
ಪ್ರಾಥಮಿಕ ಶಾಲಾ ಗುರುಗಳ ತಾಳ್ಮೆ ಮತ್ತು ಅವರ ನೀತಿ ಪಾಠ
ಈ ಹೊತ್ತು ನನ್ನ ಮನಸ್ಸು ಬಾಲ್ಯದ ದಿನಗಳತ್ತ ಮುಖ ಮಾಡಿದೆ. ಬಾಲ್ಯದ ದಿನಗಳು ಎಂದಾಕ್ಷಣ ನನ್ನ ಮನಸ್ಸಿನಲ್ಲಿ ಮೂಡುವುದು ಪ್ರೈಮರಿ ಸ್ಕೂಲಿನ ದಿನಗಳು. ಆ ಹೊತ್ತಿನ ಗೆಳೆಯರ, ಗುರುಗಳ ನೆನಪುಗಳು ದಶಕಗಳ ನಂತರವೂ ಹಸಿರಾಗಿರುವುದು ಬಾಲ್ಯವನ್ನು ಪ್ರತಿಯೊಬ್ಬರೂ ಹೇಗೆ ತಮ್ಮ ಮನದ ಮೂಲೆಯಲ್ಲಿ ಜತನದಿಂದ ಜೋಪಾನವಾಗಿ ಕಾಪಾಡಿಕೊಂಡು ಬಂದಿರುತ್ತಾರೆ ಎನ್ನುವುದರ ಸೂಚಕವಾಗಿದೆ.
ಶಾಲೆಗೆ ಸೇರುವ ಪೂರ್ವದಲ್ಲಿ ನನಗೆ ಗೆಳೆಯರು ಅಂತಹ ಯಾರೂ ಇರಲಿಲ್ಲ. ನನಗಿಂತ ಸುಮಾರು ಎರಡು ವರ್ಷ ಹಿರಿಯನಾಗಿದ್ದ ಸೋದರಸಂಬಂಧಿ ಮಹಾಂತೇಶ್ ನನ್ನ ಪಾಲಿಗಿದ್ದ ಏಕೈಕ ಮಿತ್ರ. ಅವನೊಟ್ಟಿಗೆ ಆಡಿ, ಉಂಡು, ಜಗಳವಾಡಿ ಬೆಳೆದ ದಿನಗಳು ನನಗಿನ್ನೂ ಚೆನ್ನಾಗಿಯೇ ನೆನಪಿವೆ. ಅಂದ ಹಾಗೆ ಇಂದಿನ ದಿನಗಳಲ್ಲಿ ಇರುವಂತೆ ಆ ದಿನಗಳಲ್ಲಿ ಎಲ್. ಕೆ. ಜಿ., ಯು. ಕೆ. ಜಿ. ಗಳಿರಲಿಲ್ಲ. ನೇರವಾಗಿ ಒಂದನೇ ತರಗತಿಗೆ ನಮ್ಮನ್ನು ಭರ್ತಿ ಮಾಡಿಕೊಳ್ಳುತ್ತಿದ್ದರು. ಆರು ವರ್ಷ ವಯಸ್ಸಾಗಿದೆಯೋ ಇಲ್ಲವೋ ಎಂದು ನೋಡಲಿಕ್ಕೆ ವಿಚಿತ್ರವಾದ ಮತ್ತು ಸ್ಥಳೀಯವಾಗಿ ಸಾಕಷ್ಟು ಚಾಲ್ತಿಯಲ್ಲಿದ್ದ ಒಂದು ಜನಪ್ರಿಯ ಪದ್ಧತಿಯನ್ನು ಅನುಸರಿಸುತ್ತಿದ್ದರು. ಜನನ ಪ್ರಮಾಣಪತ್ರಗಳು ಹೆಚ್ಚಾಗಿ ಚಾಲ್ತಿಯಲ್ಲಿ ಇಲ್ಲದ ಆ ದಿನಮಾನಗಳಲ್ಲಿ ಒಂದನೇ ತರಗತಿಗೆ ದಾಖಲಾಗಬಯಸುವ ಬಾಲಕನಿಗೆ ತನ್ನ ಬಲಗೈಯನ್ನು ತಲೆಯ ಮೇಲಿಂದ ತಂದು ಬೆರಳುಗಳ ಮೂಲಕ ಎಡಕಿವಿಯನ್ನು ಮುಟ್ಟಲು ಹೇಳುತ್ತಿದ್ದರು. ಹೀಗೆ ಮಾಡುವಲ್ಲಿ ಸಾಫಲ್ಯರಾದ ಬಾಲಕರಿಗೆ ಮಾತ್ರ ದಾಖಲಾತಿ ಕೊಡುತ್ತಿದ್ದರೇ ವಿನಾಃ ಜನನ ಪ್ರಮಾಣಪತ್ರಕ್ಕೂ ಹೆಚ್ಚು ಕಿಮ್ಮತ್ತು ಕೊಡುತ್ತಿರಲಿಲ್ಲ.

ಶಾಲೆಗೆ ಸೇರಿದ ನಂತರದಲ್ಲಿ ನನಗೆ ಪರಿಚಯವಾದ ಮೊದಲ ಗೆಳೆಯ ಅಂದರೆ ಎ. ಎಲ್. ಮಂಜುನಾಥ್ ಎನ್ನುವವನು. ನನಗೆ ನೆನಪಿರುವಂತೆ, ಶಿವಮೊಗ್ಗೆಯ ಮೂಲದವನಾದ ಈತ ನನ್ನೊಟ್ಟಿಗೆ ಕೇವಲ ಕೆಲವೇ ತಿಂಗಳುಗಳ ಕಾಲ ಮೊದಲನೇ ಇಯತ್ತೆಯಲ್ಲಿ ಸಹಪಾಠಿಯಾಗಿದ್ದ. ಆತನ ತಂದೆ ಸರ್ಕಾರಿ ನೌಕರರಾದ ಕಾರಣದಿಂದಾಗಿ ಬೇರೆ ಊರಿಗೆ ವರ್ಗವಾಗುವುದರೊಟ್ಟಿಗೆ ನನ್ನ ಮಂಜನ ಸ್ನೇಹಕ್ಕೆ ಶಾಶ್ವತವಾದ ಕೊಡಲಿಪೆಟ್ಟು ಬಿದ್ದಿತು. ಆ ದಿನಗಳಲ್ಲಿ ಇದು ನನಗೆ ಬಹಳ ಬೇಸರ ಮಾಡಿದ ಸಂಗತಿಯಾಗಿತ್ತು. ಅಂದು ನನ್ನನ್ನು ಬಿಟ್ಟು ಹೋದ ಮಂಜನನ್ನು ಮುಂದೆ ಪ್ರೌಢದಿನಗಳಲ್ಲಿ ಬಹಳ ಹುಡುಕಿದೆ, ಮಂಜ ಮತ್ತೆ ಸಿಗಲೇ ಇಲ್ಲ.

ಮಂಜ ಹೋದ ನಂತರ ನನಗೆ ಗೆಳೆಯನಾದವನು ಬಿ. ಟಿ. ಶಿವಕುಮಾರ್. ಮಂಜನನ್ನ ಮರೆಸುವಷ್ಟರ ಮಟ್ಟಿಗಿನ ಸ್ನೇಹವನ್ನು ಕೆಲವೇ ದಿನಗಳಲ್ಲಿ ಶಿವಕುಮಾರ್ ಒಟ್ಟಿಗೆ ಸಂಪಾದಿಸಿದ್ದೆ. ಪ್ರತೀ ದಿನ ಹಳೇ ಬಸ್ ಸ್ಟ್ಯಾಂಡ್ ನ ನನ್ನ ಮನೆಯಿಂದ ಹೊರಟವನು ಶಿವಕುಮಾರ್ ನನ್ನು ಮಾರ್ಗಮಧ್ಯದ ಅವನ ಮನೆಯಿಂದ ಕರೆದುಕೊಂಡು ರಾಮಲಿಂಗ ದೇವಸ್ಥಾನದ ಮುಂದೆ ಇರುವ ಆ ಹೊತ್ತಿನ ಊರ ಹೊರಗೇ ಎಂದು ಹೇಳಬಹುದಾದ ರೋಡಿನಲ್ಲಿ ಹೊಸ ಬಸ್ ಸ್ಟ್ಯಾಂಡ್ ನಲ್ಲಿರುವ ಸರ್ಕಾರಿ ಬಾಲಕರ ಪ್ರಾಥಮಿಕ ಶಾಲೆಗೆ ಸುಮಾರು ನಾಲ್ಕು ವರ್ಷಗಳು ನಡೆದು ಹೋಗುತ್ತಿದ್ದದ್ದು ಮರೆಯಲಿಕ್ಕೆ ಸಾಧ್ಯವಿಲ್ಲ.
ದಾರಿಯಲ್ಲಿ ಬರುವ ದೊಡ್ಡ ಹುಣಸೇಮರದ ಅಡಿಯಲ್ಲಿ ಹೆದರುತ್ತಲೇ ಒಬ್ಬರನ್ನೊಬ್ಬರನ್ನು ಹಿಡಿದುಕೊಂಡೆ ಅಡಿಯ ಮೇಲೆ ಅಡಿಯಿಟ್ಟು ಸಾಗುತ್ತಿದ್ದ ನಾವು ಮುಂದುವರೆದು ಸ್ವಲ್ಪ ದೂರ ಕ್ರಮಿಸಿದರೆ ಬರುತ್ತಿದ್ದ ರಸ್ತೆಯ ಬಲಬದಿಗಿದ್ದ ಒಂದು ಪಾಳುಬಿದ್ದ ತುರುಕರ ಮನೆಯನ್ನು ನೋಡುತ್ತಲೇ ಶಾಲೆ ಬರುವವರೆಗೂ ಎಷ್ಟು ತೀವ್ರಗತಿಯಿಂದ ಓಡುತ್ತಿದ್ದೆವು ಅಂದರೆ ಸುಮಾರು ಸಲ ಈ ಓಟದ ತೀವ್ರತೆಗೆ ನಮ್ಮ ಹೆಗಲ ಮೇಲಿನ ಕೈ ಚೀಲಗಳು ಹರಿದಿದ್ದಿವೆ.

ಈ ದಿನಗಳ ಒಂದು ಘಟನೆ ನನ್ನ ನೆನಪಿನಲ್ಲಿ ಅಳಿಯದೆ ಉಳಿದಿದೆ. ಅದೊಂದು ದಿನ, ಒಂದನೇ ತರಗತಿಯಲ್ಲಿ ಇದ್ದೆವು ಅನ್ನಿಸುತ್ತದೆ, ಹುಣಸೇಮರವನ್ನು ದಾಟಿ ಹತ್ತು ಹೆಜ್ಜೆ ಮುಂದೆ ಹೋಗಿದ್ದೆವೇನೋ, ಶಿವಕುಮಾರ್ ಗೆ ಅವನ ಕಾಲಿನ ಬುಡದಲ್ಲಿಯೆ ರಸ್ತೆಯ ಮೇಲೆ ಬಿದ್ದಿದ್ದ ಒಂದು ಹತ್ತು ರೂಪಾಯಿ ನೋಟು ಸಿಕ್ಕಿತ್ತು. ಸಾಕಷ್ಟು ಗರಿಗರಿಯಾದ ನೋಟದು. ಆವತ್ತಿನ ದಿನಗಳಲ್ಲಿ ಹತ್ತರ ನೋಟಿಗೆ ಇಂದಿನ ಐನೂರರ ನೋಟಿನಷ್ಟೇ ಬೆಲೆ ಇತ್ತು ಎನ್ನಬಹುದು. ಸಹಜವಾಗಿಯೇ ನೋಟು ಸಿಕ್ಕಿದ್ದಕ್ಕೆ ಖುಷಿಯಾಗಿದ್ದ ಶಿವಕುಮಾರ್ ತಲೆಯಲ್ಲಿ ನನಗೆ ನೋಟು ಸಿಗಲಿಲ್ಲ ಎನ್ನುವ ಕಾರಣಕ್ಕೋ ಏನೋ ನಾನೊಂದು ಹುಳಬಿಟ್ಟೆ. ಇದು ಖೋಟಾನೋಟ್ ಆಗಿರಬಹುದು ಎನ್ನುವ ಶಂಕೆಯನ್ನ ವ್ಯಕ್ತಪಡಿಸಿದೆ. ಹಿಂದಿನ ರಾತ್ರಿ ಜಯವಾಣಿ ಟೂರಿಂಗ್ ಟಾಕೀಸ್ ನಲ್ಲಿ ನೋಡಿದ ಅಣ್ಣಾವ್ರ ಸಿನೆಮಾದ ಪರಿಣಾಮವಾಗಿಯೇ ಇದು ಅಚಾನಕ್ ಆಗಿ ನನ್ನ ಮನಸ್ಸಿನಲ್ಲಿ ಹೊಳೆದಿತ್ತು. ನನ್ನ ಈ ಮಾತಿಗೆ ಹೆದರಿದ ಗೆಳೆಯನಿಗೆ ನೋಟನ್ನು ಹರಿದು ಹಾಕುವಂತೆ ತಾಕೀತು ಮಾಡಿದೆ. ಭಯದಲ್ಲಿ ಹಿಂದೆ ಮುಂದೆ ನೋಡದೆ ನೋಟನ್ನು ಹರಿದು ತುಂಡುಗಳನ್ನು ಕೈಯಲ್ಲಿ ಭದ್ರವಾಗಿ ಹಿಡಿದ ಶಿವಕುಮಾರ್ ಒಟ್ಟಿಗೆ ಶಾಲೆಗೆ ಬರುವಾಗ ಜನಗಣಮನ ಮುಗಿದಿತ್ತು. ಶಾಲೆಗೆ ತಡವಾದ ಕಾರಣಕ್ಕಾಗಿ ಲೋಕಪ್ಪ ಮಾಸ್ತರ ಬೆತ್ತದ ಏಟಿಗೆ ಕೈಯೊಡ್ಡಬೇಕಾಗಿ ಬಂದಾಗ ಶಿವಕುಮಾರ್ ನೋಟಿನ ಚೂರುಗಳನ್ನು ಮಾಸ್ತರರಿಗೆ ತೋರಿಸದೆ ಅಡಗಿಸಿ ಇಟ್ಟುಕೊಳ್ಳದಾದ. ನಡೆದ ಕಥೆಯನ್ನ ಕೇಳಿದ ಮೇಷ್ಟ್ರು ನೋಟಿನ ಚೂರುಗಳನ್ನು ಪರೀಕ್ಷಿಸಿ ನೋಟು ಅಸಲಿಯೇ ಎಂದು ದೃಢಪಡಿಸಿಕೊಂಡರು. ತಡವಾಗಿ ಬಂದದಕ್ಕೆ ಸಿಕ್ಕ ಕೈಮೇಲಿನ ಎರಡು ಬೆತ್ತದ ಹೊಡೆತಗಳ ಜೊತೆಗೆ ಶಿವಕುಮಾರ್ ನನ್ನು ಹಾದಿತಪ್ಪಿಸಿ ಹತ್ತು ರೂಪಾಯಿ ನೋಟನ್ನು ಹಾಳು ಮಾಡಿದಕ್ಕಾಗಿ ಮತ್ತೆ ನಾಲ್ಕು ಹೊಡೆತಗಳನ್ನು ಸರಿಯಾಗಿಯೇ ಮಾಸ್ತರು ಬೆನ್ನ ಮೇಲೆ ಬಾರಿಸಿದರು.
ನಾನು ಶಾಲೆಗೆ ಸೇರಿ ಒಂದು ತಿಂಗಳ ಮೇಲಾದರೂ ಮೊದಲನೇ ಕ್ಲಾಸಿಗೆ ಹೊಸ ಹುಡುಗರು ಭರ್ತಿಯಾಗುತ್ತಲೇ ಸಾಗುತ್ತಿದ್ದರು. ಈ ಅವಧಿಯಲ್ಲಿ ನಮಗೆ ಪ್ರತೀ ದಿನ ಮಂಡಕ್ಕಿ, ಬೆಲ್ಲ ಮತ್ತು ತೆಂಗಿನ ಕಾಯಿ ತುಂಡುಗಳಿದ್ದ ಒಂದು ಬೊಗಸೆಯಷ್ಟು ಪ್ರಸಾದ ಒಂದಲ್ಲ ಹಲವು ಬಾರಿ ದೊರೆಯುತ್ತಿತ್ತು. ಹೊಸ ಹುಡುಗನೊಬ್ಬ ಶಾಲೆಗೆ ದಾಖಲಾದ ಎಂದರೆ ಅವನ ಪೋಷಕರು ಒಂದನೇ ತರಗತಿಯಿಂದ ಹಿಡಿದು ನಾಲ್ಕನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೂ ತಪ್ಪದೇ ಮಂಡಕ್ಕಿ ಪ್ರಸಾದವನ್ನ ಸರಸ್ವತಿ ಪೂಜೆಯ ನಂತರ ಅವರವರ ತರಗತಿಗಳಿಗೇ ಹೋಗಿ ಹಂಚುತ್ತಿದ್ದದ್ದು ಅಂದಿನ ವಿಶೇಷ. ಹೀಗಾಗಿ ನಾಲ್ಕೂ ವರ್ಷಗಳೂ ಶಾಲೆಯ ದಾಖಲಾತಿಯ ಸಮಯವನ್ನು ಒಂದು ರೀತಿಯ ಸಂಭ್ರಮದಲ್ಲಿ ಎದುರುನೋಡುತ್ತಿದ್ದೆವು.
ಒಂದನೇ ಕ್ಲಾಸಿನ ನಮಗೆ, ವಿದ್ಯಾರ್ಥಿಗಳು ಹೆಚ್ಚಿದ್ದ ಕಾರಣ, ಎರಡು ವಿಭಾಗಳಾಗಿ ವಿಂಗಡಿಸಿದ್ದರು. ಒಂದೊಂದೂ ವಿಭಾಗದಲ್ಲಿ ಸುಮಾರು ನಲ್ವತ್ತು ವಿದ್ಯಾರ್ಥಿಗಳಿದ್ದೆವು. “ಬಿ” ವಿಭಾಗದಲ್ಲಿದ್ದ ನನಗೆ ಲೋಕಪ್ಪ ಮಾಸ್ತರು ಶಿಕ್ಷಕರಾಗಿದ್ದರೆ, “ಎ” ವಿಭಾಗಕ್ಕೆ ರಾಮಪ್ಪ ಎನ್ನುವವರು ಶಿಕ್ಷಕರಾಗಿದ್ದರು. ಪ್ರಾಥಮಿಕ ಶಾಲೆಯಲ್ಲಿ ತರಗತಿಗೆ ಒಬ್ಬರೇ ಶಿಕ್ಷಕರು ಇದ್ದು ಎಲ್ಲಾ ವಿಷಯಗಳ ಪಾಠವನ್ನೂ ಅವರೇ ಮಾಡಬೇಕಾಗಿದ್ದಿತು. ಆ ಹೊತ್ತಿನಲ್ಲಿ ಬೇರೆ ಬೇರೆ ವಿಷಯಗಳನ್ನು ಬೇರೆ ಬೇರೆ ಗುರುಗಳು ಬೋಧಿಸುವ ಪದ್ಧತಿ ಇರಲಿಲ್ಲ. ರಾಮಪ್ಪ ಮೇಷ್ಟ್ರು “ಎ” ವಿಭಾಗದ ವಿಧ್ಯಾರ್ಥಿಗಳು ಮುಂದಿನ ತರಗತಿಗಳಿಗೆ ಹೋದ ಹಾಗೆಲ್ಲಾ ಅವರನ್ನೇ ಹಿಂಬಾಲಿಸುತ್ತಾ ಹೋದರು. ಅಂದರೆ ಒಂದನೇ ಇಯತ್ತೆಯಿಂದ ನಾಲ್ಕನೇ ಇಯತ್ತೆಯವರೆಗೆ ಅವರೇ “ಎ” ವಿಭಾಗದ ಶಿಕ್ಷಕರಾದರೆ, ನಮ್ಮ “ಬಿ” ವಿಭಾಗದವರಿಗೆ ಮಾತ್ರ ಪ್ರತೀ ವರ್ಷ ತರಗತಿಯ ಶಿಕ್ಷಕರು ಬದಲಾಗುತ್ತಲೇ ಹೋದರು.

ನಮಗೆ ಎರಡನೇ ತರಗತಿಯಲ್ಲಿ ಐಯ್ನರ ತಿಪ್ಪಯ್ಯ ಮೇಷ್ಟ್ರು, ಮೂರನೇ ತರಗತಿಯಲ್ಲಿ ಕಡೇಬನಕಟ್ಟೆಯ ರಂಗನಾಥ್ ಮೇಸ್ಟ್ರು ಮತ್ತು ನಾಲ್ಕನೇ ತರಗತಿಯಲ್ಲಿ ರಾಜೇಂದ್ರಪ್ರಸಾದ್ ಎನ್ನುವವರು ಶಿಕ್ಷಕರಾಗಿದ್ದರು. ನಾವು ಎರಡನೇ ತರಗತಿ ಮುಗಿಸಿದ ವರ್ಷವೇ ತಿಪ್ಪಯ್ಯ ಮೇಷ್ಟ್ರು ನಿವೃತ್ತಿ ಹೊಂದಿದರು. ರಂಗನಾಥ್ ಮೇಷ್ಟ್ರು ಬಾಲ್ಯದಲ್ಲಿ ನನ್ನ ತಂದೆಯ ಸಹಪಾಠಿಗಳಾಗಿದ್ದವರು. ರಾಜೇಂದ್ರ ಪ್ರಸಾದ್ ಅವರ ಮೂಲ ನನಗೆ ಸರಿಯಾಗಿ ನೆನಪಿಲ್ಲ. ಆದರೆ ಅವರ ಮೊದಲನೇ ನೇಮಕಾತಿ ನಾವು ನಾಲ್ಕನೇ ತರಗತಿಯಲ್ಲಿ ಇದ್ದಾಗ ನಮ್ಮ ಶಾಲೆಯಲ್ಲಿಯೆ ಆಯಿತು ಎನ್ನುವುದು ಚೆನ್ನಾಗಿ ನೆನಪಿದೆ. ಇನ್ನೂ ಚಿಗರು ಮೀಸೆಯೂ ಸರಿಯಾಗಿ ಮೂಡದಿದ್ದ ರಾಜೇಂದ್ರಪ್ರಸಾದ್ ತಮ್ಮ ಶಿಕ್ಷಕವೃತ್ತಿಯ ಮೊದಲನೇ ವರ್ಷವೇ ಅತ್ಯಂತ ಶ್ರದ್ಧೆಯಿಂದ ಪಾಠ ಮಾಡುವ ಮೂಲಕ ವಿದ್ಯಾರ್ಥಿಗಳ ಗೌರವಕ್ಕೆ ಪಾತ್ರರಾಗಿದ್ದರು.
ಗೆಳೆಯ ಚಿದಾನಂದ “ಎ” ತರಗತಿಯಲ್ಲಿದ್ದ. ಹಾಗಾಗಿ ನಾಲ್ಕೂ ವರ್ಷವೂ ರಾಮಪ್ಪ ಮೇಷ್ಟ್ರ ಕೆಳಗೆ ಪೂರ್ಣರೂಪದ ಪ್ರಾಥಮಿಕ ಶಿಕ್ಷಣ ಮುಗಿಸುವ ಸೌಭಾಗ್ಯ ಪಡೆದಿದ್ದ. ರಾಮಪ್ಪ ಮೇಷ್ಟ್ರು ನನ್ನ ತಾತನ ಸಹಪಾಠಿಗಳು. ಆದಾಗಲೇ ನಿವೃತ್ತಿ ಅಂಚಿನಲ್ಲಿದ್ದ ಮೇಷ್ಟ್ರು ಸ್ಥೂಲಕಾಯದವರಾಗಿದ್ದು ಎದ್ದು ಓಡಿಯಾಡುವುದಕ್ಕೂ ಕಷ್ಟಪಡುತ್ತಿದ್ದರು. ಅತಿ ಸಣ್ಣ, ದಟ್ಟ ಬಿಳೀ ಕೂದಲುಗಳ ತಲೆ, ಕಪ್ಪೇ ಎಂದು ಹೇಳಬಹುದಾದ ದೇಹವರ್ಣ, ಬಿಳೀ ಪಂಚೆ ಮತ್ತು ಬಿಳೀ ತುಂಬು ತೋಳಿನ ಶರ್ಟ್ , ತುಸು ದಪ್ಪ ಎಂದೇ ಹೇಳಬಹುದಾದ ಮೂಗು, ಮುಖದ ಮೇಲೆ ಒಡೆದು ಕಾಣುವಂತಿದ್ದ ಕಪ್ಪನೆಯ ಕಲೆಗಳು, ದೊಡ್ಡದಾದ, ಸದಾ ಕೆಂಪಾಗಿರುತ್ತಿದ್ದ ಕಣ್ಣುಗಳು ತಟ್ಟನೇ ಮೇಷ್ಟ್ರನ್ನು ನೋಡಿದವರಲ್ಲಿ ಭಯ ಹುಟ್ಟಿಸುವಂತಿದ್ದವು. ರಾಮಪ್ಪ ಮೇಷ್ಟ್ರನ್ನು ಈ ಹೊತ್ತು ನೆನದಾಗೆಲ್ಲಾ ನನಗೆ ಗುಜರಾತಿನ ಮಾಜಿ ಮುಖ್ಯಮಂತ್ರಿ ದಿವಂಗತ ಕೇಶೂಭಾಯಿ ಪಟೇಲ್ ನೆನಪಾಗುತ್ತಾರೆ. ಚಿದಾನಂದ ಮೇಷ್ಟ್ರ ಅಚ್ಚುಮೆಚ್ಚಿನ ಶಿಷ್ಯ. ಪ್ರಾಯಶಃ ಮೇಷ್ಟ್ರು ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೆ “ಎ” ವಿಭಾಗದ ತರಗತಿಯ ಶಿಕ್ಷಕರಾಗಿ ಮುಂದುವರೆಯಲು ಇದೂ ಮುಖ್ಯ ಕಾರಣ ಎನಿಸುತ್ತದೆ. ನೋಡುವುದಕ್ಕೆ ಭಯಂಕರ ಎನ್ನುವಂತಿದ್ದ ಮೇಷ್ಟ್ರು ತೀರಾ ಮೃದುಹೃದಯಿ. ಸ್ವತಃ ಮಕ್ಕಳಿಲ್ಲದ ಕಾರಣದಿಂದಾಗಿಯೋ ಏನೋ ತಮ್ಮ ಶಿಷ್ಯಂದಿರಲ್ಲೇ ಮಕ್ಕಳು, ಮೊಮ್ಮಕ್ಕಳನ್ನು ಕಾಣುತ್ತಾ ಬಂದಿದ್ದವರು.
ನನ್ನ ಪ್ರಾಥಮಿಕ ಶಾಲೆಯ ಎಲ್ಲಾ ಶಿಕ್ಷಕಗಣ ಉತ್ತಮ ಶಿಕ್ಷಕರೆಂದು ಧಾರಾಳವಾಗಿ ಹೇಳಬಲ್ಲೆ. ನನ್ನ ಕೈ ಹಿಡಿದು ಬಳಪದಿಂದ ಹಲಗೆಯ ಮೇಲೆ ಕನ್ನಡ ಅಕ್ಷರಗಳನ್ನು ತೀಡಿಸಿ, ತಿದ್ದಿಸಿ ಮುದ್ದಾಗಿ ಬರೆಯುವಂತೆ ಮಾಡಿದ ಈ ಶಿಕ್ಷಕರ ನೆನಪು ನನ್ನ ದೇಹದಲ್ಲಿರುವ ಪ್ರಾಣದ ಒಟ್ಟಿಗೇ ಅಳಸಿ ಹೋಗುವಂತಹುದಲ್ಲದೆ ಅನ್ಯ ಜೀವನದ ಯಾವ ಕಾಲಘಟ್ಟದಲ್ಲೂ ಮಾಸುವಂತಹುದಲ್ಲ.
ಆದರೆ, ಪಾಠ ಮಾಡುವ ವಿಷಯಕ್ಕೆ ಬಂದರೆ ರಾಮಪ್ಪ ಮೇಷ್ಟ್ರು ಒಂದು ಕೈ ಹೆಚ್ಚೇ ಎಂದು ಹೇಳಬೇಕು. ಅವರು ಪಾಠ ಮಾಡುವ ಹೊತ್ತು ತಳೆಯುತ್ತಿದ್ದ ತಾಳ್ಮೆ, ಮಕ್ಕಳನ್ನು ತೀಡುತ್ತಿದ್ದಾಗ ತೋರುತ್ತಿದ್ದ ಸಹನೆ ಪ್ರತೀ ಶಿಕ್ಷಕರಿಗೂ ಆದರ್ಶ ಮತ್ತು ಅನುಕರಣೀಯ ಎಂದೇ ನಾನು ಭಾವಿಸಿದ್ದೇನೆ. ನಾನು “ಎ” ವಿಭಾಗದ ವಿಧ್ಯಾರ್ಥಿಯಾಗದೆ ಇದ್ದ ನೋವು ದಶಕಗಳ ನಂತರವೂ ಇಂದೂ ನನ್ನನ್ನು ಕಾಡುತ್ತಿದೆ. ನನ್ನನ್ನು ಶಾಲೆಗೆ ಸೇರಿಸುವ ಹೊತ್ತು ನನ್ನ ತಾತ ರಾಮಪ್ಪ ಮೇಷ್ಟ್ರಿಗೆ ಈ ಕುರಿತು ಒಂದು ಮಾತನ್ನು ಹೇಳಿದ್ದರೆ ಈ ಪ್ರಮಾದ ಘಟಿಸುತ್ತಿರಲಿಲ್ಲವೇನೋ.
ನಾನು “ಬಿ” ತರಗತಿಯ ವಿದ್ಯಾರ್ಥಿಯಾದರೂ ರಾಮಪ್ಪ ಮೇಷ್ಟ್ರ ಗಮನಕ್ಕೆ ಬರಲು, ವಿಶ್ವಾಸ ಗಳಿಸಲು ಹಲವು ಕಾರಣಗಳಿದ್ದವು. ನನ್ನನ್ನು ಶಾಲೆಗೆ ದಾಖಲಿಸುವ ಸಮಯದಲ್ಲಿ ನನ್ನೊಟ್ಟಿಗೆ ಬಂದಿದ್ದ ನನ್ನ ತಾತ ರಾಮಪ್ಪ ಮೇಷ್ಟ್ರ ಬಾಲ್ಯದ ಸಹಪಾಠಿ ಎಂದು ಈಗಾಗಲೇ ತಿಳಿಸಿದ್ದೇನೆ. ಮೊಮ್ಮಗನ ಮೇಲೆ ಒಂದು ಕಣ್ಣಿಡುವಂತೆ ವಿನಂತಿಸಿದ ನನ್ನ ಅಜ್ಜನ ಬಿನ್ನಹವನ್ನು ತುಸು ಹೆಚ್ಚು ಗಂಭೀರವಾಗಿಯೇ ಪರಿಗಣಿಸಿದ ಮೇಷ್ಟ್ರು ನನ್ನ ನಾಲ್ಕೂ ವರ್ಷಗಳ ಪ್ರಾಥಮಿಕ ಶಿಕ್ಷಣದ ಉದ್ದಕ್ಕೂ ನನ್ನ ಪ್ರಗತಿಯ ಬಗ್ಗೆ ನನ್ನಿಂದಲೂ ಮತ್ತು ನನ್ನ ತರಗತಿಯ ಶಿಕ್ಷಕರಿಂದಲೂ ಪ್ರತಿಕ್ರಿಯೆಗಳನ್ನು ಪಡೆಯುತ್ತಲೇ ಇದ್ದರು. ಈ ಪ್ರತಿಕ್ರಿಯೆಗಳ ಬಹಳ ದೊಡ್ಡಪಾಲು ಆಗೀಗ ಶಾಲೆಗೆ ಎಡತಾಗುತ್ತಿದ್ದ ನನ್ನ ತಾತನಿಗೂ ತಲುಪುತ್ತಿತ್ತು.
ನಾಲ್ಕು ವರ್ಷಗಳ ಅವಧಿಯಲ್ಲಿ ರಾಮಪ್ಪ ಮೇಷ್ಟ್ರ ಸಾಕಷ್ಟು ತರಗತಿಗಳಿಗೆ “ಬಿ” ವಿಭಾಗದ ನಾವೂ ಹಾಜರಾಗಿದ್ದಿದೆ. ನಮ್ಮ ತರಗತಿಯ ಶಿಕ್ಷಕರು ರಜಾ ಮೇಲಿದ್ದ ದಿನಗಳಲ್ಲಿ ಅಥವಾ ಯಾವುದಾದರೂ ತುರ್ತು ಕೆಲಸದ ಮೇಲೆ ಮುಖ್ಯೋಪಾಧ್ಯಾಯರೊಂದಿಗೆ ಮೀಟಿಂಗ್ ನಲ್ಲೋ ಅಥವಾ ಶಾಲೆಯಿಂದ ಹೊರಗೋ ಹೋದ ಅವಧಿಯಲ್ಲಿ ನಮ್ಮನ್ನು “ಎ” ವಿಭಾಗದೊಟ್ಟಿಗೆ ಸೇರಿಸಲಾಗುತ್ತಿತ್ತು. ಇಂತಹ ಸಂದರ್ಭಗಳು ನನ್ನ ಮಟ್ಟಿಗೆ ದೀಪಾವಳಿ ಹಬ್ಬಕ್ಕಿಂತಲೂ ಹೆಚ್ಚಿನ ಸಡಗರವನ್ನು ತಂದುಕೊಡುತ್ತಿದ್ದವು. ನಾವಷ್ಟೇ ಅಲ್ಲದೆ “ಎ” ವಿಭಾಗದ ವಿದ್ಯಾರ್ಥಿಗಳೂ ಇಂತಹ ಒಂದು ಸಮಯಕ್ಕಾಗಿ ಹಾತೊರೆಯಲು ವಿಶೇಷವಾದ ಬೇರೆ ಒಂದು ಕಾರಣವೂ ಇತ್ತು.
ರಾಮಪ್ಪ ಮೇಷ್ಟ್ರು ಹೀಗೆ ಎರಡೂ ತರಗತಿಗಳು ಸೇರಿದ ಹೊತ್ತು ಪಠ್ಯಪುಸ್ತಕದ ಪಾಠಗಳನ್ನು ಮಾಡುತ್ತಿರಲಿಲ್ಲ. ಬಾಲಕರಾದ ನಮ್ಮನ್ನು ತಮ್ಮ ಕಥೆಗಳ ಅದ್ಭುತ ಮಾಯಾಲೋಕಕ್ಕೆ ಕರೆದೊಯ್ಯುತ್ತಿದ್ದರು. ತರಗತಿಯ ಸುಮಾರು ಎಂಬತ್ತಕ್ಕೂ ಹೆಚ್ಚು ಬಾಲಕರು ಉಸಿರು ಬಿಗಿಹಿಡಿದು ತದೇಕಚಿತ್ತರಾಗಿ ಮೇಷ್ಟ್ರು ಹೇಳುವ ಕಥೆಗಳನ್ನ ಆಲಿಸುತ್ತಾ ಗಂಟೆಗಟ್ಟಲೆ ಕುಳಿತ್ತಿರುತ್ತಿದ್ದೆವು. ತೆರದ ಬಾಯಿಗಳು ಹಾಗೆಯೇ ತೆರೆದಿರುತ್ತಿದ್ದವು. ಈ ಅವಧಿಯಲ್ಲಿ ಬರೀ ಸೊಳ್ಳೆ, ನೊಣಗಳಷ್ಟೇ ಅಲ್ಲದೆ ಬೇರೆ ಬೇರೆ ಬಗೆಯ ಪ್ರಾಣಿಗಳೂ ನಮ್ಮ ಬಾಯಿಯೊಳಗೆ ಪ್ರವೇಶಿಸಿರುವ ಸಾಧ್ಯತೆಗಳು ನಿಚ್ಚಳವಾಗಿದ್ದವು. ಹೇಳಿಕೇಳಿ ಶಾಲೆ ಊರ ಹೊರಗಿದ್ದು ಸುತ್ತಾಮುತ್ತ ಹೊಲಗಳೇ ಆವರಿಸಿಕೊಂಡಿದ್ದರಿಂದ ಇಂತಹ ಸಾಧ್ಯತೆಗಳಿಂದ ದೇವರೇ ನಮ್ಮನ್ನು ಪಾರು ಮಾಡಿರಲಿಕ್ಕೆ ಸಾಕು.
ರಾಮಪ್ಪ ಮೇಷ್ಟ್ರು ಕಥೆಗಳನ್ನು ಹೇಳುವುದರಲ್ಲಿ “ಉಸ್ತಾದ್” ಎಂದೇ ಹೇಳಬೇಕು. ನಮ್ಮ ವಯೋಮಾನದ ಮಕ್ಕಳಿಗಾಗಿ ರಂಜನೆಯೇ ಪ್ರಮುಖವಾದ ಅನೇಕ ಕಥೆಗಳನ್ನು ಮೇಷ್ಟ್ರು ಹೇಳುತ್ತಾ ಹೋಗುತ್ತಿದ್ದರೆ ಪಕ್ಕದ ಹುಡುಗ ಚಿವುಟಿದರೂ ಎಚ್ಚರವಾಗದ ಸ್ಥಿತಿ ನಮ್ಮದಾಗಿರುತ್ತಿತ್ತು. ಒಂದೇ, ಎರಡೇ ರಾಮಪ್ಪ ಮೇಷ್ಟ್ರ ಸಾಲು ಸಾಲು ಕಥೆಗಳೇ ಈ ಹೊತ್ತು ನನ್ನ ಮಸ್ತಕದಲ್ಲಿ ಮೂಡುತ್ತಿವೆ.

ಏಳು ಸಮುದ್ರಗಳಾಚೆ ಇರುವ ನಿರ್ಜನ ದ್ವೀಪವೊಂದರಲ್ಲಿ ರಾಕ್ಷಸರ ಕಣ್ಗಾವಲಿನಲ್ಲಿ ಇದ್ದ ರಾಜಕುಮಾರಿಯ ಜೀವವನ್ನು ತರಲು ಹೊರಡುವ ಹಳ್ಳಿಗಾಡಿನ ವೀರ ಬಾಲಕನೊಬ್ಬನ ಪಾತ್ರಧಾರಿಗಳು ನಾವೇ ಎಂದು ತರಗತಿಯ ಪ್ರತಿಯೊಬ್ಬರಿಗೂ ಅನ್ನಿಸಿದ್ದಿದೆ. ‘ಆಲಿಬಾಬ ಮತ್ತು ನಲ್ವತ್ತು ಕಳ್ಳ’ ರ ಕಥೆಯಲ್ಲಿ ಬರುವ “ಬಾಗಿಲು ತೆಗಿಯೇ ಶೇಷಮ್ಮ” ಎನ್ನುವುದನ್ನು ಕೇಳಿ ನಾನು ಎಂತಹ ಪರಿ ಪ್ರಭಾವಿತನಾಗಿದ್ದೆ ಎಂದರೆ ನಮ್ಮ ಮನೆಯ ದನದ ಕೊಟ್ಟಿಗೆಯ ಬಾಗಿಲನ್ನು ಈ ರೀತಿ ತೆಗೆಯಲು ನಾನು ಹಲವು ಬಾರಿ ಪ್ರಯತ್ನಿಸಿ ಸೋತಿದ್ದೆ. ಬಡತಮ್ಮನಿಗೆ ಮೋಸ ಮಾಡುವ ಅಣ್ಣನ ಕಥೆ ಕೇಳಿ ಮನಸ್ಸಿನಲ್ಲಿಯೇ ಕುದ್ದು ಹೋಗುತ್ತಿದ್ದರೆ ದಡ್ಡ ಮೊಮ್ಮಗನನ್ನು ಬೆಳೆಸುವಾಗ ಅಜ್ಜಿಯೊಬ್ಬಳು ಪಟ್ಟಪಾಡು ಕಣ್ಣಲ್ಲಿ ನೀರು ತರಿಸುತ್ತಿತ್ತು. ಇಂತಹ ಮೊದ್ದು ಮೊಮ್ಮಗ ಮುಂದೆ ಜಾಣನಾಗಿ ರಾಜಕುಮಾರಿಯ ಕೈಹಿಡಿದು ಅರ್ಧರಾಜ್ಯ ಸಂಪಾದಿಸಿದಾಗ ಆಗುತ್ತಿದ್ದ ಆನಂದಕ್ಕೆ ಪಾರವೆಲ್ಲಿ? ನಗುವನ್ನು ಮರೆತ ರಾಜಕುಮಾರಿಯ ಮುಖದ ಮೇಲೆ ನಗುವನ್ನು ತರಲು ಪ್ರಯತ್ನಿಸುವ ವಿದೂಷಕನ ಅಂಗಾಭಿನಯಗಳನ್ನು ಅಂಗಿಕ ಭಂಗಿಗಳ ಮೂಲಕ ಮೇಷ್ಟ್ರು ವಿವರಣೆ ಕೊಟ್ಟಾಗ ಹೊಟ್ಟೆ ಹುಣ್ಣಾಗುವಂತೆ ನಗುವುದು ಎಂದರೆ ಏನೆಂದು ಗೊತ್ತಾಗಿತ್ತು. ರಾಜಕುಮಾರಿಯನ್ನು ಕೊನೆಗೂ ನಗಿಸಿದ ಜಾಣ ವ್ಯಕ್ತಿಯೊಬ್ಬ ಸಹಜವಾಗಿಯೇ ನಮ್ಮ ದೃಷ್ಟಿಯಲ್ಲಿ ಅಣ್ಣಾವ್ರನ್ನ ಸರಿಗಟ್ಟುವ ನಾಯಕನಾಗಿ ಕಂಗೊಳಿಸುತ್ತಿದ್ದ. ಇಂತಹ ವ್ಯಕ್ತಿಗೂ ರಾಜ ಅರ್ಧರಾಜ್ಯ ಬಹುಮಾನವಾಗಿ ಕೊಟ್ಟಾಗ ನಮ್ಮ ಬಳಿ ಇರುವ ಬೆಲೆ ಬಾಳುವ ವಸ್ತುವನ್ನು ಬೇರೆಯವರೊಡನೆ ಹಂಚಿಕೊಂಡರೆ ಅದು ಬೇರೆಯವರಿಗೆ ಕೊಡಮಾಡುವ ಅತಿ ದೊಡ್ಡ ಬಹುಮಾನ ಎಂದುಕೊಳ್ಳುತ್ತಿದ್ದೆವು.

ರಂಜಕತೆಯ ಜೊತೆಗೆ ಧಾರಾಳವಾಗಿ ನೀತಿಗಳನ್ನೂ ಕಟ್ಟಿಕೊಡುತ್ತಿದ್ದ ರಾಮಪ್ಪ ಮೇಷ್ಟ್ರ ಕಥೆಗಳ ಶ್ರವಣಕುಮಾರನನ್ನು, ಯಯಾತಿ ಮಹಾರಾಜನನ್ನು, ಪುರೂರವ, ನಳ, ಹರಿಶ್ಚಂದ್ರರನ್ನು ಮರೆಯಲಾಗುತ್ತಿಲ್ಲ. ಶ್ರವಣ ಕುಮಾರನನ್ನು ದಶರಥ ಕೊಂದಾಗ ಆತನ ಅಂಧ ತಂದೆ-ತಾಯಿಗಳು ಗೋಳಿಟ್ಟ ಪರಿಯನ್ನು ಮೇಷ್ಟ್ರು ವಿವರಿಸುತ್ತಿದ್ದರೆ ಆಗಷ್ಟೇ ಬಾಳಿನ ವಾಸ್ತವಕ್ಕೆ ಕಣ್ಣು ತೆರೆಯುತ್ತಿದ್ದ ನಮ್ಮ ಕಣ್ಣಾಲಿಗಳೂ ಮಂಜಾಗುತ್ತಿದ್ದವು.
ಪಟ್ಟಾಭಿಷೇಕವಾಗಬೇಕಾಗಿದ್ದ ರಾಮಚಂದ್ರನನ್ನು ಕುಯುಕ್ತಿಯ ಮೂಲಕ ಕಾಡಿಗಟ್ಟಿದ ಕೈಕೇಯಿ ಮತ್ತು ಮಂಥರೆಯರು ಅವರ ಪೂರ್ವಜನ್ಮದ ಸುಕೃತಮಾತ್ರದಿಂದಲೇ ನಮ್ಮ ತರಗತಿಯ ಮಕ್ಕಳ ಕೈಗೆ ಮೇಷ್ಟ್ರ ಕಥನದ ಹೊತ್ತು ಸಿಕ್ಕಿರಲಿಲ್ಲ ಎಂದುಕೊಳ್ಳುತ್ತೇನೆ. ಅಂದು ಸರಿಯಾಗಿ ಅರ್ಥವಾಗದ ಮಹಾಭಾರತದ ಭೀಷ್ಮ ಪಿತಾಮಹನ ವಿವಶತೆ ಜೀವನದ ಇಂದಿನ ಹಂತದಲ್ಲಿಯೂ ಸ್ಪಷ್ಟವಾಗದೇ ಇರುವ ಸಂದಿಗ್ಧತೆಯನ್ನ ಅಂದೇ ರಾಮಪ್ಪ ಮೇಷ್ಟ್ರನ್ನು ಕೇಳಿ ಬಗೆಹರಿಸಿಕೊಳ್ಳಬೇಕಿತ್ತು ಅಂತ ಅನಿಸುವುದಿದೆ.

ತಾನು ಉಂಡ ಮೊಸರನ್ನವನ್ನು ಮೇಕೆಯ ಮೂತಿಗೆ ಒರಸಿ, ಮಾಲೀಕನಿಂದ ಮೇಕೆಯನ್ನು ಮನಸಾರೆ ಥಳಿಸಿದ ವಿಕೃತ ಖುಷಿಯನ್ನು ಹೊಂದಿದ ಕೋತಿಯ ರೂಪಗಳು ಆಗಾಗ ವೃತ್ತಿಜೀವನದಲ್ಲಿ ಇಣುಕಿದಾಗ ನಾನು ರಾಮಪ್ಪ ಮೇಷ್ಟ್ರ ಕಥೆಗಳ ನೆನಪಾಗಿ ಬೆವರಿದ್ದಿದೆ.
ಇನ್ನೊಂದು ರಾಮಪ್ಪ ಮೇಷ್ಟ್ರಿಗಷ್ಟೇ ವಿಶಿಷ್ಟ ಎನ್ನಬಹುದಾದ ಕಥಾಪ್ರವಚನ ರೀತಿ ಮಕ್ಕಳಾದ ನಮ್ಮಲ್ಲಿ ಅತೀವ ಭಯವನ್ನೂ ಹುಟ್ಟು ಹಾಕುತ್ತಿತ್ತು. ಕಥೆಯ ಒಂದು ಅತ್ಯಂತ ರಸಾನಕ ಮತ್ತು ಕ್ಲೈಮ್ಯಾಕ್ಸ್ ಘಟ್ಟದಲ್ಲಿ ಸ್ವಲ್ಪ ಹೊತ್ತು ನೀರವತೆಯನ್ನ ತಳೆದು ಮೌನದ ಮುಖವಾಡ ಧರಿಸುತ್ತಿದ್ದ ಮೇಷ್ಟ್ರು ಮರುಕ್ಷಣವೇ ತಮ್ಮ ಮುಂದಿನ ಮೇಜನ್ನು ಬೆತ್ತದಿಂದ ಜೋರಾಗಿ ಹೊಡೆದು ‘ಫಟ್’ ಎಂದು ದೊಡ್ಡ ಶಬ್ದವನ್ನ ಹೊರಡಿಸುತ್ತಿದ್ದರು. ಈ ಶಬ್ದದ ಒಂದು ಚೂರೂ ನಿರೀಕ್ಷೆಯಲ್ಲಿಲ್ಲದ ಬಾಲಕರಿಗೆ ಸ್ವಲ್ಪ ಹೊತ್ತು ಜೀವವೇ ಗಂಟಲಿಗೆ ಬಂದ ಹಾಗಾಗುತ್ತಿತ್ತು. ಒಮ್ಮೆಲೇ ಹೌಹಾರಿ ನಿಟ್ಟುಬಿದ್ದು ಮುಂದಿನ ಘಳಿಗೆಯೆ ಒಬ್ಬರನ್ನೊಬ್ಬರ ಮುಖ ನೋಡಿಕೊಂಡು ‘ಹೋಯ್’ ಎಂದು ಕಿರಿಚುತ್ತಿದ್ದ ಆ ಸ್ವರ್ಣಕ್ಷಣಗಳ ಮೌಲ್ಯವನ್ನು ಇಷ್ಟು ವರ್ಷಗಳ ಬಳಿಕವೂ ನನ್ನಿಂದ ಕಟ್ಟಲಾಗುತ್ತಿಲ್ಲ.
ಶಾಲೆಗೆ ಸಮೀಪವೇ ಇದ್ದ ರಾಮಪ್ಪ ಮೇಷ್ಟ್ರ ಮನೆಗೆ ಹತ್ತಾರು ಸಲ ಮೇಷ್ಟ್ರ ವೈಯಕ್ತಿಕ ಕೆಲಸಗಳಿಗಾಗಿ ಚಿದಾನಂದನ ಜೊತೆಗೆ ನಾನೂ ಹೋಗಿದ್ದು ಈ ಹೊತ್ತು ನೆನಪಾಗುತ್ತಿದೆ. “ಪ್ರಕಾಶ್ ನನ್ನೂ ಕರೆದುಕೊಂಡು ಹೋಗು” ಎಂದು ಮೇಷ್ಟ್ರು ಚಿದಾನಂದನನ್ನು ತಾಕೀತು ಮಾಡುತ್ತಿದ್ದ ಕಾರಣ ಮಾತ್ರ ನನಗೆ ಕಡೆಯವರೆಗೂ ತಿಳಿಯಲಿಲ್ಲ. ಹೀಗಾಗಿ ಬೇರೆ ಸೆಕ್ಷನ್ ನ ನನ್ನನ್ನು ಕರೆದುಕೊಂಡೆ ಚಿದಾನಂದ ರಾಮಪ್ಪ ಮೇಷ್ಟ್ರ ಮನೆಗೆ ಹೋಗುತ್ತಿದ್ದ. ರಾಮಪ್ಪ ಮೇಷ್ಟ್ರ ಮನೆಯಿಂದ ಸಿಹಿತಿಂಡಿಗಳಿಲ್ಲದೇ ಖಾಲಿ ಕೈಯಲ್ಲಿ ಮರಳಿದ ದಿನಗಳೇ ಇಲ್ಲವೆನ್ನಬಹುದು. ಮೇಷ್ಟ್ರ ಸಾಕುಮಗಳು ಸುಧಾ ಮೇಷ್ಟ್ರುಗಿಂತಲೂ ಒಂದು ಕೈ ಹೆಚ್ಚಾಗಿ ಅವರ ಶಿಷ್ಯಂದಿರನ್ನು ವಿಚಾರಿಸಿಕೊಳ್ಳುತ್ತಿದ್ದರು.
ಬಾಲ್ಯದ ದಿನಗಳ ರೋಮಾಂಚಕತೆಯನ್ನ, ಕಲ್ಪನಾವಿಲಾಸವನ್ನು ತಮ್ಮ ಕಥೆಗಳ ಮುಖೇನ ಹುಟ್ಟುಹಾಕಿದ, ಬೆಳೆಸಿದ ರಾಮಪ್ಪ ಮಾಸ್ಟ್ರು ನನ್ನ ನೆನಪುಗಳಲ್ಲಿ ಯಾವಾಗಲೂ ತಾಜಾವಾಗಿಯೆ ಇರುತ್ತಾರೆ. ಈ ಹೊತ್ತೂ ಕೂಡ “ಕಥೆ ಹೇಳಿ” ಎಂದು ಬಿಡದೆ ಬೆಂಬೆತ್ತುವ ಮನೆಯ ಮಕ್ಕಳು, ಮೊಮ್ಮಕ್ಕಳಿಗೆ ರಾಮಪ್ಪ ಮೇಷ್ಟ್ರು ಹೇಳಿದ ಕಥೆಗಳನ್ನು ಪುನರಾವರ್ತಿಸುವ ಹೊತ್ತು ನನ್ನ ಅನೇಕ ಬಾಲ್ಯದ ಗೆಳೆಯರ ನೆನಪಿನಲ್ಲಿ ಮೇಷ್ಟ್ರು ಜೀವಂತವಾಗಿದ್ದಾರೆ ಎನಿಸಿದರೆ ಆಶ್ಚರ್ಯವೇನಿಲ್ಲ. ಪ್ರತೀವರ್ಷ ನನ್ನ ತಾತನ ನೆನಪಿಗಾಗಿ ಮಾಡುವ ‘ಹಿರಿಯರ ಹಬ್ಬ’ ದ ವೇಳೆಯಲ್ಲಿ ರಾಮಪ್ಪ ಮೇಷ್ಟ್ರು ಅನಾಯಾಸವಾಗಿ ನೆನಪಾಗುತ್ತಿದ್ದರೆ ಅದರಲ್ಲಿ ಮೇಷ್ಟ್ರು ಹೇಳುತ್ತಿದ್ದ ಕಥೆಗಳ ಸಿಂಹಪಾಲಿದೆ.
![]() |
ReplyForward
|