರ್ಕಾರ, ತಜ್ಞರ ಎಚ್ಚರಿಕೆ ನಡುವೆಯೂ ಎರಡನೇ ಅಲೆಯನ್ನು ಉದಾಸೀನ ಮಾಡಿತು. ಅದರ ಪರಿಣಾಮ ಕೆಟ್ಟದ್ದಾಗಿದೆ. ಇದನ್ನೆ ಮುಂದಿಟ್ಟುಕೊಂಡು ಸಿಎಂ ಕಾಲೆಳೆಯುವುದಕ್ಕೂ ಭಿನ್ನಮತೀಯರಿಗೆ ಧೈರ್ಯ ಬರುತ್ತಿಲ್ಲ. ಏಕೆಂದರೆ ಎರಡನೇ ಅಲೆಯನ್ನು ಸಹ ಕೇಂದ್ರ ಸರ್ಕಾರ ಕಡೆಗಣಿಸಿದೆ ಎಂದು ವಿಪಕ್ಷಗಳು ಬೊಬ್ಬೆ ಹೊಡೆಯುತ್ತಿವೆ.
ಕೊರೋನಾದಂತಹ ಸಾಂಕ್ರಾಮಿಕ ಸಂಕಷ್ಟ ಕಾಲದಲ್ಲಿ ನಾಯಕತ್ವ ಬದಲಾವಣೆಯ ಸಾಹಸದ ನಿರ್ಧಾರವನ್ನು ಹೈಕಮಾಂಡ್ ಮಾಡಲು ಸಾಧ್ಯವಿಲ್ಲ. ಆ ದೃಷ್ಟಿಯಿಂದ ನಾಯಕತ್ವ ಬದಲಾವಣೆ ಬಿಜೆಪಿಯಲ್ಲಿ ಸಧ್ಯಕ್ಕೆ ಮುಗಿದ ಮಾತಾಗಿದೆ.

Girl in a jacket
error: Content is protected !!