ಬೆಂಗಳೂರು,ಜು,೨೭: ಬಿಎಸ್‌ವೈ ನಂತರ ಮುಖ್ಯಮಂತ್ರಿ ಯಾರು ಎನ್ನುವುದಕ್ಕೆ ಉತ್ತರ ಇಂದು ಸಂಜೆಯೇ ಹೊರಬೀಳುವ ಸಾಧ್ಯತೆಗಳಿವೆ.
ಹೌದು ಇಂದು ಸಂಜೆ ೭ ಗಂಟೆಗೆ ನಗರದ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ಶಾಸಕಕಾಂಗ ಸಭೆ ನಡೆಯಲಿದೆ ಈ ಸಭೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಸಹ ಉಸ್ತುವಾರಿ ಡಿ.ಕೆ.ಅರುಣ, ಕೇಂದ್ರೀಯ ವೀಕ್ಷಕ ಕಿಶನ್ ರೆಡ್ಡಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ರಾಜ್ಯ ಬಿಜೆಪಿ ಕಚೇರಿಯಿಂದಲೇ ಶಾಸಕಾಂಗ ಸಭೆ ಬಗ್ಗೆ ಸೂಚನೆ ನೀಡಲಾಗಿದ್ದು, ಸಭೆಗೆ ಹಾಜರಾಗಲು ಬಿಜೆಪಿ ಶಾಸಕರಿಗೆ ತಿಳಿಸಲಾಗಿದೆ. ಯಡಿಯೂರಪ್ಪ ಸೇರಿದಂತೆ ೧೧೯ ಬಿಜೆಪಿ ಶಾಸಕರಿಗೂ ಸಂಜೆ ೭ ಗಂಟೆಗೆ ಶಾಸಕಾಂಗ ಸಭೆಗೆ ಹಾಜರಾಗಲು ಮಾಹಿತಿ ನೀಡಲಾಗಿದ್ದು, ಉಸ್ತುವಾರಿ ಸಿಎಂ ಯಡಿಯೂರಪ್ಪ ನಡೆ ಬಗ್ಗೆಯೂ ಕುತೂಹಲ ಮೂಡಿದೆ
ಇನ್ನು ಈ ಬಗ್ಗೆ ಮಾತನಾಡಿರುವ ಮಾಜಿ ಸಚಿವ ಮುರುಗೇಶ್ ನಿರಾಣಿ, ಹೊಸ ನಾಯಕರನ್ನು ಆರಿಸುವ ಸಂದರ್ಭ ಬಂದಿದೆ. ಎಲ್ಲಾ ಶಾಸಕರೂ ಮುಖ್ಯಮಂತ್ರಿಯಾಗಲು ಅರ್ಹರಿದ್ದಾರೆ. ನಮ್ಮ ಪಕ್ಷದ ನಾಯಕರು ಸೇರಿ ಅವರನ್ನು ಆರಿಸುತ್ತಾರೆ. ಯಡಿಯೂರಪ್ಪನವರು ಈ ಪ್ರಕ್ರಿಯೆಯಲ್ಲಿ ಇರುತ್ತಾರೆ. ಯಡಿಯೂರಪ್ಪ ನಮ್ಮ ನಾಯಕರು. ನಮಗೆ ತಂದೆ ಸ್ಥಾನದಲ್ಲಿ ನಿಂತು ಬೆಳೆಸಿದರು. ನಾವು ಬೆಂಗಳೂರಿನಲ್ಲಿ ಇದ್ದಾಗ ಎಲ್ಲರೂ ಭೇಟಿಯಾಗುತ್ತೇವೆ. ನಾನು ನಿನ್ನೆ ಬೆಂಗಳೂರಿನಲ್ಲಿ ಇರಲಿಲ್ಲ ದೆಹಲಿಗೆ ಹೋಗಿದ್ದೆ. ಆದರೆ, ಅಲ್ಲಿ ಯಾರನ್ನೂ ಕೂಡಾ ಭೇಟಿಯಾಗಲಿಲ್ಲ. ಗೌಪ್ಯ ಸಭೆ ಏನೂ ಮಾಡಲಿಲ್ಲ. ನಾನು ಯಾವುದರ ಲಾಬಿ ಮಾಡಿಲ್ಲ, ಹಿಂದೆಯೂ ಆ ರೀತಿ ಮಾಡಿದವನಲ್ಲ ಎಂದು ಹೇಳಿದ್ದಾರೆ
ಸಿಎಂ ಆಯ್ಕೆಗೆ ಕೇಂದ್ರ ಬಿಜೆಪಿ ನಾಯಕರ ಆಗಮನ ಹಿನ್ನೆಲೆ. ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ಸಿದ್ಧತೆಯಾಗುತ್ತಿದ್ದು, ಅಭಿಮಾನಿಗಳು, ಮುಖಂಡರು ಮುಗಿಬೀಳುವ ಸಾಧ್ಯತೆ ಇರುವುದರಿಂದ ಆಗಮನ ದ್ವಾರದ ಬಳಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಮಧ್ಯಾಹ್ನ ೨ ಗಂಟೆ ವೇಳೆಗೆ ಕೇಂದ್ರ ನಾಯಕರು ಆಗಮಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇಂದೇ ನೂತನ ಸಿಎಂ ಆಯ್ಕೆ ಖಚಿತ
Share