ನವದೆಹಲಿ,ಜು,25: ಕೋವಿಡ್ 19 ಕಾರಣದಿಂದ ಮುಂದೂಡಲ್ಪಟ್ಟಿರುವ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಸೆಪ್ಟೆಂಬರ್ 19ರಿಂದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಪುನರಾರಂಭಗೊಳ್ಳಲಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಐಪಿಎಲ್ನ ದ್ವಿತಿಯಾರ್ಧದ ಪಂದ್ಯಗಳನ್ನು ನಡೆಸಲು ಬಿಸಿಸಿಐ ಅವಿರತವಾಗಿ ಶ್ರಮಿಸುತ್ತಿದೆ. ಸೆಪ್ಟೆಂಬರ್ 19ರಿಂದ ಪುನಾರಂಭಗೊಂಡರೆ ಅಕ್ಟೋಬರ್ 10ರಂದು ಎಲಿಮಿನೇಟರ್ ನಡೆಯುತ್ತೆ. ಕ್ವಾಲಿಫೈಯರ್ 1 ಮತ್ತು 2 ಕ್ರಮವಾಗಿ ಅಕ್ಟೋಬರ್ 11 ಮತ್ತು 12ರಂದು ನಿಗದಿಯಾಗಿದೆ. ಅಕ್ಟೋಬರ್ 15ರಂದು ಫೈನಲ್ ಪಂದ್ಯ ನಡೆಯಲಿದೆ.
ಈ ಕುರಿತು ಎಎನ್ಐ ಸುದ್ದಿಸಂಸ್ಥೆಗೆ ಬಿಸಿಸಿಐ ಮೂಲಗಳು ಮಾಹಿತಿ ನೀಡಿವೆ. ‘ನಾವು ಸೆಪ್ಟೆಂಬರ್ 19ರಂದು ಮುಂಬೈ ಮತ್ತು ಸಿಎಸ್ಕೆ ನಡುವೆ ಪಂದ್ಯವನ್ನು ಆಯೋಜನೆ ಮಾಡಿ ಐಪಿಎಲ್ ಮುಂದುವರಿದ ಭಾಗವನ್ನು ಆಯೋಜಿಸುತ್ತಿದ್ದೇವೆ. ಆದರೆ ಲೀಗ್ನ ಸಂಪೂರ್ಣ ಪಂದ್ಯಗಳ ವೇಳಾಪಟ್ಟಿಯಲ್ಲಿ ಆದಷ್ಟು ಶೀಘ್ರದಲ್ಲೇ ತಂಡಗಳಿಗೆ ರವಾನಿಸಲಿದ್ದೇವೆ’ ಎಂದು ಬಿಸಿಸಿಐ ಮೂಲಗಳು ಹೇಳಿವೆ.
ಸಿಪಿಎಲ್ ಜೊತೆಗೆ ಐಪಿಎಲ್ ವೇಳಾಪಟ್ಟಿ ಕಲಹ ಉಂಟಾಗಬಹುದೆಂದು ಈಗಾಗಲೇ ಬಿಸಿಸಿಐ ಕ್ರಿಕೆಟ್ ವೆಸ್ಟ್ ಇಂಡೀಸ್ ಜೊತೆಗೆ ಚರ್ಚೆ ನಡೆಸಿ ಕೆರಿಬಿಯನ್ ಪ್ರೀಮಿಯರ್ ಲೀಗ್ ಅನ್ನು ಒಂದು ವಾರ ಮುಂದೂಡಿಕೆ ಮಾಡಲಾಗಿದೆ. ಆಗಸ್ಟ್ 26ರಿಂದ ಸೆಪ್ಟೆಂಬರ್ 15ರವರೆಗೆ ಸಿಪಿಎಲ್ ನಡೆಯಲಿದೆ.ಆದರೆ ವಿಶ್ವಕಪ್ ದೃಷ್ಟಿಯಿಂದ ಇಂಗ್ಲೆಂಡ್ ಕ್ರಿಕೆಟಿಗರು ಮತ್ತು ಆಸ್ಟ್ರೇಲಿಯಾ ಕ್ರಿಕೆಟಿಗರು ಐಪಿಎಲ್ ದ್ವಿತಿಯಾರ್ಧದಲ್ಲಿ ಆಡುವುದು ಅನುಮಾನ. ಈ ಕುರಿತು ಇಸಿಬಿ ಈಗಾಗಲೇ ಖಚಿತ ಮಾಹಿತಿ ನೀಡಿದೆ. ಆದರೆ ಆಸ್ಟ್ರೇಲಿಯಾ ಕ್ರಿಕೆಟಿಗರು ಮಾತ್ರ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ.