ಬೆಳ್ಳಿಮೋಡದ ಆಚೆಯಿಂದ ಓಡಿಬಂದ ಮಿನುಗುತಾರೆ

Share

ಆ ಮೊಗವು ಎಂಥಾ ಚಲುವು

ಮನವ ಸೆಳೆವ ಬಂಗಾರದ ಹೂವು   

    ಚಿ.ಉದಯ ಶಂಕರ್‌ ಅವರು  ಬರೆದ ಈ ಗೀತೆಯೇ ಕಲ್ಪನ ಅವರ ಚಲುವಿಗೆ ಸಂಕೇತದಂತಿದೆ. ಕನ್ನಡ ಬೆಳ್ಳಿತೆರೆಯ ಮಿನುಗುತಾರೆ ಕಲ್ಪನಾ ಅವರು ಇಂದು ಬದುಕಿದ್ದರೆ ಎಂಭತ್ತು ವಸಂತಗಳ ವರ್ಷಾಚರಣೆಯನ್ನು ಇದೇ ಜೂಲೈ ೧೮ಕ್ಕೆ ಆಚರಿಸಿಕೊಳ್ಳುತ್ತಿದ್ದರು. ಕಲ್ಪನಾ ಮೂಲತಹ ಮಂಗಳೂರು ಮೂಲದವರು.ಇವರ ತಂದೆ ಕೃಷ್ಣಮೂರ್ತಿ ಮತ್ತು ತಾಯಿ ಜಾನಕಮ್ಮ.

   ತನ್ನ ದುರಂತದ ಗಾಥೆಗಳಲ್ಲಿ ಉತ್ತರದ ಮೀನಾಕುಮಾರಿಗೆ ಹೋಲಿಸಬಹುದಾದ ಈ ಮಹಾನಟಿ ಒಬ್ಬ ನಟಿಯಾಗಬೇಕು ಎಂದು ಕನಸು ಕಂಡಿದ್ದು ತೆಲುಗಿನ ಭಾನುಮತಿಯ ಅಭಿನಯದಿಂದ. ತಮಿಳು,ಮಲೆಯಾಳಂ,ತಳು ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸಿದ ಇವರು ಉಳಿದ ನಟಿಯರಿಗಿಂತಲೂ ಡಿಫರೆಂಟ್‌ ಆಗಿಯೇ ಕನ್ನಡ ಸಿನಿರಂಗದಲ್ಲಿ ಕಂಡವರು.

   ಹೌದು, ಕಲ್ಪನಾ ಅಪರೂಪದ ಓದುಗಾರ್ತಿಯೂ ಆಗಿದ್ದಳು. ರಜತ ಪರದೆಯ ಮೇಲೆ ತನ್ನ ಪ್ರತಿಭಾ ಶಕ್ತಿಯಿಂದಲೇ ಅರವತ್ತು ,ಎಪ್ಪತ್ತರ ದಶಕದಲ್ಲಿ ಆಳಿದಾಕೆ. ಕಲ್ಪನಾ ಅವರನ್ನು ಬಿ.ಆರ್.‌ ಪಂತುಲು ಅವರು ಸಾಕುಮಗಳು ಚಿತ್ರದ ಮೂಲಕ ಸಿನಿ ರಂಗಕ್ಕೆ ಪರಿಚಯಿಸಿದರು. ಡಾ.ಶಿವರಾಮ ಕಾರಂತರು ಕೋಟಿ ಚನ್ನಯ್ಯ ಎಂಬ ತುಳು ಚಿತ್ರದಲ್ಲಿ ಈಕೆಯನ್ನು ನಿರ್ದೇಶಿಸಿದರೆ, ತಮ್ಮ ಕಾದಂಬರಿ ಆಧಾರಿತವಾದ ಸರ್ವಮಂಗಳಾ ಚಿತ್ರವನ್ನು ಚದುರಂಗರೇ ನಿರ್ದೇಶಿಸಿದ್ದರು.

   ಆರಂಭದಲ್ಲಿ ಪೋಷಕ ನಟಿಯಾಗಿ,ಎರಡನೇ ಹಂತದ ನಟಿಯಾಗಿ ಕಾಣುತಿದ್ದ ಕಲ್ಪನಾ ಅವರನ್ನು ಪಂತುಲೂ ಅವರು ಈಕೆಯ ಕಂಠವೇ ಸರಿಯಿಲ್ಲ ಎಂದು ಈಕೆಯನ್ನು ನಿರಾಸೆಗೆ ತಳ್ಳಿದ್ದರು. ತನ್ನ ಒಪ್ಪತ್ತಿನ ಊಟಕ್ಕಾಗಿ ಅವಮಾನ ನುಂಗಿಕೊಂಡಿದ್ದಕ್ಕೆ  ಈ ಮೇರುನಟಿ ಡಾ.ರಾಜ್‌ ಎಂಬ ಮೇರುನಟನೊಂದಿಗೆ ನಾಂದಿ ಎಂಬ ಚಿತ್ರದಲ್ಲಿ ನಟಿಸಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡದ್ದಲ್ಲದೇ  ಮಂತ್ರಾಲಯ ಮಹತ್ಮೆಯ ಲ್ಲಿ ನಟಿಸಿ ಬಿಡುವಿಲ್ಲದೇ ದುಡಿವ ಮೂರು ಷಿಫ್ಟಗಳಲ್ಲಿ  ನಟಿಸುವ ಹಂತವನ್ನು ಮುಟ್ಟಿದಳು ಈ ಚಿತ್ರವನ್ನು ಟಿ.ವಿ. ಸಿಂಗ್‌ ಠಾಕೂರ್‌ ನಿರ್ದೇಶಿಸಿದ್ದರು, ಚದುರಂಗರ ಉಯ್ಯಾಲೆ ಚಿತ್ರವನ್ನು ಎನ್.‌ ಲಕ್ಷ್ಮಿನಾರಾಯಣ್‌ ಅವರು ನಿರ್ದೇಶಿಸಿದ್ದರು.ಅಷ್ಟೇ ಅಲ್ಲ ನಾಂದಿ ಚಿತ್ರದ ಮೂಲಕ  ಲಂಡನ್‌ ನಲ್ಲಿ ನಡೆದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಯನ್ನೂ ರಾಜ್‌ ಮತ್ತು ಕಲ್ಪನಾ ಜೋಡಿಗೆ ಹೆಸರು ತಂದವರು ಎನ್.‌ ಲಕ್ಷ್ಮೀನಾರಾಯಣ್.

   ‌ ಕಲ್ಪನಾ ಎಂದರೇನೇ ಕ್ಲಾಸಿಕ್‌ ಸಿನಿಮಾ ಕ್ಲಾಸಿಕ್‌ ಹಾಡುಗಳು ಎಂಬಂಥಹ ಹೆಗ್ಗಳಿಕೆ. ಇವರ ಬಂಗಾರದ ಹೂವು ಚಿತ್ರ ರಾಷ್ಟ್ರದ ಅತ್ಯುತ್ತಮ ಚಿತ್ರದ ಪ್ರಶಸ್ತಿಗೆ ಭಾಜನವಾಗಿತ್ತು ಅರಸುಕುಮಾರ್‌ ಈ ಚಿತ್ರ ನಿರ್ದೇಶಿಸಿದ್ದರು. ಗೀತ ಪ್ರಿಯಾ ನಿರ್ದೇಶನದ ಮಣ್ಣಿನ ಮಗ, ಎರಡು ಕನಸು , ಬಯಲು ದಾರಿಯಯಂತಹ ಸೂಪರ್‌ ಹಿಟ್‌ ಸಿನಿಮಾಗಳನ್ನು ದೊರೆ-ಭಗವಾನ್‌ ನಿರ್ದೇಶಿಸಿದ್ದರು.

   ಕಲ್ಪನಾ ಅವರ ಕಲಾ ಪ್ರತಿಭೆ ಹೊಮ್ಮಿರುವುದು ಬಹುತೇಕ ಡಾ.ರಾಜ್‌ ಕುಮಾರ್‌ ಎಂಬ ಮೇರು ನಟನೊಂದಿಗೇ ಎಂಬುದು ಗಮನಾರ್ಹ.ನಿಜ ಅವರಿಬ್ಬರ ಜೋಡಿಯಲ್ಲಿ ಒಂದು ಬಗೆಯ ವೈವಿದ್ಯಮಯ ನಟನಾ ಸೊಗಸೂ ಕಾಣಿಸುತ್ತದೆ. ಕಲ್ಪನಾ ಅವರಿಗಿದ್ದ ಈ ಸಾಮರ್ಥ್ಯವೇ ಅವರ ಗ್ರಾಫ್‌ ಇಳಿಕೆಯಲ್ಲಿದ್ದಾಗಲೂ ಅವರಿಗೆ ಮತ್ತೆ ಎರಡು ಕನಸಿನಂತಹ ಪಾತ್ರ ಕಾದಿತ್ತು. ರಾಜ್‌ ಎದರು ಕಲ್ಪನಾ ಕುರಿತ ತಪ್ಪು ಸಂಗತಿಗಳು ಹರಿದಾಡಿದಾಗಲೂ ಅವರು ಅದಕ್ಕೆ ಗಮನ ಕೊಡದೇ ಉಳಿದೆಲ್ಲಾ ಪ್ರಪೋಜಲ್‌ ಗಳನ್ನು ತಳ್ಳಿಹಾಕಿ ಕಲ್ಪನಾಳ ಪ್ರತಿಭೆಗೆ ಆ ಪಾತ್ರ ಮೀಸಲಾಗಿರಿಸಿದ್ದರು.

   ಈ ಜೋಡಿ ರಾಜ್ಯ ಮತ್ತು ರಾಷ್ಟ್ರ ತಿರುಗಿನೋಡುವಂತಹ ಚಿತ್ರಗಳಲ್ಲಿ ನಟಿಸಿದ್ದನ್ನು ಈ ಇಬ್ಬರ ಸುಮಾರು ಹದಿನೆಂಟು ಚಿತ್ರಗಳೇ ಸಾಕ್ಷೀಕರಿಸುತ್ತವೆ.

   ಕಲ್ಪನಾ ಅವರನ್ನು ಅರವತ್ತರ ದಶಕದಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಪುಟ್ಟಣ್ಣ ಕಣಗಾಲ್‌ ಅವರಿಗೆ ಪರಿಚಯಿಸಿದವರು  ನಟ ಹಾಸ್ಯ ಚಕ್ರವರ್ತಿ ನರಸಿಂಹರಾಜು. ನಾಟಕ ಮತ್ತು ನೃತ್ಯಗಳಲ್ಲಿ ಕಾಣಿಸುತಿದ್ದ ಶರತ್‌ ಲತಾ ಕಲ್ಪನಾ ಆಗಿದ್ದು ಸಾಕುಮಗಳು ಚಿತ್ರದಿಂದ.

   ಮಹಿಳೆಯರ ಅಂತರಂಗದ ಕಥೆಗಳನ್ನು ಬೆಳ್ಳಿತೆರೆಯಲ್ಲಿ ಮಿನುಗಿಸಿ ಚಿತ್ರ ಬ್ರಹ್ಮ ಎಂದೇ ಕರೆಸಿಕೊಂಡವರು ಪುಟ್ಟಣ್ಣ ಕಣಗಾಲ್. ಇವರು ಕಲ್ಪನಾ ಅವರೊಳಗಿದ್ದ ಶಕ್ತ ಕಲಾವಿದೆಯನ್ನು, ಅಕೆಯ ಸೌಂದರ್ಯ,ಸ್ವಭಾವ,ಅಭಿರುಚಿ ಅರಿತವರು. ಆಕೆಯೊಳಗಿನ ಶ್ರೀಮಂತ ಕಲಾವಿದೆಯನ್ನೂ ನಾಡಿಗೆ ಪರಿಚಯಿಸಿದವರು.

ಬೆಳ್ಳಿ ಮೋಡದ ಅಂಚಿನಿಂದ ಮೂಡಿಬಂದ ಆಶಾಕಿರಣ

ಬೆಳ್ಳಿ ಮೋಡದ ಆಚೆಯಿಂದ ಓಡಿಬಂದ ಮಿನುಗುತಾರೆ

   ಆರ್. ಎನ್.‌ ಜಯಗೋಪಾಲ್‌ ಅವರು ಬರೆದ ವಿಜಯ ಬಾಸ್ಕರ್‌ ಅವರ ಸಂಗೀತ ನಿರ್ದೇಶನದ ಈ ಹಾಡು ಕನ್ನಡದ ಎವರ್‌ ಗ್ರೀನ್‌ ಹಾಡುಗಳಲ್ಲೊಂದು .ಬೆಳ್ಳಿ ಮೋಡ ತ್ರಿವೇಣಿ ಅವರ ಕಾದಂಬರಿ ಆಧಾರಿತವಾದ ಮಹಿಳೆಯ ಸ್ವಾಭಿಮಾನವನ್ನು ತೋರುವ ಚಿತ್ರವಾಗಿದೆ. ವಿದೇಶಿ ಓದು ನಾಯಕನ ಒಳಗಿನ ದುರಾಸೆಯನ್ನು ಬಿಡಿಸದಾಗಿತ್ತು. ಜಾರಿಬಿದ್ದ ನಾಯಕ ತಾನು ತಿರಸ್ಕರಿಸಿದ ಹುಡುಗಿಯ ಮಾನವೀಯತೆಯಿಂದಲೇ ಬದುಕುತ್ತಾನೆ. ಮುಂದೆ ಆತನ ಮನ ಕರಗಿ ಆಕೆಯನ್ನು ನಿಜವಾಗಿಯೂ ಪ್ರೀತಿಸಲು ಮುಂದಾಗುತ್ತಾನೆ. ಆದರೆ ನಾಯಕಿ ತನ್ನನ್ನ ಒಲಿದವ ತನಗಾಗಿ ಅಲ್ಲ ತನ್ನನ್ನು ಸುತ್ತುವರೆದ ಆಸ್ತಿಗಾಗಿ ಬಂದದ್ದು ಎಂಬ ಆಘಾತವನ್ನು ಮರೆಯಲಾರದೇ ಆಕೆಯೇ ಆತನನ್ನು ತಿರಸ್ಕರಿಸುವ ಸ್ವಾಭಿಮಾನೀ ರೂಪವಾಗುತ್ತಾಳೆ. ಇಂದಿರಾ ಎಂಬ ಈ ನಾಯಕಿಯ ಪಾತ್ರದಿಂದ ಯಶಸ್ಸಿನ ಉತ್ತುಂಗಕ್ಕೆ ಏರಿದ ಕಲ್ಪಾನಾ ನಟನೆಯ ಗ್ರಾಫ್‌ ಸಿನಿರಂಗದ ಉತ್ತುಂಗಕ್ಕೂ ಆಕೆಯನ್ನು ಸಾಗಿಸಿತ್ತು. ಇದರ ಹಿಂದೆ ಪುಟ್ಟಣ್ಣ ಎಂಬ ಮೇರು ನಿರ್ದೇಶಕನ ಕಲಾ ಪ್ರತಿಭೆ ಇತ್ತು. ಈ ಜೋಡಿಯಿಂದ ಮುಂದೆ ಬಹುಕಾಲ ಹಸಿರಾಗಿ ಉಳಿಯುವಂತಹ ಅಭಿರುಚಿಯ ವರ್ಷಕಾಲವೇ ಶುರುವಾಯಿತು. ಬೇರೆ ನಟಿಯರನ್ನು ಕಲ್ಪಿಸಿಕೊಳ್ಳಲಾಗದಂತಹ ಶರಪಂಜರ ಮತ್ತು ಗೆಜ್ಜೆ ಪೂಜೆಯಂತಹ ಸಿನಿಮಾಗಳು ಇವರ ಸಮ್ಮಿಲನದ ಫಲಗಳಂತಿವೆ.

 ಉತ್ತರ ದೃವದಿಂ ದಕ್ಷಿಣ ದೃವಕೂ,

 ಚುಂಬಕ ಗಾಳಿಯು ಬೀಸುತಿದೆ.

ಸೂರ್ಯನ ಬಿಂಬಕೆ ಚಂದ್ರನ ಬಿಂಬವು

ರಂಜಿಸಿ ನಗೆಯಲಿ ಮೀಸುತಿದೆ.

    ಕಲ್ಪನಾ ಎಂದೊಡನೆ ದುತ್ತನೆ ನೆನಪಾಗುವುದು ಆಕೆಯ ಸ್ಕರ್ಫ ಮೂಲಕ . ಗದ್ಯಾತ್ಮಕ ಧ್ವನಿಯ ಮೂಲಕ. ಈ ವಿಶೇಷ ಧ್ವನಿ ಕೆಲವರಿಗೆ ಕಿರಿಕಿರಿಯೂ ಎನಿಸುತಿತ್ತು. ಆರತಿ,ಭಾರತಿ,ಮಂಜುಳಾ,ಜಯಂತಿಯರಿಗೆ ಇಲ್ಲದ ಈಕೆಯದೇ ಆದ ಸಂಭಾಷಣಾ ವಿಧಾನಕ್ಕೆ ಕಾರಣವೇ ಆಕೆಯ ಪ್ರಾದೇಶಿಕತೆ. ಹೌದು ಕಲ್ಪನಾ ಮೂಲತಹ ಮಂಗಳೂರಿನವಳು. ತುಳು ಭಾಷಿಕಳು. ಹಾಗಾಗಿಯೇ ಆಕೆಯ ಸಂಭಾಷಣೆಯಲ್ಲಿಗದ್ಯದ ಗಮಲು ಹೊಮ್ಮುತಿತ್ತು. ದೀರ್ಘ ಸೆಳೆತದ ಲಯಗಾರಿಕೆಯಿಂದ ಆಕೆಯ ಕನ್ನಡವು ಕೊನೆಗೊಳ್ಳುತಿತ್ತು.

   ಕಲ್ಪನಾ ಮನೆಯನ್ನು ಅಷ್ಟೇ ಅಲ್ಲ ತಾನು ಉಳಿದುಕೊಳ್ಳುತಿದ್ದ ಹೋಟೇಲ್‌ ಕೋಣೆಯಲ್ಲೂ ತಮ್ಮದೇ ಅಭಿರುಚಿ ಕಾಣುವಂತೆ ನಿರ್ಮಿಸಿಕೊಳ್ಳುತಿದ್ದಳು. ಇಡೀ ಕೋಣೆಯನ್ನು ಸ್ವಯಂ ನಿಂತೇ ಅಲಂಕರಿಸುತ್ತಿದ್ದಳು. ಕೋಣೆ ಆವರಿಸಿದ ಹೂಗಳ ಲೋಕವೇ ಎಂಥವರನ್ನೂ ಸೆಳೆವಂತ್ತಿತ್ತು. ಅದು ಕಲ್ಪನಾ ವಾಸಿಸುವ ಕೋಣೆ ಎಂಬುದನ್ನು ಆ ಕೋಣೆಯ ಆಚೆಯಲ್ಲಿ ಹಾದು ಬರುತ್ತಿದ್ದ ಪರಿಮಳವೇ ಹೇಳುತಿತ್ತು.

ನನ್ನ ಪುಟ್ಟ ಸಂಸಾರ ಲೋಕದಿಂದ ಬಹುದೂರ

ಪ್ರಿಯತಮನ ಪ್ರೇಮ ಗಂಗಾ ತುಂಬಿ ಹರಿವ ಮಂದಿರ

   ಕಲ್ಪನಾ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡ ಬಿಡುಗಡೆ ಚಿತ್ರದ ಚಿ.ಉದಯ ಶಂಕರ್‌ ಅವರ ಈ ಹಾಡು ಕಲ್ಪನಾ ಅವರ ಜೀವನ ಗಾಥೆಯನ್ನೇ ಹೇಳುವಂತಿದೆ.

   ಈ ಹಾಡಿನೊಳಗಿನ ಕನಸು ಕಲ್ಪನಾ ಅವರದಾಗಿತ್ತು ಆದರೆ ಅವರ ಬಾಳಿನಲ್ಲಿ ಬಂದವರು ಅವಳ ಈ ಕಲ್ಪನಾ ಲೋಕವನ್ನೇ ಛಿದ್ರಗೊಳಿಸಿದರು. ಪುರುಷ ಪ್ರಧಾನ ನೋಟಗಳು, ಬದುಕುಗಳು ತಮ್ಮ ತಪ್ಪನ್ನ ಮಾತ್ರ ಸ್ತ್ರೀ ಮೇಲೆ ಚಲ್ಲಿ ಅವಳು ಚಂಚಲೆ, ಅವಳು ತುಂಬಾ ಈಗೋ ಸೆಂಟ್ರಿಕ್‌ ಎಂದೆಲ್ಲಾ ಗಾಳಿಮಾತುಗಳ ಹಬ್ಬಿಸಿ ಅವಳನ್ನು ಆತ್ಮಹತ್ಯೆಯ ತನಕವೂ ತಳ್ಳಿದ ಸುಳಿಗಳೇ ಹಲವು.

   ಕಲ್ಪನಾ ಅವರ ಸಾವಿನ ಸಾಲು ಈ ನೆಲೆಯ ಮನೆಯಿಂದ  ಅರಂಭವಾಗಿ ನಾಟಕಗಳಲ್ಲಿ ಬೆಳೆದು ಕೊನೆಗೆ ಗೋಟೂರು ಐಬಿಯಲ್ಲಿ ಒಬ್ಬಂಟಿತನದ ನೋವಿನಲ್ಲಿ,ಛಿದ್ರ ಛದ್ರಗೊಂಡು ಕೊನೆಗೆ ನಿದ್ರೆ ಮಾತ್ರೆಗಳೊಂದಿಗೆ, ಉಂಗುರದ ವಜ್ರದ ಹರಳಲ್ಲಿ ನೆಲಕ್ಕುರುಳಿ ಅನಾಥಳ ಬದುಕಂತೆ ಆಕೆಯನ್ನು ಮುಗಿಸಿಬಿಟ್ಟಿತು.

   ಕಲ್ಪನಾ ತನ್ನ ಕನಸಿನ ಬಂಗಲೆಯನ್ನು ಅದ್ದೂರಿಯಾಗಿಯೇ ನಿರ್ಮಿಸಲು ಹೋಗಿ ಸಾಲಗಾರಳಾಗಿದ್ದು, ಆಕೆಯ ಹತಾಶೆಯ ಮೊದಲ ಮೆಟ್ಟಿಲಂತೆ ಕಾಣುತ್ತದೆ. ಬೆಂಗಳೂರಿನ ಪ್ರೇಜರ್‌ ಟೌನ್‌ ನ ಡೇವಿಸ್‌ ರಸ್ತೆಯ ʼಅನುಗ್ರಹʼ ಎಂಬ ಅದ್ದೂರಿ ಮನೆ ಕಟ್ಟಿಕೊಂಡ ವೇಳೆಯಲ್ಲೇ ಆಕೆಯ ಹಲವು ಸಿನಿಮಾಗಳೂ ಸೋತುಹೋಗಿದ್ದವು.

     ಅದು ಕಲ್ಪನಾ ಅವರ ಸೋಲಿನ ಕಾಲ. ಮೈತ್ರಿ,ಮುಕ್ತಿ,ಸೋತುಗೆದ್ದವಳು,ನಾ ಮೆಚ್ಚಿದ ಹುಡುಗ.ಸೋತಿದ್ದವು. ಆದರೂ ಬೆಳೆದ ಆಕೆಯ ಮನೆ ಸಾಲದ ಮದ್ಯೆ ಮತ್ತೆ ಹೊಸ ಭರವಸೆ ಮೂಡಲೆಂಬಂತೆ ರಾಜ್‌ ಆಕೆಗೆ ಎರಡು ಕನಸು ಸಿನಿಮಾ ನೀಡಿದರು. ಆದರೆ ಕಲ್ಪನಾಳನ್ನ ಸುತ್ತುವರೆಯಲಾರಂಭಿಸಿದ ಶನಿಗಳು ಅವಳನ್ನು ಮತ್ತೆ ಮೇಲೇಳಲಾರದಂತೆ ಮಾಡಿ ತಣ್ಣಗೆ ಮಣ್ಣಲ್ಲಿ ಮಲಗಿಸುವತನಕವೂ ಕಾಡಿದವು.

   ಕಲ್ಪನಾ ತನ್ನ ಹಳೆಯ ಸಾಲ ನೋಡಿ ಸುಮ್ಮನಿರಲಿಲ್ಲ ಸಿನಿಮಾದಿಂದ ಬಂದ ಹಣವನ್ನೆಲ್ಲಾ ಮತ್ತೆ ಮನೆಯ ಚಂದಕ್ಕೆ ಸುರಿದಳು. ನೆಲೆದ ಬಣ್ಣ ಬದಲಿಸಿದಳು,ಕೋಣೆಗೊಂದರಂತೆ ಹೊಸ ಹೊಸ ಬಣ್ಣದ ಥಳುಕು ತುಂಬಿಸಿದರು. ರತ್ನಗಂಬಳಿ, ಕಾಸ್ಟಲೀ ಬಣ್ಣಗಳ ಹಾಸಿಗೆಯಿಂದ ಹಿಡಿದು ಮನೆಯ ಸಣ್ಣ ಸರಕುಗಳಿಗೂ  ಐಷರಾಮೀ ಹೊಳಪು ನೀಡ ಹೋದರು.

   ಕಲ್ಪನಾಳಿಗೆ ಮನೆ ಮತ್ತು ಮನೆ ನೀಡಿದ ಸಾಲ ಒಂದೆಡೆಯಾದರೆ ಮನೆಯಲ್ಲಿ ಇಳಿದ ಆಕೆಯ ಚಿಕ್ಕಮ್ಮ ಇನ್ನೊಂದೆಡೆಗೆ ಆಕೆಯನ್ನು ಹರಿದು ತಿಂದರು. ಧನ ದಾಹಿಯಾಗಿದ್ದ ಆಕೆ ಬಂದದ್ದನ್ನೆಲ್ಲಾ ಬಾಚಿಕೊಳ್ಳುವ ಬಕಾಸುರನಂತಿದ್ದಳು. ಸೆಟ್‌ ನಲ್ಲಿಯೂ ಆಕೆಯನ್ನ ಕಂಡರೆ ಸಾಕು “ ಬಂದಳಲ್ಲಪ್ಪಾ ಇವಳೂ…” ಎನ್ನುತ್ತಾ ಕಂಪಿಸಿಬಿಡುವಷ್ಟು ದುರುಳತನ ಹೊತ್ತಿದ್ದಳು.

   ಕಲ್ಪನಾಳನ್ನು ಮನೆಯಲ್ಲಿ ನೆಮ್ಮದಿಯಾಗಿರದಂತೆ ಬಿಡದೇ ನಾಟಕಗಳಲ್ಲಿ ಸಾವಿರ ರೂಪಾಯಿಗಳಿಗೂ ದುಡಿಯುವಂತೆ  ದೂಡಿದವನೇ ಆಕೆಯ ತಮ್ಮ ಮೂರ್ತಿ. ಆಕೆ ಆತನಿಗೊಂದು ಜೀವನ ನೀಡಲು ಹೋಗಿ ತಾನೇ ಮತ್ತೂ ಮತ್ತೂ ಸಾಲಗಾರಳಾಗಿ ಬೆಳೆದಳು. ಆದರ್ಶ ಅಕ್ಕನಂತೆ ಅವನನ್ನು ದೊಡ್ಡ ಕ್ಯಾಮರಾ ಮೆನ್‌ ಮಾಡಲು ಹೋದಳಾಕೆ. ಆದರೆ ಅವನು ಅತ್ತ ಓದಿ ವಕೀಲನೂ ಆಗಲಿಲ್ಲ ಇತ್ತ ಸಿನಿರಂಗದಲ್ಲಿ ಕ್ಯಾಮರಾ ಮನ್‌ ಕೂಡಾ ಆಗಲಿಲ್ಲ.ಹೋಗಲಿ ತನ್ನ ನಟನಾಗುವ ಹುಚ್ಚನ್ನೂ ಪೂರ್ತಿಗೊಳಿಸಲಿಲ್ಲ. ಬದಲಿಗೆ ಮುಂಬಯಿಯ ಕ್ಯಾಬರೆ ನರ್ತಕಿಯ ಹಿಂದೆ ಬಿದ್ದು ಸ್ಟಾರ್‌ ಹೋಟೇಲ್‌ ಗಳಲ್ಲಿ ಉಳಿದು ಅಕ್ಕ ದುಡಿವ ಅಷ್ಟೂ ಹಣವನ್ನು ಅವಳಿಗೆ ಸುರಿಯತೊಡಗಿದ.

   ಸಾಲದ ಮೋಜಿಗೆ ಬಿದ್ದ. ಸ್ಟಾರ್‌ ನಟಿಯ ತಮ್ಮನೆಂಬ ಕಾರಣಕ್ಕೆ ಸಹಿಸಿಕೊಂಡ ಸ್ಟಾರ್‌ ಹೋಟೆಲ್‌ ಮಾಲಿಕರು ಕೊನೆಗೆ ವಿಪರೀತ ಬಿಲ್ ಏರಿದಾಗ ರೋಸಿ ಹೋದರು. ಒಂದು ಹಂತಕ್ಕೆ ಅದನ್ನು ಕಟ್ಟಿದರೆ ಮಾತ್ರ ಬಿಡುತ್ತೇವೆಂದು ಮೇನೇಜರ್‌  ಅವನನ್ನು ಕೂಡಿಸಿಕೊಂಡೂ ಬಿಟ್ಟರು. ಹಗಲು ಇರುಳುಗಳನ್ನು ಕರಗಿಸಿ ಕಲ್ಪನಾ ಉತ್ತರ ಕರ್ನಾಟಕದ ನಾಟಕ ಕಂಪನಿಗಳಲ್ಲಿ ದುಡಿದ ಹಣವನ್ನ ತಂದು ಕಟ್ಟುವ ಪರಿಸ್ಥಿತಿಯನ್ನ ಅವನು ತಂದಿದ್ದ.

ಹೆಜ್ಜೆ ಹೆಜ್ಜೆಗೂ ಹೊನ್ನೇ ಸುರಿಯಲಿ

ಗೆಜ್ಜೆ ಪೂಜೆಯ ಉರುಲಿಗೆ ಕೊರಳನೆಂದೂ ನೀಡೆನು

   ಗೆಜ್ಜೆ ಪೂಜೆಯ ಈ ಹಾಡು ಕಲ್ಪನಾ ಜೀವನ ಚರಿತ್ರೆಯನ್ನು ನೆನಪಿಸುತ್ತದೆ. ನಿಜ ಕಲ್ಪನಾ ಬದುಕಿನಲ್ಲಿ ಕ್ಲಾಸ್‌ ಮಾದರಿಯನ್ನು ಇಷ್ಟಪಡುತಿದ್ದರು, ಆದರೆ ಅವರು ತನ್ನ ಸಂಗಾತಿಯೆಂದು ಬಯಸುತಿದ್ದ ಆಯ್ಕೆಯಲ್ಲಿಯೇ ಎಡವಿದರು.  ಎನ್.‌ ಲಕ್ಷ್ಮೀನಾರಾಯಣ್‌ ಥರದವರನ್ನು ವಿನಾಕಾರಣ ತಿರಸ್ಕರಿಸಿ ತಪ್ಪು ಮಾಡಿದ್ದ ಕಲ್ಪನಾ ಪುಟ್ಟಣ್ಣನವರ ನಡೆಯಿಂದ ಸೆನ್ಸಿಬಲ್‌ ಆಗಿ ಯೋಚಿಸುವುದನ್ನು ಕಲಿಯಬೇಕಿತ್ತು. ಅಪ್ಪಟ ಭಾವುಕಳಂತೆ ಕರಗಿ ಹೋಗುತಿದ್ದ ಆಕೆ ಗುಡುಗೇರಿ ಬಸವರಾಜ ಎಂಬ ಹುಂಬನ ಸಹವಾಸ ಬೆಳಸಲೇ ಬಾರದಿತ್ತು.

    ಹೆಣ್ಣೆಂದರೆ ಆಳುವುದಕ್ಕೆ ಮಾತ್ರ ಯೋಗ್ಯರು ಎಂದು ಭಾವಿಸುತಿದ್ದ ಗುಡಗೇರಿ ಬಸವರಾಜ ಎಂಬ ನಟ ಕಮ್‌ ಕಂಪನಿ ಮಾಲಿಕ ತನ್ನ ಕೆರಿಯರ್‌ ಉದ್ದಕ್ಕೂ ಅಪ್ಪಟ ಪ್ಯೂಡಲ್‌ ಚರಿತ್ರೆಯನ್ನು ಹೊಂದಿದವನಾಗಿದ್ದ. ಅವನಿಗೆ ಹೆಣ್ಣೆಂದರೆ ಮನೋರಂಜನೆಯ ಸರಕುಗಳಂತೆ, ತನ್ನ ದೇಹ, ತನ್ನ ಕಂಪನಿ ಮತ್ತು ಹಣದ ಮದದಿಂದ ಬೀಗುತಿದ್ದ ಆತನೊಳಗೊಬ್ಬ ಅಪ್ಪಟ ರಕ್ಕಸನೂ ಇದ್ದ ಎನ್ನಲಿಕ್ಕೆ ಆತನೇ ದಾವಣಗೆರೆ ಮತ್ತು ಹಬ್ಬಳ್ಳಿಯ ಕ್ಯಾಂಪ್‌ ಗಳಲ್ಲಿ ಕಲ್ಪನಾಳಿಗೆ ಮ್ಯಾನ್‌ ಹ್ಯಾಂಡಲಿಂಗ್‌ ಮಾಡಿದ ಪ್ರಸಂಗಗಳೇ ಸಾಕ್ಷಿ.

    ಬೆಳ್ಳಿತೆರೆಯಲ್ಲಿ ಮಿನುಗುತಾರೆ ಎಂದು ಕರೆಸಿಕೊಂಡು ರಾಜ್‌ ಕುಮಾರ್‌ ,ಉದಯ ಕುಮಾರ್‌,ಕಲ್ಯಾಣ್‌ ಕುಮಾರ್‌ ರಂತಹ ಸ್ಟಾರ್‌ ನಟರ ಜೊತೆ ಮೆರೆದ ನಟಿಯನ್ನು; ಪುಟ್ಟಣ್ಣ ,ಲಕ್ಷ್ಮೀನಾರಾಯಣ್‌,ಗೀತಪ್ರಿಯಾ,ದೊರೆ-ಭಗವಾನ್‌,ವಿಜಯ್‌ ರಂತಹವರ ಕೈಯ್ಯಲ್ಲಿ ಅರಳಿದ ಮಹಾನಟಿಯನ್ನ ಪುಟ್‌ ಪಾತ್‌ ನ ಒಬ್ಬ ಒರಟನಂತೆ ʼಬೋಸುಡಿʼ ಎಂದು ಅರಚಿ ಅವಮಾನಿಸಿ, ಜನರ ,ಕಲಾವಿದರ ನಡುವೆಯೇ ಹೊಡೆದ ಮುಟ್ಟಾಳನ ಸಹವಾಸವೇ ಅಕೆಯ ಪಟ್ಟವನ್ನು ನೆಲಕ್ಕೆಸೆದಿತ್ತು!

    ಕಲ್ಪನಾ  ಸಾವಿನ ನಿರ್ದಾರ ತಳೆದಾಗಲೂ ನೀಟ್‌ ಆಗಿ ಡ್ರೆಸ್‌ ಮಾಡಿಕೊಂಡು ತನಗೆ ನಟಿಯಾಗಲು ಪ್ರೇರಣೆ ನೀಡಿದ  ಆ ಭಾನುಮತಿಯವರೇ  ನೀಡಿದ ವಜ್ರದ ಉಂಗುರವನ್ನೇ ಹೊಡೆದು ಚೂರುಮಾಡಿ ನಿದ್ದೆ ಮಾತ್ರೆಗಳ ಜೊತೆ ಕುಡಿದಿದ್ದಳು.

    ಮಂತ್ರಾಲಯ ಮಹಾತ್ಮೆಯ  ಮೂಲಕ ತನ್ನ ಗ್ರಾಫ್‌ ಬೆಳಸಿಕೊಂಡ ನಟಿ,ಬಸವರಾಜ ಗುಡಗೇರಿ ಎಂಬ ಕಂಪನಿ ಮಾಲಿಕನ ಜೊತೆಗೆ ಜಗಳಕ್ಕೆ ಬಿದ್ದು ಸೆಟ್ಟಿನಲ್ಲಿದ್ದ ಅದೇ ಮಂತ್ರಾಲಯ ರಾಘವೇಂದ್ರರ ಪೋಟೋವನ್ನು ಎತ್ತಿ ಕುಕ್ಕಿದ ನಟಿ,ತನ್ನ ಸಾವಿನ ಕೊನೆ ಗಳಿಗೆಯಲ್ಲೂ ಅದೇ ಮಂತ್ರಾಲಯ ರಾಘವೇಂದ್ರರ ಪೋಟೋ ಅಪ್ಪಿಯೇ ಚಿರನಿದ್ದೆಗೆ ಜಾರಿದ್ದಳು.

Girl in a jacket
error: Content is protected !!