ಕೆ.ಹೆಚ್ ಪಾಟೀಲ್ ಅವರು ಮಹಾ ಮಾನವತಾವಾದಿ: ಡಿ.ಕೆ. ಶಿ
by-ಕೆಂಧೂಳಿ
ಗದಗ, ಮಾ.16-“ಕೆ.ಹೆಚ್ ಪಾಟೀಲ್ ಅವರು ಮಹಾ ಮಾನವತಾವಾದಿಯಾಗಿದ್ದರು. ಜಾತಿ, ಧರ್ಮದ ತಾರತಮ್ಯವಿಲ್ಲದೆ ಸಹಕಾರಿ ಕ್ಷೇತ್ರದಲ್ಲಿ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಮುನ್ನಡೆಸಿದವರು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಗದಗದಲ್ಲಿ ಭಾನುವಾರ ನಡೆದ ಸಹಕಾರಿ ಧುರೀಣ, ಮಾಜಿ ಸಚಿವ ದಿವಂಗತ ಶ್ರೀ ಕೆ.ಹೆಚ್. ಪಾಟೀಲ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.
“ಧೀಮಂತ ನಾಯಕ ಕೆ.ಹೆಚ್. ಪಾಟೀಲ್ ಅವರನ್ನು ಸ್ಮರಿಸಲು ನಾವು ಸೇರಿದ್ದೇವೆ. ಪಾಟೀಲರ ಬದುಕು, ಚಿಂತನೆ, ಆದರ್ಶ ಬೇರೆಯವರ ಬದುಕಿಗೆ ದಾರಿ ದೀಪವಾಗಲಿ. ನಾವು ಇತ್ತೀಚೆಗೆ ಮಹಾತ್ಮಾ ಗಾಂಧೀಜಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ನಡೆಸಿದ ಬೆಳಗಾವಿ ಅಧಿವೇಶನಕ್ಕೆ ಶತಮಾನೋತ್ಸವ ಆಚರಣೆ ಮಾಡಿದ್ದೇವೆ. ಈ ಕಾರ್ಯಕ್ರಮಗಳ ರೂಪುರೇಷೆಗಳನ್ನು ಹೆಚ್.ಕೆ ಪಾಟೀಲ್ ಅವರ ನೇತೃತ್ವದಲ್ಲಿ ನಡೆಸಲಾಗಿದೆ” ಎಂದು ಹೇಳಿದರು
“ಮಹಾಭಾರತದಲ್ಲಿ ಭೀಷ್ಮ, ಧರ್ಮರಾಯನಿಗೆ ಒಂದು ಮಾತು ಹೇಳಿದ್ದರು. ‘ಮನುಷ್ಯ ಹುಟ್ಟುವಾಗ ತಂದೆ ತಾಯಿ, ಗುರು, ದೇವರು ಹಾಗೂ ಸಮಾಜ ಈ ನಾಲ್ಕು ಋಣದಲ್ಲಿ ಹುಟ್ಟುತ್ತಾನೆ. ಈ ನಾಲ್ಕು ಋಣಗಳನ್ನು ಧರ್ಮದಿಂದ ತೀರಿಸಬೇಕು’ ಎಂದು ಹೇಳಿದ್ದರು. ಅದೇ ರೀತಿ ಹೆಚ್.ಕೆ ಪಾಟೀಲ್, ಅವರ ಸ್ನೇಹಿತರು, ಅಭಿಮಾನಿಗಳು ಈ ಕಾರ್ಯಕ್ರಮ ನಡೆಸಿ ಧರ್ಮದ ಮೂಲಕ ಋಣ ತೀರಿಸುವ ಕೆಲಸ ಮಾಡುತ್ತಿದ್ದೀರಿ. ವಿದ್ಯಾ ಸಂಸ್ಥೆ, ಸಹಕಾರ ಸಂಸ್ಥೆ, ರೈತರು ಸೇರಿದಂತೆ ಕೆ.ಹೆಚ್ ಪಾಟೀಲ್ ಅವರು ಸಮಾಜಕ್ಕೆ ಏನೆಲ್ಲಾ ಬೇಕು ಎಂದು ಚಿಂತನೆ ನಡೆಸಿದ್ದರು” ಎಂದರು.
ನನಗೆ ಮೊದಲು ಟಿಕೆಟ್ ಕೊಟ್ಟಿದ್ದು ಕೆ.ಹೆಚ್ ಪಾಟೀಲ್
“ಕೆ.ಹೆಚ್ ಪಾಟೀಲರ ಜತೆ ನಾಲ್ಕೈದು ವರ್ಷ ಕೆಲಸ ಮಾಡುವ ಭಾಗ್ಯ ನನಗೆ ಸಿಕ್ಕಿತ್ತು. ನಾನು ಇಂದು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿದ್ದು, ಅಂದು ಕೆ.ಹೆಚ್ ಪಾಟೀಲ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು. ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ 1985ರಲ್ಲಿ ನನಗೆ ವಿಧಾನಸಭೆ ಚುನಾವಣೆ ಟಿಕೆಟ್ ನೀಡಿ ದೇವೇಗೌಡರ ವಿರುದ್ಧ ಸ್ಪರ್ಧಿಸುವಂತೆ ಹೇಳಿದರು. ಅಲ್ಲಿಂದ ಇಲ್ಲಿಯವರೆಗೂ ಸತತವಾಗಿ 9 ಬಾರಿ ಬಿ ಫಾರಂ ತೆಗೆದುಕೊಂಡು ಈ ಮಟ್ಟಕ್ಕೆ ಬೆಳೆದಿದ್ದೇನೆ” ಎಂದು ಸ್ಮರಿಸಿದರು.
“ಕೆ.ಹೆಚ್ ಪಾಟೀಲ್ ಅವರು ಸೋಲು, ಗೆಲುವು, ಯಶಸ್ಸು ಎಲ್ಲವನ್ನು ಕಂಡಿರುವ ಮಾನವತಾವಾದಿ. ಅವರ ಜೊತೆ ಶಾಸಕನಾಗಿ, ಸಚಿವನಾಗಿ ಕೆಲಸ ಮಾಡಿದ್ದೇನೆ. ಮಣ್ಣಿಲ್ಲದೆ ಮಡಿಕೆ ಇಲ್ಲ, ಹಿರಿಯರ ಬಿಟ್ಟು ದೇವರಿಲ್ಲ. ತಂದೆ ತಾಯಿಗಳೇ ನಮ್ಮ ದೇವರು. ಅವರನ್ನು ಸ್ಮರಿಸುತ್ತಾ ಅವರು ತೋರಿದ ಮಾರ್ಗದರ್ಶನದಲ್ಲಿ ನಾವು ಸಾಗಬೇಕು. ಸಹಕಾರ ಕ್ಷೇತ್ರದಲ್ಲಿ ಕೆ.ಹೆಚ್ ಪಾಟೀಲ್ ಅವರು ಅನೇಕ ಸಂಸ್ಥೆಗಳನ್ನು ಕಟ್ಟಿದ್ದಾರೆ” ಎಂದರು.
“ಜತೆಗೂಡುವುದು ಆರಂಭ, ಜತೆಗೂಡಿ ಚರ್ಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು. ಇದೇ ಸಹಕಾರ ಕ್ಷೇತ್ರದ ಮೂಲ ಮಂತ್ರ. ಹೀಗೆ ಕೆ.ಹೆಚ್ ಪಾಟೀಲ್ ಅವರು ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಮುನ್ನಡೆಸಿದ್ದಾರೆ. ಪಂಚಾಯ್ತಿ ಅಧ್ಯಕ್ಷ ಸ್ಥಾನದಿಂದ ಮಂತ್ರಿ ಸ್ಥಾನದವರೆಗೆ ಅವರು ಅನೇಕ ಹೆಜ್ಜೆ ಗುರುತು ಬಿಟ್ಟು ಹೋಗಿದ್ದಾರೆ. ಈ ಕಾರಣಕ್ಕೆ ನಾವಿಂದು ಅವರನ್ನು ಸ್ಮರಿಸುತ್ತಿದ್ದೇವೆ. ಅವರ ಮಾರ್ಗದರ್ಶನದಲ್ಲಿ ಹೆಚ್.ಕೆ ಪಾಟೀಲ್, ಡಿ.ಆರ್. ಪಾಟೀಲ್ ಅವರು ಗದಗ ಜಿಲ್ಲೆಗೆ ಹೊಸ ರೂಪ ನೀಡಲು ಮುಂದಾಗಿದ್ದಾರೆ” ಎಂದರು.