ಹಲವು ಹೂಗಳ ಮಧುರ ಜೇನು ಡಿ.ವಿ.ಜಿ…
ಡಿವಿಜಿಯವರದು ಸಾಹಿತ್ಯ,ಸಂಗೀತ,ಸಂಸ್ಕೃತಿ,ಸಮಾಜಸೇವೆ ಹೀಗೆ ಹಲವು ರೂಪಗಳಲ್ಲಿ ಅರಳಿದ ಮೇರು ಪ್ರತಿಭೆ. ಬರೆದಂತೆಯೇ ಬದುಕಿದ ಮಹನೀಯರ ಕಾಲವದು.ಆ ಜೀವನ ಮೌಲ್ಯಗಳು ಇಂದಿನ ತಲೆಮಾರಿಗೆ ಹೇಗೆ ಅಗತ್ಯ ಎಂಬುದನ್ನ ಅವರ ಓದಿನ ಮೂಲಕವೂ ಮನಗಾಣಬಹುದಾಗಿದೆ.
ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ.
ಕಗ್ಗದ ಈ ಸಾಲುಗಳು ಆಕಾಲದ ಸಾಮಾಜಿಕ ಮೌಲ್ಯಗಳನ್ನ ಹೇಳುವಂತೆಯೇ ಆ ಕಾಲದ ಜನರ ಜೀವನ ಕ್ರಮವನ್ನೂ ಸೂಚಿಸುವಂತಿವೆ.ಅಷ್ಟೇಕೆ ಈ ಸಾಲುಗಳ ಮೂಲಕ ಡಿ.ವಿ.ಜಿ ಅವರ ವ್ಯಕ್ತಿತ್ವವನ್ನೂ ಗುರ್ತಿಸಿಬಹುದಾಗಿದೆ. ಅಪಾರ ಓದಿನ ಬೆಂಬಲವಿದ್ದರೂ ಡಿವಿಜಿ ತಮ್ಮ ಬರಹಗಳನ್ನ ಕುರಿತ ಸಾಮಾನ್ಯರ ಅಳತೆಗೂ ಬೆಲೆ ನೀಡುತಿದ್ದವರು.ಕೋಪಗೊಳ್ಳದೆ ಪ್ರೀತಿ ನಗೆಗಳಿಂದಲೇ ವಿಮರ್ಶೆಯನ್ನ ಆಸ್ವಾದಿಸುತ್ತಿದ್ದವರು ಅವರು ಈ ಸಂಗತಿಗೆ ಸಾಕ್ಷಿಯೆಂಬಂತೆ ಬೆಳಗರೆ ಕೃಷ್ಣಶಾಸ್ತ್ರಿಗಳು ಬರೆದ ’ಸಾಹಿತಿಗಳ ಸ್ಮೃತಿ’ ಕಾಣುತ್ತದೆ. ” ಒಮ್ಮೆ ತಳುಕಿಗೆ ನಿಟ್ಟೂರು ಶ್ರೀನಿವಾಸರಾಯರೊಂದಿಗೆ ಕಾರ್ಯಕ್ರಮಕ್ಕೆ ಬಂದಿದ್ದ ಡಿವಿಜಿ ಯವರು ಜನರ ಮಧ್ಯೆ ಕ್ಯಾತಗೊಂಡನಹಳ್ಳಿಯ ಅಯ್ಯಣ್ಣನವರನ್ನು ನೋಡಿ ’ಅಗೋ , ಅಯ್ಯಣ್ಣ ಬಂದಿದ್ದಾನೆ,ನನಗೆ ಭಯವಾಗುತ್ತೆ’ ಎಂದು ನಿಟ್ಟೂರರ ಹಿಂದೆ ಅಡಗಿದರಂತೆ ಯಾಕೆ ಏನು ಅಂತ ವಿಚಾರಿಸಲು ಒಮ್ಮೆ ಅವರು ಇವರ ಮನೆಗೆ ಬಂದಿದ್ದಾಗ ಮಂಕುತಿಮ್ಮನ ಕಗ್ಗ ಕೊಟ್ಟಿದ್ದರಂತೆ.ಅಯ್ಯಣ್ಣ ಬಹಳ ಸಂತೋಷದಿಂದ ತೆಗೆದುಕೊಂಡು ಹೋಗಿದ್ದರು.ಮತ್ತೊಮ್ಮೆ ಬಂದಾಗ ಲೇಖಕರ ಸಹಜವಾದ ಕುತೂಹಲದ ಪ್ರಶ್ನೆ ಕೇಳಿದರು ಡಿವಿಜಿ ” ಏನಪ್ಪ ಮಂಕುತಿಮ್ಮ ಹೇಗಿದ್ದಾನೆ?” ಅದಕ್ಕೆ ಅಯ್ಯಣ್ಣನವರು ” ಸ್ವಾಮಿ ನೀವೇನೋ ಮಂಕುತಿಮ್ಮ ಎಂದು ಕರೆದಿದ್ದೀರಿ.ಆದರೆ ಅವನು ಬುದ್ದಿವಂತರಿಗೆ ಮಾತ್ರ ಅರ್ಥವಾಗುತ್ತಾನೆಯೇ ಹೊರತು ನಮ್ಮ ಹಳ್ಳಿಯ ಮಂಕರಿಗಲ್ಲ.ಸರ್ವಜ್ಞನ ಪದಗಳಿಗೆ ಹೋಲಿಸಿರುವ ವಿಮರ್ಶೆಯನ್ನ ಓದಿರುವೆ ಸರ್ವಜ್ಞ ಹಳ್ಳಿಗರಿಗೂ ಎಟುಕುತ್ತಾನೆ.ಈ ಮಂಕುತಿಮ್ಮ ತಿಣುಕಿದರೆ ಮಾತ್ರ ಆ ತಿಮ್ಮನ ಭಾಷೆ ಅರ್ಥವಾಗುತ್ತದೆ” ಎಂದು ಬಿಟ್ಟರಂತೆ. ವಿನೋದವಾಗಿಯೂ ಗಂಭೀರವೆಂಬಂತೆಯೂ ಈ ಮಾತನ್ನ ತೆಗೆದುಕೊಂಡ ಡಿವಿಜಿ ಮೇಲಿನಂತೆ ನಟಿಸಿದರು.
ವಾಸ್ತವವಾಗಿ ಅತ್ಯಂತ ಜನಪ್ರಿಯವಾದ ಮರು ಮುದ್ರಣದ ಕೃತಿಗಳಲ್ಲೊಂದಾದ ಇದು ಅವರಿಗೆ ಸರ್ವಜ್ಞನಂತೆಯೇ ವೇಮನ ಮತ್ತು ತಿರುವಳ್ಳವರ್ ಅವರ ಅಭಿದಾನವನ್ನೂ ತಂದು ನೀಡಿದೆ.ಇಲ್ಲಿ ಡಿವಿಜಿ ವಿಶ್ವೇಶ್ವರಯ್ಯನವರು ಮಿರ್ಜಾ ಇಸ್ಮಾಯಿಲ್ ರಂತಹ ಮೇಧಾವಿಗಳೊಂದಿಗೆ ನಡಕೊಂಡಂತೆಯೇ ಅಯ್ಯಣ್ಣನಂತವರೊಂದಿಗೂ ಅದೇ ನಗುವಿನ ಲೇಪನದಿಂದಲೇ ಇದ್ದರೆನ್ನುವುದೇ ವಿಸ್ಮಯಕಾರಿ.
ಉಮರ್ ಖಯಾಮ್ ನ ರುಬಾಯಿತ್ ಗಳ ಸಂಕಲನ ’ಉಮರನ ಒಸಗೆ’, ಅವರ ಸಂಗೀತ ದೃಷ್ಟಿಯನ್ನ ತೋರುವ ’ಅಂತಃಪುರ ಗೀತೆಗಳು’,ವಿಚಾರಶೀಲತೆಯನ್ನ ವಿವರಿಸುವ ’ಜೀವನ ಸೌಂದರ್ಯ ಮತ್ತು ಸಾಹಿತ್ಯ’ ಮತ್ತು ’ಸಾಹಿತ್ಯ ಶಕಿ’ ಎಂಬ ಕೃತಿಗಳು ಅವರ ಸಂಸ್ಕೃತಿ ಚಿಂತನೆ,ಜೀವನ ಧರ್ಮ ಯೋಗ ಕೃತಿಗಳು ಅವರ ಬರಹಗಳ ಮಹತ್ವವನ್ನ ಸಾರುತ್ತವೆ. ಡಿವಿಜಿ ತಮ್ಮ ಇಪ್ಪತ್ತೆರಡನೆಯ ವಯಸ್ಸಿಗೇ ’ದಿವಾನ್ ರಂಗಾಚಾರ್ಲು’ ಕೃತಿ ಬರೆದವರು. ಇದನ್ನ ಆಗ ಚೀಫ್ ಇಂಜಿನಿಯರ್ ಆಗಿದ್ದ ವಿಶ್ವೇಶ್ವರಯ್ಯನವರು ಓದಿ ತುಂಬಾ ಮೆಚ್ಚಿಕೊಂಡಿದ್ದರು.ಮೈಸೂರಿನ ದಿವಾನರಾಗಿದ್ದ ಆನಂದರಾವ್ ಅವರಂತೂ ಈ ಬರಹಗಳನ್ನ ಎಷ್ಟು ಇಷ್ಟಪಟ್ಟಿದ್ದರೆಂದರೆ ಅದು ಪುಸ್ತಕವಾಗಿ ಹೊರ ಬರುತ್ತಿದ್ದಂತೆಯೇ ಅದರ ನೂರು ಪ್ರತಿಗಳನ್ನ ಕೊಂಡು ಸ್ನೇಹಿತರಿಗೆಲ್ಲಾ ಹಂಚಿದ್ದರಂತೆ.
ಡಿ.ವಿ.ಜಿ.ಅವರ ತಲೆಮಾರು ಮೌಲ್ಯದ ನಡೆಯನ್ನ ಸಾರುವಂತದ್ದು.ಆದರ್ಶ ಅವರ ಕಾಲದ ಗುಣ.ಮಾದರಿಯಾಗಿ ಬದುಕಬೇಕೆಂಬುದೇ ಆಕಾಲದ ಜನಕ್ಕಿದ್ದ ಛಲ.ತಮಗಿಂತಲೂ ಸಮಾಜದ ಹಿತ ಮುಖ್ಯ ಎಂದು ಸಮೂಹ ಪ್ರಧಾನವಾಗಿ ಬದುಕಿದವರು ಆ ಜನ.
ಡಿ.ವಿ.ಜಿ. ಅಸಾಧಾರಣ ಧಾರಣಶಕ್ತಿ ಮತ್ತು ಸಮದರ್ಶಿತ್ವದಿಂದ ಜೀವನ ಸಾಗಿಸಿದ ಮಹಾಪಂಡಿತರು ” ವನ ಸುಮದೊಳೆನ್ನ ಮನವನು ವಿಕಸಿಸುವಂತೆ ಮನವನು ಅನುಗೊಳಿಸು ಗುರುವೇ ಹೇ ದೇವಾ” ಎಂಬಂತೆ ಪ್ರಕೃತಿ ಕೇಂದ್ರಿತವಾಗಿ ಬದುಕಿದರವರು.ತ್ಯಾಗ ಮೂಲವಾದ ಸಾಧನೆಯ ಪರಿಮಳವನ್ನ ಎಲೆಮರೆಯ ಹೂವಿನಂತೆಯೇ ಕಾಣಬಯಸಿದವರು.ಅವರು ಎಂದಿಗೂ ಯಾರ ಹಂಗಿಗೂ ಬೀಳಲಿಲ್ಲ. ಯಾವ ಪ್ರಲೋಭನೆಗಳಿಗೂ ಒಳಗಾಗಲಿಲ್ಲ. ಮೈಸೂರು ಮಹಾರಾಜರೂ,ಸರ್.ಎಂ.ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ರಂತಹ ದೊಡ್ಡವರು ಬೆನ್ನಿಗಿದ್ದರೂ ಎಂದಿಗೂ ಯಾವ ಆಮಿಷಗಳಿಗೂ ಬಲಿಬೀಳಲಿಲ್ಲ. ಮುಖ್ಯ ಮಂತ್ರಿ ದೇವರಾಜ ಅರಸು ಅವರು ಮುಂಜೂರು ಮಾಡಿದ ಸಂಭಾವನೆಯನ್ನೂ, ಅನೇಕರ ಗೌರವ ಸನ್ಮಾನಗಳನ್ನೂ ವಿರಾಗಿಯಂತೆಯೇ ತಿರಸ್ಕರಿಸಿದ ಇವರು ತಮ್ಮ ಬದುಕನ್ನು ತಾವು ನಂಬಿದ ಸಿದ್ದಾಂತಗಳಿಂದಲೇ ಅಗ್ನಿದಿವ್ಯದಂತಹ ಬಡತನವನ್ನ ಕಳೆದರು.ಸಾರ್ವಜನಿಕ ಕೆಲಸಗಳಿಗೆ ಬಂದ ಚೆಕ್ ಗಳನ್ನಾಗಲೀ, ಸ್ನೇಹವನ್ನಾಗಲೀ, ಪರಿಚಯವನ್ನಾಗಲೀ ಅವರೆಂದೂ ಸ್ವಾರ್ಥಕ್ಕೆ ಬಳಸಿಕೊಳ್ಳಲಿಲ್ಲ.ಎಂಬ ಸಂಗತಿಯೇ ಇಂದಿನ ಹಣ ಪ್ರಧಾನ ಕಾಲಕ್ಕೆ ವಾಣಿಜ್ಯ ಪ್ರಧಾನ ನಡೆಗಳಿಗೆ ಕನಸಿನಂತೆ ಕಾಣುತ್ತವೆ.ಹಣಕ್ಕೆ ಅಕ್ಷರಹಚ್ಚಿಯೇ ತೂಗುವ ಜನ,ಪ್ರಶಸ್ತಿಗಾಗಿ ಹಿಂಬಾಲು ದೊಂಬಾಲು ಬಿದ್ದು ಗೆದ್ದು ನಗೆಯ ಜೊಲ್ಲುಸುರಿಸುವ ನಮ್ಮ ಸಾಹಿತಿಗಳ ಕಥನ ಕಾಲದಲ್ಲಿ ಪುಸ್ತಕವೊಂದಕ್ಕೆ ಪ್ರಶಸ್ತಿ ಬಂದೊಡನೆ ಸಂಸ್ಕಾರದ ನಡೆಯನ್ನೂ ಮರೆಯುವ ಜನರಿರುವ,ಈ ಕಾಲಕ್ಕೆ ಇವರ ಬದುಕುವ ಸಂದೇಶ ಮಾರ್ಗದರ್ಶಿಯಂತಿದೆ.
ಡಿವಿಜಿ ಯವರ ಧೀರನಡೆಯನ್ನ ಶತಾವಧಾನಿ ಗಣೇಶ್ ಅವರು ’ಬ್ರಹ್ಮಪುರಿಯ ಬಿಕ್ಷುಕ’ ಕೃತಿಯಲ್ಲಿ ಸೊಗಸಾಗಿ ತಂದಿದ್ದಾರೆ. ಮೈಸೂರು ಟೈಮ್ಸ ಆಂಗ್ಲ ಪತ್ರಿಕೆಯ ಸಹ ಸಂಪಾದಕರಾಗಿದ್ದಾಗ ಅವರೊಮ್ಮೆ ಹಾಸ್ಟೆಲ್ ಹಗರಣವೊಂದನ್ನು ಪ್ರಕಟಿಸಿದರು.ಆ ಕಾಲೇಜಿನ ಮಾನ ಹೋಗುವುದನ್ನರಿತ ಪ್ರಾಂಶುಪಾಲರು ಅಡುಗೆ ಭಟ್ಟರ ಕೈಲಿ ಮಾನನಷ್ಟ ಮುಖದ್ದಮೆ ಹಾಕಿಸಿದರು. ಆಗ ಸಂಪಾದಕರು ಕ್ಷಮೆಯ ತಪ್ಪೊಪ್ಪಿಗೆ ಪ್ರಕಟಿಸಿಬಿಟ್ಟರು. ಇದನ್ನ ಕಂಡ ಡಿವಿಜಿ ಪ್ರತಿಭಟಿಸಿ ರಾಜಿನಾಮೆ ನೀಡಿ ಪತ್ರಿಕೆಯಿಂದ ಹೊರಬಂದು ಬಿಟ್ಟರು.ಆಗಿನ್ನೂ ಅವರ ಮದುವೆಯಾದ ಹೊಸತು. ತಂದೆಯವರನ್ನೂ, ಮನೆಯನ್ನೂ ಮುನ್ನೆಡೆಸುವ ಜವಬ್ದಾರಿ ಹೊತ್ತಿದ್ದ ಇವರನ್ನ ಗೆಳೆಯರು ಮುಂದೇನು ಮಾಡುತ್ತೀರಿ? ಎಂದು ಕೇಳಿದರು. ಅದಕ್ಕೆ ಡಿವಿಜಿ ಕೊಟ್ಟ ಉತ್ತರ “ದೇಶ ವಿಶಾಲವಾಗಿದೆ ಧಣಿಗಳು ಅಸಂಖ್ಯರಾಗಿದ್ದಾರೆ.ನಡೆ ಶುದ್ಧ ನುಡಿ ಶುದ್ಧ ಜನಕ್ಕೆ ಮಾತ್ರ ಈ ಛಾತಿ ಬರಲು ಸಾಧ್ಯ.
ಮೌಲ್ಯದ ನಡೆ ಹೂವಿನ ಹಾದಿಯಲ್ಲ.ಅದು ಬೆಂಕಿಯ ಕೊಂಡ.ಹಾಗಾಗಿ ಡಿವಿಜಿ ಜೀವನ ಪರರಿಗೆ ಸುಲಭ ಸಾಧ್ಯವಾಗುವ ಹಾದಿಯಲ್ಲ. ಒಮ್ಮೆ ವಿಶ್ವೇಶ್ವರಯ್ಯನವರು ಡಿವಿಜಿ ಅವರೊಡನೆ ಮಾತನಾಡುತ್ತ ನಾನು ನಿನ್ನ ಮನೆಗೊಂದು ಭೇಟಿ ನೀಡಬೇಕು ಎಂದರು. ಕೂಡಲೇ ಎದ್ದು ವಂದಿಸಿದ ಡಿವಿಜಿ ಕ್ಷಮಿಸಬೇಕು.ತಾವು ನನ್ನ ಮನೆಗೆ ಬರಬಾರದು ಎಂದು ವಿನಂತಿಸಿದರು. ವಿಶ್ವೇಶ್ವರಯ್ಯನವರಿಗೆ ಅಚ್ಚರಿ,ಕೌತುಕ,ತಮ್ಮನ್ನ ಮನೆಗೆ ಬರಬೇಡಿರೆಂದು ಹೇಳಿದವರು ಯಾರೂ ಇಲ್ಲ, ಇದೇನಿದು! ಯಾರಾದರೂ ಮನೆಗೆ ಬರುತ್ತೇನೆನ್ನುವ ಗೆಳೆಯರನ್ನ ನೇರವಾಗಿಯೇ ತಡೆವುದುಂಟೇ? ಎಂದು ತತ್ ಕ್ಷಣ ಪ್ರಶ್ನಿಸಿದ್ದರು. ಡಿವಿಜಿ ಇದಕ್ಕೆ ನಿಜ ನನ್ನ ಕಾರಣ ಬೇರೆಯಿದೆ.ತಾವು ನನ್ನ ಮನೆಗೆ ಬಂದರೆ ತಮಗೆ ಮುರುಕಲು ಕುರ್ಚಿ-ಹರುಕಲು ಚಾಪೆಗಳಲ್ಲೆದೆ ಬೇರೆ ಇಲ್ಲ.ನನ್ನ ಚಿಂದಿ ಬದುಕು ನಿಮಗೆ ದುಃಖ ತರುತ್ತದೆ.ನನ್ನನ್ನು ಒಳ್ಳೆಯ ಸಂಪಾದನೆಯ ತಾಣಗಳಿಗೆ ಸೇರಿಸಬೇಕೆಂದು ತಾವು ಹಿಂದೆ ಮಾಡಿದ ಪ್ರಯತ್ನಗಳೂ ಒಲ್ಲೆನೆಂದ ನನ್ನ ಪರಿಯೂ ತಮಗೆ ನೆನಪಾಗಿ ಬೇಸರವಾಗುತ್ತದೆ. ಎನ್ನುವ ಬಗೆ ಒಂದಾದರೆ.ಅವರ ಪತ್ನಿ ಕಮ್ಮಿಯವರಲ್ಲ.ಒಮ್ಮೆ ಬಂಧುಗಳ ಮನೆಯಲ್ಲಿ ಯಾವುದೋ ಸಮಾರಂಭವಿದ್ದಿತು.ಡಿವಿಜಿ ಹೆಂಡತಿ-ಮಕ್ಕಳನ್ನು ಅಲ್ಲಿಗೆ ತೆರಳಬೇಕೆಂದು ಹೇಳಿ ತಾವು ಮನೆಯಲ್ಲಿಯೇ ಉಳಿದು ಯಾವುದೋ ಬರವಣಿಗೆಗೆ ತೊಡಗಿದ್ದರು. ಸಂಜೆಯಾದರೂ ಗೃಹಿಣಿ ಹೊರಟಂತೆ ತೋರಲಿಲ್ಲ. ಆ ಬಗೆಗೆ ಪ್ರಶ್ನಿಸಿದಾಗ ಮಕ್ಕಳನ್ನು ಕಳುಹಿಸಿದ್ದೇನೆ ಎಂಬ ಉತ್ತರ ಬಂದಿತು. ತೀರ ಮೀರಬಾರದವರ ಮನೆಯಾದ ಕಾರಣ ಆಕೆಯೂ ಹೋಗಿ ಬರಬೇಕೆಂಬ ಡಿವಿಜಿಯವರ ಇರಾದೆ. ಒತ್ತಾಯ ಮತ್ತೆ ಮತ್ತೆ ಹೊಮ್ಮಿದಾಗ ನಿರುಪಾಯರಾದ ಭಾಗೀರಥಮ್ಮನವರು ಗದ್ಗದಿಸಿದರು: ನೋಡಿ,ನೀವು ತುಂಬ ಬಲವಂತ ಮಾಡಿ ಉತ್ತರ ಹೊರಡಿಸುತ್ತಿದ್ದೀರಿ. ನಾನು ಹೇಳದೆ ವಿಧಿ ಇಲ್ಲದಂತಾಗಿದೆ. ನನಗಿರುವುದು ಇದೊಂದೇ ಸೀರೆ ಇದೂ ಅಲ್ಲಲ್ಲಿ ಹರಿದಿದೆ. ಇಂಥ ಸೀರೆಯುಟ್ಟು ಬಂಧುಗಳ ಮನೆಯ ಸಮಾರಂಭಕ್ಕೆಂದು ಹೋಗುವುದು ಸರಿಯಾಗದು. ನನಗೇನೋ ಇದರಲ್ಲಿಯೇ ಸಮಾಧಾನವಿದೆ.ಆದರೆ ಹೀಗೆಯೇ ಹೋದರೆ ಜನ ನಿಮ್ಮ ಬಗೆಗೆ ಆಡಿಕೊಳ್ಳುತ್ತಾರೆ.ಅದು ನನಗೆ ಸೇರದು. ಧರ್ಮಪತ್ನಿಯಾಗಿ ನಾನು ನಿಮ್ಮ ಮರ್ಯಾದೆ ಕಾಪಾಡಬೇಕಲ್ಲವೇ!. ಇಂತಹ ಜೋಡಿ ಇಂದಿನ ಜಾಗತಿಕ ಲೋಕದಲ್ಲಿ ವಿರಳಾತಿ ವಿರಳವೇ ಸರಿ.
ತಮ್ಮಲ್ಲಿ ಇದ್ದದ್ದನ್ನ ನೀಡಿ ತಮಗೆ ಬರಬಹುದಾದದ್ದನ್ನ ತಿರಸ್ಕರಿಸಿ ಕಟುವಾದ ಸರಳ ಬಡತನದ ಮಾದರಿ ಬದುಕಿಗೆ ಅಂಟಿಕೊಂವರು ಡಿ.ವಿ.ಜಿ.ಯಾವ ಮೇಲಿರಿಮೆ ಕೀಳಿರಿಮೆಗಳಿಲ್ಲದೆ ಅವರು ಸ್ಥಿತಪ್ರಜ್ಞನಂತೆ ಬದುಕಿದವರು.ಇಂತಹ ಒಂದು ಘಟನೆಯನ್ನ ಎನ್. ಎಸ್.ಲಕ್ಷ್ಮಿ ನಾರಾಯಣ ಭಟ್ಟರ ’ಸಾಹಿತ್ಯ ಸಂಪುಟ’ ದಲ್ಲಿ ನೋಡಬಹುದು.ಅಂದೊಂದು ದಿನ ಅವರ ಮಿತ್ರ ಸುಧಾ ಪತ್ರಿಕೆ ಅಂದಿನ ಸಂಪಾದಕ ಸೇತೂರಾಮ್ ಒಮ್ಮೆ ಅವರ ಮನೆಗೆ ತೆರಳುತ್ತಾರೆ.ಅವರ ಅಣತಿಯಂತೆ ಕ್ಷಣ ಹೊರಬಂದು ಅವರ ಮನೆಮುಂದಿನ ಮರದ ಬಳಿ ಕುಳಿತಾಗ ಡಿವಿಜಿ ಅವರ ಮನೆಯ ಆಳು ಒಂದು ಚೀಟಿಯನ್ನ ಅಂಗಡಿಯವನಿಗೆ ಕೊಡುತ್ತಾನೆ. ಸೇತೂರಾಮ್ ಕುತೂಹಲದಿಂದ ಬಗ್ಗಿ ನೋಡುತ್ತಾರೆ ಆ ಚೀಟಿಯಲ್ಲಿ ಇದ್ದದ್ದು ಮನೆಗೆ ಅನಿರೀಕ್ಷಿತ ಅತಿಥಿ ಬಂದಿದ್ದಾರೆ ಕಾಫಿಪುಡಿ, ಸಕ್ಕರೆ ಉದ್ದರಿ ಕೊಟ್ಟರೆ ನಾಳೆ ತಪ್ಪದೆ ಹಣ ಚುಕ್ತಾ ಮಾಡುತ್ತೇನೆಎಂಬ ಎರಡು ಸಾಲು.ಇದರ ಹಿಂದಿನ ದಿನವೇ ಸಾಹಿತ್ಯ ಪ್ರೇಮಿಗಳು ಡಿವಿಜಿ ತಮಗೆ ಗೌರವವಾಗಿ ನೀಡಿದ ಲಕ್ಷ ರೂಪಾಯಿಗಳನ್ನ ಗೋಖಲೆ ಸಂಸ್ಥೆಗೆ ದಾನಮಾಡಿ ಬಂದು ಇಲ್ಲಿ ಯಾವುದೇ ಕೀಳಿರಿಮೆಗಳಿಲ್ಲದೆ ಬೇಡುವ ಅವರ ಈ ಸ್ಥಿತಿ ಕಂಡು ಅವರು ಮೂಕವಿಸ್ಮಿತರಾಗುತ್ತಾರೆ.
ಡಿ.ವಿ.ಜಿ ಅವರ ಅನೂಹ್ಯ ಪ್ರೀತಿಯನ್ನ ಬೆಳಗೆರೆ ಕೃಷ್ಣ ಶಾಸ್ತ್ರಿಯವರು ಸೊಗಸಾಗಿ ಕಟ್ಟಿಕೊಡುತ್ತಾರೆ.ಲಕ್ಷ್ಮೀಶ ಕವಿಯ ಕಾರ್ಯಕ್ರಮಕ್ಕೆ ಕಡೂರಿನ ಹಯತ್ ಸಾಬ್ ರೊಂದಿಗೆ ಆಹ್ವಾನಿಸಲು ಡಿವಿಜಿಯವರ ಮನೆಗೆ ಹೋದಾಗ ಯಾರ‍್ಯಾರನ್ನ ಕರೆದಿದ್ದೀರಿ? ಎಂದರು ಮಾಸ್ತಿ,ದೇವುಡು,ಎಂ.ಆರ್.ಶ್ರೀ,ವೀ.ಸೀ., ರಾಜರತ್ನಂ, ಸಿ.ಕೆ.ವೆಂಕಟರಮಣಯ್ಯ ಹೆಸರು ಹೇಳಿದಾಗ ” ಓಹ್! ತುಂಬಾ ದೊಡ್ಡದಾಗಿ ಹಚ್ಚಿಕೊಂಡಿದ್ದೀರಿ ಎಂದರು ಕಣ್ಣರಳಿಸಿ.ಮೂರು ದಿನಗಳ ಉತ್ಸವ ತಾವು ಪುರುಸೊತ್ತು ಮಾಡ್ಕೊಂಡು ಬರಬೇಕು ಸ್ವಾಮಿ ಎಂದು ಹಯತ್ ಸಾಹೇಬರು ಕೇಳಲು ” ಅಲ್ಲಾ ಸಾಹೇಬರೇ,ನಡೀತಾ ಇರೋದು ಲಕ್ಷ್ಮೀಶ ಕವಿಯ ಜಯಂತಿ ಸಡಸ್ತಾ ಇರೋದು ನೀವು,ಮಹಮ್ಮದ್ ಹಯಾತ್ ಸಾಹೇಬರು! ಇದಕ್ಕಿಂತಾ ಇನ್ನೇನು ಬೇಕು ವಿಶೇಷ?” ಎಂದು ಸತ್ಕರಿಸಿ ಎರಡೆರಡು ಬಾರಿ ತಬ್ಬಿಕೊಂಡು ಬೆನ್ನು ತಟ್ಟುತ್ತಾ ಗೇಟಿನವರೆಗೂ ಬಂದು ಬೀಳ್ಕೊಟ್ಟರು.
ಡಿವಿಜಿ ತೆಲುಗು ಕನ್ನಡ ನಾಡಿನ ಭಾಷಿಕ ಸಾಮರಸ್ಯದಂತೆ ಇದ್ದರು. ತ್ಯಾಗರಾಜರು ಅವರ ಉಸಿರಾಗಿದ್ದರೆ. ಕರ್ನಾಟಕಾಂದ್ರ ಸವ್ಯಸಾಚಿಯೆಂದು ಕರೆಸಿಕೊಳ್ಳುತ್ತಿದ್ದ ರಾಳ್ಳಪಳ್ಳಿ ಅನಂತಕೃಷ್ಣ ಶರ್ಮರು ಇಲ್ಲ ಇಲ್ಲ ನಿಮ್ಮೆದುರು ನಾವೆಲ್ಲಾ ಬರಿಯ ಎಳೆಯ ಮಕ್ಕಳು ಎನ್ನುತ್ತಿದ್ದರು.ಡಿವಿಜಿ ಸ್ವತಂತ್ರ ಪೂರ್ವದಲ್ಲಿಯೇ ವೀರೇಶ ಲಿಂಗಂ ಪಂತಲು ಅವರ ಒಡನಾಡಿಯಾಗಿ ಅನೇಕ ವಿಧವಾ ವಿವಾಹಗಳನ್ನ ನಡೆಸಿದ್ದರು.
ಮುವ್ವತ್ತೈದು ವರ್ಷಕ್ಕೇ ಪತ್ನಿ ಕಳೆದುಕೊಂಡು ಉದ್ದಕ್ಕೂ ಏಕ ಪತ್ನಿ ವ್ರತಸ್ಥರಾಗಿಯೇ ಬದುಕಿದ ಡಿವಿಜಿ ಅವರ ಬದುಕಿನ ಕಥನ ಅಂದಿನವರ ಪಾಂಡಿತ್ಯ ಲೋಕವನ್ನೂ,ಗುರು ಶಿಷ್ಯರ ಅನುಬಂಧಗಳನ್ನೂ ತಿಳಿಸುವಂತಿದೆ. ಮಾನವೀಯತೆಯೇ ಡಿವಿಜಿಯವರ ಪರಮ ಧರ್ಮವಾಗಿತ್ತು.ಸಿಕ್ಕಿ ಬಿದ್ದ ಕಳ್ಳನನ್ನೂ ದಂಡಿಸದೆ ಮನುಷ್ಯನನ್ನಾಗಿ ಪರಿವರ್ತಿಸಿದರು. ಮುಂದೆ ಆತನೇ ತನ್ನ ಹಣ್ಣಿನ ಅಂಗಡಿಯಲ್ಲಿ ಕುಟುಂಬದೊಂದಿಗೆ ಡಿವಿಜಿ ಅವರನ್ನ ಮನತುಂಬಿ ಸತ್ಕರಿಸಿದ.ಅಂತಹ ಡಿ.ವಿ.ಜಿ.ಅವರ ಕಾಲವನ್ನ ಆದರ್ಶವು ಆಚರಣೆಯಲ್ಲಿದ್ದ ಕಾಲ ಎನ್ನಬಹುದಲ್ಲವೇ?