ಟೋಕಿಯೋ,ಜು,23:ಕೊರೊನಾ ಸಂಕಷ್ಟದ ನಡುವೆ ಮುಂದಾಡಲಾಗಿದ್ದ ಒಲಿಂಪಿಕ್ಸ್ 2020 ಕೊನೆಗೂ ಇಲ್ಲಿನ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಜಗಮಗಿಸುವ ವಿದ್ಯುತ್ ಅಲಂಕಾರಗಳೊಂದಿಗೆ ವಿದ್ಯುಕ್ತ ಚಾಲನೆ ದೊರಕಿತು.
ಜಪಾನ್‌ನ ರಾಜಧಾನಿ ಟೋಕಿಯೋದಲ್ಲಿ 32ನೇ ಒಲಿಂಪಿಯಾಡ್ ಕ್ರೀಡಾಕೂಟ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ನಡೆದಿದೆ. ಜಪಾನ್‌ನ ಖ್ಯಾತ ಟೆನಿಸ್ ಆಟಗಾರ್ತಿ ನವೋಮಿ ಒಸಾಕಾ ಈ ಬಾರಿಯ ಒಲಿಂಪಿಕ್ಸ್‌ಗೆ ವಿದ್ಯುಕ್ತ ಚಾಲನೆ ನೀಡಿದ್ದಾರೆ.
ಟೋಕಿಯೋದಲ್ಲಿರುವ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಶುಕ್ರವಾರ ಟೋಕಿಯೋ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ನಡೆಯಿತು. ಈ ವೇಳೆ ಒಲಿಂಪಿಕ್ಸ್ ದೀಪಕ್ಕೆ ಅಗ್ನಿ ಸ್ಪರ್ಶ ಮಾಡುವ ಮೂಲಕ ನವೋಮಿ ಒಸಾಕಾ ಜಾಗತಿಕ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ನೀಡಿದ್ದಾರೆ.
ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದ ವೇಳೆ ಕ್ರೀಡಾಪಟುಗಳ ಪಥಸಂಚಲನ, ವಿವಿಧ ಸಂಗೀತ, ನೃತ್ಯ ಕಾರ್ಯಕ್ರಮಗಳು ಮನರಂಜಿಸಿದವು. ಜಪಾನ್‌ನ ಸಿನಿಮಾ ನಟರು, ಕಲಾವಿದರು ಆರಂಭೋತ್ಸವಕ್ಕೆ ಮೆರಗು ತಂದಿದ್ದರು. ಜೊತೆಗೆ ಸಿಡಿಮದ್ದು, ದೀಪಾಲಂಕಾರ ಕಾರ್ಯಕ್ರಮಕ್ಕೆ ಕಳೆ ನೀಡಿತ್ತು.
ಆಗಸ್ಟ್ 8ರಂದು ಸಮಾರೋಪ ಸಮಾರಂಭದ ಮೂಲಕ ಟೋಕಿಯೋ ಒಲಿಂಪಿಕ್ಸ್ ತೆರೆಕಾಣಲಿದೆ. ಈ ಒಲಿಂಪಿಕ್ಸ್‌ನಲ್ಲಿ 205 ರಾಷ್ಟ್ರಗಳಿಂದ ಬರುವ 11000ಕ್ಕೂ ಹೆಚ್ಚು ಕ್ರೀಡಾಪಟುಗಳು 17 ದಿನಗಳಲ್ಲಿ 50 ವಿಭಾಗಗಳಲ್ಲಿ 33 ಕ್ರೀಡೆಗಳಲ್ಲಿ 339 ಸ್ಪರ್ಧೆಗಳಲ್ಲಿ ಸ್ಪರ್ಧಿಸಲಿದ್ದಾರೆ.