ವಿರೂಪಾಕ್ಷ ಬೀದಿಯ ಮಂಟಪಗಳಲ್ಲಿ ಕೈಗೊಂಡ ಬಜಾರುಗಳ ಅಧ್ಯಯನ
ಮುಂದುವರಿದ ಭಾಗ. . . . .
ಅದೇ ತಾನೇ ಕೋಟಿಲಿಂಗವನ್ನು ನೋಡಲು ನದಿಗೆ ಇಳಿಯುವ ದುಸ್ಸಾಹಸಕ್ಕೆ ಕೈಹಾಕಿದ್ದೆವಲ್ಲಾ, ಅದೂ ಈಜುಬಾರದ ಗೆಳೆಯ ರೇಣುಕಾಪ್ರಸಾದ್ ಜೊತೆ. ಅಜ್ಜಿಯ ಮಾತು ಕೇಳದೆ ಕೋಟಿಲಿಂಗ ನೋಡಲು ನದಿಗೆ ಏನಾದರೂ ಇಳಿದಿದ್ದರೆ, ಉಕ್ಕಿ ಹರಿಯುವ ಪ್ರವಾಹದಲ್ಲಿ ಸಿಕ್ಕಿಕೊಂಡಿದ್ದರೆ, ನಮ್ಮಿಬ್ಬರ ಸ್ಥಿತಿ ಏನಾಗುತ್ತಿತ್ತು? ಅದನ್ನು ನೆನೆದು ಭಯಭೀತನಾದೆ. ಅಬ್ಬಾ ನಿಜಕ್ಕೂ ಬದುಕಿದೆವು ಎಂದು ಸಾವರಿಸಿಕೊಂಡೆನು. ಅದೂ ನಮ್ಮನ್ನು ಬದುಕಿಸಿದ್ದು ಬಾಳೆಹಣ್ಣು, ತೆಂಗಿನಕಾಯಿ ಮಾರುವ ಅಜ್ಜಿ. ಹಂಪೆಯ ಅಧಿದೇವತೆ ಪಂಪಾದೇವಿಯೇ ಅಜ್ಜಿಯ ರೂಪದಲ್ಲಿ ನಮ್ಮಿಬ್ಬರ ಜೀವವನ್ನು ಉಳಿಸಿದಳೆಂಬಂತೆ ಭಾಸವಾಯಿತು.
ಅಂದು ನಮ್ಮಿಬ್ಬರ ಜೀವ ಉಳಿಸಿದ ಮಹಾತಾಯಿಗೆ ನೂರುನಮನಗಳು. ಇಂದಿಗೂ ಕೋಟಿಲಿಂಗ ದರ್ಶನದ ನೆನಪಾದರೆ ಸಾಕು, ಮೈ ಬೆವರುತ್ತದೆ. ತುಂಗಭದ್ರೆಯ ಪ್ರವಾಹವು ದಿನೇ ದಿನೇ ಹೆಚ್ಚುತ್ತಿದ್ದರಿಂದ ವಿಶ್ವವಿದ್ಯಾಲಯವು ಮತ್ತೊಮ್ಮೆ ಪ್ರವಾಹದ ಸುಳಿಗೆ ಸಿಕ್ಕಿಹಾಕಿಕೊಳ್ಳುವುದನ್ನು ಅರಿತ ಕುಲಪತಿಗಳು ಜುಲೈ ೨೪, ೧೯೯೪ರ ಹೊತ್ತಿಗೆ ವಿದ್ಯಾರಣ್ಯ ಆವರಣಕ್ಕೆ ಇಲಾಖೆಗಳನ್ನು ಸ್ಥಳಾಂತರ ಮಾಡಿಸಿದರು. ಹೊಸ ಕ್ಯಾಂಪಸ್ಸಿನಲ್ಲಿ ನಿರ್ಮಾಣಗೊಳ್ಳುತ್ತಿದ್ದ ಕಟ್ಟಡವಾದ ಕಾಯಕದ ಮನೆಯು ಆಡಳಿತಾಂಗವಾದರೆ ಮತ್ತು ಅರ್ಧಂಬರ್ಧ ಕಟ್ಟಲಾಗಿದ್ದ ತ್ರಿಪದಿಯು ಎಲ್ಲ ಅಧ್ಯಯನ ವಿಭಾಗಗಳ ಕೇಂದ್ರವಾಯಿತು. ವಿದ್ಯಾರಣ್ಯ ಆವರಣಕ್ಕೆ ಬಂದಾಗ ಕೊಟ್ಟ ಆಶ್ರಯವಾದ ತ್ರಿಪದಿಯೇ ಇಂದಿಗೂ ನಮ್ಮ ವಿಭಾಗದ ಕಟ್ಟಡವಾಗಿ ಉಳಿದಿದೆ. ಇದಕ್ಕಿಂತ ಸಂತಸದ ಸಂಗತಿ ಬೇರಿದೆಯೇ. ಇದೇ ತ್ರಿಪದಿ ೧೯೯೪ರಲ್ಲಿ ಇಡೀ ವಿಶ್ವವಿದ್ಯಾಲಯದ ಎಲ್ಲ ಅಧ್ಯಾಪಕ, ಸಂಶೋಧಕರ ನೆಲೆವೀಡಾಗಿತ್ತೆಂದರೆ ಇಂದಿನವರಿಗೆ ಆಶ್ಚರ್ಯವಾಗದಿರದು. ಇಂದು ವಿಶ್ವವಿದ್ಯಾಲಯದ ಆವರಣದಲ್ಲಿ ಅನೇಕ ಕಟ್ಟಡಗಳು ಮೈದಳೆದಿವೆ. ಪ್ರತಿಯೊಂದು ಇಲಾಖೆ ಮತ್ತು ವಿಭಾಗಗಳಿಗೂ ಒಂದೊಂದು ಕಟ್ಟಡಗಳಿವೆ. ವಿಶ್ವವಿದ್ಯಾಲಯವು ಕಳೆದ ೨೮ ವರ್ಷಗಳಲ್ಲಿ ತುಂಗಭದ್ರಾ ನದಿಯ ನೀರಿನಂತೆ ಪ್ರತಿವರ್ಷ ನೂರಾರು ವಿದ್ಯಾರ್ಥಿಗಳು ಬಂದುಹೋಗಿದ್ದಾರೆ. ಇಲ್ಲಿಯೇ ನನ್ನ ಹಂಪೆಯ ಬಜಾರುಗಳು ಎಂಬ ಆಧ್ಯಯನವನ್ನು ಪೂರೈಸಿ ಎಂ.ಫಿಲ್. ಪದವಿ ಪಡೆದದ್ದು.
ಹಂಪೆಯ ಬಜಾರುಗಳು ಎಂಬುದು ರಾಜಧಾನಿ ವಿಜಯನಗರದ ಪ್ರಸಿದ್ಧ ಏಳು ಬಜಾರುಗಳನ್ನು ಕುರಿತ ಅಧ್ಯಯನ. ಈ ಬಜಾರುಗಳನ್ನು ಶಾಸನಗಳು ಪೇಟೆ, ಅಂಗಡಿವೀದಿ, ಆಪಣವೀದಿ ಎಂದೇ ಕರೆದಿವೆ. ಇವು ವಿಜಯನಗರ ಏಕೆ, ಮಧ್ಯಯುಗೀನ ದಕ್ಷಿಣ ಭಾರತದ ಪ್ರಮುಖ ಮಾರುಕಟ್ಟೆಗಳೂ ಆಗಿದ್ದವು. ಅವುಗಳೆಂದರೆ ವಿರೂಪಾಕ್ಷ ಬಜಾರು, ಅಚ್ಯುತಾಪೇಟೆ, ಕೃಷ್ಣಾಪುರದ ದವಸದಂಗಡಿ ಪೇಟೆ, ಪಾನ್ಸುಪಾರಿ ಬಜಾರು, ವಿಠಲ ಬಜಾರು, ವರದರಾಜಮ್ಮನ ಪಟ್ಟಣ, ಮಾಲ್ಯವಂತ ಬಜಾರಗಳಾಗಿವೆ. ಇವು ಅಂದಿನ ಸಾಮಾಜಿಕ, ಆರ್ಥಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಪ್ರಮುಖ ಕೇಂದ್ರಗಳೂ ಹೌದು. ಈ ಬಜಾರುಗಳು ಪಟ್ಟಣದ ಮುಖ್ಯ ದೇವಾಲಯಗಳ ಮುಂಭಾಗದಲ್ಲಿ ಇರುವುದು ವಿಶೇಷ.
ಇವುಗಳ ಸುತ್ತಲೂ ವಸತಿ ಪ್ರದೇಶಗಳು ಆವರಿಸಿವೆ. ವಿಜಯನಗರ ಕಾಲದಲ್ಲಿ ದೇವಾಲಯಗಳೆಂದರೆ ಅದು ಒಂದು ಊರೇ ಆದಂತಿತ್ತು. ಇದಕ್ಕೆ ಇಂದಿಗೂ ಜೀವಂತವಾಗಿರುವ ಮಧುರೆಯ ಮೀನಾಕ್ಷಿ ದೇವಾಲಯವನ್ನು ಉದಾಹರಿಸಬಹುದು. ಹಂಪೆಯಲ್ಲೂ ಇದೇ ಸ್ಥಿತಿಯಿತ್ತು. ಸಾಮ್ರಾಜ್ಯದ ವ್ಯಾಪಾರ ವಹಿವಾಟನ್ನು ವ್ಯವಸ್ಥೆಗೊಳಿಸಲು ರಾಜಧಾನಿಯಲ್ಲಿ ಹರಿಹರ ಮತ್ತು ಪ್ರೌಢದೇವರಾಯನ ಕಾಲದಿಂದ ಬೀದಿಯುದ್ದಕ್ಕೂ ಸಾಲುಮಂಟಪಗಳನ್ನು ನಿರ್ಮಿಸಲಾಯಿತು. ಹೀಗೆ ನಿರ್ಮಾಣವಾದ ಬಜಾರುಗಳು ಒಂದೊಂದು ಉಪನಗರಗಳೂ ಆಗಿದ್ದವು. ಇಂದಿನ ಆಧುನಿಕ ನಗರಗಳನ್ನು ಹೇಗೆ ಉಪನಗರ, ಬಡಾವಣೆಗಳನ್ನಾಗಿ ವಿಂಗಡಿಸಿ ಅವುಗಳಿಗೆ ಹೆಸರುಗಳನ್ನು ಸೂಚಿಸುತ್ತಾರೆಯೋ, ಇದೇ ಪದ್ಧತಿಯನ್ನು ಐದನೂರು ವರ್ಷಗಳ ಹಿಂದೆ ಹಂಪೆಯು ತನ್ನ ನಗರದಲ್ಲಿ ಅನುಸರಿಸಿತ್ತು. ಅವೇ ವಿರೂಪಾಕ್ಷಪುರ, ಅಚ್ಯುತಾಪುರ, ವಿಠ್ಠಲಾಪುರ, ಕೃಷ್ಣಾಪುರ, ವರದರಾಜಮ್ಮನ ಪಟ್ಟಣ, ತಿರುಮಲಾದೇವಿಪಟ್ಟಣಗಳು. ಈ ಪುರ, ಪಟ್ಟಣಗಳನ್ನು ಒಳಗೊಂಡ ನಗರವೇ ವಿದ್ಯಾನಗರ ಅಥವಾ ವಿಜಯನಗರ ಪಟ್ಟಣ. ಈ ಪುರ-ಪಟ್ಟಣಗಳ ಆಡಳಿತವನ್ನು ಪಟ್ಟಣಸ್ವಾಮಿ ಎಂಬ ಅಧಿಕಾರಿಗಳಿದ್ದರು. ಹಂಪೆಯಲ್ಲಿ ಬಜಾರುಗಳು ಮಾತ್ರವಲ್ಲದೆ, ಪಟ್ಟಣದ ವಿವಿಧ ಭಾಗಗಳಲ್ಲಿ ಬಿಡಿ ಬಿಡಿಯಾದ ಮಾನ್ಯದಂಗಡಿಗಳೂ ಇದ್ದವು. ಬಜಾರುಗಳು ನಿರ್ದಿಷ್ಟ ದಿನದಂದು ಕಾರ್ಯವಹಿಸುತ್ತಿದ್ದರೆ, ಅಂಗಡಿಗಳು ಅವಶ್ಯಕ ವಸ್ತುಗಳನ್ನು ದಿನನಿತ್ಯವೂ ಮಾರಾಟ ಮಾಡುತ್ತಿದ್ದವು. ಹಂಪೆಯ ಬಜಾರುಗಳಲ್ಲಿ ದೊಡ್ಡ ದೊಡ್ಡ ಪುಷ್ಕರಣಿಗಳಿದ್ದು, ಇವು ಹಬ್ಬ-ಹರಿದಿನ, ಜಾತ್ರೆ-ಉತ್ಸವಗಳಲ್ಲಿ ತೆಪ್ಪೋತ್ಸವದ ಕೊಳಗಳೂ ಆಗಿದ್ದವು. ಹಾಗೆಯೇ ಬಜಾರುಗಳಲ್ಲಿ ಮಠಗಳೂ ಇದ್ದವು.
ವಿದೇಶಿ ಪ್ರವಾಸಿಗರು ಹೇಳುವಂತೆ ಬಜಾರುಗಳಲ್ಲಿ ಎಲ್ಲ ಬಗೆಯ ಸರಕು ಸರಂಜಾಮುಗಳಲ್ಲದೆ ಮುತ್ತು, ರತ್ನ, ವಜ್ರ, ವೈಢೂರ್ಯಗಳನ್ನು ಮಾರಾಟ ಮಾಡಲಾಗುತ್ತಿತ್ತು. ಇದಕ್ಕೆ ರಜಾಕ್ ಹೇಳುವಂತೆ, ಬೇರೆ ಬೇರೆ ಕಸುಬಿಗೆ ಸೇರಿದ ವರ್ತಕರ ಅಂಗಡಿಗಳು ಬೇರೆ ಬೇರೆ ಇವೆ. ರತ್ನಪಡಿ ವ್ಯಾಪಾರಿಗಳು ಅಂಗಡಿ ಬೀದಿಗಳಲ್ಲಿ ಬಹಿರಂಗವಾಗಿ ವಜ್ರವೈಢೂರ್ಯಗಳನ್ನೂ, ಮುತ್ತುರತ್ನಗಳನ್ನೂ ಮಾರುತ್ತಾರೆ. ಈ ಸಂಪತ್ತು ಎಲ್ಲಿಂದ ಬರುತ್ತಿತ್ತೆಂಬುದನ್ನು ಬಾರ್ಬೊಸಾ ಹೇಳುತ್ತಾ, ಶ್ರೀಲಂಕಾದಲ್ಲಿ ವಜ್ರದ ಗಣಿ ಇದ್ದು, ಅಲ್ಲಿಂದ ಬಂದ ವಜ್ರ-ವೈಢೂರ್ಯಗಳು ಇಲ್ಲಿ ದೊರೆಯುತ್ತಿದ್ದವು. ಶ್ರೀನಾಥನು, ನೆಲ್ಲೂರಿನ ಅವಚಿ ತಿಪ್ಪಯ್ಯಸೆಟ್ಟಿ ಎಂಬ ವಿದೇಶಿ ವ್ಯಾಪಾರಿಯಿದ್ದು, ಈತ ಜಲನಾಗಿಯಿಂದ ಚಿನ್ನ, ಪಂಜಾಬಿನಿಂದ ಕರ್ಪೂರ, ಶ್ರೀಲಂಕಾದಿಂದ ಆನೆ, ಓರ್ಮಜ್ನಿಂದ ಕುದುರೆ, ಜೋಟಂಗಿಯಿಂದ ಕಸ್ತೂರಿ, ಚೀನಾದಿಂದ ರೇಷ್ಮೆ ಇನ್ನು ಮುಂತಾದ ವಸ್ತುಗಳನ್ನು ಆಮದು ಮಾಡಿಕೊಂಡು ವಿಜಯನಗರದ ಹರಿಹರರಾಯ, ಬಹುಮನಿ ಸುಲ್ತಾನ ಪಿsರೋಜ್ ಷಾ, ಒರಿಸ್ಸಾದ ಗಜಪತಿಗೆ ಮಾರಾಟ ಮಾಡುತ್ತಿದ್ದ ಎಂದಿರುವನು. ಬಾರ್ಬೊಸಾ, ಓರ್ಮಸ್ ರಾಜ್ಯದಿಂದ ಕುದುರೆಗಳನ್ನು ಹೊತ್ತುಕೊಂಡು ಅನೇಕ ಹಡಗುಗಳು ಗೋವಾಕ್ಕೆ ಬರುತ್ತವೆ. ಕುದುರೆಗಳನ್ನು ಕೊಳ್ಳಲು ನರಸಿಂಗುವಾ ಮತ್ತು ದಖನ್ ರಾಜ್ಯಗಳಿಂದ ಅನೇಕ ವರ್ತಕರು ಇಲ್ಲಿಗೆ ಬರುತ್ತಾರೆ ಎಂದಿದ್ದಾನೆ. ವಿಜಯನಗರದೊಂದಿಗೆ ವ್ಯಾಪಾರ ಸಂಬಂಧ ಹೊಂದಿದ್ದ ದೇಶಗಳೆಂದರೆ ಶ್ರೀಲಂಕಾ, ಪೆಗು, ಬರ್ಮಾ, ಓರ್ಮಸ್, ಅರೇಬಿಯಾ, ಪೋರ್ಚುಗಲ್, ಚೀನಾ, ಅಲೆಗ್ಸಾಂಡ್ರಿಯಾ ಮತ್ತಿತರ ರಾಜ್ಯಗಳು.
ಡೊಮಿಂಗೊ ಪಾಯೇಸನು ಬಜಾರುಗಳಲ್ಲಿ ನಿತ್ಯವೂ ಒಂದೊಂದು ಕಡೆ ಸಂತೆ ನಡೆಯುತ್ತಿತ್ತೆಂದು ಹೇಳಿದ್ದಾನೆ. ಅಂತೆಯೇ ಅವನ ಹೇಳಿಕೆಗಳನ್ನು ಆಧರಿಸಿ ಪಾನ್ಸುಪಾರಿ ಬಜಾರದಲ್ಲಿ ಶುಕ್ರವಾರ ಸಂತೆ ನಡೆಯುತ್ತಿತ್ತೆಂಬುದನ್ನು ಗುರುತಿಸಲಾಯಿತು. ಇದರ ಜಾಡನ್ನು ಹಿಡಿದು ವಿವಿಧ ಆಕರಗಳನ್ನು ಪರಿಶೀಲಿಸುತ್ತಿರುವಾಗ ನನಗೆ ಉದ್ದಾನ ವೀರಭದ್ರ ದೇವಾಲಯದ ಶಾಸನವು ಅತ್ಯಂತ ಪ್ರಮುಖ ಆಕರವಾಗಿ ನಿಂತಿತು. ಅದರಲ್ಲಿ ಹೇಳುವಂತೆ, “ಕೃಷ್ಣಾಪುರದ ಪೇಟೆಯಲು ಮೂಲೆ ವೀಸ ನಾನಾಹೇರು ೧ಕ್ಕೆ ಸಲುವ ಕಾಸು ೧. ಸೋಮವಾರದಲು ಅಂಗಡಿ ೧ಕ್ಕೆ ಸಲುವ ಕಾಸು ೧, ಅಚ್ಯುತಾಪುರದ ಪೇಟೆಯಲು ಮೂಲೆವೀಸ ಒಳಹೇರು ೧ಕ್ಕೆ ಸಲು ಉದು ಕಾಸು ೧ ಮಂಗಳವಾರದಲೂ ಅಂಗಡಿ ೧ಕ್ಕೆ ಸಲುವ ಕಾಸು ೧”. ಕೃಷ್ಣಾಪುರದಲ್ಲಿ ಸೋಮವಾರ ಮತ್ತು ಅಚ್ಯುತಾಪೇಟೆಯಲ್ಲಿ ಮಂಗಳವಾರದಂದೇ ಅಂಗಡಿ ಮತ್ತು ಹೇರೆತ್ತಿನ ಬಂಡಿಗಳಿಂದ ತೆರಿಗೆ ವಸೂಲಿ ಮಾಡುತ್ತಿದ್ದರೆಂದರೆ ಅಲ್ಲಿ ಅಂದು ಸಂತೆ ನಡೆಯುತ್ತಿತ್ತೆಂಬುದು ದೃಢವಾಯಿತು. ಇದೇ ರೀತಿ ವಾರದ ಇತರ ದಿನಗಳಂದು ವಿರೂಪಾಕ್ಷ, ಮಾಲ್ಯವಂತ, ವರದರಾಜಮ್ಮ ಮತ್ತು ವಿಠ್ಠಲ ಬಜಾರುಗಳಲ್ಲಿ ಸಂತೆಯು ಸೇರುತ್ತಿದ್ದುದು ಸ್ಪಷ್ಟವಾಗುತ್ತದೆ.
ಮುಂದುವರೆಯುವುದು..