ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಿದ ಅಣೆಕಟ್ಟೆ ಮತ್ತು ಕಾಲುವೆಗಳಿಗೆ ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿದೆ. ಆದರೆ ವಿಜಯನಗರ ಕಾಲz ಮೊದಲ ಅಣೆಕಟ್ಟೆಯಾಗಿ ನಿರ್ಮಾಣಗೊಂಡದ್ದು ಹಂಪೆಯ ಬಳಿಯ ತುರ್ತು ಅಣೆಕಟ್ಟು. ಇದನ್ನು ಶಾಸನದಲ್ಲಿ “ಚಿಂತಾಯಕ ದೇವಂಣನು ಕಟ್ಟಿಸಿದ ಕಟ್ಟೆ ಶ್ರೀ ವಿರೂಪಾಕ್ಷ ಸದಣೂ ಬೊಮೋಜ ಮಾಡಿದ ಎಂದಿದೆ. ವಿರೂಪಾಕ್ಷ ಕ್ಷೇತ್ರದಲ್ಲಿ ಚಿಂತಾಯಕ ದೇವಂಣನು ಬೊಮ್ಮೋಜನಿಂದ ಇದನ್ನು ನಿರ್ಮಿಸಿದ ಎಂಬುದು ಶಾಸನಸ್ಥ ಸಂಗತಿ. ಬುಕ್ಕರಾಯನ ಕಾಲದಲ್ಲಿ ಇದು ನಿರ್ಮಾಣವಾಯಿತೆಂದು ಹೇಳಲಾಗುತ್ತದೆ.
ವಿಜಯನಗರ ಕಾಲದ ಅಣೆಕಟ್ಟೆಗಳು ಮತ್ತು ಪರಿಸರಸ್ನೇಹಿ ತಂತ್ರಜ್ಞಾನವೂ . . .
ಮುಂದುವರಿದ ಭಾಗ-೩
ಅಣೆಕಟ್ಟುಗಳ ವೈಶಿಷ್ಟ್ಯತೆ: ತುಂಗಭದ್ರಾ ನದಿಗೆ ಅನೇಕ ಅಣೆಕಟ್ಟುಗಳಿದ್ದವು. ಅವುಗಳಲ್ಲಿ ವಿಜಯನಗರ ಕಾಲದ ಹೊತ್ತಿಗೆ ೧೨ ಅಣೆಕಟ್ಟೆ ಮತ್ತು ೧೮ ಕಾಲುವೆಗಳಿದ್ದವು. ಅವುಗಳಲ್ಲಿ ಅತ್ಯಂತ ಹಳೆಯದು ಹುಲಿಗಿ ಅಣೆಕಟ್ಟು. ಇದನ್ನು ಕ್ರಿ.ಶ. ೧೦೮೮ರಲ್ಲಿ ಆರನೇ ವಿಕ್ರಮಾದಿತ್ಯನ ಕಾಲದ ಹೊತ್ತಿಗೆ ನಿರ್ಮಾಣ ಮಾಡಲಾಗಿದ್ದಿತು. ಚೌವೇದಿಭಟ್ಟ ಎಂಬುವವನು ಹುಲಿಗೆಯೆಂಬ ಪುರವನ್ನು ಪಡೆದು ಅದರ ಬಳಿಯ ತುಂಗಭದ್ರಾ ನದಿಯಿಂದ ಸೀಳು ನಾಲೆಯನ್ನು ನಿರ್ಮಿಸಿದ್ದ ವಿವರ ಶಾಸನದಿಂದ ತಿಳಿದುಬರುವುದು. ಅದರಲ್ಲಿ ಹೇಳಿರುವಂತೆ, “ಭರದಿಂದೀ ತುಂಗಭದ್ರಾ ನದಿಯ ತಟಮನಾರೈದುಮಿಂ ಬಾಗಿರಲು ವಾರಿಜನಾಳಂ ಸೀಳ್ದು ನೂಲ್ಗೊಳ್ವ ವೊಲವೆಯವದಿಂ ತಂದನೀ ಕಾಲುರಂಮ್ಮ್ಯಂಬಡೆಯಲು ವಿಸ್ತಾರಮಾಗಲು ರವಿ ಶಸಿ ಧರೆ ನಕ್ಷತ್ರಮಾಮೇರು ನಿಲ್ವನ್ನೆಗ ನೋಡಾರಂಭ ಬ್ರಿಂದಂ ಒಸೆದು ತಣಿಯಲುಂ ತಂದ ಚೌವೇದಿಭಟ್ಟ ಎಂದಿದೆ. ಇದು ಒಬ್ಬ ಸ್ಥಳೀಯ ಅಧಿಕಾರಿಯಾಗಿ ಹುಲಿಗಿ ಪರಿಸರದ ಜನರ ಹಿತಕ್ಕಾಗಿ ನದಿಯ ನೀರನ್ನು ಒಣಭೂಮಿಗೆ ಕಾಲುವೆಯ ಮೂಲಕ ಹರಿಸಿದ ಭಗೀರಥನೇ ಆಗಿದ್ದಾನೆ. ಇದರಿಂದ ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಿದ ಅಣೆಕಟ್ಟೆ ಮತ್ತು ಕಾಲುವೆಗಳಿಗೆ ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿದೆ. ಆದರೆ ವಿಜಯನಗರ ಕಾಲz ಮೊದಲ ಅಣೆಕಟ್ಟೆಯಾಗಿ ನಿರ್ಮಾಣಗೊಂಡದ್ದು ಹಂಪೆಯ ಬಳಿಯ ತುರ್ತು ಅಣೆಕಟ್ಟು. ಇದನ್ನು ಶಾಸನದಲ್ಲಿ “ಚಿಂತಾಯಕ ದೇವಂಣನು ಕಟ್ಟಿಸಿದ ಕಟ್ಟೆ ಶ್ರೀ ವಿರೂಪಾಕ್ಷ ಸದಣೂ ಬೊಮೋಜ ಮಾಡಿದ ಎಂದಿದೆ. ವಿರೂಪಾಕ್ಷ ಕ್ಷೇತ್ರದಲ್ಲಿ ಚಿಂತಾಯಕ ದೇವಂಣನು ಬೊಮ್ಮೋಜನಿಂದ ಇದನ್ನು ನಿರ್ಮಿಸಿದ ಎಂಬುದು ಶಾಸನಸ್ಥ ಸಂಗತಿ. ಬುಕ್ಕರಾಯನ ಕಾಲದಲ್ಲಿ ಇದು ನಿರ್ಮಾಣವಾಯಿತೆಂದು ಹೇಳಲಾಗುತ್ತದೆ.
ಇದು ಹಂಪೆಯ ಮೇಲ್ಭಾಗದಲ್ಲಿದ್ದು ಇಡೀ ಪರಿಸರವನ್ನು ಅಚ್ಚ ಹಸಿರಾಗಿಸುವುದರ ಜೊತೆಗೆ ವಿಜಯನಗರ ಪಟ್ಟಣದ ಪ್ರಮುಖ ಉಪನಗರಗಳಾದ ವಿರೂಪಾಕ್ಷಪುರ, ಕೃಷ್ಣಾಪುರ, ಅಚ್ಯುತಾಪುರ, ವಿಠಲಾಪುರ ಮತ್ತು ನಿಂಬಾಪುರಗಳಲ್ಲಿ ವಾಸಿಸಿದ್ದ ಜನರ ಜೀವಜಲವೂ ಆಗಿದ್ದಿತು. ತುರ್ತು ಅಣೆಕಟ್ಟು ನಿರ್ಮಾಣಕ್ಕೆ ಆಯ್ದುಕೊಂಡ ಜಾಗ ಅಂದಿನ ಜನರ ತಾಂತ್ರಿಕ ಜ್ಞಾನದ ಸಂಕೇತ. ಹಂಪೆಯ ಬಳಿ ಆಳವಾಗಿ ಹರಿಯುವ ನದಿಯು ಮೇಲ್ಭಾಗದಲ್ಲಿ ಅಷ್ಟೇನೂ ಆಳವಿಲ್ಲದೆ ಕವಲು ಕವಲಾಗಿ ಮತ್ತು ವಿಸ್ತಾರವಾಗಿ ಹರಿಯುತ್ತದೆ. ಇಂತಹ ಸೂಕ್ತ ಸ್ಥಳವನ್ನು ಆಯ್ದುಕೊಂಡದ್ದು ಪ್ರಾಚೀನರ ತಾಂತ್ರಿಕ ಕೌಶಲ್ಯವೇ ಸರಿ. ಈ ಅಣೆಕಟ್ಟೆ ಬೃಹತ್ ಗಾತ್ರದ ಅಣೆಕಟ್ಟೆಯೇನೂ ಅಲ್ಲ. ಇದರ ಎತ್ತರ ಕೇವಲ ಐದಾರು ಅಡಿಗಳಷ್ಟು ಮಾತ್ರ. ಅಲ್ಲದೆ ಆಧುನಿಕ ಅಣೆಕಟ್ಟೆಯಂತೆ ಇದು ಇಡೀ ನದಿಯನ್ನು ಆವರಿಸಿಲ್ಲ. ನೀರಿನ ಹರಿವನ್ನು ಗಮನಿಸಿ, ಭೂಮಿಯ ಮಟ್ಟವನ್ನು ಆಧರಿಸಿ ಅಲ್ಲಲ್ಲಿ ಕಣಿವೆ, ಕಲ್ಲುಬಂಡೆಗಳ ಮಧ್ಯದ ಕೊರಕಲುಗಳಲ್ಲಿ ಹರಿಯುವ ನೀರಿಗೆ ಅಷ್ಟೇನೂ ಉದ್ದವಿರದ ಸಣ್ಣ ತಡೆಗೋಡೆಗಳನ್ನು ನಿರ್ಮಿಸಿದ್ದಾರೆ. ಇಂತಹ ಸುಮಾರು ಹದಿನೈದಕ್ಕೂ ಹೆಚ್ಚು ತಡೆಗೋಡೆಗಳನ್ನು ನದಿಯುದ್ದಕ್ಕೂ ನಿರ್ಮಿಸಿದ್ದಾರೆ. ಬಲದಂಡೆಯ ಅಂಚಿನಿಂದ ಆರಂಭಗೊಂಡು ನದಿಯ ಮಧ್ಯದವರೆಗೂ ಇಂತಹ ಅಣೆಕಟ್ಟೆಗಳು ಮುಂದುವರಿಯುತ್ತಾ ಸಾಗಿವೆ. ಈ ಅಣೆಕಟ್ಟೆ ಇಂದಿನ ಅಣೆಕಟ್ಟೆಗಳಂತೆ ಎಲ್ಲ ನೀರನ್ನು ಒಟ್ಟಿಗೆ ಕೂಡಿಹಾಕುವುದಿಲ್ಲ. ಕಾಲುವೆಗೆ ಬೇಕಾದಷ್ಟು ನೀರನ್ನು ಮಾತ್ರ ಸಂಗ್ರಹಿಸಿ ಹರಿಸುತ್ತದೆ. ಹೆಚ್ಚಾದ ನೀರನ್ನು ನದಿಗೇ ಹರಿಸಿ, ವರ್ಷದುದ್ದಕ್ಕೂ ನದಿಯನ್ನು ಜೀವಂತವಾಗಿರಿಸುವಂತಿದೆ. ಅಲ್ಲದೆ ಮುಂದಿನ ಅಣೆಕಟ್ಟೆಗಳ ಬಳಕೆಗೂ ಅನುವು ಮಾಡಿಕೊಡುತ್ತದೆ. ಈ ಹಿನ್ನೆಲೆಯಲ್ಲಿಯೇ ತುಂಗಭದ್ರಾ ನದಿಯುದ್ದಕ್ಕೂ ಹನ್ನೆರಡಕ್ಕೂ ಹೆಚ್ಚು ಅಣೆಕಟ್ಟೆಗಳು ಮತ್ತು ಹದಿನಾರಕ್ಕೂ ಹೆಚ್ಚು ಕಾಲುವೆಗಳು ನಿರ್ಮಾಣವಾಗಿರುವುದನ್ನು ಗಮನಿಸಬಹುದು. ಅಲ್ಲದೆ ಇವುಗಳ ನಿರ್ಮಾಣದ ಶ್ರಮ, ಸಮಯ ಮತ್ತು ವೆಚ್ಚಗಳೂ ಅತೀ ಕಡಿಮೆಯೇ ಆಗಿತ್ತು. ಅಲ್ಲಯೇ ದೊರೆಯುವ ಕಲ್ಲುಬಂಡೆಗಳನ್ನು ಅಡ್ಡವಾಗಿಸಿ, ಅವುಗಳಿಗೆ ಕಬ್ಬಿಣದ ಕೊಂಡಿಗಳ ಮೂಲಕ ಭದ್ರಪಡಿಸಿ, ಅವಶ್ಯಕತೆಯಿದ್ದಲ್ಲಿ ಮಾತ್ರ ಗಾರೆಗಚ್ಚನ್ನು ಬಳಸಿರುವುದು ಗಮನಾರ್ಹ.
ಒಟ್ಟಿನಲ್ಲಿ ತಮಗೆ ಬೇಕಾದ ನೀರನ್ನು ಮುಖ್ಯ ದಂಡೆಯತ್ತ ಕರೆದೊಯ್ಯುವ ಪರಿ ಅವರ್ಣನೀಯ. ಪ್ರಾಕೃತಿಕವಾದ ಸರಳ ಮತ್ತು ಸರಾಗವಾಗಿ ಕಾಲುವೆಗೆ ಸಾಕಾಗುವಷ್ಟು ನೀರನ್ನು ಮಾತ್ರ ಹರಿಸುವ ಪರಿಸರಸ್ನೇಹಿ ತಂತ್ರಜ್ಞಾನ ಅಧಮ್ಯವಾದದ್ದು. ಇದರಿಂದ ಎಂತಹ ಪ್ರವಾಹದಲ್ಲೂ ಕಾಲುವೆಗಳಿಗೆ ತೊಂದರೆಯಾಗುವುದಿಲ್ಲ. ಇಂದಿನ ಅಣೆಕಟ್ಟೆಗಳು ಹೂಳಿನ ಸಮಸ್ಯೆಯ ಆಗರಗಳೇ ಆಗಿವೆ. ಆದರೆ ವಿಜಯನಗರ ಕಾಲದ ಈ ಅಣೆಕಟ್ಟೆಗಳಲ್ಲಿ ಹೂಳಿನ ಸಮಸ್ಯೆಯೇ ಎದುರಾಗದಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿ. ಇದಕ್ಕೆ ಅವರು ಅನುಸರಿಸಿದ ನಿಸರ್ಗದತ್ತ ಬಂಡೆಗಳು, ಅವುಗಳಿಗೆ ಹೆಚ್ಚಾಗಿ ಗಾರೆಗಚ್ಚು ಬಳಸದೆ ಬಂಡೆಗಳ ಸಂದುಗಳಲ್ಲಿ ನೀರು ಹೊಸರುವಂತೆ ಮಾಡಿರುವುದೂ ಆಗಿದೆ. ಇದರಿಂದ ಪ್ರವಾಹದ ಸಂದರ್ಭದಲ್ಲಿ ಹೂಳು ಕೊಚ್ಚಿಹೋಗುತ್ತಿದ್ದಿತು. ಈ ಕಟ್ಟೆಗಳಿಗೆ ತೂಬುಗಳ ಅಗತ್ಯವೇ ಇರದೆ ಹೆಚ್ಚುವರಿ ನೀರು ಸರಾಗವಾಗಿ ಹರಿದು ಅಣೆಕಟ್ಟೆಗಳೇ ಕೋಡಿಗಳೂ ಆಗಿದ್ದುದು ವಿಶೇಷ. ಹೀಗೆ ನಿರ್ಮಿಸಿದ ಅಣೆಕಟ್ಟೆಯ ಮೂಲಕ ಹರಿಯುವ ನೀರಿಗಾಗಿ ಸುಮಾರು ಹತ್ತೊಂಬತ್ತು ಕಿ.ಮೀ. ಉದ್ದದ ಕಾಲುವೆಯನ್ನು ನಿರ್ಮಿಸಿದ್ದಾರೆ. ಅದೂ ಬೆಟ್ಟಗುಡ್ಡಗಳನ್ನು ಬಳಸಿ, ಅನಿವಾರ್ಯ ಸಂದರ್ಭ ಎದುರಾದಾಗ ಬಂಡೆಗಳನ್ನು ಸೀಳಿ ನೀರನ್ನು ಕೊಂಡೊಯ್ಯುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಈ ತುರ್ತು ಕಾಲುವೆಯನ್ನು ವಿಜಯನಗರ ಕಾಲದಲ್ಲಿ ಹಿರಿಯ ಕಾಲುವೆಯೆಂದೇ ಕರೆದಿರುವರು.
ಇದರಿಂದ ಅಂದಿನ ಕಾಲುವೆಗಳಲ್ಲಿ ಅತ್ಯಂತ ಹಳೆಯ ಮತ್ತು ಮೊದಲ ನಾಲೆಯೆಂಬುದು ಗಮನಾರ್ಹ. ಇದಕ್ಕೆ ಅನೇಕ ಸಣ್ಣಪುಟ್ಟ ಉಪಕಾಲುವೆಗಳ ಮೂಲಕ ಉಪನಗರಗಳಿಗೆ ನೀರನ್ನು ಹರಿಸಿರುವರು. ಐದುನೂರು ವರ್ಷಗಳಷ್ಟು ಹಳೆಯದಾದ ತುರ್ತು ಅಣೆಕಟ್ಟೆ ಮತ್ತು ಕಾಲುವೆಯು ಇಂದಿಗೂ ೨೫೦೦ ಎಕರೆ ಭೂಮಿಗೆ ನೀರನ್ನು ಹರಿಸುತ್ತಿರುವುದು ಅಂದಿನವರ ಶ್ರಮದ ಪ್ರತೀಕವೇ ಆಗಿದೆ. ಇದೇ ಬಗೆಯಲ್ಲಿ ನದಿಯ ಎಡ ಮತು ಬಲದಂಡೆಯುದ್ದಕ್ಕೂ ನಿರ್ಮಾಣವಾದ ಅಣೆಕಟ್ಟೆ ಮತ್ತು ಕಾಲುವೆಗಳು ಹಸಿರಾಗಿಸಿವೆ. ನಿರ್ಮಾಣವಾದ ಹಂಪೆಯ ಕೆಳಭಾಗದಲ್ಲಿರುವ ರಾಮಸಾಗರ ಅಣೆಕಟ್ಟು ಕೂಡ ಇಂದಿಗೂ ಈ ಭಾಗದ ನೀರಾವರಿ ಬೆಳೆಗಳ ಜೀವನಾಡಿಯಾಗಿದೆ. ಹಾಗೆಯೇ ಸಿರುಗುಪ್ಪ ಬಳಿಯ ದೇಶನೂರು ಅಣೆಕಟ್ಟೆಯು ಹಿಂದೆ ನಿರ್ಮಾಣವಾಗಿದ್ದು, ಅದರ ಕಾಲುವೆಯು ಕ್ರಿ.ಶ. ೧೪೬೬ರಲ್ಲಿ ಒಡೆದುಹೋಯಿತು. ಅದನ್ನು ಅರಿರಾಯತೋಡರಮಲ್ಲ ಎಂಬ ಬಿರುದಿನ ಗುತ್ತಿ ದುರ್ಗದ ರಾಜ್ಯ ಈ ನಿಟ್ಟಿನಲ್ಲಿ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಅನೇಕ ಅಣೆಕಟ್ಟೆಗಳನ್ನು ಪರಿಸ್ನೇಹಿ ಕ್ರಮಗಳನ್ನು ಅನುಸರಿಸಿ ವಿಜಯನಗರ ಅರಸರು, ಅಧಿಕಾರಿಗಳು ಮತ್ತು ತಂತ್ರಜ್ಞರು ನಿರ್ಮಿಸಿದ್ದರು. ಅಂತಹ ತಂತ್ರಜ್ಞರಲ್ಲಿ ಬುಕ್ಕರಾಯನ ಕಾಲದ ಸಿಂಗೆಯಭಟ್ಟ ಪ್ರಸಿದ್ಧನಾಗಿದ್ದಾನೆ. ಇವನನ್ನು ದಶವಿದ್ಯಾಚಕ್ರವರ್ತಿ ಜಲಸೂತ್ರದ ಸಿಂಗೆಯಭಟ್ಟ ಎಂದೇ ಹೆಸರಾಗಿದ್ದಾನೆ. ಇವನು ಪೆನುಗೊಂಡೆಯ ಶಿರಿಊರು ಕೆರೆಯ ನೀರಿಗಾಗಿ ಕ್ರಿ.ಶ.೧೩೮೯ರಲ್ಲಿ ಕಾಲುವೆಯನ್ನು ತೋಡಿಸಿದ್ದನು. ಬಯಕಾರ ರಾಮಪ್ಪಯ್ಯ ಹೊಸಪೇಟೆ ಪರಿಸರದಲ್ಲಿ ಹದಿನಾರಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿ ಅಂದಿನ ನೀರಾವರಿಯ ಪ್ರಮುಖ ಎಂಜಿನೀಯರೇ ಆಗಿದ್ದಾನೆ. ಹೀಗೆ ಕೆರೆ, ಅಣೆಕಟ್ಟೆ, ಕಾಲುವೆಯನ್ನು ನಿರ್ಮಿಸಿದ ಅನೇಕ ನಿಮಾರ್ತೃಗಳು ಮತ್ತು ತಂತ್ರಜ್ಞರು ಸಾಮ್ರಾಜ್ಯದಾದ್ಯಂತ ಕಂಡುಬಂದಿರುವುದು ಗಮನಾರ್ಹ.
ಅಂತೆಯೇ ಇಂದಿನ ತುಂಗಭದ್ರಾ ಅಣೆಕಟ್ಟೆ ನಿರ್ಮಾಣಕ್ಕೂ ಒಂದು ಸುದೀರ್ಘ ಹಿನ್ನೆಲೆಯಿದೆ. ಸಾಮಾನ್ಯವಾಗಿ ಬಳ್ಳಾರಿ, ಕೊಪ್ಪಳ, ರಾಯಚೂರು ಮತ್ತು ಆಂಧ್ರದ ಗಡಿಜಿಲ್ಲೆಗಳು ನಿರಂತರವಾಗಿ ಬರಗಾಲಕ್ಕೆ ತುತ್ತಾಗುವ ಪ್ರದೇಶಗಳಾಗಿದ್ದವು. ೧೮೭೬ರಲ್ಲಿ ಈ ಭಾಗದಲ್ಲೇ ಅತ್ಯಂತ ಭೀಕರ ಬರಗಾಲ ಎದುರಾಗಿ ಐವತ್ತು ಲಕ್ಷಕ್ಕೂ ಹೆಚ್ಚು ಜನರು ಅಸುನೀಗಿದ್ದರು. ಈ ಘೋರ ದುರಂತವನ್ನು ಬ್ರಿಟೀಶ್ ಸರ್ಕಾರ ಗಮನಿಸಿ, ಆರ್ಥರ್ ಕಾಟನ್ ಎಂಬ ತಜ್ಞನಿಂದ ಅಣೆಕಟ್ಟೆ ನಿರ್ಮಾಣಕ್ಕೆ ಸಂಬಂಧಿಸಿದ ವರದಿಯನ್ನು ಪಡೆಯಿತು. ೧೯೦೨ರಲ್ಲಿ ಮತ್ತೊಮ್ಮೆ ಮದ್ರಾಸ್ ಸರ್ಕಾರದ ಕರ್ನಲ್ ಸ್ಮಾರ್ಟ್ ಎಂಬ ನೀರಾವರಿ ತಜ್ಞನಿಂದ ಹೊಸಪೇಟೆಯ ಬಳಿ ಅಣೆಕಟ್ಟೆಯನ್ನು ಕಟ್ಟಲು ಸೂಕ್ತವಾದ ಸ್ಥಳವೆಂಬ ವರದಿ ಪಡೆಯಲಾಯಿತು. ಆದರೆ ಅಂದು ಈ ಭಾಗದಲ್ಲಿದ್ದ ಮುಂಬೈ, ಮೈಸೂರು, ಹೈದರಾಬಾದ್ ನಿಜಾಮನ ಮತ್ತು ಮದ್ರಾಸ್ ಸರ್ಕಾರಗಳು ತಮ್ಮ ತಮ್ಮ ಹಿತಾಸಕ್ತಿಯ ಪ್ರಸ್ತಾವನೆಯಿಂದ ಬೃಹತ್ ನೀರಾವರಿ ಯೋಜನೆಯು ಸ್ಥಗಿತವಾಯಿತು. ಆದರೆ ೧೯೪೦ರಲ್ಲಿ ಪುನಃ ಈ ಯೋಜನೆಯ ಚಾಲ್ತಿಗೆ ಮದ್ರಾಸ್ ಸರ್ಕಾರ ಆಸಕ್ತಿ ತೋರ ತಿರುಮಲೆ ಅಯ್ಯಂಗಾರ್ ಅವರ ನೇತೃತ್ವದ ಸಮಿತಿಯನ್ನು ರಚಿಸಿತು. ಈ ಸಮಿತಿಯು ‘೯೪೨ರಲ್ಲಿ ಹೊಸಪೇಟೆಯ ಮಲ್ಲಾಪುರದ ಬಳಿ ಅಣೆಕಟ್ಟೆ ನಿಮಾಣಕ್ಕೆ ಸಲಹೆ ನೀಡಿತು.
ಮುಂದೆ ೧೯೪೫ರಲ್ಲಿ ಹೈದರಾಬಾದ್ ನಿಜಾಮನು ಮದ್ರಾಸಿನ ಗವರ್ನರ್ ಆರ್ಥರ್ ಹೋಪ್ ಜೊತೆಗೂಡಿ ಅಣೆಕಟ್ಟೆಗೆ ಅಡಿಗಲ್ಲನ್ನು ಹಾಕಿದ್ದರು. ಅದರ ಫಲವಗಿ ಏಳೆಂಟು ವರ್ಷಗಳ ಶ್ರಮದಿಂದ ೧೯೫೩ರಲ್ಲಿ ತುಂಗಭದ್ರಾ ನದಿ ಅಣೆಕಟ್ಟೆಯ ಕಾರ್ಯ ಪೂರ್ಣಗೊಂಡು ಕಾಲುವೆಯಲ್ಲಿ ನೀರು ಹರಿಸಲಾಯಿತು. ಆ ಮೂಲಕ ಮಧ್ಯ ಕರ್ನಾಟಕದ ಬಹುಭಾಗ ಇಂದು ಹಸಿರಾಗಲು ಅನುವಾಯಿತು. ಆದರೆ ಈ ಅಣೆಕಟ್ಟೆಯ ಸ್ವರೂಪ ನದಿಯ ಇಡೀ ನೀರನ್ನು ತಡೆಹಿಡಿಯುವಷ್ಟು ಸಾಮರ್ಥ್ಯ ಹೊಂದಿದೆ. ಇದರಿಂದ ಇತ್ತೀಚಿನ ವರ್ಷಗಳಲ್ಲಿ ನದಿಯೇ ಬತ್ತಿಹೋದದ್ದೂ ಉಂಟು. ಆದರೆ ಪ್ರಾಚೀನ ಅಣೆಕಟ್ಟೆಗಳನ್ನು ನಿರ್ಮಿಸಿದ ಪೂರ್ವಜರು ನದಿಯನ್ನು ವರ್ಷದುದ್ದಕ್ಕೂ ಜೀವಂತವಾಗಿರಿಸಿ, ನದಿಯುದ್ದಕ್ಕೂ ಇರುವ ಸಕಲ ಜೀವಿಗಳಿಗೂ ಲೇಸನ್ನು ಬಯಸುವುದೇ ಆಗಿತ್ತೆಂಬುದನ್ನು ಇಂದಿನ ಆಧುನಿಕರು ಮನಗಾಣಬೇಕಾಗಿದೆ.