ಬೆಂಗಳೂರು,ನ07-ಶಾಸಕ ಯಶವಂತರಾಯಗೌಡ ಪಾಟೀಲರು ಕಬ್ಬು ಬೆಳೆಗಾರರ ಹೋರಾಟದ ಬಗ್ಗೆ ಮಾತನಾಡಿ, ಅವರು ಕಬ್ಬು ಬೆಳೆಗಾರರೇ ಅಲ್ಲ ಎಂದಿದ್ದಾರೆ. ಅವರಿಗೆ ನಾಚಿಕೆ ಆಗಬೇಕು ಎಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಕಬ್ಬು ಬೆಳೆಗಾರರಿಗೆ ಅವಮಾನ ಮಾಡಿದ ಅವರು ತಕ್ಷಣ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು. ಮುಖ್ಯಮಂತ್ರಿಗಳು ಯುದ್ಧ ಬಂದಾಗ ಶಸ್ತ್ರಾಭ್ಯಾಸ ಮಾಡುವ ಬದಲಾಗಿ ಕಬ್ಬು ಅರೆಯುವ ಒಂದು ಅಥವಾ ಎರಡು ತಿಂಗಳ ಮೊದಲೇ ಈ ಸಂಧಾನ ಸಭೆ ಕರೆಯಬೇಕಿತ್ತು. ತಡ ಆಗಿದೆ. ತಡ ಆಗಿದ್ದರೂ ಪರವಾಗಿಲ್ಲ; ರೈತರ ತಾಳ್ಮೆ ಪರೀಕ್ಷಿಸದಿರಿ. ಪ್ರಧಾನಿಯವರಿಗೆ ಪತ್ರ ಬರೆಯವುದಾಗಿ ಕೈಕಟ್ಟಿ ಸುಮ್ಮನೆ ಕುಳಿತಿರದಿರಿ ಎಂದು ಎಚ್ಚರಿಸಿದರು.
ಮುಖ್ಯಮಂತ್ರಿ ಕುರ್ಚಿಗೆ ಎಷ್ಟು ತಲೆ ಕೆಡಿಸಿಕೊಂಡಿದ್ದೀರೋ ಅದರ ಶೇ. 10ರಷ್ಟನ್ನು ಕಬ್ಬು ಬೆಳೆಗಾರರ ಬಗ್ಗೆ ತಲೆ ಕೆಡಿಸಿಕೊಳ್ಳಿ. ಆಗ ರೈತರು ನಿಮ್ಮನ್ನು ಪೂಜೆ ಮಾಡುತ್ತಾರೆ. ನನಗೆ ಇದರಲ್ಲಿ ರಾಜಕೀಯ ಮಾಡುವ ಅವಶ್ಯಕತೆ ಖಂಡಿತ ಇಲ್ಲ ಎಂದು ನುಡಿದರು. ಕಬ್ಬು ಬೆಳೆಗಾರರ ಹಿತಾಸಕ್ತಿ ಕಾಪಾಡುವುದಷ್ಟೇ ನಮ್ಮ ಬದ್ಧತೆ ಎಂದರು.
ಮುಖ್ಯಮಂತ್ರಿಗಳ ಆಲಸ್ಯ, ಅಸಡ್ಡೆ..
ಕಬ್ಬು ಬೆಳೆಗಾರರು ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ಬರಬಾರದಿತ್ತು. ಕಬ್ಬು ಬೆಳೆಗಾರರ ವಿಚಾರದಲ್ಲಿ ಮುಖ್ಯಮಂತ್ರಿಗಳು ಆಲಸ್ಯ ಮಾಡಿದ್ದಾರೆ. ಅಸಡ್ಡೆ ತೋರಿದ್ದಾರೆ. ಈಗ ಹೋರಾಟ ತೀವ್ರಗೊಂಡಿದೆ. ಬೀದಿಗಿಳಿದು ಪ್ರತಿಭಟನೆ ನಡೆಯುತ್ತಿದೆ. ಈಗ ನೀವು ಪ್ರಧಾನಿಯವರಿಗೆ ಪತ್ರ ಬರೆದು ಕೇಂದ್ರ ಸರಕಾರದ ಮೇಲೆ ದೂರುವ ಪ್ರಯತ್ನ ಮಾಡುತ್ತೀರಾ ಎಂದು ವಿಜಯೇಂದ್ರ ಅವರು ಪ್ರಶ್ನಿಸಿದರು.
ಎಫ್ಆರ್ಪಿಯನ್ನು ಪ್ರಧಾನಿಯವರೊಬ್ಬರೇ ತೀರ್ಮಾನ ಮಾಡುವುದಿಲ್ಲ. ಎಲ್ಲ ರಾಜ್ಯಗಳ ಅಧಿಕಾರಿಗಳು, ತಜ್ಞರ ಅಭಿಪ್ರಾಯ ಪಡೆದು ಇದನ್ನು ತೀರ್ಮಾನ ಮಾಡುತ್ತಾರೆ. ಕೇಂದ್ರ ಎಷ್ಟೇ ಎಫ್ಆರ್ಪಿ ನಿಗದಿ ಮಾಡಿದರೂ ರಾಜ್ಯ ಸಲಹಾ ಬೆಲೆ (ಎಸ್ಎಪಿ) ಹೆಚ್ಚು ದರ ಕೊಡಲು ಅವಕಾಶವಿದೆ ಎಂದು ತಿಳಿಸಿದರು. ಮುಖ್ಯಮಂತ್ರಿಗಳು ಮಾನವೀಯತೆ ದೃಷ್ಟಿಯಿಂದ ಯೋಚಿಸಬೇಕು ಎಂದು ಒತ್ತಾಯಿಸಿದರು.
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗಲೂ ಇದೇ ಬಿಜೆಪಿ ಕಬ್ಬು ಬೆಳೆಗಾರರ ಹಿತಾಸಕ್ತಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸಭೆ ಮಾಡಿ ಒಂದು ದರ ನಿಗದಿ ಮಾಡಿದ್ದರು. ನಮ್ಮ ಮೇಲೆ ಆರೋಪ ಮಾಡಿ, ಕೇಂದ್ರದ ಮೇಲೆ ಗೂಬೆ ಕೂರಿಸುವುದನ್ನು ಬದಿಗಿಡಬೇಕು. ಸಮಸ್ಯೆ ಪರಿಹರಿಸುವ ಇಚ್ಛಾಶಕ್ತಿ ಇದ್ದರೆ ಇವತ್ತೇ ತೀರ್ಮಾನ ಮಾಡಿ ಎಂದು ಒತ್ತಾಯಿಸಿದರು.
ಹಿಂದೆ ವಿಠಲ ಅರಭಾವಿಯವರ ಆತ್ಮಹತ್ಯೆ ಮಾಡಿಕೊಂಡದ್ದು ನಿಮಗೆ ನೆನಪಿದೆಯೇ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು. ಆಗ ಕೂಡ ನೀವು ತಾತ್ಸಾರ ಮಾಡಿದ್ದಿರಿ. ಕಬ್ಬು ಅರೆದಾಗ ಮಾತ್ರ ಅಬಕಾರಿ ಇಲಾಖೆಗೆ ಕಂದಾಯ ಹೆಚ್ಚಾಗಲು ಸಾಧ್ಯ. ಆದಾಯ ಬರುವುದರ ಬಗ್ಗೆ ಚಿಂತಿಸುವ ನೀವು ಕಬ್ಬಿಗೆ ವೈಜ್ಞಾನಿಕ ದರ ನಿಗದಿಯ ಜವಾಬ್ದಾರಿ ನಿಭಾಯಿಸುತ್ತಿಲ್ಲ ಎಂದು ಆಕ್ಷೇಪ
ಕಬ್ಬು ಬೆಳೆಗಾರರ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿಲ್ಲ ಎಂದು ತಿಳಿಸಿದರು. ರಾಜಕೀಯ ಮಾಡುವುದಾದರೆ ಮೊದಲನೇ ದಿನವೇ ನಾವು ಹೋರಾಟಕ್ಕೆ ಕೈಜೋಡಿಸುತ್ತಿದ್ದೆವು. ನಾವು ರಾಜಕಾರಣ ಮಾಡಬಾರದೆಂದು ಸುಮ್ಮನಿದ್ದೆವು. ಆರು ದಿನ ಕಳೆದರೂ ಒಂದು ಜವಾಬ್ದಾರಿಯುತ ಸರಕಾರವು ಒಬ್ಬ ಸಚಿವರನ್ನೂ ಕಳಿಸಲಿಲ್ಲ ಎಂದು ಟೀಕಿಸಿದರು. ಸಮಸ್ಯೆ ಪರಿಹಾರಕ್ಕೆ ನಿಮ್ಮ ಪ್ರಯತ್ನ ಏನು ಎಂದು ಕೇಳಿದರು.
ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಮೂಡಿಸಿದ ವಂದೇ ಮಾತರಂ
ವಂದೇ ಮಾತರಂ ಗೀತೆಯು ದೇಶದ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಮೂಡಿಸುವಲ್ಲಿ ಪ್ರೇರಣೆ ನೀಡಿತ್ತು; ಆ ಗೀತೆಯನ್ನು ದೇಶದ ಪ್ರತಿಯೊಬ್ಬ ಸ್ವಾಭಿಮಾನಿ ಭಾರತೀಯನೂ ನೆನಪಿಸಿಕೊಳ್ಳಬೇಕು; 2047ರಲ್ಲಿ ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಿ ಪರಿವರ್ತನೆ ಕಾಣಬೇಕಿದೆ. ಶಕ್ತಿಶಾಲಿ, ಸಮೃದ್ಧ ದೇಶವಾಗಿ ಭಾರತವು ಹೊರಹೊಮ್ಮಬೇಕು. ಆ ನಿಟ್ಟಿನಲ್ಲಿ ವಂದೇ ಮಾತರಂ ಪ್ರೇರಣೆ ನೀಡಲಿ ಎಂದು ಆಶಿಸಿದರು. ದೇಶಾದ್ಯಂತ ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆಯು ಅರ್ಥಪೂರ್ಣವಾಗಿ ನಡೆಯುತ್ತಿದೆ ಎಂದು ತಿಳಿಸಿದರು.
