ಮಳೆಕೊಯ್ಲು ಪದ್ಧತಿಯನ್ನು ಅಳವಡಿಸಿದ ಭಗೀರಥ ಬಯಕಾರ ರಾಮಪ್ಪಯ್ಯ
ಮಳೆಕೊಯ್ಲು ಎಂಬ ಪದ್ಧತಿ ಪ್ರಾಚೀನವೆಂಬುದು ತಿಳಿದ ಸಂಗತಿ. ಮಳೆಯ ನೀರನ್ನು ಅಡ್ಡಗಟ್ಟಿ ತಡೆದು ವರ್ಷಪೂರ್ತಿ ಬಳಸಿಕೊಂಡ ಪ್ರಾಚೀನರ ತಿಳುವಳಿಕೆ ಅಪರಿಮಿತವಾದದ್ದು, ವಿಜಯನಗರ ಕಾಲದಲ್ಲಿ ಇದು ಸ್ವಲ್ಪ ಹೆಚ್ಚೇ ಇತ್ತು. ಇದಕ್ಕೆ ಸಾಮ್ರಾಜ್ಯದ ಹರಹು, ವಿಸ್ತಾರ ಮತ್ತು ಸಂಪನ್ಮೂಲಗಳು ಕಾರಣವಿರಬೇಕು, ಈ ಅವಧಿಯಲ್ಲಿ ಅರಸ ಸಾಮಂತ, ಮಾಂಡಲಿಕ, ಅಧಿಕಾರಿಗಳಿಂದ ಅನೇಕ ಅಭಿವೃದ್ಧಿ ಚಟುವಟಿಕೆಗಳು ನಡೆದಿವೆ, ಇದಕ್ಕೆ ಲಕ್ಷ್ಮೀಧರನ ಶಾಸನದಲ್ಲಿರುವ “ಕೆರೆಯಂ ಕಟ್ಟಿಸು ಭಾವಿಯಂ ಸವೆಸು ದೇವಾಗಾರಮಂ ಮಾಡಿಸು ಸೆರೆಯೊಳ್ ಸಿಲ್ಕಿದನಾಥರಂ ಬಿಡಿಸು ಮಿತ್ರರ್ಗಿಂಬುಕೆಯ್ ನಂಬಿದವರ್ಗೆರೆವೆಟ್ಟಾಗಿರು ಶಿಷ್ಟರಂ ಪೊರೆ” ಎಂಬ ಸಾಲುಗಳು ಅಂದಿನ ಜನರ ಆದರ್ಶವೇ ಸರಿ,ಇಂದಿನ ಆಧುನಿಕ ಕೈಗಾರಿಕಾ ತಂತ್ರಜ್ಞಾನಗಳಿಂದ ಕೂಡಿದ ವೈಜ್ಞಾನಿಕ ಯುಗದಲ್ಲಿ ಕೆರೆ, ಅಣೆಕಟ್ಟೆ ನಿರ್ಮಾಣದಂತಹ ಕೆಲಸಕಾರ್ಯಗಳು ಎಷ್ಟೊಂದು ಕಷ್ಟದಾಯಕವೆಂಬುದು ಗೊತ್ತೇ ಇದೆ.
ಆದರೆ ಇಂತಹ ಯಾವುದೇ ಯಂತ್ರಗಳಿಲ್ಲದೆ ಎತ್ತು, ಕೋಣಗಳಂತಹ ಪ್ರಾಣಿಗಳು ಮತ್ತು ಮಾನವ ಶ್ರಮವನ್ನೇ ನೆಚ್ಚಿ ಕೆರೆಕಟ್ಟೆಗಳೆಂಬ ಬೃಹತ್ ಯೋಜನೆಗಳನ್ನು ಹಿಂದಿನವರು ಹೇಗೆ ಹಮ್ಮಿಕೊಂಡಿದ್ದರು ಎಂಬುದನ್ನು ನಾವು ಊಹಿಸಿಕೊಳ್ಳಲೂ ಕಷ್ಟಸಾಧ್ಯ. ಅಂತಹ ಬೃಹತ್ ಮತ್ತು ಮಹತ್ವದ ಯೋಜನೆಗಳನ್ನು ನಿರ್ಮಿಸಿ ಸಾಧಿಸಿ ತೋರಿಸಿದ ಧೀಮಂತ ಅಧಿಕಾರಿಗಳಲ್ಲಿ ವಿಜಯನಗರ ಕಾಲದ ಬಯಕಾರ ರಾಮಪ್ಪಯ್ಯ ಅಗ್ರಗಣ್ಯವಾಗಿ ನಿಲ್ಲುತ್ತಾನೆ. ವಿಜಯನಗರ ಕಾಲದ ಮಟ್ಟಿಗೆ ಬರದ ನಾಡಿನಲ್ಲಿ ಮಳೆಯ ನೀರನ್ನು ತಡೆಯಲು ಹದಿನಾರು ಕೆರೆಗಳನ್ನು ನಿರ್ಮಿಸಿ, ಜೀವಜಲವನ್ನು ಸಂಗ್ರಹಿಸಿ ಕೃಷಿ ಚಟುವಟಿಕೆಯನ್ನು ಚುರುಕುಗೊಳಿಸಿದ ಭಗೀರಥ ಬಯಕಾರ ರಾಮಪ್ಪಯ್ಯನೇ ಆಗಿದ್ದಾನೆ. ವಿಜಯನಗರ ಅರಸ ಅಚ್ಯುತರಾಯ ಸದಾಶಿವರಾಯರಿಂದ ಹಿಡಿದು ರಾಮರಾಯನ ಕಾಲದವರೆಗೂ ಆನೇಕ ಉನ್ನತ ಹುದ್ದೆಗಳನ್ನು ಅಲಂಕರಿಸಿದ ಧೀಮಂತನಿವನು. ಅವನು ಮೂಲತಃ ತಮಿಳುನಾಡಿನ ಚೆಂಗಲಪೇಟೆಯ ಪಾದುಕಾಪ್ಪಂ ಗ್ರಾಮದವನು. ಇವನ ತಾತ, ಮುತ್ತಾತರಿಂದ ಹಿಡಿದು ಅಜ್ಜ, ಅಪ್ಪ, ಚಿಕ್ಕಪ್ಪಂದಿರವರೆಗೂ ವಿಜಯನಗರ ಸಾಮ್ರಾಜ್ಯದ ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದವರೇ ಆಗಿದ್ದಾರೆ. ಬಯಕಾರ ರಾಮಪ್ಪಯ್ಯ ಕೂಡ ಉತ್ತಮ ಆಡಳಿತಗಾರನಾಗಿದ್ದನು. ಇವನು ಪ್ರಾಂತ್ಯಾಧಿಕಾರಿಯಾಗಿ ಮಾಗಣಿಕಾರ, ಪಾರುಪತ್ಯಗಾರ, ಅರಮನೆ ಅಧಿಕಾರಿ, ದುರ್ಗಾಧಿಪತಿಯಾಗಿಯೂ ಕಾರ್ಯ ನಿರ್ವಹಿಸಿದ್ದಾನೆ. ಅಲ್ಲದೆ ಕೊಂಡವೀಡಿನ ರಾಜ್ಯಪಾಲನಾಗಿ, ಅಮರನಾಯಕನಾಗಿ ಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದಾನೆ. ಶಾಸನಗಳು ಈತನನ್ನು ರಾಮಯ್ಯ, ರಾಮನಾಥ, ರಾಮಪ್ಪಯ್ಯ, ರಾಮಮಾತ್ಯ ಎಂದೆಲ್ಲಾ ಕರೆದಿವೆ, ಇವನು ಆಡಳಿತಗಾರ ಮಾತ್ರವಲ್ಲ, ಸ್ವತಃ ವಿದ್ವಾಂಸನೂ ಆಗಿದ್ದನು. ಸಂಗೀತ ವಿದ್ವಾಂಸ, ವಾಗ್ಗೇಯಕಾರ, ಸಂಗೀತಗಾರನೂ ಆಗಿದ್ದ ಇವನು ಸ್ವರಮೇಲಕಳಾನಿಧಿ ಎಂಬ ಬಿರುದನ್ನೂ ಹೊಂದಿದ್ದನು. ಅವನ ಹೆಸರಿನಲ್ಲಿ ಸೇರ್ಪಡೆಯಾದ ಬಯಕಾರ ಎಂಬುದಕ್ಕೆ ಸಂಗೀತಗಾರ ಎಂಬ ಅರ್ಥವೂ ಇದೆ.
ಈತನ ಕುಟುಂಬದ ವಂಶಾವಳಿಯನ್ನು ಕುರಿತು ಅನೇಕ ಶಾಸನಗಳು ಹೇಳಿವೆ. ಇವನ ಮುತ್ತಾತನಿಂದ ಹಿಡಿದು ಮಕ್ಕಳವರೆಗೆ ಎಲ್ಲರ ಹೆಸರು ಮತ್ತು ಅವರ ಹೆಸರಿನಲ್ಲಿ ನಿರ್ಮಿಸಲಾದ ಕೆರೆ, ಬಾವಿ, ಅರವಟ್ಟಿಗೆ, ನೆಡುತೋಪು, ದೇಗುಲ, ಅಗ್ರಹಾರಗಳನ್ನು ಕುರಿತು ವಿವರಿಸಿವೆ. ವಂಶಾವಳಿಯಲ್ಲಿ ಇವನ ಮುತ್ತಾತ ಕೊಂಡವೀಟಿ ಸಿಂಗಯ್ಯನಿಂದ ಹಿಡಿದು ತಾತ ಭಾವಯ್ಯ, ಅಜ್ಜ ರಾಮಮಂತ್ರಿ ಮತ್ತು ಅಜ್ಜಿ ತೆಲುಗಮಾಂಬ, ಅಪ್ಪ ಹಿರಿಯ ತಿಮ್ಮರಸಯ್ಯ ಮತ್ತು ಅಮ್ಮ ಹಿರಿಯ ಲಖರಸಮ್ಮ (ಲಕ್ಕಾಂಬಿಕೆ, ಚಿಕ್ಕಪ್ಪಂದಿರಾದ ತಿಮ್ಮ ಮಂತ್ರಿ, ಸೂರ, ಭಾಸ್ಕರ(ಬಾಚರಸ ಮತ್ತು ಚಿಕ್ಕಮ್ಮ ಅಕ್ಕಮ್ಮ), ಭಾವಯ್ಯ ಮತ್ತು ಅತ್ತೆ ಚಿನ್ನಮಾಂಬೆ ಎಂದು ಗುರುತಿಸಲಾಗಿದೆ. ಅಲ್ಲದೆ ಬಯಕಾರ ರಾಮಪ್ಪಯ್ಯನಿಗೆ ವೀರಮ್ಮ ಎಂಬ ಪತ್ನಿಯಿದ್ದು, ಇವರಿಗೆ ಸಿಂಗಾಲಯ್ಯ, ಅಕ್ಕಪ್ಪ, ಅಚ್ಯುತಮ್ಮ ಲಕರಸಮ್ಮ ಎಂಬ ನಾಲ್ಕು ಜನ ಮಕ್ಕಳಿದ್ದುದು ಶಾಸನಗಳಿಂದ ತಿಳಿಯುತ್ತದೆ.
ಈ ಮೇಲಿನ ವಂಶಾವಳಿಯನ್ನು ಅನೇಕ ಶಾಸನಗಳಲ್ಲಿ ವ್ಯಕ್ತಪಡಿಸುವ ರಾಮಪ್ಪಯ್ಯ ಇವರೆಲ್ಲರಿಗೂ ಪುಣ್ಯವಾಗಲೆಂದು ಅವರ ಹೆಸರಿನಲ್ಲಿ ಕೆರೆ, ಬಾವಿ, ಅರವಟಿಗೆ, ದೇವಾಲಯ, ಅಗ್ರಹಾರಗಳನ್ನು ನಿರ್ಮಿಸಿ ಶಾಸನಗಳಲ್ಲಿ ದಾಖಲಿಸಿದ್ದಾನೆ. ಅಲ್ಲದೆ ಇವೆಲ್ಲವುಗಳನ್ನು ನಿರ್ಮಿಸಿದ ಕೀರ್ತಿ ಬಯಕಾರ ರಾಮಪ್ಪಯ್ಯನಿಗೆ ಸಲ್ಲುತ್ತದೆ. ಅಜ್ಜ ರಾಮಮಂತ್ರಿ ಹೆಸರಿನಲ್ಲಿ ರಾಮಸಮುದ್ರ, ತಂದೆ ಪೆದ್ದತಿಮ್ಮಯ್ಯನಿಗಾಗಿ ತಿಮ್ಮಾಪುರ ಅಗ್ರಹಾರವನ್ನು ಸ್ಥಾಪಿಸಿ, ಪೆದ್ದತಿಮ್ಮ ಸಮುದ್ರವನ್ನು ನಿರ್ಮಿಸಿದ್ದನು, ಹಾಗೆಯೇ ಚಿಕ್ಕಪ್ಪ ಬಾಚರಸನಿಗೆ ಬಾಚಸಮುದ್ರ ಚಿಕ್ಕಮ್ಮ ಅಮ್ಮಮ್ಮನಿಗೆ ಅಮ್ಮಸಮುದ್ರ, ಪತ್ನಿ ವೀರಮ್ಮನ ಹೆಸರಿನಲ್ಲಿ ವೀರಸಮುದ್ರ, ತಮ್ಮನಾದ ಕೃಷ್ಣಪ್ಪನಿಗಾಗಿ ಕೃಷ್ಣ ಸಮುದ್ರವನ್ನು ನಿರ್ಮಿಸಿದ್ದನು, ಮಕ್ಕಳಾದ ಅಕ್ಕಪ್ಪನ ಹೆಸರಿನಲ್ಲಿ ಅಕ್ಕಸಮುದ್ರ, ಸಿಂಗಾಲಯ್ಯನ ಹೆಸರಿನಲ್ಲಿ ಶಿಂಗಾಲಯ್ಯ ತಟಾಕ ಮತ್ತು ಬಾವಿಯನ್ನು ತೋಡಿಸಿದ್ದಾನೆ. ತನ್ನ ಮೂರು ಜನ ಹೆಣ್ಣುಮಕ್ಕಳನ್ನೂ ಕಡೆಗಣಿಸದೆ ಅವರಿಗೂ ಪುಣ್ಯವಾಗಲೆಂದು ಅವರ ಹೆಸರಿನಲ್ಲಿ ಅಗ್ರಹಾರ, ದೇಗುಲಗಳನ್ನು ನಿರ್ಮಿಸಿ, ಕೆರೆಯನ್ನು ಕಟ್ಟಿದ್ದುದು ಬಯಕಾರ ರಾಮಪ್ಪಯ್ಯನ ಶ್ಲಾಘನಾರ್ಹ ಕಾರ್ಯವೇ ಸರಿ, ಅಚ್ಯುತಮ್ಮನ ಹೆಸರಿನಲ್ಲಿ ಅಚ್ಯುತಮ್ಮಪುರ ಮತ್ತು ಬಾಲಕೃಷ್ಣದೇವಾಲಯವನ್ನು ಕಟ್ಟಿಸಿ, ನೀರಿನ ಅನುಕೂಲಕ್ಕಾಗಿ ಅಚ್ಯುತಮ್ಮ ಸಮುದ್ರವನ್ನು ನಿರ್ಮಿಸಿದ. ಇನ್ನೋರ್ವ ಮಗಳಾದ ಲಖರಸಮ್ಮನ ಹೆಸರಿನಲ್ಲಿ ಚಿಕ್ಕಲಖಸಮುದ್ರವನ್ನು ನಿರ್ಮಿಸಿ ಈರ್ವರ ಹೆಸರನ್ನು ಚರಿತ್ರಾರ್ಹಗೊಳಿಸಿದ್ದಾನೆ. ಹಾಗೆಯೇ ಅರಸ ಮತ್ತು ರಾಜಕುವರರ ಹೆಸರಿನಲ್ಲೂ ಅಚ್ಯುತೇಂದ್ರ ಸಮುದ್ರ ಮತ್ತು ವೆಂಕಟೇಂದ್ರ ಸಮುದ್ರಗಳನ್ನು ನಿರ್ಮಿಸಿ ಅವರಿಗೂ ಗೌರವ ಸೂಚಿಸಿರುವುದು ನೈಜನೀಯ.
ಹೀಗೆ ಬಯಕಾರ ರಾಮಪ್ಪಯ್ಯ ವಿಜಯನಗರ ಜಿಲ್ಲೆಯ ಹೊಸಪೇಟೆ, ಸಂಡೂರು, ಹಗರಿಬೊಮ್ಮನಹಳ್ಳಿ ಮತ್ತು ಕೂಡ್ಲಿಗಿ ತಾಲೂಕು ಪರಿಸರದಲ್ಲಿ ಹದಿನಾರು ಕೆರೆಗಳನ್ನು ಕ್ರಿ.ಶ.1539ರ ಹೊತ್ತಿಗೆ ನಿರ್ಮಿಸಿದ್ದನು. ಇದರಿಂದ ಅಚ್ಯುತರಾಯನ ಕಾಲದಲ್ಲಿ ಕೆರೆನಿರ್ಮಾಣ ಕಾರ್ಯಕ್ಕೆ ನೀಡಿದ ಪ್ರಾಧಾನ್ಯತೆ ಎಷ್ಟಿತ್ತೆಂಬುದನ್ನು ಗಮನಿಸಬೇಕು, ಕರ್ನಾಟಕದ ಮಟ್ಟಿಗೆ ವಿಜಯನಗರ ಕಾಲದಲ್ಲಿ ಆತಿ ಹೆಚ್ಚು ಕೆರೆಗಳು ನಿರ್ಮಾಣವಾದದ್ದು ಬಳ್ಳಾರಿ ಮತ್ತು ಕೋಲಾರ ಜಿಲ್ಲಾ ಪರಿಸರಗಳಲ್ಲೆಂಬುದು ಅಂಕಿಅಂಶಗಳಿಂದ ತಿಳಿಯುತ್ತದೆ. ಅಲ್ಲದೆ ಈ ಪರಿಸರವು ಇಂದಿನಂತೆ ಹಿಂದೆಯೂ ಮಳೆಯ ಅಭಾವ ಮತ್ತು ಬರಗಾಲದಿಂದ ತತ್ತರಿಸುತ್ತಿದ್ದ ಸಂಗತಿಯನ್ನು ಅರಿಯಬೇಕು. ಈ ಹಿನ್ನೆಲೆಯಲ್ಲಿ ಅಂದು ಕೆರೆ ನಿರ್ಮಾಣ ಕಾರ್ಯ ತೀವ್ರಗತಿಯಲ್ಲಿ ನಡೆದದ್ದೂ ಇತಿಹಾಸವೇ. ಕೆರೆ ನಿರ್ಮಾಣ ಕಾರ್ಯವಲ್ಲದೆ ಗ್ರಾಮ ಮತ್ತು ಕೆರೆಗಳ ಬಳಿ ಗಿಡಮರಗಳನ್ನು ಬೆಳೆಸುವ ಮಹತ್ಕಾರ್ಯಕ್ಕೂ ಬಯಕಾರ ರಾಮಪ್ಪಯ್ಯ ಕೈಹಾಕಿದ್ದನು. ಅವನ ಈ ಕಾರ್ಯ 1559ರವರೆಗೂ ಮುಂದುವರಿದಿತ್ತು. ರಾಮಪ್ಪಯ್ಯ ಮತ್ತು ಅವನ ಪತ್ನಿ ವೀರಮ್ಮ ತಮ್ಮ ಹೆಸರಿನಲ್ಲಿ ಸಾಲುತೋಪು, ಅರವಟಿಗೆಗಳನ್ನು ಇಂದಿನ ಚಿಲಕನಹಟ್ಟಿಯಲ್ಲಿ ನಿರ್ಮಿಸಿದ್ದರೆ, ಪಾರುಪತ್ಯಗಾರ ನಮಶಿವಾಯನು ರಾಮಪ್ಪಯ್ಯನ ಪತ್ನಿ ವೀರಮ್ಮನ ಹೆಸರಿನಲ್ಲಿ ಬಾವಿ, ಅರವಟಿಗೆ, ಮಂಟಪಗಳ ಜೊತೆಗೆ ಸಾಲುತೋಪನ್ನು ಹಾರುವನಹಳ್ಳಿಯಲ್ಲಿ ನಿರ್ಮಿಸಿದ್ದನು, ಇದು ಅಂದಿನ ಸಾಮಾಜಿಕ ಕಾರ್ಯ, ಪರಿಸರ ಕಾಳಜಿ ಪ್ರತೀಕವೇ ಆಗಿದೆ.
ಬಯಕಾರ ರಾಮಪ್ಪಯ್ಯ ಕಟ್ಟಿಸಿದ ಈ ಹದಿನಾರು ಕೆರೆಗಳಲ್ಲಿ ನಂದಿಬಂಡೆಯ ಕೆರೆಯನ್ನು ಪೆದ್ದಸಮುದ್ರವೆಂದೂ, ಚಿಕ್ಕಕೆರೆಯಾಗಳಹಳ್ಳಿ ಕೆರೆಯನ್ನು ಪದ್ದಲಕ್ಕಸಮುದ್ರ ತಿಮ್ಮಲಾಪುರದ ಕೆರೆಯನ್ನು ಬಾಚಸಮುದ್ರ, ಒಂಟಿಗೋಡು ತಾಂಡದ ಕೆರೆಯನ್ನು ವೀರಸಮುದ್ರ, ಪೋತಲಕಟ್ಟೆ ಕೆರೆಯನ್ನು ಅಕ್ಕಸಮುದ್ರ, ಮಗಿಮಾವಿನಹಳ್ಳಿಕೆರೆಯನ್ನು ಚಿಕ್ಕಲಕಸಮುದ್ರ, ಹುಲಿಕುಂಟೆಕೆರೆಯನ್ನು ಅಚ್ಯುತಮ್ಮಸಮುದ್ರ ಮತ್ತು ಹಾರುವನಹಳ್ಳಿ ಬಳಿಯ ಕೆರೆಯನ್ನು ಅಮ್ಮಸಮುದ್ರವೆಂದು ವಿದ್ವಾಂಸರು ಗುರುತಿಸಿದ್ದು, ಈ ಎಲ್ಲ ಕೆರೆಗಳು ಇಂದಿಗೂ ಜೀವಂತಿಕೆಯನ್ನು ಹೊಂದಿರುವುದು ಶ್ಲಾಘನಾರ್ಹ, ಆದರೆ ಕೆರೆಗಳನ್ನು ಕಟ್ಟಿಸಿದವರು ಮತ್ತು ಕಟ್ಟಿಸಲಾದ ಅಧಿಕಾರಿಯ ರಕ್ತಸಂಬಂಧಿಕರಿಗೆ ಪುಣ್ಯವಾಗಲೆಂಬ ಸಂಗತಿಯನ್ನು ಮಾತ್ರ ಹೇಳುವ ಶಾಸನಗಳು ಕೆರೆ ಕಟ್ಟೆ-ಬಾವಿ ಅಗ್ರಹಾರಗಳನ್ನು ನಿರ್ಮಿಸಿದ ಶ್ರಮಜೀವಿಗಳ ಬಗ್ಗೆಯೂ ಬೆಳಕನ್ನು ಚೆಲ್ಲಿದ್ದರೆ, ಇತಿಹಾಸದ ಗತಿಯೇ ಬದಲಾಗುತ್ತಿತ್ತು.
ಒಟ್ಟಿನಲ್ಲಿ ಬಯಕಾರ ರಾಮಪ್ಪಯ್ಯ ತನ್ನ ಅಧಿಕಾರ ಅವಧಿಯ ಬಹುಭಾಗವನ್ನು ನಿರಂತರವಾಗಿ ಕೆರೆನಿರ್ಮಾಣ ಕಾರ್ಯದಲ್ಲಿ ಕಳೆದನೇನೋ ಎಂಬಂತೆ ಭಾಸವಾಗುತ್ತದೆ. ಅದೇನೇ ಇರಲಿ ಅವನ ಜನಪರ ಮತ್ತು ಪರಿಸರ ಕಾಳಜಿಯನ್ನು ಶ್ಲಾಘಿಸಲೇಬೇಕು.