ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸುವುದರ ಜೊತೆಗೇ ಜನರ ಕ್ಷಮೆಯನ್ನೂ ಕೋರಿದ್ದಾರೆ. ಪ್ರಧಾನಿಯೊಬ್ಬರು ಬಹಿರಂಗವಾಗಿ ಕ್ಷಮಾಯಾಚಿಸಿದ ಬಹು ಅಪರೂಪದ ಪ್ರಸಂಗವಿದು. ದುಡುಕಿನ ನಿರ್ಧಾರವಾಗಿ ತುರ್ತು ಪರಿಸ್ಥಿತಿ ಹೇರಿದ ಇಂದಿರಾಗಾಂಧಿ ತಾವು ಎಸಗಿದ ಪ್ರಮಾದಕ್ಕೆ ಪ್ರತಿಯಾಗಿ ಕ್ಷಮೆ ಕೋರದೆ ಜನಾಕ್ರೋಶಕ್ಕೆ ಈಡಾದ ರೀತಿ ಮೋದಿ ಜಾಗೃತಿಗೆ ಕಾರಣವಾಗಿರಬಹುದೆ…?
ಮೋದಿ ಕ್ಷಮಾಯಾಚನೆ ಹಿಂದೆ -ಮುಂದೆ
ಮಾಡಿದ್ದುಣ್ಣೊ ಮಹರಾಯ ಎನ್ನುವುದು ಕನ್ನಡದ ಸೊಗಸಾದ ಗಾದೆಗಳಲ್ಲಿ ಒಂದು. ಉಪ್ಪು ತಿಂದವರು ನೀರು ಕುಡಿಯಬೇಕು ಎನ್ನುವುದು ಮತ್ತೊಂದು. ಇಂಥ ಅರ್ಥಗರ್ಭಿತ ನುಡಿಗಟ್ಟುಗಳು ಇನ್ನೂ ಹಲವಾರು ಇವೆ. ಜಾಣರು ಕಟ್ಟಿದ ಇಂಥ ಮಾರ್ಮಿಕ ಮಾತುಗಳ ಜೊತೆಗೆ ತಿಂದಿದ್ದನ್ನು ಕಕ್ಕೋ ಮಹರಾಯ ಎಂದು ಸೇರಿಸಿದರೆ ತಪ್ಪಾಗುತ್ತದೆಯೆ…? ಇಲ್ಲ ಎನಿಸುತ್ತದೆ. ಕೃಷಿಗೆ ಸಂಬಂಧಿಸಿದಂತೆ ಸಂಸತ್‌ನ ಉಭಯ ಸದನಗಳಲ್ಲಿ ತಾನೇ ಅಂಗೀಕರಿಸಿಕೊಂಡ ಮಸೂದೆಗಳನ್ನು ಆಧರಿಸಿ ರೈತ ವಲಯದ ಮೇಲೆ ಹೇರಿದ ಮೂರು ಕಾಯ್ದೆಗಳನ್ನು “ಕ್ಷಮಾಯಾಚನೆ”ಯೊಂದಿಗೆ ಹಿಂತೆಗೆದುಕೊಂಡ ಕೇಂದ್ರ ಸರ್ಮಾರದ ಯಾನೆ ಪ್ರಧಾನಿ ನರೇಂದ್ರ ಮೋದಿಯವರ ವರ್ತನೆ ತಿಂದಿದ್ದನ್ನು ಕಕ್ಕೋ ಮಹರಾಯ ಎನ್ನುವಂತಿದೆ.
ಮಸೂದೆಗಳನ್ನು ಮಂಡಿಸುವುದಕ್ಕೆ ಮೊದಲೇ ಅದಕ್ಕೆ ಸಾಕಷ್ಟು ಪ್ರಚಾರ ಸಿಕ್ಕಿತ್ತು. ಆ ಜಾಡನ್ನು ಹಿಡಿದ ರೈತ ಸಮುದಾಯ ಸಂಸತ್ತು ಅದನ್ನು ಅಂಗೀಕರಿಸುವುದಕ್ಕೆ ಸಾಕಷ್ಟು ಮೊದಲೆ ಗಟ್ಟಿ ಧ್ವನಿಯಲ್ಲಿ ವಿರೋಧ ವ್ಯಕ್ತಪಡಿಸಿತ್ತು. ಉಭಯ ಸದನಗಳಲ್ಲಿ ಆಡಳಿತ ಪಕ್ಷ ಎನ್‌ಡಿಎ ಹೊರತಾಗಿಸಿ ಉಳಿದೆಲ್ಲ ಪಕ್ಷಗಳೂ ತಮ್ಮೊಳಗಿನ ಪರಸ್ಪರ ಕಹಿ ಮರೆತು ಪ್ರತಿರೋಧ ದಾಖಲಿಸಿದ್ದವು. ಆಡಳಿತ ಪಕ್ಷದ ಒಳಗೂ ಸರ್ಕಾರದ ನೀತಿಯನ್ನು ಸಹಿಸದ ಕೆಲವರು ಅನ್ನಲಾಗದೆ ಅನುಭವಿಸಲಾಗದೆ ಪರಪರ ಮೈಕೈ ಪರಚಿಕೊಂಡಿದ್ದೂ ಉಂಟು. ತನ್ನದು ಅರಣ್ಯ ರೋದನ ಎನಿಸಿದ್ದರೂ ಬಿಜೆಪಿ ಸಂಸದ ವರುಣ್ ಗಾಂಧಿ, ಈ ಕ್ರಮ ಸರಿಯಲ್ಲ ಎಂದು ಜೋರಾಗಿಯೆ ಹೇಳಿದ್ದರು. ಸದನದಿಂದ ಹೊರಗೆ ಸಮಾಜ ವಿಜ್ಞಾನಿಗಳು, ಕೃಷಿ ವಲಯದ ಹಿತ ಚಿಂತಕರು, ರೈತ ಮುಖಂಡರು ಒಕ್ಕೊರಳಿನಿಂದ ಮಸೂದೆಯನ್ನು ವಿರೋಧಿಸಿದ್ದರು. ಇದು ನರೇಂದ್ರ ಮೋದಿಯವರಿಗಾಗಲಿ, ಅವರ ನೇತೃತ್ವದ ಎನ್‌ಡಿಎ/ ಬಿಜೆಪಿ ಸರ್ಕಾರಕ್ಕಾಗಲಿ ಕೇಳಿಸಲಿಲ್ಲ. ಆನೆ ನಡೆದಿದ್ದೆ ದಾರಿ ಎಂಬ ಗಾದೆ ಮಾತನ್ನು ತನಗೆ ಆರೋಪಿಸಿಕೊಂಡ ಮೋದಿ ಯಾರ ಸಲಹೆ, ಟೀಕೆ, ವಿರೋಧ ಎದುರಾದರೂ ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. ಟೀಕೆಗೆ, ವಿರೋಧಕ್ಕೆ ಕಾರಣವಾದ ಅಂಶಗಳತ್ತ ಮನಸ್ಸು ಕೊಡುವ ಬದಲಿಗೆ ವಂದಿಮಾಗಧರ ಬಹುಪರಾಕ್‌ಗೆ ಆದ್ಯತೆ ಕೊಟ್ಟರು.
ಸ್ವಾತಂತ್ರ್ಯಾನಂತರದ ಏಳೂವರೆ ದಶಕ ಅವಧಿಯಲ್ಲಿ ದೇಶದ ಉದ್ದಗಲಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಚಳವಳಿ, ಆಂದೋಲನಗಳ ಮೂಲಕ ಜನರ ಆಕ್ರೋಶ ವ್ಯಕ್ತವಾಗಿದೆ. ಜನಮನದ ಅಭಿಪ್ರಾಯವೇನೇ ಇರಲಿ, ಅಂಥವಕ್ಕೆ ಸರ್ಕಾರಗಳು ಮರ್ಯಾದೆ ಕೊಟ್ಟ ಉದಾಹರಣೆಗಳು ಅಪರೂಪ. ಮತ್ತೊಂದು ವಿಪರ್ಯಾಸವೆಂದರೆ ಬಹುತೇಕ ಚಳವಳಿಗಳ ಅಂತಿಮ ಪರಿಣಾಮ ಸುಖಾಂತ್ಯದ ಬದಲಿಗೆ ದು:ಖಾಂತ್ಯವಾದುದು. ಸಾವಿರಾರು ಕೈಗಾರಿಕೆಗಳು ಚಳವಳಿ ಕಾರಣವಾಗಿಯೇ ಮುಚ್ಚಿಹೋಗಿದ್ದನ್ನು, ಲಕ್ಷಲಕ್ಷ ಕುಟುಂಬಗಳು ಬೀದಿ ಪಾಲಾಗಿದ್ದನ್ನು ನೆನಪು ಮಾಡಿಕೊಳ್ಳದಿದ್ದರೆ ಅದಕ್ಕಿಂತ ದೊಡ್ಡ ಆತ್ಮವಂಚನೆ ಇನ್ನೊಂದಿಲ್ಲ.ಒಂದು ಕೋನದಿಂದ ನೋಡಿದರೆ ಚಳವಳಿಗಳು, ರಹಸ್ಯ ಕಾರ್ಯಸೂಚಿಯೊಂದಿಗೆ ಉದ್ಯಮಗಳನ್ನು ನಡೆಸುವ ಆಡಳಿತ ಮಂಡಳಿಗಳಿಗೆ ವರರೂಪವಾಗಿ ನಡೆದುದೇ ಹೆಚ್ಚು.
ಇನ್ನು ಅನೇಕ ಚಳವಳಿಗಳು ಘೋಷಣೆಯಲ್ಲಿ ಕಾರ್ಮಿಕರ ಪರವಾಗಿದ್ದರೂ ಅವುಗಳ ಅಂತಿಮ ಫಲಿತವೆಂದರೆ ಉದ್ಯಮಗಳ ಬಾಗಿಲನ್ನು ಮುಚ್ಚಿಸುವುದು. ಈ ಮಾತಿಗೆ ಪಶ್ಚಿಮ ಬಂಗಾಳಾದಲ್ಲಿ ಮೂರೂವರೆ ದಶಕ ಆಡಳಿತ ನಡೆಸಿದ ಕಮ್ಯೂನಿಸ್ಟ್ ಸರ್ಕಾರದ “ದುಡಿಯುವ ವರ್ಗದ ಪರವಾದ” ನೀತಿಯನ್ನು ಉಲ್ಲೇಖಿಸಬಹುದು. ಅಲ್ಲಿ ಒಂದೊಂದಾಗಿ ಉದ್ಯಮದ ಬಾಗಿಲು ಮುಚ್ಚುತ್ತ ಹೋದಂತೆ ನಿರುದ್ಯೋಗ ಪರ್ವದ ಉದ್ದ ಹೆಚ್ಚುತ್ತ ಹೋಯಿತು. ಅಂತಿಮವಾಗಿ ಅದು ಆ ಸರ್ಕಾರದ ಬಲಿಯನ್ನೆ ಪಡೆಯಿತು. ಈ ಮಾತಿಗೆ ಪೂರಕವಾಗಿ ನಮ್ಮದೆ ರಾಜ್ಯದ ದಾವಣಗೆರೆಯಲ್ಲಿ ಹೇರಳ ಸಂಖ್ಯೆಯಲ್ಲಿದ್ದ ಬಟ್ಟೆ ಗಿರಣಿಗಳೆಲ್ಲವೂ ಶಾಶ್ವತವಾಗಿ ಬಂದ್ ಆಗಿದ್ದನ್ನು ನೆನಪು ಮಾಡಿಕೊಳ್ಳಬಹುದು. ದಾವಣಗೆರೆಯನ್ನು ಅದೊಂದು ಕಾಲದಲ್ಲಿ ಭಾರತದ ಮ್ಯಾಂಚೆಸ್ಟರ್ ಎಂದು ಹೆಮ್ಮೆಯಿಂದ ಕರೆಯಲಾಗುತ್ತಿತ್ತು. ಈಗ…?. ಚಳವಳಿಗಳ ಅಂತಿಮ ಗುರಿ ಯಾವ ಉದ್ದೇಶಕ್ಕಾಗಿ ಹೋರಾಟ ನಡೆಯುತ್ತಿರುತ್ತದೊ ಆ ಉದ್ದೇಶದ ಸಾಧನೆ. ಅದಾಗಲಿಲ್ಲ ಎನ್ನುವುದು ಭಾರತದ ಸಂದರ್ಭದಲ್ಲಿ ನಿಜವಾದ ಮಾತು. ಉದ್ದಕ್ಕೂ ವೈಫಲ್ಯದ ಸರಮಾಲೆಯನ್ನೇ ಕಂಡ ಭಾರತದ ಜನಪರ ಆಂದೋಲನ ಇದೀಗ ಗಟ್ಟಿತನದ ಚಳವಳಿಯನ್ನು ಛಲಗಾರ ರೈತರ ಮೂಲಕ ಕಂಡಿದೆ. ನಿಜ ಅರ್ಥದಲ್ಲಿ ಇದು ರೈತರ ಜಯ ಎನ್ನುವುದಕ್ಕಿಂತ ಜನತಂತ್ರದ ದಿಗ್ವಿಜಯವೇ ಆಗಿದೆ. ಉದ್ಯಮಗಳನ್ನು ಖಾಸಗೀಕರಣಗೊಳಿಸುವ ಸರ್ಕಾರದ ನೀತಿ ಈ ಹೊತ್ತು ಎಗ್ಗಿಲ್ಲದೆ ಅನುಷ್ಟಾನಕ್ಕೆ ಬರುತ್ತಿದೆ. ಚಳವಳಿಗಳು ಒಂದೋ ರಾಜಿ ಮಾಡಿಕೊಂಡಿವೆ ಇಲ್ಲವೇ ಕಾಲು ಕೈ ಮುರಿದುಕೊಂಡು ಬಿದ್ದಿವೆ.
ಕೃಷಿ ಮಸೂದೆಗಳನ್ನು ಸಂಸತ್‌ನ ಉಭಯ ಸದನಗಳು “ಅಂಗೀಕರಿಸಿ” ಕಾಯ್ದೆ ರೂಪು ಪಡೆದ ಬಳಿಕವೂ ಕೇಂದ್ರ ಸರ್ಕಾರ ಬಯಸಿದ ರೀತಿಯಲ್ಲಿ ಅದು ಅಮಲಿಗೆ ಬಾರದೆ ಇರುವುದಕ್ಕೆ ಸುಪ್ರೀಂ ಕೋರ್ಟ್ ನೀಡಿದ ತಡೆಯಾಜ್ಞೆ ಕಾರಣವಾಯಿತು. ತಾನು ತಡೆಯಾಜ್ಞೆ ನೀಡಿದ ಬಳಿಕವೂ ರೈತರ ಮುಷ್ಕರ ಮುಂದುವರಿದಿರುವುದಾದರೂ ಏಕೆ ಎಂಬ ಕೋರ್ಟ್ ಪ್ರಶ್ನೆಗೆ ಉತ್ತರ ಬರಲಿಲ್ಲ. ರೈತರ ಪ್ರಕಾರ ಕೋರ್ಟ್ ತಡೆಯಾಜ್ಞೆ ಶಾಶ್ವತವಲ್ಲ, ಇಂದಲ್ಲ ನಾಳೆ ಅದು ನಿವಾರಣೆಯಾಗುತ್ತದೆ. ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವಂತೆ ಕೋರ್ಟ್ ಸರ್ಕಾರಕ್ಕೆ ಸೂಚಿಸಲಿಲ್ಲ. ಹಾಗಾಗಿ ನಾಳೆ ಏನಾದೀತೋ ಎಂಬ ಆತಂಕದ ಹಿನ್ನೆಲೆಯಲ್ಲಿ ರೈತಾಂದೋಲನ ಸತತಗೊಂಡಿತು.
ಸರ್ಕಾರದ ತುಟಿಯಂಚಿನ ಭರವಸೆ ನಂಬಿ ತಾತ್ಕಾಲಿಕವಾಗಿಯೇ ಆದರೂ ಸ್ಥಗಿತಗೊಂಡ ಅಥವಾ ಮುಂದೂಡಿದ ಯಾವ ಚಳವಳಿಗಳಿಗೂ ಮತ್ತೆ ಅದೇ ಮೊದಲಿನ ಕಾವು ಬಂದಿದ್ದು ಭಾರತದಲ್ಲಂತೂ ಅಪರೂಪ. ಈ ಮಾತಿಗೆ ಇತ್ತೀಚಿನ ನಿದರ್ಶನವೆಂದರೆ ಭ್ರಷ್ಟಾಚಾರ ನಿರ್ಮೂಲನದ ನಿಟ್ಟಿನಲ್ಲಿ ಅಣ್ಣಾ ಹಜಾರೆ ಆರಂಭಿಸಿದ ಚಳವಳಿ. ಚಳವಳಿಯ ಕಾವು ತನ್ನ ಕಾಲ ಬುಡಕ್ಕೆ ಬಂತೆನಿಸಿದ ಸಂದರ್ಭದಲ್ಲಿ ಎಚ್ಚೆತ್ತ ಸರ್ಕಾರ ಯೋಚಿಸಿದ್ದು ಅಣ್ಣಾ ಮುಂದಿಟ್ಟ ಬೇಡಿಕೆಗಳ ವಿಚಾರದಲ್ಲಲ್ಲ, ಬದಲಿಗೆ ಚಳವಳಿಯನ್ನು ಮುರಿಯುವುದು ಹೇಗೆಂಬ ವಿಚಾರದಲ್ಲಿ. ಅಂದಿದ್ದ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ತನ್ನ ಗುರಿಸಾಧನೆಯ ಯತ್ನದಲ್ಲಿ ನೂರಕ್ಕೆ ನೂರು ಅಂಕ ಪಡೆದು ಜಯ ಸಾಧಿಸಿತು. ಭ್ರಷ್ಟಾಚಾರದಿಂದ ನಲುಗಿ ಹೋಗಿದ್ದ ದೇಶವಾಸಿಗಳಲ್ಲಿ ಭರವಸೆಯ ಕನಸನ್ನು ಮೂಡಿಸಿದ್ದ ಅಣ್ಣಾ ಚಳವಳಿ ಆರಂಭಶೂರತ್ವ ಎಂಬ ಮೂದಲಿಕೆಗೆ ಈಡಾಯಿತು. ಇದು ನಮ್ಮ ಚಳವಳಿಗಳು ದಾರಿತಪ್ಪುವ ರೀತಿಗೆ ಒಂದು ಸಾಕ್ಷಿಗಲ್ಲು.
ಅಣ್ಣಾ ಚಳವಳಿಗೆ ಒದಗಿಬಂದ ದುರ್ದೆಸೆಗೆ ಹೋಲಿಸಿದರೆ ಪಂಜಾಬ್ ಹರ್ಯಾಣಾ ರೈತರು ವರ್ಷಕ್ಕೂ ಅಧಿಕ ಅವಧಿಗೆ ನಡೆಸಿದ ಮತ್ತು ಸಂಸತ್‌ನ ಉಭಯ ಸದನಗಳಲ್ಲಿ ಈ ಮೂರೂ ಕಾಯ್ದೆಗಳನ್ನು ವಿಧಿವತ್ತಾಗಿ ಹಿಂತೆಗೆದುಕೊಳ್ಳವವರೆಗೂ ನಡೆಸಲುದ್ದೇಶಿಸಿರುವ ಮುಷ್ಕರ ಮತ್ತು ಅದಕ್ಕೆ ಕೇಂದ್ರದ ದೈತ್ಯ ಸರ್ಕಾರ ಮಣಿದುದು ಸ್ವತಂತ್ರ ಭಾರತದಲ್ಲಿ ಅಪರೂಪದಲ್ಲಿ ಅಪರೂಪದ್ದಾದ ಅಸಾಮಾನ್ಯ ಸಾಧನೆ. ಕೃಷಿ ಕಾಯ್ದೆ ವಿರೋಧಿಸಿ ನಡೆದ ರೈತರ ಮುಷ್ಕರಕ್ಕೆ ದೇಶದ ಬೇರೆ ಬೇರೆ ರಾಜ್ಯಗಳಿಂದಲೂ ರೈತರು ಮತ್ತು ರೈತ ಸಂಘಟನೆಗಳ ಬೆಂಬಲ ವ್ಯಕ್ತವಾಯಿತು. ದೇಶದ ಅನೇಕ ಕಡೆಗಳಲ್ಲಿ ಲೋಕಸಭೆಗೆ ವಿಧಾನ ಸಭೆಗೆ ನಡೆದ ಉಪ ಚುನಾವಣೆಯಲ್ಲೂ ರೈತಾಕ್ರೋಶ ಉಕ್ಕಿ ಹರಿದು ತಾನುಂಟೊ ಮೂರು ಲೋಕವುಂಟೊ ಎಂಬ ಅಹಮಿಕೆಯಲ್ಲಿ ಹೊರಟಿದ್ದ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಿತು.
೨೦೨೨ರ ಆರಂಭಿಕ ದಿನಗಳಲ್ಲಿ ನಡೆಯಬೇಕಿರುವ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಮಣಿಪುರ, ಗೋವಾ ವಿಧಾನ ಸಭೆ ಚುನಾವಣೆಗಳಿಗೆ ಇಷ್ಟರಲ್ಲೇ ಚುನಾವಣಾ ಆಯೋಗ ದಿನಾಂಕಗಳನ್ನು ಘೋಷಿಸಲಿದೆ. ಉತ್ತರ ಪ್ರದೇಶದಲ್ಲಿ ೨೦೧೭ರ ಚುನಾವಣೆಯಲ್ಲಿ ಒಟ್ಟು ೪೦೩ ಕ್ಷೇತ್ರಗಳಲ್ಲಿ ೩೧೨ ಕ್ಷೇತ್ರ ಗೆದ್ದಿದ್ದ ಬಿಜೆಪಿ/ ಎನ್‌ಡಿಎ ಈಗ ಬಹುದೊಡ್ಡ ಪ್ರತಿಕೂಲ ಅಲೆಯನ್ನು ಎದುರಿಸುತ್ತಿದೆ. ಆಡಳಿತ ವಿರೋಧಿ ಅಲೆಯಲ್ಲಿ ರೈತರು ನಡೆಸಿರುವ ಆಂದೋಲನವೂ ಸೇರಿ ಅದರ ತೀವ್ರತೆಯನ್ನು ಹೆಚ್ಚಿಸಿದೆ. ನರೇಂದ್ರ ಮೋದಿ ತೌರು ರಾಜ್ಯವಾಗಿರುವ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನ ಸಭೆಗೆ ೨೦೨೨ರ ಕೊನೆಯಲ್ಲಿ ಚುನಾವಣೆ ನಡೆಯಬೇಕಿದೆ. ೨೦೨೨ರಲ್ಲಿ ಒಟ್ಟಾರೆ ಏಳು ರಾಜ್ಯ ವಿಧಾನ ಸಭಾ ಚುನಾವಣೆ ನಡೆಯಲಿದ್ದು ೨೦೨೪ರ ಲೋಕಸಭಾ ಚುನಾವಣೆಗೆ ಅದು ಮುನ್ನುಡಿ ಬರೆಯಲಿದೆ. ಮಾತ್ರವಲ್ಲ ರಾಷ್ಟ್ರಪತಿ, ಉಪ ರಾಷ್ಟ್ರಪತಿ ಚುನಾವಣೆಯೂ ೨೦೨೨ರಲ್ಲಿ ನಡೆಯಬೇಕಿದೆ. ಹಾಲಿ ರಾಷ್ಟ್ರಪತಿ ರಮಾನಾಥ ಕೋವಿಂದ್ ಹಾಗೂ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಪಕ್ಕಾ ಬಿಜೆಪಿಯವರು. ಅವರಿಬ್ಬರನ್ನೂ ಮತ್ತೊಂದು ಅವಧಿಗೆ ಮುಂದುವರಿಸುವ ಇರಾದೆ ಆಡಳಿತ ಪಕ್ಷದಲ್ಲಿ ಇದೆಯೊ ಇಲ್ಲವೊ ಇನ್ನೂ ಬಹಿರಂಗವಾಗಿಲ್ಲ. ಐದು ವರ್ಷದ ಹಿಂದೆ ಈ ಇಬ್ಬರದೂ ಆಯ್ಕೆ ನಿರ್ವಿಘ್ನವಾಗಿ ನಡೆದಿತ್ತು. ಈ ಆಯ್ಕೆಗೆ ಮತದಾರರಲ್ಲಿ ಹೆಚ್ಚಿನವರು ವಿಧಾನ ಸಭಾ ಸದಸ್ಯರೇ ಆಗಿರುವುದರಿಂದ ಏಳು ರಾಜ್ಯ ವಿಧಾನ ಸಭೆಯನ್ನು ಹೆಚ್ಚಿನ ಬಹುಮತದಲ್ಲಿ ಗೆಲ್ಲುವ ಒತ್ತಡ ಮೋದಿಯವರ ಮೇಲಿದೆ.
ಉತ್ತರ ಪ್ರದೇಶ ಮತ್ತು ಗುಜರಾತನ್ನು ಪುನಃ ಗೆಲ್ಲದೆ ಹೋದರೆ ಕೇಂದ್ರ ಸರ್ಕಾರವನ್ನು ಆತಂಕದ ಭೂತ ಬೆನ್ನು ಹತ್ತುತ್ತದೆ. ಉತ್ತರ ಪ್ರದೇಶವನ್ನು ಕೈವಶ ಮಾಡಿಕೊಂಡ ಪಕ್ಷ ಕೇಂದ್ರದಲ್ಲಿ ನಿರಾತಂಕ ಅಧಿಕಾರ ಸ್ಥಾಪಿಸುತ್ತದೆಂಬ ಮಾತು ಇದೆ. ತಮ್ಮ ಸರ್ಕಾರವನ್ನೂ ಮರ್ಯಾದೆಯನ್ನೂ ಉಳಿಸಿಕೊಳ್ಳುವುದಕ್ಕೆ ಉತ್ತರ ಪ್ರದೇಶವನ್ನು ಪುನಃ ಗೆಲ್ಲುವುದು ಮೋದಿ ಅಜೆಂಡಾ. ನಂತರದ ಹೆಜ್ಜೆ ಗುಜರಾತನ್ನು ಗೆಲ್ಲುವ ಮೂಲಕ ವ್ಯಕ್ತಿಗತವಾಗಿ ಮರ್ಯಾದೆಯನ್ನು ಪ್ರತಿಷ್ಟೆಯನ್ನೂ ಕಾಪಾಡಿಕೊಳ್ಳುವುದು. ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವುದಾಗಿ ಮೋದಿ ಮಾಡಿರುವ ಘೋಷಣೆಯ ಹಿಂದಿರುವ ಅಸಲಿಯತ್ತು ಇದು. ಇದೇನೇ ಇರಲಿ; ಕಾರಣ ಮತ್ತು ರಾಜಕಾರಣದ ಆಚೆ ನಿಂತು ನೋಡುವುದಾದರೆ ಆತ್ಮಾವಲೋಕನಕ್ಕೆ ಮೋದಿ ಒಂದು ಹೆಜ್ಜೆ ಮುಂದಿಟ್ಟಿರುವುದು ಆರೋಗ್ಯಕರ ಪ್ರಜಾಪ್ರಭುತ್ವದ ದೃಷ್ಟಿಯಿಂದ ಸ್ವಾಗತಾರ್ಹ ಬೆಳವಣಿಗೆ.
ಸರ್ಕಾರ ತಪ್ಪು ಮಾಡುತ್ತದೆ; ಎಡವುತ್ತದೆ. ತಪ್ಪು ಮಾಡದ ಸರ್ಕಾರವನ್ನು ಭಾರತ ಇನ್ನೂ ಕಾಣಬೇಕಿದೆ. ಮೋದಿ ಸರ್ಕಾರವೂ ವಿವೇಚನೆ ಮರೆತು ಒಂದಲ್ಲ ಹಲವು ತಪ್ಪು ಮಾಡಿದೆ. ಕೃಷಿ ಕಾಯ್ದೆ ವಿಚಾರದಲ್ಲಿ ತಾನು ಮಾಡಿರುವ ತಪ್ಪು ಅದಕ್ಕೆ ಮನವರಿಕೆ (ಯಾವ ಕಾರಣಕ್ಕಾದರೂ ಸರಿ) ಆಗಿದೆ. ೧೩೦ ಕೋಟಿಗೂ ಅಧಿಕ ಜನಸಂಖ್ಯೆಯುಳ್ಳ ದೇಶವೊಂದರ ಪ್ರಧಾನಿ ತಾನು ಮತ್ತು ತಾನು ನಡೆಸುವ ಸರ್ಕಾರ ತೆಗೆದುಕೊಂಡ ತಪ್ಪು ನಡೆಯ ವಿಚಾರದಲ್ಲಿ ದೇಶದ ರೈತರ ಮುಂದೆ ಬಹಿರಂಗ ಕ್ಷಮೆಯಾಚಿಸಿರುವುದು ಉತ್ತಮ ಬೆಳವಣಿಗೆ. ಮುಂದಿನ ದಿನಗಳಲ್ಲಿ ದುಡುಕಿನ ಆತುರದ ತೀರ್ಮಾನಗಳಿಗೆ ಬರುವ ಮುನ್ನ ಹಿಂದೆಮುಂದೆ ಯೋಚಿಸುವ ಪ್ರವೃತ್ತಿ ಜಾಗೃತವಾದೀತೇನೋ ಕಾದು ನೋಡಬೇಕಿದೆ.
ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿ ಎಂದರೆ ಪ್ರಧಾನಿಯಾದವರು ಕ್ಷಮಾಯಾಚನೆಗೆ ಮುಂದೆ ಬರದೆ ಹಿಂದೆಮುಂದೆ ನೋಡುತ್ತಾರೆ ಎನ್ನುವುದು. ಈ ಮಾತಿಗೆ ಅಪ್ಪಟ ಮತ್ತು ಸಾರ್ವಕಾಲಿಕ ಉದಾಹರಣೆ ಇಂದಿರಾ ಗಾಂಧಿ ಸರ್ಕಾರ ದೇಶದ ಮೇಲೆ ಎಪ್ಪತ್ತರ ದಶಕದಲ್ಲಿ ಹೇರಿದ ತುರ್ತುಪರಿಸ್ಥಿತಿ. ೧೮ ತಿಂಗಳ ಕಾಲ ಇಡೀ ದೇಶ ಬಂದೀಖಾನೆಯಾಗಿತ್ತು. ಜೈಲಿನೊಳಗಿದ್ದವರಿಗೆ ಹೊರ ಪ್ರಪಂಚದ ಆಗು ಹೋಗು ತಿಳಿಯುತ್ತಿರಲಿಲ್ಲ. ಹೊರಗಿದ್ದವರಿಗೆ ಜೋರಾಗಿ ಉಸಿರಾಡಿಸಿದರೂ ಅಪಾಯವೇನೋ ಎಂಬಂಥ ಭಯ ಕಾಡಿತ್ತು. ಜಿ.ಬಿ. ಜೋಷಿಯವರ “ಸತ್ತವರ ನೆರಳು” ನಾಟಕದಲ್ಲಿ ಆಡುವ ಬಾಯಿ ಕಟ್ಟಿದರು, ಕೇಳುವ ಕಿವಿ ಕಟ್ಟಿದರು, ನೋಡುವ ಕಣ್ಣು ಮುಚ್ಚಿಸಿದರೆಂಬ ಮಾತು ಬರುತ್ತದೆ. ತುರ್ತುಪರಿಸ್ಥಿತಿಯ ಕರಾಳ ಕಾಲಘಟ್ಟ ನಮ್ಮ ಜನತಂತ್ರದ ಮೇಲೆ ಇಂಥ ಮಾಯವಾಗದ ಗಾಯದ ಕಲೆಯನ್ನು ಉಳಿಸಿಬಿಟ್ಟಿತು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಮತ್ತೆ ಪ್ರಚಂಡ ಬಹುಮತದಿಂದ ಅಧಿಕಾರಕ್ಕೆ ಬರಬೇಕಿತ್ತು. ಆ ಸಮೀಕ್ಷೆಯನ್ನು ನಂಬಿಕೊಂಡ ಇಂದಿರಾಗಾಂಧಿ, ತುರ್ತುಪರಿಸ್ಥಿತಿಯನ್ನು ಹಿಂತೆಗೆದುಕೊಂಡು ಲೋಕಸಭೆಗೆ ಚುನಾವಣೆ ನಡೆಸಲು ನಿರ್ಧರಿಸಿದರು. ಫಲಿತಾಂಶ ಏನಾಯಿತೆನ್ನುವುದು ಎಲ್ಲರಿಗೂ ಗೊತ್ತಿದೆ. ಸಮೀಕ್ಷೆಯ ಪೊರೆ ಕವಿದಿದ್ದ ಇಂದಿರಾ ಕಣ್ಣಿಗೆ ವಾಸ್ತವ ಕಾಣಿಸಲಿಲ್ಲ. ತುರ್ತು ಪರಿಸ್ಥಿತಿ ಹೇರಿದ್ದಕ್ಕೆ ಕ್ಷಮೆ ಯಾಚಿಬೇಕೆಂಬ ಸುಬುದ್ಧಿ ಅವರಿಗೆ ಬರಲಿಲ್ಲ. ಹಾಗೇನಾದರೂ ದೇಶದ ಕ್ಷಮೆಯನ್ನು ಅವರು ಕೋರಿದ್ದರೆ ಕಾಂಗ್ರೆಸ್ಸು ಅಷ್ಟು ಹೀನಾಯ ಸೋಲು ಕಾಣುತ್ತಿರಲಿಲ್ಲ.

New Delhi: Farmers celebrate after Prime Minister Narendra Modi announced the repealing of the three Central farm laws, at Ghazipur Border in New Delhi, Friday, Nov. 19, 2021. (PTI Photo/Ravi Choudhary)(PTI11_19_2021_000083B)
ನರೇಂದ್ರ ಮೋದಿ ಅವರಿಗೆ ಈ ಇತಿಹಾಸದ ನೆನಪು ಚೆನ್ನಾಗಿಯೆ ಇದೆ. ೫+೨ ರಾಜ್ಯಗಳ ವಿಧಾನ ಸಭೆ ಚುನಾವಣೆ ಹೆಬ್ಬಾಗಿಲಲ್ಲಿ ನಿಂತಿರುವ ಹೊತ್ತಿನಲ್ಲಿ ಕ್ಷಮೆ ಎಂಬ ಒಂದು ಪದ ಮಾಡಬಹುದಾದ ಪವಾಡ ಏನು ಎನ್ನುವುದರ ಅರಿವು ಅವರಲ್ಲಿ ಜಾಗೃತವಾಗಿದೆ. ಆ ಕಾರಣವಾಗಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವ ಘೋಷಣೆ ಅವರಿಂದ ಬಂದಿದೆ. ದೇಶದ ರೈತರ ಕ್ಷಮೆಯಾಚಿಸಿರುವ ಮೋದಿ ಮಾತಿನಲ್ಲಿ ಇರಬಹುದಾದ ಸತ್ಯಪ್ರಜ್ಞೆಯ ಜಾಗೃತಾವಸ್ಥೆಯನ್ನೂ, ರಾಜಕಾರಣದ ಮಸಲತ್ತನ್ನೂ ಮುಂದಿನ ದಿನಗಳಲ್ಲಿ ದೇಶ ನೋಡಲಿದೆ.