ವೀಳೆಯ ಮತ್ತು ರಣವೀಳ್ಯವೂ ..
ವೀಳೆಯವು ಪರಂಪರಾಗತ ರೂಢಿ, ಸಂಪ್ರದಾಯಗಳ ಭಾಗವೇ ಆಗಿ ಬೆಳೆದುಬಂದಿರುವುದು ತಿಳಿದ ಸಂಗತಿ. ದೇವರ ನೈವೇದ್ಯವಾಗಿ, ಅಲಂಕಾರಿಕ ಸಾಮಗ್ರಿಯಾಗಿ ಎಲೆಪೂಜೆಯೆಂದೂ, ಮದುವೆಯ ಒಪ್ಪಂದಕ್ಕೆ ಮಹತ್ವದ ಪರಿಕರವಾಗಿಯೂ ಹಾಸುಹೊಕ್ಕಿದೆ. ವಿವಾಹ ಕಾರ್ಯಚಟುವಟಿಕೆಗಳಲ್ಲಿ ವೀಳೆಯಶಾಸ್ತ್ರ, ಈಳೆಶಾಸ್ತ್ರವೆಂದೇ ಜನಜನಿತವಾಗಿದೆ. ಈ ಶಾಸ್ತ್ರವೇ ಗಂಡುಹೆಣ್ಣಿನ ಮಾತುಕತೆಯ ಅಂತಿಮ ರೂಪ, ವೀಳೆಯ ಎಂಬುದು ಎಲೆ-ಅಡಕೆಗಳ ಸಂಯುಕ್ತ ರೂಪ. ಇದನ್ನು ತಾಂಬೂಲವೆಂದೇ ಕರೆಯುತ್ತೇವೆ. ಇದು ದೇಹದ ಆರೋಗ್ಯಕ್ಕೆ ಮದ್ದು ವೀಳೆಯ ದೇಹ ಮತ್ತು ಮನಸ್ಸಿಗೆ ಮುದ ನೀಡುವ ಪ್ರಮುಖ ಸಾಧನ. ತಾಂಬೂಲವು ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಮಹತ್ವವನ್ನು ಹೊಂದಿ, ಗೌರವದ ಸಂಕೇತವಾಗಿಯೂ ಬಳಕೆಗೊಂಡಿದೆ.
ಇದು ಅನಾದಿ ಕಾಲದಿಂದಲೂ ಬದುಕಿನ ಭಾಗವಾಗಿ ನಮ್ಮೊಂದಿಗೆ ಬೆಸೆದುಕೊಂಡಿದೆಯೆಂದರೆ ತಪ್ಪಾಗಲಾರದು. ಊಟದ ಬಳಿಕ, ಊಟಕ್ಕೆ ಪೂರ್ಣತ್ವ ನೀಡುವ ಅಥವಾ ಅಂತಿಮ ಸೇವನೆಯ ಭಾಗ ವೀಳೆಯವು ಬಾಯಿಯಲ್ಲಿ ಮೆಲ್ಲುವ ಎಲೆ, ಅಡಕೆ, ಸುಣ್ಣಗಳ ಮಿಶ್ರಣ. ಆದರೆ ಇದು ಕೇವಲ ಬಾಯಿಯಲ್ಲಿ ಮೆಲ್ಲುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಬಾಯಿಯಿಂದ ಹೊರಹೊಮ್ಮುವ ಮಾತಿಗೂ ವಿಶೇಷವಾದ ನಂಟನ್ನು ಹೊಂದಿದೆ.
ಆಡುವ ಅಥವಾ ಕೊಟ್ಟ ಮಾತಿಗೆ ತಕ್ಕಂತೆ ನಡೆಸುವ ಕೃತಿಯೂ ಈ ತಾಂಬೂಲವೇ. ಅಂದರೆ ಜನರಲ್ಲಿ ಒಪ್ಪಂದದ ಸಂಕೇತವಾಗಿ, ಜವಾಬ್ದಾರಿ ಹೊರಿಸುವ ಪರಂಪರಾಗತ ಕುರುಹಾಗಿಯೂ ಬೇರೂರಿದೆ, ಎಲೆ ಅಡಕೆ ಎಂಬುದು ಪರಸ್ಪರ ಸ್ನೇಹ, ಪ್ರೀತಿ ಮತ್ತು ಬಾಂಧವ್ಯದ ಬೆಸುಗೆಯೂ ಆಗಿದೆ. ದೇವಾಲಯಗಳಲ್ಲಿ ಪೂಜೆ-ಪುರಸ್ಕಾರದ ಭಾಗವೂ ಹೌದು, ಹಾಗೆಯೇ ಮಧುಮಕ್ಕಳನ್ನು ಜೊತೆಗೂಡಿಸುವ ಒಪ್ಪಂದದ ಅಂತಿಮ ರೂಪವೇ ತಾಂಬೂಲ, ಇದು ಯಾವುದೇ ಶುಭಕಾರ್ಯದ ಫಲಶೃತಿಯೂ, ಮುಕ್ತಾಯದ ಪರಿಕರವೂ ಆಗಿದೆ. ಇದು ಪರಸ್ಪರ ಗೌರವ, ಪ್ರೀತಿ, ವಿಶ್ವಾಸ, ವಿನಿಮಯ ಮತ್ತು ಒಪ್ಪಂದದ ಸಾಮಗ್ರಿಯೂ ಅಹುದು. ಅಲ್ಲದೆ ಯಾವುದೇ ಶುಭಕಾರ್ಯದ ಅಂತಿಮ ರೂಪ ವೀಳೆಯವೇ ಆಗಿದೆ.
ಅಂತೆಯೇ ರಾಜಕಾರ್ಯದಲ್ಲೂ ವೀಳೆಯಕ್ಕೆ ವಿಶೇಷ ಮನ್ನಣೆ ಲಭಿಸಿದೆ. ಸೈನ್ಯ ಮತ್ತು ಯುದ್ಧವ್ಯವಸ್ಥೆಯಲ್ಲಿ ರಾಜಮರ್ಯಾದೆ, ರಾಜಮನ್ನಣೆ ಮತ್ತು ಗೌರವದ ಸಂಕೇತವಾಗಿ ಆರ್ಪಿಸುವ ಪರಿಕರ ಕೂಡ ವೀಳೆಯವೇ, ವೀಳೆಯ ನೀಡುವ ಪದ್ಧತಿ ಹಿಂದಿನಿಂದಲೂ ಬಂದಿದ್ದು, ರಾಜ್ಯ, ರಾಜ್ಯ, ಸಾಮ್ರಾಜ್ಯ, ಸಂಸ್ಥಾನಗಳಲ್ಲಿ, ಅದರಲ್ಲೂ ವಿಶೇಷವಾಗಿ ಸಾಮ್ರಾಜ್ಯ, ಪ್ರಭುತ್ವಗಳ ನಡುವಿನ ಹೋರಾಟದ ಒಪ್ಪಂದಗಳಲ್ಲಿ ರಾಜರಾಜರಲ್ಲಿ, ಸೇನಾಧಿಕಾರಿ ಮತ್ತು ಸೈನ್ಯಕ್ಕೆ ಜವಾಬ್ದಾರಿಯನ್ನು ನೀಡಿ ಅದನ್ನು ಉತ್ತೇಜಿಸಿ, ಪ್ರೇರೇಪಿಸುವ ಸ್ಫೂರ್ತಿಯ ಸೆಲೆಯ ತಾಂಬೂಲವೇ ಆಗಿದೆ. ಉಡುಗೊರೆ, ಬಹುಮಾನಗಳನ್ನೂ ನೀಡುವ ಮೂಲಕ ಯುದ್ಧಕ್ಕೆ ಆಣಿಗೊಳಿಸುವ ಪ್ರೇರಕ ಶಕ್ತಿಯಾಗಿ ವೀಳೆಯ ಬಳಕೆಗೊಂಡಿತ್ತು. ಗೆದ್ದರೆ ರಾಜ್ಯಲಕ್ಷ್ಮಿ, ಸತ್ತರೆ ಸ್ವರ್ಗ ಮತ್ತು ಸುರಲೋಕದ ಕನ್ನೆಯರು ಎನ್ನುವ ಮಟ್ಟಿಗೆ ಸೇನೆಗೆ ಆಸೆಆಮಿಶಗಳನ್ನೂ ತೋರುವ ರಾಜಕೀಯ ಚದುರಂಗದಾಟವೂ ಆಗಿತ್ತು. ಈ ಕುರಿತಂತೆ ಚರಿತ್ರೆಯುದ್ದಕ್ಕೂ ಸೈನ್ಯ ಮತ್ತು ಯುದ್ಧವ್ಯವಸ್ಥೆಯಲ್ಲಿ ವೀಳೆಯದ ಪಾತ್ರವನ್ನು ಕಾಣುತ್ತೇವೆ. ಸೈನ್ಯ ಮತ್ತು ಯುದ್ಧದಲ್ಲಿ ವೀಳೆಯದ ಪಾತ್ರ ಅತಿ ಮುಖ್ಯವಾಗಿದ್ದಿತು. ಇದು ಯುದ್ಧ ಮತ್ತು ಹೋರಾಟದ ಜವಾಬ್ದಾರಿಯನ್ನು ಹೊರಿಸುವಲ್ಲಿ ಬಳಕೆಯಾದ್ದರಿಂದ ಇದನ್ನು ರಣವೀಳೆಯ, ರಣವೀಳ್ಯವೆಂದೂ ಕರೆಯುತ್ತಿದ್ದರು.
ಶಾಸನ ಸಾಹಿತ್ಯದಲ್ಲಿ ಇದರ ಉಲ್ಲೇಖ ವೈವಿಧ್ಯಮಯವಾಗಿದೆ. ಕ್ರಿ.ಶ. 1292ರ ವೀರಗಲ್ಲು ಶಾಸನವೊಂದರಲ್ಲಿ ವೀರನೋರ್ವನನ್ನು ”ಕರೆದು ವೀಳೆಯವಂ ಕೊಟ್ಟು ಕಾಳಗಕ್ಕೆ ನಡೆ” ಎಂಬುದರಲ್ಲಿ ಅವನಿಗೆ ಸಮರದ ದೊಡ್ಡ ಜವಾಬ್ದಾರಿಯನ್ನು ಹೊರಿಸುವ ನಡೆಯಿದೆ. ರಾಮನಾಥ ಚರಿತದಲ್ಲಿ ಕುಮಾರರಾಮನ ಶೌರ್ಯದಿಂದ ಸುಲ್ತಾನನ ಸೇನೆ ಕಂಗೆಟ್ಟಾಗ ಮಾತಂಗಿಯು “ಹಿಡಿದು ತಂದೊಪ್ಪಿಸುವನು ರಾಮನಾಥನ ಕೊಡು ವೀಳೆಯವ ನೀನು” ಎಂದು ಕೇಳುವ ಮೂಲಕ ಶೌರ್ಯ, ಸಾಮರ್ಥ್ಯಗಳ ಪ್ರತೀಕವೇ ಆಗಿರುವುದು ಗಮನಾರ್ಹ.
ವಿಜಯನಗರ ಕಾಲದಲ್ಲಿ ಅಡಕೆ-ಎಲೆಗಳಿಗೆ ಎಷ್ಟು ಪ್ರಾಮುಖ್ಯತೆ ಇತ್ತೆಂದರೆ ಅವುಗಳ ಮಾರಾಟಕ್ಕಾಗಿ ಪ್ರತ್ಯೇಕ ಮಾರುಕಟ್ಟೆಯೇ ಇತ್ತು. ಅದನ್ನು ಅಂದು ಕ್ರಮುಖಪರ್ಣಾಪಣ ಅಂಗಡಿಬೀದಿ ಎಂದು ಕರೆದಿದ್ದರೆ, ಇಂದು ಅದನ್ನು ಪಾನ್ಸುಪಾರಿ ಬಜಾರ್ ಎಂದೇ ಕರೆಯಲಾಗುತ್ತದೆ. ಇದು ಅಂದಿನ ವೀಳೆಯದ ಅಗತ್ಯ ಮತ್ತು ಅನಿವಾರ್ಯತೆಯನ್ನು ಸ್ಪಷ್ಟಪಡಿಸುವುದು, ಕನಕದಾಸರ ದ್ವಾರಕಾಪುರ ವರ್ಣನೆಯಲ್ಲಿ “ಲಲಿತ ಬೆಳ್ಳೆಲೆಗಳಂಗಡಿಗಳೊಪ್ಪಿದವು” ಎಂದಿರುವುದು ವೀಳೆಯದ ಮಾರಾಟವೇ ಆಗಿದೆ. ಹಂಪೆಯ ಪಟ್ಟಣದ ಯಲ್ಲಮ್ಮ ಯುದ್ಧದೇವತೆಯೇ ಆಗಿದ್ದಳು.
ಶ್ರೀಕೃಷ್ಣದೇವರಾಯನ ದಿನಚರಿಯಲ್ಲಿ ರಾಮಲಿಂಗನಾಯಕ ಎಂಬುವವನು ತನ್ನ ಬಳಿಗೆ ತಮ್ಮ ದೊರೆತನದವರೆಲ್ಲರನ್ನು ಕರೆಸಿಕೊಂಡು ಇಷ್ಟು ದಿವಸ ರಾಯ ಉಂಬಳಿಯ ಊಟ ಮಾಡಿ ಬರುತ್ತಿದ್ದವು, ಈಗ ಆಳೆದವರಿಗೆ ಕಾರ್ಯ ಉಂಟಾಗಿ ಎದುರಾದವರ ಮೇಲೆ ನಡೆಯೆಂದು ಬಹುಮಾನವಾಗಿ ವೀಳ್ಯವ ಕೊಟ್ಟು ಕಳುಹಿಸಲಾಗಿ ಬಂದೆನು” ಎಂದಿದ್ದಾನೆ. ಇದು ಉಪ್ಪುಂಡ ಮನೆ, ಜೋಳವಾಳಿ ಎಂಬುದೂ ಆಗಿದೆ. ಕೆಳದಿ ನೃಪವಿಜಯದಲ್ಲೂ ಕೃಷ್ಣದೇವರಾಯ ಚೌಡಪ್ಪ, ಭದ್ರಪ್ಪನಾಯಕರಿಗೆ ನೀಡಿದ ವಿವರ ಹೀಗಿದೆ: ”ರಾಜ್ಯಮಂ ಬಾಡಿಸುತ್ತುಮಿರಲೀ ವೃತ್ತಾಂತಮಂ ಕೃಷ್ಣರಾಯಂ ಕೇಳು ಚೌಡಪಭದ್ರಪರೊಡನೆ ಸೈನ್ಯಮಂ ಕೂಡಿಸಿಕೊಟ್ಟವಗಳಂ ನಿಗ್ರಹಿಸಿರ್ಪುದೆಂದು ನಿಯಾಮಿಸಿ ತಾಂಬೂಲವಿತ್ತು ತೆರಳಲ್ಲಿದಿದುಭಯ ಸೈನ್ಯಕ್ಕೆ” ಎಂಬುದರಲ್ಲಿ ಸೈನ್ಯದ ಸಂಘಟನೆಯನ್ನೂ ಕಾಣುತ್ತೇವೆ. 1565ರ ರಕ್ಕಸ ತಂಗಡಗಿ ಯುದ್ಧಕ್ಕೆ ಹೊರಡುವ ಮುನ್ನ ಎಲ್ಲ ಸೈನಿಕ ಮುಖಂಡರನ್ನು ಕರೆಸಿ ಅವರಿಗೆ ವೀಳೆಯ, ಬಹುಮಾನಗಳನ್ನು ನೀಡಿದ ವಿವರವನ್ನು ರಾಮರಾಜನ ಬಖೈರು ತಿಳಿಸುತ್ತದೆ. ರಾಮರಾಯನು ಸೇನಾ ನಾಯಕರಿಗೆ ನೀಡಿದ ಬಹುಮಾನಗಳೆಂದರೆ ರತ್ನಖಚಿತವಾದ ಕಡಗ, ಕಂಠಮಾಲೆ, ಕುಂಡಲ, ಕಿರೀಟ, ಕೌಸ್ತುಭ, ಹಾರ, ಕಲ್ಕಿ, ತುರಾಯಿ, ಅಂಗಲ್ಯಾದಿ ಆಭರಣಗಳನ್ನು ದತ್ತು ಮಾಡಿದನೆಂದು ಬಖೈರು ಹೇಳಿದೆ. ಅರಸರು ಯುದ್ಧ ಸಂದರ್ಭಗಳಲ್ಲಿ ದಂಡನಾಯಕರು, ಸೈನಿಕರನ್ನು ಹುರಿದುಂಬಿಸಿ, ಸೈನ್ಯ ಮತ್ತು ಸೇನಾನಾಯಕರಿಗೆ ಚೈತನ್ಯ ನೀಡುವ ಮೂಲಕ ತಾವು ಸಾಫಲ್ಯತೆಗಳನ್ನು ಅನುಭವಿಸುವ ಸಲುವಾಗಿ ಬಳಸಿದ ರಣ ತಂತ್ರಗಾರಿಕೆಯೇ ಈ ರಣವೀಳ್ಯ ಅಥವಾ ವೀಳೆಯ ಪದ್ಧತಿ,
ಒಟ್ಟಿನಲ್ಲಿ ಯಾವುದೇ ಶುಭಕಾರ್ಯ ಚಟುವಟಿಕೆಯ ಒಪ್ಪಂದದ ಸಂಕೇತದಲ್ಲಿ ವೀಳೆಯವಾಗಿ ಮತ್ತು ಸಾಮ್ರಾಜ್ಯಶಾಹಿ ಪ್ರಭುತ್ವದಲ್ಲಿ ಯುದ್ಧ, ಕಾಳಗ, ಅಥವಾ ಹೋರಾಟಗಳ ಜವಾಬ್ದಾರಿಯನ್ನು ಹೊರಿಸಿ ಒಪ್ಪಿಸುವ ರಣವೀಳ್ಯವಾಗಿ ಮುಂದುವರಿದು, ನಂಬಿಕೆ, ವಿಶ್ವಾಸ ಮತ್ತು ಬಾಂಧವ್ಯದ ಭಾಗವಾಗಿ, ರೂಢಿ-ಸಂಪ್ರದಾಯವಾಗಿ ಇಂದಿಗೂ ಜನಮಾನಸದಲ್ಲಿ ಬೇರೂರಿರುವುದು ಗಮನಾರ್ಹ.