ಸ್ಮಾರಕ ಪರಂಪರೆ ಮತ್ತು ಸಾಂಸ್ಕೃತಿಕ ಸಂಗತಿಗಳು
ಚರಿತ್ರೆಯ ರಚನೆಯಲ್ಲಿ ಆಕರಗಳ ಪಾತ್ರ ಬಹುಮುಖ್ಯ. ಆಕರಗಳನ್ನು ಸಾಹಿತ್ಯಕ ಮತ್ತು ಪುರಾತತ್ವೀಯ ಆಕರಗಳೆಂದು ವಿಭಾಗಿಸಲಾಗಿದೆ. ಪುರಾತತ್ವೀಯ ಆಕರಗಳಲ್ಲಿ ಸ್ಮಾರಕಗಳಿಗೆ ವಿಶೇಷ ಮಹತ್ವವಿದೆ. ಕರ್ನಾಟಕದ ಸಾಂಸ್ಕೃತಿಕ ಇತಿಹಾಸ ರಚನೆಗೆ ನೆರವಾಗುವ ಆಕರ ಸಾಮಗ್ರಿಗಳಲ್ಲಿ ಸ್ಮಾರಕಗಳಿಗಿಂತ ಪ್ರಮುಖ ಸಾಧನ ಮತ್ತೊಂದಿಲ್ಲ. ಅವುಗಳಲ್ಲಿ ಪ್ರಾಗಿತಿಹಾಸ ಕಾಲದ ಶಿಲಾ ಉಪಕರಣ-ಬೃಹತ್ ಶಿಲಾಸಮಾಧಿಗಳಿಂದ ಹಿಡಿದು ದೇವಾಲಯ, ಮಸೀದಿ, ಚರ್ಚು, ಕೋಟೆ-ಕೊತ್ತಲ, ಅರಮನೆ, ಮಹಲ್ ಇತ್ಯಾದಿ ಸೇರಿವೆ. ಈ ಬಗೆಯ ಸ್ಮಾರಕಗಳು ಪ್ರಾಚೀನ ಪರಂಪರೆಯ ಧ್ಯೋತಕಗಳು. ಇವು ಪ್ರಾಚೀನರ ಬದುಕಿನ ಮಹತ್ತರ ಕುರುಹುಗಳೂ ಆಗಿವೆ. ಜಗತ್ತಿನ ಸಾವಿರಾರು ವರ್ಷಗಳ ಮಾನವನ ಇತಿಹಾಸವನ್ನು ಸಾರುವ ಪ್ರಮುಖ ಸಾಧನಗಳಿವು. ಸ್ಮಾರಕಗಳೆಂದರೆ ಕೇವಲ ಖಾಲಿ ಕಟ್ಟಡಗಳಲ್ಲ. ಅವು ಅಂದಂದಿನ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ನೆಲೆವೀಡುಗಳು. ಇವು ಸಾಮಾಜಿಕ, ಧಾರ್ಮಿಕ, ರಾಜಕೀಯ, ಸೈನಿಕ ಹಾಗೂ ಸಾಂಸ್ಕೃತಿಕ ಸಂಗತಿಗಳನ್ನು ಮೈಗೂಡಿಸಿಕೊಂಡ ಮಾಧ್ಯಮಗಳೂ ಆಗಿವೆ.
ಪ್ರವಾಸಿಗರನ್ನು ಆಕರ್ಷಿಸಿ ಪ್ರವಾಸೋದ್ಯಮವನ್ನು ಉತ್ತೇಜಿಸುವಲ್ಲಿ ಸ್ಮಾರಕಗಳ ಪಾತ್ರ ಪ್ರಮುಖವಾದದ್ದು. ಈಜಿಪ್ಟಿನ ಪಿರಮಿಡ್ಡು, ಫ್ರಾನ್ಸ್ನ ಐಫೆಲ್ ಗೋಪುರ, ಚೀನಾದ ಮಹಾಗೋಡೆ, ಬ್ಯಾಬಿಲೊನಿಯಾದ ತೂಗುದೋಟ, ಫ್ರಾನ್ಸ್ನ ಪೀಸಾಗೋಪುರ, ರೋಮ್ನ ಆಂಫಿಥೇಟರ್ಗಳು ಜಗತ್ತಿನ ಪ್ರಾಚೀನತೆಯತ್ತ ಗಮನಸೆಳೆದ ಅದ್ಭುತ ಸ್ಮಾರಕಗಳಾಗಿವೆ. ಅಲ್ಲದೆ ಅವು ಪ್ರವಾಸೋದ್ಯಮದ ಪ್ರಮುಖ ತಾಣಗಳೂ ಆಗಿವೆ. ಇವುಗಳ ಸಾಲಿಗೆ ಭಾರತದ ತಾಜ್ಮಹಲ್ ಕೂಡ ಸೇರಿರುವುದು ಹೆಮ್ಮೆಯ ವಿಷಯ. ಭಾರತದಲ್ಲಿ ಕಲ್ಲಿನ ಬೆಟ್ಟವನ್ನೇ ಬಗೆದು ಕಲಾ ಆಲಯವನ್ನಾಗಿ ಮಾಡಿದ ಅಜಂತಾ, ಎಲ್ಲೋರಾ, ಎಲಿಫೆಂಟಾ ಗುಹಾಂತರ ದೇಗುಲಗಳಿವೆ. ಬೇರೆಡೆಯಿಂದ ಒಂದು ತುಂಡುಕಲ್ಲನ್ನೂ ತಂದು ಬಳಸದೆ ಬೆಟ್ಟವನ್ನೇ ಕತ್ತರಿಸಿ ಒಡಮೂಡಿಸಿದ ಏಕಶಿಲಾ ದೇಗುಲ ಕೈಲಾಸನಾಥ ದೇವಾಲಯವಿದೆ. ಸಾವಿರಾರು ವರ್ಷಗಳಿಂದಲೂ ತುಕ್ಕು ಹಿಡಿಯದೆ ನಿಂತಿರುವ ದೆಹಲಿಯ ಮೆಹರೌಲಿ ಕಬ್ಬಿಣ ಸ್ತಂಭ ಇಂದಿನ ವಿಜ್ಞಾನಕ್ಕೆ ಸವಾಲನ್ನು ಎಸೆದಿರುವುದು ಸೋಜಿಗದ ಸಂಗತಿ.
ಕರ್ನಾಟಕವು ವೈವಿಧ್ಯಮಯ ಪರಿಸರವುಳ್ಳ ರಾಜ್ಯ. ಇಲ್ಲೂ ಕಂಬಗಳ ಆಧಾರವಿಲ್ಲದೆ ವಿಸ್ತಾರವಾದ ಬೃಹತ್ ಕಟ್ಟಡ ನಿರ್ಮಿಸಬಹುದು ಎಂಬುದಕ್ಕೆ ಬಿಜಾಪುರದ ಗೋಳಗುಮ್ಮಟವೇ ಸಾಕ್ಷಿ. ಕಗ್ಗಲ್ಲಿನ ಬೆಟ್ಟವನ್ನು ಕತ್ತರಿಸಿ ಕಲೆಯ ಆಲಯವಾಗಿಸಿದ ಬಾದಾಮಿ, ಐಹೊಳೆ ಗುಹಾಲಯಗಳು, ಚಿನ್ನದ ಮೇಲೆ ಮಾಡಬಹುದಾದ ಕುಸುರಿ ಕೆಲಸವನ್ನು ಕಲ್ಲಿನ ಮೇಲೂ ಅರಳಿಸಬಹುದೆಂಬುದು ಬೇಲೂರು, ಹಳೇಬೀಡು, ಸೋಮನಾಥಪುರ ದೇವಾಲಯಗಳಲ್ಲಿ ಸಾಬೀತಾಗಿದೆ. ಒರಟು ಕಣಶಿಲೆಯ ಬಂಡೆಯಲ್ಲಿ ನಯನಾಜೂಕಿನ, ಭಾವಭರಿತ ಶಿಲ್ಪ-ದೇಗುಲಗಳನ್ನು ನಿರ್ಮಿಸಿ, ಸಂಗೀತದ ಸಪ್ತಸ್ವರಗಳನ್ನು ಹೊರಡಿಸಬಹುದು ಎನ್ನುವುದಕ್ಕೆ ಹಂಪೆಯ ವಿಜಯವಿಠಲ ದೇವಾಲಯ ಸಾಕ್ಷ್ಯವಾಗಿ ನಿಂತಿದೆ. ಹಾಗೆಯೇ ಶತ್ರುವಿನ ಸೈನ್ಯವನ್ನು ನುಚ್ಚುನೂರು ಮಾಡಿದ ವಿಶಿಷ್ಟ ತಂತ್ರಜ್ಞಾನವುಳ್ಳ ನೂರಾರು ಉಕ್ಕಿನಕೋಟೆಗಳಿವೆ. ನಾಗರ, ದ್ರಾವಿಡ, ವೇಸರ, ಹಿಂದೂ-ಮುಸ್ಲಿಂ, ಕ್ರಿಶ್ಚಿಯನ್ ಶೈಲಿ-ವಿನ್ಯಾಸಗಳಲ್ಲಿ ನಿರ್ಮಿಸಲಾದ ಸುಂದರ, ಮನಮೋಹಕ ದೇಗುಲ-ಮಸೀದಿ-ಚರ್ಚುಗಳಿವೆ. ಇಷ್ಟೆಲ್ಲಾ ವೈವಿಧ್ಯಮಯ ಸ್ಮಾರಕಗಳ ಸಂಗಮ ಸ್ಥಾನ ಕರ್ನಾಟಕವೆಂದರೆ ಅತಿಶಯೋಕ್ತಿಯಾಗಲಾರದು. ಇಂತಹ ವಿಸ್ಮಯಗಳು ಒಂದೇ, ಎರಡೇ, ಇವು ರಾಜ್ಯದಾದ್ಯಂತ ಹರಡಿವೆ.
ಅಲ್ಲದೆ ಪ್ರಾಚೀನ ಸಂಸ್ಕೃತಿಯನ್ನು ಸಾರುವ ಆದಿಮ ನೆಲೆಗಳು, ಬೃಹತ್ ಶಿಲಾಗೋರಿಗಳು; ಗುಡಿಗೋಪುರ, ಮಸೀದಿ, ಚರ್ಚುಗಳು; ಕೋಟೆಕೊತ್ತಲಗಳು; ಶಾಸನ, ವೀರಗಲು, ಮಾಸ್ತಿಗಲ್ಲುಗಳು; ವಾಸ್ತುಶಿಲ್ಪ, ಮೂರ್ತಿಶಿಲ್ಪ ಮತ್ತು ಚಿತ್ರಕಲೆಗಳು ಪ್ರಾಚೀನ ಪರಂಪರೆಯನ್ನು ಸಾರುವ ಅನೇಕ ವೈವಿಧ್ಯಮಯ ಸ್ಮಾರಕಗಳಿವೆ. ಕರ್ನಾಟಕವು ಆದಿಮ ಸಂಸ್ಕೃತಿಯ ನೆಲೆವೀಡು. ಪ್ರಾಗಿತಿಹಾಸ ಕಾಲದಿಂದ ಹಿಡಿದು ಆಧುನಿಕ ಕಾಲದವರೆಗಿನ ಸಂಸ್ಕೃತಿಯನ್ನು ಮೇಳೈಸಿಕೊಂಡ ಚಾರಿತ್ರಿಕ ತಾಣ. ಶಾಂತಿಪ್ರಿಯ ಅರಸ ಅಶೋಕನಿಂದ ಹಿಡಿದು ಶಾತವಾಹನ, ಕದಂಬ, ಗಂಗ, ಬಾದಾಮಿ ಚಾಲುಕ್ಯ, ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯ, ಹೊಯ್ಸಳ, ವಿಜಯನಗರ ಹಾಗೂ ನೂರಾರು ಪಾಳೆಯಪಟ್ಟುಗಳು ಆಳ್ವಿಕೆ ನಡೆಸಿ ತಮ್ಮದೇ ಆದ ಕುರುಹುಗಳನ್ನು ಅಚ್ಚೊತ್ತಿವೆ.
ಈ ಬಗೆಯ ಕುರುಹುಗಳಲ್ಲಿ ಸ್ಮಾರಕಗಳ ಸ್ಥಾನ ಅತ್ಯಧಿಕ. ಸಾವಿರಾರು ಪ್ರಾಚೀನ ಸ್ಮಾರಕಗಳು ಕರ್ನಾಟಕದಾದ್ಯಂತ ಹರಡಿವೆ. ವಿವಿಧೇಡೆಗಳಲ್ಲಿ ಹರಡಿರುವ ಸ್ಮಾರಕಗಳು ಒಂದಿಲ್ಲೊಂದು ಬಗೆಯಲ್ಲಿ ವಿಭಿನ್ನವಾಗಿವೆ. ಅವುಗಳಲ್ಲಿ ವಿಶ್ವಪಾರಂಪರಿಕ ತಾಣಗಳಾದ ಹಂಪೆ, ಪಟ್ಟದಕಲ್ಲುಗಳಿವೆ. ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆ ಸಂರಕ್ಷಿತ ಸ್ಮಾರಕಗಳು, ಮುಜರಾಯಿ ಇಲಾಖೆ ಅಡಿಯ ಸ್ಮಾರಕಗಳಿವೆ. ಇವುಗಳಲ್ಲದೆ ನೂರಾರು ನಿರ್ಲಕ್ಷಿತ ಸ್ಮಾರಕಗಳು ನಾಡಿನಾದ್ಯಂತ ಹರಡಿವೆ. ಈ ಸ್ಮಾರಕಗಳಲ್ಲಿ ಕೆಲವು ತಾಣಗಳು ಪ್ರಾಚೀನ ಅರಸು ಮನೆತನಗಳು ನಿರ್ಮಿಸಿದ ಗುಡಿಗೋಪುರ, ಮಸೀದಿ, ಚರ್ಚುಗಳನ್ನು ಹೊಂದಿದ್ದರೆ, ಇನ್ನು ಕೆಲವು ಕೋಟೆಕೊತ್ತಲ, ಬುರುಜು-ಬತೇರಿಗಳಿಗೆ ಹೆಸರಾಗಿವೆ. ಮತ್ತೆ ಕೆಲವು ಶಿಲ್ಪ, ಶಿಲಾಶಾಸನ, ವೀರಗಲ್ಲು-ಮಾಸ್ತಿಗಲ್ಲು, ಬೃಹತ್ ಶಿಲಾಗೋರಿ, ವರ್ಣಚಿತ್ರ, ಗೀರುಚಿತ್ರಗಳಿಗೆ ಪ್ರಸಿದ್ಧವಾಗಿರುವುದನ್ನು ಕಾಣಬಹುದು. ಈ ಬಗೆಯ ಸ್ಮಾರಕಗಳು ಪ್ರಾಚೀನರು ತಮ್ಮ ತಿಳುವಳಿಕೆಯನ್ನು ಒರೆಗೆ ಹಚ್ಚಿದ ಪ್ರಮುಖ ಸಾಕ್ಷ್ಯಗಳಾಗಿವೆ. ಇವುಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸಿದರೆ ಪ್ರವಾಸ, ಪ್ರವಾಸಿಗ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳನ್ನು ಉತ್ತೇಜಿಸಿ, ವಿಸ್ತರಿಸುವಲ್ಲಿ ವಿಪುಲ ಅವಕಾಶಗಳು ದೊರೆಯುತ್ತವೆ. ಈ ಹಿನ್ನೆಲೆಯಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅರಿವನ್ನು ಉಂಟುಮಾಡುವ ಪ್ರಯತ್ನಗಳು ಜರೂರಾಗಿ ನಡೆಯಬೇಕಾಗಿದೆ.
ಒಟ್ಟಿನಲ್ಲಿ ದೇಶ-ವಿದೇಶಗಳಿಂದ ಹೆಚ್ಚು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವಲ್ಲಿ, ಮನಸ್ಸಿಗೆ ಆಹ್ಲಾದ, ಸಂತೋಷ, ನೆಮ್ಮದಿಯನ್ನು ನೀಡುವಲ್ಲಿ ಸ್ಮಾರಕಗಳ ಪಾತ್ರ ತುಂಬ ಹಿರಿದು. ಪ್ರಾಚೀನರ ಜ್ಞಾನ, ತಿಳುವಳಿಕೆ, ತಂತ್ರಜ್ಞಾನಗಳನ್ನು ಮೈದಳೆದುಕೊಂಡ ಇಂತಹ ಸ್ಮಾರಕಗಳನ್ನು ಗುರುತಿಸಿ ಸಂರಕ್ಷಿಸುವ, ಅವುಗಳ ಚಾರಿತ್ರಿಕ ಮಹತ್ವವನ್ನು ಸಾರುವ, ಜನರಲ್ಲಿ ಅರಿವು ಮೂಡಿಸಿ ಮುಂದಿನ ಪೀಳಿಗೆಗಾಗಿ ಕಾಪಿಟ್ಟು ದಾಟಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ.