Reported By: H.D.Savita
ಮುಂಬೈ ಇಂಡಿಯನ್ಸ್ ವಿರುದ್ಧ 17 ರನ್ ನೀಡಿ ನಾಲ್ಕು ವಿಕೆಟ್ ಪಡೆದ ಹರ್ಷಲ್ ಪಟೇಲ್ ಆರ್ಸಿಬಿಗೆ ಗೆಲುವಿಗೆ ಕಾರಣರಾದರು. ಹರ್ಷಲ್ ಮಾರಕ ಬೌಲಿಂಗ್ ಗೆ ತತ್ತರಿಸಿದ ರೋಹಿತ್ ಶರ್ಮಾ ಪಡೆ ಕೇವಲ 111 ರನ್ ಗಳಿಗೆ ಆಲ್ಔಟ್ ಆಯ್ತು. ಅಲ್ದೇ ಮೊದಲು ಹ್ಯಾಟ್ರಿಕ್ ಸಾಧನೆ ಮಾಡಿದರು. ನಂತರ ಅವರ ಕೊನೆಯ ಓವರ್‌ನಲ್ಲಿ ಆಡಮ್ ಮಿಲ್ನೆ ಅವರನ್ನು ಔಟ್ ಮಾಡುವ ಮೂಲಕ ನಾಲ್ಕನೇ ವಿಕೆಟ್ ಪಡೆದರು. ಹರ್ಷಲ್ ಅವರ ಅದ್ಭುತ ಆಟದಿಂದಾಗಿ, ಮುಂಬೈ ತಂಡವು ಐದು ವಿಕೆಟ್ಗೆ 106 ರನ್ ಗಳಿಸಿ ಗೆಲ್ಲುವ ಹಂತದಲ್ಲಿತ್ತು. ಆದರೆ ನಂತರ 111 ರನ್ ಗಳಿಗೆ ಆಲ್ಔಟ್ ಆಯಿತು. ಆರ್‌ಸಿಬಿ ಈ ಋತುವಿನಲ್ಲಿ ತಮ್ಮ ಆರನೇ ಗೆಲುವನ್ನು ದಾಖಲಿಸಿದೆ ಮತ್ತು ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 54 ರನ್ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ (51 ರನ್) ಮತ್ತು ಗ್ಲೆನ್ ಮ್ಯಾಕ್ಸ್ ವೆಲ್ (56 ರನ್) ಗಳ ಅರ್ಧಶತಕಗಳ ನೆರವಿನಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಆರು ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಶ್ರೀಕರ್ ಭಾರತ್ 32 ರನ್ ಕೊಡುಗೆ ನೀಡಿದರು. ಮುಂಬೈ ಇಂಡಿಯನ್ಸ್ ಪರ ಜಸ್ಪ್ರೀತ್ ಬುಮ್ರಾ ಮೂರು ವಿಕೆಟ್ ಪಡೆದರೆ, ಟ್ರೆಂಟ್ ಬೌಲ್ಟ್, ಆಡಮ್ ಮಿಲ್ನೆ ಮತ್ತು ರಾಹುಲ್ ಚಾಹರ್ ತಲಾ ಒಂದು ವಿಕೆಟ್ ಪಡೆದರು. ಕೊಹ್ಲಿ ಆರಂಭದಿಂದಲೇ ಆಕ್ರಮಣಶೀಲತೆಯನ್ನು ತೋರಿಸಿದರು ಮತ್ತು ಟ್ರೆಂಟ್ ಬೌಲ್ಟ್ ಮೇಲೆ ಇನ್ನಿಂಗ್ಸ್ನ ಎರಡನೇ ಎಸೆತದಲ್ಲಿ ಸಿಕ್ಸರ್ ಹೊಡೆದರು.