ಭಾರತ ಮಾತೆಗೆ ಕೇಳಿಸದು ಆದಿವಾಸಿಗಳ ಆಕ್ರಂದನ

Share

ಭಾರತ ಮಾತೆಗೆ ಕೇಳಿಸದು ಆದಿವಾಸಿಗಳ ಆಕ್ರಂದನ

ಭ್ರಮೆಯಲ್ಲಿ ಬದುಕುವ ಬಹುತೇಕ ಭಾರತವು ಬಸ್ತರ್ ಎಂಬ ಸೀಮೆಯ ಹೆಸರನ್ನು ಕೇಳಿರುವುದು ಅನುಮಾನ. ಮಧ್ಯಭಾರತದ ಕಾಡು ಕಣಿವೆ ಗುಡ್ಡಗಳಲ್ಲಿ ಹಲವು ಆದಿವಾಸಿ ನೆಲೆಗಳು ಹರಡಿ ಹಬ್ಬಿವೆ.
ಈ ಸೀಮೆಗಳ ಹೆಸರಾಂತ ತವರು ಛತ್ತೀಸಗಢದ ಬಸ್ತರ್. ಅಲ್ಲಿನ ಸುಕ್ಮಾ ಜಿಲ್ಲೆಯಲ್ಲಿ ಸಿಲ್ಗೆರ್ ಎಂಬುದೊಂದು ಗ್ರಾಮ. ತಿಂಗಳೊಪ್ಪತ್ತಿನಿಂದ ಅಲ್ಲಿನ ಆದಿವಾಸಿಗಳ ಬದುಕು ಸರ್ಕಾರಿ ಪ್ರಾಯೋಜಿತ ಧಗೆಯಲ್ಲಿ ಕುದಿಯತೊಡಗಿದೆ.


ರಾಜ್ಯ ಸರ್ಕಾರ ರಾತ್ರೋರಾತ್ರಿ ತಮ್ಮ ನೆಲದಲ್ಲಿ ಸುರಕ್ಷಾಬಲದ ಶಿಬಿರವೊಂದನ್ನು ಎಬ್ಬಿಸಿರುವ ಬೆಳವಣಿಗೆ ಈ ಬಡಪಾಯಿಗಳ ಬದುಕುಗಳನ್ನು ಬುಡಮೇಲು ಮಾಡಿದೆ. ತಿಂಗಳೊಪ್ಪತ್ತಿನಿಂದ ಸಾವಿರಾರು ಆದಿವಾಸಿಗಳು ಸಂಘರ್ಷಕ್ಕೆ ಇಳಿದಿದ್ದಾರೆ. ಪ್ರತಿಭಟನೆಯಲ್ಲಿ ಹೆಣ್ಣುಮಕ್ಕಳು, ಗಂಡಸರು, ವೃದ್ಧರು, ಬಾಲರೆಲ್ಲ ಸೇರಿದ್ದಾರೆ.

ಕಳೆದ ಮೇ ೧೭ರಂದು ಆಂದೋಲನ ನಿರತ ಆದಿವಾಸಿಗಳ ಮೇಲೆ ಸುರಕ್ಷಾಬಲ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಅಸುನೀಗಿದ್ದ ೧೮ ಮಂದಿ ಗಾಯಗೊಂಡಿದ್ದಾರೆ. ಗೋಲಿಬಾರಿನಿಂದ ಉಂಟಾದ ನೂಕುನುಗ್ಗಲಿಗೆ ಸಿಕ್ಕಿ ಕಾಲ್ತುಳಿತದಲ್ಲಿ ಗಂಭೀರವಾಗಿ ಗಾಯಗೊಂಡ ಗರ್ಭಿಣಿ ಮಹಿಳೆ ಪುನೆಮ್ ಸುಕ್ಲಿ ಮೇ ೨೩ರಂದು ಅಸುನೀಗಿದಳು. ಈ ನಾಲ್ವರು ಹುತಾತ್ಮರಿಗೆ ಸಿಲ್ಗೇರ್ ಶಿಬಿರದ ಎದುರಿನಲ್ಲಿ ಸ್ಮಾರಕಗಳನ್ನು ನಿರ್ಮಿಸಿದ್ದಾರೆ ಆದಿವಾಸಿಗಳು.

ಮೇ ೧೭ರಿಂದ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಮತ್ತು ಆದಿವಾಸಿಗಳು ಮುಖಾಮುಖಿಯಾಗಿದ್ದಾರೆ. ಒಂದೆಡೆ ಅತ್ಯಾಧುನಿಕ ಶಸ್ತ್ತ್ರಾಸ್ತ್ರ ಹಿಡಿದ ಮೀಸಲು ಪೊಲೀಸರು. ಮತ್ತೊಂದೆಡೆ ಧರಣಿ ಪ್ರದರ್ಶನ ನಡೆಸಿರುವ ಸಾವಿರಾರು ಆದಿವಾಸಿಗಳು. ಅವರ ಕೈಯಲ್ಲಿ ಸಿಲ್ಗೇರ್ ಸಿ.ಆರ್.ಪಿ.ಎಫ್. ಶಿಬಿರದ ವಾಪಸಾತಿಗೆ ಅಗ್ರಹಿಸಿ ಧರಣಿ ಎಂಬುದಾಗಿ ಗೊಂಡಿ ಲಿಪಿಯಲ್ಲಿ ಬರೆದ ಬಿಳಿ ಬಟ್ಟೆಯ ಬ್ಯಾನರ್.

ತಮ್ಮ ಮೇಲೆ ಕಲ್ಲು ತೂರಿದ್ದಲ್ಲದೆ ಕೆಲವರ ಕೈಯಿಂದ ಬಂದೂಕ ಮತ್ತು ವೈರ್ ಲೆಸ್ ಉಪಕರಣವನ್ನು ಕಸಿಯಲು ಆದಿವಾಸಿಗಳು ಪ್ರಯತ್ನಿಸಿದರು. ಈ ಕಾರಣಕ್ಕಾಗಿ ಅವರ ಮೇಲೆ ಗೋಲಿಬಾರ್ ನಡೆಸಬೇಕಾಯಿತು ಎಂಬುದು ಪೊಲೀಸರ ಸಮಜಾಯಿಷಿ. ಸಿಟ್ಟಿಗೆದ್ದಿದ್ದ ಕೆಲ ಯುವಕರು ಕಲ್ಲು ತೂರಿರುವುದು ಹೌದು. ಪೊಲೀಸರ ವಾಹನಗಳಿಗೆ ಬೆಂಕಿ ಇಡುವ ಮಾತೂ ನಡೆದಿರುವುದು ನಿಜ. ಆದರೆ ಪೊಲೀಸರು ಮತ್ತು ಆದಿವಾಸಿಗಳ ನಡುವೆ ಎರಡೆರಡು ಸುತ್ತುಗಳ ಲೋಹದ ಮುಳ್ಳುತಂತಿ ಬೇಲಿಯನ್ನು ಎಬ್ಬಿಸಲಾಗಿದೆ. ಆದಿವಾಸಿಗಳು ಕಲ್ಲು ತೂರಿದರೂ ಅವುಗಳು ಪೊಲೀಸರನ್ನು ತಲುಪಲಾರದಷ್ಟು ದೂರದ ಫಾಸಲೆ. ಆದರೂ ಪೊಲೀಸರು ಗುಂಡು ಹಾರಿಸಿದ್ದಾರೆ.

ಸರ್ಕಾರ ಆದಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮೇ ೧೨ರಂದು ರಾತ್ರೋರಾತ್ರಿ ಈ ಶಿಬಿರವನ್ನು ಎಬ್ಬಿಸಿ ನಿಲ್ಲಿಸಿದೆ. ಮರುದಿನ ಮಧ್ಯಾಹ್ನದ ವೇಳೆಗೆ ಈ ಸುದ್ದಿ ಸಿಲ್ಗೇರ್ ಸುತ್ತಮುತ್ತ ಹರಡಿದೆ. ಗ್ರಾಮೀಣರ ಸಮೂಹವೊಂದು ಅಧಿಕಾರಗಳೊಂದಿಗೆ ಮಾತುಕತೆಗೆ ಬಂದಿದ್ದಾರೆ. ಕೆಲ ಹೊತ್ತು ಚರ್ಚೆಯ ನಂತರ ಅವರನ್ನು ಗದರಿಸಿ ಓಡಿಸಲಾಗಿದೆ. ಸ್ವಾಭಾವಿಕವಾಗಿ ಆದಿವಾಸಿಗಳು ಸಿಟ್ಟಿಗೆದ್ದಿದ್ದಾರೆ. ಹಿಂದೆ ಸರಿಯಲು ಸಿದ್ಧರಿಲ್ಲ. ಸುತ್ತಮುತ್ತಲ ಹಲವಾರು ಪಂಚಾಯತಿಗಳ ಸಾವಿರಾರು ಮಂದಿ ಘಟನಾ ಸ್ಥಳದ ಬಳಿ ಸೇರಿದ್ದಾರೆ. ಈ ಜಮಾವಣೆಯ ಮುಂಚೂಣಿಯಲ್ಲಿ ನಿಂತಿರುವಾತ ಒಬ್ಬ ವೃದ್ಧ. ಆತನ ಹೆಸರು ಲಖಮಾ.

ಪೊಲೀಸ್ ಶಿಬಿರವನ್ನು ಹಿಂತೆಗೆದುಕೊಳ್ಳುವ ತನಕ ಪ್ರತಿಭಟನೆ ಕರಗುವುದಿಲ್ಲ ಎಂಬುದಾಗಿ ಆತ ಘೋಷಿಸಿದ್ದಾನೆ.
ಸುರಕ್ಷಾ ಬಲಗಳ ಶಿಬಿರಗಳನ್ನು ಆದಿವಾಸಿಗಳು ಯಾಕೆ ವಿರೋಧಿಸಬೇಕಾದರೂ ಯಾಕೆ?
ಲಖಮಾ ನೀಡುವ ಉತ್ತರ ಹೀಗಿದೆ-
ಶಿಬಿರವೊಂದು ಎದ್ದಿತೆಂದರೆ ಪೊಲೀಸರು ಸುತ್ತಮುತ್ತಲ ಅಡವಿಯಲ್ಲಿ ಅಡ್ಡಾಡುವ ಆದಿವಾಸಿಗಳನ್ನು ಹಿಡಿದು ಬಡಿದು ಹಿಂಸಿಸುತ್ತಾರೆ. ಹಿಡಿದೊಯ್ದು ಜೈಲಿಗೆ ನೂಕುತ್ತಾರೆ. ಅಡವಿಯೇ ಆದಿವಾಸಿಗಳ ಅನ್ನ-ಉಸಿರು. ಉರುವಲು, ತೆಂದು ಎಲೆ (ಬೀಡಿ ಕಟ್ಟಲು ಬಳಸುವ ಎಲೆ) ತರಲು ಅಡವಿಗೆ ಹೋಗುತ್ತೇವೆ. ಕೆಲವೊಮ್ಮೆ ಶಿಕಾರಿಗಾಗಿ ಕೈಯಲ್ಲಿ ಬಿಲ್ಲು ಬಾಣ ಹಿಡಿದಿರುತ್ತೇವೆ. ಈ ಕಾರಣಕ್ಕಾಗಿಯೂ ನಮ್ಮನ್ನು ಗುಂಡುಹಾರಿಸಿ ಕೊಲ್ಲಲಾಗುತ್ತದೆ. ಈಗಷ್ಟೇ ಈ ಶಿಬಿರವನ್ನು ಎಬ್ಬಿಸಲಾಗಿದೆ. ವಿರೋಧ ಮಾಡಿದ ಕಾರಣಕ್ಕಾಗಿ ನಮ್ಮನ್ನು ಲಾಠಿಗಳಿಂದ ಬಡಿಯಲಾಗುತ್ತಿದೆ. ೧೭ರಂದು ನಮ್ಮ ಮೇಲೆ ಗಂಡು ಹಾರಿಸಲಾಯಿತು. ನಮ್ಮ ಮೂವರು ಬಂಧುಗಳು ಬಲಿಯಾಗಿದ್ದಾರೆ. ನಮ್ಮ ನಡುವೆ ಮಾವೋವಾದಿಗಳಿದ್ದಾರೆ ಎನ್ನುತ್ತಾರೆ ಪೊಲೀಸರು. ಹಸಿ ಹಸಿ ಸುಳ್ಳು ಮಾತಿದು. ಈ ಆಂದೋಲನದಲ್ಲಿ ಗ್ರಾಮೀಣ ಆದಿವಾಸಿಗಳ ವಿನಾ ಬೇರೆ ಯಾರೊಬ್ಬರೂ ಇಲ್ಲ.


ಆಂದೋಲನಿರತ ಯುವತಿ ಸರಸಿತಾ ಹೇಳುವ ಪ್ರಕಾರ ಗುಂಡು ತಗುಲಿ ಸತ್ತ ಯುವಕರ ಪೈಕಿ ಒಬ್ಬಾತ ತನ್ನ ಗ್ರಾಮ ತಿಮಾಪುರಮ್ ಗೆ ಸೇರಿದವನು. ಶಿಬಿರಗಳ ಯೋಧರು ಆದಿವಾಸಿ ಹೆಣ್ಣುಮಕ್ಕಳೊಂದಿಗೆ ಅಶ್ಲೀಲವಾಗಿ ವ್ಯವಹರಿಸುತ್ತಾರೆ. ಇಲ್ಲಿ ಶಿಬಿರ ಎದ್ದಿತೆಂದರೆ ಪುನಃ ಅದೇ ಗೋಳು. ಹೀಗಾಗಿ ನಾವು ವಿರೋಧಿಸುತ್ತಿದ್ದೇವೆ ಎನ್ನುತ್ತಾಳೆ. ಆದಿವಾಸಿಗಳ ಹಕ್ಕುಗಳ ಹೋರಾಟಗಾರ್ತಿ ಸೋನಿ ಸೋರಿ ಬಸ್ತರ್ ಪೊಲೀಸರ ದೌರ್ಜನ್ಯವನ್ನು ಖಂಡಿಸಿದ್ದಾರೆ. ಪೊಲೀಸರದೇ ತಪ್ಪು. ಈ ಕಾರಣದಿಂದಾಗಿಯೇ ಘಟನಾ ಸ್ಥಳವನ್ನು ತಾವು ಸೇರಿದಂತೆ ಯಾವುದೇ ಹೋರಾಟಗಾರರು ತಲುಪದಂತೆ ನಿರ್ಬಂಧ ಹೇರಲಾಗಿದೆ ಎಂದು ಆರೋಪಿಸಿದ್ದಾರೆ.
ಪಾಲಾಗುಡಾದಿಂದ ಬಂದಿರುವ ಯುವಕ ಐತೂನ ಪ್ರಕಾರ- ನಮಗೆ ರಸ್ತೆ ಬೇಕು, ಆದರೆ ಶಿಬಿರ ಬೇಡ. ನಮ್ಮ ಹಳ್ಳಿಗಳಲ್ಲಿ ವಿಕಾಸ ಬೇಕು, ಆದರೆ ಸರ್ಕಾರ ಹೇರುವ ಮಾದರಿಯ ವಿಕಾಸ ಅಲ್ಲ. ಅಂಗನವಾಡಿ, ಶಾಲೆ, ಆಸ್ಪತ್ರೆ, ನ್ಯಾಯಬೆಲೆ ದಿನಸಿ ಅಂಗಡಿ, ರಸ್ತೆ ಬೇಕು. ಇಷ್ಟು ಭಾರೀ ಅಗಲದ ರಸ್ತೆ ಬೇಕಿಲ್ಲ. ರಸ್ತೆ ಕೆಲಸವನ್ನು ಆದಿವಾಸಿಗಳಿಗೇ ಕೊಡಲಿ. ನಮ್ಮ ಜರೂರತ್ತಿಗೆ ತಕ್ಕಂತೆ ರಸ್ತೆಗಳನ್ನು ನಾವೇ ನಿರ್ಮಿಸಿಕೊಳ್ಳುತ್ತೇವೆ. ರಸ್ತೆಯೂ ಆಗುತ್ತದೆ, ನಮ್ಮ ಯುವಕರಿಗೆ ಉದ್ಯೋಗವೂ ಸಿಗುತ್ತದೆ.


ಬಸ್ತರ್ ಸೀಮೆಯ ನಾನಾ ಭಾಗಗಳಲ್ಲಿ ಪೊಲೀಸ್ ಶಿಬಿರಗಳನ್ನು ಎಬ್ಬಿಸುವ ಕುರಿತು ಆದಿವಾಸಿಗಳ ವಿರೋಧ ಹೊಸದೇನಲ್ಲ. ಪೊಲೀಸರು ಈ ವಿರೋಧಗಳಿಗೆ ನಕ್ಸಲೀಯ ಪ್ರಾಯೋಜಿತ ಎಂಬ ಹಣೆಪಟ್ಟಿ ಹಚ್ಚಿದ್ದಾರೆ. ಸಿಲ್ಗೇರ್ ನ ಈ ಆಂದೋಲನವನ್ನೂ ಮಾವೋವಾದಿಗಳ ಪ್ರಚಾರ ಎಂಬುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಕರೆದಿದ್ದಾರೆ.
ರಾಜಧಾನಿ ರಾಯಪುರದಿಂದ ಸಾವಿರ ಕಿಲೋಮೀಟರಿಗೂ ಅಧಿಕ ದೂರದಲ್ಲಿದೆ ಸಿಲ್ಗೇರ್ ಗ್ರಾಮ. ಹತ್ತಾರು ಪಂಚಾಯಿತಿಗಳ ಆದಿವಾಸಿಗಳು ಇಲ್ಲಿ ನೆರೆದಿದ್ದಾರೆ. ಈ ಗ್ರಾಮಕ್ಕೆ ಇಂದಿಗೂ ವಿದ್ಯುಚ್ಛಕ್ತಿ ತಲುಪಿಲ್ಲ. ೧೨೦೦ ಮಂದಿಯ ಜನಸಂಖ್ಯೆ. ಗೊಂಡರು ಮತ್ತು ಮುರಿಯಾ ಪಂಗಡಗಳೇ ಅಧಿಕ. ಬೇಸಾಯ ಮತ್ತು ಅಡವಿಯ ಉತ್ಪನ್ನಗಳೇ ಇವರ ಬದುಕಿನಾಸರೆ. ಅಡವಿ ಉತ್ಪನ್ನಗಳ ಆಯಲು ಅಡವಿಯಲಿ ದಿನವೆಲ್ಲ ಅಲೆದಾಟ. ಸುರಕ್ಷಾಪಡೆಗಳಿಂದ ದಸ್ತಗಿರಿಯ ಕಿರುಕುಳ ಮಾಮೂಲು. ಸಿಲ್ಗೇರ್ ನಿಂದ ೨೦ ಕಿ.ಮೀ.ದೂರದ ಬಾಸಾಗುಡಾ ಗ್ರಾಮದಲ್ಲಿ ತಾಲ್ಪೇರೂ ಹೆಸರಿನ ನದಿಯೊಂದು ಹರಿಯುತ್ತದೆ. ಇಲ್ಲಿನ ಗ್ರಾಮೀಣರು ವನದಿಂದ ಮಹುವಾ, ಹುಣಸೆ, ತೆಂಡು ಎಲೆ, ಮುಂತಾದವುಗಳನ್ನು ಸಂಗ್ರಹಿಸಿ ವಾರದ ಸಂತೆಯಲ್ಲಿ ಮಾರಾಟ ಮಾಡಿ ಬಂದ ಹಣದಲ್ಲಿ ಅಗತ್ಯವಸ್ತುಗಳನ್ನು ಖರೀದಿಸುತ್ತಾರೆ. ಯಾವ ರಸ್ತೆಯನ್ನು ನಿರ್ಮಿಸಲೆಂದು ಸಿಲ್ಗೇರ್ ನಲ್ಲಿ ಸುರಕ್ಷಾ ಪಡೆಗಳ ಶಿಬಿರ ಎಬ್ಬಿಸಲಾಗಿದೆಯೋ, ಆ ರಸ್ತೆಯು ಸುಕ್ಮಾ ಜಿಲ್ಲೆಯ ಜಗರ್ ಗಂಗಾವನ್ನು ಬಿಜಾಪುರದ ಆವಲಪಲ್ಲಿಗೆ ಜೋಡಿಸುತ್ತದೆ. ನಕ್ಸಲರನ್ನು ಹಣಿಯಲೆಂದು ಸರ್ಕಾರವೇ ಕಟ್ಟಿದ ಸಾಲ್ವಾ ಜುದುಂ ಎಂಬ ಅನಧಿಕೃತ ಆದಿವಾಸಿ ಸೇನೆ ದುಷ್ಟ ಹಂಚಿಕೆಯದು. ಆದಿವಾಸಿಗಳ ಕೈಗೆ ಬಂದೂಕು ಕೊಟ್ಟು ಅನಧಿಕೃತವಾಗಿ ಸಂಬಳವಿತ್ತು ಆದಿವಾಸಿ ನಕ್ಸರಲನ್ನು ಆದಿವಾಸಿಗಳಿಂದಲೇ ಬೇಟೆಯಾಡಿಸುವ ದುರುಳ ಕ್ರಮ. ಸುಪ್ರೀಮ್ ಕೋರ್ಟ್ ಛೀಮಾರಿಯ ನಂತರ ಈ ಸೇನೆಯನ್ನು ವಿಸರ್ಜಿಸಿದ ನಾಟಕವಾಡಲಾಯಿತು. ಸಾಲ್ವಾ ಜುದುಂ ದಿನಗಳಿಗೆ ಮುನ್ನ ಸಂಚಾರಕ್ಕೆ ತೆರೆಯಲಾಗಿದ್ದ ಈ ರಸ್ತೆಯನ್ನು ಸಾಲ್ವಾಜುದುಂ ಹಿಂಸಾಚಾರದ ನಂತರ ಮಾವೋವಾದಿಗಳು ಪೂರ್ತಿಯಾಗಿ ಬಂದ್ ಮಾಡಿದ್ದರು. ಇದೀಗ ಈ ರಸ್ತೆಯನ್ನು ಮತ್ತೆ ತೆರೆಯಲು ಬಯಸಿದೆ ಸರ್ಕಾರ. ಅಭಿವೃದ್ಧಿ ಕಾರ್ಯಗಳನ್ನು ಜರುಗಿಸಲು ಮತ್ತು ಆದಿವಾಸಿಗಳಿಗೆ ಮೂಲಸೌಕರ್ಯಗಳ ತಲುಪಿಸಲು ಈ ಕ್ರಮ ಸಹಕಾರಿಯಾಗಲಿದೆ ಎನ್ನುತ್ತದೆ ಸರ್ಕಾರ. ಜೊತೆಗೆ ಮಾವೋವಾದಿಗಳ ವಿರುದ್ಧ ಜರುಗಿಸಲಾಗುತ್ತಿರುವ ಕಾರ್ಯಾಚರಣೆಗೂ ಈ ರಸ್ತೆ ನೆರವಾಗಲಿದೆ. ಈ ರಸ್ತೆಯ ಕ್ಷೇತ್ರವೇ ಮಾವೋವಾದಿಗಳ ಕೇಂದ್ರ ತಾಣವೆಂದು ಭಾವಿಸಲಾಗಿದೆ. ಈ ರಸ್ತೆ ನಿರ್ಮಾಣ ಆದರೆ ಮಾವೋವಾದಿಗಳಿಗೆ ಭಾರೀ ಹಿನ್ನಡೆಯಾಗಲಿದೆ. ಹೀಗಾಗಿ ಮಾವೋವಾದಿಗಳು ಯಾವುದೇ ಕಾರಣದಿಂದ ಈ ರಸ್ತೆಯ ಕೆಲಸ ನಡೆಯಲು ಬಿಡುವುದಿಲ್ಲ. ಆದಿವಾಸಿಗಳನ್ನು ಮುಂದೆ ಬಿಟ್ಟು ಮಾವೋವಾದಿಗಳು ತೆರೆಮರೆಯಿಂದ ವಿರೋಧ ನಡೆಸಿದ್ದಾರೆ ಎನ್ನುತ್ತಾರೆ ಪೊಲೀಸರು
ಸಿಲ್ಗೇರ್ ಬಳಿ ಪೊಲೀಸ್ ಶಿಬಿರ ನೆಲೆಯೂರಿತೆಂದರೆ ತಮ್ಮ ಮೇಲೆ ಅತ್ಯಾಚಾರ ನಿಶ್ಚಿತ ಎಂಬುದು ಆದಿವಾಸಿಗಳ ಅಳಲು. ಅವರು ಈ ಹಿಂದೆ ಅನುಭವಿಸಿರುವ ಕಷ್ಟನಷ್ಟ ಹಿಂಸೆಗಳೇ ಈ ಅಳಲಿಗೆ ಆಧಾರ.


ಮೇ ೧೭ರಂದು ಪೊಲೀಸರ ಗೋಲಿಬಾರಿನಲ್ಲಿ ಅಸುನೀಗಿದ ಮೂವರು ಆದಿವಾಸಿ ಯುವಕರು ಮಾವೋವಾದಿಗಳು ಎಂಬುದು ಪೊಲೀಸರ ಹೇಳಿಕೆ. ಆದರೆ ಆದಿವಾಸಿಗಳು ಮತ್ತು ಮಾನವ ಹಕ್ಕು ಹೋರಾಟಗಾರರ ಪ್ರಕಾರ ಈ ಮೂವರು ಯುವಕರಿಗೂ ಮಾವೋವಾದಿಗಳಿಗೂ ದೂರ ದೂರದ ಸಂಬಂಧವೂ ಇರಲಿಲ್ಲ. ಪೊಲೀಸರಿಂದ ಬಂದೂಕು ಮತ್ತು ವೈರ್ ಲೆಸ್ ಉಪಕರಣ ಕಿತ್ತುಕೊಳ್ಳುವ ಪ್ರಯತ್ನದ ಆರೋಪದ ಮೇರೆಗೆ ಎಂಟು ಮಂದಿ ಆದಿವಾಸಿಗಳನ್ನು ಬಂಧಿಸಲಾಗಿದೆ.

ನಿರಾಯುಧ ಆಂದೋಲನನಿರತರ ಮೇಲೆ ಗುಂಡು ಹಾರಿಸುವ ಅಗತ್ಯವಾದರೂ ಏನಿತ್ತು? ಆದಿವಾಸಿಗಳ ಈ ಪ್ರತಿಭಟನೆಗೆ ಮಾವೋವಾದಿಗಳ ಹಣೆಪಟ್ಟಿ ಹಚ್ಚಿರುವುದು ದುರದೃಷ್ಟಕರ. ಈ ಸೀಮೆಯಲ್ಲಿ ಮೊದಲು ಆದಿವಾಸಿಗಳನ್ನು ಗುಂಡಿಟ್ಟು ಹತ್ಯೆ ಮಾಡಲಾಗುತ್ತದೆ. ಆನಂತರ ಅವರಿಗೆ ಮಾವೋವಾದಿಗಳ ಹಣೆಪಟ್ಟಿ ಹಚ್ಚಲಾಗುತ್ತದೆ. ತರುವಾಯ ತಲಾ ಹತ್ತು ಸಾವಿರ ರುಪಾಯಿಯ ಪರಿಹಾರ ನೀಡುವ ಪ್ರಹಸ ನಡೆಯತೊಡಗಿದೆ. ಇಡೀ ಪ್ರಕರಣ ಕುರಿತು ನ್ಯಾಯಾಂಗ ತನಿಖೆ ನಡೆಯಲಿ ಎನ್ನುತ್ತಾರೆ ಆದಿವಾಸಿ ಹಕ್ಕುಗಳ ಹೋರಾಟಗಾರ ಮತ್ತು ಆದಿವಾಸಿ ಮಹಾಸಭಾದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಮನೀಶ್ ಕುಂಜಮ್. ಪೊಲೀಸರು ಮಾವೋವಾದಿಗಳು ಎಂದು ಬಣ್ಣಿಸಿ ಕೊಂದಿರುವ ಯುವಕರು ವಾಸ್ತವದಲ್ಲಿ ರೈತರು. ಪೊಲೀಸರು ತಮ್ಮ ತಪ್ಪನ್ನು ಮುಚ್ಚಿ ಹಾಕಲು ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎನ್ನುತ್ತಾರೆ ಸರ್ವ ಆದಿವಾಸಿ ಸಮಾಜದ ಅಧ್ಯಕ್ಷ ಪ್ರಕಾಶ್ ಠಾಕೂರ್.
ಆಂದೋಲನನಿರತ ಆದಿವಾಸಿಗಳನ್ನು ಮೇ ೧೨ರಂದೇ ಸಮಾಧಾನಪಡಿಸಿ ವಾಪಸು ಕಳಿಸಲಾಗಿತ್ತು. ಆದರೆ ಮೇ ೧೭ರಂದು ಅವರು ಮತ್ತಷ್ಟು ಉಗ್ರರಾಗಿ ಕೈಯಲ್ಲಿ ಕೊಡಲಿ, ಬಿಲ್ಲು ಬಾಣ, ಬಡಿಗೆ ಹಿಡಿದು ಶಿಬಿರದತ್ತ ಧಾವಿಸಿದರು. ಅಡೆತಡೆಗಳನ್ನು ಮುರಿದು ಮುಂದುವರೆದರು ಎಂಬುದು ಪೊಲೀಸರ ಪತ್ರಿಕಾ ಹೇಳಿಕೆಯ ತಿರುಳು. ಆಂದೋಲನ ನಿರತ ಆದಿವಾಸಿಗಳ ನಡುವೆ ಅಡಗಿಕೊಂಡು ಮಾವೋವಾದಿಗಳು ಪೊಲೀಸರತ್ತ ಗುಂಡು ಹಾರಿಸಿದ್ದಾರೆ ಎಂದೂ ಪೊಲೀಸರು ಆರೋಪಿಸಿದ್ದಾರೆ. ಆದರೆ ಈ ಸಂಬಂಧದ ವಿಡಿಯೋ ಹೊರಬಿದ್ದಿದ್ದು, ಪೊಲೀಸರ ಆರೋಪ ನಿರಾಧಾರವೆಂದು ನಿಚ್ಚಳವಾಗಿದೆ. ಒಂದು ವೇಳೆ ಆದಿವಾಸಿಗಳು ಮಾವೋವಾದಿಗಳ ಒತ್ತಡಕ್ಕೆ ಒಳಗಾಗಿ ಆಂದೋಲನ ನಡೆಸುತ್ತಿದ್ದಾರೆಂದು ವಾದಕ್ಕಾಗಿ ಒಪ್ಪಿಕೊಂಡರೂ, ನಿರಾಯುಧ ಆದಿವಾಸಿಗಳನ್ನು ಪೊಲೀಸರು ರಕ್ಷಿಸಬೇಕೇ ವಿನಾ ಗುಂಡು ಹೊಡೆದು ಕೊಲ್ಲುವುದು ಯಾವ ನ್ಯಾಯ ಎಂಬ ಪ್ರಶ್ನೆಗಳೆದ್ದಿವೆ.


ಪ್ರತಿಪಕ್ಷದಲ್ಲಿದ್ದಾಗ ಆದಿವಾಸಿಗಳ ಹಿತದ ಪರವಾಗಿ ಮಾತನಾಡುತ್ತಿದ್ದ ಕಾಂಗ್ರೆಸ್ ಪಕ್ಷ ಈಗ ಆಡಳಿತ ನಡೆಸಿದೆ. ಕಾಂಗ್ರೆಸ್ ಪಕ್ಷದ ಎರಡೆಳೆ ನಾಲಗೆಯ ಕುರಿತು ಆದಿವಾಸಿಗಳಲ್ಲಿ ಆಕ್ರೋಶ ಭುಗಿಲೆದ್ದಿದೆ. ಅವರು ಆಂದೋಲನದಿಂದ ಹಿಂದೆ ಸರಿಯುವ ಸೂಚನೆಗಳಿಲ್ಲ.
ಆದಿವಾಸಿಗಳ ಮೇಲೆ ನಡೆಯುವ ದಾಳಿಗಳ ಹಿಂದೆ ಅವರು ವಾಸಿಸುವ ಅಡವಿಗ ಗುಡ್ಡಗಳಲ್ಲಿಅಡಗಿರುವ ಖನಿಜ ಸಂಪತ್ತಿಗಾಗಿ ಜೊಲ್ಲು ಸುರಿಸುವ ಕಾರ್ಪೊರೇಟುಗಳಿವೆ. ಅವುಗಳಿಗೆ ನಡೆಮುಡಿ ಹಾಸುವ ಪ್ರಭುತ್ವಗಳಿವೆ.
ಅನುದಿನವೂ ಹೀಗೆ ತಮ್ಮ ನೆಲದಲ್ಲೇ ತಬ್ಬಲಿಗಳಾಗಿ ಬದುಕಿಯೂ ಸತ್ತಂತಾಗಿರುವ, ಸತ್ತು ಬದುಕುತ್ತಿರುವ ಆದಿವಾಸಿಗಳಿಗಾಗಿ ತಾಯಿ ಭಾರತಿಯ ಕಣ್ಣೀರು ಇಂಗಿ ಹೋಗಿದೆ. ಆದಿವಾಸಿಗಳ ಪಾಲಿಗೆ ಆಕೆ ಕಿವುಡಿಯೂ ಕುರುಡಿಯೂ ಮೂಕಿಯೂ ಆಗಿ ಹೋಗಿರುವುದು ಬಹುದೊಡ್ಡ ದುರಂತ.

Girl in a jacket
error: Content is protected !!