ಚಿದಂಬರ ಜೋಶಿ,ಚಿಕಾಗೂ.
ಚಿದಂಬರ ಜೋಶಿ ಅವರು ಮೂಲತಃ ರಾಯಚೂರು ಜಿಲ್ಲೆಯ, ಗಂಗಾವತಿಯವರು. ಪ್ರಸ್ತುತ ಅನಿವಾಸಿ ಭಾರತೀಯ. ಕಳೆದ ೩ ದಶಕಗಳಿಂದ ಉತ್ತರ ಅಮೆರಿಕಾದ ಚಿಕಾಗೊದಲ್ಲಿ ನೆಲಿಸಿದ್ದಾರೆ. ಅವರ ಕನ್ನಡ ಪ್ರೇಮ ಇವತ್ತಿಗೂ ಮಾಸಿಲ್ಲ. ಅವರ ವಿಶಿಷ್ಟ ಚಿಂತನೆ ಹಾಗೂ ಬರವಣಿಗೆಯ ಶೈಲಿ, ಓದುಗರ, ಕೇಳುಗರ ವಿಚಾರಶಕ್ತಿಯನ್ನು ಪ್ರಚೋದಿಸುತ್ತವೆ, ಸವಾಲು ಒಡ್ಡುತ್ತವೆ. ಅವರು ಶಿಕ್ಷಣ ಮತ್ತು ಅದರ ವ್ಯವಸ್ಥೆ ಕುರಿತು ಬರೆದಿದ್ದಾರೆ.
ಮೂಲ ಗುಣಗಳ ಪ್ರಕಾರ ಶಿಕ್ಷಣ ದೊರಕುವ ವ್ಯವಸ್ಥೆಯಾಗಬೇಕು
ಹಿಂದಿನ ೪ ಕಂತುಗಳಿಗೆ ಈ ಸಂಪರ್ಕ ಕೊಂಡಿಗಳನ್ನು ಬಳಸಿ.
ಈಗ ಮುಂದುವರೆಸೋಣ.
ಗುಣಗಳಲ್ಲಿ ೩ ವಿಧಗಳು ಎಂದು ನಮಗೆ ಈಗಾಗಲೇ ತಿಳಿದಿದೆ. ಅಲ್ಲವಾ? ಸಾತ್ವಿಕ, ರಾಜಸಿಕ ಹಾಗು ತಾಮಸಿಕ ಗುಣಗಳು. ಹಾಗಾದರೆ ಇದಕ್ಕೂ ಶಿಕ್ಷಣಕ್ಕೂ, ಹಾಗೂ ಉದ್ಯೋಗಕ್ಕೂ ಏನು ಸಂಬಂಧ? ಇದು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಹೇಗೆ ಉಪಯುಕ್ತ ಅಂತಾ ಕೇಳ್ತೀರಾ? ಇದೆ, ತುಂಬಾ ಹತ್ತಿರದ ಸಂಬಂಧ ಇದೆ. ಇನ್ನೂ ಹೇಳುವದಾದರೆ, ಒಂದಕ್ಕೊಂದು ಗಾಢ ಸಂಬಂಧ ಅಷ್ಟೇ ಎಲ್ಲ, ಒಂದನ್ನ ಬಿಟ್ಟರೆ ಇನ್ನೊಂದು ಅರ್ಥಹೀನ. ಚುಕ್ಕಾಣಿಯಿಲ್ಲದ ಹಡಗಿನಂತೆ. ನಮ್ಮ ದೇಶದ ಶಿಕ್ಷಣ ಪದ್ಧತಿ ಹಾಗೂ ವ್ಯವಸ್ಥೆ ಸಧ್ಯಕ್ಕೆ, ಚುಕ್ಕಾಣಿಯಿಲ್ಲದ ಹಡಗೇ ಆಗಿದೆ.
ಸಾತ್ವಿಕ ಗುಣ ಬುದ್ಹಿ ಶಕ್ತಿಯ ಮೂಲ. ಹಾಗೆಯೇ, ತಾಮಸಿಕ ಗುಣ ದೈಹಿಕ ಶಕ್ತಿಯ ಮೂಲ. ರಾಜಸಿಕ ಗುಣ, ಬುದ್ಧಿ ಹಾಗೂ ದೈಹಿಕ ಶಕ್ತಿಗಳ ಮೂಲ.
ನಾನು ಮೊದಲೇ ಹೇಳಿದಂತೆ, ವ್ಯಕ್ತಿಯ ಮೂಲ ಗುಣವನ್ನು ಗುರಿತಿಸಿದ ಮೇಲೆ, ಯಾವ ವೃತ್ತಿ ಕ್ಷೇತ್ರಗಳಲ್ಲಿ ಒಲವು ಇದೆ ಎಂದು ಗುರುತಿಸಬೇಕು. ನಂತರ, ಇದೆ ನಿಟ್ಟಿನಲ್ಲಿ ಶಿಕ್ಷಣ ಕೊಡಿಸುವ ವ್ಯವಸ್ಥೆ ಆಗಬೇಕು. ಈ ಗುರುತಿಸುವಿಕೆ ಕೇವಲ ಒಮ್ಮೆ ಮಾಡಿ ಬಿಡುವುದಲ್ಲ. ಲಕ್ಷ್ಯದತ್ತ ಸಾಗುವಾಗ ಹೇಗೆ ನಾವು ದಾರಿಯತ್ತ ಗಮನ ಇಟ್ಟಿರುತ್ತೇವೆಯೋ, ಹಾಗೇನೇ ಒಲವುಗಳ ಮತ್ತು ದಿಕ್ಕುಗಳ ಧೃಡೀಕರಣ ಆಯಕೆಟ್ಟಿನ ಹಂತಗಳಲ್ಲಿ ಆಗುತ್ತಲಿರಬೇಕು. ಬದಲಾವಣೆಯ ಅವಶ್ಯಕತೆಯಿದ್ದಲ್ಲಿ, ತಕ್ಕ ಅನುಕೂಲಗಳನ್ನು ಮಾಡಿ ಕೊಡಬೇಕು. ಇದು ಎಲ್ಲ ವ್ಯವಸ್ಥೆಗಳ ಹೊಣೆ.

ಹಾಗಾದರೆ ಹೆಚ್ಚಾಗಿ ಬುದ್ಧಿ ಶಕ್ತಿಯನ್ನು ಅವಲಂಬಿಸಿರುವ ಕೆಲಸಗಳು ಆವು? ವಿಜ್ಞಾನ, ಸಂಶೋಧನೆ, ಬೋಧನೆ, ವೈದ್ಯಕೀಯ, ಪೌರೋಹಿತ್ಯ, ತಂತ್ರ ಜ್ನ್ಯಾನ, ರಾಜಕೀಯ, ನ್ಯಾಯ ವ್ಯವಸ್ಥೆ, ಪತ್ರಿಕೋದ್ಯಮ, ಇತ್ಯಾದಿ. ಒಪ್ಪುತ್ತೀರಾ?
ಗುಣಶಕ್ತಿ ನಾವೇ ಸಂಪಾದಿಸಿದ, ನಮ್ಮದೇ ಆದ ಸ್ವಂತ ಆಸ್ತಿ. ಬೇರೆ ಯಾರ ಸ್ವತ್ತೂ ಅಲ್ಲ. ಇದು ಯಾವ ಕೆಲಸ ಯಾರು ಮಾಡಿದರೆ ಪರಿಣಾಮಕಾರಿ, ಉತ್ತಮ ಎನ್ನುವ ನಿಟ್ಟಿನಲ್ಲಿ ಒಂದು ಪರಿಣಾಮಕಾರಿ ಹೆಜ್ಜೆ. ಉದಾಹರಣೆಗೆ, ಬೆಕ್ಕು ಜಿಗಿಯುತ್ತದೆ. ಕೋತಿ ಬೆಕ್ಕಿಗಿಂತಲೂ ಜ್ಯಾಸ್ತಿ ದೂರ ಜಿಗಿಯಬಲ್ಲದು, ಅಷ್ಟೇ ಅಲ್ಲ, ಒಂದು ಮರದಿಂದ ಇನ್ನೊಂದು ಮರಕ್ಕೆ ಹಾರಬಲ್ಲ ಶಕ್ತಿಯೂ ಉಂಟು. ಇಲ್ಲಿ ಹನುಮಂತನಂತಹ ಕಪಿಶ್ರೇಷ್ಠನನ್ನು ತರುವ ಅಗತ್ಯವಿಲ್ಲ. ಹನುಮಂತನ ಎತ್ತರಕ್ಕೆ ಬೆಳೆಯುವುದು ಸಾಧಾರಣ ವ್ಯಕ್ತಿತ್ವಗಳಿಗೆ ನಿಲುಕುವ ಮಾತಲ್ಲ.ಈಗ ಉದಾಹರಣೆಯನ್ನು ಮುಂದುವರೆಸೋಣ. ಪಕ್ಷಿಗಳು ಒಂದು ಸಾಧಾರಣ ಕೋತಿಗಿಂತ ಹೆಚ್ಚುದೂರ ಹಾಗು ಎತ್ತರಕ್ಕೆ ಹಾಗು ಹೆಚ್ಚು ವೇಗದಿಂದ ಹಾರಬಲ್ಲವು. ಪಕ್ಷಿಗಳಲ್ಲೇ ತಾರತಮ್ಯ ಕಾಣಬಹುದು. ಗುಬ್ಬಿಗಿಂತ ಕಾಗೆ, ಕಾಗೆಗಿಂತ ಹದ್ದು, ಹದ್ದಿಗಿಂತ ಹಂಸ ಹೆಚ್ಚು ಎತ್ತರ, ದೂರ ಹಾಗು ವೇಗದಲ್ಲಿ ಹಾರಬಹುದು. ಹಾಗೆಯೇ ಪ್ರತಿ ವ್ಯಕ್ತಿಯ ಶಕ್ತಿಗಳು ಬೇರೆ ಬೇರೆ. ಈ ಶಕ್ತಿಗಳಿಗನುವಾಗಿ ಶಿಕ್ಷಣ, ಹಾಗೂ ವೃತ್ತಿ.

ತಾಮಸಿಕ ಗುಣವನ್ನು ಅವಲಂಬಿಸಿರುವ ವೃತ್ತಿಗಳೆಂದರೆ ಉದಾಹರಣೆಗೆ ಸೇನಾ, ಆರಕ್ಷಣಾ, ಕಟ್ಟಡ, ರಸ್ತೆ ನಿರ್ಮಾಣ, ಕಾರ್ಖಾನೆ ಇತ್ಯಾದಿ.
ಮತ್ತೆಲ್ಲ ಕೆಲಸಗಳು, ರಾಜಸಿಕ ಗುಣದ ಮೇಲೆ ಅವಲಂಬಿಸಿದೆ. ರಾಜಸಿಕ, ಸ್ವಲ್ಪ ಸಾತ್ವಿಕ ಹಾಗು ಸ್ವಲ್ಪ ತಾಮಸಿಕ ಗುಣಗಳ ಮಿಶ್ರಣ. ಹೀಗಾಗಿ ಬಹುತೇಕ ಜನರು ಇದೇ ವರ್ಗಕ್ಕೆ ಸೇರುತ್ತಾರೆ.
ಎಲ್ಲಾ ವಿದ್ಯಾಸಂಸ್ಥೆಗಳು, ಈ ನಿಟ್ಟಿನಲ್ಲೇ ಸಾಗಬೇಕು. ಅಗತ್ಯಕ್ಕಿಂತ ಹೆಚ್ಚಿನ ವಿದ್ಯಾ ಸಂಸ್ಥೆಗಳು ಬೇಡ. ಕಳಪೆ ವಿದ್ಯಾಸಂಸ್ಥೆಗಳು ಬೇಡ. ಇಡೀ ರಾಷ್ಟ್ರಕ್ಕೆ, ಒಂದೇ ಆದರೆ ವಿಶಾಲವಾದ, ಪಠ್ಯಕ್ರಮ, ಕಲಿಸುವ ಪದ್ಧತಿ ಬರಬೇಕು. ಪ್ರಾಯೋಗಿಕ ತರಬೇತಿಯತ್ತ ಹೆಚ್ಚಿನ ಒತ್ತು ಇರಬೇಕು. ಪ್ರತಿಶತ ೭೦ ನಷ್ಟು. ಸಮಯಕ್ಕೆ ಅನುಗುಣವಾಗಿ, ರಾಷ್ಟ್ರದ ಅಗತ್ಯಗಳು ಬದಲಾಗುತ್ತವೆ, ನಮ್ಮ ಪಠ್ಯಕ್ರಮಗಳು, ಅದೇ ವೇಗದಲ್ಲಿ, ಅದೇ ದಿಕ್ಕಿನತ್ತ, ತತ್ಕ್ಷಣವೇ ಬದಲಾಗಬೇಕು.
ಇನ್ನು, ನಾನು ಮುಂದೆ ಹೇಳಲಿರುವ ವಿಚಾರಗಳು ಕೆಲವರಿಗೆ ವಿಪರೀತ ಎನ್ನಿಸಬಹುದು. ಒಪ್ಪಬಹುದು. ಒಪ್ಪದೇ ಇರಬಹುದು. ಕೆಲವೊಂದು ಅಂಶಗಳು, ವಾಮ ಪಂಥೀಯ ಎನ್ನಿಸಿದರೆ, ಇನ್ನೂ ಕೆಲವು ಅಂಶಗಳು ಬಲಪಂಥೀಯ ಅನ್ನಿಸಬಹುದು. ನನ್ನ ದೃಷ್ಟಿಗಳಲ್ಲಿ ಈ ವಿಚಾರಗಳು ಯಾವ ಪಂಥಕ್ಕೂ ಸೇರಿಲ್ಲ. ಇವು ಕೇವಲ ವಿಚಾರಗಳು ಅಷ್ಟೇ. ಬಳಕೆಯಲ್ಲಿ ತಂದಲ್ಲಿ, ಪರಿಣಾಮಕಾರಿ.

ರಾಷ್ಟ್ರವೆಂದರೇನು? ಇದು ಭೌಗೋಳಿಕವೆ? ಅಂದರೆ ಕೇವಲ ಗಡಿಯಿಂದ ನಿರ್ಧಾರವಾಗುತ್ತದೆಯೋ? ಅಥವಾ ಇದರಲ್ಲಿ ಆ ಗಡಿಯೊಳಗೆ ಬರುವ ಎಲ್ಲ ಚರಾಚರ ವಸ್ತು, ಜನರೂ ಬರುವರೋ? ನನ್ನ ಪ್ರಕಾರ ಇದು ಕೇವಲ ಭೌಗೋಳಿಕವಲ್ಲ. ಗಡಿಯ ಒಳಗಿರುವ ಎಲ್ಲವೂ ರಾಷ್ಟ್ರದ ಸಂಪತ್ತು. ಇದರಲ್ಲಿ, ಭೂಮಿ, ಜಲದಿಂದ ಹಿಡಿದು, ಜನಶಕ್ತಿ ಕೂಡ ಸೇರಿದೆ. ಇದನ್ನು ಒಪ್ಪುತ್ತೀರಿ ಎಂದರೆ, ಮುಂದಿನ ವಿಚಾರಗಳು ಹೊಸತಾದರೂ, ಅರಗಿಸಿಕೊಳ್ಳಲು ಕಷ್ಟವಾದರೂ, ಒಪ್ಪುವತ್ತ ಸಾಗಬಹುದು.
ರಾಷ್ಟ್ರದ ಸಂಪತ್ತು ಎಂದ ಮೇಲೆ, ಸ್ವಂತದ್ದು ಯಾವುದೂ ಇಲ್ಲ. ಇರಬೇಕಿಲ್ಲ. ನಾವೇನು ಈ ಭೂಮಿಯ ಮೇಲೆ ಶಾಶ್ವತವಾಗಿ ಇರಲು ಬಂದಿದ್ದೇವೆಯೇ? ಇಲ್ಲವಲ್ಲ. ಹಾಗಾದರೆ, ಇದು ನನ್ನ ಸ್ವತ್ತು ಅನ್ನುವುದು ಏಕೆ? ಯೋಚನೆ ಮಾಡಿ.
ಈ ದೃಷ್ಟಿಕೋಣದಿಂದ ನೋಡಿದಲ್ಲಿ, ಜನಶಕ್ತಿ ರಾಷ್ಟ್ರಕ್ಕೆ ಸೇರಿದ್ದು. ಅಂದರೆ ಇದನ್ನು ಪೋಷಿಷಿ, ಬೆಳೆಸುವ ಕೆಲಸ ರಾಷ್ಟ್ರದ ಕೆಲಸ. ಹಾಗಾದಲ್ಲಿ ಹುಟ್ಟುವ ಎಲ್ಲಾ ವ್ಯಕ್ತಿಗಳಿಗೂ, ಕಲಿಸುವ ಹೊಣೆ ರಾಷ್ಟ್ರದ ಹೊಣೆ. ಕೇವಲ ಕುಟುಂಬದ ಹೊಣೆಯಾಗಕೂಡದು. ಅಂದರೆ ನನ್ನ ಮೊದಲನೇ ಪರಿಹಾರ ಶಿಕ್ಷಣ ವ್ಯವಸ್ಥೆಯ ಬದಲಾವಣೆಯ ಜೊತೆಗೆ, ಅವರವರ ಮೂಲ ಗುಣಗಳ ಪ್ರಕಾರ ಆ ಶಿಕ್ಷಣವನ್ನು ಎಲ್ಲರಿಗೂ ದೊರಕಿಸುವ, ಕೊಡುವ ಗುರುತರ ಹೊಣೆ ರಾಷ್ಟ್ರದ್ದಾಗಿರಬೇಕು.

ಯಾರು ಇದರ ಖರ್ಚನ್ನು ವಹಿಸಬೇಕು ಎನ್ನುವ ವಿಚಾರ ಬರುತ್ತದೆ. ನನ್ನ ಪರಿಹಾರದಲ್ಲಿ, ಇದು ಕುಟುಂಬದ ಹೊಣೆ ಆಗಕೂಡದು. ಇದು ರಾಷ್ಟ್ರದ ಹೊಣೆಯಾಗಬೇಕು. ಎಲ್ಲ ಮಟ್ಟದಲ್ಲೂ ರಾಷ್ಟ್ರದ ಹೊಣೆ. ಇದು ಹೇಗೆ ಸಾಧ್ಯ ಅಂತೀರಾ? ಸಾಧ್ಯ. ಹೇಗೆ ಮನೆಯಲ್ಲಿ ಹುಟ್ಟಿದ ಮಕ್ಕಳಿಗೆ ಬೆಳೆಸುವ ಜವಾಬ್ದಾರಿ ಪೋಷಕರದ್ದೋ, ರಾಷ್ಟ್ರದ ಜನರನ್ನು ಪೋಷಕರಂತೆ ಬೆಳೆಸುವ ಜವಾಬ್ದಾರಿ, ರಾಷ್ಟ್ರದ್ದು. ಬೆಳೆದ ಮಕ್ಕಳು, ಗಳಿಸಲು ಪ್ರಾರಂಭಿಸಿದ ಮೇಲೆ ಹೇಗೆ ಕುಟುಂಬಕ್ಕೆ ಮರಳಿ ಸಹಾಯ ಮಾಡುತ್ತಾರೆಯೋ, ಜನರು ಒಂದು ಹಂತದ ನಂತರ, ರಾಷ್ಟ್ರಕ್ಕೆ ಹಿಂತಿರುಗಿಸಿ ಕೊಡಬೇಕು.
ರಾಷ್ಟ್ರಾದ್ಯಂತ ಒಂದೇ ಶಿಕ್ಷಣ ಕ್ರಮ ಹಾಗೂ ಒಂದೇ ರೀತಿಯ ನಿರ್ವಹಣಾ ಕ್ರಮ ಬಲು ಮುಖ್ಯ.
ಮುಂಬರುವ ಲೇಖನಗಳಲ್ಲಿ ರಾಷ್ಟ್ರ ಸಂಪತ್ತು ಹಾಗೂ ಉದ್ಯೋಗಕ್ಕೆ ಇರುವ ನಂಟನ್ನು ನೋಡೋಣ. ಹೊಣೆಗಾರಿಕೆಯನ್ನು ಹೇಗೆ ನಿಗದಿ ಮಾಡಿ ಹಂಚಬೇಕು, ಅದಕ್ಕೆ ತಕ್ಕ ಸಂಭಾವನೆ ಹೇಗಿರಬೇಕು, ಇತ್ಯಾದಿ ವಿಷಯಗಳನ್ನು ಕೂಲಂಕಷವಾಗಿ ನೋಡೋಣ.
ನೀವೇನಂತೀರಿ?
ನಿಮ್ಮ ಅನಿಸಿಕೆಗಳನ್ನು, ವಿಚಾರಗಳನ್ನು ನನ್ನೊಡನೆ ಹಂಚಿಕೊಳ್ಳಲು ನನ್ನ ಈ email ನ್ನು ಬಳಸಿ – AnswerGuy001@gmail.com