ವೀಳೆಯದ ಬೇಡಿಕೆ, ವ್ಯಾಪಾರ ಮತ್ತು ವ್ಯಾಪಾರಿ ಸಂಘ

Share

ವೀಳೆಯದ ಬೇಡಿಕೆ, ವ್ಯಾಪಾರ ಮತ್ತು ವ್ಯಾಪಾರಿ ಸಂಘ

ವೀಳೆಯವು ದೇಹ ಮತ್ತು ಮನಸ್ಸಿಗೆ ಆರೋಗ್ಯ ಮತ್ತು ಆಹ್ಲಾದಕರ ಪರಸ್ಪರ ಸ್ನೇಹ, ಪ್ರೀತಿ, ಗೌರವ, ವಿಶ್ವಾಸ, ವಿನಿಮಯ ಮತ್ತು ಒಪ್ಪಂದದ ಸಾಮಗ್ರಿಯೂ, ಬಾಂಧವ್ಯದ ಬೆಸುಗೆಯೂ ಆಗಿದೆ. ವೀಳೆಯದೆಲೆಗೆ ಫಣಿಲಾ, ತಾಂಬೂಲ(ಸಂಸ್ಕೃತ), ಪಾನ್ (ಹಿಂದಿ), ನಾಗವಲ್ಲಿ(ಗುಜರಾತಿ), ವೆಟ್ಟಲೆ(ತಮಿಳು), ತಮಲಾಕು(ತೆಲುಗು), ವೆಟ್ಟಿಲ ಮಲಯಾಳಂ) ಎಂದೂ ಕರೆಯುವರು. ವೀಳೆಯದೆಲೆಯಲ್ಲಿ ಜಗತ್ತಿನಾದ್ಯಂತ 90 ವಿಧದ ತಳಿಗಳಿದ್ದು ಅವುಗಳಲ್ಲಿ 40 ತಳಿಗಳನ್ನು ಭಾರತದಲ್ಲಿ ಬೆಳೆಯಲಾಗುವುದೆಂದು ಅಧ್ಯಯನಗಳಿಂದ ತಿಳಿಯುವುದು, ಅವುಗಳಲ್ಲಿ ಇಂದು ಕಲ್ಕತ್ತಾ ಪಾನ್, ಬನಾರಸ್ ಪಾನ್, ಮಗಾಯಿ ಪಾನ್ ಮೊದಲಾಗಿ ಪ್ರತಿ ಗಲ್ಲಿ, ಹೋಟೆಲ್‌ಗಳ ಬಳಿ ಬೀಡಾ ಅಂಗಡಿಗಳು ದಾಂಗುಡಿಯಿಟ್ಟಿವೆ.

ಆಡಕೆ ಎಲೆಗಳ ಬೆಳೆ ಹೆಚ್ಚಾಗಿ ಭಾರತವಲ್ಲದೆ ಆಗ್ನೇಯ ಏಶ್ಯಾ ದೇಶಗಳಾದ ಮಲೇಶಿಯಾ, ಇಂಡೋನೇಶಿಯಗಳಲ್ಲಿ ಬೆಳೆಯಲಾಗುತ್ತದೆ. ವೀಳೆಯಕ್ಕೆ ನವಶಿಲಾಯುಗದಷ್ಟು ಪ್ರಾಚೀನತೆಯಿದೆ. ಚಾರಿತ್ರಿಕವಾಗಿ ಗುಪ್ತರು, ರಾಷ್ಟ್ರಕೂಟ, ಚಾಲುಕ್ಯ, ವಿಜಯನಗರ, ಮೊಗಲ್, ತಂಜಾವೂರು, ನವಾಬರು ಮತ್ತು ಮೈಸೂರು ಒಡೆಯರ ಕಾಲದಲ್ಲೂ ಇದರ ಬಳಕೆ, ವ್ಯಾಪಾರ ಕುರಿತ ದಾಖಲೆಗಳಿವೆ. ಅಲ್ಲದೆ ಇಂದಿಗೂ ವೀಳೆಯ ಅಥವಾ ತಾಂಬೂಲಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ವೀಳೆಯ ಬೆಳೆಗೆ ಹೆಚ್ಚು ಹೆಚ್ಚು ಪ್ರಾಧಾನ್ಯತೆಯಿತ್ತು, ಈ ತಾಂಬೂಲವು ಎಷ್ಟರಮಟ್ಟಿಗೆ ಪ್ರಸಿದ್ದಿಯೆಂದರೆ ಜನ ಸಮುದಾಯದ ಜೊತೆಯಲ್ಲಿ ಅವಿನಾಭಾವ ಸಂಬಂಧವನ್ನು ಹೊಂದಿದೆ. ಅಬ್ದುಲ್ ರಜಾಕ್, ವಿಜಯನಗರದ ಜನರ ಅಭಿರುಚಿಯನ್ನು ಕಂಡು ಇಲ್ಲಿನ ಜನರಿಗೆ ಗುಲಾಬಿಯೆಂದರೆ ಬಲುಇಷ್ಟ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಎಂಬಂತೆ ಅದನ್ನು ಇಷ್ಟಪಡುತ್ತಿದ್ದರೆಂದು ಹೇಳಿದ್ದಾನೆ. ಇಂದು ಊಟವಿಲ್ಲದಿದ್ದರೂ ಚಿಂತೆಯಿಲ್ಲ ಎಲೆ-ಅಡಕೆ ಅದರಲ್ಲೂ ಪಾನ್ ಅಥವಾ ಗುಟ್ಕಾ ಜನರಿಗೆ ಬೇಕೇ ಬೇಕು ಎಂಬಂತಾಗಿದೆ.

 

ಡೊಮಿಂಗೋ ಪೆಯಾಸನು ಎಲೆಯಡಕೆಯನ್ನು ಅಗಿಯುವ ಜನರನ್ನು ಕಂಡು, ವೀಳೆಯದೆಲೆ, ಮೆಣಸಿನ ಎಲೆಯಂತೆ ಇರುತ್ತದೆ. ಇದನ್ನು ಅಡಕೆಯನ್ನು ಹಾಕಿಕೊಂಡು ಆಗಿಯುತ್ತಾ ದವಡೆಯಲ್ಲಿ ಒತ್ತಲಿಸಿಕೊಂಡಿರುತ್ತಾರೆ. ಇಡೀ ದಿನ ಈ ವೀಳ್ಯದೆಲೆ ಮೆಲ್ಲುವುದನ್ನು ಅವರು ಬಿಡರು” ಎಂದಿದ್ದಾನೆ. ಹಳೆಯ ಜನರು ತಮ್ಮ ಜೊತೆಯಲ್ಲಿ ತಾಂಬೂಲ ಪರಿಕರಗಳ ಚೀಲವನ್ನೇ ತನ್ನೊಂದಿಗೆ ಹೊಂದಿರುತ್ತಿದ್ದರು. ಅದಕ್ಕೆ ಎಲೆ-ಅಡಿಕೆ ಚೀಲ, ಬುಡ್ಡಿಚೀಲ, ಸಂಚಿ ಎಂದೇ ಕರೆಯುತ್ತಿದ್ದರು. ರಾಜ ಮಹಾರಾಜರ ಅವಧಿಯಲ್ಲಿ ಎಲೆ-ಅಡಕೆ-ಸುಣ್ಣ ಮೊದಲಾದ ತಾಂಬೂಲ ಪರಿಕರಗಳನ್ನು ಒಪ್ಪವಾಗಿಟ್ಟು ಜೋಡಿಸಿಕೊಡಲು ರಾಜರ ಆಸ್ಥಾನದಲ್ಲಿ ಪ್ರತ್ಯೇಕ ವರ್ಗವೇ ಇತ್ತು. ಅದನ್ನು ಸಂಚಿಯ ಊಳಿಗದವರು ಎಂದೇ ಕರೆಯಲಾಗುತ್ತಿತ್ತು. ತಾಂಬೂಲದ ಎಲ್ಲ ಪರಿಕರಗಳನ್ನು ಇಡುವ ಪೆಟ್ಟಿಗೆಯೇ ಸಂಚಿ ಪೆಟ್ಟಿಗೆ, ಈ ಬಗೆಯ ಹೆಸರನ್ನು ಹೊಂದಿದ್ದ ಸಂಚಿ ಹೊನ್ನಮ್ಮ ಮೈಸೂರು ಒಡೆಯರ ಕಾಲದಲ್ಲಿದ್ದುದು ಗಮನಾರ್ಹ. ವೀಳೆಯವನ್ನು ನೀಡುವವಳನ್ನು ವೀಳೆಯದ ಲತಾಂಗಿಯೆಂದೂ, ಸಂಚಿಯವಳೆಂದೂ ಕರೆಯಲಾಗಿದೆ. ‘ತಂಬುಲದಲೆಯಂತೆಗೆದಡದಂಗೈಯೊಳಗಿರಿಸುವ ವೀಳೆಯದ ಲತಾಂಗಿಯ ದಕ್ಷಿಣಹಸ್ತಂ ಧರಿಸಿತು ಪಿರಿದುಂ ಚೆಲ್ವಿಕೆಯಾ” ಎಂದು ಸಾಹಿತ್ಯದಲ್ಲಿ ಉಲ್ಲೇಖಗಳಿವೆ.

 

ವೀಳೆಯಕ್ಕೆ ಹೇಗೆ ಬೇಡಿಕೆಯಿತ್ತೋ ಹಾಗೆಯೇ ಪ್ರಾಚೀನ ಕಾಲದಿಂದಲೂ ಅದರ ವ್ಯಾಪಾರವೂ ವಿಶೇಷವೇ ಆಗಿತ್ತು. ಇದಕ್ಕೆಂದೇ ವ್ಯಾಪಾರಿ ಸಮುದಾಯಗಳು ಬೆಳಕು ಕಂಡಿದ್ದುದು ಗಮನಾರ್ಹ. ಪ್ರಾಚೀನ ಕಾಲದಿಂದಲೂ ಎಲೆ ವ್ಯಾಪಾರವನ್ನೇ ವೃತ್ತಿಯಾಗಿಸಿಕೊಂಡವರು ಎಲೆಗಾರರು, ಇಂದಿಗೂ ಉತ್ತರ ಕರ್ನಾಟಕದಲ್ಲಿ ಎಲೆಗಾರರ ಕುಟುಂಬಗಳೇ ಇವೆ. ವಿಜಯನಗರ ಕಾಲದಲ್ಲಿ ದೇವದಾಸಿಯರು ರಾಜಪರಿವಾರದ ಜೊತೆಯಲ್ಲಿ ಕೂತು ಎಲೆ-ಅಡಕೆ ಮೆಲ್ಲುವಷ್ಟು ಗೌರವ ಪಡೆದಿದ್ದರು, ಡೊಮಿಂಗೋ ಪೆಯಾಸ್ ದೇವದಾಸಿಯರ ಬಗ್ಗೆ ಹೇಳುತ್ತಾ, ಈ ಮಹಿಳೆಯರಿಗೆ ರಾಜನ ಪತ್ನಿಯರ ಸಮಕ್ಷಮಕ್ಕೂ ಪ್ರವೇಶಿಸಲು ಅನುಮತಿಯಿರುತ್ತದೆ. ಅವರು ಇವರೊಂದಿಗೆ ಇರಬಹುದು ಮತ್ತು ವೀಳ್ಯದೆಲೆ ಸೇವಿಸಬಹುದು.

ಹೀಗೆ ಮಾಡಲು ಎಂಥ ಉನ್ನತ ದರ್ಜೆಯ ವ್ಯಕ್ತಿಗೂ ಸಾಧ್ಯವಿಲ್ಲ. ಎಂದಿದ್ದಾನೆ. ವಿಜಯನಗರಕ್ಕೆ ಭೇಟಿ ನೀಡಿದ್ದ ಪರ್ಶಿಯಾ ರಾಯಭಾರಿ ಅಬ್ದುಲ್ ರಜಾಕ್, ಸಿಪಾರಿ ಎಂದು ಕರೆಯುವ ಅಡಕೆಯನ್ನು ಸ್ವಲ್ಪ ಜಜ್ಜಿ ಬಾಯೊಳಕ್ಕೆ ಹಾಕಿಕೊಳ್ಳುತ್ತಾರೆ. ವೀಳೆಯದೆಲೆಗೆ ಸುಣ್ಣವನ್ನು ಹಚ್ಚಿ ಸುರುಳಿ ಮಾಡಿ ಬಾಯಲ್ಲಿಟ್ಟು ಅಗಿಯುತ್ತಾರೆ ಎಂದಿದ್ದಾನೆ. ಬಾರ್ಬೋಸಾ ‘ಈ ಎಲೆ ಇಂಡಿಯಾದಲ್ಲೆಲ್ಲಾ ಬಹಳ ಬೇಕಾದದ್ದು, ಎಂದಿದ್ದಾನೆ. ಹಿಂದೆ ಹಿರಿಯರಿಗೆ ಅನಿವಾರ್ಯವಾಗಿದ್ದ ಎಲೆ-ಅಡಕೆ ಇಂದು ರೂಪಾಂತರ ಹೊಂದಿ ಗುಟ್ಕಾ ಆಗಿ ಯುವಸಮೂಹದಲ್ಲಿ ಅನಾರೋಗ್ಯಕರ ವಾತಾವರಣ ನಿರ್ಮಿಸುತ್ತಿರುವುದು ವಿಷಾದನೀಯ, ಅಲ್ಲದೆ ಆದಾಯದ ಪ್ರಮುಖ ಭಾಗವಾಗಿ ಜಗಜ್ಜಾಹೀರಾಗಿದೆ. ಪ್ರಾಚೀನ ಕಾಲದಿಂದಲೂ ವೀಳೆಯ ಮತ್ತು ಅದರ ವ್ಯಾಪಾರ ವಿಶಿಷ್ಟವಾಗಿದ್ದುದನ್ನು ಶಾಸನಗಳು ಮನದಣಿಯ ವರ್ಣಿಸಿವೆ. ಅಲ್ಲದೆ ಇದರ ವ್ಯಾಪಾರಕ್ಕಾಗಿಯೇ ಪ್ರತ್ಯೇಕ ವರ್ಗಗಳಿದ್ದವು. ಅವೆಂದರೆ ಗವರೆ, ಗಾತ್ರಿಗ, ತಂಬುಲಿಗ, ಉಗುರು ಎಂಬವು ವಿಶೇಷವಾಗಿ ಬಳಕೆಯಾಗಿವೆ. ಎಲೆಬಳ್ಳಿ ಬೆಳೆಗೆ ಭಾರತ ಮತ್ತು ಕರ್ನಾಟಕ ಹಿಂದಿನಿಂದಲೂ ಪ್ರಸಿದ್ಧಿ. ಇದರ ವ್ಯಾಪಾರ ಮತ್ತು ವ್ಯವಹಾರ ಗಮನಾರ್ಹವೇ ಆಗಿದ್ದಿತು. ಉಗುರು ಎಲೆಗಳನ್ನು ಬಳ್ಳಿಯಿಂದ ಕತ್ತರಿಸಲು ಹೆಬ್ಬೆರಳಿಗೆ ಹಾಕಿರುವ ಚಿಕ್ಕ ಉಳಿಯಂತಹ ಸಾಧನ. ಇದನ್ನು ಕೊಯ್ಯುವವರು ಕೊಯ್ಲಾಳಿಗಳು, ಎಲೆ ಭೋಜಂಗರು ಮತ್ತು ಎಲೆದೋಟದ ಒಡೆಯರು ವೀಳೆಯವನ್ನು ಬೆಳೆಯುವವರು. ಇದನ್ನು ಮಾರುವವರಲ್ಲಿ ತಲೆ ಮೇಲೆ ಹೊತ್ತು ಅಥವಾ ಪ್ರಾಣಿಗಳ ಮೇಲೆ ಹೇರಿಕೊಂಡು ಮಾರಾಟ ಮಾಡುವವ ಗವರೆ ಮತ್ತು ಗಾತ್ರಿಗರು. ಇವರನ್ನು ಗವರೆಶೆಟ್ಟಿ, ಗವರೆಗಂಡ, ಹೆಗಲಗವರೆ, ತಂಬುಲಿಗಶೆಟ್ಟಿ, ಗಾತ್ರಿಗಟ್ಟಿ ಎಂದೂ ಕರೆಯಲಾಗಿದೆ. ಗಾತ್ರಿಗ ಎಂಬುದು ಒಂದು ನಿರ್ದಿಷ್ಟ ಇಲ್ಲವೆ ಸಾವಿರ ವೀಳ್ಯದೆಲೆಗಳ ಕಟ್ಟು ಗಾತ್ರ. ಇಂತಹ ಕಟ್ಟುಗಳನ್ನು ಮಾರಾಟ ಮಾಡುವ ವ್ಯಾಪಾರಿ ಗಾತ್ರಿಗ. ಅವರು ಹೇರೆತ್ತಿನ ಗಾಡಿ, ಎತ್ತು, ಕತ್ತೆಗಳ ಮೂಲಕ ವಿವಿಧೆಡೆ ಹೋಗಿ ವ್ಯಾಪಾರ ಮಾಡುತ್ತಿದ್ದರು. ಈ ವ್ಯಾಪಾರಿಗಳು ತಮ್ಮ ತಮ್ಮದೇ ಆದ ಸಂಘ ಮತ್ತು ಗುಂಪುಗಳನ್ನು ಸ್ಥಾಪಿಸಿಕೊಂಡಿದ್ದರು. ಇವರು ತಂಬುಲಿಗ ಸಾಸೀರ್ವರು, ಗವವರೆಗಳಯ್ನೂರ್ವರು, ಉಗುರಮುನ್ನೂರ್ವರು, ಉಳಿಯ ಮುನೂರ್ವರು ಎಂದೇ ಗುರುತಿಸಿಕೊಂಡಿದ್ದರು.

ಇವರೇ ವೀಳೆಯದ ವ್ಯಾಪಾರ-ವ್ಯವಹಾರವನ್ನು ಪ್ರಾಚೀನ ಕಾಲದಿಂದಲೂ ಪ್ರಸಿದ್ಧಿಗೊಳಿಸಿದವರು. ಇದರ ವ್ಯಾಪಾರ ಎಷ್ಟಿತ್ತೆಂಬುದಕ್ಕೆ ಅದರ ಮೇಲೆ ಹಾಕಲಾಗುತ್ತಿದ್ದ ತೆರಿಗೆಯು ಮುಖ್ಯವಾಗಿತ್ತು. ಅದನ್ನು ವೀಳೆಯದೆರೆ, ಅಡಕೆಯ ತೆರಿಗೆಗಳಿದ್ದವು. ಕಲ್ಯಾಣ ಚಾಲುಕ್ಯ ಅರಸ ಆಹವಮಲ್ಲ ಅದುವರೆಗೆ ಎಲೆಯ ಹೇರಿಗೆ ಇದ್ದ ಸುಂಕವನ್ನು ಹೆಚ್ಚಿಸಿದಾಗ ಅದನ್ನು ಸಂಘಗಳು ಪ್ರಶ್ನಿಸಿ ಮೊದಲಿದ್ದ ತೆರಿಗೆಯನ್ನೇ ಉಳಿಸಿಕೊಂಡದ್ದು ಗಮನಾರ್ಹ.ಹೀಗೆ ಎಲೆ, ಅಡಕೆಗಳ ವ್ಯಾಪಾರ, ವ್ಯವಹಾರಗಳು ರಾಜ್ಯ-ಸಾಮಾಜ್ಯಗಳ ಆದಾಯ ಮೂಲಗಳಲ್ಲಿ ಒಂದಾಗಿದ್ದುದು ನೈಜನೀಯ.

Girl in a jacket
error: Content is protected !!