Reported By: H.D. Savita
ಭಾರತೀಯ ಕ್ರಿಕೆಟ್ನಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಕ್ರಿಕೆಟ್ ನ ಎಲ್ಲಾ ಫಾರ್ಮ್ಯಾಟ್‌ಗಳಲ್ಲಿ ತಂಡದ ನಾಯಕತ್ವ ವಹಿಸಿದ್ದ ವಿರಾಟ್ ಕೊಹ್ಲಿ , ಈಗ ಟಿ-20 ಮಾದರಿಯಲ್ಲಿ ತಂಡದ ನಾಯಕತ್ವದಿಂದ ಹಿಂದೆ ಸರಿಯುವುದಾಗಿ ನಿರ್ಧರಿಸಿದ್ದಾರೆ.
ಮುಂದಿನ ತಿಂಗಳಿನಿಂದ ಯುಎಇಯಲ್ಲಿ ಆರಂಭವಾಗಲಿರುವ ಟಿ 20 ವಿಶ್ವಕಪ್ ನಂತರ ಕೊಹ್ಲಿ ಈ ರೂಪದಲ್ಲಿ ಈ ಜವಾಬ್ದಾರಿಯನ್ನು ತ್ಯಜಿಸಲಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಗುರುವಾರ ಸಂಜೆ ಟ್ವೀಟ್ ಮೂಲಕ ತಿಳಿಸಿದ್ದಾರೆ. ‘ನಾಯಕನಾಗಿ ಮತ್ತು ಆಟಗಾರನಾಗಿ ತಂಡಕ್ಕೆ ನನ್ನೆಲ್ಲ ಸಾಮರ್ಥ್ಯವನ್ನು ಧಾರೆಯೆರೆದಿದ್ದೇನೆ. ಇನ್ನು ಮುಂದೆಯೂ ಆಟಗಾರನಾಗಿ ಕಾಣಿಕ ನೀಡುತ್ತೇನೆ. ಕೋಚ್ ರವಿಶಾಸ್ತ್ರಿ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ ಮತ್ತು ರೋಹಿತ್ ಶರ್ಮಾ ಅವರೊಂದಿಗೆ ಈಕುರಿತು ಚರ್ಚಿಸಿ ನಿರ್ಧಾರ ಕೈಗೊಂಡಿದ್ದೇನೆ’ ಎಂದೂ ಕೊಹ್ಲಿ ಹೇಳಿದ್ದಾರೆ.
ಟಿ20 ತಂಡದ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದೇನೆ. ದುಬೈನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ ನಂತರ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ತಂಡಗಳಿಗೆ ಮಾತ್ರ ನಾಯಕನಾಗಿ ಮುಂದುವರಿಯುತ್ತೇನೆ. ಚುಟುಕು ಕ್ರಿಕೆಟ್ ತಂಡದಲ್ಲಿ ಬ್ಯಾಟ್ಸ್‌ಮನ್ ಆಗಿ ಉತ್ತಮ ಕಾಣಿಕೆ ಕೊಡುವ ಪ್ರಯತ್ನ ಮಾಡುತ್ತೇನೆ’ ಎಂದು 32 ವರ್ಷದ ವಿರಾಟ್ ಬರೆದಿದ್ದಾರೆ.
‘ನಮ್ಮ ಮೇಲಿರುವ ಕೆಲಸದೊತ್ತಡವನ್ನು ಅರಿತುಕೊಳ್ಳುವುದು ಮುಖ್ಯ. ಕಳೆದ 8–9 ವರ್ಷಗಳಿಂದ ಎಲ್ಲ ಮೂರು ಮಾದರಿಗಳಲ್ಲಿ ಆಡುವ ಮತ್ತು ಐದಾರು ವರ್ಷಗಳಿಂದ ನಾಯಕತ್ವ ವಹಿಸುವ ಒತ್ತಡವನ್ನು ನಿಭಾಯಿಸಿದ್ದೇನೆ. ಆದರೆ ಈಗ ನನಗೆ ಸ್ವಲ್ಪ ಬಿಡುವಿನ ಅವಕಾಶ ನೀಡಬೇಕಿದೆ. ಆದ್ದರಿಂದ ಚುಟುಕು ಕ್ರಿಕೆಟ್ ನಾಯಕತ್ವ ಬಿಟ್ಟುಕೊಡುತ್ತಿದ್ದೇನೆ’ ಎಂದಿದ್ದಾರೆ.
ಇನ್ನೂ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರಿಗೆ ನಾಯಕತ್ವದ ಪಟ್ಟ ಕಟ್ಟುವುದು ಬಹುತೇಕ ಖಚಿತವಾಗಿದೆ.