ಸಿದ್ದು -ಯಡ್ಡಿ ಜಗಳಬಂದಿ

Share

ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ಎಂದೂ ಸುಗಮವಾದ ಜುಗಲ್ ಬಂದಿ ಇರುವುದು ಸಾಧ್ಯವಿಲ್ಲ ಎನ್ನುವುದು ಸ್ವಾತಂತ್ರ್ಯ ಬಂದ ಲಾಗಾಯ್ತಿನಿಂದಲೂ ದೇಶ ಕಂಡಿರುವ ಸತ್ಯ. ಆಳುವ ಪಕ್ಷ ಒಂದು ಕಡೆ, ಇನ್ನೊಂದು ಕಡೆಯಲ್ಲಿ ಆಡಳಿತ ಇಲ್ಲ ಎನ್ನುವ ಕಾರಣಕ್ಕೆ ಅಳುವ ಪಕ್ಷ. ಅವುಗಳ ನಡುವೆ ಇರುವುದು ಜಗಳಬಂದಿ ಮಾತ್ರ. ಜಗಳಕ್ಕೆ ಇಂಥದೇ ಕಾರಣ ಬೇಕೆಂದೇನೂ ಇಲ್ಲ, ಕಾರಣ ತನ್ನಷ್ಟಕ್ಕೆ ಹುಟ್ಟಿಕೊಳ್ಳುತ್ತದೆ; ತಾರ್ಕಿಕ ಅಂತ್ಯ ಕಾಣದೆ ತನ್ನಷ್ಟಕ್ಕೆ ತಾನೇ ಸಾಯುತ್ತದೆ. ವಿರೋಧ ಪಕ್ಷದ ನಾಯಕರು ಅಧಿಕಾರಿಗಳನ್ನು ಕರೆದು ಅಭಿವೃದ್ಧಿ ವಿಚಾರದಲ್ಲಿ ಪರಾಮರ್ಶನ ಸಭೆ ನಡೆಸಬಹುದೇ ಎನ್ನುವುದು ಕರ್ನಾಟಕದಲ್ಲಿ ನಡೆದಿರುವ ಹಾಲಿ ಜಗಳ ಬಂದಿಯ ವಸ್ತು. ಆ ಅಧಿಕಾರ ವಿರೋಧ ಪಕ್ಷದ ನಾಯಕರಿಗೆ ಇಲ್ಲ ಎನ್ನುವುದು ಸರ್ಕಾರದ ವಾದ. ಇದೆ ಎನ್ನುವುದು ಪ್ರತಿಪಕ್ಷ ನಾಯಕರ ಪ್ರತಿವಾದ. ವಾದ ಪ್ರತಿವಾದಗಳ ನಡುವೆ ಯಾರು ಎಷ್ಟು ನಿಜ ಎನ್ನುವುದನ್ನು ನೋಡಬೇಕಿದೆ.
ಸರ್ಕಾರ ಎನ್ನುವುದು ಒಂದು ವ್ಯವಸ್ಥೆ. ಹೀಗೆಯೇ ಅದು ನಡೆಯಬೇಕು ಎನ್ನುವುದಕ್ಕೆ ಅದರದೇ ಆದ ನಿಯಮಗಳಿವೆ. ಆ ನಿಯಮಗಳು ಶಾಸನ ಸಭೆ ಅಂಗೀಕರಿಸಿದ ಶಾಸನಗಳನ್ನು ಆಧರಿಸಿರುತ್ತದೆ. ಶಾಸನ ರಚನೆಯಲ್ಲಿ ಆಡಳಿತ ಪಕ್ಷದಂತೆ ವಿರೋಧ ಪಕ್ಷಗಳ ಪಾಲ್ಗೊಳ್ಳುವಿಕೆಯೂ ಇರುತ್ತದೆ. ಬಹುತೇಕ ಶಾಸನಗಳು ವಿರೋಧ ಪಕ್ಷಗಳ ಅನುಪಸ್ಥಿತಿಯಲ್ಲಿ ಅಂಗೀಕಾರ ಆಗುತ್ತವೆ ಎನ್ನುವುದು ದಿಟ. ಆದರೆ ವಿರೋಧ ಪಕ್ಷಗಳ ತಾಟಸ್ತ್ಯ ಅಥವಾ ಸಭಾತ್ಯಾಗವೂ ಆಡಳಿತ ಪಕ್ಷಕ್ಕೆ ಅನುಕೂಲವಾಗಿ ಶಾಸನ ಮಸೂದೆ ಅಂಗೀಕಾರವಾಗುತ್ತದೆ. ಒಮ್ಮೆ ಅಂಗೀಕಾರವಾಯಿತೆಂದರೆ ಅದನ್ನು ಒಪ್ಪಿಕೊಳ್ಳುವುದಲ್ಲದೆ ಅನ್ಯ ಮಾರ್ಗವಿಲ್ಲ. ಈ ಮಾತಿಗೆ ಒಂದೆರಡಲ್ಲ, ನೂರಾರು ನಿದರ್ಶನಗಳನ್ನು ಮುಂದಿಡಬಹುದು.


ಪ್ರಸ್ತುತ ನಾಡನ್ನು ದೇಶವನ್ನು ಅಟ್ಟಾಡಿಸುತ್ತಿರುವ ಜಾಗತಿಕ ಪಿಡುಗು ಕೋವಿಡ್ ಸಾಂಕ್ರಾಮಿಕದ ನಿಯಂತ್ರಣಕ್ಕೆ ನಿರ್ಮೂಲನಕ್ಕೆ; ಅದರಿಂದ ಸಂಕಷ್ಟಕ್ಕೆ ಒಳಗಾಗಿರುವ ಜನತೆಯ ಬದುಕನ್ನು ಹಸನಾಗಿಸುವುದಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು; ಹಾಕಿಕೊಂಡಿರುವ ಕಾರ್ಯಕ್ರಮಗಳೇನು; ಮಾಡಿರುವ ಅಗಾಧ ಖರ್ಚುವೆಚ್ಚದ ವಿವರಗಳೇನು ಎಂಬಿತ್ಯಾದಿ ಕೇಳುವ ಸಕಲ ಅಧಿಕಾರವೂ ವಿರೋಧ ಪಕ್ಷಕ್ಕೆ ಇದೆ. ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಈ ಹಿಂದೆ ಐದು ವರ್ಷ ಮುಖ್ಯಮಂತ್ರಿಯಾಗಿದ್ದವರು. ಅದಕ್ಕೆ ಪೂರ್ವದಲ್ಲಿ ಅವರು ಶಾಸಕರಾಗಿ, ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕರಾಗಿ ಆಡಳಿತಾತ್ಮಕವಾಗಿ ಎಷ್ಟೆಲ್ಲ ಅನುಭವಸ್ತರಾಗಬೇಕೋ ಅಷ್ಟೂ ಆಗಿದ್ದಾರೆ.


ಸದ್ದಿಗಾಗಿ ಸುದ್ದಿ ತರವೇ?
ಬಿ.ಎಸ್. ಯಡಿಯೂರಪ್ಪ ಈಗಿನ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ. ಶಾಸನ ಸಭೆಯಲ್ಲಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರು ಮುಖಾಮುಖಿ ಎನ್ನುವಂತೆ ಆಸೀನರಾಗಿರುತ್ತಾರೆ. ಕ್ಯಾಬಿನೆಟ್ ದರ್ಜೆ ಸಚಿವರು ಹೊಂದಿರುವ ಸಕಲ ಸ್ಥಾನಮಾನವೂ ವಿರೋಧ ಪಕ್ಷದ ನಾಯಕರಿಗೆ ಸಲ್ಲುತ್ತದೆ. ವಿಧಾನ ಪರಿಷತ್‌ನಲ್ಲೂ ಅಷ್ಟೆ ಮಾನ್ಯತೆ ಪಡೆದ ವಿರೋಧ ಪಕ್ಷದ ನಾಯಕರಿಗೆ ಕ್ಯಾಬಿನೆಟ್ ಸಚಿವ ದರ್ಜೆ ಸ್ಥಾನಮಾನ, ಗೂಟದ ಕಾರು, ಸಿಬ್ಬಂದಿ, ವಾಸಕ್ಕೆ ಬಂಗಲೆ, ಟಿಎಡಿಎ ಇತ್ಯಾದಿ ಇತ್ಯಾದಿ ಸವಲತ್ತುಗಳು ಬೇಡದೆಯೂ ಅವರಿಗೆ ಬರುತ್ತದೆ. ಅದು ಭಿಕ್ಷೆಯಲ್ಲ, ಜನತಂತ್ರ ಕೊಡಮಾಡಿರುವ ಹಕ್ಕು.ಎಉ ಆದರೆ ಇಂಥ ಸ್ಥಾನಮಾನಗಳೊಂದಿಗೆ ಮುಖ್ಯಮಂತ್ರಿ ಇಲ್ಲವೇ ಮಂತ್ರಿಗಳು ಹೊಂದಿರುವ ಅಧಿಕಾರ ಬರುವುದಿಲ್ಲ. ಇದು ಸಿದ್ದರಾಮಯ್ಯನವರಿಗೆ ಗೊತ್ತಿಲ್ಲ ಎಂದೇನೂ ಅಲ್ಲ. ಸುದ್ದಿ ಎನ್ನುವುದು ಬಹಳ ಸಂದರ್ಭದಲ್ಲಿ ಸದ್ದಿಗಷ್ಟೇ ಸೀಮಿತವಾಗಿರುತ್ತದೆ. ಈಗ ನಡೆದಿರುವ ಜಗಳ ಬಂದಿಯನ್ನು ನೋಡಿದರೆ ಒಂದಿಷ್ಟು ಸದ್ದು ಮಾಡುವ ಅಪರಂಪಾರ ಸ್ಪಷ್ಟ.


ಸಚಿವ ಕೆ.ಎಸ್.ಈಶ್ವರಪ್ಪ ಹೇಳುವಂತೆ ಅವರು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿದ್ದಾಗ (ಆಗ ಸಿದ್ದರಾಮಯ್ಯ ಮುಖ್ಯಮಂತ್ರಿ) ಅಧಿಕಾರಿಗಳನ್ನು ಕರೆದು ವಿವರ ಪಡೆಯುವುದಕ್ಕೆ ಅಡ್ಡಿಪಡಿಸಲಾಗಿತ್ತು. ವಿಧಾನ ಸಭೆ ವಿರೋಧ ಪಕ್ಷದ ನಾಯಕರಾಗಿದ್ದ ಜಗದೀಶ ಶೆಟ್ಟರ್‌ಗೂ “ನೋ” ಎಂಬ ಉತ್ತರವೇ ಬಂದಿತ್ತು. ಇನ್ನೂ ಹಿಂದಕ್ಕೆ ಹೋದರೆ ವಿ.ಎಸ್. ಉಗ್ರಪ್ಪ ಪ್ರಕರಣ ನೆನಪಾಗುತ್ತದೆ. ಕೆಲವು ಕಾಲ ಅವರು ವಿಧಾನ ಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ಜಿಲ್ಲೆಯೊಂದಕ್ಕೆ ಭೇಟಿ ನೀಡಿದ್ದ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಒಗ್ಗೂಡಿಸಿಕೊಂಡು ಪ್ರಗತಿಪರಿಶೀಲನಾ ಸಭೆ ನಡೆಸುವುದಕ್ಕೆ ತಯಾರಿ ನಡೆಸಿದ್ದರು. ವಿರೋಧ ಪಕ್ಷದ ನಾಯಕರು ಅಂಥ ಸಭೆ ಕರೆಯಲು ಬರುವುದಿಲ್ಲ ಅಧಿಕಾರವೂ ಇಲ್ಲ ನಿಯಮಾವಳಿಗಳಲ್ಲಿ ಅವಕಾಶಗಳೂ ಇಲ್ಲ ಎಂದು ಅದಕ್ಕೆ ಅವಕಾಶವನ್ನು ನಿರಾಕರಿಸಲಾಯಿತು.
ನಿಯಮ ಮಾಡಿದ್ದು ಯಾರು?
ಉಗ್ರಪ್ಪ ಬಡಪೆಟ್ಟಿಗೆ ಇಂಥ ವಾದವನ್ನು ಒಪ್ಪುವ ಜಾಯಮಾನದವರಲ್ಲ. ಅದೇ ಸಮಯದಲ್ಲಿ ಲೋಕಸಭೆಯಲ್ಲಿ ಎಲ್.ಕೆ. ಆಡ್ವಾಣಿ ವಿರೋಧ ಪಕ್ಷದ ನಾಯಕರಾಗಿದ್ದರು. (ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಯುಪಿಎ ಸರ್ಕಾರದ ಅವಧಿ). ವಿರೋಧ ಪಕ್ಷದ ನಾಯಕ ಎಂದು ರಕ್ಷಣಾ ಖಾತೆ ಅಧಿಕಾರಿಗಳೊಂದಿಗೆ ಸಭೆ ನಡೆಸಬಹುದೇ? ಎಂಬ ಪ್ರಶ್ನೆ ಉದ್ಭವವಾಗಿ ಅದನ್ನು ಉಗ್ರಪ್ಪನವರೂ ಕೇಳಬೇಕಾಗಿ ಬಂತು. ಕರ್ನಾಟಕದ ರಾಜಕಾರಣದಲ್ಲಿ ಅಧ್ಯಯನ ಮಾಡದೆ ಮಾತನಾಡದ ಅಪರೂಪದ ಕೆಲವು ರಾಜಕಾರಣಿಗಳಿದ್ದಾರೆ. ಅಂಥವರಲ್ಲಿ ಕಾಂಗ್ರೆಸ್ ಮುಖಂಡ ಎಚ್.ಕೆ. ಪಾಟೀಲರು ಒಬ್ಬರು. ಅಧಿಕಾರಿಗಳಿಂದ ಮಾಹಿತಿ ಪಡೆಯುವುದಕ್ಕೆ ಅಂದಿದ್ದ ಸರ್ಕಾರ ಅವಕಾಶ ಕೊಡದಿದ್ದರೆ ಶೆಟ್ಟರ್, ಈಶ್ವರಪ್ಪ ಸುಮ್ಮನಿದ್ದರಾದರೂ ಏಕೆ ಎಂದು ಕೇಳಿರುವುದು ಅವರು ಹೊಂದಿರುವ ಜ್ಞಾನಕ್ಕೆ ಶೋಭೆ ತರುವುದಿಲ್ಲ. ಮೊದಲೇ ಹೇಳಿದಂತೆ ಈ ನಿಯಮಗಳು ಶಾಸನ ಸಭೆ ಅಂಗೀಕರಿಸಿರುವ ಶಾಸನಗಳ ಫಲ. ಸರ್ಕಾರ ಆಡಳಿತ ಪಕ್ಷ ಬದಲಾಗುವುದರೊಂದಿಗೆ ನಿಯಮಾವಳಿಗಳು ಬದಲಾಗುವುದಿಲ್ಲ.
ಭಾರತದಲ್ಲಿ ಇದುವರೆಗೆ ಆಡಳಿತ ನಡೆಸಿದ ಯಾವ ಸರ್ಕಾರವೂ ಪಾರದರ್ಶಕವಾಗಿ ಅಧಿಕಾರ ಚಲಾಯಿಸಿದ ಉದಾಹರಣೆಗಳಿಲ್ಲ. ತೆರೆದಿಡುವುದಕ್ಕಿಂತ ಮುಚ್ಚಿಡುವುದರಲ್ಲಿಯೇ ಅವುಗಳಿಗೆ ಹೆಚ್ಚು ಆಸಕ್ತಿ. ರಾಷ್ಟ್ರಮಟ್ಟದಲ್ಲಾಗಲೀ ರಾಜ್ಯ ಮಟ್ಟದಲ್ಲಾಗಲೀ ಇಂಥ ಲೋಪಗಳನ್ನು ಸರಿಪಡಿಸುವ ಕೆಲಸವನ್ನು ವಿರೋಧ ಪಕ್ಷಗಳು ಅಧಿಕಾರಕ್ಕೆ ಬಂದಾಗ ಮಾಡಲಿಲ್ಲ ಎನ್ನುವುದು ಏನನ್ನು ಹೇಳುತ್ತದೆ. ಅಧಿಕಾರ ಕೈಯಲ್ಲಿಲ್ಲದಾಗ ಹೊಡೆಯುವ ಬೊಬ್ಬೆ ಅಧಿಕಾರ ಕೈಗೆ ಬಂದಾಗ ಮರೆತೇಹೋಗುತ್ತದೆ. ಅಸಲಿಗೆ ಯಾವ ಸರ್ಕಾರವೂ ಲೋಪರಹಿತ ಕೆಲಸ ಮಾಡಿದ್ದಿಲ್ಲ. ಅದಕ್ಕೆ ಈಗ ಇರುವ ಬಿಜೆಪಿ ಸರ್ಕಾರವಾಗಲೀ ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರವಾಗಲೀ ಮಧ್ಯದಲ್ಲಿ ಬಂದು ಹೋದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಾಗಲಿ ಅಪವಾದವಲ್ಲ.
ಅನುಮಾಗಳ ಸರಮಾಲೆ
ಕೋವಿಡ್ ನಿಯಂತ್ರಣ, ವ್ಯಾಕ್ಸಿನೇಷನ್ ಉತ್ಪಾದನೆ ವಿಲೇವಾರಿ, ವ್ಯಾಕ್ಸಿನ್ ದರ, ಮಿತ್ರ ರಾಷ್ಟ್ರಗಳಿಗೆ ರಫ್ತು ಇತ್ಯಾದಿ ವಿಚಾರಗಳಲ್ಲಿ ಬಹಳ ಅನುಮಾನಗಳಿವೆ. ಹೊಸ ಹೊಸ ಅನುಮಾನಗಳು ದಿನವೂ ಹುಟ್ಟಿಕೊಳ್ಳುತ್ತಿವೆ. ಉತ್ತರದಾಯಿತ್ವವುಳ್ಳ ಯಾವುದೇ ಸರ್ಕಾರ ಇಂಥ ಸಂಕಷ್ಟ ಸಮಯದಲ್ಲಿ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಜನರ ಗೋಳಿನ ಪರಿಹಾರದ ಕಾರ್ಯಕ್ರಮಗಳನ್ನು ಅನುಷ್ಟಾನಕ್ಕೆ ತರಬೇಕಾಗುತ್ತದೆ. ಅಧಿಕಾರ ಕೈಲಿದೆ ಎಂದ ಮಾತ್ರಕ್ಕೆ ಆಡಳಿತ ಪಕ್ಷಕ್ಕೆ ಸರ್ವಜ್ಞತ್ವ ಬರುವುದಿಲ್ಲ. ವಿರೋಧಕ್ಕಾಗಿ ವಿರೋಧ ಮಾಡುವುದರಿಂದ ವಿರೋಧ ಪಕ್ಷಗಳಿಗೆ ಮಹತ್ವವೂ ಸಿಗುವುದಿಲ್ಲ. ಇಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಸಂಧಾನ ಅನುಸಂಧಾನ ನಡೆಯಬೇಕು, ಅದೇ ಕಾಲಕ್ಕೆ ಪ್ರತಿಷ್ಟೆಯನ್ನು ಪಕ್ಕಕ್ಕಿಟ್ಟು ಜನಹಿತಕ್ಕೆ ಮಿಡಿಯುವ ಅಂತಃಕರಣವೂ ಬೇಕು.

Girl in a jacket
error: Content is protected !!