ಭಾರತೀಯ ಕ್ರೀಡಾಪಟುಗಳು ಅಭ್ಯಾಸ ಆರಂಭ

Share

ಟೋಕಿಯೋ, ಜು, ೧೯: ಇಲ್ಲಿ ನಡೆಯಲಿರುವ ಓಲಿಂಪಿಕ್ಷ್ ಕ್ರೀಡೆಗೆ ಭಾರತೀಯ ಕ್ರೀಡಾಪಟುಗಳ ಮೊದಲ ತಂಡ ನಿನ್ನೆ ತಲುಪಿದ್ದು ಇಂದು ಮೈದಾನಕ್ಕಿಳಿದು ಅಭ್ಯಾಸದಲ್ಲಿ ತೊಡಗಿದ್ದರು.ಆದರೆ ಈಗ ಕೋವಿಡ್ ಆತಂಕ ಇಲ್ಲಿ ಆವರಿಸಿಕೊಂಡಿರುವುದು ಎಲ್ಲ ಕ್ರೀಡಾಪಟುಗಳಿಗೂ ಭಯ ಆವರಿಸಿದೆ.
ಆರ್ಚರ್‌ಗಳಾದ ದೀಪಿಕಾ ಕುಮಾರಿ ಹಾಗೂ ಅತನು ದಾಸ್, ಟೇಬಲ್ ಟೆನ್ನಿಸ್ ಆಟಗಾರರಾದ ಜಿ ಸಥಿಯನ್ ಹಾಗೂ ಎ ಶರತ್ ಕಮಾಲ್, ಶಟ್ಲರ್‌ಗಳಾದ ಪಿವಿ ಸಿಂಧು ಮತ್ತು ಬಿ ಸಾಯಿ ಪ್ರಣೀತ್ ಹಾಗೂ ಜಿಮ್ನ್ಯಾಸ್ಟಿಕ್ ಪಟು ಪ್ರಣತಿ ನಾಯಕ್ ತಮ್ಮ ಅಭ್ಯಾಸವನ್ನು ಸೋಮವಾರ ಆರಂಭಿಸಿದ್ದಾರೆ.
ಆರ್ಚರಿ ಜೋಡಿಗಳಾದ ಅತನು ದಾಸ್ ಹಾಗೂ ದೀಪಿಕಾ ಕುಮಾರಿ ಸೋಮವಾರ ಮುಂಜಾನೆ ಯುಮೆನೋಶಿಮಾ ಪಾರ್ಕ್‌ನಲ್ಲಿ ತಮ್ಮ ಅಂತಿಮ ಹಂತದ ಅಭ್ಯಾಸವನ್ನು ಆರಂಭಿಸಿದರು. ಮೊದಲ ಒಲಿಂಪಿಕ್ಸ್ ಪದಕದ ಮೇಲೆ ಕಣ್ಣಿಟ್ಟಿರುವ ಟೇಬಲ್ ಟೆನ್ನಿಸ್ ಆಟಗಾರರಾದ ಸಥಿಯನ್ ಹಾಗೂ ಶರತ್ ಕಮಾಲ್ ಕೂಡ ತಮ್ಮ ಸಿದ್ಧತೆಯನ್ನು ನಡೆಸಿದ್ದಾರೆ. ಇನ್ನು ಕೋಚ್ ಲಕ್ಷ್ಮಣ್ ಮನೋಹರ್ ಶರ್ಮಾ ಅವರ ಉಪಸ್ಥಿತಿಯಲ್ಲಿ ಜಿಮ್ನ್ಯಾಸ್ಟಿಕ್ ಆಟಗಾರ್ತಿ ಪ್ರಣತಿ ನಾಯಕ್ ಕೂಡ ಸಿದ್ಧತೆ ಪ್ರಾರಂಭಿಸಿದ್ದಾರೆ.


ಭಾರತೀಯ ಬ್ಯಾಡ್ಮಿಂಟನ್‌ನ ಸಿಂಗಲ್ಸ್ ತಂಡದ ಕೋಚ್ ಪಾರ್ಕ್ ತಯೀ ಸಾಂಗ್ ಅವರ ನೇತೃತ್ವದಲ್ಲಿ ಸಿಂಗಲ್ಸ್ ವಿಭಾಗದ ಆಟಗಾರರಾದ ಪಿವಿ ಸಿಂಧು ಹಾಗೂ ಪ್ರನೀತ್ ಅಭ್ಯಾಸವನ್ನು ನಡೆಸಿದರು. ಮತ್ತೊಂದೆಡೆ ಡಬಲ್ಸ್ ಜೋಡಿಯಾದ ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿಗೆ ಕೋಚ್ ಮಥಿಯಾಸ್ ಬೋಯಿ ಮಾರ್ಗದರ್ಶನ ನೀಡಿದರು.
ಈ ಮಧ್ಯೆ ಟೋಕಿಯೋ ಒಲಿಂಪಿಕ್ಸ್‌ಗೆ ಕೊರೊನಾವೈರಸ್‌ನ ಆತಂಕ ಹೆಚ್ಚಾಗುತ್ತಲೇ ಇದೆ. ಆಯೋಜಕ ಸಿಬ್ಬಂದಿಗಳ ಜೊತೆಗೆ ಈಗ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳು ಕೂಡ ಕೊರೊನಾವೈರಸ್‌ಗೆ ತುತ್ತಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಅಮೇರಿಕಾದ ಯುವ ಟೆನ್ನಿಸ್ ಆಟಗಾರ್ತಿ ಕೋಕೋ ಗೌಫ್ ಕೊರೊನಾವೈರಸ್‌ಗೆ ತುತ್ತಾಗಿ ಟೂರ್ನಿಯಿಂದ ಅನಿವಾರ್ಯವಾಗಿ ಹೊರಗುಳಿಯುವ ಅನಿವಾರ್ಯತೆಗೆ ಒಳಗಾದ ನಂತರ ಅಮೆರಿಕಾದ ಮಹಿಳಾ ಜಿಮ್ನ್ಯಾಸ್ಟ್ ಕೂಡ ಕೊರೊನಾವೈರಸ್‌ಗೆ ತುತ್ತಾಗಿರುವುದು ಬೆಳಕಿಗೆ ಬಂದಿದೆ. ಇವರ ಜೊತೆಗೆ ಮತ್ತೋರ್ವ ಸದಸ್ಯರನ್ನು ಕೂಡ ಐಸೋಲೇಶನ್‌ಗೆ ಒಳಪಡಿಸಲಾಗಿದೆ.

Girl in a jacket
error: Content is protected !!