ವೀರಭದ್ರಪ್ಪ ವೃತ್ತಿ , ವೈಯಕ್ತಿಕ ಬದುಕಿನಲ್ಲಿ ಘಟಿಸಿದ ಘಟನೆಗಳು ಕಾಕತಾಳೀಯ

Share

ವೀರಭದ್ರಪ್ಪ ವೃತ್ತಿ , ವೈಯಕ್ತಿಕ ಬದುಕಿನಲ್ಲಿ ಘಟಿಸಿದ ಘಟನೆಗಳು ಕಾಕತಾಳೀಯ

“ಗುರುಮಲ್ಲಪ್ಪ ಸರ್, ನಮ್ಮನೆಗೆ ಡಾಕ್ಟರ್ ಬಂದಿದ್ದಾರೆ, ನಮ್ಮಣ್ಣ ಪ್ರಕಾಶನನ್ನು ಜಲ್ದಿ ಕಳಿಸಬೇಕಂತೆ” ಎಂದು ನನ್ನ ಏಳನೇ ಇಯತ್ತೆಯ, ನಾಯಕರ ಓಣಿಯಲ್ಲಿದ್ದ ಸಣ್ಣಸಿದ್ದಪ್ಪನವರ ಮಹಾಂತಪ್ಪ ಮೇಷ್ಟ್ರ ಮನೆಯಲ್ಲಿ ಜರುಗುತ್ತಿದ್ದ,
ಪಾಠದಮನೆಯ ಮುಂಬಾಗಿಲಿನ ಬಲತೋಳಿಗೆ ಒರಗಿ ನಿಂತು, ಮೇಷ್ಟ್ರು ಪಾಠಮಾಡುತ್ತಿದ್ದ ಎಡಭಾಗದ ಕಟ್ಟೆಯ ಕಡೆ, ತನ್ನ ಗೋಣನ್ನು ಸ್ವಲ್ಪವೇ ಮುಂದೆ ಚಾಚಿ, ಇಣಕಿ ನೋಡುತ್ತಾ ನನ್ನ ತಮ್ಮ ಭೋಗೇಶ ಕೂಗಲು, ಗೋಡೆಗೆ ನೇತು ಹಾಕಿದ್ದ ಕಪ್ಪುಹಲಗೆಯ ಪಕ್ಕದಲ್ಲಿ ನಿಂತು ಹಲಗೆಯ ಮೇಲೆ ಬಿಡಿಸಿದ್ದ ವೃತ್ತದ ಕ್ಷೇತ್ರಫಲಕ್ಕೆ ಸಂಬಂಧಿಸಿದ ಕ್ಲಿಷ್ಟ ಲೆಕ್ಕವೊಂದನ್ನು ಮಕ್ಕಳಿಗೆ ವಿವರಿಸುತ್ತಿದ್ದ ಗುರುಮಲ್ಲಪ್ಪ ಮೇಷ್ಟ್ರಿಗೆ ತಮ್ಮ ವಿವರಣೆಯ ಓಘದ ಮಧ್ಯೆ ಭೋಗೇಶನ ಕೂಗು ತಂದ ಅಡಚಣೆಯಿಂದ ತುಸು ಅಸಮಧಾನವಾದಂತೆ ತೋರಿಬಂದಿತು. ಆದರೂ ಅದನ್ನು ಹೊರಹಾಕದೆ ತಮ್ಮ ಎಂದಿನ ಶಾಂತಸ್ವರದಲ್ಲಿ ತರಗತಿಯ ಮೊದಲನೇ ಸಾಲಿನಲ್ಲಿ ಕುಳಿತು ಮೇಷ್ಟ್ರ ವಿವರಣೆಯನ್ನು ತದೇಕಚಿತ್ತನಾಗಿ ಆಲಿಸುತ್ತಿದ್ದ ನನ್ನೆಡೆ ತಿರುಗಿ “ಪ್ರಕಾಶ, ನಿನ್ನ ತಮ್ಮ ಕರೆಯುತ್ತಿದ್ದಾನೆ, ಮನೆಗೆ ಹೋಗಿ ಬಾ” ಎನ್ನುವ ಅನುಮತಿಯನ್ನು ನೀಡಿದರು.

ಸಮಯ ಅದಾಗಲೇ ಸಂಜೆ ಏಳನ್ನು ದಾಟಿತ್ತು. ತೊಡೆ, ಸೊಂಟಗಳ ಮೇಲೆ ಆದಂತಹ ಕುರದಂತಹ ದೊಡ್ಡ ದೊಡ್ಡ ಆಕಾರದ ನಾಲ್ಕಾರು ಗಾಯಗಳಿಗೆ ಕಳೆದ ಮೂರು ದಿನಗಳಿಂದ ದಿನಕ್ಕೊಂದರಂತೆ ಪೆನ್ಸಿಲಿನ್ ಇಂಜೆಕ್ಷನ್ ಗಳನ್ನ ತೆಗೆದುಕೊಂಡು ಹೈರಾಣಾಗಿದ್ದ ನಾನು ಮನಸ್ಸಿಲ್ಲದ ಮನಸ್ಸಿನಿಂದ ಏಳಲೋ, ಬೇಡವೋ ಎನ್ನುವಂತೆ ಆಮೆಯ ವೇಗದಿಂದ ನನ್ನ ಸ್ಥಾನದಿಂದ ಎದ್ದು, ಕಟ್ಟೆಯ ಮೆಟ್ಟಿಲುಗಳನ್ನು ಸ್ವಲ್ಪ ಕುಂಟುತ್ತಲೇ ಸಾವಕಾಶವಾಗಿ ಇಳಿಯುತ್ತಾ ಹೊರಬಾಗಿಲಿನತ್ತ ನಡೆದೆ. ನನ್ನ ಬರುವನ್ನೇ ನಿರೀಕ್ಷಿಸುತ್ತಾ, ಇನ್ನೂ ಬಾಗಿಲಲ್ಲಿ ನಿಂತೇ ಇದ್ದ ತಮ್ಮನ ತೋಳುಗಳ ಮೇಲೆ ಭಾರಹಾಕಿ ಎತ್ತರದ ಮುಂಭಾಗದ ಹೊಸ್ತಿಲನ್ನು ದಾಟಿದವನು ಕುಂಟುತ್ತಲೇ ಭೋಗೇಶನ ಹೆಗಲ ಮೇಲೆ ಕೈಹಾಕಿ, ನನ್ನ ಕುಂಟುವಿಕೆ ವಿಚಿತ್ರವಾಗಿ ಕಂಡುಬಂದಂತಾದ ಕಾರಣ ಬೊಗಳುವುದಕ್ಕೆ ಮೊದಲಿಟ್ಟ ಓಣಿಯ ಕೊನೆಮನೆ ಬೋರಕ್ಕನ ಮಗಳು ನಾಗವೇಣಿಯ ಕಪ್ಪು ಕಂತ್ರಿನಾಯಿಯ ಕಡೆ ಗಮನಹರಿಸದೆ, ಸುಮಾರು ಎರಡು ಫರ್ಲಾಂಗುಗಳ ದೂರದಲ್ಲಿದ್ದ ನಮ್ಮ ಮನೆಯತ್ತ ನಡೆಯತೊಡಗಿದೆ.

ಮನೆಯ ಮುಂಬಾಗಿಲನ್ನು ದಾಟಿ ಒಳನಡೆದವನಿಗೆ ಈಗಾಗಲೇ ಹಾಲಿನ ಸ್ಟೀಲಿನ ಕುರ್ಚಿಯೊಂದರಲ್ಲಿ ಕುಳಿತು ನನ್ನ ಅಪ್ಪನೊಂದಿಗೆ ಹರಟುತ್ತಿದ್ದ ಡಾಕ್ಟರ್ ವೀರಭದ್ರಪ್ಪ ಕಣ್ಣಿಗೆ ಬಿದ್ದರು. ನನ್ನನ್ನು ಕಂಡವರೇ “ಹೇಗಿದ್ದೀಯಪ್ಪ? ಗಾಯಗಳ ನೋವು ಕಡಿಮೆ ಆಗಿದೆಯೇ?” ಎಂದು ಪ್ರಶ್ನಿಸಿದರು. “ಹೌದು ಡಾಕ್ಟ್ರೇ, ನೋವು ಬಹಳಷ್ಟು ಕಡಿಮೆಯಾಗಿದೆ” ಎನ್ನುತ್ತಲೇ ಭೋಗೇಶ ತಂದಿಟ್ಟ ಮತ್ತೊಂದು ಕುರ್ಚಿಯ ಮೇಲೆ ಡಾಕ್ಟರರ ಮುಂದೆ, ಅವರ ಕೈಗೆಟುಕುವಷ್ಟು ದೂರಕ್ಕೆ ಅಸೀನನಾದೆ. ಡಾಕ್ಟರ್ ತಮ್ಮ ಜಾಮಿಟ್ರಿಪೆಟ್ಟಿಗೆಯಂತಹ ಪುಟ್ಟ ಲೋಹದ ಬಾಕ್ಸ್ ವೊಂದನ್ನು ತೆರೆದು ಅಲ್ಲಿ ತಣ್ಣನೆ ಮಲಗಿದ್ದ ಇಂಜೆಕ್ಷನ್ ಹೊರತೆಗೆದರು. ಅದೇ ವೇಳೆಗೆ ಭೋಗೇಶ ಅಡುಗೆ ಮನೆಯಿಂದ ಸ್ಟೀಲ್ ಲೋಟವೊಂದರಲ್ಲಿ ತಂದ ಬಿಸಿನೀರಿನಲ್ಲಿ ಸಿರಿಂಜರ್ ಅದ್ದಿದ ಡಾಕ್ಟರ್ ಒಂದೆರೆಡು ಬಾರಿ ಬಿಸಿನೀರನ್ನು ಸಿರಿಂಜರ್ ಪೂರ್ತಿ ತುಂಬುವಷ್ಟು ಒಳಗೆ ಎಳೆದು, ತುಂಬಿದ ನೀರನ್ನು ಪಕ್ಕದಲ್ಲಿಯೇ ಇಟ್ಟಿದ್ದ ಮತ್ತೊಂದು ಖಾಲಿ ಲೋಟಕ್ಕೆ ವರ್ಗಾಯಿಸಿದರು. ಸಿರಿಂಜರ್ ಸ್ವಚ್ಚ ಮಾಡುವ ತಮ್ಮ ಈ ಕೆಲಸವನ್ನು ಎರಡು ಮೂರು ಬಾರಿ ಪುನರಾವರ್ತಿಸಿದ ಡಾಕ್ಟರ್ ತರುವಾಯ ತಮ್ಮ ಚರ್ಮದ ಕೈಬ್ಯಾಗಿನಲ್ಲಿದ್ದ ಪೆನ್ಸಿಲಿನ್ ಔಷಧದ ಚಿಕ್ಕಗಾಜಿನ ಬಾಟಲ್ ಒಂದನ್ನು ಹೊರತೆಗೆದು ಅಲ್ಲಿದ್ದ ಪೌಡರ್ ರೂಪದ ಔಷಧಿಗೆ ಮತ್ತೆ ಬಿಸಿನೀರಿನ ಲೋಟಾದಿಂದ ಹೀರಿದ ಅರ್ಧ ಸಿರಿಂಜರಿನಷ್ಟು ನೀರನ್ನು ಸೇರಿಸಿ, ಬಾಟಲಿಯನ್ನು ಚೆನ್ನಾಗಿ ಕಲುಕಿ, ದ್ರವರೂಪಕ್ಕೆ ತಿರುಗಿದ ಔಷಧಿಯನ್ನು ಸಿರಿಂಜರ್ ತುಂಬುವಷ್ಟು ಹೀರಿ, ಅದಾಗಲೇ ಅಂಗಿಯ ಎಡತೋಳನ್ನು ಮೇಲೆತ್ತಿ ಕುಳಿತ ನನ್ನ ತೋಳಿನ ಮೇಲ್ಭಾಗಕ್ಕೆ ನಿಧಾನಗತಿಯಿಂದ ಸೂಜಿಯನ್ನು ಚುಚ್ಚತೊಡಗಿದರು. ಇಂಜೆಕ್ಷನ್ ನ ಮೊನಚಾದ ಸೂಜಿ ನನ್ನ ತೋಳಿನ ಮಾಂಸಖಂಡಗಳನ್ನ ಸೀಳಿ ಒಳಹೊಕ್ಕಾಗ ಆದ ಅತೀವ ವೇದನೆಯಿಂದ ಮುಖವನ್ನು ವಿಚಿತ್ರ ಆಕಾರಕ್ಕೆ ತಿರುಚಿದ ನಾನು “ಡಾಕ್ಟ್ರೇ, ನಿಧಾನವಾಗಿ ಇಂಜೆಕ್ಷನ್ ಮಾಡಿ” ಎನ್ನುವ ಅರ್ತನಾದವನ್ನು ನನಗರಿವಿಲ್ಲದಂತೆಯೇ ಹೊರಹಾಕಿದೆ. “ಆಯ್ತಲ್ಲಪ್ಪ, ಇಂಜೆಕ್ಷನ್ ಕೊಡುವುದು, ಇನ್ನೇನು ಮುಗಿದೇಹೋಯ್ತು” ಎನ್ನುವ ಸ್ವಾಂತನದ ನುಡಿಗಳೊಂದಿಗೆ ನನ್ನ ತೋಳಿನಿಂದ ಮತ್ತದೇ ಜಾಗರೂಕತೆಯಿಂದ ಸೂಜಿಯನ್ನು ಹೊರತೆಗೆದ ಡಾಕ್ಟರ್ “ಇನ್ನೊಂದೇ ಇಂಜೆಕ್ಷನ್ ಬಾಕಿ ಇರುವುದು, ನಾಳೆ ಅದನ್ನು ಕೊಟ್ಟರೆ ಈ ಸಲದ ಕೋರ್ಸ್ ಮುಗಿದ ಹಾಗೆಯೇ” ಎಂದು ನುಡಿಯುತ್ತಲೇ ಇಂಜೆಕ್ಷನ್ ಮತ್ತು ನನ್ನ ಒಡನಾಟಕ್ಕೆ ಇದು ತಾತ್ಕಾಲಿಕ ವಿರಾಮವಷ್ಟೆ, ಮುಂದಿನ ವರ್ಷ ಮತ್ತಿದೇ ಪ್ರಹಸನ ಶುರುವಾಗುತ್ತದೆ ಎನ್ನುವ ಸುಳಿವನ್ನು ಸೂಚ್ಯವಾಗಿ ನನ್ನ ತಲೆಗೆ ರವಾನಿಸಿದರು. “ಇಂಜೆಕ್ಷನ್ ಕೊಟ್ಟ ಜಾಗದಲ್ಲಿ ಸ್ವಲ್ಪ ಉಜ್ಜಿಕೋ, ನೋವು ಕಡಿಮೆಯಾಗುತ್ತದೆ” ಎನ್ನುವ ತಮ್ಮ ಎಂದಿನ ಸಲಹೆಯನ್ನೂ ನೀಡಿದ ಡಾಕ್ಟರ್ “ಹಾಗೆಯೇ ಸ್ವಲ್ಪ ಹೊತ್ತು ಕೂತಿರಪ್ಪ, ಬೇಗನೇ ಎದ್ದೇಳಬೇಡ” ಎಂದು ನನ್ನನ್ನು ಮುಂದಿನ ಮೂರ್ನಾಲ್ಕು ನಿಮಿಷಗಳ ಕಾಲ ತಮ್ಮ ಮುಂದಿದ್ದ ಕುರ್ಚಿಯಲ್ಲಿಯೇ ಕೂರಿಸಿದವರು ತದನಂತರ “ನೀನಿನ್ನು ಟ್ಯೂಷನ್ ಮನೆಗೆ ಹೋಗಬಹುದು” ಎನ್ನುವ ಪರವಾನಗಿಯನ್ನು ಕೊಡಲು ಮತ್ತೆ ಸಾವಕಾಶವಾಗಿ ಕುರ್ಚಿಯಿಂದ ಎದ್ದವನು ಮನೆಯಿಂದ ಹತ್ತು ನಿಮಿಷಗಳ ದೂರವಿದ್ದ ಪಾಠದ ಮನೆಯನ್ನು ಕುಂಟುತ್ತಲೇ ತಲುಪಿದೆನು. ಈ ಬಾರಿ ನನ್ನ ಕುಂಟು ನಡಿಗೆಯನ್ನು ಕಂಡು ಬೊಗಳದ ನಾಗವೇಣಿಯ ನಾಯಿ ನನ್ನನ್ನು ಕೆಕ್ಕರಿಸಿ ನೋಡುವುದನ್ನು ಮಾತ್ರ ಬಿಟ್ಟಿರಲಿಲ್ಲ. ಪಾಠದ ಮನೆಯ ಕಟ್ಟೆಯನ್ನು ಎತ್ತಿದವನು ಅಲ್ಲಿ ಹತ್ತುಹನ್ನೆರಡು ಸಾಲುಗಳಲ್ಲಿ ಹರಡಿ ಕುಳಿತ ವಿದ್ಯಾರ್ಥಿಸಮೂಹವನ್ನು ಸೀಳುತ್ತಾ ನಾನು ಕುಳಿತ ಮೊದಲಸಾಲನ್ನು ಸೇರಲು ಮುಂದಾದೆ. ದಾರಿಯ ಮಧ್ಯೆ ಇಟ್ಟ ಯಾರದೋ ಪುಸ್ತಕದ ಚೀಲವನ್ನು ಎಡವಿ, ಸಮತೋಲನವನ್ನು ಕಳೆದುಕೊಂಡವನು ಪಕ್ಕದಲ್ಲಿದ್ದ ಹನುಮಂತಪ್ಪನ ಮೇಲೆ ಬೀಳುವ ಪ್ರಕ್ರಿಯೆಯ ಅಂಗವಾಗಿ ಭಾಗಶಃ ವಾಲಿದ್ದವನನ್ನು ತಡೆದು ನಿಲ್ಲಿಸಿದ ಚಿದಾನಂದ ನನ್ನ ತೋಳುಗಳನ್ನು ಹಿಡಿದು ಸ್ವಸ್ಥಾನಕ್ಕೆ ಸೇರಿಸುವಲ್ಲಿ ನೆರವಾದ. ಇದನ್ನು ಕಂಡ ಗುರುಮಲ್ಲಪ್ಪ ಮೇಷ್ಟ್ರು “ಇದು ಇಂಜೆಕ್ಷನ್ ಪವರ್ ಅಂತ ಕಾಣುತ್ತದೆ, ಹುಷಾರಪ್ಪ” ಎಂದು ನುಡಿದು ತಮ್ಮ ಗಣಿತದ ಪಾಠದ ವಿವರಣೆಯನ್ನು ಮುಂದುವರೆಸತೊಡಗಿದರು.

ನನಗೆ ಇಂಜೆಕ್ಷನ್ ನೀಡಿದ ಡಾಕ್ಟರ್ ವೀರಭದ್ರಪ್ಪ ಅಸಲಿಗೆ ಡಾಕ್ಟರ್ ಅಲ್ಲವೇ ಅಲ್ಲ. ಎಂ. ಬಿ. ಬಿ. ಎಸ್. ಡಿಗ್ರಿ ಪಡೆದು ವೈದ್ಯವೃತ್ತಿಯನ್ನು ಕಾನೂನುಬದ್ದವಾಗಿ ಸಾಕ್ಷೀಕರಿಸಿಕೊಂಡವರೂ ಅಲ್ಲ. ಊರಿನ ಸರ್ಕಾರಿ ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ಆರೋಗ್ಯ ನಿರೀಕ್ಷಕರಾಗಿ ಕಳೆದ ಒಂದೂವರೆ ದಶಕಗಳಿಗೂ ಮೀರಿದ ಅವಧಿಯಿಂದ ಸೇವೆ ಸಲ್ಲಿಸುತ್ತಿದ್ದ ವೀರಭದ್ರಪ್ಪ ಅವರು ಊರವರ ಪಾಲಿಗೆ ತಮ್ಮ ಪ್ರವೃತ್ತಿಯ ಕಾರಣದಿಂದ ಡಾಕ್ಟರೇ ಆಗಿ ಹೋಗಿದ್ದರು. ಆ ಹೊತ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಾಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ರುದ್ರಾನಾಯ್ಕ್ ಅವರು ದುರ್ಗದಿಂದ ದಿನನಿತ್ಯ ಹೋಗಿಬಂದು ಮಾಡುತ್ತಿದ್ದರಾಗಿ ಸಾಮಾನ್ಯವಾಗಿ ಊರಜನರು ಮನೆಗಳಲ್ಲಿ ಇರುತ್ತಿದ್ದ ಸಂಜೆಯ ವೇಳೆಯಲ್ಲಿ ಉಪಲಬ್ಧವಿರುತ್ತಿರಲಿಲ್ಲ. ಬೆಳಿಗ್ಗೆ ಹತ್ತು ಗಂಟೆಯ ಮೃತ್ಯುಂಜಯ ಬಸ್ಸಿಗೆ ದುರ್ಗದಿಂದ ಬರುತ್ತಿದ್ದ ರುದ್ರಾನಾಯ್ಕ್ ಸಂಜೆ ನಾಲ್ಕರ ಸುಮಾರಿಗೆ ದುರ್ಗದ ಕಡೆ ಹೋಗುತ್ತಿದ್ದ ಗೀತಾಂಜನೇಯ ಬಸ್ಸಿನಲ್ಲಿ ಹೊರಟೇ ಬಿಡುತ್ತಿದ್ದರು. ರುದ್ರಾನಾಯ್ಕ್ ಮೊದಲು ಊರಿನ ಆರೋಗ್ಯಕೇಂದ್ರದ ವೈದ್ಯಾಧಿಕಾರಿಗಳಾಗಿದ್ದವರೆಲ್ಲರ ಗೋಳು, ನಿತ್ಯದ ಪರಿಪಾಠ ಇದೇ ಆಗಿತ್ತು. ಊರಹೊರಗಿನ, ಬಾಲಕರ ಪ್ರೈಮರಿ ಶಾಲೆಯ ಸಮೀಪದಲ್ಲಿದ್ದ ಡಾಕ್ಟರ್ ಕ್ವಾರ್ಟರ್ಸ್ ನಲ್ಲಿ ರುದ್ರಾನಾಯ್ಕ್ ಅವರಿಗಿಂತ ಮೊದಲಿದ್ದ, ಡಾಕ್ಟರ್ ಶಿವಶಂಕರ್ ಮೋಟೆಬೆನ್ನೂರ ಒಬ್ಬರನ್ನು ಬಿಟ್ಟಂತೆ, ಊರ ಸರ್ಕಾರಿ ಆಸ್ಪತ್ರೆಯ ಡಾಕ್ಟರುಗಳಾಗಿದ್ದ ಮೀಟಾನಾಯ್ಕ್, ಜಯಾನಂದಯ್ಯ ಸೇರಿದಂತೆ ಯಾರೂ ಕೂಡ ನಮ್ಮೂರಿನಲ್ಲಿ ಖಾಯಂರೂಪದಲ್ಲಿ ನೆಲೆಯೂರಿದವರೇ ಅಲ್ಲ. ಹಾಗಾಗಿ ದಿನದ ಕೆಲವೇ ಕೆಲವು ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಉಪಸ್ಥಿತರಿರುತ್ತಿದ್ದ ಡಾಕ್ಟರ್ ಮತ್ತು ಊರರೋಗಿಗಳ ಮಧ್ಯೆ ಅನುಬಂಧವೇ ಮೂಡಲಿಲ್ಲ. ಎಂದೂ ಮೂಡದ ಈ ಅನುಬಂಧ ಪರಸ್ಪರರ ಸಾಮರಸ್ಯದ ಕೊರತೆ ಮತ್ತು ಅಪನಂಬಿಕೆಯಂತಹ ನೇತ್ಯಾತ್ಮಕ ಭಾವನೆಗಳಲ್ಲಿ ಪರ್ಯಸಾನ ಹೊಂದಿತ್ತು. ಮನೆಯಲ್ಲಿ ಹಗಲು ವೇಳೆ ಇರುತ್ತಿದ್ದ ಹೆಣ್ಣುಮಕ್ಕಳು, ಮುದುಕರು ಅಥವಾ ತೀವ್ರ ಅಸ್ವಸ್ಥರಾಗಿ ಹಾಸಿಗೆ ಹಿಡಿದಿದ್ದ ಕೆಲವೇ ಕೆಲವು ರೋಗಿಗಳು ಮಾತ್ರವೇ ಸರ್ಕಾರಿ ಆಸ್ಪತ್ರೆಯ ಡಾಕ್ಟರ್ ಸೇವೆಯ ಸದ್ವಿನಿಯೋಗವನ್ನ ಪಡೆದುಕೊಳ್ಳುತ್ತಿದ್ದರೆ, ದಿನವಿಡೀ ಹೊಲಗದ್ದೆಗಳಲ್ಲಿ ದುಡಿದು ಬರುವ ಮನೆಯ ಗಂಡಸರಿಗೇ ಆಗಲಿ ಅಥವಾ ಶಾಲೆಗಳಲ್ಲಿ ಓದುತ್ತಿದ್ದ ಮಕ್ಕಳು ಮರಿಗಳಿಗೇ ಆಗಲಿ ಅನಾರೋಗ್ಯ ಕಾಡಿದ ಹೊತ್ತು ಆಪತ್ಭಾಂದವನಂತೆ ನೆನಪಾಗುತ್ತಿದ್ದದ್ದೇ ಕಳೆದ ಹದಿನೈದು ವರ್ಷಗಳಿಗೂ ಮೀರಿದ ಕಾಲಾವಕಾಶದಲ್ಲಿ ಊರಲ್ಲೇ ಮೊಕ್ಕಾಂ ಹೂಡಿದ್ದ ಮತ್ತು ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲವೂ ರೋಗಿಗಳಿಗೆ ಲಭ್ಯವಿದ್ದ ಆರೋಗ್ಯ ನಿರೀಕ್ಷಕ ವೀರಭದ್ರಪ್ಪ ಅವರು. ಹಾಗಾಗಿ ವೀರಭದ್ರಪ್ಪ ಅವರನ್ನು “ಡಾಕ್ಟರ್, ಡಾಕ್ಟರ್” ಎಂದೇ ಸಂಬೋಧಿಸುತ್ತಿದ್ದ ಊರಜನ, ಊರಿನ ಸರ್ಕಾರಿ ಆಸ್ಪತ್ರೆಯಲ್ಲಿ ಹಾಲಿ ಯಾವ ಡಾಕ್ಟರ್ ಕರ್ತವ್ಯದ ಮೇಲಿದ್ದಾರೆ ಎನ್ನುವ ಬಗ್ಗೆ ತಲೆಯನ್ನೇ ಕೆಡಸಿಕೊಂಡವರಂತೆ ಕಾಣುತ್ತಿರಲಿಲ್ಲ.

ಹತ್ತು ಸಾವಿರ ದಾಟಿದ ಜನಸಂಖ್ಯೆಯ ಊರಜನರ ಸ್ವಾಸ್ಥ್ಯವನ್ನು ಕಾಪಾಡುವ ಗುರುತರ ಹೊಣೆಯನ್ನ ತನ್ನ ಒಂಟಿ, ಭೌತಿಕವಾಗಿ ಕೃಷವೇ ಎಂದು ಹೇಳಬಹುದಾದ ಹೆಗಲಿಗೇರಿಸಿಕೊಂಡ ವೀರಭದ್ರಪ್ಪ ಈ ದಿಶೆಯಲ್ಲಿ ತುಂಬಾ ಗಂಭೀರವಾದ ಪ್ರಯತ್ನಗಳನ್ನು ಮಾಡಿದ ಫಲಸ್ವರೂಪದಿಂದ ಮಾತ್ರವೇ ಅವರು ಊರಿನಲ್ಲಿ ಇದ್ದಷ್ಟು ದಿನ ನಮ್ಮೂರಿನಲ್ಲಿ ಖಾಯಂರೂಪದಲ್ಲಿ ಡಾಕ್ಟರ್ ಇಲ್ಲ ಎನ್ನುವ ಭಾವನೆ ಊರ ಜನರ ಮನಸ್ಸಿನಲ್ಲಿ ಎಂದೂ ಬಂದಿದ್ದೇ ಇಲ್ಲ.

ದಾವಣಗೆರೆ ಸಮೀಪದ ಹಳ್ಳಿಯೊಂದರ ಮೂಲದವರಾದ ವೀರಭದ್ರಪ್ಪ ತಮ್ಮ ದೇಹದ ಎತ್ತರವನ್ನು ಐದು ಅಡಿಗಳಿಗಿಂತ ಒಂದೋ ಎರಡೋ ಅಂಗುಲಗಳಿಂದ ಮಾತ್ರವೇ ಮೀರಿಸಿದ ನಿಲುವನ್ನು ಹೊಂದಿದವರಾಗಿದ್ದರು. ಸಣ್ಣನೆಯ, ತುಸುಬಾಗಿದಂತಿದ್ದ ಶರೀರಾಕೃತಿಯ, ಸದಾ ಪ್ಯಾಂಟ್ ಮತ್ತು ಮುಂಗೈನವರೆಗೆ ನೀಟಾಗಿ ಮಡಿಚಿರುತ್ತಿದ್ದ ತುಂಬುತೋಳಿನ ಶರ್ಟ್ ಧರಿಸಿರುತ್ತಿದ್ದ ಡಾಕ್ಟರ್ ವೀರಭದ್ರಪ್ಪ ತಮ್ಮ ವಿಶಿಷ್ಟವಾದ ನಡಿಗೆಯ ಮೂಲಕ ಎಷ್ಟೇ ದೂರದಿಂದಾದರೂ ಸರಿ, ಊರಜನ ಸುಲಭವಾಗಿ ಗುರುತಿಸುವ ಹಾಗಿದ್ದರು. ನೀಳವಾದ ಗಿಣಿಮೂಗಿನ, ತುಸು ಹೆಚ್ಚೇ ಎನ್ನಬಹುದಾದ ಗೌರವರ್ಣದಿಂದ ಕೂಡಿದ ವೀರಭದ್ರಪ್ಪ ಅವರ ಪೊದೆಯಂತಹ ದಪ್ಪ, ನೀಳವಾಗಿದ್ದ ಕೃಷ್ನವರ್ಣದ ಹುಬ್ಬುಗಳು, ಬಹಳ ಸಣ್ಣದಾಗಿ ಟ್ರಿಮ್ ಮಾಡಿದಂತೆ ತೋರುತ್ತಿದ್ದ ಅಗಲವಾದ ಮೀಸೆ, ಸ್ವಲ್ಪ ಗುಂಗುರಾಗಿ, ಹುಲುಸಾಗಿ ಬೆಳೆದು ನಿಂತ ಕಪ್ಪು ಕೂದಲರಾಶಿ ಮತ್ತು ಈ ಆಕರ್ಷಕ ಕೇಶರಾಶಿಯನ್ನು ನೀಟಾಗಿ, ಸ್ವಲ್ಪವೇ ಹಿಂದಕ್ಕೆ ಹಾಗೂ ತಲೆಯ ಮಧ್ಯೆ ಬೈತಲೆ ಮೂಡುವಂತೆ ಒಪ್ಪವಾಗಿ, ಹಚ್ಚಿದ್ದಾರೋ ಇಲ್ಲವೋ ಎಂದು ಹೇಳಲು ಕಷ್ಟವಾಗುವಷ್ಟು ಕಡಿಮೆ ಪ್ರಮಾಣದ ತೈಲ ಬಳಸಿ ಬಾಚಿದ್ದ ಪರಿ ಇವು ಮೊದಲ ನೋಟಕ್ಕೇ ಡಾಕ್ಟರ್ ಬಗ್ಗೆ ಗೌರವಾದರಗಳನ್ನು ಹುಟ್ಟಿಸುವಂತಿದ್ದವು. ಸದಾ ಗಂಭೀರವದನರಾಗಿಯೇ ಮುಗುಂ ಆಗಿರುತ್ತಿದ್ದ ವೀರಭದ್ರಪ್ಪ ಡಾಕ್ಟರರ ನಗುಮುಖದ ನೆನಪು ನನ್ನ ನೆನಪಿನ ಖಜಾನೆಯಲ್ಲಿ ದಾಖಲಾಗಿಯೇ ಇಲ್ಲ. ಎರಡನೇ ಮಹಾಯುದ್ಧದ ಕುರಿತಾದ, ಇತೀಚೆಗಷ್ಟೇ ನನ್ನ ಕೈಸೇರಿದ್ದ ವರ್ಣಚಿತ್ರಗಳಿದ್ದ ಪುಸ್ತಕವೊಂದರಲ್ಲಿ ಚಿತ್ರತವಾಗಿದ್ದ ಹಿಟ್ಲರ್ ಮಹಾಶಯನ ಫೋಟೋವನ್ನು ನೋಡಿ ಗಲಿಬಿಲಿಗೆ ಒಳಗಾದ ನನಗೆ ವೀರಭದ್ರಪ್ಪ ಡಾಕ್ಟರ್ ಹಿಲ್ಟರ್ ಮುಖಚರ್ಯೆಯನ್ನು ಒಂದು ಕೋನದಿಂದ ಹೋಲುತ್ತಿದ್ದದ್ದು ಅರಿವಿಗೆ ಬಂದಿದ್ದು ಆ ದಿನ ಸಾಯಂಕಾಲ ತಾವು ತೆಗೆದುಕೊಳ್ಳಬೇಕೆಂದಿದ್ದ ಆರೋಗ್ಯಇಲಾಖೆಯ ಪರೀಕ್ಷೆಯ ನಿಮಿತ್ತ ಬೆಂಗಳೂರಿನ ಮುಖ್ಯಕಾರ್ಯಾಲಯಕ್ಕೆ ಬರೆದು ಕಳುಹಿಸಬೇಕಾದ ಮಾನವಹೃದಯದ ಚಿತ್ರಗಳನ್ನು ನನ್ನ ಅಪ್ಪನಿಂದ ಬರೆಸಿಕೊಳ್ಳುವ ಸಲುವಾಗಿ ವೀರಭದ್ರಪ್ಪ ಡಾಕ್ಟರ್ ನಮ್ಮ ಮನೆಗೆ ಪ್ರವೇಶಿಸಿದಾಗಲೇ. ನಾನು ನೋಡುವ ವೇಳೆಗೆ ಮೂವತ್ತೈದರ ಹರೆಯವನ್ನು ಹಿಂದಿಟ್ಟಿದ್ದ ಡಾಕ್ಟರ್ ಕೈಯಲ್ಲಿ ಒಂದು ಚರ್ಮದ, ಕಂದುವರ್ಣದ ಬ್ಯಾಗ್ ಹಿಡಿದು ಸಂಜೆಯ ವೇಳೆಯಲ್ಲಿ, ಐದರ ಸುಮಾರಿಗೆ ಮನೆಯಿಂದ ಹೊರಬೀಳುತ್ತಿದ್ದರೆ, ಅವರ ರೌಂಡ್ಸ್ ಗಳಿಗಾಗಿ ದಿನನಿತ್ಯ ಊರಿನ ಸುಮಾರು ಐವತ್ತಕ್ಕೂ ಮೀರಿದ ರೋಗಿಗಳು ತಂತಮ್ಮ ಮನೆಗಳಲ್ಲಿ ಕಾಯುತ್ತಲೋ ಅಥವಾ ತಮ್ಮ ಪ್ರತಿನಿಧಿಗಳನ್ನು ಮನೆಯ ಹೊರಗೆ, ರಸ್ತೆಯ ಕಡೆಗೇ ಮುಖಮಾಡಿ ನಿಲ್ಲುವಂತೆ ಹೇಳಿ ಡಾಕ್ಟರ್ ಆಗಮನವಾದಲ್ಲಿ ಒಳಗೆ ಇರುವ ತಮಗೆ ತತ್ಕಾಲದಲ್ಲಿ ಅರುಹಬೇಕೆಂಬ ತಾಕೀತು ಮಾಡುತ್ತಿದ್ದರು. ಬಳ್ಳಾರಿ ಮಲ್ಲಪ್ಪಜ್ಜ ಅವರಿಗೆ ಸೇರಿದ ಅಂದಿನ ಕೆನರಾಬ್ಯಾಂಕ್ ಇದ್ದ ಕಟ್ಟಡದ ಹಿಂದಿನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ವೀರಭದ್ರಪ್ಪ, ಸಂಜೆ ಮನೆಯಿಂದ ಹೊರಬಂದು ಹತ್ತಾರು ಮೀಟರ್ ಗಳನ್ನ ಕ್ರಮಿಸುವ ಮೊದಲೇ ಅವರ ಗಿರಾಕಿಗಳ ರೂಪದಲ್ಲಿ ಅಲ್ಲಿಯೇ ಇದ್ದ ರೆಡ್ಡಿಜನಾಂಗದ ಮನೆಗಳ ಪೈಕಿ ಯಾವುದಾದರೂ ಒಂದು ಮನೆಯಿಂದ ಆಹ್ವಾನಿತರಾಗುತ್ತಿದ್ದರು. ಹಾಗಾಗದೇ ಹೋದ ದಿನಗಳಲ್ಲಿ ಅಲ್ಲಿಂದ ಮುಂದೆ ಇದ್ದ ಪರೋತಪ್ಪ, ತಾತಾರೆಡ್ಡಿ, ತಿಪ್ಪೇಸ್ವಾಮಿ ಮೇಷ್ಟ್ರು ಮತ್ತು ಗಾಂಧಿಕೋಟೆ ಹಿಂದೆ ಇದ್ದ ಗಣೇಕಲ್ಲರ ಓಣಿಯ ಮನೆಗಳಲ್ಲಿ ಕನಿಷ್ಠ ಒಬ್ಬರಾದರೂ ರೋಗಿಗಳು ಉಪಚಾರಕ್ಕೆಂದು ಡಾಕ್ಟರ್ ಹಾದಿಯನ್ನು ಕಾಯುತ್ತಿದ್ದರು.

ಅಲ್ಲಿಂದ ಮುಂದುವರೆದ ವೀರಭದ್ರಪ್ಪ ಅವರ ದಿನನಿತ್ಯದ ಊರಸುತ್ತು ಕೋಟೆಯಲ್ಲಿದ್ದ ಲಿಂಗಾಯತರ ಮನೆಗಳನ್ನು ಉಪಕ್ರಮಿಸಿ ಹಾಗೆಯೇ ಕೆಳಗೆ ಇಳಿಯುತ್ತಾ ಶೆಟ್ಟರ ಮನೆಗಳನ್ನು ಆವರಿಸಿಕೊಂಡು ಬಸ್ ಸ್ಟ್ಯಾಂಡ್ ಕಡೆಯ ನಮ್ಮ ಮನೆಯ ಮುಂದೆ ಬರುವ ವೇಳೆಗೆ ಏನಿಲ್ಲವೆಂದರೂ ಸಂಜೆ ಏಳರ ಸಮಯವನ್ನು ದಾಟುತ್ತಿತ್ತು. ತದನಂತರದಲ್ಲಿ ಕಲ್ಲಪ್ಪನ ತೇರು ಇಟ್ಟಿದ್ದ ಶೆಡ್ ಮುಂದೆ ಹಾಯ್ದು ದಿನ್ನೆ ಮೇಲಿದ್ದ ಕಲ್ಲಪ್ಪನವರ ಮತ್ತು ಜಕ್ಕಪ್ಪನವರ ಮನೆಗಳ ಕಡೆಗೆ ತೆರಳುತ್ತಿದ್ದ ಡಾಕ್ಟರ್ ಶೋಭಾಯಾತ್ರೆ ತದನಂತರದಲ್ಲಿ ಕುರುಬರ ಕೇರಿಯನ್ನು ಹಾಯ್ದು ಊರಿನ ಸರ್ಕಾರಿ ಮಾಧ್ಯಮಿಕ ಶಾಲೆಯ ಸುತ್ತಮುತ್ತಲೂ ಇದ್ದ ಮತ್ತಷ್ಟು ರೆಡ್ಡಿಜನಾಂಗದ ಮನೆಗಳನ್ನು ಸುತ್ತು ಹೊಡೆದು, ಬಾಲಕರ ಪ್ರೈಮರಿಶಾಲೆಯ ಮೂಲಕ ಮತ್ತೆ ತಮ್ಮ ಮನೆಯನ್ನು ಸೇರಿಕೊಳ್ಳುತ್ತಿದ್ದ ಚಿಕಿತ್ಸಾಪರ್ವ ತನ್ನ ದಿನದ ಅಂತ್ಯ ಕಾಣುವ ವೇಳೆಗೆ ಒಮ್ಮೊಮ್ಮೆ ಗಡಿಯಾರದ ಮುಳ್ಳು ರಾತ್ರಿ ಹನ್ನೊಂದನ್ನೂ ದಾಟಿ ಮುನ್ನೆಡೆಯುತ್ತಿತ್ತು. ಹೀಗೆ ಸುಮಾರು ಏಳೆಂಟು ಕಿಲೋಮೀಟರ್ ಗಳ ದೂರವನ್ನು ಕ್ರಮಿಸುತ್ತಿದ್ದ, ಐದಾರು ಗಂಟೆಗಳ ತಮ್ಮ ಈ ಊರ ಸುತ್ತಾಟದ ವೇಳೆ ಊರಿನ ಐವತ್ತಕ್ಕೂ ಹೆಚ್ಚು ಸಂಖ್ಯೆಯ ಮನೆಗಳನ್ನೂ, ಗುಡಿಸಲುಗಳನ್ನೂ ಒಳಹೊಕ್ಕು, ಅಲ್ಲಿದ್ದ ರೋಗಿಗಳಿಗೆ ಸೂಕ್ತಚಿಕಿತ್ಸೆ ಕೊಟ್ಟು ಮನೆಗೆ ಮರಳುತ್ತಿದ್ದ ಡಾಕ್ಟರ್ ವಾರದ ಏಳೂ ದಿನಗಳಲ್ಲಿಯೂ ತಮ್ಮ ಸೇವಾವ್ರತವನ್ನು ಬಹಳ ಯಶಸ್ವಿಯಾಗಿ ದಶಕಗಳ ಕಾಲ ಊರಿನಲ್ಲಿ ನಡೆಸಿಕೊಂಡು ಬಂದವರಾಗಿದ್ದರು. ಪ್ರತ್ಯೇಕವಾಗಿಯೇ ಇದ್ದ ಊರ ಸರ್ಕಾರಿ ಬಾಲಕ ಬಾಲಕಿಯರ ಪ್ರಾಥಮಿಕ ಶಾಲೆಗಳಿಗೆ ನೋಂದಣಿಯಾಗದ ಮಕ್ಕಳು ಊರಲ್ಲಿ ಇರಲೇ ಇಲ್ಲ ಎನ್ನುವ ಅಂದಿನ ಬದಲಾದ ಶೈಕ್ಷಣಿಕ ಸನ್ನಿವೇಶದ ಕಾಲಘಟ್ಟವೊಂದರ ಹಾಗೆ ವೀರಭದ್ರಪ್ಪ ಡಾಕ್ಟರ್ ಅವರಿಂದ ಉಪಚಾರ ಪಡೆಯದೇ ಇದ್ದ ಮಂದಿ ಊರಲ್ಲಿಯೇ ಇರಲಿಲ್ಲ ಎಂದು ಧಾರಾಳವಾಗಿ ಹೇಳಬಹುದಿತ್ತು. ಜಾತಿಮತಗಳ ವಿಭಾಜಕವನ್ನು ಎಂದೋ ಬೇಧಿಸಿದ್ದ ಡಾಕ್ಟರ್ ಬಡವ ಬಲ್ಲಿದರ ನಡುವಿನ ಅಂತರಕ್ಕೆ ಕುರುಡಾಗಿದ್ದವರು. ಹೇಗೆ ಊರಿನ ಒಂದೆರೆಡು ಬ್ರಾಹ್ಮಣ ಮನೆಗಳಿಗೆ ವೀರಭದ್ರಪ್ಪ ಡಾಕ್ಟರ್ ಅನಿವಾರ್ಯ ಎನಿಸಿದ್ದರೋ ಅದೇ ರೀತಿಯಲ್ಲಿ ಊರಿನಲ್ಲಿದ್ದ ನಾಲ್ಕಾರು ಮುಸ್ಲಿಂ ಮನೆಗಳಿಗೆ ಅಗತ್ಯವಾಗಿ ಬೇಕಾಗಿದ್ದ ವೈದ್ಯಸೇವೆಯ ಗಂಗೆಯನ್ನು ಅವರ ಮನೆಬಾಗಿಲುಗಳಿಗೆ ತಲುಪಿಸುವ ಭಗೀರಥಿಯ ರೂಪಧಾರಣೆ ಮಾಡಿದ್ದರು. ವೆಂಕಟಜೋಯಿಸರಿಗೆ ಆರಾಮ ಇಲ್ಲವೆಂದಾಗ ಚಿಕಿತ್ಸೆ ನೀಡುವ ಡಾಕ್ಟರ್ , ಊರ ಹೊರಗಿನ ನೀರುಭಾವಿ ರಸ್ತೆಯಲ್ಲಿದ್ದ ಹತ್ತಿಗಿರಣಿಯ ಮಾಲೀಕ ಇಮಾಮ್ ಸಾಬ್ ರಿಗೂ ಅನಾರೋಗ್ಯ ಕಾಡಿದ ಹೊತ್ತು ಅಗತ್ಯ ವೈದ್ಯಕೀಯ ಉಪಚಾರ ಮಾಡುತ್ತಿದ್ದರು. ಊರಿನ ಶ್ರೀಮಂತ ವ್ಯಕ್ತಿಯಾದ ಮೂಲಂಗಿ ಸಂಜೀವಪ್ಪನ ಎದೆ ಬಡಿತದ ಕರಾರುವಕ್ಕನ್ನು ಅಳೆಯುವ ಡಾಕ್ಟರ್ ಸ್ಟೆಥಾಸ್ಕೋಪ್ ನಿರ್ಗತಿಕ ಪಾಲಕ್ಕನ ಹೃದಯದ ಮಿಡಿತವನ್ನೂ ಅದೇ ಸಹೃದಯತೆದೊಂದಿಗೆ ದಾಖಲಿಸುತ್ತಿತ್ತು. ಹೀಗೆ ಊರ ಸರ್ವಜನಾಂಗದ, ಸರ್ವ ಆರ್ಥಿಕ ಸ್ತರಗಳ, ಸರ್ವ ಸಮಾಜೀಕೃತ ಶ್ರೇಣಿಯ ಜನತೆಯ ಮನಮೆಚ್ಚಿದ ಡಾಕ್ಟರಾಗಿ ವೀರಭದ್ರಪ್ಪ ಹೊರಹೊಮ್ಮಿದ್ದರು. “ನಾನು ವರ್ಷಗಳಿಂದ ಆಸ್ಪತ್ರೆಯ ಮುಖವನ್ನೇ ನೋಡಿಲ್ಲ” ಎಂದು ತಮ್ಮ ಗಟ್ಟಿಮುಟ್ಟಾದ ಆರೋಗ್ಯದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಊರ ಅನೇಕ ಹಿರಿಯರು ನಡೆದಾಡುವ ಆಸ್ಪತ್ರೆಯ ರೂಪದಲ್ಲಿ ತಮ್ಮ ಮನೆಗಳಿಗೆ ಭೇಟಿಕೊಟ್ಟ ವೀರಭದ್ರಪ್ಪ ಡಾಕ್ಟರ್ ಅವರಿಂದ ಪಡೆದ ಚಿಕಿತ್ಸೆಯನ್ನು ಈ ಯಾದಿಪಟ್ಟಿಯಲ್ಲಿ ಬೇಕಂತಲೇ ಸೇರಿಸದೇ ಇರುವ ಜಾಣತನವನ್ನು ಪ್ರದರ್ಶಿಸುತ್ತಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ ಗಲಿಬಿಲಿಗೆ ಒಳಗಾಗುವಂತೆ ತೋರುತ್ತಿದ್ದ ಅವರು “ವೀರಭದ್ರಪ್ಪ ಡಾಕ್ಟರಿಗೆ ತೋರಿಸುವುದು, ಆಸ್ಪತ್ರೆಗೆ ಭೇಟಕೊಡುವುದು ಎರಡೂ ಒಂದೇ ಹೇಗೆ ಆದೀತು?” ಎನ್ನುವ ಮರುಪ್ರಶ್ನೆಯನ್ನು ಹಾಕುವ ಮೂಲಕ ತಮ್ಮ ಆರೋಗ್ಯಕ್ಕಾದ ಛೇಧವನ್ನು ಮರೆಮಾಚುವ ವಿಫಲ ಪ್ರಯತ್ನಮಾಡುತ್ತಿದ್ದರು.

ಊರ ಧನ್ವಂತರಿಯ ರೂಪಧಾರಣೆ ಮಾಡಿದ ಡಾಕ್ಟರ್ ವೀರಭದ್ರಪ್ಪನವರು ನಮ್ಮೂರಿಗೆ ಮಾಡಿದ ವೈದ್ಯಕೀಯ ಸೇವೆಯನ್ನು ಬರಿಯ ಮಾತುಗಳಲ್ಲಿ ಬಣ್ಣನೆ ಮಾಡುವುದು ಅಸಾಧ್ಯವಾದ ಕೆಲಸ. ತಮ್ಮ ವೈದ್ಯಕೀಯ ಸೇವೆಗಾಗಿ ಸಂಭಾವನೆಯನ್ನು ಪಡೆಯುತ್ತಿದ್ದ ಡಾಕ್ಟರ್ ಇಂತಿಷ್ಟೇ ಹಣ ನೀಡಬೇಕು ಎಂದು ರೋಗಿಗಳನ್ನು ಅಥವಾ ರೋಗಿಗಳ ಕಡೆಯವರನ್ನು ಎಂದೂ ಪೀಡಿಸಿದವರೇ ಅಲ್ಲ. ರೋಗಿಯ ತಪಾಸಣೆಯ ಬಳಿಕ ತಮ್ಮ ಬಳಿ ಇದ್ದ ಇಂಜಕ್ಷನ್ನನ್ನೋ, ಮಾತ್ರೆಗಳನ್ನೋ ಕೊಡುತ್ತಿದ್ದ ಅವರು ತಮ್ಮ ಬಳಿ ಇಲ್ಲದ ಔಷಧಗಳನ್ನ ಊರಿನಲ್ಲಿ ಆ ಹೊತ್ತಿನಲ್ಲಿ ಇದ್ದ ಒಂದೇ ಒಂದು ಔಷಧಿ ಅಂಗಡಿಯಾದ ಶೆಟ್ಟರ ಸುಬ್ಬಣ್ಣನ ಅಂಗಡಿಯಿಂದ ತರಲಿಕ್ಕೆ ಹೇಳುತ್ತಿದ್ದರು. ಡಾಕ್ಟರ್ ರೋಗಿಗಳು ತರಬೇಕಾದ ಆ ಔಷಧಗಳನ್ನು ಯಾವಾಗಲೂ ಒಂದು ದಪ್ಪ ಹಳದಿಬಣ್ಣದ ಚೀಟಿಯ ಮೇಲೇ ಬರೆದುಕೊಡುತ್ತಿದ್ದರು

. ಹಳದಿ ಚೀಟಿಯಲ್ಲಿ ಬರೆದ ಈ ಔಷಧಗಳ ಮೇಲೆ ಶೇಕಡಾ ಹತ್ತರಷ್ಟು ರಿಯಾಯತಿಯನ್ನು ಸುಬ್ಬಣ್ಣನ ಅಂಗಡಿಯಲ್ಲಿ ಇರುತ್ತಿದ್ದ ಅವರ ಮಗ ಗೋಪಿಯಾಗಲೀ, ರವಿಯೇ ಆಗಲಿ ಅಥವಾ ಶೆಟ್ಟರ ಪತ್ನಿ ಮತ್ತು ಹೆಣ್ಣುಮಕ್ಕಳೇ ಆಗಲಿ ಧಾರಾಳರೂಪದಿಂದ ಕೊಡುತ್ತಿದ್ದದ್ದು ಹಣವಂತರಲ್ಲದ ಊರಜನರ ಬವಣೆಯನ್ನು ಕೊಂಚವಾದರೂ ತಗ್ಗಿಸಿತ್ತು ಎಂದೇ ಹೇಳಬೇಕು. ತಾನು ಬರೆದುಕೊಡುವ ಔಷಧಗಳಿಗೆ ಶೇಕಡಾ ಹತ್ತರಷ್ಟಾದರೂ ರಿಯಾಯತಿ ದರಗಳನ್ನು ಕೂಡಲೇಬೇಕು ಎಂದು ವೀರಭದ್ರಪ್ಪ ಸುಬ್ಬಣ್ಣಶೆಟ್ಟರಲ್ಲಿ ತಾವು ತುರುವನೂರಿಲ್ಲಿ ಚಿಕಿತ್ಸಾವ್ರತವನ್ನು ಕೈಗೊಂಡ ಮೊದಲವರ್ಷ ಕಳೆಯುವುದರೊಳಗೇ ಮಾಡಿಕೊಂಡ ಒಪ್ಪಂದ ಡಾಕ್ಟರ್ ಊರಿನಲ್ಲಿ ಇರುವಷ್ಟು ದಿನವೂ ಅಬಾಧಿತವಾಗಿ ಮುಂದುವರೆದಿತ್ತು. ಊರಿನ ಸರ್ಕಾರಿ ಆಸ್ಪತ್ರೆಯ ವೈದ್ಯರು ಬರೆದು ಕೊಡುವ ಔಷಧಗಳ ಹತ್ತುಪಟ್ಟಿನಷ್ಟು ಬೇಡಿಕೆ ವೀರಭದ್ರಪ್ಪ ಅವರ ಜಂಗಮ ಆಸ್ಪತ್ರೆಯ ಕಾರಣದಿಂದ ಆಗುತ್ತದೆ ಎನ್ನುವುದನ್ನು ಬಹಳ ಶೀಘ್ರವಾಗಿ ಅರಿತ, ವ್ಯವಹಾರದಲ್ಲಿ ಕುಶಾಗ್ರಮತಿಯಾದ ಸುಬ್ಬಣ್ಣಶೆಟ್ಟರು, ಡಾಕ್ಟರ್ ಹಳದಿ ಚೀಟಿಯ ಮೇಲೆ ಬರೆದ ಔಷಧಿಗಳ ಕೆಳಗೆ ಒಂದು ಗೆರೆ ಹಾಕಿದ್ದಲ್ಲಿ ಶೇಕಡಾ ಹದಿನೈದರಷ್ಟು, ಮತ್ತು ಎರಡು ಗೆರೆ ಎಳೆದಲ್ಲಿ ಶೇಕಡಾ ಇಪ್ಪತ್ತರಷ್ಟು ಮತ್ತು ಮೂರು ಗೆರೆ ಹಾಕಿದಲ್ಲಿ ಶೇಕಡಾ ನಲ್ವತ್ತರಷ್ಟು ರಿಯಾಯಿತಿಯನ್ನೂ ದಯಪಾಲಿಸುತ್ತಿದ್ದದ್ದು ಕೇವಲ ಕೆಲವೇ ಮಂದಿ ಊರಜನರಿಗೆ ತಿಳಿದ ಗುಟ್ಟಾಗಿತ್ತು. ಯಾವ ಕಾರಣಗಳಿಗೋಸುಗ ವೀರಭದ್ರಪ್ಪ ಡಾಕ್ಟರ್ ಈ ವಿವಿಧ ಸಂಖ್ಯೆಯ ಗೆರೆಗಳನ್ನು ಎಳೆಯುತ್ತಿದ್ದರು ಎನ್ನುವುದು ಅಸ್ಪಷ್ಟವಾದ ಹೊತ್ತೂ, ರೋಗಿಯ ಆರ್ಥಿಕ ಪರಿಸ್ಥಿತಿ ಇಲ್ಲಿನ ಒಂದು ಮುಖ್ಯವಾದ ಅಳತೆಗೋಲಾಗಿತ್ತು ಎನ್ನುವುದು ಹತ್ತಾರು ಅಂತಹ ಚೀಟಿಗಳ ಜಾಡು ಹಿಡಿದು ಹೊರಟ ನನ್ನ ಶ್ರಮದ ಫಲಶ್ರುತಿಯಾಗಿ ನನಗೆ ಸಿದ್ಧಿಸಿತ್ತು.

 

ವೀರಭದ್ರಪ್ಪ ಊರಜನರ ಎಲ್ಲಾ ರೋಗಗಳಿಗೂ ಸೂಕ್ತವಾದ ಮದ್ದನ್ನು ಕೊಡುವಷ್ಟು ಹೆಚ್ಚು ಓದಿದವರಾಗಲೀ ಅಥವಾ ಸಂಪನ್ಮೂಲಭರಿತರಾದವರಾಗಲೀ ಆಗಿರಲಿಲ್ಲ. ರೋಗಿಯನ್ನು ಪರೀಕ್ಷಿಸಿದ ನಂತರ ಅವರನ್ನು ಹೆಚ್ಚಿನ ತಪಾಸಣೆ ಮತ್ತು ಚಿಕಿತ್ಸೆಗಾಗಿ ದುರ್ಗದ ಸರ್ಕಾರಿ ಆಸ್ಪತ್ರೆಗೋ ಅಥವಾ ತೀರಾ ಅಪರೂಪದ ಸಂದರ್ಭಗಳಲ್ಲಿ ಬೆಂಗಳೂರಿನ ದೊಡ್ಡ ಆಸ್ಪತ್ರೆಗಳಿಗೋ ಕರೆದುಕೊಂಡು ಹೋಗುವಂತೆ ತಾಕೀತು ಮಾಡುತ್ತಿದ್ದರು. ತಮ್ಮ ಚಿಕಿತ್ಸೆಯ ಇತಿಮಿತಿಗಳನ್ನು ಮತ್ತು ವೈದ್ಯಕೀಯ ಜ್ಞಾನದ ಎಲ್ಲೆಗಳನ್ನು ಬಹಳ ಚೆನ್ನಾಗಿ ಗುರುತಿಸಿದ್ದ ವೀರಭದ್ರಪ್ಪ ಡಾಕ್ಟರ್ ತಮ್ಮ ಜ್ಞಾನಕ್ಕೆ ಮೀರಿದ ರೋಗಲಕ್ಷಣಗಳ ಮೇಲೆ ಎಂದೂ ಪ್ರಯೋಗ ಮಾಡಿದವರೇ ಅಲ್ಲ. ಅನೇಕ ವರ್ಷಗಳ ಸೇವಾನುಭವದಿಂದ ಅಪೂರ್ವವಾದ ವೈದ್ಯಕೀಯ ಜ್ಞಾನವೊಂದನ್ನು ಕರಗತ ಮಾಡಿಕೊಂಡಿದ್ದ ಡಾಕ್ಟರ್ ಮೊದಲ ಬಾರಿಗೆ ರೋಗಿಯನ್ನು ಪರೀಕ್ಷಿಸಿದ ಒಡನೆಯೇ ಇದು ತಾವು ಚಿಕಿತ್ಸೆ ನೀಡಲು ಅರ್ಹವಾದ ಖಾಯಿಲೆಯೋ ಅಲ್ಲವೋ ಎನ್ನುವುದನ್ನು ಸುಲಭದಲ್ಲಿ ಗ್ರಹಿಸಿಬಿಡುತ್ತಿದ್ದರು. ಡಾಕ್ಟರ್ ಅವರ ಈ ಬುದ್ಧಿಮತ್ತೆಯ ಕಾರಣವರ್ಷದಿಂದಾಗಿಯೇ ಗಿಡ್ಡತಿಪ್ಪಣ್ಣ ಅವರ ಮೊದಲ ಪತ್ನಿ ಅಕ್ಕನಾಗಮ್ಮ ಮೇಡಂ ಅವರ ಸ್ತನದ ಕ್ಯಾನ್ಸರ್ ಮೊದಲನೇ ಹಂತದಲ್ಲಿಯೇ ಪತ್ತೆಯಾಗಿ ಜೀವ ಉಳಿಯುವ ಹಾಗಾಗಿತ್ತು. ಇದೇ ಬುದ್ದಿವಂತಿಕೆ ಮತ್ತು ಸಮಯಸ್ಫೂರ್ತಿಯ ಮೂರ್ತರೂಪವಾಗಿ ರಾಟೆ ಶರಣಮ್ಮ ಅವರ ಗ್ಯಾಂಗ್ರೀನ್ ನಿಂದ ಕತ್ತರಿಸಬೇಕಾಗಿದ್ದ ಎಡಗಾಲು ಉಳಿದಿತ್ತು. ಇಂತಹುದೇ ಹತ್ತಾರು ಜೀವಗಳನ್ನು ತಮ್ಮ ಜ್ಞಾನ ಮತ್ತು ಅನುಭವದ ಬಲದ ಆಧಾರದ ಮೇಲೆ ಉಳಿಸಿದ ವೀರಭದ್ರಪ್ಪ ಡಾಕ್ಟರ್ ಅವರ ಬುದ್ಧಿಮತ್ತೆಯನ್ನು ಬೆಂಗಳೂರಿನ ಹೆಸರಾಂತ ತಜ್ಞವೈದ್ಯರೇ ಮನಸಾರೆ ಹೊಗಳಿದ್ದುದನ್ನು ಕೇಳಿದ್ದ ನನ್ನ ಎದೆ ಸಹಜವಾಗಿಯೇ ಹೆಮ್ಮೆಯ ಕಾರಣದಿಂದ ಉಬ್ಬಿದ್ದು ಸುಳ್ಳಲ್ಲ. ವರ್ಷದಲ್ಲಿ ಒಮ್ಮೆ, ಅದೂ ಬೇಸಗೆ ಕಾಲದಲ್ಲಿ ಬಿಡದೆ ಕಾಡುತ್ತಿದ್ದ ನನ್ನ ಕುರ ಸಂಬಂಧಿ ಗಾಯಗಳ ಚಿಕಿತ್ಸೆಯನ್ನು ಪೆನ್ಸಿಲಿನ್ ಚುಚ್ಚುಮದ್ದುಗಳ ಮುಖಾಂತರ ವರ್ಷಗಳ ಕಾಲ ಮಾಡಿದ ವೀರಭದ್ರಪ್ಪ, ಐದು ದಿನಗಳ ಡೋಸ್ ನ ಮೊದಲ ಇಂಜೆಕ್ಷನ್ ಕೊಡುವ ಪ್ರತೀ ಬಾರಿಯೂ ನನ್ನ ಎಡ ಮುಂಗೈನ ಒಳಭಾಗಕ್ಕೆ ಅಲ್ಪಪ್ರಮಾಣದ ಟೆಸ್ಟ್ ಡೋಸ್ ನೀಡಿ ಅದರ ಸುತ್ತಲೂ ಒಂದು ಎರಡು ಅಂಗುಲ ಮತ್ತು ಮೂರು ಇಂಚು ಉದ್ದ ಬರುವಂತಿದ್ದ ಆಯತಾಕಾರದ ರಚನೆಯ ಗಾಢವಾದ ಗುರುತನ್ನು ತಮ್ಮ ಶರ್ಟ್ ಜೇಬಿನಲ್ಲಿ ಸದಾ ಇರುತ್ತಿದ್ದ ಇಂಕ್ ಪೆನ್ನಿನಿಂದ ಮಾಡುತ್ತಿದ್ದರು. ಒಂದು ಐದು ನಿಮಿಷಗಳ ಕಾಲ ಹಾಗೆಯೇ ಕೂತಿರಲು ಹೇಳಿ ಆ ನಂತರ ನಾಲಗೆ ದಪ್ಪವಾದಂತೆ ಅನ್ನಿಸುತ್ತಿದೆಯೇ? ಅಥವಾ ತುಟಿಗಳು ದಪ್ಪವಾಗಿರುವ ಹಾಗೆ ಅನ್ನಿಸುತ್ತಿದೆಯೇ? ತಲೆ ಏನಾದರೂ ತಿರುಗಿದ ಹಾಗಾಗುತ್ತಿದೆಯೇ? ಎಂದು ವಿಚಾರಿಸಿದ ನಂತರವೇ ಪೂರ್ಣಪ್ರಮಾಣದ ಚುಚ್ಚುಮದ್ದನ್ನು ನೀಡುತ್ತಿದ್ದರು. ಪೆನ್ಸಿಲಿನ್ ಇಂಜೆಕ್ಷನ್ ನ ಪ್ರತಿಕ್ರಿಯೆಯ ಬಗ್ಗೆ ಅತಿಜಾಗರೂಕತೆಯನ್ನು ಪ್ರದರ್ಶಿಸುತ್ತಿದ್ದ ಡಾಕ್ಟರ್ ಎಂದೂ ಯಾವ ರೋಗಿಗೂ ಏಕಾಏಕಿಯಾಗಿ ಪೆನ್ಸಿಲಿನ್ ಇಂಜೆಕ್ಷನ್ ಕೊಟ್ಟವರಲ್ಲ. ನಮಗೆ ಪೆನ್ಸಿಲಿನ್ ರಿಯಾಕ್ಷನ್ ಆಗದು ಎಂದು ರೋಗಿ, ರೋಗಿಗಳ ಪರಿಜನ ಎಷ್ಟೇ ಪರಿಯಲ್ಲಿ ವಿನಂತಿಸಿಕೊಂಡರೂ ವೀರಭದ್ರಪ್ಪ ಡಾಕ್ಟರ್ ಟೆಸ್ಟ್ ಡೋಸ್ ಗಳ ವಿಷಯದಲ್ಲಿ ಎಂದೂ ತಾತ್ಸಾರ ತೋರಿದವರಲ್ಲ.

ಊರ ಜನರಿಗೆ “ವೈದ್ಯೋ ನಾರಾಯಣ ಹರಿ” ಎನ್ನುವ ಸಾಕ್ಷಾತ್ ರೂಪದಲ್ಲಿ ಗೋಚರಿಸುತ್ತಿದ್ದ ಡಾಕ್ಟರ್ ಅವರ ವೃತ್ತಿಬದುಕು ಮತ್ತು ವೈಯಕ್ತಿಕಬದುಕುಗಳು ವೀರಭದ್ರಪ್ಪ ಅವರ ಪ್ರವೃತ್ತಿಯ ಬದುಕಿಗೆ ತೀರಾ ವ್ಯತಿರಿಕ್ತವಾಗಿದ್ದವು. ನಮ್ಮ ಊರಿಗೆ ಬರುವ ಕೆಲವೇ ತಿಂಗಳುಗಳ ಮೊದಲು ವಿವಾಹಿತ ಜೀವನಕ್ಕೆ ಕಾಲಿಟ್ಟಿದ್ದ ವೀರಭದ್ರಪ್ಪ ತಮ್ಮ ಮಡದಿಯೊಂದಿಗೆ ಊರಿನಲ್ಲಿ ತಮ್ಮ ಸುಖಸಂಸಾರವನ್ನು ಶುರುಮಾಡಿದ್ದರು. ಆದರೆ ಅವರ ಈ ಸಂಸಾರ ಎಲ್ಲರೂ ಭಾವಿಸಿದ್ದಷ್ಟು ಸುಖಪ್ರದವಾಗಿರಲಿಲ್ಲ ಎನ್ನುವುದು ಡಾಕ್ಟರ್ ಮನೆಯಿಂದ ಆಗಾಗ್ಗೆ ಕೇಳಿಬರುತ್ತಿದ್ದ ಗಂಡಹೆಂಡಿರ ಕೂಗಾಟಗಳನ್ನ ಕೇಳಿಕೇಳಿ ರೋಸಿ ಹೋಗಿದ್ದ ಅಕ್ಕಪಕ್ಕದ ಮನೆಯವರ ಹೇಳುವ ಮಾತಾಗಿತ್ತು. ಅದು ಯಾವ ಕಾರಣಕ್ಕೋ ಗಂಡಹೆಂಡಿರಲ್ಲಿ ಮೂಡದ ದಾಂಪತ್ಯ ಸಾಮರಸ್ಯ ದಿನ ಕಳೆದಂತೆ ಕುಗ್ಗುತ್ತಲೇ ಸಾಗಿತ್ತು. ಹೀಗೆ ಕೇವಲ ವೈಯಕ್ತಿಕ ಜೀವನದಲ್ಲಿ ಮಾತ್ರ ಅಲ್ಲದೇ ವೃತ್ತಿ ಜೀವನದಲ್ಲಿಯೂ ತಮ್ಮ ಮೇಲಧಿಕಾರಿಗಳ ಒಂದಿಗೆ ವೀರಭದ್ರಪ್ಪ ನಡೆಸುತ್ತಿದ್ದ ವಾಗ್ವಿವಾದಗಳು, ನಿತ್ಯದ ಜಗಳ ರಂಪಾಟಗಳು ಆಸ್ಪತ್ರೆಗೆ ಹೋಗಿ ಬರುತ್ತಿದ್ದ ಊರಮಂದಿಯ ಕಣ್ಣಗಳನ್ನ ತಪ್ಪಿಸಲು ಆಗುತ್ತಿರಲಿಲ್ಲ. ಒಮ್ಮೆ ರುದ್ರಾನಾಯ್ಕರೊಂದಿಗೆ ನಡೆದ ನಿತ್ಯಜಗಳದ ಪರಿಪಾಠ ಮತ್ತೊಂದು ಮಜಲನ್ನೇ ಮುಟ್ಟಿ ವೀರಭದ್ರಪ್ಪ ಅವರ ಬಲಗೈ ಮುರಿದ ದುರದೃಷ್ಟ ಘಟನೆಯಲ್ಲಿ ಪರ್ಯಸನ ಹೊಂದಿದ್ದು ಬಹಳಷ್ಟು ಊರ ಜನರಿಗೆ ಸುಲಭದಲ್ಲಿ ಅರಗಿಸಿಕೊಳ್ಳಲು ಸಾಧ್ಯವಾಗದ ಸಂಗತಿಯಾಗಿತ್ತು. ಜಗಳದ ಭರದಲ್ಲಿ ರುದ್ರಾ ನಾಯ್ಕ್ ತಮ್ಮೆಡೆಗೆ ಎಸೆದ ಮರದ ಚಿಕ್ಕ ಸ್ಟೂಲೊಂದಕ್ಕೆ ಕೈ ಒಡ್ಡಿ ತಮ್ಮನ್ನು ರಕ್ಷಿಸಿಕೊಂಡ ವೀರಭದ್ರಪ್ಪ ಅವರ ಬಲಗೈ ಮಾತ್ರ ಸ್ಟೂಲು ಹೊಡೆದ ರಭಸಕ್ಕೆ ಮುರಿದು ತುಂಡಾಗಿ ಹೋಗಿತ್ತು. ಈ ಘಟನೆಯಿಂದ ಅಸಾಧ್ಯ ಕೋಪಾವಿಷ್ಟರಾದ ವೀರಭದ್ರಪ್ಪ ಸೀದಾ ಊರಿನ ಪೊಲೀಸ್ ಠಾಣೆಗೆ ಹೋಗಿ ರುದ್ರಾನಾಯ್ಕ್ ಮೇಲೆ ಎಫ್. ಐ.ಆರ್ . ದಾಖಲಿಸಿದ್ದರು. ಈ ಘಟನೆಯ ಬಗ್ಗೆ ಆರೋಗ್ಯಇಲಾಖೆಯ ಹಿರಿಯ ಅಧಿಕಾರಿಗಳಿಂದ ತನಿಖೆ ನಡೆದು ಘಟನೆಯ ಸುಮಾರು ಮೂರು ತಿಂಗಳುಗಳ ಒಳಗಾಗಿ ರುದ್ರಾನಾಯ್ಕ್ ಹಾಗೂ ವೀರಭದ್ರಪ್ಪ ಇಬ್ಬರನ್ನೂ ಊರ ಆಸ್ಪತ್ರೆಯಿಂದ ಎತ್ತಂಗಡಿ ಮಾಡಲಾಯಿತು. ರುದ್ರಾನಾಯ್ಕ್ ಅವರನ್ನು ಪರಶುರಾಮಪುರದ ಆಸ್ಪತ್ರೆಗೆ ವರ್ಗಾಯಿಸಿದರೆ ವೀರಭದ್ರಪ್ಪ ಅವರನ್ನು ತಳುಕಿನ ಆಸ್ಪತ್ರೆಗೆ ವರ್ಗಾಯಿಸಿದರು. ಆಸ್ಪತ್ರೆಯಲ್ಲಿ ಆದ, ಈ ನಡೆಯಬಾರದಿದ್ದ ಘಟನೆಯಿಂದ ರುದ್ರಾನಾಯ್ಕ್ ಮತ್ತು ವೀರಭದ್ರಪ್ಪ ಅವರಿಗೆ ಎಷ್ಟರಮಟ್ಟಿನ ತೊಂದರೆ ಆಯಿತೋ ಬಿಟ್ಟಿತೋ ತಿಳಿಯೆ, ಆದರೆ “ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು” ಎನ್ನುವ ಗಾದೆಯಂತೆ ಇವರೀರ್ವರ ನಡುವಣ ನಡೆದ ಜಗಳದಿಂದ ಊರಜನ ಹಲವು ವಾರಗಳ ಕಾಲ ಸೂಕ್ತಚಿಕಿತ್ಸೆ ಇಲ್ಲದೆ ನರಳಬೇಕಾಗಿ ಬಂದಿತು. ಸಣ್ಣಪುಟ್ಟ ಕಾಯಿಲೆಗಳಿಗೂ ದುರ್ಗದ ಜಿಲ್ಲಾ ಆಸ್ಪತ್ರೆಯನ್ನೇ ಅವಲಂಬಿಸುವ ಪರಿಸ್ಥಿತಿ ಎದುರಾಯಿತು. ವೀರಭದ್ರಪ್ಪ ಡಾಕ್ಟರ್ ಬಲಗೈ ಮುರಿದಿದ್ದುದರಿಂದ ತಮ್ಮ ಎಂದಿನ ಜಂಗಮ ಆಸ್ಪತ್ರೆಯ ವತಿಯಿಂದ ನಡೆಯುವ ನಿತ್ಯದ ಊರಸುತ್ತಾಟಕ್ಕೆ ತಾತ್ಕಾಲಿಕ ವಿರಾಮವನ್ನು ಹೇರಿದ್ದರೆ, ಕಡ್ಡಾಯರಜೆಯ ಮೇಲೆ ತೆರಳಿದ್ದ ರುದ್ರಾನಾಯ್ಕರ ಅನುಪಸ್ಥಿತಿಯೂ ಊರ ಜನರನ್ನು ಕಾಡಿತ್ತು. ಈ ಘಟನೆಯ ಸಂಬಂಧ ವೀರಭದ್ರಪ್ಪ ಅವರ ಬಗ್ಗೆ ತೀವ್ರತರನಾದ ಅನುಕಂಪದ ಪ್ರಬಲ ಅಲೆಯೊಂದು ಸೃಷ್ಟಿಯಾಗಿ, ತುರುವನೂರಿನ “ವಾಟಾಳ್ ನಾಗರಾಜ್” ಎಂದೇ ಪ್ರಖ್ಯಾತರಾಗಿದ್ದ ರೆಡ್ಡಿಜನಾಂಗದ ತಿಪ್ಪೇಸ್ವಾಮಿ ನೇತೃತ್ವದ ಊರಮಂದಿಯ ನಿಯೋಗವೊಂದು ಅಂದಿನ ದುರ್ಗದ ಜಿಲ್ಲಾಧಿಕಾರಿಯವರಾದ ಮಾನ್ಯ ಶಾಂತಕುಮಾರ್ ಅವರನ್ನು ಭೇಟಿಯಾಗಿ, ವೀರಭದ್ರಪ್ಪ ಅವರನ್ನು ಊರಿನ ಆಸ್ಪತ್ರೆಯಲ್ಲಿಯೇ ಮುಂದುವರೆಸಬೇಕು ಎನ್ನುವ ಮನವಿ ಪತ್ರವನ್ನು ಸಲ್ಲಿಸಿ, ಚಳ್ಳಕೆರೆಯ ಆ ಹೊತ್ತಿನ ಶಾಸಕ ಬಿ. ಎಲ್ . ಗೌಡ ಅವರಿಂದಲೂ ಒಂದು ಮಾತು ಹೇಳಿಸಿದ ಪರಿಣಾಮ ಸ್ವರೂಪವಾಗಿ ವೀರಭದ್ರಪ್ಪ ಮತ್ತೆ ನಮ್ಮೂರ ಆಸ್ಪತ್ರೆಯಲ್ಲಿಯೇ ಉಳಿಯುವಂತಾಯಿತು.

ವೃತ್ತಿಜೀವನದಲ್ಲಿ ನಡೆದ ಮೇಲಿನ ದುರ್ಘಟನೆಯ ಹೊತ್ತು ಸಿಕ್ಕ ಜನಬೆಂಬಲ ಮುಂದಿನ ಕೆಲವೇ ತಿಂಗಳುಗಳಲ್ಲಿ ವೀರಭದ್ರಪ್ಪ ಅವರ ವೈಯಕ್ತಿಕ ಜೀವನದಲ್ಲಿ ನಡೆದ ದುರ್ಘಟನೆಯ ಸಂದರ್ಭದಲ್ಲಿ ಸಿಗದೇ ಹೋಗಿದ್ದು ವಿಸ್ಮಯವೇ ಸರಿ. ಅದೊಂದು ದಿನ ಬೆಳಿಗ್ಗೆ, ವೀರಭದ್ರಪ್ಪ ಆಸ್ಪತ್ರೆಯ ಕೆಲಸದಲ್ಲಿ ನಿರತರಾಗಿರುವ ಹೊತ್ತು, ಅವರ ಶ್ರೀಮತಿಯವರ ಮೃತ ದೇಹ ಅನುಮಾನಾಸ್ಪದವಾದ ರೀತಿಯಲ್ಲಿ ಅವರ ಮನೆಯಲ್ಲಿ ದೊರೆತ್ತಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ವಿಷಪ್ರಾಶನದಿಂದ ಮರಣ ಸಂಭವಿಸಿದೆ ಎಂದೂ, ಇದೊಂದು ಆತ್ಮಹತ್ಯಾ ಪ್ರಕರಣ ಎಂದೂ ಪರಿಗಣಿಸಿದ ಪೊಲೀಸರು ಈ ಕೇಸಿಗೆ ಇತಿಶ್ರೀ ಹಾಡಿದರೂ ಡಾಕ್ಟ್ರೇ ತಮ್ಮ ಹೆಂಡತಿಗೆ ವಿಷಪ್ರಾಶನ ಮಾಡಿದ್ದಾರೆ ಎಂದೋ ಅಥವಾ ಯಾವುದೋ ವಿಷಯುಕ್ತ ಚುಚ್ಚುಮದ್ದು ನೀಡುವ ಮೂಲಕ ಪತ್ನಿಯ ಸಾವಿಗೆ ಕಾರಣವಾಗಿದ್ದಾರೆ ಎನ್ನುವ ಗುಸುಗುಸು, ಗುನುಗುನು ಊರ ತುಂಬೆಲ್ಲಾ ಹರಿದಾಡಿತ್ತು. ಸುಮಾರು ಎಂಟುವರ್ಷದ ಹೆಣ್ಣು ಮಗು ಮತ್ತು ನಾಲ್ಕುವರ್ಷದ ಗಂಡು ಮಗುವನ್ನು ಬಿಟ್ಟು ಪರಲೋಕ ಸೇರಿದ ಡಾಕ್ಟರ ಹೆಂಡತಿಯ ಬಗ್ಗೆ ಊರಿಗೆ ಊರೇ ಅನುಕಂಪದ ಹೊಳೆಯನ್ನು ಹರಿಸಿತ್ತು. ಇದರಿಂದ ತಾತ್ಕಾಲಿಕ ರೂಪದಲ್ಲಿ ಊರ ಚಿಕಿತ್ಸಾವಲಯದಲ್ಲಿ ಹಿನ್ನೆಡೆ ಅನುಭವಿಸಿದ ವೀರಭದ್ರಪ್ಪ ಮುಂದಿನ ಕೆಲವೇ ತಿಂಗಳುಗಳಲ್ಲಿ ಮತ್ತೊಮ್ಮೆ ಊರಜನರ ಆದರ, ವಿಶ್ವಾಸಗಳಿಗೆ ಪ್ರಾಪ್ತರಾಗಿ ಎಂದಿನಂತೆ ತಮ್ಮ ವೈದ್ಯಕೀಯ ಸೇವೆಯನ್ನು ಮುಂದುವರೆಸಿಕೊಂಡು ಹೋಗುವಲ್ಲಿ ಸಾಫಲ್ಯ ಹೊಂದಿದರು.

ಮೊದಲ ಹೆಂಡತಿ ಸತ್ತ ಒಂದು ವರ್ಷದ ಒಳಗೇ ಮರು ಮದುವೆಯಾದ ಡಾಕ್ಟರ್ ಮತ್ತೊಮ್ಮೆ ವೈವಾಹಿಕ ಜೀವನದಲ್ಲಿ ಭದ್ರನೆಲೆಯನ್ನು ಕಂಡುಕೊಳ್ಳುವತ್ತ ದೃಢ ಹೆಜ್ಜೆಗಳನ್ನು ಹಾಕಿದರು. ರುದ್ರಾನಾಯ್ಕರ ನಂತರ ಬಂದ ಮತ್ತೋರ್ವ ವೈದ್ಯರೊಟ್ಟಿಗೂ ತಮ್ಮ ಕ್ಯಾತೆಪುರಾಣವನ್ನು ಮುಂದುವರೆಸುತ್ತಲೇ ಸಾಗಿದ ವೀರಭದ್ರಪ್ಪ ಮತ್ತೊಮ್ಮೆ ತಮ್ಮ ತಾಳ ತಪ್ಪಿದ ವೈಯಕ್ತಿಕ ಜೀವನದ ಕಾರಣದಿಂದಾಗಿ ಊರಮಂದಿಯ ಕೆಂಗಣ್ಣಿಗೆ ಗುರಿಯಾದರು. ಮದುವೆಯಾಗಿ ವರ್ಷ ಕಳೆಯುವುದರ ಒಳಗೇ ತನ್ನ ತವರುಮನೆ, ಜಗಳೂರಿನ ಅಣಜಿಗೆ, ಶ್ರಾವಣದ ಬಾಗಿನ ತರಲೆಂದು ತೆರಳಿದ್ದ ಡಾಕ್ಟರ್ ಎರಡನೇ ಪತ್ನಿ ತನ್ನ ತವರುನೆಲದಲ್ಲಿಯೇ ನೇಣಿಗೆ ಕೊರಳೊಡ್ಡಿದ ಸಮಾಚಾರ ಊರ ಜನರಲ್ಲಿ ಡಾಕ್ಟರ್ ಕುರಿತು ಅತೀವವಾದ ಬೇಸರ ಮತ್ತು ಜಿಗುಪ್ಸೆಯನ್ನು ಹುಟ್ಟುಹಾಕಿತ್ತು. ಹೀಗೆ ಪದೇಪದೇ ವೃತ್ತಿ ಮತ್ತು ವೈಯಕ್ತಿಕ ಬದುಕಿನಲ್ಲಿ ಊರಜನ ಊಹಿಸಲೂ ಆಗದಂತಹ ಮಟ್ಟದ ಎಡವಟ್ಟುಗಳನ್ನು ಮಾಡಿಕೊಳ್ಳುತ್ತಲೇ ಸಾಗಿದ್ದ ವೀರಭದ್ರಪ್ಪ ಡಾಕ್ಟರ್ ಬಗೆಗಿನ ಊರ ಅನುಕಂಪದ ಸೆಲೆ ಪೂರ್ಣರೂಪದಲ್ಲಿ ಆವಿಯಾಗಿ ಹೋಗಿತ್ತು. ದಿನೇದಿನೇ ಕುಸಿಯುತ್ತಾ ಸಾಗಿದ್ದ ಅವರ ಸಂಜೆಯ ಜಂಗಮ ಆಸ್ಪತ್ರೆಯ ಸೇವಾಕಾಂಕ್ಷಿಗಳಾಗ ಬಯಸಲು ಊರಜನತೆ ಹಿಂದೆಮುಂದೆ ನೋಡುವಂತಾಯಿತು. ವರ್ಷಗಳ ಕಾಲ ಡಾಕ್ಟರ್ ಕಷ್ಟಪಟ್ಟು ಕಟ್ಟಿದ್ದ ತಮ್ಮ ಮತ್ತು ಊರವರ ನಡುವಣ ನಂಬಿಕೆಯ ಸೇತುವೆ ಬಿರುಕು ಬಿಟ್ಟು ಶಿಥಿಲಾವಸ್ಥೆಯ ಹಂತವನ್ನು ತಲುಪಿಯಾಗಿತ್ತು. ಇವೆಲ್ಲದರ ಫಲಸ್ವರೂಪವಾಗಿ ವೀರಭದ್ರಪ್ಪ ಅವರಿಂದ ಚಿಕಿತ್ಸೆ ಪಡೆಯಲು ಊರಜನ ಹಿಂದೇಟು ಹಾಕತೊಡಗಿದರು. ಅದರಲ್ಲೂ ಊರ ಹೆಂಗಳೆಯರು ಡಾಕ್ಟರ್ ತಮ್ಮ ಮನೆ ಮುಂದಿನಿಂದ ಹಾಯ್ದು ಹೋಗುತ್ತಿದ್ದಾರೆ ಎಂದರೆ ಭೀತಿಯಿಂದ ಓಡುತ್ತಾ ಮನೆಯೊಳಗೆ ಸೇರಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಯಿತು. ಇದೇ ಹೊತ್ತಿನಲ್ಲಿ ಆಸ್ಪತ್ರೆಯಲ್ಲಿ ವೀರಭದ್ರಪ್ಪ ಮಾಡಿಕೊಂಡ ಮತ್ತೊಂದು ಎಡವಟ್ಟಿನಿಂದ ಇಲಾಖಾವಾರು ತನಿಖೆ ನಡೆದು ಶಿಕ್ಷೆಯ ರೂಪದಲ್ಲಿ ಸದೂರದ ಶಿರಾ ಪಟ್ಟಣಕ್ಕೆ ವರ್ಗಾಯಿಸಲ್ಪಟ್ಟ ಡಾಕ್ಟರ್ ಬಗ್ಗೆ ಈ ಬಾರಿ ಊರಲ್ಲಿ ಅನುಕಂಪದ ಸೆಲೆಯ ಮಾತಿರಲಿ, ಈತ ಊರು ಬಿಟ್ಟು ಹೋಗುತ್ತಿರುವುದು ಊರಮಟ್ಟಿಗೆ ಒಳ್ಳೆಯ ಸಂಗತಿಯೇ ಎನ್ನುವ ಗಟ್ಟಿ ಅಭಿಪ್ರಾಯವೊಂದು ಪುರಜನರಲ್ಲಿ ಮೂಡತೊಡಗಿತು. ಹೀಗೆ ಸುಮಾರು ಹದಿನಾರು, ಹದಿನೇಳು ವರ್ಷಗಳ ಕಾಲದ ಸುಧೀರ್ಘ ಸೇವೆಯ ನಂತರ ವೀರಭದ್ರಪ್ಪ ಡಾಕ್ಟರ್ ಊರು ಬಿಡುವ ವೇಳೆಯಲ್ಲಿ ಊರ ಯಾರೊಬ್ಬರಿಗೂ ನಾವು ಏನೋ ಅಮೂಲ್ಯವಾದದ್ದನ್ನು ಕಳೆದುಕೊಳ್ಳುತ್ತಿದ್ದೇವೆ ಎನ್ನುವ ಭಾವನೆಯೇ ಮೂಡಲಿಲ್ಲ. ತಮ್ಮ ಸಾಮಾನು, ಸರಂಜಾಮಿನೊಂದಿಗೆ ಎರಡು ಮಕ್ಕಳನ್ನು ಕಟ್ಟಿಕೊಂಡು ಊರನ್ನು ವೀರಭದ್ರಪ್ಪ ಡಾಕ್ಟರ್ ತೊರೆಯುವ ಹೊತ್ತು ಯಾರೊಬ್ಬರೂ ಅವರ ಸಹಾಯಕ್ಕೆ ಬರುವ ಮಾತು ಬದಿಗಿರಲಿ, ವಿದಾಯವನ್ನೂ ಒಂದು ನುಡಿಯನ್ನೂ ಹೇಳಲು ಮುಂದೆ ಬರಲಿಲ್ಲ.

ಇದಾದ ನಂತರದಲ್ಲಿ ನನಗೆ ವೀರಭದ್ರಪ್ಪ ಡಾಕ್ಟರ್ ಎಂದೂ ಮುಖಾಮುಖಿಯಾಗಲೇ ಇಲ್ಲ. ಅಲ್ಲಿ ಇಲ್ಲಿ ಅವರ ಬಗ್ಗೆ ಕೇಳಿದ ನನಗೆ ಮನನವಾದ ಸಂಗತಿಗಳು ಎಂದರೆ ನಿವೃತ್ತಿಯ ನಂತರದ ಜೀವನವನ್ನು ದಾವಣಗೆರೆ ನಗರದಲ್ಲಿ ಕಳೆಯಲು ಮನಸ್ಸು ಮಾಡಿದ್ದ ವೀರಭದ್ರಪ್ಪ ನಮ್ಮ ಊರನ್ನು ಬಿಟ್ಟ ತರುವಾಯದಲ್ಲಿ ಮತ್ತೆ ಎರಡು ಬಾರಿ ಹಸಿಮಣೆಯನ್ನು ತುಳಿದಿದ್ದರು. ಮೂರನೇ ಮಡದಿ ಬಾವಿಗೆ ಬಿದ್ದು ಮೃತಪಟ್ಟಿದ್ದಲ್ಲಿ ಮೊದಲ ಮೂವರ ಹಾದಿ ಹಿಡಿಯಲು ಇಷ್ಟಪಡದ ನಾಲ್ಕನೇ ಮಡದಿ ವೀರಭದ್ರಪ್ಪನವರನ್ನು ಬಿಟ್ಟು ಓಡಿ ಹೋಗಿದ್ದಳು. ಮೊದಲ ಹೆಂಡತಿಯಲ್ಲಿಯಷ್ಟೇ ಸಂತಾನಭಾಗ್ಯ ಕಂಡಿದ್ದ ವೀರಭದ್ರಪ್ಪ ಅವರ ಮಗಳು ದಾವಣಗೆರೆ ಮೆಡಿಕಲ್ ಕಾಲೇಜಿನಲ್ಲಿ ಓದಿ ವೈದ್ಯೆಯಾಗಿ ಮಲೆನಾಡಿನ ಯಾವುದೋ ಒಂದು ಹಳ್ಳಿಯಲ್ಲಿ ಸರ್ಕಾರಿ ವೈದ್ಯಸೇವೆಯಲ್ಲಿ ತೊಡಗಿಸಿಕೊಂಡಿದ್ದಳು. ಡಾಕ್ಟರ್ ಮಗನ ಬಗ್ಗೆ ನನಗೆ ಹೆಚ್ಚೇನೂ ಮಾಹಿತಿ ಸಿಗಲಿಲ್ಲ. ತನ್ನ ತಂದೆಯ ಮೂರಾಬಟ್ಟೆಯಾದ ವೈಯಕ್ತಿಕ ಬದುಕಿಗೆ ಬಹಳ ಹತ್ತಿರದ ಸಾಕ್ಷಿಯೆನಿಸಿದ ಮಗಳು, ಈ ಎಲ್ಲಾ ಘಟನೆಗಳ ನಂತರವೂ ತಂದೆಯನ್ನು ಆದಮ್ಯವಾಗಿ ಪ್ರೀತಿಸುತ್ತಿದ್ದಾಳೆ ಮತ್ತು ಬಹಳ ಹಚ್ಚಿಕೊಂಡಿದ್ದಾಳೆ ಎನ್ನುವ ವಿಷಯ ಕೇಳಿದವನಿಗೆ ಅದು ಯಾವ ಕಾರಣದಿಂದಲೋ ಹೃದಯಕ್ಕೆ ಬಹಳ ಬಲವಾಗಿ ತಾಗಿತ್ತು.

ವೀರಭದ್ರಪ್ಪ ಡಾಕ್ಟರ್ ಜೀವನದ ಕುರಿತು ಒಟ್ಟಂದದ ವ್ಯಾಖ್ಯೆಯೊಂದನ್ನು ನೀಡುವ ಪ್ರಯತ್ನದಿಂದ ನಾನು ದೂರ ಉಳಿದರೇ ಚೆನ್ನ ಎನ್ನಿಸುತ್ತಿದೆ. ಕಾಮನಬಿಲ್ಲನ್ನು ಮೀರಿದ ವರ್ಣವೈವಿಧ್ಯಗಳಿರುವ ವೀರಭದ್ರಪ್ಪ ಅವರ ಬದುಕನ್ನು ನಾನು ಸಾಕಷ್ಟು ಸನಿಹದಿಂದ ಕಂಡಿದ್ದೇನೆ. ಯಾವ ಒಂದು ನೆಲೆಯಿಂದ ಅವರ ವ್ಯಕ್ತಿತ್ವದ ಟಿಪ್ಪಣಿಗೆ ಇಳಿದರೂ ಅದು ಅವರಿಗೆ ನಾನು ಸಲ್ಲಿಸಬೇಕಾದ ಪೂರ್ಣಸ್ವರೂಪದ ನ್ಯಾಯವಾಗಿ ಕಾಣುತ್ತಿಲ್ಲ. ವಿಷ ಕುಡಿದು, ತೀವ್ರ ಅಸ್ವಸ್ಥನಾಗಿದ್ದ ಅರ್ಚಕರ ಇಷ್ಟಲಿಂಗಯ್ಯ ಅವರ ಮಗ ಗೌರಯ್ಯನನ್ನು ದುರ್ಗದ ಜಿಲ್ಲಾ ಆಸ್ಪತ್ರೆಗೆ ರಾತ್ರೋರಾತ್ರಿ ಸಾಗಿಸಿ, ಒಂದು ಹಗಲೂರಾತ್ರಿ ಅವನ ಮಗ್ಗುಲಲ್ಲೇ, ಎವೆಯಿಕ್ಕದೆ ಕುಳಿತು ಗೌರಯ್ಯನ ಬಳಿ ಯಮದೂತರು ಬಾರದ ಹಾಗೆ ಕಾದು, ಅವನನ್ನು ಮೃತ್ಯುವಿನ ದವಡೆಯಿಂದ ಹೊರ ಸೆಳೆದುಕೊಂಡು ಬಂದ ವೀರಭದ್ರಪ್ಪ ವಿಷಪ್ರಾಶನದ ಮೂಲಕ ತನ್ನ ಹೆಂಡತಿಯ ಜೀವ ತೆಗೆದರು ಎನ್ನುವ ಮಾತಿನಲ್ಲಿ ಎಷ್ಟು ಹುರುಳಿರಬಹುದು? ನನಗೆ ನೋವಾದೀತು ಎನ್ನುವ ಆತಂಕದೊಂದಿಗೇ ತುಂಬಾ ನಾಜೂಕಾಗಿ ಸೂಜಿಮದ್ದು ನೀಡುತ್ತಿದ್ದ ಡಾಕ್ಟರ್ ಪತ್ನಿಪೀಡಕರಾಗಿದ್ದರು ಎಂದರೆ ನಂಬುವುದು ಹೇಗೆ? ಬುಕೀಟ್ಲ ಭೀಮಣ್ಣನ ಮಗ ರಾಮಣ್ಣ ಬೆಂಕಿ ಅವಘಡವೊಂದರಲ್ಲಿ ಮಾಡಿಕೊಂಡ ಸುಟ್ಟಗಾಯಗಳ ಮೇಲೆ ಮುಲಾಮನ್ನು ನಯವಾಗಿ ಹೆಚ್ಚುತ್ತಲೇ ಅವನ ಶೀಘ್ರ ಚೇತರಿಕೆಗೆ ಹಾತೊರೆಯುತ್ತಿದ್ದ ವೀರಭದ್ರಪ್ಪ ತಮ್ಮ ಕೈಯಾರೆ ತಮ್ಮ ಪತ್ನಿಯರ ಶರೀರದ ಮೇಲೆ ಕಾದಸಲಾಕೆಯ ಬರೆಗಳನ್ನು ಹಾಕುತ್ತಿದ್ದರು ಎನ್ನುವ ಮಾತುಗಳಿಗೆ ಯಾವ ಮಟ್ಟದ ಮನ್ನಣೆ ನೀಡಬೇಕು? ಊರ ಸರ್ವ ಜನತೆಯೊಟ್ಟಿಗೆ ಬಹಳ ಸಜ್ಜನಿಕೆಯಿಂದ ವರ್ತಿಸುತ್ತಿದ್ದ ಮೃದುಮಾತಿನ ಧಣಿ ವೀರಭದ್ರಪ್ಪ ತಮ್ಮ ವೃತ್ತಿ ಜೀವನದಲ್ಲಿ ಮೇಲಧಿಕಾರಿಗಳಿಗೆ ಸಿಂಹಸ್ವಪ್ನವಾಗಿದ್ದರು, ಕಠಿಣಾತಿಕಠಿಣ ಶಬ್ದಗಳ ಮುಖೇನ ಅವರನ್ನು ವಾಚಾಮಗೋಚರ ನಿಂದಿಸುತ್ತಿದ್ದರು ಎಂದರೆ ನಂಬುವುದು ಹೇಗೆ? ಎಂತಹ ತುರ್ತು ಸಂದರ್ಭಗಳಲ್ಲಿಯೂ ತನ್ನ ತಾಳ್ಮೆಯನ್ನು ರವಷ್ಟೂ ಕಳೆದುಕೊಳ್ಳದ ವೀರಭದ್ರಪ್ಪ ಅದೊಮ್ಮೆ ಜಯಾನಂದಯ್ಯ ಅವರ ಶರ್ಟನ್ನು ಆಸ್ಪ್ರತೆಯಲ್ಲಿ ಆದ ಒಂದು ಸಣ್ಣಜಗಳವೊಂದರ ವೇಳೆ ಹರಿದು ಚಿಂದಿಚಿಂದಿ ಮಾಡಿದ್ದರು ಎಂದರೆ ಅದನ್ನು ಸುಲಭದಲ್ಲಿ ನಂಬುವುದಕ್ಕಾದೀತೆ? ರೋಗಿಗಳ ಕಡೆಯಿಂದ ಯಾವ ಹೆಚ್ಚಿನ ಪ್ರತಿಫಲವನ್ನು ಬಯಸದೇ ಅವರು ಕೊಡಮಾಡಿದ ಸಂಭಾವನೆಯಲ್ಲಿಯೇ ತೃಪ್ತಿಪಟ್ಟುಕೊಳ್ಳುತ್ತಿದ್ದ ವೀರಭದ್ರಪ್ಪ ತಮ್ಮ ಪತ್ನಿಯರನ್ನು ವರದಕ್ಷಿಣೆ ಹಣಕ್ಕಾಗಿ ವಿಪರೀತ ಪೀಡಿಸುತ್ತಿದ್ದರು, ಅವರ ಯಶಸ್ಸು ಕಾಣದ ವಿವಾಹಗಳ ಹಿಂದಿನ ಮೂಲಕಾರಣ ಇದೇ ಎಂದು ಆಡಿಕೊಳ್ಳುತ್ತಿದ್ದ ಊರಜನ ಹಣದ ವಿಷಯದಲ್ಲಿ ಅತ್ಯಂತ ಹೆಚ್ಚಿನ ಸಂಯಮವನ್ನು ಪ್ರದರ್ಶಿಸಿದ್ದ ಡಾಕ್ಟರ್ ಅವರ ಧಾರಾಳ ಗುಣವನ್ನು ಹೀಗೆಯೂ ಗೇಲಿಯ ಗೋಜಲಿಗೆ ಒಳಪಡಿಸಿದ್ದು ಸಮಂಜಸವೇ? ಒಬ್ಬ ವ್ಯಕ್ತಿ ಒಂದೇ ಸಮಯದಲ್ಲಿ ಹತ್ತಾರು ಮುಖಗಳನ್ನು ತನ್ನ ಮನಸ್ಸಿನಲ್ಲಿ ಹುದುಗಿಸಿಕೊಂಡು, ಸಮಯಕ್ಕೆ ತಕ್ಕಂತೆ ತನ್ನ ಮುಖಗಳ ಅನಾವರಣ ಮಾಡುತ್ತಾ ಸಾಗುವ ಇಬ್ಬಂದಿ ಜೀವನ ಎನ್ನುವ ಪರಿಭಾಷೆಗೂ ಮೀರಿದ ಬಹುರೂಪಿ ಮುಖಗಳ ಜೀವನವನ್ನು ಡಾಕ್ಟರ್ ವ್ಯಥಿಸಿದ ಸಾಧ್ಯತೆಗಳೇನಾದರೂ ಇವೆಯಾ? ಮನುಷ್ಯನ ಆಂತರ್ಯದಲ್ಲಿ ನಡೆಯುವ ಮಾನಸಿಕ ತುಮುಲಗಳು ಜಾಗತಿಕ ತಾಪಮಾನದ ಕಾರಣ ಸಂಭವಿಸುತ್ತಿರುವ ಭೌಗೋಳಿಕ, ಸೃಷ್ಟಿವಿನಾಶಕ ತುಮುಲಗಳ ತುಲನೆಯಲ್ಲಿ ಹಲವು ಪಟ್ಟು ಹೆಚ್ಚಾದ ಪರಿಣಾಮವನ್ನು ಆ ವ್ಯಕ್ತಿಯ ಅಂತರಂಗದ ಮೇಲೆ ಬೀರುವಷ್ಟು ಪರಿಣಾಮಕಾರಿಯಾದವುಗಳೇ? ಮನುಷ್ಯ ಒಳಗೊಂದು, ಹೊರಗೊಂದು ಎನ್ನುವ ಅಷ್ಟೂ ಅಷ್ಟ ಮುಖಗಳನ್ನು, ಎಷ್ಟು ಕಾಲ ಯಶಸ್ವಿಯಾಗಿ, ಒಂದಕ್ಕೊಂದು ಘರ್ಷಿಸದ ಹಾಗೆ ನಿಭಾಯಿಸಬಲ್ಲ? ಅಥವಾ ಡಾಕ್ಟರ್ ನನ್ನ ಅಥವಾ ಮನುಕುಲದ ಅರಿವಿಗೂ ಮೀರಿದ ಯಾವುದೋ ಒಂದು ಮನೋವ್ಯಾಧಿಯ ಶಿಕಾರಿಯೂ ಆಗಿರಬಾರದೇಕೆ? ಕಟ್ಟಕಡೆಯದಾಗಿ, ವೀರಭದ್ರಪ್ಪ ಅವರ ವೃತ್ತಿ, ವೈಯಕ್ತಿಕ ಬದುಕಿನಲ್ಲಿ ಘಟಿಸಿದ ಘಟನೆಗಳು ಪೂರ್ಣತಃ ಕಾಕತಾಳೀಯವಾಗಿದ್ದು ಅವರನ್ನು ಅರ್ಥೈಸಿಕೊಳ್ಳುವಲ್ಲಿ ಸಮಷ್ಟಿಮಟ್ಟದಲ್ಲಿ ಲೋಗರು ಎಡವಿದರೆ? ಈ ಕಾಕತಾಳೀಯತೆಯ ಒಡಲಲ್ಲಿ ವೀರಭದ್ರಪ್ಪ ಒಂದು ಕೋನದಿಂದ ಹಿಟ್ಲರನ್ನು ಹೋಲುತ್ತಿದ್ದದ್ದೂ ಶಾಮೀಲಾಗಿದೆಯೇ? ತಂದೆಯ ಎಲ್ಲಾ ತಿಕ್ಕಲುತನಗಳಿಗೂ, ಎಡವಟ್ಟುಗಳಿಗೂ ಸಾಕ್ಷಿಪ್ರಜ್ಞೆಯಾದ ಸುಶಿಕ್ಷಿತ ಮಗಳು ಅಪ್ಪನನ್ನು ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ವಿಸಂಗತಿ ಮತ್ತೇನನ್ನೋ ಹೇಳುವ, ಮತ್ತೆತ್ತಲೋ ಬೆಟ್ಟುಮಾಡುವ ಪ್ರಯತ್ನ ಮಾಡುತ್ತಿದೆಯಾ? ವೀರಭದ್ರಪ್ಪ ಅವರ ವ್ಯಕ್ತಿತ್ವದ ಬಗ್ಗೆ ಹೊಸದೊಂದು ಹೊಳವು ಅಥವಾ ಆಯಾಮವನ್ನು ಉಜಾಗರಗೊಳಿಸುವಷ್ಟು ಶಕ್ತಿಶಾಲಿಯಾಗಿ ಉಳಿದಿದೆಯೇ ತಂದೆ ಮತ್ತು ಮಗಳ ಮಧುರ ಬಾಂಧವ್ಯ? ಮೃದುಸ್ವಭಾವದ, ಜಂಗಮ ಸೇವಾಕಾಂಕ್ಷಿಯಾದ ಆತ್ಮಕ್ಕೆ ಅನಂತನೋವನ್ನು ಕೊಟ್ಟಂತಹ ಪಾಪಪ್ರಜ್ಞೆಗೆ ನನ್ನೂರ ಅಂದಿನ ಸಮಾಜ ಎರವಾಯಿತೇ? ಇಂತಹ ಉತ್ತರಗಳೇ ಇಲ್ಲದ, ಕೊನೆಮೊದಲನ್ನು ಮೀರಿದ ಅನಂತಾನಂತ ಪ್ರಶ್ನೆಗಳು ಎದ್ದಿರುವ ಈ ಹೊತ್ತು “ವೈದ್ಯೋ ನಾರಾಯಣ ಹರಿ” ಎನ್ನುವ, ನನಗೆ ಪ್ರೀತಿಪಾತ್ರವಾದ ರೂಪವನ್ನಷ್ಟೆ ಧಾರಣೆಮಾಡಿದ ವೀರಭದ್ರಪ್ಪ ಡಾಕ್ಟರ್ ಅವರ ಸವಿನೆನಪನ್ನಷ್ಟೆ ನನ್ನ ಹೃದಯದ ಹಂದರದಲ್ಲಿ ಎಂದೂ ಜಾಗೃತವಾಗಿಡಲು ಬಯಸುತ್ತೇನೆ.

 

Girl in a jacket
error: Content is protected !!