ಸೀರೆ-ಸೆರಗು ಒಂದು ಜನಪದ ನೋಟ

Share

ಸೀರೆ-ಸೆರಗು ಒಂದು ಜನಪದ ನೋಟ

’ ಸೀರೆ’ ಎಂಬ ಪದವು ವಿಭಿನ್ನ ಸಂಸ್ಕೃತಿಗಳನ್ನ ಸಾರುವ ಪದ. ಇದು ನಾಡನ್ನ ಉತ್ತರ ದಕ್ಷಿಣಗಳೆಂದೂ,ವಿಭಜಿಸುವುದು. ಕರ್ನಾಟಕ,ಮಹಾರಾಷ್ಟ್ರ,ಕೇರಳ,ಗುಜರಾತಿ,ಬೆಂಗಾಲಿ ಎಂದು ಉಡುವ ಕ್ರಮಗಳಲ್ಲಿನ ವೈವಿಧ್ಯತೆಗಳನ್ನ ತೋರುವವುದು. ಬ್ರಹ್ಮಣರು,ಮಾರವಾಡಿಗಳು,ಮುಸ್ಲಿಮರು, ಗೌಡತೀರು,ನೌಕರಸ್ಥರು,ಕೂಲಿಗಳು,ಗೃಹಿಣಿಯರು,ವಿಧವೆಯರು,ಕಲಾವಿದರು,ಸಾಮಾನ್ಯರು ಎಂಬ ಬಹುರೂಪಗಳನ್ನ,ಅಜ್ಜಿ,ಅವ್ವ,ಮಗಳು ಎಂಬ ತಲೆ ತಲಾಂತರಗಳನ್ನ ಸಾರುವುದು. ಸೀರೆ ಬಡತನವನ್ನ ತೋರುವ ರೀತಿಯಂತೆಯೇ ಸೀರೆಗೆ ಶ್ರೀಮಂತಿಕೆಯನ್ನೂ ಸಾರುವ ಸಾಮರ್ಥ್ಯವಿದೆ.


ಋತುಮತಿ ಶಾಸ್ತ್ರ,ನಿಶ್ಚಿತ ಶಾಸ್ತ್ರ,ಧಾರೆ ಶಾಸ್ತ್ರ,ಪ್ರಸ್ತ,ಸೀಮಂತ,ತೊಟ್ಟಿಲ ಸೀರೆ,ವಿಧವಾ ಸೀರೆ ಎಂಬ ರೂಪಗಳನ್ನ ಪಡೆದಿರುವಂತೆಯೇ ಇದು ದೈನಂದಿನ ಸೀರೆ,ವೃತ್ತಿ ಸೀರೆ,ವಿಶೇಷ ಸಂದರ್ಭಗಳ ಸೀರೆ ಎಂದು ಆಯ್ಕೆಯನ್ನೂ ಒಳಗೊಂಡಿದೆ.
ಆಂದ್ರದ ಧರ್ಮಾವರಂ ಸೀರೆ,ಕರ್ನಾಟಕದ ಇಳಕಲ್ ಸೀರೆ,ಮಳಕಾಲ್ಮೂರು ಸೀರೆ,ಮೈಸೂರು ಸೀರೆ,ಮಹಾರಾಷ್ಟ್ರದ ನವ್ವಾರಿ ಸೀರೆ,ಕೇರಳದ ಕಸವು ಸೀರೆ,ಗುಜರಾತ್ ನ ಬನಾರಸ್ ಸೀರೆ ಎಂಬ ಹೆಸರಾಂತ ಸೊಗಸುಗಾರಿಕೆಯನ್ನ ಒಳಗೊಂಡಿದೆ.
ಬಿಳಿ ಸೀರೆ ಭೂತಕ್ಕೂ,ಕರಿ ಸೀರೆ ರಕ್ಕಸರಿಗೂ,ಬಣ್ಣದ ಸೀರೆ ದೇವತೆಗಳಿಗೂ ಸದ್ ಗೃಹಸ್ಥರಿಗೂ ಸಾಂಕೇತಿಸುತ್ತದೆ.ಸೀರೆಯಲ್ಲಿ ಜಗಮಗಿಸುವವರು ಬೇರೆ,ಹೊಲ ಗದ್ದೆಗಳ ಮುಳುಗುವವರು ಬೇರೆ,ಸೀರೆ ಎಡಕ್ಕೆ ಹಾಕುವವರು ಬೇರೆ,ಬಲಕ್ಕೆ ಹಾಕುವವರು ಬೇರೆ.
ಸೀರೆ ಪದ ಒಂದೇ ಆದರೂ ಅದರ ಬಣ್ಣಗಳಿಂದಲೇ ಉಟ್ಟವರು ಪಂಗಡ ಉಪ ಪಂಗಡಗಳಾಗಿಬಿಡುತ್ತಾರೆ.ಮಡಿ ಸೀರೆ ಮೈಲಿಗೆ ಸೀರೆ ಎಂಬ ರೂಪಗಳಿಂದ ದೂರ ದೂರವೂ ನಿಲ್ಲುತ್ತಾರೆ.ಬಣ್ಣದ ಸೀರೆ ಬಿಳಿಸೀರೆ (ಬಿಳಿಸಾಗು) ಎಂದು ಹೆಣ್ಣು ಕೊಡುವ ತರುವ ಸಂಪ್ರದಾಯಗಳಲ್ಲಿ ಭಿನ್ನತೆಗಳನ್ನ ತಂದೊಡ್ಡುತ್ತಾರೆ.ಇಲ್ಲೂ ಹೆಣ್ಣನ್ನ ತಮ್ಮವಳನ್ನಾಗಿ ಮಾಡಿಕೊಳ್ಳುವ ಐಶ್ಚಿಕ ಸಂಪ್ರದಾಯವೂ ಉಂಟು.ಸೀರೆಯಲ್ಲಿ ಮಡಿ ಸೀರೆ ಮತ್ತು ಮೈಲಿಗೆ ಸೀರೆ ಎಂತಲೂ ಎರಡು ರೀತಿಯ ಆಚರಣೆಗಳಿವೆ.
ಸೆರಗು ಎಂದರೆ ತಕ್ಷಣ ನೆನಪಿಗೆ ಬರುವುದು ಅದನ್ನ ಉಡುವ ಸಂಪ್ರದಾಯಗಳ ಆಚರಣೆ.ಸೆರಗಿಗೆ ನಾನಾರ್ಥಗಳಿವೆ.ಸಹಾಯ,ಆಶ್ರಯ, ಅಪಾಯದ ಶಂಕೆ,ಗಡಿ,ಭಯ,ಅಂಜಿಕೆ,ಮೊದಲಾದ ನಿಘಂಟಿನ ಅರ್ಥದ ಜೊತೆಗೆ ಸೆರಗಿಗೆ ಸಾಂಸ್ಕೃತಿಕ ಅರ್ಥಗಳೂ ಇವೆ.ವೈವಿಧ್ಯಮಯ ರೀತಿಗಳನ್ನ ತೋರುವ ಈ ಪದದ ನೋಟ ಕುತೂಹಲಕಾರಿಯೂ ಹೌದು.ಈ ಪದಕ್ಕೆ ಪ್ರಾದೇಶಿಕ ನಡೆಗಳ ಜೊತೆಗೆ ಸಾಂಸ್ಕೃತಿಕ ಬಹುತ್ವಗಳಿವೆ.
ಸೆರಗು ಬೀಳು:
ಶರಣಾಗತಿ ಆಗು ಇಲ್ಲವೇ ಆಶ್ರಯಕ್ಕೆ ಒಳಗಾಗು.ಎಂಬ ಈ ಪದದ ಹಿಂದೆ ಹಿರಿಯರನ್ನು ಆಶ್ರಯಿಸುವ,ಹೆಂಡತಿಗೆ ಶರಣಾಗುವ,ಪ್ರಭುಗಳ ಆಶ್ರಯಿಸುವ ಕೂಡು ಕುಂಟುಂಬ ಕೂಡು ಸಮಾಜದ ಪದವಾಗಿರುವಂತೆ ಕಾಣುತ್ತದೆ.
ಸೆರಗಿನ ಗಂಟು:
ಮದುವೆ ಬಂಧನ ಮದುವೆಯ ಅಗ್ನಿ ಸಾಕ್ಷಿ ಸಂದರ್ಭದಲ್ಲಿ ಸ್ತ್ರೀಯ ಸೆರಗನ್ನ ಮತ್ತು ಪುರುಷನ ಉತ್ತರೀಯವನ್ನ ಗಂಟು ಹಾಕುತ್ತಾರೆ.ಇಬ್ಬರ ದಾಂಪತ್ಯ ಬಂಧನವನ್ನ ಸೂಚಿಸುವ ಈ ಪದ ಹೆಣ್ಣನ್ನ ಗಂಡಿನೊಂದಿಗೆ ಬೆಸೆಯುವ ಅರ್ಥರೂಪಿಯಾಗಿದೆ.
ಸೆರಗು ಬಿಡು:
ಮದುವೆಯ ಬಂಧನವನ್ನ ಕಳಚಿಕೋ ಎಂಬರ್ಥ ಸಾರುವ ಈ ಪದವು ಸಂಸಾರದಲ್ಲಿ ಹೊಂದಾಣಿಕೆ ಅಸಾಧ್ಯವೆನಿಸಿದಾಗ,ಕಾದಾಟಗಳು ವಿಕೋಪಕ್ಕೆ ತಿರುಗಿದಾಗ ಕೂಡಿ ಬಾಳಲು ಅಸಾಧ್ಯವೆನಿಸಿದಾಗ ?ಸೆರಗು ಬಿಡು?ಎಂಬ ಪದ ಬಂದಿದೆ.ಅಕ್ಕ ಮಹಾದೇವಿಯ ?ಸೆರಗು ಬಿಡು ಮರುಳೆ? ಎಂಬ ಸಂಗತಿಯನ್ನ ಈ ಅರ್ಥದಲ್ಲಿ ಡಾ.ಎಂ.ಎಂ.ಕಲ್ಬುರ್ಗಿ ಬಳಸಿದ್ದಾರೆ.
ಸೆರಗು ಜಾರಿಸು:
ವೇಶ್ಯೆಯರು ವಿಟರನ್ನ ಸೆಳೆವ ತಂತ್ರ ಸೂಚಿಸುವ ಈ ಪದವು ಶಿಲ ಎಂಬ ಅರ್ಥವನ್ನ ಸಾರುತ್ತದೆ.ಜಾರಿಣಿ ,ಶೀಲಗೆಟ್ಟವಳು,ಗಂಡನಿಗೆ ನಿಷ್ಟವಲ್ಲದವಳು ಎಂಬ ಅರ್ಥಗಳನ್ನ ಬಳಸುವ ಈ ಪದ ಸೆರಗು ಹಾಸು,ಸೆರಗಿಗೆ ಗಂಟು ಹಾಕಿಕೋ ಎಂಬ ವಿಸ್ತೃತ ಅರ್ಥಗಳನ್ನೂ ತೋರುತ್ತದೆ.


ಸೆರಗಾದೋಳು :
ಅಂದರೆ ಮುಟ್ಟಾದೋಳು ಎಂಬ ಅರ್ಥ ಸೂಚಿಸಿದರೆ ಸೆರಗಾಗಿದೆ ಎಂಬ ಪದವು ಶಿಶುವಿಗೆ ಮುಟ್ಟಿನ ದೋಷ ತಗುಲಿದೆ ಎಂಬ ಅರ್ಥವನ್ನ ಸೂಚಿಸುತ್ತದೆ.ಹಳ್ಳಿಗಳಲ್ಲಿ ಮಗು ಹಚ್ಚಗೆ (ಹಸಿರು ಬಣ್ಣ)ದಲ್ಲಿ ಬೇದಿ ಮಾಡಿಕೊಂಡರೆ ಮುಟ್ಟುದೋಷವಾಗಿದೆ ಎಂದು ಮಗುವನ್ನ ಹೊಸಿಲ ಮೇಲಿಟ್ಟು ಹಾಗಲ ಕಾಯಿ ಎಲೆಯ ರಸವನ್ನ ನೆತ್ತಿಗೆ ಹಚ್ಚುತ್ತಾರೆ.ಆದ್ದರಿಂದ ಮಗುವನ್ನ ಹಳ್ಳಿಗಳಲ್ಲಿ ಎಲ್ಲರಿಗೂ ಕೊಡುವುದಿಲ್ಲ.ಇನ್ನ ಬಿಳಿ ಸೆರಗು ಎಂದು ಕರೆವ ಪದ ಹೆಣ್ಣಿನ ಜೈವಿಕ ರೀತಿಯನ್ನ ಬಿಂಬಿಸುತ್ತದೆ.ಇದು ಆರೋಗ್ಯ ಮತ್ತು ರೋಗ ಎಂಬ ಎರಡು ಲಕ್ಷಣಗಳನ್ನ ಒಳಗೊಂಡಿದೆ.
ಸೆರಗಿನೊಳಗೆ ಮುಖ ಹುದುಗಿಸು:
ಮಗುವಿನ ಆಟ ತೋರಿಸುವ ಈ ಪದ ಅದರ ಭಯವನ್ನೋ ,ನಾಚಿಕೆಯನ್ನೋ,ಪಾರಾಗುವ ರೀತಿಯನ್ನೋ ತೋರುತ್ತದೆ.ಎಂಬ ಈ ಪದದ ಮೂಲ ಭಯ ಅಥವಾ ಆನಂದವಾಗಿದೆ.
ಸೆರಗೊಡ್ಡಿ ಬೇಡು:
ದೈನ್ಯತೆಯ ಸಂಕೇತವಾದ ಈ ಪದ ಕರುಣೆಯ ಕೇಂದ್ರವಾಗಿದೆ.ಕೂಲಿಕಾರ ಹೆಣ್ಣೊಬ್ಬಳ ಒಡೆಯ ಅಥವಾ ಒಡತಿಯ ಬಳಿ ಬೇಡುವ ಚಿತ್ರಗಳು,ಅಮಾಯಕ ಸೊಸೆ ಗಟ್ಟಿಗಿತ್ತಿ ಅತ್ತೆ ಬಳಿ ಇಲ್ಲವೇ ಮಾವನ ಬಳಿ ಬೇಡುವ ಚಿತ್ರ,ಅಸಹಾಯಕ ಹೆಣ್ಣೊಬ್ಬಳು ದೈವದೆದರು ನಿಂತು ಬೇಡುವ ಚಿತ್ರಗಳನ್ನ ನೆನಪಿಗೆ ತರುತ್ತದೆ.ಚಂದ್ರಮತಿ ಹರಿಶ್ಚಂದ್ರನ ಬಳಿ ಬೇಡುವ,ಕಾಶಿಬಾಯಿ ಸ್ಟೇಷನ್ ಮಾಸ್ತರನ ಬಳಿ ಬೇಡುವ ಚಿತ್ರಗಳನ್ನ ಇಲ್ಲಿ ಉದಾಹರಿಸ ಬಹುದು.ಈ ಪದ ದುಃಖ ಮೂಲವಾಗಿದೆ.


ಸೆರಗಿನೊಳಗೆ ಕೆಂಡ ಕಟ್ಟಿಕೋ:
ಅಪಾಯ ಸೂಚಿಸುವ ಈ ಪದವು ಹೆಣ್ಣಿನ ಅತಂತ್ರ ಸ್ಥಿತಿಯನ್ನ ಆಕೆ ತೆಗೆದುಕೊಂಡ ಅಪಾಯಕಾರಿ ನಿರ್ಧಾರವನ್ನ ಸೂಚಿಸುತ್ತದೆ.ಬದುಕು ನಡೆಸುದೇ ಕಷ್ಟ ಎಂದು ಸಾರುವ ರೀತಿಯನ್ನ ಈಪದ ಸಾರುತ್ತದೆ.
ಉಡಿತುಂಬುವುದು:
ಗ್ರಾಮದೇವತೆಗೆ ಊರ ಪ್ರಮುಖರು ಸೇರಿ ತಾವು ಬಯಸಿದ್ದು ನೆರವೇರಿಸಿದಾಗ ಉಡಿತುಂಬುವ ಹರಕೆ ನೆರವೇರಿಸುತ್ತಾರೆ.ಹಾಗೆ ಭಕ್ತರು ಉಡಿತುಂಬುವ ಹರಕೆಗಳನ್ನೂ ನರೆವೇರಿಸುತ್ತಾರೆ.ಉಡಿ ತುಂಬುವಾಗ ಸೀರೆ,ಕುಪ್ಪುಸ,ತೆಂಗಿನ ಕಾಯಿ,ಅಕ್ಕಿ,ಬೇಳೆ, ಬೆಲ್ಲಗಳನ್ನೂ ಅರ್ಪಿಸುತ್ತಾರೆ.
ಗರ್ಭಿಣಿಯರಿಗೆ ಸೀಮಿಂತ ಎಂಬ ಹೆಸರಿನೊಳಗೂ ಹೊಸ ಸೀರೆ ಹೂ ಮುಡಿಸಿ ಮದುವೆಯ ಕಾರ್ಯ ದಂತೆಯೇ ಪತಿ ಪತ್ನಿಯರನ್ನ ಕೂಡಿಸಿ ಹೆಣ್ಣಿನ ಕಡೆಯವರು ಗರ್ಭಿಣಿಗೆ ಹಸಿರು ಬಳೆ,ಹಸಿರು ಸೀರೆ,ರವಿಕೆ,ಎಲೆ ಅಡಿಕೆ,ಅರಿಷಿಣ,ಒಣಕೊಬರಿ,ಲಿಂಬಿಹಣ್ಣು,ಅಕ್ಕಿ ಹಾಕಿ ಉಡಿತುಂಬುತ್ತಾರೆ,
ಗಂಗೆಗೆ ಹೋದಾಗ,ದೇವರ ಕಾರ್ಯಗಳು ನಡೆವಾಗ,ಮಳೆ ಬಾರದಿದ್ದಾಗ ಮುತ್ತೈದೆಯರಿಗೆ ಉಡಿ ತುಂಬುವ ಶಾಸ್ತ್ರ ಮಾಡುತ್ತಾರೆ.
ಉಡಿಬೀಜ:
ಬಯಲು ಸೀಮೆಗಳಲ್ಲಿ ಬಿತ್ತಲು ಹೊರಟಾಗ ಹೆಣ್ಣುಮಕ್ಕಳು ಬಿತ್ತುವ ಬೀಜಗಳನ್ನ ಉಡಿಯಲ್ಲಿ ಹಾಕಿಕೊಳ್ಳುತ್ತಾರೆ.ಅದರಲ್ಲಿ ಕೆಲವರಿಂದ ಕೈಗುಣ ಚೆನ್ನಾಗಿದೆ ಎಂದು ಗ್ರಹಿಸಿ ಅವರ ಉಡಿಗೆ ಬೀಜಗಳನ್ನ ಬಿತ್ತಲು ನೀಡುತ್ತಾರೆ.ಕೆಲವು ಕಡೆ ಒಂದೇ ಬಗೆಯ ಬೀಜಗಳನ್ನ ಹಾಕಿದರೆ,ಮತ್ತೆ ಕೆಲವು ಕಡೆ ಅನೇಕ ಬಗೆಯ ಬೀಜಗಳನ್ನ ಅಂದರೆ ಅಕ್ಕಡಿ ಕಾಳುಗಳನ್ನ ಬಿತ್ತುತ್ತಾರೆ.
ಉಡಿದೆನಿ:
ಕೂಲಿ ಕೆಲಸದವರಿಗೆ ಸುಗ್ಗಿಯ ಕಾಳು ನೀಡದೇ ಅವರು ಕೊಯ್ದು ರಾಶಿಹಾಕಿದ ತೆನೆಗಳನ್ನೇ ಉಡಿಗೆ ಹಾಕಿ ಕಳಿಸುವ ಪದ್ದತಿಗೆ ಉಡಿದೆನಿ ಎನ್ನುತ್ತಾರೆ.ಕಡಿಮೆ ಕಾಳು ನೀಡುವಂತಹ ಈ ಸಂಪ್ರದಾಯವು ಸುಗ್ಗಿಯಿಂದ ಬಹುತೇಕೆ ಕೆಳವರ್ಗದ ಕೂಲಿಕಾರರನ್ನ ದೂರವಿಡುವ ತಂತ್ರಗಾರಿಕೆಯನ್ನೂ ಸೂಚಿಸುತ್ತದೆ.
ಉಡಿ ಅಕ್ಕಿ:
ಹೊಸದಾಗಿ ಮದುವೆಯಾದ ಹೆಣ್ಣು ಗಂಡನ ಮನೆಗೆ ಹೊಸಬಾಳಿಗೆ ಹೊರಡುವ ಮುನ್ನ ತನ್ನ ನೆರೆ ಹೊರೆಯ ಐದು ಮನೆಗಳಲ್ಲಿ ದಾರದ ನೂಲನ್ನೂ ಸೆರಗಿನ ಉಡಿಯೊಳಗೆ ಐದು ಮುಟಗಿ ಅಕ್ಕಿಯನ್ನೂ ಕೊಬರಿ ಬೆಲ್ಲಗಳನ್ನೂ ಹಾಕಿಸಿಕೊಳ್ಳುತ್ತಾಳೆ,ಆರತಿಗೆ ನಮಸ್ಕರಿಸುವಾಗ ವಾಪಾಸು ಅವರ ತಟ್ಟೆಗೆ ತವರವರು ಮತ್ತು ತನ್ನ ನೆರೆಯವರ ಮನೆ ಬರಿದಾಗದಿರಲಿ ಎಂಬ ಅರ್ಥದಲ್ಲಿ ಎರಡರಿಂದ ಮೂರು ಮುಟಗಿ ಅಕ್ಕಿಯನ್ನ ವಾಪಾಸು ಹಾಕಿ ಹಿರಿಯರಿಂದ ಆಶಿರ್ವಾದದ ಬಲ ಬೆನ್ನಿಗಿದೆ ಎಂಬ ಭಾವ ತಾಳುತ್ತಾಳೆ.


ಮುಡಿಪು ಕಟ್ಟು:
ಮಕ್ಕಳು ಮನೆಯವರು ಹುಷಾರಿಲ್ಲದಾಗ ಯಾತ್ರೆಗೋ,ಮತ್ತಾವುದೋ ಮಹತ್ ಕಾರ್ಯಕ್ಕೆ ಹೊರಟಾಗ ಹಿರಿಯರು ತಮ್ಮ ಮನೆದೇವರಿಗೆ ಬೇಡಿಕೊಂಡು ಸೆರಗಿನೊಳಗೆ ಭಸ್ಮ ಮತ್ತು ನಾಣ್ಯಗಳ ಮುಡಿ ಕಟ್ಟಿಕೊಳ್ಳುತ್ತಾರೆ.ದೇವರ ಎದುರು ದೀಪದ ಹರಕೆ ಮಾಡುತ್ತಾರೆ.ಊರ ದೇವತೆಗೆ ಸೀರೆ ಅರ್ಪಿಸುವ ಹರಕೆಯನ್ನೂ ಹೊರುತ್ತಾರೆ.
ಮಡಿ ಹಾಸು:
ದೈವದ ಪಲ್ಲಕ್ಕಿ ಹೋಗುವಾಗ ಅಥವಾ ದೇವರ ಕೇಲು ಹೊತ್ತವರು ಬರುವಾಗ ಹಾಸುವ ಹಸಿ ಸೀರೆ ಇದನ್ನ ಬಹುತೇಕ ಊರ ಮಡಿವಾಳರು ಹಾಸುತ್ತಾರೆ.ಶುಚಿ ,ಪವಿತ್ರ,ಶುದ್ಧ ಎಂಬ ಅರ್ಥಗಳು ಈ ಆಚರಣೆಗಿದೆ.ಮಡಿ ಸೀರೆ ಎಂದರೆ ಒದ್ದೆ ಸೀರೆ ಎಂಬ ಆಚರಣೆಯೂ ಇದೆ.ಒಗೆದ ಶುದ್ಧ ಸೀರೆ ಎಂಬ ಅರ್ಥವೂಇದೆ.ಉಟ್ಟ ಸೀರೆ,ಮುಟ್ಟಾದ ಸೀರೆ,ಹೆರಿಗೆ ಸೀರೆ,ವಿಧವಾ ಸೀರೆಗಳನ್ನ ಮೈಲಿಗೆ ಸೀರೆಗಳೆಂದು ಕರೆಯುತ್ತಾರೆ.
ಉಡಿ ಸಡಲಿಸು:
ಗಂಡ ತೀರಿಕೊಂಡಾಗ ಸಂಸ್ಕಾರ ವಿಧಿಗೆ ಕರೆದುಕೊಂಡು ಹೋಗುವ ಮುನ್ನ ಗಂಡನ ಜೊತೆ ಕೂಡಿಸಿ ಮೈಲಿಗೆ ಸೀರೆ ತೆಗೆದು ಹೊಸ ಸೀರೆ ಉಡಿಸಿ ಮದುಮಗಳನ್ನಾಗಿ ಮಾಡಿ ಉಡಿತುಂಬ ಕಾರ್ಯ ಮಾಡುತ್ತಾರೆ ನಂತರ ಮೆರವಣಿಗೆ ಹೊರಟು ಸ್ಮಶಾನದ ಬಳಿ ಬಂದಾಗ ಗಂಡನ ಚಿತೆ/ಸಮಾಧಿ ಎದರು ಉಡಿ ಬಿಚ್ಚುವ ಕ್ರಿಯೆ,ಹಾಗೂ ಮುತ್ತೈದೆ ಬಳೆಗಳನ್ನ ಒಡೆದು ಹಣೆಯ ಕುಂಕುಮ ಅಳಿಸುವ ಈ ಆಚರಣೆ ಮಾಡುತ್ತಾರೆ.


ಸೆರಗು ಸೊಂಟಕ್ಕೆ ಸಿಕ್ಕಿಸು:
ದುಡಿಯಲು ಅಣಿಯಾಗುವ ಅಥವಾ ಸಿಡಿಯರು ರೆಡಿಯಾಗುವ ಎರಡು ಭಿನ್ನಾರ್ಥಗಳನ್ನ ಸೂಚಿಸುವ ಈ ಪದವು ಲಂಕೇಶರ ಅವ್ವನನ್ನೂ ತೇಜಸ್ವಿಯವರು ಕಿರುಗೂರಿನ ಗಯ್ಯಾಳಿಯನ್ನೂ ಕಣ್ಣೆದುರು ನಿಲ್ಲಿಸುವಂತಿದೆ.ಗದ್ದೆಗಳಲ್ಲಿ ನಾಟಿಗೆ ತಯಾರಾಗುವ ,ಬಯಲಲ್ಲಿ ಸೊಪ್ಪೆ ಕತ್ತರಿಸುವ ,ಬಿತ್ತಲಿಕ್ಕೆ ,ಕಳೆ ಕೀಳಲಿಕ್ಕೆ,ಕೊಯ್ಯಲಿಕ್ಕೆ,ತೂರಲಿಕ್ಕೆ,ನೀರು ಸೇದಲಿಕ್ಕೆ,ಅಣಿಯಾಗುವ ನಾನಾರ್ಥಗಳನ್ನ ಈ ಪದವು ಕೂಡಿಕೊಳ್ಳುತ್ತದೆ.
ಹೀಗೆ ಸರೆಗಿನ ಮೇಲಿನ ರೂಪಗಳನ್ನೆಲ್ಲಾ ಆಚರಿಸುತ್ತಾ ಬಂದ ಜನಪದರು ಇವುಗಳನ್ನ ಆಚರಣೆಗಳೆಂಬಂತೆ ಮೌಖಿಕ ರೂಪದಲ್ಲೇ ಉಳಿಸಿಕೊಂಡು ಬಂದಿದ್ದಾರೆ.ನಾನಾರ್ಥಗಳ ಈ ನುಡಿಗಟ್ಟುಗಳು ಕೇವಲ ಅರ್ಥಸೂಚಿಗಳಾಗಿ ನಿಲ್ಲದೆ ಪ್ರಾದೇಶಿಕ ನಡೆಗಳಂತಿವೆ ಈ ನುಡಿಗಟ್ಟುಗಳನ್ನ ಗಟ್ಟಿಗೊಳಿಸುವಂತೆ ಕೆಲ ಗಾದೆ ಮಾತುಗಳನ್ನೂ ಇಲ್ಲಿ ಉದಾಹರಿಸಬಹುದು.
ತಾಯಿಯಂತೆ ಮಗಳು ನೂಲಿನಂತೆ ಸೀರೆ
ಅಜ್ಜಿಗೆ ಅರಿವೆ ಚಿಂತೆ ಮೊಮ್ಮಗಳಿಗೆ ಮಿಂಡನ ಚಿಂತೆ
ಆಕಾಶಕ್ಕೆ ಏಣಿ ಹಾಕಬೇಡ ಬೆಟ್ಟಕ್ಕೆ ಸೀರೆ ಹೊದಿಸಬೇಡ
ಹರಕಲು ಸೀರೆ ಅಕ್ಕ ಬಂದ್ರೆ ಆಡಿಕೋತಾರೆ,ಗೆಜ್ಜೆ ಸೀರೆ ಅಕ್ಕ ಬಂದ್ರೆ ತಬ್ಬಿಕೋತಾರೆ
ಉಟ್ಟ ಸೀರೆ ಗಟ್ಟಿಯಾಗಿದ್ರೆ ಯಾ ನನ್ನ ಮಗ ಏನ್ ಮಾಡ್ತಾನೆ.

Girl in a jacket
error: Content is protected !!