ಸಚಿವರ ಕೈತಪ್ಪಿದ ಜಹಗೀರು

Share

ಜಿಲ್ಲೆಯವರಲ್ಲದ ಸಚಿವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ರಮದ ಹಿಂದ ಬಹಳ ದೊಡ್ಡ ಧೈರ್ಯ ಕೆಲಸ ಮಾಡಿದೆ. ಇದು ಸಚಿವರಲ್ಲಿ ಏಕರೂಪದ ಅಸಮಾಧಾನಕ್ಕೆ ಕಾರಣವೂ ಆಗಿದೆ. ಮೂವರಿಗೆ ಎರಡೆರಡು ಜಿಲ್ಲಾ ಉಸ್ತುವಾರಿ ಕೊಟ್ಟಿರುವುದು ಇಕ್ಕಟ್ಟಿಗೆ ಕಾರಣವಾಗಬಹುದು. ಸ್ವಾತಂತ್ರ್ಯ ದಿನ, ರಾಜ್ಯೋತ್ಸವದ ದಿನ ರಾಷ್ಟ್ರಧ್ವಜ, ಕನ್ನಡ ಬಾವುಟವನ್ನು ಜಿಲ್ಲಾ ಸಚಿವರು ಜಿಲ್ಲಾ ಕೇಂದ್ರದಲ್ಲಿ ಹಾರಿಸುವ ಪರಿಪಾಠವಿದೆ. ಈ ಮೂವರು ಸಚಿವರು ಆ ಕೆಲಸವನ್ನು ಎರಡೆರಡು ಕಡೆ ಮಾಡುವುದಾದರೂ ಹೇಗೆ…? ಇತರರ ಅಸಮಾಧಾನದಲ್ಲೂ ಸಂತೋಷಕೂಟಕ್ಕೆ ಶ್ರೀರಾಮುಲು ಅಣಿಯಾಗಿದ್ದಾರೆ. ಅವರಿಗೆ ಅವರ ಬಯಕೆಯ ಬಳ್ಳಾರಿ ಉಡುಗೊರೆ ರೂಪದಲ್ಲಿ ಬಂದಿದೆ.

ಸಚಿವರ ಕೈತಪ್ಪಿದ ಜಹಗೀರು

ಗಜಗರ್ಭ ಮುಕ್ತಿ ಕಂಡಿದೆ. ಅಂತೂ ಇಂತೂ ಎಂಬಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿಗೆ ಸಚಿವರನ್ನು ನೇಮಿಸಿದ್ದು ಅವರ ಅಧಿಕಾರಾವಧಿಗೆ ಹೋಲಿಸಿದರೆ ಬಹಳ ವಿಳಂಬವಾಗಿ ತೆಗೆದುಕೊಂಡ ತೀರ್ಮಾನ ಇದಾಗಿದೆ. ವರ್ಷ ಒಪ್ಪತ್ತಿನಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಅಷ್ಟು ಮಾತ್ರವೆ ಈ ಸರ್ಕಾರದ ಜೀವಿತಾವಧಿ. ಚುನಾವಣೆಯ ಬಳಿಕ ಇದೇ ಸರ್ಕಾರ, ಪಕ್ಷ ಅಧಿಕಾರಕ್ಕೆ ಬರುತ್ತದೊ ಬೇರೆಯದು ಸ್ಥಾನ ಹಿಡಿಯುತ್ತದೊ ಎನ್ನುವುದು ಮತದಾರರ ಮರ್ಜಿಗೆ ಬಿಟ್ಟಿದ್ದು. ಸದ್ಯಕ್ಕೆ ಬೊಮ್ಮಾಯಿ ತಮ್ಮ ಅಂತರ್ಗತ ಅಧಿಕಾರವನ್ನು ಸಚಿವರ ಮುಖಮೂತಿ ನೋಡದೆ ಚಲಾಯಿಸಿದ್ದಾರೆ. ಕೆಲವರಾದರೂ ಸಚಿವರು ನಡೆಸುತ್ತಿದ್ದ “ಜನತಂತ್ರಾತ್ಮಕ ನೀತಿ ನಡಾವಳಿಗೆ ವಿರುದ್ಧವಾದ ದರ್ಬಾರಿಗೆ” ವಿಸ್ಮಯಕಾರಿ ಬ್ರೇಕ್ ಹಾಕಿದ್ದಾರೆ. ತಮ್ಮ ತಮ್ಮ ಜಿಲ್ಲೆಗಳನ್ನು ಪಿತ್ರಾರ್ಜಿತ ಆಸ್ತಿ ಎಂಬಂತೆ; ರಾಜಮಹಾರಾಜರ ಕಾಲದಲ್ಲಿ ಉಂಬಳಿಯಾಗಿ ಬಂದಿರುವ ಜಹಗೀರು ಎಂಬಂತೆ ಡೌಲು ದೌಲತ್ತಿನಲ್ಲಿ ಮೆರೆಯುತ್ತಿದ್ದ ಸಚಿವರನೇಕರಿಗೆ ಮುಖ್ಯಮಂತ್ರಿಯ ಈ ನಿರ್ಧಾರ ಅಷ್ಟೆಲ್ಲ ಸುಲಭದಲ್ಲಿ ಜೀರ್ಣಿಸಿಕೊಳ್ಳಲಾಗದ ಆದರೆ ಜನಸಾಮಾನ್ಯರ ದೃಷ್ಟಿಯಿಂದ ಸ್ವಾಗತಾರ್ಹ ಕ್ರಮವೆನಿಸಿದೆ.


ಜಿಲ್ಲಾ ಸಚಿವರಾಗಿ ಆಯಾ ಜಿಲ್ಲೆಯನ್ನು ಪ್ರತಿನಿಧಿಸುವ ಸಚಿವರಲ್ಲೇ ಒಬ್ಬರು ನಿಯುಕ್ತರಾಗುವುದು ಉತ್ತಮ. ಉಸ್ತುವಾರಿ ಆಯಾ ಜಿಲ್ಲೆಯವರ ಕೈಯಲ್ಲೆ ಇದ್ದಲ್ಲಿ ಅವರಿಗೆ ಜಿಲ್ಲೆಯಲ್ಲಿ ನಡೆಯುತ್ತಿರುವ ಮತ್ತು ಕೈಗೆತ್ತಿಕೊಳ್ಳಬೇಕಾದ ಅಭಿವೃದ್ಧಿ ಕಾರ್ಯಕ್ರಮಗಳ ಸಮೀಪ ಪರಿಚಯವಿರುತ್ತದೆ. ಅಧಿಕಾರಿಗಳ ಬೆನ್ನು ಹತ್ತಿ ಕೆಲಸ ಕಾರ್ಯಗಳನ್ನು ಮಾಡಿಸುತ್ತಾರೆ. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಒ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಒಳಗೊಂಡು ನಿಯಮಿತವಾಗಿ ನಡೆಯುವ ಕೆಡಿಪಿ (ಕರ್ನಾಟಕ ಡೆವೆಲಪ್‌ಮೆಂಟ್ ಪ್ರೊಗ್ರಾಮ್ಸ್) ಸಭೆಯ ಮೂಲಕ ಕಾಮಗಾರಿಗಳ ಪರಿಶೀಲನೆ ಪರ್ಯಾಲೋಚನೆ ನಡೆಸುತ್ತಾರೆ. ಜಿಲ್ಲೆಯಲ್ಲಿ ತಮ್ಮ ಸ್ವಕ್ಷೇತ್ರದ ಆಚೆಗೂ ಅವರ ಅಧಿಕಾರಾವಧಿ ವಿಸ್ತರಿಸುವ ಕಾರಣವಾಗಿ ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ನಿರಾತಂಕವಾಗಿ ನಿರಂತರವಾಗಿ ನಡೆಯಲು ಅನುಕೂಲವಾಗುತ್ತದೆ… ಇತ್ಯಾದಿ ಇತ್ಯಾದಿ ಕಾರಣಗಳಿಗಾಗಿ ಆಯಾ ಜಿಲ್ಲೆಯ ಸಚಿವರಲ್ಲಿ ಒಬ್ಬರನ್ನು ಉಸ್ತುವಾರಿಯನ್ನಾಗಿ ಮಾಡುವ ಪರಿಪಾಠ ಪರಂಪರೆಯಂತೆ ನಡೆದುಕೊಂಡು ಬಂದಿತ್ತು. ಇದೀಗ ಬೊಮ್ಮಾಯಿ ಸರ್ಕಾರ ಸ್ಥಾಪಿತ ಪರಂಪರೆಗೆ ಒಂದು ಕೊನೆ ಹಾಡುವ ಯತ್ನ ನಡೆಸಿದೆ. ಸಿಎಂ ತೆಗೆದುಕೊಂಡಿರುವ ನಿರ್ಧಾರದ ಆಯಸ್ಸು ಎಷ್ಟೆಂದು ಊಹಿಸುವುದು ಕಷ್ಟ. ಏಕೆಂದರೆ ಇಡೀ ಸಂಪುಟವನ್ನು ಅವರು ಎದುರು ಹಾಕಿಕೊಂಡಿದ್ದಾರೆ. ಇದನ್ನು ಇಡೀ ಸಂಪುಟ ಸಿಎಂ ವಿರುದ್ಧ ಸೆಟೆದೆದ್ದಿದೆ ಎಂದೂ ವ್ಯಾಖ್ಯಾನಿಸಬಹುದು.


ಬೊಮ್ಮಾಯಿ ಅಧಿಕಾರ ವಹಿಸಿಕೊಂಡು ಹೆಚ್ಚೂಕಡಿಮೆ ಆರು ತಿಂಗಳಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ತಡವಾಗುತ್ತಿದೆ ಎಂಬ ಕೂಗು ಕ್ರಮೇಣ ಜೋರು ಧ್ವನಿಯನ್ನು ಪಡೆದಿತ್ತು. ಜಿಲ್ಲಾ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಧ್ವಜ ಹಾರಿಸುವ, ಕನ್ನಡ ರಾಜ್ಯೋತ್ಸವದ ದಿವಸ ನಾಡಧ್ವಜ ಹಾರಿಸುವ ಕೆಲಸವನ್ನು ಜಿಲ್ಲೆಯ ಸಚಿವರಲ್ಲಿ ಒಬ್ಬರಿಗೆ ಬೊಮ್ಮಾಯಿ ಸರ್ಕಾರ ನೀಡಿತ್ತು.ಕೆಲವು ಜಿಲ್ಲೆಗಳಲ್ಲಿ ಒಬ್ಬರೇ ಸಚಿವರಿದ್ದು ಅದನ್ನೇ ಜಿಲ್ಲಾ ಉಸ್ತುವಾರಿ ಎಂದು ಆ ಸಚಿವರ ಬೆಂಬಲಿಗರು ತಮಟೆ ಬಾರಿಸಿಕೊಂಡಿದ್ದೂ ಆಯಿತು. ಬಾವುಟ ಹಾರಿಸುವುದರಿಂದಾಚೆಗೆ ಅವರಿಗೆ ಬೇರೆ ಉದ್ಯೋಗ ಇರಲಿಲ್ಲ ಎಂದೇನೂ ಅಲ್ಲ. ರಾಜ್ಯವನ್ನು ಅಟ್ಟಾಡಿಸಿದ ಕೊರೋನಾ ಸಾಂಕ್ರಾಮಿಕದ ನಿಯಂತ್ರಣದ ಜವಾಬ್ದಾರಿಯನ್ನು ಆ ಸಚಿವರಿಗೆ ನೀಡಲಾಗಿತ್ತು. ಹೀಗಿದ್ದೂ ಅಭಿವೃದ್ಧಿ ಕಾರ್ಯ ಹಾಗೂ ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಡಿಸಿ, ಸಿಇಒ, ಎಸ್‌ಪಿಗಳ ಮೇಲೆ ನೇರ ದರ್ಬಾರು ನಡೆಸುವುದಕ್ಕೆ ಆಗದೆ ಅನೇಕ ಸಚಿವರು ಸಿಎಂ ಮುಂದೆ ತಮ್ಮ ಪ್ರತಿಭಟನೆಯನ್ನು ದಾಖಲು ಮಾಡಿದ್ದೂ ಉಂಟು. ಬೊಮ್ಮಾಯಿಯವರು ಸಚಿವ ಸಹೋದ್ಯೋಗಿಗಳು ಹೇಳಿದ್ದನ್ನೆಲ್ಲ ಕೇಳಿಸಿಕೊಂಡು ತಮಗೆ ಸರಿ ತೋಚಿದ್ದನ್ನು ಮಾಡಿದ್ದಾರೆ! ಬಲ್ಲ ಮಾಹಿತಿಗಳ ರೀತ್ಯ ಅವರು ಪಕ್ಷದ ಉನ್ನತ ಹಂತದಲ್ಲಿ ಸಮಾಲೋಚಿಸಿದ ನಂತರವೇ ಈ ತೀರ್ಮಾನಕ್ಕೆ ಬಂದಿದ್ದಾರೆ.
ಸಚಿವ ಸಂಪುಟದಲ್ಲಿ ಪವರ್‌ಫುಲ್ ಒಕ್ಕಲಿಗ ಸಚಿವ ಎಂದೇ ತಮ್ಮನ್ನು ಬಿಂಬಿಸಿಕೊಂಡಿರುವ ಕಂದಾಯ ಸಚಿವ ಆರ್.ಅಶೋಕ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿಯವರಿಬ್ಬರಿಗೂ ಉಸ್ತುವಾರಿ ಸಚಿವ ಸ್ಥಾನಕ್ಕೆ ಜಿಲ್ಲೆ ತೋರಿಸದ ಸಿಎಂ ಪಟ್ಟಿ ಆ ಇಬ್ಬರ ವಲಯದಲ್ಲಿ ಅಲ್ಲೋಲಕಲ್ಲೋಲಕ್ಕೆ ಕಾರಣವಾಗಿದೆ. ಬೆಂಗಳೂರು ನಗರವನ್ನು ತಮ್ಮ ಜಹಗೀರು ಎಂದು ತಿಳಿದುಕೊಂಡಿರುವ ಕೆಲವರು ರಾಜಕಾರಣಿಗಳು ಆಡಳಿತ ಪಕ್ಷದಲ್ಲಿರುವಂತೆ ಕಾಂಗ್ರೆಸ್, ಜೆಡಿಎಸ್‌ಗಳಲ್ಲೂ ಇದ್ದಾರೆ. ಅಂಥವರಲ್ಲಿ ಅಶೋಕ್ ಒಬ್ಬರು. ಅವರ ದರ್ಬಾರು ಅವರಿಗೆ ಅಶೋಕ ಸಾಮ್ರಾಟ ಎಂಬ ವ್ಯಂಗ್ಯನಾಮವನ್ನು ತಂದಿದೆ. ನಾವೆಲ್ಲ ಇತಿಹಾಸ ಪಠ್ಯದಲ್ಲಿ ಓದಿರುವ ಚಕ್ರವರ್ತಿ ಅಶೋಕ ಸಾಮ್ರಾಟನ ಐತಿಹ್ಯದಲ್ಲಿ ಆತ ಅಹಂಕಾರದ ಪ್ರತಿರೂಪವಾಗಿರುವುದರ ಪ್ರಸ್ತಾಪ ಎಲ್ಲೂ ಇಲ್ಲ. ಆದರೆ ಬೆಂಗಳೂರು ಪದ್ಮನಾಭ ನಗರದ ಅಶೋಕರನ್ನು ದೂರ ನಿಂತು ನೋಡುವವರಿಗೂ ಅವರ ಅಹಂಕಾರದ ಬಿಸಿ ರಾಚುತ್ತದೆ. ಈ ಸಾಮ್ರಾಟನ ಕಿರೀಟ ಬೊಮ್ಮಾಯಿ ತೀರ್ಮಾನದ ಕಾರಣವಾಗಿ ಕಿರಿಕಿರಿ ಎದುರಿಸುವಂತಾಗಿದೆ. ಇದೇ ಮಾತು ಮಾಧುಸ್ವಾಮಿ ವಿಚಾರದಲ್ಲೂ ಹೆಚ್ಚೂಕಡಿಮೆ ನಿಜ. “ಮಾಧುಸ್ವಾಮಿ ಸಚಿವರಾಗಿ ಮುಂದುವರಿದುದೇ ಹೌದಾದಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ತುಮಕೂರು ಜಿಲ್ಲೆಯಲ್ಲಿ ಒಂದು ಸ್ಥಾನವೂ ಬರೋಲ್ಲ” ಎಂದು ತುಮಕೂರು ಬಿಜೆಪಿ ಸಂಸದ ಜಿ.ಎಸ್. ಬಸವರಾಜು ಬಹಿರಂಗವಾಗಿ ಹೇಳುವಷ್ಟರ ಹಂತಕ್ಕೆ ಮಾಧುಸ್ವಾಮಿ ಜನಪ್ರಿಯತೆ ಅಟ್ಟವನ್ನೇರಿದೆ.


ಇವರಿಗೆ ವಹಿಸಲು ಜಿಲ್ಲೆಯೇ ಇರಲಿಲ್ಲವೇ…? ಹಾಗೇನೂ ಅಲ್ಲ. ಕೊಡಬಾರದು ಎಂಬ ಕಾರಣಕ್ಕಾಗಿಯೇ ಕೊಟ್ಟಿಲ್ಲ ಎನ್ನಲು ಕಾರಣವಿದೆ. ಮೂವರು ಸಚಿವರಿಗೆ ಎರಡೆರಡು ಜಿಲ್ಲಾ ಉಸ್ತುವಾರಿ ವಹಿಸಿ ಈ ಇಬ್ಬರಿಗೆ ಖಾಲಿ ಕೂರಲು ಹೇಳಿರುವುದನ್ನು ನೋಡಿದರೆ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವುಳ್ಳವರಿಗೆ ಏನನ್ನೂ ಹೇಳದಿದ್ದರೂ ಎಲ್ಲವುದೂ ಅರ್ಥ ಆಗುತ್ತದೆ. ಜಿಲ್ಲಾ ಸಚಿವರ ಪಟ್ಟಿಯನ್ನೊಮ್ಮೆ ನೋಡಿ ಮುಂದಕ್ಕೆ ಹೋಗೋಣ: ಗೋವಿಂದ ಕಾರಜೋಳ (ಬೆಳಗಾವಿ); ಕೆ.ಎಸ್.ಈಶ್ವರಪ್ಪ (ಚಿಕ್ಕಮಗಳೂರು); ಬಿ.ಶ್ರೀರಾಮುಲು (ಬಳ್ಳಾರಿ); ವಿ.ಸೋಮಣ್ಣ (ಚಾಮರಾಜ ನಗರ); ಉಮೇಶ್ ವಿ ಕತ್ತಿ(ವಿಜಯಪುರ); ಎಸ್.ಅಂಗಾರ (ಉಡುಪಿ); ಆರಗ ಜ್ಞಾನೇಂದ್ರ (ತುಮಕೂರು); ಸಿ.ಎನ್.ಅಶ್ವತ್ಥನಾರಾಯಣ (ರಾಮನಗರ); ಸಿ.ಸಿ.ಪಾಟೀಲ (ಬಾಗಲಕೋಟೆ); ಆನಂದ ಸಿಂಗ್ (ಕೊಪ್ಪಳ); ಕೋಟಾ ಶ್ರೀನಿವಾಸ ಪೂಜಾರಿ(ಉತ್ತರ ಕನ್ನಡ); ಪ್ರಭು ಚೌಹಾಣ್ (ಯಾದಗೀರ್); ಮರುಗೇಶ ಆರ್ ನಿರಾನಿ (ಕಲಬುರ್ಗಿ); ಎ. ಶಿವರಾಮ ಹೆಬ್ಬಾರ್ (ಹಾವೇರಿ); ಶಶಿಕಲಾ ಜೊಲ್ಲೆ (ವಿಜಯಪುರ); ಎಸ್.ಟಿ. ಸೋಮಶೇಖರ್ (ಮೈಸೂರು); ಬಿ.ಸಿ. ಪಾಟೀಲ (ಚಿತ್ರದುರ್ಗ ಮತ್ತು ಗದಗ); ಬಿ.ಎ. ಬಸವರಾಜ(ದಾವಣಗೆರೆ); ಕೆ.ಸುಧಾಕರ್ (ಬೆಂಗಳೂರು ಗ್ರಾಮಾಂತರ); ಕೆ.ಗೋಪಾಲಯ್ಯ (ಹಾಸನ ಮತ್ತು ಮಂಡ್ಯ); ಎಂಟಿಬಿ ನಾಗರಾಜು(ಚಿಕ್ಕಬಳ್ಳಾಪುರ);ಕೆ.ಸಿ. ನಾರಾಯಣ ಗೌಡ (ಶಿವಮೊಗ್ಗ); ಬಿ.ಸಿ. ನಾಗೇಶ್(ಕೊಡಗು);ವಿ.ಸುನಿಲ್ ಕುಮಾರ್ (ದಕ್ಷಿಣ ಕನ್ನಡ); ಹಾಲಪ್ಪ ಆಚಾರ್ (ಧಾರವಾಡ); ಶಂಕರ್ ಪಾಟೀಲ ಮುನೇನಕೊಪ್ಪ (ರಾಯಚೂರು ಮತ್ತು ಬೀದರ್); ಮುನಿರತ್ನ (ಕೋಲಾರ). ಬಹಳ ಮುಖ್ಯವಾದ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿಯಾಗಲು ಸ್ಥಳೀಯ ಶಾಸಕ ಸಚಿವರ ದಂಡು ತುದಿಗಾಲಲ್ಲಿ ನಿಂತಿತ್ತು. ಸೋಮಣ್ಣ, ಮುನಿರತ್ನ, ಅಶೋಕ, ಎಸ್.ಟಿ. ಸೋಮಶೇಖರ್, ಗೋಪಾಲಯ್ಯ, ಅಶ್ವತ್ಥನಾರಾಯಣ, ಬೈರತಿ ಬಸವರಾಜ, ಮುನಿರತ್ನ ಸೇರಿದಂತೆ ಹಲವರು ಕಣ್ಣಿಟ್ಟಿದ್ದರು, ಇವರಲ್ಲಿ ಕೆಲವರು ಲಾಬಿಯನ್ನೂ ಮಾಡಿದ್ದರು. ಆದರೆ ಬೊಮ್ಮಾಯಿ ಈ ಎಲ್ಲರ ಬೇಡಿಕೆ ಕೋರಿಕೆಯನ್ನೆಲ್ಲ ತಳ್ಳಿ ಹಾಕಿ ರಾಜಧಾನಿ ನಗರವನ್ನು ತಮ್ಮ ಕೈಯಲ್ಲೆ ಇರಿಸಿಕೊಂಡಿರುವುದನ್ನು ನೋಡಿದರೆ ಅವರು ಯಾರ ಮುಖಮೂತಿಯನ್ನೂ ನೋಡದೆ ತೀರ್ಮಾನಕ್ಕೆ ಬಂದಿದ್ದಾರೆ ಎನಿಸುತ್ತದೆ.


ಆರ್.ಅಶೋಕ್ ಮತ್ತು ಮಾಧುಸ್ವಾಮಿ ಅವರಿಗೆ ಉಸ್ತುವಾರಿ ವಹಿಸಲು ಜಿಲ್ಲೆ ಇರಲಿಲ್ಲ ಎಂದೇನೂ ಅಲ್ಲ. ಬಿ.ಸಿ. ಪಾಟೀಲರಿಗೆ ಚಿತ್ರದುರ್ಗ-ಗದಗ; ಕೆ.ಗೋಪಾಲಯ್ಯನವರಿಗೆ ಹಾಸನ-ಮಂಡ್ಯ; ಶಂಕರಪಾಟೀಲ ಮುನೇನಕೊಪ್ಪ ಅವರಿಗೆ ಬೀದರ್-ರಾಯಚೂರು ಹೀಗೆ ಎರಡೆರಡು ಜಿಲ್ಲೆಗಳನ್ನು ಕೊಟ್ಟಿರುವ ಬೊಮ್ಮಾಯಿ ಕ್ರಮದ ಹಿಂದೆ ಉದ್ದೇಶಪೂರ್ವಕವಾಗಿಯೆ ಅಶೋಕ, ಮಾಧುಸ್ವಾಮಿಯವರನ್ನು ಬರಿಗೈಲಿ ಸುಮ್ಮನೆ ಕೂರಿಸುವ ವಾಂಛೆ ಇರುವುದು ಸ್ಪಷ್ಟ. ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವ ಈ ಉದ್ದೇಶಕ್ಕೆ ಮುಖ್ಯಮಂತ್ರಿಯಲ್ಲಿ ಇರಬಹುದಾದ ಕಾರಣ ಏನೆಂಬುದು ಸ್ಪಷ್ಟವಾಗಿಲ್ಲ. ಉಸ್ತುವಾರಿ ವಂಚಿತ ಅಶೋಕ, ಮಾಧುಸ್ವಾಮಿಯವರಂತೆಯೆ ಸ್ವಂತ ಜಿಲ್ಲೆಯ ಸಾರ್ವಭೌಮತ್ವ ಕಳೆದುಕೊಂಡ ಬಹುತೇಕ ಎಲ್ಲ ಸಚಿವರೂ ಕೋಪ, ಅಸಮಾಧಾನದಲ್ಲಿ ಕೊತಕೊತ ಕುದಿಯಲಾರಂಭಿಸಿರುವುದು ಅನಿರೀಕ್ಷಿತ ಬೆಳವಣಿಗೆಯೇನಲ್ಲ. ಅವರಲ್ಲಿ ಕೆಲವು ಸಚಿವರು ತಮ್ಮತಮ್ಮ ಬೆಂಬಲಿಗರನ್ನು ಛೂ ಬಿಟ್ಟು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಖಾರವನ್ನೆಲ್ಲ ಕಾರಿಕೊಳ್ಳುವಂತೆ ಮಾಡಿದ್ದಾರೆ. ಆದರೆ ಇನ್ನೊಂದು ಮೂಲದ ಪ್ರಕಾರ, ಬೆಂಗಳೂರು ನಗರ ಉಸ್ತುವಾರಿ ಕೆಲಸದಲ್ಲಿ ಅಶೋಕರ ನೆರವು ಸಹಕಾರವನ್ನು ಸಿಎಂ ಪಡೆಯಲಿದ್ದಾರೆ!


ಜಿಲ್ಲಾ ಉಸ್ತುವಾರಿ ಸಚಿವರಾಗುವವರು ಉದ್ದೇಶ ಮರೆತು ವರ್ತಿಸುತ್ತಿದ್ದುದೇ ಈಗ ಬೊಮ್ಮಾಯಿ ತೆಗೆದುಕೊಂಡಿರುವ ನಿಲುವಿಗೆ ಕಾರಣ ಎನ್ನಲಾಗಿದೆ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಪಕ್ಷದ ಕೋರ್ ಕಮಿಟಿ ಜಿಲ್ಲೆಯ ಸಚಿವರಲ್ಲದವರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಬೇಕೆಂಬ ಸಲಹೆಯನ್ನು ಮುಂದಿಟ್ಟಿತ್ತು. ಈಗ ಬೊಮ್ಮಾಯಿ ಆ ಸಲಹೆಯನ್ನು ಅನುಷ್ಟಾನಕ್ಕೆ ತಂದಿದ್ದಾರೆಂಬ ಸಮರ್ಥನೆ ಕೇಳಿಬಂದಿದೆ. ಉಸ್ತುವಾರಿ ಸಚಿವರಾದವರು ಸ್ವಜನ ಪಕ್ಷಪಾತ, ಜಾತಿ ರಾಜಕಾರಣ, ಪಕ್ಷದಲ್ಲಿ ಒಡಕು ಮೂಡಿಸಿ ಗುಂಪುಗಾರಿಕೆಗೆ ಉತ್ತೇಜನ ನೀಡುವುದು, ಸ್ವಕೀಯರಿಗೆ ಗುತ್ತಿಗೆ ಕೊಡಿಸುವುದರಲ್ಲಿ ಆಸಕ್ತಿ, ಜಾತಿ ಅಧಿಕಾರಿಗಳಿಗೆ ಮನ್ನಣೆ ಇತ್ಯಾದಿ ಇತ್ಯಾದಿ ಆರೋಪವನ್ನು ಎದುರಿಸುತ್ತಿರುವ ಸಮಯದಲ್ಲಿ ಈ ತೀರ್ಮಾನ ಬಂದಿದೆ.

 

ಚುನಾವಣೆ ಹತ್ತಿರವಾಗುತ್ತಿರುವಂತೆ ಕೆಲವು ಬಿಜೆಪಿ ಸಚಿವರು ಮತ್ತೆ ಪಕ್ಷಾಂತರವೆಂಬ ಮರಕೋತಿ ಆಟ ಆಡುವ ಸಂಭವವಿದ್ದು ತಮ್ಮ ತಮ್ಮ ಜಿಲ್ಲೆಯಲ್ಲಿ ಅವರು ತಮ್ಮ ಗುಂಪನ್ನು ರಾಜಕೀಯವಾಗಿ ಬೆಳೆಸುವುದಕ್ಕೆ ನಿಯಂತ್ರಣ ಹೇರುವ ಒಂದು ಉಪಾಯವಾಗಿಯೂ ಈ ಕ್ರಮಕ್ಕೆ ಮುಖ್ಯಮಂತ್ರಿ ಬಂದಿದ್ದಾರೆಂಬ ಮತ್ತು ಈ ನಿಟ್ಟಿನಲ್ಲಿ ಪಕ್ಷದ ವರಿಷ್ಟ ಮಂಡಳಿ ನೀಡಿರುವ ಸಲಹೆಯನ್ನು ಅಮಲಿಗೆ ತಂದಿದ್ದಾರೆಂಬ ಮಾತಿದೆ. ಏನೇ ಇರಲಿ, ಇದು ಒಂದು ಒಳ್ಳೆಯ ಪ್ರಯೋಗ.

 

Girl in a jacket
error: Content is protected !!